ಎಷ್ಟೇ ಗಂಭೀರವಾದ ನಾಟ್ಕ ನೋಡ್ಲಿ, ಏನೇ ನೋಡ್ಲಿ. ಸಂಗೀತ, ನೃತ್ಯ ಅಂದ್ಬಿಟ್ರೆ ಅದೇನೋ ‘ಪುಳಕ’. ಅಲ್ವಾ?

ಯಪ್ಪಾ! ಅದೇನ್ ಡಾನ್ಸು……..ಅದೇನ್ ಹಾಡು

ನಾನಿದ್ದ ಕಣ್ಣೂರಿನಿಂದ ದಕ್ಷಿಣಕ್ಕೆ ಸುಮಾರು ಒಂದೂವರೆ ಘಂಟೆ ರೈಲು ಜರ್ನಿ ಮಾಡಿದ್ರೆ ಕೋಳಿಕೋಡ್ (ಕ್ಯಾಲಿಕಟ್) ನಗರ.

ಕೋಳಿಕೋಡ್ ಮಲಬಾರ್ ಭಾಗದ ಪ್ರಮುಖ ಪಟ್ಟಣ. ‘ಮಸಾಲೆ ಸಾಮಾನುಗಳ ಪೇಟೆ’ ಅಂತ ಕರೆಸ್ಕೊಂಡ ಊರು. ಏಳನೆಯ ಶತಮಾನದಲ್ಲೇ ಅರಬರೊಂದಿಗೆ ವ್ಯಾಪಾರ ಸಂಬಂಧ ಹೊಂದಿದ್ದ ಕೇಂದ್ರ. 1498 ರಲ್ಲಿ ವಾಸ್ಕೋಡ ಗಾಮ ಬಂದಿಳಿದ ಬಂದರು. ಫ್ರೆಂಚರು, ಇಂಗ್ಲೀಷರು, ಡಚ್ಚರು ವ್ಯಾಪಾರ ಕೇಂದ್ರಗಳನ್ನ ಹೊಂದಿದ್ದ ನಾಡು.ಒಂದು ಕಾಲದಲ್ಲಿ ಪ್ರಸಿದ್ಧ ನೇಕಾರಿಕೆಯ ಕೇಂದ್ರವಾಗಿದ್ದ ಕ್ಯಾಲಿಕಟ್ ನಿಂದಲೇ ‘ಕ್ಯಾಲಿಕೋ’ ಎನ್ನೋ ಬಟ್ಟೆಯ ಹೆಸರು ಬಂದಿದ್ದು.

ಈಗಲೂ ಕ್ಯಾಲಿಕಟ್ ಒಂದು ಪ್ರಮುಖ ವ್ಯಾಪಾರೀ ಕೇಂದ್ರವೇ. ಜೊತೆಗೆ ಒಂದು ಒಳ್ಳೇ ಸಾಂಸ್ಕೃತಿಕ ಕೇಂದ್ರ ಕೂಡ. ದೊಡ್ಡ ದೊಡ್ಡ ಸಂಗೀತೋತ್ಸವಗಳು ಇಲ್ಲಿ ಪ್ರತಿ ವರ್ಷ ನಡೀತಾವೆ. ‘ಮಲಬಾರ್ ಮಹೋತ್ಸವಮ್’ ಇಲ್ಲಿ ನಡೆಯೋ ದೊಡ್ಡ ಸಾಂಸ್ಕೃತಿಕ ಹಬ್ಬ. ಕ್ಯಾಲಿಕಟ್ ನಡೆಸೋ ಮೂರು ದಿನಗಳ ‘ರಾಗಂ’ ಕಾಲೇಜು ಉತ್ಸವ, ತ್ಯಾಗರಾಜ ಸಂಗೀತೋತ್ಸವ,,, ಹೀಗೆ. ನನಗೆ ತುಂಬ ಕುತೂಹಲ ಹುಟ್ಟಿಸಿದ ಸಂಗತಿ ಅಂದ್ರೆ ಹಿಂದುಸ್ತಾನೀ ಸಂಗೀತದ ಪರಂಪರೆ ಈ ಊರಲ್ಲಿ ಕಾಣೋದು. ಅದ್ರಲ್ಲೂ ಗಜಲ್ ಗಳು. ಮಲಯಾಳೀ ಗಜಲ್ ಗಳನ್ನ ಹಾಡೋ ಪ್ರಸಿದ್ಧ ಸಂಗೀತಗಾರರು ಇಲ್ಲಿದಾರೆ. ಬಾಬುರಾಜ್ ಎನ್ನೋ ಪ್ರಸಿದ್ಧ ಹಾಡುಗಾರ್ರು ಮಲಯಾಳಂ ಗಝಲ್ ಗಳ ದೊರೆ.

ಹಾಗೇನೇ ಈ ಊರು ನಾಟ್ಕದ ಸೆಂಟರ್ ಕೂಡ. ನಾನಲ್ಲಿದ್ದಾಗಲೇ ಅಲ್ಲಿ ಒಂದು ರಾಷ್ಟ್ರೀಯ ನಾಟಕೋತ್ಸವ ನಡೀತು. ಐದು ಭಾಷೆಗಳ ಹದಿನೆಂಟು ನಾಟಕಗಳ ಉತ್ಸವ. ನಾನಂತೂ ಸಿಕ್ಕಿದ್ದೇ ಚಾನ್ಸ್ ಅಂತ ದಿನಾ ರೈಲು ಹತ್ತಿದ್ದೇ. ಆಫೀಸು ಮುಗಿಸಿ ಸಂಜೆ ರೈಲು ಹತ್ತಿದ್ರೆ ಸರೀ ನಾಟ್ಕದ ಟೈಮಿಗೆ ನಾ ಹಾಜರ್. ರಾತ್ರಿ ನಾಟ್ಕ ಮುಗಿದ್ಮೇಲೆ ಪರೋಟಾ ತಿಂದು ವಾಪಸ್ ರೈಲು. ಸುಮಾರು ಹದಿನೈದು ನಾಟ್ಕಗಳನ್ನ ಹೀಗೇ ನೋಡ್ದೆ.

ಅವುಗಳಲ್ಲೇ ‘ಡಿಫರೆಂಟ್’, ತುಂಬ ಡೆಫರೆಂಟ್ ಆಗಿರೋ ಕಾರಣಕ್ಕೆ ನನ್ನನ್ನ ಕಾಡಿದ ನಾಟ್ಕ ‘ಗಬರ್‍ಘಿಚೋರ್’. ಬೇಗುಸರೈ ನಿಂದ ಬಂದ ಈ ನಾಟದಲ್ಲ್ಕಿ ಮೂರು ಭಾಷೆಗಳು. ಹಿಂದಿ/ಭೋಜಪುರಿ/ಮಾಘಿ. ನಾಟ್ಕಾನ ಬರೆದವ್ರು ಭಿಖಾರಿ ಠಾಕೂರ್. ನಿರ್ದೇಶಕರು ಪ್ರವೀಣ್ ಕುಮಾರ್ ಗುಂಜನ್. ಬಿಹಾರದ ಒಂದು ಜನಪದ ಕಥೆ ಆಧರಿಸಿದ ನಾಟ್ಕ ಅಂತ ನಿರ್ದೇಶಕರು ಹೇಳ್ಕೋತಾರೆ.

ಈ ‘ಗಬರ್‍ಘಿಚೋರ್’ ಉಂಡಾಡಿ ಗುಂಡ. ಸುಮಾರು ಹದಿನೈದು ವರ್ಷದ ಈ ಹುಡ್ಗ ತರ್ಲೆ ಮಾಡ್ತಾ ಊರೆಲ್ಲ ಸುತ್ತಾಡ್ಕೊಂಡು ಇದ್ದೋನು. ಈತ ‘ಗರ್ಬರಿ’ ಎನ್ನೋ ಹಳ್ಳಿಯ ಹೆಂಗ್ಸಿನ ಮಗ. ಆಕೆಯ ಗಂಡ ‘ಗಲೀಜ್. ಆಸೆಬುರುಕ. ಈತ ಕಾಸು ಮಾಡೋಕಂತ ಊರು ಬಿಟ್ಟು ಪಟ್ಟಣ ಸೇರಿ ಎಷ್ಟೋ ವರ್ಷಗಳಾಗಿವೆ. ಮನೇನೂ ಹೆಂಡ್ತೀನೂ ಮರೆತೇ ಬಿಟ್ಟೋನು ಆತ. ಅವನು ಊರು ಬಿಟ್ಮೇಲೇನೇ ಈ ‘ಗಬರ್‍ಘಿಚೋರ್’. ಹುಟ್ಟಿದ್ದು. ಒಂದಿನ ಪಟ್ನದಲ್ಲಿ ಈತನಿಗೆ ಸಿಕ್ಕಿದ ಯಾರೋ ಮಹಾನುಭಾವ ಗಲೀಜ್ ಗೆ ಈ ಹುಡ್ಗನ ವಿಷ್ಯ ಹೇಳ್ತಾನೆ. ಗಲೀಜ್ ಗಾಬರಿಯಾಗ್ತಾನೆ. ಊರಿಗೆ ಓಡ್ತಾನೆ. ‘ಗಬರ್‍ಘಿಚೋರ್’ ನ್ನ ಪಟ್ಣಕ್ಕೆ ಕರ್ಕೊಂಡು ಹೋಗಿ ಕೆಲಸಕ್ಕೆ ಹಚ್ಚಿ ಕಾಸು ಮಾಡೋದು ಗಲೀಜ್ ನ ಯೋಚ್ನೆ.

ಆದ್ರೆ ಇದಕ್ಕೆ ತಾಯಿ ಗರ್ಬರಿ ಬಿಲಕೂಲ್ ಒಪ್ಪೋದಿಲ್ಲ. “ಈ ಮಗುವಿಗೆ ನಾನೇ ತಂದೆ’ ಅಂತ ಗಡಬಡೀ ಎನ್ನೋ ಗರ್ಬರಿಯ ಗೆಳೆಯ ಕ್ಲೇಮ್ ಮಾಡೋಕೆ ಬರ್ತಾನೆ. ಜಟಾಪಟಿ ಶುರುವಾಗ್ತದೆ, ವಿಷ್ಯ ಪಂಚಾಯ್ತಿಗೂ ಹೋಗ್ತದೆ. ಈ ಹುಡ್ಗನನ್ನ ಮೂರು ಭಾಗ ಮಾಡೋದು: ಒಂದೊಂದು ಭಾಗಾನ ಒಬ್ಬೊಬ್ರು ತಗೊಳ್ಳೋದು ಅಂತ ನಿರ್ಣಯ ಆಗ್ತದೆ. ಒಬ್ಬ ಮನುಷ್ಯ ಬಂದು ‘ಗಬರ್‍ಘಿಚೋರ್’ ನ ದೇಹಾನ ಆಳೆದು ನಾಲ್ಕಾಣೆಗೊಂದು ತುಂಡಿನಂತೆ ಭಾಗಾ ಮಾಢಿಕೊಡೋಕೆ ಒಪ್ಕೋತಾನೆ. ಇನ್ನೇನು ಕಡಿಯೋದು ಶುರುವಾಗ್ಬೇಕು ಎನ್ನೋವಷ್ಟರಲ್ಲಿ “ಅವ್ನನ್ನ ಕಡೀಬೇಡಿ” ಅಂತ ಕಿರುಚ್ತಾಳೆ ಆತನ ತಾಯಿ. “ಹೀಗೆಲ್ಲಾ ಮಾಡೋದಾದ್ರೆ ನನಗೆ ಮಗ ಬೇಡ” ಅಂದ್ಬಿಡ್ತಾಳೆ. ಪಂಚಾಯತಕ್ಕೆ ಅರಿವಾಗ್ತದೆ. “ನಿನ್ ಮಗನ್ನ ನೀನೇ ಕರ್ಕೊಂಡ್ ಹೋಗು” ಅಂತ ‘ಗಬರ್‍ಘಿಚೋರ್’ ನ್ನ ತಾಯಿ ಗರ್ಬರಿ ಗೆ ಒಪ್ಪಿಸ್ತದೆ.

ನಾಟ್ಕ ಹಿಂದಿನಿಂದಲೂ ನಡ್ಕೊಂಡು ಬಂದಿರೋ ಪುರುಷ ಪ್ರಾಬಲ್ಯ ಸಮಾಜದ ವಿಮರ್ಶೆ ಮಾಡ್ತಾನೇ ಮಹಿಳೆಯ ಅಸ್ಮಿತೆಯ ಕುರಿತು, ತಾಯ್ತನದ ಕುರಿತು ಮಾತಾಡ್ತದೆ. ನಿಷ್ಕರುಣಿ ಗಂಡಸ್ರನ್ನ ‘ಥೂ’ ಅಂತ ಉಗೀತದೆ. ಭೋಜಪುರೀ ಲೋಕ ಕಥೇ ಮೇಲೆ ಆಧಾರಿತ ನಾಟ್ಕದಲ್ಲಿ ‘ಚಾಕ್ ಸರ್ಕಲ್’ ನ ಛಾಯೆಯೂ ಕಾಣ್ತದೆ.

ಇಡೀ ನಾಟ್ಕ್‍ದ ಡಿಸೈನ್, ನಾಟಕ ಬರೆದ ಕವಿ, ‘ಭೋಜಪುರಿಯ ಶೇಕ್ಸ್ ಪಿಯರ್’ ಭಿಖಾರಿ ಠಾಕೂರ್ ರು ರಚನೆ ಮಾಡಿದ ‘ ಬಿದೇಸಿಯಾಸ್’ ಅನ್ನೋ ಜಾನಪದ ರೂಪದ್ದು. ನಾಟ್ಕದ ತುಂಬಾ ಹಾಡು, ಹಾಡು, ಹಾಡು. ಕುಣಿತ. ಸ್ಟೇಜ್ ನ ಹಿಂಬದೀಲಿ ಕೂತ್ಕೊಂಡಿರೋ ಹಾಡುಗಾರ್ರು. ನಿರಂತರವಾಗಿ ಬರ್ತಿರೋ ಶೆಹನಾಯಿ ನಾದ, ಮಾತಿಗಿಂತಲೂ ಹೆಚ್ಚು ಹಾಡು ಹಾಡೋ ಪಾತ್ರಧಾರಿಗಳು. ಯಪ್ಪಾ! ಎಂಥ ಎನರ್ಜಿ ಈ ಹಾಡು, ನೃತ್ಯಗಳಲ್ಲಿ. ನಾವೂ ಎದ್ದು ಕುಣೀಬೇಕು ಅನ್ನೋ ಹಾಗೆ. ನಾನು ಇತ್ತೀಚಿನ ದಿನಗಳಲ್ಲಿ ನೋಡಿದ ಅಪರೂಪದ ‘ ಸಂಗೀತ ನಾಟ್ಕ’ ಇದು.

ಇದಾದ ಕೆಲವೇ ದಿನಗಳಲ್ಲಿ ಎರ್ನಾಕುಲಮ್ ಗೆ ಮೀಟಿಂಗ್ ಗೆ ಅಂತ ಹೋದಾಗ ಇನ್ನೊಂದು ‘ ಸಂಗೀತ ನಾಟ್ಕ’ ನೋಡೋ ಚಾನ್ಸ್ ಸಿಕ್ತು. ಅಲ್ಲೊಂದು ಮ್ಯೂಸಿಯಂ ಇದೆ. ಹಳೇ ಮ್ಯೂಸಿಯಮ್ ಅದು. ಒಂದು ಟ್ರಸ್ಟ್ ನಡೆಸೋ ಮ್ಯೂಸಿಯಮ್. ಪ್ರತಿ ವರ್ಷ ಅಲ್ಲಿ ‘ಮ್ಯೂಸಿಯಮ್ ಫೆಸ್ಟ್’ ನಡೀತದೆ. ನೃತ್ಯ, ನಾಟಗಳ ಮೂರು ದಿನದ ಫೆಸ್ಟ್ ಅದು. ದುಬಾರಿ ಟಿಕೆಟ್ಗಳು. ಅದರಲ್ಲೊಂದು ದಿನ ಈ ಅಪರೂಪದ ಪರ್ಫಾರ್ಮೆನ್ಸ್ ನೋಡಿದೆ.

‘Stories in a Song’ ಇದೊಂದು ಅದ್ಭುತವಾದ ಸಂಗೀತ ಪಯಣ. ಕ್ರಿ. ಪೂ ಆರನೆಯ ಶತಮಾನದ ಬೌದ್ಧ ನನ್ ಗಳ ಸಂಗೀತದಿಂದ ಹೊರಟು, ರಿಮಿಕ್ಸ್ ಕಾಲದ ವರೆಗಿನ ಸಂಗೀತದ ಪಯಣ. ಏಳು ಚಿಕ್ಕ ಚಿಕ್ಕ ಕಥೆಗಳನ್ನಿಟ್ಕೊಂಡು ಭಾರತೀಯ ಸಂಗೀತ ನಡೆದ ದಾರಿಯನ್ನ ಹುಡುಕೋ ಪ್ರಯತ್ನ. ನಿಧಾನಗತಿಯ ನನ್ ಸಂಗೀತದಿಂದ ಪ್ರಾರಂಭವಾಗುವ ಈ ನಾಟಕ ವಿವಿಧ ಕಥೆಗಳ ಮೂಲಕ ಸಂಗೀತದ ವೈವಿಧ್ಯಗಳನ್ನ ಅನ್ವೇಷಿಸುತ್ತ ಸಾಗ್ತದೆ. ‘ ಗಾಂಧೀ ಮತ್ತು ತವೈಫ್ ಸಭಾ’ ದಲ್ಲಿ ಗಾಂಧೀಜಿ ಕೋಠಿಯೊಂದರಲ್ಲಿ ಪಾಳೇಗಾರಿಕೆಯ ಕೂಗುಗಳ ವಿರುದ್ಧ ದನಿಯೆತ್ತುವಂತೆ ಬನಾರಸ್ ನ ತವೈಫ್ ಒಬ್ಬಳನ್ನ ಬೆಂಬಲಿಸುವ ಕಥೆಯಿದೆ. ಅಂಗ್ರೇಜೀ ಮಹಿಳೆಯೊಬ್ಬಳ ಸಂಗೀತ ಕಲಿಯುವ ಹುಚ್ಚಿನ ಕಥೆಯಿದೆ.

ನಾಟಕದ ಕೊನೆಯಂತೂ ನಿಜಕ್ಕೂ ಉತ್ತುಂಗವೇ. ಉತ್ತರ ಪ್ರದೇಶದ ಕಜರಿ ಆಖಾಡಾ ದ ಉಸ್ತಾದ್ ಗಳು ಇಂಗ್ಲೀಷಿನಲ್ಲಿ ಹಾಡೋ ‘ಇಂಗ್ಲೀಷ್ ಕಜರಿ’ ಹಲವಾರು ದಿನಗಳ ಕಾಲ ಆವರಿಸಿಬಿಡುವಂತಿದೆ.’ ರೇ ಸವರಿಯಾ’ ಹಾಡಂತೂ ನನ್ನನ್ನ ತಿಂಗಳುಗಟ್ಟಲೇ ಹಿಡ್ಕೊಂಡುಬಿಟ್ಟಿತ್ತು.

ಇದೆಲ್ಲದರ ಜೊತೆ ನಾಟಕದ ಒಳಹರಿವಿನಲ್ಲಿ ಭಾರತೀಯ ಮಹಿಳೆಯ ಹೋರಾಟ ಮತ್ತು ವಿಮೋಚನೆಯ ದನಿಯಿರೋದು ನಾಟಕದ ತೂಕವನ್ನ ಜಾಸ್ತಿ ಮಾಡಿದೆ. ಸಾಕಷ್ಟು ರಿಸರ್ಚ್ ಮಾಡಿ ಶುಭಾ ಮುದ್ಗಲ್ ಮತ್ತು ಅನೀಶ್ ಪ್ರಧಾನ್ ಸಂಗೀತ ಕಂಪೋಸ್ ಮಾಡಿದಾರೆ. ನಾಟ್ಕದ ನಿರ್ದೇಶಕರು ಸುನೀಲ್ ಶಾನಭಾಗ್.ನಾನು ಇದುವರೆಗೆ ನೋಡಿದ್ದರಲ್ಲಿ ತುಂಬ ವಿಭಿನ್ನವಾದ, ಸಂಗೀತವೇ ಕಥೆಯಾಗುವ ನಾಟ್ಕ ಇದು.

ಕನ್ನಡದಲ್ಲಂತೂ ಸಂಗೀತ ನಾಟ್ಕಗಳ ಭವ್ಯವಾದ ಪರಂಪರೆಯೇ ಇದೆ. ನಾಟ್ಕದ ಸಂಗೀತದ ಕುರಿತ ಹಲವಾರು ಕಥೆಗಳೇ ಇವೆ. ಹಳೆಯ ಕಂಪನೀ ನಾಟ್ಕಗಳನ್ನೇ ಮತ್ತೆ ಸೀನರಿ, ಹಾಡುಗಳೊಂದಿಗೆ ಯಥಾವತ್ತಾಗಿ ರಂಗಕ್ಕೆ ತರೋ ಕೆಲವು ಪ್ರಯತ್ನಗಳೂ ಇತ್ತೀಚೆಗೆ ಆಗಿವೆ. ಗರೂಡರ ‘ವಿಷಮ ವಿವಾಹ’ ವನ್ನ ಪ್ರಕಾಶ್ ಗರುಡ ಧಾರವಾಡದಲ್ಲಿ ಆಡ್ಸಿದಾರೆ. ಜನಮನದಾಟಕ್ಕೆ ಹೆಗ್ಗೋಡು ಗಣೇಶ್ ‘ಕುರುಕ್ಷೇತ್ರ’ ಮಾಡ್ಸಿದಾರೆ. ಮೈಸೂರಲ್ಲಿ ಗೆಳೆಯ ಮಂಡ್ಯ ರಮೇಶ್ ರ ‘ನಟನ’ ಕ್ಕೆ ಪರಮಶಿವಯ್ಯ ‘ಸುಭದ್ರಾ ಕಲ್ಯಾಣ’ ಆಡ್ಸಿದಾರೆ. ಮೈಸೂರು ರಂಗಾಯಣದಲ್ಲಿ ಪುಟ್ಟಣ್ಣಯ್ಯ‘ ಮನ್ಮಥ ವಿಜಯ’ ಆಡ್ಸಿದಾರೆ. ಸಮಕಾಲೀನ ರಂಗಭೂಮಿಯಲ್ಲಂತೂ ಸಂಗೀತವೇ ಮುನ್ನೆಲೆಯಾಗಿ ನಿಂತ ಹಲವಾರು ನಾಟ್ಕಗಳೇ ಇವೆ.

ಎಷ್ಟೇ ಗಂಭೀರವಾದ ನಾಟ್ಕ ನೋಡ್ಲಿ, ಏನೇ ನೋಡ್ಲಿ. ಸಂಗೀತ, ನೃತ್ಯ ಅಂದ್ಬಿಟ್ರೆ ಅದೇನೋ ‘ಪುಳಕ’. ಅಲ್ವಾ?

4 comments

  1. Nimma anubhvada vivarane navu Namma deshada bere pradeshagala nataka prakaragalannu aritevu.Dhanyavadagalu.

  2. ನಾಟಕ ಆಡುವದು ಸುಲಬ , ಅದನ್ನು ನೋಡಿ ಮನನ ಮಾಡಿಕೊಂಡು ಬರೆಯುವ ಕಲೆ ತುಂಬಾ ಶ್ಲಾಘನೀಯ .ಆ ಕೆಲಸವನ್ನು ನೀವು ಬರೆದು ಪ್ರಕಟಿಸುತ್ತಾ ಬಂದಿದ್ದೀರಿ .ಧನ್ಯವಾದಗಳು.

Leave a Reply