ಬಾಗಿಲಾಚೆ ನಿಂತಿದೆ…

ಮಲ್ಲಮ್ಮ   ಜೆ.

ನೀನಾಡಿದ ಮಾತುಗಳನೆಲ್ಲ
ಮೌನಬಿಂದಿಗೆಗೆ ಮುಡಿಸಿ
ಮರೆಯಲಿಟ್ಟಿರುವೆ
ಮೌನವೂ ಮಿಸುಕಾಡುತಿದೆ

ಸೋತು ಸೋತು ಸೋಲಿಸುವ
ಅಣತಿಯಿತ್ತೇ ಸಲಿಗೆಗೆ
ಕರೆಯದ ಕಾರಣ ಕಲಕುವ
ಕಕ್ಕುಲಾತಿಯೇಕೆ ನಿನಗೆ

ಸುರಿದ ಚುಕ್ಕಿಗಳೆಲ್ಲವ ಬಳಸಿ
ಶಾಂತವಾಗಿದೆ ಕಡಲು
ಅಲೆಗಳೆಣಿಕೆಯ ಒಲವು ನಿನಗಿಲ್ಲ
ಎಂಬುದನರಿತ ಕಣ್ಣಿನಲೂ
ನಿನ್ನದೇ ಗುರುತು

ತೋರಿಕೆಗಾದರೂ ತಣಿಯಬಾರದೆ
ತಾಪದ ಹಗಲು
ಜರಿವವರಿಗೆಲ್ಲ ಜರೂರು ಕೆಲಸವೇನೊ
ಅಲ್ಲಿಯೂ ಮೃದುಮೌನದೊಡಲು
ಸುಳಿದ ತಂಗಾಳಿಯೂ ಸಹ
ಬಿಂಕದಿ ಬಂದು ಬರಿಗೈಲಿ ತೆರಳಿದೆ

ಸುರಿದ ಮೇಲೀಗ ಹಗುರ ಹಗುರ
ಕರಾರಿನ ಕಾರಣ ನಗುವೊಂದು
ಬಾಗಿಲಾಚೆ ನಿಂತಿದೆ
ಕೈಹಿಡಿದು ಕರೆಯಬೇಕಿದೆ
ಬೆಳಕು ಮರಳುವ ಮುನ್ನ….

 

Leave a Reply