ಸಿಂಗಾಪುರ್ ನಲಿ ಢಮ್ ಢಮಾರ್..

ದೀಪಾವಳಿ ಹಬ್ಬಕ್ಕೆ ಇಡೀ ಭಾರತ ದೇಶವೇ ಬೆಳೆಕಿನಿಂದ ಜಗಮಗಿಸುತ್ತಿದೆ. ಹಬ್ಬದ ಸಂಭ್ರಮ, ಪಟಾಕಿಗಳ ಸದ್ದು, ಆಗಸ ತುಂಬಾ ಚಿತ್ತಾರಗಳು, ಅಲ್ಲಲ್ಲಿ ತುಂತುರು ಮಳೆ. ಇವಿಷ್ಟರ ಅನುಭವ ಆಗಬೇಕಾದ್ರೆ, ಸ್ವಂತ ಊರಿಗೆ ತೆರಳಲೇಬೇಕು. ಗಲ್ಲಿ ಗಲ್ಲಿ ತುಂಬಾ ಮಕ್ಕಳು ದಂಡು, ಕೈ ತುಂಬಾ ಪಟಾಕಿಗಳ ಚೀಲಗಳು, ಎಲ್ಲೆಂದರಲ್ಲಿ ಪಟಾಕಿಗಳನ್ನು ಸಿಡಿಸುತ್ತಾ, ದಾರಿ ಹೋಕರನ್ನೆಲ್ಲ ಹೆದರಿಸುತ್ತಾ, ಗೆಳೆಯರ ಜೊತೆ ಚೇಷ್ಟೆ ಮಾಡುತ್ತಾ ಎಂಜಾಯ್ ಮಾಡೋ ಸ್ಟೈಲೇ ಬೇರೆ. ಇವುಗಳನ್ನು ನೋಡುತ್ತಾ ತಮ್ಮ ಬಾಲ್ಯವನ್ನು ನೆನಪಿಸೋದು ದೊಡ್ಡವರ ಮನಸ್ಸು.

ಇವನ್ನೆಲ್ಲಾ ವಿದೇಶದಲ್ಲಿ ನಿರೀಕ್ಷೆ ಮಾಡೋದು ಹೇಗೆ ಸಾಧ್ಯ. ರೂಲ್ಸ್ ಗಳಲ್ಲೇ ಕ್ರಮಬದ್ಧವಾಗಿ ಸಮತೋಲನವನ್ನು ಕಾಪಾಡಿಕೊಳ್ಳುತ್ತ ಸಾಗೋದು ವಿದೇಶಗಳ ನಿಯಮ. ಅಂತಹದ್ದರಲ್ಲಿ ಬೇರೆ ದೇಶಗಳು ಪ್ರತ್ಯೇಕವಾಗಿ ಆಚರಿಸುವ ಹಬ್ಬಕ್ಕೆ ಮಹತ್ವ ಸಿಗೋದು ಸುಲಭದ ಮಾತಲ್ಲ. ಈ ವಿಚಾರದಲ್ಲಿ ಸಿಂಗಾಪುರ ದೇಶದ ಬಗ್ಗೆ ಖುಷಿ ಇದೆ.

ಸಿಂಗಾಪುರದ ಒಂದು ಸ್ಥಳ “ಲಿಟ್ಲ್ ಇಂಡಿಯಾ” ಎಂಬ ಹೆಸರಿನಿಂದ ಕರೆಸಲ್ಪಡುತ್ತದೆ. ಇಲ್ಲಿ ನೆಲೆಸಿರುವ ಬಹುತೇಕ ನಾಗರಿಕರು ಭಾರತೀಯರು. ಈ ಪ್ರದೇಶಕ್ಕೆ ಭೇಟಿ ನೀಡಿದಾಗಲೆಲ್ಲಾ, ನಮ್ಮ ದೇಶದಲ್ಲೇ ಇರುವ ಅನುಭವ ಆಗೋದು ಸಾಮಾನ್ಯ. ಜನರು, ಭಾಷೆ, ಅಂಗಡಿ ಮುಂಗಟ್ಟುಗಳು, ದೇಗುಲಗಳ ಮಧ್ಯೆ ಸಂಚರಿಸುವಾಗ ಅದೇನೋ ಆನಂದ.

ತಮಾಷೆಯ ಸಂಗತಿ ಅಂದ್ರೆ, ಸಿಂಗಾಪುರದ ಇತರೇ ಪ್ರದೇಶಗಳಲ್ಲಿ ಕಾನೂನಿಗೆ ಹೆದರುವ ನಮ್ಮ ಜನ, ಲಿಟ್ಲ್ ಇಂಡಿಯಾದಲ್ಲಿ ಮಾತ್ರ ಫುಲ್ ಬಿಂದಾಸ್. ಟ್ರ್ಯಾಫಿಕ್ ಸಿಗ್ನಲ್ ಲೆಕ್ಕಿಸದೇ ಎಲ್ಲೆಂದರಲ್ಲಿ ರಸ್ತೆ ದಾಟೋದು, ಅಲ್ಲಲ್ಲಿ ಕಸ ಹಾಕೋದು, ನೋ ಪಾರ್ಕಿಂಗ್ ನಲ್ಲಿ ವಾಹನಗಳನ್ನು ನಿಲ್ಲಿಸೋದು.. ಹೀಗೆ ಪಕ್ಕಾ ದೇಸಿ ಸ್ಟೈಲ್. ಇದಾರಿಂದಾಗಿಯೇ ಎಷ್ಟೋ ಚೀನಿ ಟ್ಯಾಕ್ಸೀ ಚಾಲಕರು “ಲಿಟ್ಲ್ ಇಂಡಿಯಾ” ಕ್ಕೆ ಬರಲು ಹೆದರುವುದೂ ಇದೆ. ಒಮ್ಮೆ ನಾವು ಬಳಸಿದ್ದ ಟ್ಯಾಕ್ಸೀಯ ಚೀನಿ ಡ್ರೈವರ್ ಒಬ್ಬರು ಈ ರೀತಿಯಾಗಿ ತಮ್ಮ ಅನುಭವ ಹಂಚಿಕೊಂಡಿದ್ದರು. ನಮ್ಮ ಜನ ಹೀಗೂ ಫೇಮಸ್.

ಲಿಟ್ಲ್ ಇಂಡಿಯಾದಲ್ಲಿ ದೀಪಾವಳಿ ಹಬ್ಬದ ಸಡಗರ ಬಹಳ ಅದ್ಧೂರಿಯಾಗಿ ಆರಂಭವಾಗುತ್ತದೆ. ಕಾನೂನು ಪ್ರಕಾರ, ಇಲ್ಲಿ ಮಾತ್ರ ಈ ಅವಕಾಶ. ಇಲ್ಲಿನ ರಸ್ತೆಯ ಎರಡು ಬದಿಗಳು ಬೆಳಕಿನಿಂದ ಕಂಗೊಳಿಸುತ್ತವೆ. ನವಿಲುಗಳು, ಆನೆಗಳು, ದೀಪಗಳ ಆಕೃತಿಗಳು ಬಣ್ಣ ಬಣ್ಣದ ರೂಪದಲ್ಲಿ ತೋರಣಗಳಾಗಿ ಜಗಮಗಿಸುತ್ತಿರುತ್ತವೆ. ದೀಪಾವಳಿಗೆ ನಡೆಯುವ ವಿಶೇಷ ಅಲಂಕಾರ ಹಬ್ಬದ ಸಡಗರವನ್ನು ಮತ್ತಷ್ಟು ರಂಗೇರುವಂತೆ ಮಾಡುತ್ತದೆ. ಮದುವಣಗಿತ್ತಿಯಂತೆ ಸಿಂಗಾರಗೊಳ್ಳುವ ಲಿಟ್ಲ್ ಇಂಡಿಯಾಕ್ಕೆ ಈ ಬಾರಿ ೩೦ನೇ ವರ್ಷಾಚರಣೆ.

ಇಲ್ಲಿನ ಸೆರಂಗೂನ್ ರೋಡ್ ಹಾಗೂ ರೇಸ್ ಕೋರ್ಸ್ ರೋಡ್ ಉದ್ದಕ್ಕೂ ಬಣ್ಣ ಬಣ್ಣದ ಸುಮಾರು ೨ ಮಿಲಿಯನ್ ಬಲ್ಬ್ ಗಳನ್ನು ಬಳಸಲಾಗುತ್ತದೆ. ಸೆಪ್ಟಂಬರ್ ಕೊನೆಯ ವಾರ ಆರಂಭವಾದ ಬೆಳಕಿನ ಲೋಕ, ನವೆಂಬರ್ ೨೫ರವರೆಗೆ ನೋಡುಗರ ಕಣ್ಣು ತಂಪಾಗಿಸಲಿದೆ. ಹಬ್ಬದ ಪ್ರಯುಕ್ತ ನಮ್ಮ ಬೆಂಗಳೂರಿನ ಗಾಂದಿ ಬಜಾರ್ ರೀತಿಯಲ್ಲೇ ಒಂದು ಮಾರ್ಕೆಟ್ ಸ್ಟ್ರೀಟ್ ತೆರೆಯಲಾಗುತ್ತದೆ. ಬಣ್ಣ ಬಣ್ಣದ ಹಣತೆಗಳು, ಪಟಾಕಿಗಳು, ವಿವಿಧ ಬಗೆಯ ಸಿಹಿತಿಂಡಿಗಳು, ಹಬ್ಬದ ತಯಾರಿಗೆ ಬೇಕಾದ ಎಲ್ಲಾ ವಸ್ತುಗಳು ಇಲ್ಲಿ ಮಾರಾಟಕ್ಕಿಡಲಾಗುತ್ತದೆ. ಸಿಂಗಾಪುರದ ಮೂಲೆ ಮೂಲೆಯಲ್ಲಿರುವ ಭಾರತೀಯರು ಲಿಟ್ಲ್ ಇಂಡಿಯಾ ಪ್ರದೇಶಕ್ಕೆ ಲಗ್ಗೆ ಇಡುತ್ತಾರೆ.

ಇಷ್ಟಕ್ಕೆ ಮುಗಿಯುವುದಿಲ್ಲ ಇಲ್ಲಿನ ದೀಪಾವಳಿ. ಈ ಹಬ್ಬದ ಸಂದರ್ಭದಲ್ಲಿ ಇಡೀ ದೇಶವೇ ದೀಪಾವಳಿ ಥೀಮ್ ನೊಂದಿಗೆ ಅಲಂಕಾರಗೊಂಡಿರುತ್ತದೆ. ಲಿಟ್ಲ್ ಇಂಡಿಯಾ ಟ್ರೈನ್ ಸ್ಟೇಶನ್ ಸೇರಿದಂತೆ ಇತರೇ ರೈಲು ನಿಲ್ದಾಣಗಳ ಗೋಡೆ ತುಂಬಾ ದೀಪಾವಳಿ ಚಿತ್ತಾರಗಳದ್ದೆ ಕಾರುಬಾರು. ವಿಭಿನ್ನ ರಂಗೋಲಿಗಳು, ಬಣ್ಣ ಬಣ್ಣದ ಹಣತೆಗಳ ಸ್ಟಿಕರ್ ಗಳು ನಿಲ್ದಾಣದ ನೋಟವನ್ನೇ ಬದಲಾಯಿಸಿ ಬಿಡುತ್ತವೆ. ಇನ್ನೂ ರೈಲುಗಳ ಚೆಲುವು ಕೇಳೋದೇ ಬೇಡ. ರೈಲು ಹತ್ತುತ್ತಿದ್ದಂತೆ ದೀಪಾವಳಿ ಹಬ್ಬವನ್ನೇ ಆಚರಿಸುತ್ತಿರುವಷ್ಟು ಸಂತೋಷ. ಈ ಸಿಂಗಾರವನ್ನು ನೋಡುತ್ತಾ ಕುಳಿತರೆ ನಾವು ಇಳಿಯಬೇಕಾದ ನಿಲ್ದಾಣ ತಲುಪುದೇ ಗೊತ್ತಾಗೋದಿಲ್ಲ.

ಅಂದ ಹಾಗೆ ದೀಪಾವಳಿ ಹಬ್ಬಕ್ಕೆ ಸಿಂಗಾಪುರ ಕೂಡ ಸರ್ಕಾರಿ ರಜೆಯನ್ನು ಘೋಷಿಸುತ್ತದೆ. ಭಾರತೀಯ ಶಾಲೆಗಳು 3 – 4 ದಿನಗಳ ರಜೆ ಘೋಷಿಸಿದ್ರೆ, ಸ್ಥಳೀಯ ಶಾಲೆಗಳು ಒಂದು ದಿನದ ರಜೆಯನ್ನು ನೀಡುತ್ತದೆ. ಹಬ್ಬದ ಪ್ರಯುಕ್ತ, ನರ್ಸರೀ ತರಗತಿಯಿಂದ ಹಿಡಿದು ಹೈ ಸ್ಕೂಲ್ ವರೆಗೂ ಒಂದು ದಿನ ಕಡ್ಡಾಯವಾಗಿ ಈ ಆಚರಣೆಯನ್ನು ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಭಾರತೀಯ ಉಡುಗೆ-ತೊಡುಗೆ, ತಿಂಡಿ ತಿನಿಸುಗಳ ಹಂಚಿಕೆ, ಮದರಂಗಿ ಹಾಕುವ ಕಾರ್ಯಕ್ರಮಗಳು ಶಾಲೆಗಳಲ್ಲಿ ನಡೆಯುತ್ತವೆ.

ಸಿಂಗಾಪುರ ದೇಶವನ್ನು ಕಟ್ಟಿ ಬೆಳೆಸಿದವರಲ್ಲಿ ಭಾರತೀಯರು ಅದರಲ್ಲೂ ತಮಿಳರದ್ದು ಮಹತ್ವದ ಪಾತ್ರ. ಹೀಗಾಗಿ ನಮ್ಮ ದೇಶದ ದೀಪಾವಳಿ ಹಬ್ಬಕ್ಕೆ ಇಲ್ಲಿ ಹೆಚ್ಚಿನ ಪ್ರಾಧಾನ್ಯತೆ. ಬೆಳಕಿನ ಹಬ್ಬ ಬಂತೆಂದರೆ, ಇಲ್ಲಿನ ಟೀವೀ ಚ್ಯಾನೆಲ್ ಗಳ ಕಾರ್ಯಕ್ರಮಗಳು, ನ್ಯೂಸ್ ಪೇಪರ್ ಗಳ ವರದಿಗಳು, ಆಯಾಯ ಕ್ಷೇತ್ರದ ಜನಪ್ರತಿನಿಧಿಗಳು ಶುಭಾಶಯಗಳನ್ನು ಕೋರುವ ಬ್ಯಾನರ್ ಗಳು.. ಹೀಗೆ ದೇಶ ತುಂಬಾ ದೀಪಾವಳಿ ಮಯವಾಗಿರುತ್ತವೆ.

ಕನ್ನಡ ಸಂಘ ಸಿಂಗಾಪುರ, ಉತ್ತರ ಭಾರತದವರು ಹೀಗೆ ತಮ್ಮ ತಮ್ಮ ಸಮುದಾಯಗಳನ್ನು ಒಟ್ಟೂಗೂಡಿಸುವ ಸಂಘಗಳು ಹಬ್ಬದ ನಿಟ್ಟಿನಲ್ಲಿ ಅನುಮತಿ ಪಡೆದು ಅಲ್ಲಲ್ಲಿ ಕಾರ್ಯಕ್ರಮಗಳನ್ನು ನಡೆಸುತ್ತವೆ. ಇನ್ನೂ ಲಿಟ್ಲ್ ಇಂಡಿಯಾದಲ್ಲಂತೂ ದಿನನಿತ್ಯ ಒಂದಲ್ಲಾ ಒಂದು ಸಮಾರಂಭಗಳು ನಡೆಯುತ್ತಲೇ ಇರುತ್ತವೆ. ಈ ಬಾರಿಯಂತೂ ಇಲ್ಲಿನ ಏಕೈಕ ಸ್ಥಳೀಯ ತಮಿಳು ಚ್ಯಾನೆಲ್, ತನ್ನ ನ್ಯೂಸ್ ಬುಲೆಟಿನ್ ನ್ನು ಕೂಡ ಲಿಟ್ಲ್ ಇಂಡಿಯಾದ ರಸ್ತೆ ಬದಿಯಿಂದ ಪ್ರಸಾರ ಮಾಡಿಸುತ್ತಿದೆ.

    

ಇಷ್ಟೆಲ್ಲಾ ಮಾಡೋದಕ್ಕೆ ಫ್ರೀ ಬಿಟ್ಟ ಸಿಂಗಾಪುರ ದೇಶ, ಪಟಾಕಿ ಹೊಡಿಯುವ ವಿಷಯಕ್ಕೆ ಮಾತ್ರ ತನ್ನ ಕಾನೂನನ್ನು ಕಟ್ಟುನಿಟ್ಟುಗೊಳಿಸಿದೆ. ರಸ್ತೆ ಬದಿಯಲ್ಲಿ, ಮನೆಯ ಎದುರುಗಡೆ, ಮಹಡಿಗಳಲ್ಲಿ.. ಹೀಗೆ ಎಲ್ಲೆಂದರಲ್ಲಿ ಪಟಾಕಿಗಳನ್ನ ಸಿಡಿಸುವ ಹಾಗಿಲ್ಲ. ತುಂಬಾ ವಿಶಾಲವಾದ ಜಾಗಗಳಲ್ಲಿ ಮಾತ್ರ ಇದಕ್ಕೆ ಅನುಮತಿ. ಅದು ನಮ್ಮಲ್ಲಿ ನಡಿಯುವ ಹಾಗೆ ತುಂಬಾ ಶಬ್ದಗಳನ್ನು ಮಾಡುವ ಪಟಾಕಿಗಳಿಗೆಲ್ಲ ಇಲ್ಲಿ ಪ್ರವೇಶನೇ ಇಲ್ಲ. ಪರಿಸರ ಹಾಗೂ ಶಬ್ದ ಮಾಲಿನ್ಯ ತಡೆಗಟ್ಟುವಿಕೆ, ದೇಶದಲ್ಲಿರುವ ಇತರೇ ಪಂಗಡದ ನಾಗರಿಕರಿಗೆ ಯಾವುದೇ ರೀತಿಯ ತೊಂದರೆಯಾಗದ ನಿಟ್ಟಿನಲ್ಲಿ ಈ ರೂಲ್ಸ್ ಜಾರಿಯಲ್ಲಿದೆ.

ಪಟಾಕಿಗಳ ಸದ್ದು ಕೇಳುತ್ತೋ ಇಲ್ವೋ, ಬಣ್ಣ ಬಣ್ಣದ ಬೆಳಕು ಮಾತ್ರ ಸಿಂಗಾಪುರ ದೇಶ ತುಂಬಾ ರಾರಾಜಿಸುತ್ತಿರುತ್ತದೆ. ಮನೆ ಮನೆಯಲ್ಲಿ ನಡೆಯುವ ಸಂಪ್ರದಾಯ, ದೇವಾಲಯಗಳಲ್ಲಿ ನೆರವೇರುವ ಪೂಜೆ ಪುನಸ್ಕಾರಗಳು, ಹಬ್ಬದ ಅನುಭವವನ್ನು ಮತ್ತಷ್ಟು ಸಿಹಿಯಾಗಿಸಲು ಸಜ್ಜುಗೊಳ್ಳುವ

ಲಿಟ್ಲ್ ಇಂಡಿಯಾ … ಇವಿಷ್ಟು ಅವಕಾಶಗಳ ನಡುವೆ ಇನ್ನೇನು ಬೇಕು ಹೇಳಿ ವಿದೇಶದಲ್ಲಿದ್ದುಕೊಂಡು..

ಪಾಲಿಗೆ ಬಂದಿದ್ದು ಪಂಚಾಮೃತ…!!!

 

Leave a Reply