ಅಂತಃಕರಣದ ಗೆಳತಿಗೆ..

ಆರನಕಟ್ಟೆ ರಂಗನಾಥ

ಮೊದಲ‌ಸಲವಲ್ಲ
ಅದೆಷ್ಟೋ ಸಲ ಹೀಗೆ
ಆಡಿಕೊಂಡ ಮಾತಿಗೆ ನೇರಾ ನೇರ
ಈಟಿಯ ಎದೆಗಿಟ್ಟು ನೆಮ್ಮಲು ಕಲಿತ
ಮನೆಪಾಠವು ಮರೆತಂತೆ  ನೀನು
ಹೀಗೆ ಕಣ್ಣೆದುರೆ ಕಣ್ಚೆಲ್ಲಿ ನಿಂತರೆ
ಸಹಿಸುವುದೆ  ಹಿಂಸೆ !

ಇದುವು ಮೊದಲ ಸಲವಲ್ಲ
ಅದೆಷ್ಟೋ ಸಲ
ನೆರಳಿನೊಟ್ಟಿಗೆ ನಡೆದ
ಕಳೆದ ಕಾಲದ ಗುರುತಿಗೆ
ಎದೆಗಿಳಿದ ನೀನು
ತಿಂಗಳ ಬೆಳಕಿನಲ್ಲಿ ಚಂಡಿ ಹಿಡಿದರೆ
ತರೆಗೆಲೆಯಂತೆ ತೀರಿಕೊಳ್ಳುವೆ


ಕೆಮ್ಮಣ್ಣಿನೊಟ್ಟಿಗೆ ಜೀವ ಬಿಟ್ಟ ಮಲ್ಲಿಗೆ
ನನ್ನುಸಿರಿನೊಟ್ಟಿಗೆ  ಬೇರುಬಿಟ್ಟಿದೆ
ನಿನ್ನಿಂದಲೆ ಶುರುವಾದ
ಹೂವಿನ ದಳಗಳ ಮೆರವಣಿಗೆ
ಅಂಗಳದಲ್ಲೆ ಕಾಲೂರಿರುವುದು
ಇದು ಮೊದಲ ಸಲವಲ್ಲ
ಅದೆಷ್ಟೋ ಸಲ !

ಇರುಳಿನೊಟ್ಟಿಗೆ ನಡೆವಾಗ
ಸಿಬಿರೆದ್ದ ಊರುಗೋಲು
ಎದೆಗಿಳಿದು ಸಿಗಿದರೆ
ನೆತ್ತರಲ್ಲೆ  ನೆಂದು ಮಡಿದ ಪ್ರೀತಿ
ಉಸಿರಿನೊಟ್ಟಿಗೆ  ಬೇರು ಬಿಡುವುದು
ಇದು ಮೊದಲ ಸಲವೇನಲ್ಲ !.

Leave a Reply