ಬೆಂಗಳೂರಿನ ಟೌನ್‍ಹಾಲ್ ಎದುರು ದೇವನೂರು ಮತ್ತು ಪ. ಮಲ್ಲೇಶ್ ನೆನಪಾದರು..

ಈಗ ಸ್ಪೆಷಲ್ ನ್ಯೂಸ್ ಎಂದರೆ ಯಾವುದು ಗೊತ್ತಾ? ಈಶಾನ್ಯ ಎಂದರು.

ನಾನು ಅವರನ್ನೇ ಮಿಕಿಮಿಕಿ ನೋಡಿದೆ. ನಾನು ಹೇಳುವ ಯಾವ ಸುದ್ದಿಗಳೂ ಅವರಿಗೆ ಸ್ಪೆಷಲ್ ಎನಿಸುವುದಿಲ್ಲ ಎನ್ನುವುದು ನನಗೆ ಗೊತ್ತಿತ್ತು. ಕಳೆದ ವಾರವಷ್ಟೇ 2020ರ ವೇಳೆಗೆ ಸಮುದ್ರದ ಉಬ್ಬರದಿಂದ ಸಂಪೂರ್ಣವಾಗಿ ನೀರಿನಿಂದ ಜಲಸಮಾಧಿಯಾಗಲಿರುವ, ಇಂಡೋನೇಷಿಯಾದ ಒಂದು ಪಟ್ಟಣದ ಬಗ್ಗೆ ಹೇಳಿದೆ. ಈ ಬಗ್ಗೆ ಒಂದು ಸ್ಟೋರಿ ಮಾಡಬಹುದು ಎಂದೆ.

ಇಲ್ಲ, ಎಂದು ವ್ಯಂಗ್ಯವಾಗಿ ನಕ್ಕರು.

ಮೈತ್ರಿಪಾಲ ಸಿರಿಸೇನಾರಿಂದ ಶ್ರೀಲಂಕಾದಲ್ಲಿ ಉಂಟಾಗಿರುವ ರಾಜಕೀಯ ಒಳಜಗಳ ಇರಬಹುದಾ? ಕೇಳಿದೆ

ಅವರು ಇದೊಂದು ನ್ಯೂಸ್ ಅಷ್ಟೇ. ಸ್ಪೆಷಲ್ ಅಲ್ಲ, ಎಂದರು.

ಸದ್ಯದ ಪಾಲಿಟಿಕ್ಸ್, ಮತ್ತೆ ಕೇಳಿದೆ.

ಇಲ್ಲ, ಎಂದರು. ನಾನು ಅವರನ್ನೇ ಉತ್ತರಕ್ಕಾಗಿ ಕಾಯುವಂತೆ ನಿಂತೆ.

ಅವರು ಸಣ್ಣನಗು ಹೊರಗೆ ಜಾರಿಸಿ, ದುನಿಯಾ ವಿಜಯ್ ಮಗಳು, ಪೊಲೀಸ್ ಕಂಪ್ಲೈಂಟ್ ಕೊಟ್ಟಿದ್ದಾಳೆ. ಅದು ಸದ್ಯದ ಸ್ಪೆಷಲ್. ಜನರು ನೋಡುವುದು ಅದನ್ನೇ ಎಂದರು.

ಅವರ ಉತ್ತರ ಕೇಳಿ, ಅವರಷ್ಟೇ ವ್ಯಂಗ್ಯವಾಗಿ ನನಗೂ ನಗಬೇಕು ಎನಿಸಿತು. ಪತ್ರಿಕೋದ್ಯಮದ ವಿಚಾರಗಳು ಓತಪ್ರೋತವಾಗಿ ಹರಿಯುತ್ತಿರುವ ಧಿಕ್ಕನ್ನು ಊಹಿಸಲು ಹೆಣಗಾಡಿದೆ. ರಿಪೋರ್ಟ್ ಬರೆದು, ಸಂಜೆ ಆಫೀಸು ಮುಗಿಸಿ ಟೌನ್‍ಹಾಲ್ ಮೆಟ್ಟಿಲುಗಳ ಮೇಲೆ ಕೂತು ಒಬ್ಬನೇ ಯೋಚಿಸುತ್ತಿದ್ದಾಗ ದೇವನೂರು ಮಹಾದೇವ ಹಾಗೂ ಯು. ಆರ್ ಅನಂತಮೂರ್ತಿ ನೆನಪಾದರು. ಮೂರು ವರ್ಷಗಳ ಹಿಂದೆ ಮೈಸೂರಿನ ಪ್ರಗತಿಪರ ಹೋರಾಟಗಾರ ಪ. ಮಲ್ಲೇಶ್ ನನಗೂ ಹಾಗೂ ‘ನಿರಂತರ’ದ ಗೆಳೆಯ ಗುರುಪ್ರಸಾದ್ ಹೆಗಲಿಗೂ ಕೈಗಳನ್ನು ಆತ್ಮೀಯವಾಗಿ ಬಳಸಿ, ನಿಧಾನವಾಗಿ ಹೆಜ್ಜೆಯೂರುತ್ತ ಹೇಳಿದ ಮಾತುಗಳೂ ನೆನಪಾದವು.

“ನಮ್ಮ ಆಯ್ಕೆಗಳು ನಮ್ಮ ಬದುಕನ್ನು ರೂಪಿಸುತ್ತವೆ” ಎಂದು ಹಿರಿಯ ಲೇಖಕ ಯು.ಆರ್ ಅನಂತಮೂರ್ತಿ ಕಾರ್ಯಕ್ರವೊಂದರಲ್ಲಿ ಹೇಳಿದ ಮಾತು, ಕನ್ನಡ ಎಂ.ಎ ಓದುತ್ತಿದ್ದ ಹುಡುಗಿಗೆ ಬೇರೆ ಜಾತಿಯ ಹುಡುಗನನ್ನು ಮದುವೆಯಾಗುವುದಕ್ಕೆ ಪ್ರೇರಣೆಯಾಗಿತ್ತಂತೆ.

ಅದೇ ರೀತಿ ಮೈಸೂರಿನ ಕಾರ್ಯಕ್ರಮವೊಂದರಲ್ಲಿ ದೇವನೂರು ಮಹಾದೇವ, “ನಮ್ಮ ಇವತ್ತಿನ ಚಳುವಳಿಗಳು ಏಕೆ ಸೋಲುತ್ತಿವೆ ಎಂದು ಪ್ರಶ್ನಿಸಿಕೊಳ್ಳಬೇಕು” ಎಂದಿದ್ದರು. ಆ ನಂತರ ದೇವನೂರು ಕಾರ್ಯಕ್ರಮದಲ್ಲಿ ಏನು ಮಾತಾಡಿದರು ಎನ್ನುವುದನ್ನು ನಾನು ಮರೆತಿರಬಹುದು! ಆದರೆ, ಅವರ ಆವತ್ತಿನ ಅದೊಂದು ಪ್ರಶ್ನೆ ಇಂದಿಗೂ ನನ್ನೊಳಗೇ ಬೆಳೆಯುತ್ತಲೇ ಇದೆ. ಅದಕ್ಕೆ ಉತ್ತರಗಳು ಎಂದುಕೊಂಡ ಎಲ್ಲವೂ, ಕೆಲವೇ ದಿನಗಳಲ್ಲಿ ಸಮರ್ಥನೆಯಂತೆ ಕಂಡಿದೆ.

ಮಹಾರಾಷ್ಟ್ರದ ರೈತರು ಪಾದಯಾತ್ರೆ ನಡೆಸಿದ ವಿಚಾರದಿಂದ, ಇಂದು ಸೋಲಿನಂಚಿನಲ್ಲಿರುವ #ಮೀ ಟೂ ಹೋರಾಟದವರೆಗೂ “ಇವತ್ತಿನ ಚಳುವಳಿಗಳು ಏಕೆ ಸೋಲುತ್ತಿವೆ” ಎನ್ನುವ ದೇವನೂರರ ಆವತ್ತಿನ ಪ್ರಶ್ನೆಯನ್ನು ಎದುರಿಟ್ಟು ನೋಡಿಕೊಳ್ಳುತ್ತಿದ್ದೇನೆ. ಪತ್ರಿಕೋದ್ಯಮವೂ ಒಂದು ಹೋರಾಟದ ಪರ್ಯಾಯ ಹಾದಿ ಎಂದು ಮಾಧ್ಯಮ ಪ್ರವೇಶಿಸಿದ ನಾವು, ಇಂದು ಜನಗಳಿಗೆ ಕೊಡಲು ಸಾಧ್ಯವಾಗುತ್ತಿರುವ ಸುದ್ದಿಗಳು ಯಾವುದು? ಇಲ್ಲಿ ಯಾರ ಆಯ್ಕೆಗಳು ಯಾರ ಬದುಕನ್ನು ರೂಪಿಸುತ್ತಿವೆ? ಹೋರಾಟಗಳ ಭಾಗವಾಗಿ, ಜನರನ್ನು ತಲುಪುವ ಉದ್ದೇಶಕ್ಕಾಗಿ ರಸ್ತೆಗಳ ಗೋಡೆಗಳ ಮೇಲೆ ಸ್ಲೋಗನ್ ಬರೆಯುವುದಿಂದ, ಇಂದಿನ ಡಿಜಿಟಲ್ ಯುಗದ ಫೇಸ್‍ಬುಕ್ ಗೋಡೆಗಳ ಮೇಲೆ ಬರೆದುಕೊಳ್ಳುತ್ತಿರುವ #ಹ್ಯಾಶ್ ಟ್ಯಾಗ್‍ಗಳ ಸ್ಲೋಗನ್‍ವರೆಗಿನ ಚಳುವಳಿಗಳು ಸಾಗುತ್ತಿರುವ ಧಿಕ್ಕು ಯಾವುದು? ಅವು ಸೋಲುತ್ತಿರುವುದಕ್ಕೆ ಕಾರಣಗಳು ಯಾವುದು ಇರಬಹುದು.

ನನ್ನನ್ನು ಸದ್ಯ ಕಾಡುತ್ತಿರುವ ಪ್ರಶ್ನೆ ಇದಷ್ಟೇ. ಹಿರಿಯ ಹೋರಾಟಗಾರ ಪ.ಮಲ್ಲೇಶ್, ನಿರಂತರದ ಗೆಳೆಯ ಗುರುಪ್ರಸಾದ್ ಹಾಗೂ ನನ್ನ ಹೆಗಲ ಮೇಲೆ ಕೈಗಳನ್ನಿಟ್ಟು ಹೇಳದ ಆ ಮಾತುಗಳು ಈಗ ಇನ್ನಷ್ಟು ಜಟಿಲವಾಗಿ ಕಾಡುತ್ತಿವೆ.

***

ಮಾನಸ ಗಂಗೋತ್ರಿಯ ಗಾಂಧಿಭವನ ಮತ್ತು ನಿರಂತರ ನನ್ನ ಬದುಕಿನ ಆಲೋಚನ ಕ್ರಮಗಳನ್ನ ಬದಲಿಸಿದ ಕೇಂದ್ರಸ್ಥಾನ. ಪತ್ರಕರ್ತ ಪಿ.ಸಾಯಿನಾಥ್‍ರಿಂದ ಆರಂಭವಾಗಿ ಲಂಕೇಶರು ಮಹಾರಾಜ ಕಾಲೇಜಿನಲ್ಲಿ ಹಿಂದೆ ಎಂದೋ ಮಾಡಿದ್ದ ಯಾವುದೋ ಭಾಷಣದವರೆಗೂ ಒಮ್ಮೆ ಯೋಚಿಸುವಂತೆ, ತರ್ಕಿಸುವಂತೆ ಮಾಡಿದ್ದು ‘ನಿರಂತರ’. ನಾಟಕ, ಓದು, ಚರ್ಚೆ, ಕಿತ್ತಾಟಗಳು ಆಲೋಚನೆಗಳು ಒಳಗೇ ಸಾಂಧ್ರವಾಗುವಂತೆ ಮಾಡಿದ ದಿನಗಳ ಅವು. ಅಂತಹದೇ ದಿನಗಳಲ್ಲಿ ನಮ್ಮ ಎದುರು ನಿಂತಿದ್ದು ಹಿರಿಯ ರಂಗಕರ್ಮಿ ಪ್ರಸನ್ನ ಬಂದು ನಿಂತಿದ್ದರು. ಸುಸ್ಥಿರ ಬದುಕು ಎನ್ನುವ ಪರಿಕಲ್ಪನೆಗಳನ್ನು ಅವರದೇ ಮಾತುಗಳಲ್ಲಿ ವಿಸ್ತರಿಸಿ ಹೇಳಿದ್ದರು, ಅದರ ವಿಸ್ತರಣೆಯ ಭಾಗವಾಗಿ ಮತ್ತು ಅವರ ನಡೆಸಲು ತೀರ್ಮಾನಿಸಿದ್ದ ಬದನವಾಳು ಸತ್ಯಾಗ್ರಹ ಹಾಗೂ ಅದರ ರೂಪುರೇಷೆಗಳನ್ನು ಹೇಳಿದ್ದರು. ಸಾಹಿತ್ಯದಲ್ಲಷ್ಟೇ ಓದಿದ್ದ ಚಳುವಳಿಯ ಹೊರತಾಗಿ ನಾನು ಭಾಗವಹಿಸಿದ ಮೊದಲ ಚಳುವಳಿಯದು.

***

ಸಣ್ಣ ಹಿಮದ ರಾಶಿಯಂತಹ ಬಿಳಿಯಾದ ಗುಪ್ಪೆಗಡ್ಡವನ್ನು ತೋರಿಸಿ ಅವರೇ ಪ್ರಸನ್ನ, ಎಂದು ನಿರಂತರದ ಸೋಮಣ್ಣ ಕಲಾಮಂದಿರದ ಆವರಣದಲ್ಲಿ ಪರಿಚಯಿಸಿಕೊಟ್ಟರು. ಹೆಗ್ಗೋಡಿನಿಂದ ಒಂದಿಷ್ಟೇ ದೂರಕ್ಕೆ ಒಂದು ಪುಟ್ಟ ಕ್ರಾಂತಿಯನ್ನೇ ಮಾಡಿದ್ದ, ಹಳ್ಳಿಯ ಹುಡುಗರು, ಗಂಡಸರೆಲ್ಲಾ ಸಣ್ಣತನ, ಅಸಂಖ್ಯಾತ ಚಟ, ರಾಜಕೀಯ ಹೀಗೆ ಹರಿದುಹಂಚಿ ಹೋಗಿದ್ದಾರೆ ಎನ್ನುವ ಕಾರಣಕ್ಕೆ ನೇಕಾರಿಕೆಯ ‘ಚರಕ’ ಸಂಸ್ಥೆಯ ಕೀಲಿ ಕೈಯನ್ನ ಹೆಂಗಸರಿಗೆ ನೀಡಿದ್ದ, ಯಾರಾದರೂ ಭಾಷಣಕ್ಕೆ ಕರೆದರೆ, ನನಗೆ ಸಂಭಾವನೆ ಬದಲು ಒಂದು ಅಂಬಾಸೆಡರ್ ನಂತಹ ಕಾರು ಕೊಡಿ ಸಾಕು ಎಂದು ಕೇಳುತ್ತಾ, ಅದೇ ಕಾರಿನಲ್ಲಿ ಅವರದೇ ‘ಚರಕ’ ಸಂಸ್ಥೆಯಲ್ಲಿ ತಯಾರಾದ ಖಾದಿ ಪರ್ಸು, ಪೌಚು, ಕೌದಿಗಳನ್ನು ತುಂಬಿಸಿಕೊಳ್ಳುತ್ತಿದ್ದರು, ಒಳಗೆ ಅವರು ಭಾಷಣ ಮಾಡುತ್ತಿದ್ದಾಗ, ಚರಕದ ಒಂದಿಬ್ಬರು ಹುಡುಗರು ಹೊರಗೆ ನಿಂತು “ಚರಕ ಸಂಸ್ಥೆ”ಯಲ್ಲಿ ಆ ಎಲ್ಲವನ್ನು ಮಾರಾಟ ಮಾಡುವಂತೆ ಮಾಡಿದ್ದು ಇದೇ ಪ್ರಸನ್ನ ಎಂದು ತಿಳಿದಾಗ ಅಚ್ಚರಿಯಾಗಿತ್ತು.

“ಸುಸ್ಥಿರ ಬದುಕು” ಎನ್ನುವ ಆಲೋಚನೆಯೊಂದಿಗೆ ಗಾಂಧಿಭವನದಲ್ಲಿ ನಮ್ಮನೆಲ್ಲಾ ಸುತ್ತಲೂ ಕೂರಿಸಿಕೊಂಡು ವಿವರಿಸಿದ ಮಾತುಗಳು ಆಶ್ಚರ್ಯ ಎನಿಸಿದ್ದವು. ಸ್ಕೈಪ್‍ನಲ್ಲಿ ವಾರಕ್ಕೆ ಮೂರು ಡ್ಯಾನ್ಸ್ ಕ್ಲಾಸ್ ನಡೆಸಿಕೊಡುವ ಈ ಕಾಲದಲ್ಲೂ ಮತ್ತೆ ಹಳೆಯದಕ್ಕೆ ಮರಳುವುದು ಸಾಧ್ಯವಾ ಎನಿಸಿದ್ದವು. ಆರಂಭದಲ್ಲಿ, ಇದು ಅಷ್ಟು ಒಳ್ಳೆಯ ಬೆಳವಣಿಗೆಯಲ್ಲ ಎನಿಸಿದ್ದವು. ಅದಾದ ಮತ್ತೊಂದು ವಾರಕ್ಕೆ ಪ್ರಸನ್ನ, ಮತ್ತೊಂದು ಧರಣಿ ಕೂತಿದ್ದರು ಎನ್ನುವುದನ್ನು ಪತ್ರಿಕೆಯಲ್ಲಿ ಓದಿದೆ. ಮರುದಿನವೇ ಮಾನಸ ಗಂಗೋತ್ರಿಯ ಗಾಂಧಿ ಭವನದಲ್ಲಿ ನೀವು ಸತ್ಯಾಗ್ರಹಕ್ಕೆ ಬರಬೇಕು ಎಂದು ಹೇಳುವುದಕ್ಕೆ ಬಂದಿದ್ದರು. ಅವರನ್ನ ಎರಡನೇ ಭಾರಿ ನೋಡಿದಾಗ ಶಿಲುಬೆಗೆ ನೇತುಬಿದ್ದ ಯೇಸು ಕ್ರಿಸ್ತನಂತ ಕಂಡಿದ್ದರು. ಯಾರದ್ದೋ ಮೈ ಮೇಲಿನ ಗಾಯಕ್ಕೆ ಇವರು ಚೀರುತ್ತಿದ್ದಾರೆ ಎನಿಸಿತ್ತು. ಬದನವಾಳುವಿಗೆ ಹೋಗಲೆಬೇಕು ಎಂದು ನಿರ್ಧರಿಸಿಕೊಂಡಿದ್ದರೂ, ಗುರುಗಳಾದ ಪ್ರಸಾದ್ ಕುಂದೂರ್ ನಮ್ಮನ್ನು ಸತ್ಯಾಗ್ರಹದಲ್ಲಿ ನೇರವಾಗಿ ಐದು ದಿನಗಳ ಪಾದಯಾತ್ರೆಯಲ್ಲಿ ನಂಜನಗೂಡಿನ, ಬದನವಾಳುವನ್ನು ಸೇರುವಂತೆ ಮಾಡಿದ್ದರು.

ಅದೊಂದು ಹೋರಾಟ ಮತ್ತು ಪ್ರಸನ್ನರವರ ಆಲೋಚನೆಗಳು ಅವರೊಬ್ಬರಾಗಿರದೇ, ನಮ್ಮದ್ದೂ ಹೌದು ಎನಿಸಿದೆ. ಗೆಳೆಯ ಗುರುಪ್ರಸಾದ್, ಪ್ರಸನ್ನರ “ಯಂತ್ರಗಳನ್ನು ಕಳಚೋಣ ಬನ್ನಿ” ಪುಸ್ತಕವನ್ನು ಹಿಡಿದು, ಓದುತ್ತಾ, ತರ್ಕಿಸುತ್ತಾ, ಮತ್ತೊಬ್ಬರೊಂದಿಗೆ ಚರ್ಚಿಸುತ್ತಾ, ಅವರಿಗೂ ಅದನ್ನು ಓದುವಂತೆ ಕಿರುಚುತ್ತಾ ಓಡಾಡುತ್ತಿದ್ದ. ಅದೇ ದಿನಗಳಲ್ಲಿ ನಾನು ಆ ಪುಸ್ತಕವನ್ನ ಓದಿ ಬದನವಾಳು ಸತ್ಯಾಗ್ರಹದ ಹಿನ್ನಲೆಯನ್ನು ನನ್ನದೇ ರೀತಿಯಲ್ಲಿ ಗ್ರಹಿಸಿದ್ದೆ. ಮನುಷ್ಯ ತಯಾರಿಸುತ್ತಿರುವ ರೋಬೋಟ್‍ಗಳೇ ಬರುವ ದಿನಗಳಲ್ಲಿ, ಮನುಷ್ಯರನ್ನು ತ್ಯಾಜ್ಯ ಎನ್ನುವಂತೆ ನೋಡಬಹುದಾದ ಸಾಧ್ಯತೆಗಳಿರುವ ದಿನಗಳಲ್ಲಿ, ಪ್ರಸನ್ನ ಹೇಳುತ್ತಿರುವ ಸುಸ್ಥಿರ ಬದುಕು ಹಾಗೂ ಬದುಕನ್ನೇ ಆವರಿಸಿಕೊಂಡಿರುವ ಯಂತ್ರಗಳನ್ನು ಕಳಚಲು ಇರಬಹುದಾದ ಹಾದಿಯ ಬಗ್ಗೆ ಸಾಕಷ್ಟು ಒಳಗೇ ಬಡಿದಾಡಿಕೊಂಡಿದ್ದಾವೆ.

ಪ್ರಸನ್ನ ಬದನವಾಳು ಸತ್ಯಾಗ್ರಹ, ಚರಕ ಸಂಸ್ಕೃತಿ ಎಲ್ಲವನ್ನೂ ರೂಪಿಸಿದ್ದು ಮಹಾತ್ಮ ಗಾಂಧಿಯ ಆದರ್ಶದ ಅನುಗುಣವಾಗಿ. ನಾವೆಲ್ಲರೂ ಪ್ರಸನ್ನರ ಸುಸ್ಥಿರ ಬದುಕಿನ ಪರಿಕಲ್ಪನೆ ಹಾಗೂ ಯಂತ್ರಗಳನ್ನು ಕಳಚಲು ಇರಬಹುದಾದ ಹಾದಿಯ ಕುರಿತು ಯೋಚಿಸುತ್ತಿರುವಾಗ ಮೈಸೂರಿನ ಹಿರಿಯ ಹೋರಾಟಗಾರ ಪ. ಮಲ್ಲೇಶ್ ಗಾಂಧಿಯ ಕುರಿತು ಒಂದು ಪುಸ್ತಕ ಬರೆದಿದ್ದರು.

ಗಾಂಧಿವಾದಿಗಳು ಅಂತಲೇ ಮೈಸೂರಿನಲ್ಲಿ ಗುರುತಿಸಿಕೊಂಡಿರುವ ಪ. ಮಲ್ಲೇಶ್ ತಮ್ಮ, ಪುಸ್ತಕ ಬಿಡುಗಡೆಯ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನ  ಆಹ್ವಾನಿಸಿದ್ದರು. ಆದರೆ, ಸಿದ್ದರಾಮಯ್ಯನವರು ಕಾರ್ಯಕ್ರಮಕ್ಕೆ ತಡವಾಗಿ ಬಂದಿದ್ದರು. ಅದರ  ಮುನಿಸನ್ನು ಬಚ್ಚಿಟ್ಟುಕೊಂಡು ಆಗಾಗ ಹೊರಗೆ ಹಾಕುತ್ತಿದ್ದರು. ಆದರೆ ಪ. ಮಲ್ಲೇಶರನ್ನ ಮೊದಲಿನ ದಿನಗಳಿಂದಲೂ ಕಂಡಿದ್ದ ಸಿದ್ದರಾಮಯ್ಯನವರು ವೇದಿಕೆಯಲ್ಲೇ ಕ್ಷಮೆ ಕೇಳಿದ್ದರು. “ನಾನು ಲೇಟಾಗ್ ಬಂದೆ ಅನ್ಬುಟ್ಟು ಕೋಪ ಮಾಡ್ಕಂವರೇ, ಆಯ್ತು ಕ್ಷಮಿಸಿ” ಎಂದಿದ್ದರು.

ಆವತ್ತಿಗೆ ಪ. ಮಲ್ಲೇಶರ ಅದೊಂದು ನಡೆ ನಮ್ಮನ್ನು ಅಚ್ಚರಿಗೊಳಿಸಿತ್ತು. ಗಾಂಧಿಯ ಅನುಯಾಯಿಯಾದ, ಮಲ್ಲೇಶರು ಆ ಪುಸ್ತಕ ಬರೆದಿದ್ದು ನಮ್ಮನ್ನು ಮತ್ತೊಂದು ಆಯಾಮಕ್ಕೆ ಮುಖ ಮಾಡುವಂತೆ ಮಾಡಿತ್ತು. “ಚರಕ” ಇಟ್ಟು ನೂಲುತ್ತಿದ್ದ ಗಾಂಧಿಯ ಎದುರು, ಬದನವಾಳುವಿನಲ್ಲಿ ಸತ್ಯಾಗ್ರಹ ಮಾಡುತ್ತಿದ್ದ “ಚರಕ ಸಂಸ್ಥೆ”ಯೊಂದಿಗೆ ನೂಲುತ್ತಿದ್ದ ಪ್ರಸನ್ನರು, ಗಾಂಧಿತತ್ವದ ಚಳುವಳಿಯ ಮುಂದುವರಿಕೆಯ ಭಾಗವಾಗಿ ಕಂಡಿದ್ದರು.

ಸತ್ಯಾಗ್ರಹ ಒಂದು ತಾರ್ತಿಕ ಅಂತ್ಯ ಕಂಡಿದ್ದ ಮೇಲೆ, ನಾನು ಮತ್ತು ಗೆಳೆಯ ಗುರು, ಪ.ಮಲ್ಲೇಶರನ್ನ ಹುಡುಕಿ ಅಲೆಯುತ್ತಿದ್ದೆವು. ಅವರ ಮನೆಯ ಹತ್ತಿರ ಹೋಗಲು ನಡೆಸಿದ ಪ್ರಯತ್ನವೂ ವಿಫಲವಾಗಿತ್ತು. ಆದರೆ ನಾವಿಬ್ಬರು ಪ. ಮಲ್ಲೇಶರನ್ನ ಈ ಕುರಿತು ಏನಾದರು ಮಾತನಾಡಿಸಲು ಪ್ರಯತ್ನವನ್ನ ಅವಿರತವಾಗಿ ನಡೆಸುತ್ತಲೇ ಇದ್ದೆವು. ಹೀಗಿರುವಾಗಲೇ ಪ.ಮಲ್ಲೇಶ್ ಮೈಸೂರಿನ ರಂಗಾಯಣದ ಆವರಣದಲ್ಲಿ ಇದ್ದಾರೆ ಎನ್ನುವುದು ತಿಳಿದು ಅಲ್ಲಿಗೆ ಹೊರಟೆವು. ನನಗಾಗಲಿ, ಗುರುಪ್ರಸಾದ್‍ಗಾಗಲಿ ಉದ್ದೇಶ ಇದ್ದದ್ದು ಇಷ್ಟೇ. ಪ.ಮಲ್ಲೇಶ್, ಗಾಂಧಿಯ ಬಗ್ಗೆ ಹೊಸದು ಎನಿಸುವಂತಹ ಏನಾದರೂ ಮಾತನಾಡಬಹುದು ಅಥವಾ ಪ್ರಸನ್ನರ ಚರಕದ ಹೋರಾಟದ ಬಗ್ಗೆ ಮಾತನಾಡಿಕೊಂಡಿದ್ದೇವೆ.

ನಾವಿಬ್ಬರು ರಂಗಾಯಣ ಆವರಣ ತಲುಪುವ ಹೊತ್ತಿಗೆ ಪ.ಮಲ್ಲೇಶ್ ಬಿಳಿಯ ಅಂಗಿಯನ್ನು ತೊಟ್ಟು ವನರಂಗದಿಂದ ಬರುತ್ತಿದ್ದರು. ನಾನು ಮತ್ತು ಗುರು ಪ.ಮಲ್ಲೇಶರನ್ನು ದಿಟ್ಟಿಸಿ ನೋಡುತ್ತಿದ್ದೇವು. ಅವರು ಹತ್ತಿರ ಬರುತ್ತಿದ್ದಂತೆ ಯಾವುದೋ ಪ್ರಭೆಯೊಂದು ನಮ್ಮನ್ನು ಒಳಗೊಳ್ಳಲು ಬರುತ್ತಿರುವಂತೆ ಕಾಣುತ್ತಿತ್ತು. ಅವರಿಗೆ, ನಾವು ನಿರಂತರದ ಹುಡುಗರು ಎಂದು ಪರಿಚಯಿಸಿಕೊಂಡು, ಅವರ ಪುಸ್ತಕ ತೋರಿಸಿದೆವು. ನಿಧಾನವಾಗಿ “ಸಾರ್ ಪ್ರಸನ್ನ ಆರಂಭಿಸಿದ್ದಾರಲ್ಲ, ಸುಸ್ಥಿರ ಬದುಕಿನ ಹೋರಾಟ. ಅದರ ಬಗ್ಗೆ ಏನು ಅನಿಸುತ್ತದೆ” ಎಂದು ಕೇಳಿದೆವು.

ನಮ್ಮ ಎಳೆಯ ಕಣ್ಣುಗಳನ್ನು ನೋಡಿದ ಮಲ್ಲೇಶರು, ಅವರ ಎರಡೂ ಕೈಗಳನ್ನು ನಮ್ಮಿಬ್ಬರ ಹೆಗಲ ಮೇಲೆ ಬಳಸಿದರು. ಚಳುವಳಿಗಳು ನಡೆಯೋದು, ಅದನ್ನು ಆರಂಭಿಸಿದ್ದರಿಂದಲ್ಲ. ಅದನ್ನು ಯಾರು ಮುಂದುವರೆಸುತ್ತಾರೆ ಎನ್ನುವುದರಿಂದ. ಈಗ ಪ್ರಸನ್ನ ತಮಗೆ ಸರಿ ಎನಿಸಿದ್ದನ್ನು ಆರಂಭಿಸಿದ್ದಾರೆ, ನಿಮಗೂ ಅವರ ನಡೆ ಇಷ್ಟ ಎಂದಾದರೆ, ನೀವು ಮುಂದುವರಸಿ ಎಂದು ಮೌನವಾದರು. ಒಂದಿಷ್ಟೇ, ಹೊತ್ತಿಗೆ “ನಮ್ಮದು ಮುಗೀತು ಕಣ್ರಯ್ಯ, ನನ್ನನ್ನು ಹುಡುಕಿ ಬರುವುದು ದೊಡ್ಡದಲ್ಲ, ನಮ್ಮ ಸಂಕಟಗಳು ನಿಮಗೂ ಅರ್ಥವಾಗುವುದು ದೊಡ್ಡದು. ಅದನ್ನ ನೀವು ಪಾಲಿಸ್ತೀರಾ? ಎಂದರು.

ಪ.ಮಲ್ಲೇಶರ ಅದೊಂದು ಮಾತು, ಆವತ್ತಿಗೆ ಒಂದು ಬಹುದೊಡ್ಡ ಆಧುನಿಕ ವಚನದಂತೆ ಕೇಳಿತ್ತು. ಅವರು ಇಷ್ಟು ವರ್ಷಗಳ ಕಾಲ ಕಾಪಿಟ್ಟುಕೊಂಡು ಬಂದಿದ್ದ ಬಹುದೊಡ್ಡ ಜವಬ್ದಾರಿಯೊಂದನ್ನ ನಮ್ಮ ಹೆಗಲಿಗೆ ಹೆಗಲು ನೀಡುವ ಮೂಲಕ ದಾಟಿಸುತ್ತಿದ್ದಾರೆ ಎನಿಸಿತ್ತು.

ಮೂರು ವರ್ಷಗಳ ನಂತರ ಬೆಂಗಳೂರಿನ ಟೌನ್ ಎದುರು ಕೂತು ಮಾಧ್ಯಮಗಳ ಬೆಳವಣಿಗೆ ಹಾಗೂ ಸಾಗುತ್ತಿರುವ ಹಾದಿಯನ್ನು ನೆನೆಯುವಾಗ ಎಲ್ಲವೂ ಮರಳಿ ನೆನಪಾಗುತ್ತದೆ. ಈಗ ಪತ್ರಿಕೋದ್ಯಮದಲ್ಲಿ ಎಡತಾಕುತ್ತಿರುವ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ನಿಂತು ಸುತ್ತಲೂ ಒಮ್ಮೆ ಕಣ್ಣಾಡಿಸಿದರೆ, ಆವತ್ತು ಪ.ಮಲ್ಲೇಶರು ಹೆಗಲಿಗೇರಿಸಿದ ಅದೃಶ್ಯ ಜವಾಬ್ದಾರಿಗಳು ಭಾರ ಎನಿಸುತ್ತಿವೆ. ಅಂತಹ ಬಹುದೊಡ್ಡ ಜವಾಬ್ದಾರಿಯನ್ನು ನಿರ್ವಹಿಸಲು ನಾವು ಪಕ್ವವಾಗುವ ಹಂತ ತಲುಪಿದರೂ, ಕಾಲದ ಮಾಧ್ಯಮದೊಳಗಿನ ಆಂತರಿಕ ಪಲ್ಲಟಗಳನ್ನು ಒಮ್ಮೆ ಸೂಕ್ಷ್ಮವಾಗಿ ಗಮನಿಸಬೇಕು ಎನಿಸುತ್ತದೆ. ಇಂತಹ ಸೂಕ್ಷ್ಮ ನಡೆಯಲ್ಲೇ ದೇವನೂರು ಮಹಾದೇವ ಕೇಳಿದ ಪ್ರಶ್ನೆಗೂ ಉತ್ತರ ಸಿಗಬಹುದು.

Leave a Reply