ಹೆಗಲ ಸುಕ್ಕುಗಳು

ಸದಾಶಿವ್ ಸೊರಟೂರು

ಚರ್ಮ ಅಲ್ಲಲ್ಲಿ
ಗೆರೆ ಕೊರೆದಂತೆ ಸುಕ್ಕು
ಹೆಗಲ ಮೇಲೊಂದು ಚೀಲ
ದಿನ ದಿನಕ್ಕೂ ಹಿಗ್ಗಿದರೂ
ಗಟ್ಟಿಯಾಗಿಯೇ ಇದೆ;
ಜೋತು ಬಿದ್ದ ಚರ್ಮದಂತಲ್ಲ!

ಬಾಲ್ಯದ ಕೆತ್ತಿದ ಮಂಡಿ
ಕೈ ಕೊಟ್ಟ ಹುಡುಗಿ
ರ್ಯಾಂಕು ಪಾಸು ಫೇಲು
ನೌಕರಿ ಗಿರಾಕಿ ಮೋಸ
ಹೆಂಡತಿ ಮಕ್ಕಳು ಕುಕ್ಕರ್
ಮಗಳ ಮದುವೆ ಹರಿದ ನಿಕ್ಕರ್
ಬಿಟ್ಟು ಹೋದ ಮಗ
ಹೀಗೆ ಏನೆಲ್ಲಾ ಇವೆಯೊ
ಆ ಚೀಲದೊಳಗೆ!

ಚೀಲ ತುಂಬಿದಂತೆ
ಬಾಗಿದ್ದು ಸೊಂಟ ಬೆನ್ನು,
ಬಾಗಿ ಬಾಗಿ ಹೋರಬೇಕು.
ಆಚೀಚೆ
ಇಳಿ ಸಂಜೆ ಮಂಪರಿನಲ್ಲಿ
ಏನನ್ನೊ ಹೆಕ್ಕಬೇಕು;
ಗೊತ್ತಿಲ್ಲದ ಕಾತರ ಹುಡುಕಿ!

ಎಲ್ಲಾ ಮುದುಕರು ಒಂದೇ
ನೆರಿಗೆಗಳು ಬಿಳಿ ಕೂದಲು
ಮತ್ತು ಬಿದ್ದ ಹೋದ ಹಲ್ಲು

ಮುಪ್ಪು ಹಣ್ಣಾದಷ್ಟು
ಹೆಗಲ ಚೀಲ ನಿಗಿ ನಿಗಿ
ತುಂಬಿದ ಚೀಲ ಹೆರುವ
ಒಂದೊಂದು ಮಾತು ವಜನು

 

Leave a Reply