ಕಣ್ಣೀರ ಕಣಿವೆಯಲ್ಲಿ ‘ಪ್ರತಿಮಾ ರಾಜಕಾರಣ’..

ಕಣ್ಣೀರ ಕಣಿವೆಯಲ್ಲಿ ‘ಪ್ರತಿಮಾ ರಾಜಕಾರಣ’ Statue of destroyed

“Events like today are very important in a country’s history and such events are difficult to erase. It is a historic and inspiring occasion for all Indians. I am fortunate to dedicate this statue of Sardar Sahab to the nation”

-ಪ್ರಧಾನಿ ನರೇಂದ್ರ ಮೋದಿ ಅವರು ಅ. .೩೧ ರಂದು ಸರ್ದಾರ ಸರೋವರದ ಕಣಿವೆಯಲ್ಲಿ  ಸರ್ದಾರ ವಲ್ಲಭಬಾಯಿ ಪಟೇಲ್ ಅವರ ವಿರಾಟ ಮೂರ್ತಿಯನ್ನು ಜಗತ್ತಿಗರ್ಪಿಸಿ ಹೀಗೆ ಮಾತನಾಡುತ್ತಿದ್ದರು.

ನಿಜ, ಎಂದಿಗೂ ಈ ಸಂಭ್ರಮದ ಘಟನೆ ಇತಿಹಾಸದಲ್ಲಿ ಅಳಿಸಲಾಗದಂತದ್ದು. ಸರ್ದಾರ್ ಸರೋವರದ ಕಣಿವೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ನಡೆದ  ಆದಿವಾಸಿ ಜನರ ಬದುಕಿನ  ಸಾಮಾಜಿಕ ಮತ್ತು ಪರಿಸರ ನ್ಯಾಯದ  ಹೋರಾಟದ ಸಮಾಧಿಯ ಮೇಲೆ  ಇಂತಹ ಅಳಿಸಲಾಗದ  ಘಟನೆಗಳು ಸಲೀಸಾಗಿ ನಿರ‍್ಮಿಸಲ್ಪಡುತ್ತವೆ. ಇದು ಭಾರತದಲ್ಲಿ ಮಾತ್ರವೇ ಸಾಧ್ಯವಾಗುವಂತಹುದು. ಸ್ವತಂತ್ರ ಭಾರತದ  ‘ಸಬ್ ಕಾ ವಿಕಾಸ್’ಗಾಗಿ ಹಗಲಿರುಳು ದುಡಿಯುತ್ತಿರುವ ಪ್ರಧಾನ ಸೇವಕನ  ಶಿರದ ಮೇಲಿನ ಬೆಳ್‌ಗೊಡೆಗೆ ಹೆಗ್ಗಳಿಕೆಯ ಮತ್ತೊಂದು ಬೆಳ್ಳಿಯ ಗೆರೆ ಸೇರ್ಪಡೆಗೊಂಡಿದೆ.

ಸರ್ದಾರ್ ವಲ್ಲಭಬಾಯಿ ಪಟೇಲ್‌ರಿಗೆ ಈ ದೇಶ ಎಂದಿಗೂ ಘನತೆಯ ಗೌರವವೊಂದನ್ನು ಸಲ್ಲಿಸಲೇಬೇಕು.  ರಾಜಮನೆತನಗಳ ಹಿಡಿತದಲ್ಲಿದ್ದ  ಸ್ವಾತಂತ್ರ್ಯಭಾರತವನ್ನು ಪುನರ್ ಕಟ್ಟುವಲ್ಲಿ  ಅವತ್ತಿನ ನೆಹರು ಸರ್ಕಾರದಲ್ಲಿ ಗೃಹಸಚಿವರಾಗಿದ್ದ  ಸರ್ದಾರಪಟೇಲರ ದಿಟ್ಟ ನಿರ್ಧಾರ ಕೈಗೊಂಡ, ಅದೇ ಕಾಲಕ್ಕೆ ದೇಶವನ್ನು ಧರ್ಮ ದ್ವೇಷ, ಹಿಂಸೆಯ ಆಧಾರದ ಮೇಲೆ ಒಡೆಯಲು ನಿಂತ ಆರ್.ಎಸ್ ಎಸ್ ನ್ನು ನಿಷೇಧಿಸಬೇಕೆಂದು ಗಟ್ಟಿದನಿಯಲ್ಲಿ ಹೇಳಿದ ಅಪ್ಪಟ ದೇಶಪ್ರೇಮಿ ಪಟೇಲರು.

ಪಟೇಲರನ್ನು ಪಕ್ಷರಾಜಕಾರಣದ ಜಂತಿಗೆ ತೂಗು ಹಾಕಿ ನೋಡಬೇಕಾಗಿಲ್ಲ. ನಾಗಪುರದ ಅಣತಿಯಲ್ಲಿರುವ ರಾಜಕೀಯ ಪಕ್ಷದ  ಗೌರವಕ್ಕೆ, ಕೊಂಡಾಟಕ್ಕೆ ಸಿಕ್ಕಿದ ಕಾಂಗ್ರೆಸ್ ನ ನಾಯಕರಲ್ಲಿ ಪಟೇಲರೇ ಮೊದಲಿರಬೇಕು. ಗಾಂಧಿಯ ಹತ್ಯೆಯನ್ನು ಸಿಹಿ ಹಂಚಿ ಸಂಭ್ರಮಿಸಿದ (ಇದೇ ಗಾಂಧಿಯನ್ನು ಇಂದಿನ ಸ್ವಚ್ಛ ಭಾರತದ ಐಕಾನ್ ಆಗಿ ಬಳಸಲ್ಪಡುತ್ತಿರುವುದು ರಾಜಕೀಯ ಉದ್ದೇಶವೇ)  ಆರ್.ಎಸ್‌ಎಸ್ ನ್ನು ನಿಷೇಧಿಸಬೇಕೆಂದು ಹೇಳಿದ ಸರ್ದಾರ ಪಟೇಲರ ಮುಗಿಲೆತ್ತರದ ಪ್ರತಿಮೆಯ ನಿರ‍್ಮಾಣಕ್ಕೆ ಕಂಕಣ ಕಟ್ಟಿ, ಕಾರ‍್ಯಸಾಧು ಮಾಡಿದ್ದರ ಹಿಂದೆ ರಾಜನೀತಿಯಲ್ಲದೇ ಬೇರೆನು ಇರಲು ಸಾಧ್ಯ?

ಈ ದೇಶದಲ್ಲಿ ದ್ವೇಷ- ಹಿಂಸೆಯನ್ನು ಹರಡುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ನಿಷೇಧಿಸಿ ಆದೇಶ ಹೊರಡಿಸಿದ , ಆರ್.ಎಸ್ ಎಸ್ ಒಂದು  ದೇಶದ ರಾಜಕೀಯದಲ್ಲಿ ತಲೆ ಹಾಕದಂತೆ ಕೇವಲ ಒಂದು ಸಾಂಸ್ಕೃತಿಕ ಸಂಘಟನೆಯಾಗಿ ಇರಬೇಕೆಂಬ ಷರತ್ತನ್ನು ವಿಧಿಸಿದ ಪಟೇಲರ ದಿಟ್ಟತನವನ್ನು ಮುಚ್ಚಿಟ್ಟ ಸಂಘ ಪರಿವಾರದ ಎದೆಗಾರರು ಇಂದು ಅವರದ್ದೇ ಮುಗಿಲೆತ್ತರದ ಮೂರ್ತಿ ನಿಲ್ಲಿಸಿ ಸಂಭ್ರಮಿಸುತ್ತಿದ್ದಾರೆ  ಚರಿತ್ರೆಯ ತಿರುಗು-ಮುರುಗು ಮಾಡುತ್ತಾ.

೨೦೧೩ ರಲ್ಲಿ ಪಟೇಲ್ ಸಮುದಾಯದ ಓಟಿನ ಇಡಿಗಂಟಿಗಾಗಿ ಮೋದಿಗೆ ಪಟೇಲರ ಪ್ರಭಾವಳಿ ಅನಿವಾರ‍್ಯವಾಗಿತ್ತು. (ಪ್ರತಿಮೆ ನಿರ‍್ಮಾಣ ಯೋಜನೆ ರೂಪಿತವಾದದ್ದು ೨೦೧೦) ಅಧಿಕಾರದ ಮೋಹಕ್ಕಿಳಿದವರಿಗೆ ಅದ್ಯತೆ, ಆಯ್ಕೆಗಳು ಕಾಲ ಕಾಲಕ್ಕೆ  ಬದಲಾಗುತ್ತಲೆ ಬಂದಿವೆ. ಒಮ್ಮೆ ರಾಮ. ಇನ್ನೊಮ್ಮೆ ಸರ್ದಾರ್ ಪಟೇಲರು, ಮತ್ತೊಮ್ಮೆ ಮಂದಿರ. ಮಗದೊಮ್ಮೆ ಗಾಂಧಿ, ಕೊನೆಗೆ ಅಂಬೇಡ್ಕರ್.  ಸಬ್ ವಿಕಾಸ್..  ಎಂಬ ತುಟಿ ಮೇಲಿನ ನಕಲಿತನಗಳು ಈಗ ಬಯಲಾಗುತ್ತಿವೆ. ಈಗ ಮತ್ತೆ ರಾಮ ನಾಮ ಜಪ ಹೊಂಕರಿಸುತ್ತಿದೆ. ರಾಮನ ಮೂರ್ತಿಗಾಗಿ ಕಂಚು, ಕಬ್ಬಿಣ, ಇಟ್ಟಿಗೆ, ಸಿಮೆಂಟ್ ಅಷ್ಟೆ ಅಲ್ಲ ಮತ ಎತ್ತುವಳಿಗೆ ನಕಲಿ ದೇಶಭಕ್ತರ ದಂಡು ಹೊರಡಲಿದೆ.

ಪಟೇಲರ ಪ್ರತಿಮೆಯೂ ಈಗ ಅದರ ಭಾಗವಾಗಲಿದೆ. ಪ್ರತಿಮೆ ಇಂದು ದೇಶದ ಹೆಗ್ಗಳಿಕೆ ಮತ್ತು ಅದು ಪಟೇಲರಿಗೆ ನೀಡುವ ಅತ್ಯುನ್ನತ ಗೌರವ ಎಂದು ಭಾವಿಸುವವ ಬತ್ತಳಿಕೆಯಲ್ಲಿ ರಾಜಕಾರಣದ ಅಸ್ತ್ರವಾಗಿ ಸೇರಿಕೊಂಡಿದೆ. ಪಟೇಲರ ಮೂರ್ತಿಯ ನಿರ‍್ಮಾಣದಿಂದಾಗಿ ನಮ್ಮ ಮುಂದಿನ ಪೀಳಿಗೆಗೆ ಇತಿಹಾಸವನ್ನು ತಿಳಿಸುವ ಐತಿಹಾಸಿಕ ಸಂಕೇತವೆನ್ನುತ್ತಾ ರಾಷ್ಟ್ರ ನಾಯಕರ  ಸ್ಮರಣೆ ಅಪರಾಧವಲ್ಲ ಎಂದು ಹೇಳುವ ಪ್ರಧಾನಿ ಮೋದಿ ಅವರು ಆರ್.ಎಸ್ ಎಸ್ ನ್ನು ಬ್ಯಾನ್ ಮಾಡಿದ ಪಟೇಲರ ಸರ್ವ ಧರ್ಮ, ಸಂಯುಕ್ತ ಭಾರತ ಕಟ್ಟುವ ಇತಿಹಾಸವನ್ನು ಮರೆಮಾಚುವುದಾದರೂ ಏಕೆ?

ಸಾಮಾಜಿಕವಾಗಿ ನೋಡುವುದಾದರೆ ನರ್ಮದಾ ನದಿ ಕಣಿವೆಯಲ್ಲಿ ಜಗತ್ತಿನ ಅತ್ಯಂತ ಎತ್ತರದ  ಪಟೇಲರ ಪ್ರತಿಮೆ ನಿರ‍್ಮಾಣ. ಅದೊಂದು ಐತಿಹಾಸಿಕ ಸಾಧನೆ ಎಂದು ಬೆನ್ನು ತಟ್ಟಿಕೊಳ್ಳುತ್ತಿರುವವರ ಕಣ್ಣು, ಕಿವಿ, ಹೃದಯಗಳು ನರ್ಮದಾ ಕಣಿವೆಯ ಆದಿವಾಸಿಗಳ ಕಣ್ಣೀರಿಗೆ, ಆಕ್ರಂದನಕ್ಕೆ ಸಂವೇದಿಸಲಾರದಷ್ಟು ತುಕ್ಕುಹಿಡಿದು ಹೋಗಿವೆ.

ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರದ ರಾಜ್ಯಗಳ ಒಳಗೊಂಡ ನರ್ಮದಾ ಡ್ಯಾಮ್ ಯೋಜನೆಯಿಂದ ಈ ಮೂರು ರಾಜ್ಯಗಳ ಶೇ. ೫೬ ರಷ್ಟು ಜನಸಮುದಾಯ ತಮ್ಮ ಬದುಕಿನ ಉಳಿವಿಗಾಗಿ, ಬದುಕುವ ಹಕ್ಕಿಗಾಗಿ ಅಂಗಲಾಚಿದ ಕಳೆದ ೩೦ ಕ್ಕೂ ಹೆಚ್ಚು ವರ್ಷಗಳ ಹೋರಾಟದ ಹಾದಿಯನ್ನು ನೋಡಿದರೆ ಕಣ್ಣಲ್ಲಿ ರಕ್ತ ಸುರಿಯಬಹುದು.

ಪರಂಪರಾಗತವಾಗಿ ಕಾಡು, ನದಿ, ಕಣಿವೆಗಳಲ್ಲಿ ಸ್ವಚ್ಛಂದವಾಗಿದ್ದ  ಆದಿವಾಸಿಗಳು ಪ್ರಭುತ್ವದ ದಾಳಿಗೆ ಸಿಕ್ಕಿ ನಲುಗಿಹೋಗಿವೆ.  ನರ್ಮದಾ ಕಣಿವೆಯ ೪೧ ಸಾವಿರ ಕುಟುಂಬಗಳ ೨ ಲಕ್ಷ ಜನರ ಬದುಕು ಬೀದಿಗೆ ಬಿದ್ದಿದೆ. ಪುನರ್‌ವಸತಿಯ ನೆಪದಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ನರಕಗಳನ್ನು ಸೃಷ್ಟಿಸಲಾಯಿತು. ಮಾನವ ಹಕ್ಕುಗಳೆ ಇಲ್ಲದ  ಗುಜರಾತ್‌ನಲ್ಲಿ ಮಾನವ ಹಕ್ಕುಗಳ ರಕ್ಷಣೆಯ ಕೂಗಿಗೆ ಬೆಲೆ ಎಲ್ಲಿಂದ ಬಂದೀತು.?

‘ನರ್ಮದಾ ಬಚಾವ್ ಆಂದೋಲನ’ವನ್ನು ಕೊನೆಗೂ ಸಂವಿಧಾನಿಕ ಸಂಸ್ಥೆಗಳ ಮೂಲಕವೇ ಹತ್ತಿಕ್ಕಿ ಬಡವರ, ಆದಿವಾಸಿಗಳ ಬದುಕು ಅಷ್ಟು ಬಲವಲ್ಲ ಎಂಬುದನ್ನು ಸಾಬೀತುಗೊಂಡಿದೆ. ಪ್ರತಿಮೆಯ ನಿರ‍್ಮಾಣಕ್ಕಾಗಿ ಅಸಂಖ್ಯಾತ ಹಾಡಿಗಳು, ಹಳ್ಳಿಗಳು, ನದಿ, ಝರಿ, ಕಾಡು ಪ್ರಾಕೃತಿಕ ಸಂಪನ್ಮೂಲ ನಾಶದ ಅಂಚಿಗೆ ದೂಡಲ್ಪಟ್ಟಿವೆ. ಪ್ರತಿಮೆ ನಿರ‍್ಮಾಣವನ್ನು ವಿರೋಧಿಸಿ ೨೨ ಹಳ್ಳಿಗಳು ಪ್ರಧಾನಿಗೆ ಬರೆದ ಪತ್ರ, ೭೨ ಸಾವಿರ ಜನರು ಅನ್ನ-ನೀರು  ತ್ಯೇಜಿಸಿ ನಡೆಸಿದ ಪ್ರತಿಭಟನೆಗೆ ಜನಸೇವಕ ಕ್ಯಾರೆ ಎನ್ನಲಿಲ್ಲ.

ಸರ್ದಾರ ವಲ್ಲಭಭಾಯಿ ಪಟೇಲ್‌ರ ಪ್ರತಿಮೆಗಾಗಿ ೩೦೦೦ ಕೋಟಿ ರೂ.ಗಳಿಗೆ ಹೆಚ್ಚು ಹಣವನ್ನು ಚೆಲ್ಲಲಾಗಿದೆ. ನರ್ಮದಾ ನದಿ ಯೋಜನೆಯಿಂದ ಬೀದಿಪಾಲಾದ ಸಂತ್ರಸ್ಥರಿಗೆ ಸರಿಯಾದ ಪರಿಹಾರವಾಗಲಿ, ಪುನರ್ ವಸತಿಯ ಸಮಸ್ಯೆಯೇ ಇನ್ನೂ ಬಗೆಹರಿದಿಲ್ಲ. ಇದೇ ಹಣವನ್ನು ಜನರ ಸಾಮಾಜಿಕ ಬದುಕನ್ನು ಕಟ್ಟುವಲ್ಲಿ ಬಳಸಿದ್ದರೆ ಗುಜರಾತಿನ ಜನಜೀವನದ ಗುಣಮಟ್ಟವನ್ನು ಸುಧಾರಿಸಬಹುದಿತ್ತು.

ರಾಜಕೀಯ ಲೆಕ್ಕಾಚಾರಗಳು ಮನುಷ್ಯರ ಸಾಮಾನ್ಯ ಜೀವನಕ್ಕಿಂತ ಅವರ ಭಾವನಾತ್ಮಕ ಸೆಳೆತಗಳನ್ನು ಸೃಷ್ಟಿಸುವಲ್ಲಿ ಹೆಚ್ಚು ಕ್ರಿಯಾಶೀಲಮತ್ತು ಪರಿಣಾಮಕಾರಿಯಾಗಿರುತ್ತವೆ. ಪಟೇಲರ ಪ್ರತಿಮೆಯಿಂದಾಗಿ ಗುಜರಾತಿನ ಪ್ರವಾಸೋದ್ಯಮ ಅಭಿವೃದಿಗೊಳ್ಳುತ್ತದೆ. ಸ್ಥಳೀಯರಿಗೆ ಉದ್ಯೋಗ ದಕ್ಕುತ್ತದೆ  ಎನ್ನುವುದು ಯಾವ ದಿಕ್ಕಿನಿಂದ ನೋಡಿದರೂ ಕಲ್ಪಿತ ದೃಶ್ಯ. ಇದೇ ೩೦೦೦ ಕೋ.ರೂ.ಗಳಿಂದ ನಿರುದ್ಯೋಗಿಗಳಿಗೆ ವೃತ್ತಿಕೌಶಲ್ಯ ತರಬೇತಿ ಕೇಂದ್ರ. ಅಥವಾ ಆದಿವಾಸಿಗಳ ಗುಡಿ ಕೈಗಾರಿಕೆ ಅಥವಾ ಒಂದು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದ್ದೇ ಅಗಿದ್ದರೆ ಗುಜರಾತಿನ ಆರ್ಥಿಕ ಮತ್ತು ಭೌದ್ಧಿಕ ಸಂಪನ್ಮೂಲಕ್ಕೆ ಭದ್ರ ಬುನಾದಿ ಆಗುತ್ತಿತ್ತು. ಜನರ ತೆರಿಗೆ ಹಣವನ್ನು ಇಷ್ಟರ ಮಟ್ಟಿಗೆ ಪೋಲು ಮಾಡುವುದರ ಹಿಂದೆ ಅಡಗಿರುವುದು ಒಂದು  ವಂಚನೆಯ ರಾಜಕಾರಣ ಮಾತ್ರ.

ಈ ದೇಶದಲ್ಲಿ ಪ್ರಭುತ್ವಗಳು ನಿರ‍್ಮಿಸಿರುವ ಪ್ರತಿಮೆಗಳ ಹಿಂದ ರಾಜಕೀಯ ಉದ್ದೇಶವಿದ್ದೇ ಇರುತ್ತದೆ. ಅದು ಮಾಯಾವತಿ ಅವರು ಉತ್ತರ ಪ್ರದೇಶದಲ್ಲಿ ನಿರ‍್ಮಿಸಿದ ೧೩೦ ಆನೆಗಳ, ಕಾನ್ಸಿರಾಂ , ಬಾಬಾ ಸಾಹೇಬ್ ಅಂಬೇಡ್ಕರ್  ಪ್ರತಿಮೆಗಳು ಹೊರತಾಗಿಲ್ಲ. ಮಾಯಾವತಿ ಅವರು ನಿರ‍್ಮಿಸಿದ ಕಾನ್ಸಿರಾಂ – ಆನೆ ಪ್ರತಿಮೆಗಳನ್ನು ವಿರೋಧಿಸಿದ ಬಿಜೆಪಿಗರೆ ಇಂದು ಪಟೇಲರ ಪ್ರತಿಮೆಯನ್ನು  ನಿರ‍್ಮಿಸಿ ಐದು ವರ್ಷದಲ್ಲಿ ಇದೊಂದು ಸಾಧನೆ ಎಂಬುದನ್ನು ಜನರಿಗೆ ತೋರಿಸಲು ಹೊರಟಿದ್ದಾರೆ.

ನೋಡಿ ಇಲ್ಲಿ ಕಾಂಗ್ರೆಸ್ಸಿಗರು ಮರೆತ ಪಟೇಲರನ್ನು ನಾನು ಬಹು ಎತ್ತರದಲ್ಲಿರಿಸಿ ನೆನಪಿಸುತ್ತಿದ್ದೇನೆ ದೇಶದ ಹೆಮ್ಮೆಯಂಬಂತೆ ಎಂದು ತೋರಿಸುವ ಮೂಲಕ ರಾಜಕೀಯ ಲಾಭದ ಬೆಳೆ ತೆಗೆಯಲು ಮೋದಿ ಹೊರಟಿದ್ದಾರೆ. ಒಂದಲ್ಲ ಒಂದು ರೀತಿ ಪಟೇಲರೊಂದಿಗೆ ತಮ್ಮನ್ನು ಸಮೀಕರಿಸಿಕೊಳ್ಳುವ  ಆತ್ಮರತಿ ಮೋದಿಯದ್ದಾಗಿದೆ. ಇದು ಪಟೇಲರಿಗೆ ಸಲ್ಲಿಸುವ ನಿಜವಾದ ಗೌರವವಲ್ಲ. ಇದೊಂದು ಜನರ ವಂಚಿಸುವ ಪ್ರತಿಮಾ ರಾಜಕಾರಣ ಮಾತ್ರ ಆಗಿರುತ್ತದೆ.   ನಮ್ಮ ರಾಜಕೀಯ, ಸಾಂಸ್ಕೃತಿಕ , ಸಾಮಾಜಿಕ ನಾಯಕರುಗಳನ್ನು ಗೌರವಿಸುವ  ನಿಟ್ಟಿನಲ್ಲಿ ಕಟ್ಟಹೊರಟಿರುವ , ಕಾಯ ಹೊರಟಿರುವ ಪ್ರತಿಮಾ ಸಂಸ್ಕೃತಿಯಿಂದ ನಾವೀಗ  ಮಗ್ಗಲು ಹೊರಳಬೇಕಾಗಿರುವುದು ಈ  ನಾಯಕರುಗಳ ಆದರ್ಶ, ಮಾರ್ಗದರ್ಶನಗಳು . ಸಿದ್ದಾಂತಗಳನ್ನು  ಅಳವಡಿಸಿಕೊಳ್ಳವು ಸ್ಪೂರ್ತಿ ಸಂಸ್ಕೃತಿಯಡೆಗೆ.

ಪ್ರತಿಮಾ ಸಂಸ್ಕೃತಿಯನ್ನು ವಿರೋಧಿಸುತ್ತಾ ಬಂದವರನ್ನೆ ನಾವಿಂದು ಪ್ರತಿಮೆಗಳನ್ನಾಗಿ ಮಾಡುವ ಮೂಲಕ ಅವರನ್ನು  ಪಾತಾಳಕ್ಕೆ ತಳ್ಳುತ್ತಿದ್ದೇವೆ. ಅಂಬೇಡ್ಕರ್, ಗಾಂಧಿ, ಬಸವಣ್ಣ, ಬುದ್ದ ಎಲ್ಲರೂ ಈಗ ರಾಜನೀತಿಯ, ವ್ಯಾಪಾರೀಕರಣದ ಸರಕುಗಳಾಗಿದ್ದಾರೆ. ಪ್ರತಿಮೆಗಳು ಇಂದು ದೇಶದ ಒಗ್ಗಟ್ಟಿನ (ಯೂನಿಟಿ) ಸಂಕೇತಗಳಾಗದೆ ವಿಘಟನೆಯ, ರಾಜಕೀಯ ಲಾಭದ, ಸಾಮಾಜಿಕ ಮತ್ತು ಪರಿಸರ ಬದುಕಿನ ನಾಶದ ಅಸ್ತ್ರಗಳಾಗಿ ಬಳಕೆಯಾಗುತ್ತಿವೆ.

“If Sardar Patel could see the mass destruction of natural resources and injustice done to us, he would cry. When we are raising our issues, we are persecuted by police. Why you are not ready to listen to our plight?

For too long, they have sullied Sardar Vallabhbhai Patel’s name for politics. This land belongs to us, but they (BJP), for the sake of their vote bank, didn’t even care to ask for our permission to build the statue.” .

ಆದಿವಾಸಿಗಳ ಈ ಕಾಡಕಣ್ಣೀರ ಭಿನ್ನವತ್ತಳೆ ಸಂಯುಕ್ತ ಭಾರತ ಕಟ್ಟಿದ ಪಟೇಲರ ಭವ್ಯಮೂರ್ತಿಯ ಅನಾವರಣದ ರಾಜಕೀಯ  ಅತಿರೇಕದಲ್ಲಿ ಮುಳುಗಿಹೋಗಿದ್ದ  ಸಬ್ ಕಾಸಾಥ್.. ಸಬ್ ಕಾ ವಿಕಾಸ ಮೂರ್ತಿಯ ಹೃದಯ ತಟ್ಟಲೇ ಇಲ್ಲ.  ಕಣ್ಣೀರಲ್ಲಿ ಧುಮ್ಮುಕ್ಕಿ ಬತ್ತಿಹೋದ  ನರ್ಮದಾ ಕಣಿವೆಯಲ್ಲೀಗ ಅಖಂಡ ಭಾರತದ ” Statue of destroyed’  ಎದ್ದು ನಿಂತಿದೆ.

2 comments

 1. Arthavattada baraha sir. Illivarege ondu drushti yalli maatra pratime avashyakathe illa endu yochisidde. Aa bageya yochanegalige nivu halahu daariyanne thorisi kottiddiri.

  Dhanyavadagalu sir

 2. ಮಾಂತ್ರಿಕನ ಮಾತಿಗೆ
  ಮೋಡಿಗೆ ಮರುಳಾಗಿ
  ಎಲ್ಲರೂ ಉಘೇ ಉಘೇ ಎನ್ನುವಾಗ..
  ಮಣ್ಣಿನ ಮಗನ ರೋದನೆ
  ಕೇಳುವುದಾದರೂ ಹೇಗೆ?
  ಆತ್ಮರತಿಯಿಂದ ಬಳಲುತ್ತ
  ಗೋಮುಖ ತೊಟ್ಟ ವ್ಯಾಘ್ರ ಸರ್ವಾಧಿಕಾರಿ
  ತುಳಿದದ್ದೇ ದಾರಿ..ನಡೆದದ್ದೇ ಹಾದಿ ಎಂದಿರುವಾಗ
  ಬಚಾವಾಗಲು ಗಾಂಧೀ,ಅಂಬೇಡ್ಕರ್, ನೆಹರೂ
  ಮತ್ತು
  ಸರ್ದಾರ್ ಪಟೇಲ್ ಹುಟ್ಟಿ ಬರಬೇಕಷ್ಟೇ?

Leave a Reply