ಅಲ್ಲ, ನಾನು ಅವಳಲ್ಲ..

ಅಲ್ಲ, ನಾನು ಅವಳಲ್ಲ
ನಿಮಗೆ ಬೂಟು ಮತ್ತು ಕಾಲುಚೀಲಗಳನ್ನು ಮಾರುವವಳಲ್ಲ,
ನೆನಪಿದೆಯಾ ನಿಮಗೆ ?
ಅದೇ, ನೀವು ನಿಮ್ಮದೇ ಮನಸ್ಸಿನಂತಿದ್ದ ನಾಲ್ಕು ಕಲ್ಲಿನ ಗೋಡೆಗಳ ನಡುವೆ ನನ್ನನ್ನು ಕೂಡಿಟ್ಟು,
ಊರೆಲ್ಲ ಸ್ವೇಚ್ಛೆ ಅಂಡಲೆಯುವಾಗ ಪ್ರಾಯಶಃ
‘ನಿಮ್ಮ ಆ ಕಲ್ಲಿನ ಗೋಡೆಗಳು ನನ್ನ ಧ್ವನಿಯನ್ನು
ಉಸಿರುಕಟ್ಟಿಸಿ ಕೊಲ್ಲಲಾರವು’ ಎಂದು ನಿಮಗೆ ತಿಳಿಯಲಿಲ್ಲವೇನೋ ಪಾಪ.

ಬೆಳಕನ್ನು ಕತ್ತಲು ಅಡಗಿಸಿಡಲಾರದು ಎಂದರಿಯದೆ
ನಿಮ್ಮ ರೂಢಿ ಸಂಪ್ರದಾಯಗಳ
‘ಭಾರ’ದಿಂದ ನೀವು ಬಗ್ಗು ಬಡಿದ ಆ ಅವಳೇ ನಾನು .
ನೆನಪಿದೆಯಾ ? ನೀವು ನನ್ನ ಮಡಿಲಿಂದ ಮೃದುವಾದ ಹೂವುಗಳನ್ನು ಕಿತ್ತುಕೊಂಡು ಅಲ್ಲಿ ಮುಳ್ಳು ಮತ್ತು ಉರಿಕೆಂಡಗಳನ್ನು ನೆಟ್ಟಿರಿ.
ಪಾಪ ನಿಮಗೆ ಅರಿವಿರಲಿಲ್ಲ ಎಂದೆನ್ನಿಸುತ್ತೆ
‘ ನಿಮ್ಮ ಸರಪಳಿಗಳು ನನ್ನ ಸುಗಂಧ ವನ್ನು ಕಟ್ಟಿಹಾಕಲಾರವು ‘ ಎಂದು.

ನನ್ನ ಪಾವಿತ್ರ್ಯತೆಯ ಹೆಸರಲ್ಲಿ ನೀವು
ಕೊಂಡ ಮತ್ತು ಮಾರಿದ ಆ ಅವಳೇ ನಾನು .
ಆದರೆ ನಿಮಗೆ ಗೊತ್ತಿರಲಿಲ್ಲ
ಮುಳುಗುವ ಸ್ಥಿತಿ ಬಂದಾಗ ನಾನು ನೀರಿನ ಮೇಲೂ ನಡೆಯಬಲ್ಲೆ ಎಂಬುದು.

‘ಭಾರ ಇಳಿಸಿಕೊಂಡರೆ ಸಾಕಪ್ಪ’ ಎಂದು
ನೀವು ಮದುವೆ ಮಾಡಿ ಕೈ ತೊಳೆದುಕೊಂಡ
ಆ ಅವಳೇ ನಾನು.
ಆದರೆ ನಿಮಗಿದು ತಿಳಿದಿರಲಿ :
‘ ಮಾನಸಿಕ ಸೆರೆಗಳಲ್ಲಿ ನರಳುವ ಯಾವ ದೇಶವೂ ಸ್ವತಂತ್ರವಲ್ಲ ‘

ನಾನು ಅವಳೇ,ನಿಮ್ಮ ವ್ಯವಹಾರದ ಸರಕಾಗಿದ್ದವಳು.
ನನ್ನ ಪಾವಿತ್ರ್ಯತೆ, ನನ್ನ ತಾಯ್ತನ, ನನ್ನ ನಿಷ್ಠೆ ಎಲ್ಲವೂ ನಿಮ್ಮ ಮಾರುಕಟ್ಟೆಯ ಸರಕೇ ಆಗಿತ್ತಲ್ಲವೇ?
ಈಗ ಕೇಳಿ ನನಗೂ ಸ್ವಚ್ಛಂದ ಹೂವಾಗುವ ಕಾಲ ಬಂದಿದೆ.
ಆ ಪೋಸ್ಟರ್ ನಲ್ಲಿ ಕಾಣುವ,ಆ ಅರೆಬೆತ್ತಲೆ -ಅವಳು
ಬೂಟು, ಕಾಲುಚೀಲಗಳನ್ನು ಮಾರುವ ಅವಳು
ಅಲ್ಲ , ನಾನವಳಲ್ಲವೇ ಅಲ್ಲ. !

ಮೂಲ ಕವಿತೆ 

Am Not That Woman
———————————————
I am not that woman
Selling you socks and shoes!
Remember me, I am the one you hid
In your walls of stone, while you roamed
Free as the breeze, not knowing
That my voice cannot be smothered by stones,

I am the one you crushed
With the weight of custom and tradition
Not knowing
That light cannot be hidden in darkness.
Remember me,
I am the one in whose lap
You picked flowers
And planted thorns and embers
Not knowing
That chains cannot smother my fragrance

I am the woman
Whom you bought and sold
In the name of my own chastity
Not knowing
That I can walk on water
When I am drowning.

I am the one you married off
To get rid of a burden
Not knowing
That a nation of captive minds
Cannot be free.

I am the commodity you traded in,
My chastity, my motherhood, my loyalty.
Now it is time for me to flower free.
The woman on that poster, half-naked, selling socks and shoes-
No, no, I am not that woman!

 Kishwar Naheed

8 comments

 1. excellent expression of feelings of a suppressed woman and it is time every human being is given the freedom to live free and in dignity, especially women. An appeal to all males not to use women as a commodity or for commercial exploitation.

 2. ನಾನು ಅವಳೆಂದೆಣಿಸಿ ತಲ್ಲಣಿಸದಿರು

  ಏಕೆ ತಲ್ಲಣಿಸುವೆಯೋ
  ನಾ ಅವಳಲ್ಲ ನೀ ಎಣಿಸಿದ ಎಕ್ಕಡ ಮಾರುವವಳಲ್ಲ
  ನೆನಪಿದೆಯಾ ; ಭದ್ರಕೋಟೆಯಲೆನ್ನ
  ಅವಿಸಿಟ್ಟು ಅಲೆಗ್ಡಾಂಡರನಂತೆ
  ನೀ ದಿಗ್ವಿಜಯದ ಗರಿಮೆಯಲಿ
  ಸಂಚರಿಸುತಿದ್ದಾಗ ನಾಲ್ಕು ಗೋಡೆಗಳೇ
  ನನ್ನೊಡನಾಡಿಗಳು ; ನೀ
  ಕಟ್ಟಿದ ಸಮಾಧಿಯ ಕಲ್ಲುಗಳೆನ್ನ
  ದನಿಯಡಗಿಸಲಾರವು !

  ಪರಂಪರೆ ಸಂಪ್ರದಾಯದ ಜಗನ್ನಾಥ
  ರಥ ಚಕ್ರದಡಿ ಎನ್ನ ಹೊಸಕಿಹಾಕಿದ
  ನಿನಗೆ ಅರಿವಿಲ್ಲವೇ ? ತಿಮಿರದಲಿ
  ಪ್ರಣತಿ ಅವಿತಿರುವುದಿಲ್ಲ ; ನೆನಪಿಲ್ಲವೆ
  ನನ್ನೊಡಲ ತಡಿಯಲಿ ಕಳೆದ
  ಮಧುರ ಕ್ಷಣಗಳು ಸುಂದರ
  ಹೂದೋಟದಲಿ ವಿಹರಿಸಿ
  ಕಲ್ಲು ಮುಳ್ಳುಗಳ ನೆಟ್ಟೆಯಲ್ಲಾ !
  ಎಲಾ ಕಪಟಿ
  ಎನ್ನೊಡಲ ಅಂತರಾಳದ
  ಚಿಲುಮೆ ಬತ್ತುವುದಿಲ್ಲವೋ
  ನಿನ್ನ ಕುಣಿಕೆಗಳು ಸುವಾಸನೆಯ
  ಬಂಧಿಸುವುದಿಲ್ಲವೋ !

  ನನ್ನ ಚಾರಿತ್ರ್ಯ ನನ್ನ ಶೀಲ
  ನನ್ನ ಸ್ವತ್ತು
  ರಕ್ಷಿಸಲು ನೀನಾರು ? ಆದರೂ
  ಬಿಕರಿಗಿಟ್ಟುಬಿಟ್ಟೆಯಲ್ಲಾ
  ಬೀದಿ ಬೀದಿಗಳಲ್ಲಿ ಗುಡಿ
  ಗುಂಡಾರಗಳಲ್ಲಿ ; ದೇಹವೆಂಬ
  ಸ್ಥಾವರ ಬಿಕರಿಯಾದೀತು
  ಆತ್ಮವಲ್ಲ ; ಮುಳುಗುವಾಗಲೂ
  ನೀರ ಮೇಲೆ ನಡೆಯಬಲ್ಲೆ
  ಅರಿತಿರುವೆಯಾ !

  ನಿನ್ನ ಹೊರೆ ಕಳಚಲು
  ನನ್ನ ಕುತ್ತಿಗೆಗೇಕೆ ಕುಣಿಕೆ ;
  ಬಿಗಿದುಬಿಟ್ಟೆಯಲ್ಲಾ ಸಪ್ತಪದಿಯ
  ಲಾಂಛನದಲಿ ಮುಗ್ಗಂಟುಗಳನ್ನು ;
  ಇತಿಹಾಸದ ಪಾಠ ಮರೆತುಬಿಟ್ಟೆಯಾ
  ಸೆರೆಯಾದ ಮನಸುಗಳ ದೇಶ
  ಎಂದಿಗೂ ಸ್ವತಂತ್ರವಾಗಲಾರದು !

  ನಿನ್ನ ಮಾರು-ಕಟ್ಟೆಯ ಶಿಲಾನ್ಯಾಸದಲಿ
  ನಾ ಬಿಕರಿಯಾದೆ ಮಾರಿಬಿಟ್ಟೆಯಲ್ಲಾ
  ಹಾರಿ ಹೌಹಾರಿ ; ನನ್ನ ಚಾರಿತ್ರ್ಯ
  ಮಾತೃ ಹೃದಯ ನನ್ನ ನಿಷ್ಠೆ
  ಎಲ್ಲವೂ ಬಿಕರಿಯಾಯಿತು
  ಒಂದನೆ ಬಾರಿ ಎರಡನೆ ಬಾರಿ
  ಕೊನೆಯ ಬಾರಿ – ಹರಾಜಿನಲಿ ;
  ಇನ್ನೇಕೆ ನಿನ್ನ ಗೊಡವೆ ಇನ್ನೇಕೆ
  ನಿನ್ನ ಅಂಕೆ –ಶಂಕೆ ಇಲ್ಲದೆ
  ಹಾರಾಡುವೆ ಪಂಜರ ತೊರೆದ
  ಮುಕ್ತಛಂದ ಬಾನಾಡಿಯಂತೆ ;

  ಅದೋ ನೋಡಲ್ಲಿ
  ಗೋಡೆಯ ಮೇಲೊಂದು ಅರೆಬೆತ್ತಲೆಯ
  ಚಿತ್ರ ಮಾರುತ್ತಿದ್ದಾಳೆ ನಿನ್ನ
  ಪಾದದಡಿಗೊಂದು ಮೆಟ್ಟುಮೆಟ್ಟಿ ನಿಲ್ಲುವ ಪಾದಗಳಿಗೊಂದು ಕವಚ –
  ಭ್ರಮೆ ಬೇಕಿಲ್ಲ ಅದು ನಾನಲ್ಲ
  ನಾನೆಂದೆಣಿಸಿ ಧಾವಿಸಬೇಡ !

  ಮೂಲ : ಕೀಶ್ವರ್ ನಹೀದ್
  ಅನುವಾದ : ನಾ ದಿವಾಕರ

  • ದಿವಾಕರ್ ಸರ್ ನಿಮ್ಮ ಅನುವಾದ ನಾನು ಮಾಡಿರುವುದಕ್ಕಿಂತ ತುಂಬಾ ಚೆನ್ನಾಗಿದೆ …‌Its more POETIC …

  • ನಿಮ್ಮಿಂದ ಮೆಚ್ಚುಗೆ ಪಡೆದ ನಾನು ಧನ್ಯ ನಿಮ್ಮ ಅನುವಾದಿತ ಕವನಗಳನ್ನು ಗಮನಿಸುತ್ತಲೇ ರೂಢಿಸಿಕೊಂಡಿದ್ದೇನೆ.

 3. When we made the English text book for puc in 2004, I included this poem for our students. Many people including some senior professors were against this because it was written by a Pakistani poet. Strange students then and translates now like it.

  • Vijayavaman sir. I am grateful to you for selecting it for the syllabus . I had taught this for three years. I don’t really understand why people opposed it for the reason of its author’s nationality…

 4. ವಾಹ್ ,, ಮೂಲ ಮತ್ತು ಅನುವಾದ ಎರಡೂ ಚೆಂದ. ಪಾಕೀಸ್ಥಾನ , ಹಿಂದೂಸ್ಥಾನ ಅತ್ತ ಬಿಡಿ ,, ಹೆಂಗಸು ಎಲ್ಲಿದ್ದರೂ ತುಳಿಯುವುದರಲ್ಲೇನೂ ವ್ಯತ್ಯಾಸವಿಲ್ಲ. ಅದರಲ್ಲೂ ಏಷ್ಯಾಖಂಡದ ಹೆಂಗಸರ ಪಾಡು ಹೆಚ್ಚೂಕಡಿಮೆ ಒಂದೇ ತರಹ.
  ಕವಿತೆಯ ” tone” ಮಾವಲಿಯವರ ಅನುವಾದದಲ್ಲಿ ಓದುಗರಿಗೆ ಹೆಚ್ಚು ತಟ್ಟುತ್ತದೆ.

Leave a Reply