ತಾಳ್ಮೆಯ ಕಿರುಗೆಜ್ಜೆ ಕಟ್ಟಿಕೊಂಡು..

ಒಂಟಿಯಾದರೂ ಸರಿಯೇ

ಡಾ ಸಂಜೀವ ಕುಲಕರ್ಣಿ 

ಒಂಟಿಯಾದರೂ ಸರಿಯೇ
ಒಬ್ಬಂಟಿಯಾದರೂ ಸರಿಯೇ
ನಡೆ ಮುಂದೆ ನಡೆ ಮುಂದೆ ನಡೆ ಮುಂದೆ
ಇಡು ಹೆಜ್ಜೆ ಮುಂದೆ ಇಡು ಹೆಜ್ಜೆ ಮುಂದೆ

ನಗುವುದೀ ಜಗವು ನಿನ್ನನು ನೋಡಿ
ಹಂಗಿಸುವುದು ಲೋಕ ಹುಚ್ಚಿಯ ಮಾಡಿ
ಅವಮಾನ ಅಪಹಾಸ್ಯ ನಿನ್ನ ಪಾಲಿನ ಬುತ್ತಿ
ಕಲ್ಲು ಕಂಟಿ ಮುಳ್ಳು ನಿತ್ಯ ಸಂಗಾತಿ

ಸುತ್ತಮುತ್ತಲೂ ಕರಾಳ ಕತ್ತಲು
ಅನ್ನುವ ಭಯವು ಮನದಲಿ ಬೇಡ
ದೂರ ಗುರಿಯ ದಾರಿ ಹೃದಯದೊಳಗಿರಲಿ
ಹಸಿವು ನೀರಡಿಕೆ ಸನಿಹ ಬರದಿರಲಿ

ಒಳಗಣ್ಣಿಗೆ ಸಿಕ್ಕ ಸತ್ಯದ ಬೆಳಕು
ಆರದಿರಲಿ ಆ ದೀಪ ಎಂದೆಂದಿಗೂ
ಧೈರ್ಯದ ಒರತೆ ಒಳಗಿಟ್ಟುಕೊಂಡು
ತಾಳ್ಮೆಯ ಕಿರುಗೆಜ್ಜೆ ಕಟ್ಟಿಕೊಂಡು

ಒಂಟಿಯಾದರೂ ಸರಿಯೇ
ಒಬ್ಬಂಟಿಯಾದರೂ ಸರಿಯೇ
ನಡೆ ಮುಂದೆ ನಡೆ ಮುಂದೆ ನಡೆ ಮುಂದೆ
ಇಡು ಹೆಜ್ಜೆ ಮುಂದೆ ಇಡು ಹೆಜ್ಜೆ ಮುಂದೆ

1 comment

  1. ಬಯಸಿದಂತೆ ನುಡಿದ ದುಡಿದ ಮತ್ತು ತುಡಿದ ವೈದ್ಯ ಮಿತ್ರ ಸಂಜೀವ ಕುಲಕರ್ಣಿ ಕವನ

Leave a Reply