ಮಣ್ಣ ಹಣತೆಯ ಬೆಳಕೆ  ಎಲ್ಲಿಂದ ಬಂದೆಯೆ?

ಪ್ರವರ ಕೊಟ್ಟೂರು 

ಮಣ್ಣ ಹಣತೆಯ ಬೆಳಕೆ
ಎಲ್ಲಿಂದ ಬಂದೆಯೆ?
ಪಾದದಲಿ ಕೆಂಧೂಳ ಮೆತ್ತಿಕೊಂಡು,
ದೇಗುಲವ ದಾಟಿದೆ
ಜಗದಗಲ ಹರಡಿದೆ
ನಗುತಿರುವ ಸೊಡರನ್ನು ಹೊತ್ತುಕೊಂಡು

ಹಳೆಯ ಕಂಬವ ಒರಗಿ
ಕುಳಿತ ಕಂದೀಲುಗಳ
ಎದೆ ಎದೆಗೆ ಒಲವನ್ನು ಹಂಚುಬಾರೆ
ಎಷ್ಟೊಂದು ಕಣಿವೆಗಳು
ನೆರಳಿನ ಸಂತೆಗಳು
ಬೊಗಸೆಗಳ ನದಿ ಹರಿದು ತೈಲಧಾರೆ

ಮನೆ-ಮುಗಿಲು-ಅಂಗಳ
ಮೌನದ್ದೆ ಸಪ್ಪಳ
ಕರುಳಿಂದ ಎದೆಗೆ ದನಿಯಾಗು ಬಾ,
ಬೇಲಿ ಸಾಲಿನ ಹೂವು
ಮೊಗ್ಗಾಗೆ ಉಳಿದಿಹುದು
ತಾಯ್ತನದ ಮೊಲೆಯಲ್ಲಿ ಬೆಳಕುಣಿಸು ಬಾ

ಗೀಜಗನ ಗೂಡಿನಲಿ
ಕೇರೆ ಹಾವಿನ ದಂಡು
ಕತ್ತಲೆಯ ಹಸಿವಿಗೆ ನೂರು ಹೊಟ್ಟೆ,
ಮರಳ ದಿಬ್ಬದ ಹಾಡೆ
ತೇಲಿ ಬಂದೆಯ ಕೊನೆಗೆ
ಸುಳಿಯಿತು ದನಿಯೊಂದು ಒಡೆದು ಮೊಟ್ಟೆ

ಕಾಳ ರಾತ್ರಿಯ ನಡುವೆ
ಗೊಂಬೆಗಳ ಮನೆಗಳು
ಅಳುವ ಕಥೆಗಳ ಪತ್ರ ಮುಟ್ಟಿತೇನು,
ಬಟ್ಟಲು ಬೆಳಕಿಲ್ಲ
ಎದೆಯೊಳಗೆ ಕಸುವಿಲ್ಲ
ಕಣ್ಣ ಹನಿಗಳ ಮೋಡ ಕಟ್ಟಿತೇನು

ಮಣ್ಣ ಹಣತೆಯ ಬೆಳಕೆ
ಎಲ್ಲಿಂದ ಬಂದೆಯೇ
ಮೈಯೊಳಗೆ ಚಂದ್ರಮರು, ಚುಕ್ಕಿ ಹಾರ
ಕಾಲ ಕಾಲದ ಜಾಡು
ಹೃದಯಗಳ ಹೊಸ್ತಿಲು
ಕದಲದೇ ಕ್ಷಣ ಹೊತ್ತು, ಹೆಜ್ಜೆಯೂರು

1 comment

Leave a Reply