ಕೊಟ್ಟ ಭೂಮಿಯನ್ನು ಬೇಕಾದರೆ ವಾಪಾಸು ಮಾಡುತ್ತೇನೆ..

ರೋಹಿದಾಸಪ್ಪಚ್ಚಿ ಕೊಟ್ಟ ಭೂಮಿಯನ್ನು ಬೇಕಾದರೆ ವಾಪಾಸು ಮಾಡುತ್ತೇನೆ

ಕಳೆದ ವಾರ ಎರಡು ಘಟನೆಯನ್ನು ಹೇಳಿದ್ದೆ. ಕ್ಷಮಿಸಿ, ಈ ವಾರವೂ ಇನ್ನೆರಡು ಘಟನೆಯ ಪ್ರಸ್ತಾಪ ಮಾಡುತ್ತಿದ್ದೇನೆ. ಒಟ್ಟಾಗಿ ಸಂಪತ್ತಿನ ಕುರಿತು ಆತನ ನಿರ್ಲಿಪ್ತ ಸ್ಥಿತಿಯನ್ನು ಇದು ತೋರಿಸುತ್ತದೆ ಅಂದುಕೊಂಡಿದ್ದೆ. ಮತ್ತು ಆತ ನಮಗೆ ಕಲಿಸಿದ ಅತಿ ದೊಡ್ಡ ಪಾಠ ಇದು ಎನ್ನುವುದು ನಮ್ಮ ಕುಟುಂಬದ ನಂಬಿಕೆ.

ಹೊಸ ಜಾಗ…ಹೊಸ ಮನೆ

ಈ ಮೊದಲು ಹೇಳಿದಂತೆ ಈಗಿರುವ ಮನೆಯ ಜಾಗದ ಸುತ್ತ 1968ರಲ್ಲಿಯೇ ಸುಮಾರು ಒಂದುವರೆ ಎಕರೆಯಷ್ಟು ಅರಣ್ಯ ಪ್ರದೇಶವನ್ನು ಅತಿಕ್ರಮಣ ಮಾಡಿಕೊಂಡು ಬೇಲಿ ಹಾಕಿಕೊಳ್ಳಲಾಗಿತ್ತು. ಅದರಲ್ಲಿ ಒಂದಿಷ್ಟು ಗೇರುಗಿಡ, ತೆಂಗಿನ ಮರ ನೆಡಲಾಗಿತ್ತು. ಹೀಗೆ ಬೇಲಿ ಹಾಕಿಕೊಂಡು ಗಿಡ ನೆಟ್ಟಿದ್ದು ಅಕ್ಕ ಮತ್ತು ಆಯಿ. ಅಣ್ಣನೆಂದೂ ಒಂದೇ ಒಂದು ಗಿಡ ನೆಟ್ಟವನಲ್ಲ ಅವನಾಯಿತು, ಅವನ ಶಾಲೆ, ಓದು, ಬರವಣಿಗೆಯಾಯಿತು. ಬೇರೆ ಆಸ್ತಿ ಮಾಡುವ ಬಗ್ಗೆ ಎಂದೂ ತಲೆ ಕೆಡಿಸಿಕೊಂಡಿಲ್ಲ. ಈ ಭೂಮಿಯಲ್ಲಿ ಸ್ವತಃ ದುಡಿದವರು ಅಕ್ಕ ಮತ್ತು ಆಯಿ.

ನಮ್ಮೂರಲ್ಲಿ ಒಬ್ಬ ಹಾಲಕ್ಕಿ ಗೌಡನಿದ್ದ. ಅವನು ನಮ್ಮ ಮನೆಯಿಂದ ಸ್ವಲ್ಪ ದೂರವಿರುವ ಗುಬ್ಬಿಕೇರಿಯಲ್ಲಿ ಒಂದು ಮನೆಯ ತೋಟದಲ್ಲಿ ಹೆಂಡತಿ ಮಕ್ಕಳೊಂದಿಗೆ ಒಂದು ಗುಡಿಸಲು ಕಟ್ಟಿಕೊಂಡಿದ್ದ ಮತ್ತು ಅವರ ಮನೆಯ ತೋಟದ ಕೂಲಿಯಾಗಿ ದುಡಿಯುತ್ತಿದ್ದ. ಏಕಾಏಕಿ ತೋಟದ ಮಾಲಿಕರು ಇವನನ್ನು ಆ ಗುಡಿಸಲಿನಿಂದ ಬಿಡಿಸಿ ಆಚೆಗಟ್ಟಿದರು. ಪಾಪ ಉಳಿಯಲು ಸ್ಥಳವಿರಲಿಲ್ಲ. ಆತ ಅಣ್ಣನಲ್ಲಿ ಬಂದು “ಮಾಸ್ತರರೇ ನನಗೆ ಉಳಿಯಲು ಜಾಗ ಇಲ್ಲ. ಹೆಂಡತಿ ಮಕ್ಕಳಿದ್ದಾರೆ. ನಿಮ್ಮ ಮನೆಯ ಪಕ್ಕದ ಜಾಗದಲ್ಲಿ ಒಂದು ಸಣ್ಣ ಜಾಗ ಕೊಡಿ. ಗುಡಿಸಲು ಕಟ್ಟಿಕೊಳ್ಳುವಷ್ಟಿದ್ದರೆ ಸಾಕು. ಬದುಕಿಕೊಳ್ಳುತ್ತೇನೆ” ಅಂದಾಗ ಅಣ್ಣನಿಗೆ ಬೇಡ ಎನ್ನಲು ಸಾಧ್ಯ ಆಗಲಿಲ್ಲ.

ಮೇಲಿನ ಮನೆ ಶೆಟ್ಟರು, ಕೇರಿಯ ಸಂಬಂಧಿಕರು “ಹೀಗೆ ನಿಮ್ಮ ಜಾಗದಲ್ಲಿ ಸ್ಥಳ ಕೊಡಬೇಡಿ ನಂತರ ನಿಮಗೇ ತೊಂದರೆ ಆಗುತ್ತದೆಂದು ಎಷ್ಟೇ ಹೇಳಿದರೂ ಅಣ್ಣ ಮನಸ್ಸು ಬದಲಾಯಿಸದೇ ಅಕ್ಕ, ಆಯಿ ಅತಿಕ್ರಮಣ ಮಾಡಿದ ಜಾಗದಲ್ಲಿ ಮನೆ ಕಟ್ಟುವಷ್ಟು ಜಾಗ ನೀಡಿದ. ಗೌಡರ ಕುಟುಂಬಕ್ಕೆ ನೆಲೆ ಒದಗಿಸಿದ ಧನ್ಯತೆ ಅವನದಾಯಿತು. ಆದರೆ ಆತ ಕೆಲವೇ ವರ್ಷದಲ್ಲಿ ತನ್ನ ಮನೆಯ ಬೇಲಿಯನ್ನು ವಡಾಯಿಸುತ್ತಾ ಅಕ್ಕ, ಆಯಿ ನೆಟ್ಟ ಗೇರು ಗಿಡವನ್ನು ಒಳಗೆ ಹಾಕಿಕೊಳ್ಳುತ್ತಲೇ ಹೋದ. ನಮ್ಮದೂ ಪಕ್ಕಾ ಬೇಲಿ ಆಗಿರಲಿಲ್ಲ. ಅಲ್ಲಿದ್ದರಿಂದ ಚೂರು ಚೂರೆ ಆತ ಮುಂದೆ ಬರಲು ಆತನಿಗೆ ಅನುಕೂಲ ಆಯಿತು.

ಹಲವು ಬಾರಿ ಅಕ್ಕ ಅದಕ್ಕೆ ತಕರಾರು ಮಾಡುತ್ತಿದ್ದಳು. “ನಾನು ಕಷ್ಟಪಟ್ಟು ನೆಟ್ಟಿರುವ ಗಿಡ ಅದು. ಊಟ ತಿಂಡಿ ಬಿಟ್ಟು ಕೆಲಸ ಮಾಡಿದ್ದೇನೆ. ನಿಮಗೇನು ನೀವು ಒಂದು ದಿನವೂ ಶ್ರಮ ಹಾಕಿಲ್ಲ. ಆ ನೋವು ನಿಮಗೇನು ಗೊತ್ತು ಶ್ರಮದ ಬೆಲೆ ಗೊತ್ತಿದ್ದರೆ ನೀವು ಅದನ್ನು ದಾನ ಮಾಡುತ್ತಿರಲಿಲ್ಲ. ಮರವನ್ನೆಲ್ಲಾ ಕಡಿದು ಹಾಕುತ್ತೇನೆ” ಎಂದು ಅಕ್ಕ ಅಳುತ್ತಿದ್ದಳು.

“ನನಗೂ 3 ಮಕ್ಕಳು ಅವನಿಗೂ ಮೂರು ಮಕ್ಕಳು. ನನಗಾದರೆ ಒಂದು ನೌಕರಿ ಇದೆ. ಅವನಿಗೇನಿದೆ? ಕೂಲಿ ಮಾಡಿ ತಿನ್ನುವವನು. ಇರಲಿಬಿಡು; ಮುಂದೆ ಹೀಗೆ ಮಾಡಬಾರದೆಂದು ಹೇಳುತ್ತೇನೆ. ಮತ್ತೆ ಊರವರ ಮುಂದೆ ಮರ್ಯಾದೆ ಹೋಗುತ್ತದೆ. ಜನ ನನ್ನನ್ನೂ ಆಡಿಕೊಳ್ಳುತ್ತಾರೆ” ಎಂದು ಅಕ್ಕನನ್ನು ಅಣ್ಣ ಸಮಾಧಾನ ಮಾಡುತ್ತಿದ್ದ. ಆತನೂ ಒಳ್ಳೆಯವನೇ. ಕುಡಿದಾಗ ಸ್ವಲ್ಪ ಮನಸ್ಸನ್ನು ಕೆಡಿಸಿಕೊಳ್ಳುತ್ತಿದ್ದ. ನಮ್ಮ ಮನೆಗೆ ಕೆಲಸಕ್ಕೂ ಬರುತ್ತಿದ್ದ. ಗೊಬ್ಬರ ತೆಗೆಯಲು ಬರುತ್ತಿದ್ದ. ಆಕಳಿಗೆ ಅನಾರೋಗ್ಯವಾದರೆ ಬಂದು ಆರೈಕೆ ಮಾಡುತ್ತಿದ್ದ. ಒಮ್ಮೊಮ್ಮೆ ಕರೆದರೂ ಬರದಿದ್ದುದ್ದೂ ಇದೆ.

ಊರಲ್ಲಿ ನಮಗಾಗದ ಕೆಲವು ಮೇಲ್ಜಾತಿಯವರು ಸೇರಿ ನಮ್ಮ ಜಾಗವನ್ನು ಒಳಹಾಕಿಕೊಳ್ಳಲು ಅವನನ್ನು ಪುಸಲಾಯಿಸುತ್ತಿದ್ದರು. ಅವನು ಅವರ ಮಾತನ್ನು ಕೇಳಿ ಮತ್ತೆ ಬೇಲಿಯನ್ನು ಮುಂದೊತ್ತುತ್ತಿದ್ದ. ಅವರ ಮನೆಯ ಮೂರೂ ಮಕ್ಕಳೂ ಹೆಚ್ಚುಕಡಿಮೆ ಹಗಲೆಲ್ಲಾ ನಮ್ಮನೆಯಲ್ಲೇ ಕಳೆದವರು. ಅವರೆಲ್ಲಾ ನನ್ನನ್ನು ಸಣ್ಣಣ್ಣ ಎಂದೇ ಕರೆಯುವುದು. ಅವರ ಅಪ್ಪನೊಂದಿಗಿನ ತಾತ್ಕಾಲಿಕ ಜಗಳ ಈ ಮಕ್ಕಳ ಮೇಲಿನ ನಮ್ಮ ಪ್ರೀತಿಯ ಮೇಲೆ ಯಾವ ಪರಿಣಾಮವನ್ನೂ ಬೀರಿಲ್ಲ. ಈಗಲೂ ‘ಸಹಯಾನ’ದಲ್ಲಿ ಯಾವುದೇ ಕಾರ್ಯಕ್ರಮವಿದ್ದರೂ ಆ ಮಕ್ಕಳೆಲ್ಲಾ ಬರುತ್ತಾರೆ. ಕೈಲಾದ ಸಹಾಯ ಮಾಡುತ್ತಾರೆ. ಈಗ ಅವನ ಮಗ ಇರುವ ಜಾಗದಲ್ಲೇ ಸುಂದರ ತೋಟ ಮಾಡಿದ್ದಾನೆ. ಭೂಮಿ ಹಸಿರಾಗಿದೆ. ಮನೆ ಕಟ್ಟುತ್ತಿದ್ದಾನೆ. ಮೊಮ್ಮಕ್ಕಳು ‘ಸಹಯಾನ’ದ ಕ್ಯಾಂಪಿನಲ್ಲಿ ಭಾಗವಹಿಸುತ್ತಿದ್ದಾರೆ. ಇದೆಲ್ಲಾ ಖುಷಿಯ ಸಂಗತಿ ಹೀಗೆ ಮೂರನೇ ಜಮೀನು ಕೂಡ ಒಂದಿಷ್ಟು ಕೈತಪ್ಪಿತು.

ಇದ್ದ ಒಂದಿಷ್ಟು ಜಾಗದಲ್ಲಿ 30-40 ತೆಂಗಿನ ಮರ ಇದೆ. ಬೇಕಾದ, ಬೇಡದಿರುವ ಹಲವು ಗಿಡಗಳಿವೆ. ಇದೇ ಜಾಗದಲ್ಲಿ ಸಹಯಾನಕ್ಕಾಗಿ ಒಂದು ಸಣ್ಣ ರಂಗಭೂಮಿ, ಒಂದು ಗ್ರಂಥಾಲಯ, 50 ಜನ ಉಳಿದುಕೊಳ್ಳಲು ಒಂದು ಸಣ್ಣ ಮನೆ ಕಟ್ಟುವ ಆಲೋಚನೆ ಇದೆ. ಮುಂದೆ ನೋಡಬೇಕು.

 

ಹೆಗಡೆಯಲ್ಲಿನ ಮೂಲ ಮನೆ

ಅಣ್ಣನ ಮೂಲ ಮನೆ ಕುಮಟಾದ ಹೆಗಡೆ. ಇವನಿಗೆ ಒಬ್ಬ ದೊಡ್ಡಪ್ಪ, ಇನ್ನೊಬ್ಬ ಚಿಕ್ಕಪ್ಪ ಇದ್ದರು. ದೊಡ್ಡಪ್ಪ ಪಂಚವಾದ್ಯದ ಕಲಾವಿದನಾದರೆ ಚಿಕ್ಕಪ್ಪ ಅಣ್ಣನ ಅಪ್ಪನಂತೆ ಕನ್ನಡ ಶಾಲೆಯ ಮಾಸ್ತರನಾಗಿದ್ದ.
ಏನೋ ಕಾರಣದಿಂದ ತಂದೆ ತೀರಿಕೊಂಡ ನಂತರ ಅಣ್ಣನನ್ನು ಆಯಿಯನ್ನು ಹೆಗಡೆಯ ಮೂಲ ಮನೆಯಿಂದ ಹೊರ ಹಾಕಿದರು. ಬಹುಶಃ ಗಂಡ ಸತ್ತಾಗ ತನ್ನ ಕೂದಲನ್ನು ತೆಗೆಯುವುದಿಲ್ಲ ಎಂದು ಆಯಿ ಹೇಳಿದ್ದರಿಂದ ಇರಬೇಕು. ಹಾಗಾಗಿ ಹಲವು ವರ್ಷ ಹೆಗಡೆಯೊಂದಿಗಿನ ಸಂಬಂಧ ಇರಲಿಲ್ಲ. ಅಣ್ಣ ತನ್ನ ತಂಗಿಯ ಮದುವೆ ಮಾಡಲು ನನಗೆ ಮನೆ ಇಲ್ಲ. ಇಲ್ಲೇ ಮಾಡುತ್ತೇನೆಂದು ಹೆಗಡೆಗೆ ಹೋದಾಗ ಅದಕ್ಕೂ ಅವಕಾಶ ಕೊಟ್ಟಿರಲಿಲ್ಲ. ಆದರೂ ಅವನೆಂದೂ ಅವರೊಂದಿಗೆ ದ್ವೇಷ ಮಾಡಿರಲಿಲ್ಲ. ಯಾಕೆಂದರೆ ದ್ವೇಷ ಮಾಡುವ ಸ್ವಭಾವವೇ ಅವನದಾಗಿರಲಿಲ್ಲ.

ಹೆಗಡೆಯ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಹಿಂಬದಿಯಲ್ಲಿರುವ ಒಂದಿಷ್ಟು ಭೂಮಿಯನ್ನು ಪಾಲು ಮಾಡುವ ಸಂದರ್ಭದಲ್ಲಿ ಅಣ್ಣನ ಪಾಲಿಗೆ ಎರಡುವರೆ ಗುಂಟೆ ಸ್ಥಳ ಬಂದಿತ್ತು. ಬಹುಶಃ ಇಂದು ಅದು ಲಕ್ಷಾಂತರ ರೂಪಾಯಿಗಳ ಜಾಗ. ಅಣ್ಣ ತನ್ನ ಪಾಲಿಗೆ ಬಂದ ಜಾಗವನ್ನು ತಾನು ತೆಗೆದುಕೊಳ್ಳದೆ ತನ್ನ ದೊಡ್ಡಪ್ಪನ ಮಗನಾದ ಕೃಷ್ಣನಿಗೆ ಮತ್ತು ಅಲ್ಲೇ ಪಕ್ಕದಲ್ಲಿರುವ ರಮಕ್ಕನಿಗೆ ಕೊಟ್ಟು ಬಂದಿದ್ದ. ಹಾಗೆ ಕೊಟ್ಟಿದ್ದು ನಮಗೂ ತಿಳಿದಿತ್ತು. ಕೊಡುವಾಗ ಅಣ್ಣ ನಮ್ಮ ಒಪ್ಪಿಗೆಯನ್ನೂ ಕೇಳಿದ್ದ.

ಅಣ್ಣ ತೀರಿಕೊಂಡ ಒಂದು ವರ್ಷದ ನಂತರ ಕುಟ್ಟಣ್ಣ (ನಾವು ಕೃಷ್ಣನಿಗೆ ಕುಟ್ಟಣ್ಣ ಎಂದೇ ಕರೆಯುವುದು) ಒಂದು ದಿನ ಮನೆಗೆ ಬಂದ. ಈತ ಒಳ್ಳೆಯ ಶಹನಾಯಿ ವಾದಕ ಕೂಡ.
‘ವಿಠ್ಠಲ ನಿನ್ನೊಂದಿಗೆ ಒಂದು ವಿಷಯ ಮಾತಾಡಲು ಬಂದಿದ್ದೇನೆ’ ಅಂದ.
‘ಹೇಳು ಎಂದೆ.’
ರೋಹಿದಾಸಪ್ಪಚ್ಚಿ ಹೆಗಡೆಯಲ್ಲಿರುವ ತನ್ನ ಪಾಲಿನ ಭೂಮಿಯನ್ನು ನನ್ನ ಹೆಸರಿಗೆ ವಿಲ್ ಮಾಡಿಕೊಟ್ಟಿದ್ದಾನೆ. ಅದನ್ನು ನನ್ನ ಹೆಸರಿಗೆ ನಾನಿನ್ನೂ ಮಾಡಿಕೊಂಡಿಲ್ಲ.” ಎಂದ.

“ಸರಿ ನನ್ನಿಂದೇನಾಗಬೇಕು” ಎಂದೆ.

“ಹಾಗಲ್ಲ ಹಿಂದೆ ಆತ ಕೊಟ್ಟಿದ್ದು ಹೌದು. ಈಗ ನಿನಗೆ ಅದರ ಮೇಲೆ ಹಕ್ಕಿದೆ. ನಿನಗೆ ಅದು ಬೇಕೆಂದೆನಿಸಿದರೆ ನಾನು ಅದನ್ನು ವಾಪಾಸು ಕೊಡುತ್ತೇನೆ. ನನ್ನ ಹೆಸರಿಗೆ ಮಾಡಿಕೊಳ್ಳುವುದಿಲ್ಲ. ಬೇಡವೆಂದು ನೀನು ಒಪ್ಪಿದರೆ ನಾನು ಮಾಡಿಕೊಳ್ಳುತ್ತೇನೆ” ಅಂದ.

ಅವನ ದೊಡ್ಡ ಗುಣಕ್ಕೆ ನನ್ನ ಕಣ್ಣು ಮನಸ್ಸು ತುಂಬಿ ಬಂತು. ಗೊತ್ತಾಗದಂತೆ ಇನ್ನೊಬ್ಬರ ಜಾಗ ಹೊಡೆದುಕೊಳ್ಳುವ ಈ ಕಾಲದಲ್ಲೂ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಜಾಗವನ್ನು (ಅಣ್ಣ ಪ್ರೀತಿಯಿಂದ ಕೊಟ್ಟ ಭೂಮಿ) ಮತ್ತೆ ನನಗೆ ಬೇಕಾದರೆ ಕೊಡುವ ಮಾತು ಹೇಳಿದ್ದು ನನಗೆ ಆಶ್ಚರ್ಯ ತಂದಿತು. ಕುಟ್ಟಣ್ಣ ನನ್ನನ್ನು ಮತ್ತೆ ಕೇಳಬೇಕಾಗಿಯೇ ಇರಲಿಲ್ಲ. ಅವನ ಹೆಸರಿಗೆ ಮಾಡಕೊಳ್ಳಬಹುದಾಗಿತ್ತು.

ಅವನ ಉದಾತ್ತ ಗುಣಕ್ಕೆ ನಾನು ಮೌನವಾದೆ. “ಅಣ್ಣ ಕೊಟ್ಟಿದ್ದನ್ನು ನಾನು ಮತ್ತೆ ವಾಪಾಸು ಕೇಳಲಾರೆ. ನನಗೆ ಅದರ ಅವಶ್ಯಕತೆಯಿಲ್ಲ, ನೀನು ಕೇಳಿದ್ದೇ ನನಗೆ ತಡೆಯಲಾರದಷ್ಟು ಸಂತೋಷ ಆಗಿದೆ. ಅಣ್ಣನ ಮಾತನ್ನು, ನಡೆಯನ್ನು ನಾವು ಯಾವತ್ತೂ ಮೀರಿದ್ದಿಲ್ಲ; ಮೀರುವುದೂ ಇಲ್ಲ. ಅಣ್ಣನ ಆಶಯದ ಮುಂದುವರಿಕೆಗೆ ನಾನು ಆದಷ್ಟು ಪ್ರಾಮಾಣಿಕವಾಗಿರುತ್ತೇನೆ.” ಎಂದು ಕಳಿಸಿಕೊಟ್ಟೆ.

ಅದೇನೋ ವಂಶಾವಳಿ ಬೇಕು ಎಂದು ಕುಟ್ಟಣ್ಣ ಬಂದಿದ್ದ. ನನ್ನ ಕಾಲೇಜು, ಓಡಾಟದ ಮಧ್ಯೆ ಆಗಲೇ ಇಲ್ಲ. ಈ ರಜಾದಲ್ಲಾದರೂ ಮಾಡಿಸಿಕೊಡಬೇಕು.
ಹೀಗೆ ಅಣ್ಣ ಕಳೆದುಕೊಳ್ಳುವುದರಲ್ಲಿಯೇ ಅತ್ಯಂತ ಸಂತೋಷ ಪಡುತ್ತಿದ್ದ. ಈ ಉದಾತ್ತ ಗುಣವೇ ಬಹುಶಃ ಅವನಿಗೆ ಬುದ್ಧನಂತವರ ಮೇಲೆ ಪ್ರೀತಿ ಹುಟ್ಟಲು ಕಾರಣ ಆಗಿರಬೇಕು.

2 comments

  1. ಆರ್ ವಿ ಭಂಡಾರಿ ಅವರ ಬಗ್ಗೆ ಬರೆಯುತ್ತಿರುವುದು ಸೊಗಸಾಗಿದೆ. ಆದರೆ ನೀವು ಅವಸರದಲ್ಲಿ ಬೇಗ ಮುಗಿಸಬೇಕು ಅನ್ನುವಂತೆ ಮಾತನ್ನು ತಟಕ್ಕನೆ ನಿಲ್ಲಿಸಿಬಿಡುತ್ತಿದ್ದಿರಿ. ಹಾಗೆ ಮಾಡದೆ ಸಾವಕಾಶ ಇನ್ನಷ್ಟು ವಿಸ್ತಾರವಾಗಿ ಬರೆಯಿರಿ. ನೀವಲ್ಲದೆ ಇನ್ಯಾರು ಬರೆಯಬೇಕು? ಮಾಧವಿ ಬರೆಯುವುದು ಇನ್ನು ಬಾಕಿ ಇದೆ.

  2. ಇಂತಹ ಜನರು ನಮ್ಮ ಸಂಪತ್ತು ಪುಣ್ಯಾತ್ಮರು ಯಾವುದಕ್ಕೂ ಆಸೆ ಪಡದೇ ಬದುಕಿ ಎಲ್ಲರ ಮನದಲ್ಲಿ ಇಂದಿಗೂ ಜೀವಂತ ಇದ್ದಾರೆ

Leave a Reply