ಮಿಸ್ಟರಿ ಮ್ಯಾನ್

ಈ ಘಟನೆಯ ಸತ್ಯಾಸತ್ಯತೆಯನ್ನು  ಪರೀಕ್ಷಿಸಿಕೊಳ್ಳುವುದು ನಿಮಗೆ ಬಿಟ್ಟ ವಿಚಾರ

.

ಡೋರ್ ನಂ. 188/7,

54ನೇ ಕ್ರಾಸ್,

4ನೇ ಬ್ಲಾಕ್, ರಾಜಾಜಿನಗರ,

ಬೆಂಗಳೂರು.

*     *      *      *     *

ಇದೊಂದು ಬಾಡಿಗೆ ಮನೆ. ಮನೆಯ ಮುಂದೆ To-let ಬೋರ್ಡ್ ನೋಡಿದ ರವಿಶಂಕರ ವಿಚಾರಿಸಲೆಂದು ಒಳಹೋದ.  ಮನೆ ಯಜಮಾನರಾದ ‘ರಾಜಾರಾಮ್’ ಅವರನ್ನು ಕೇಳಿದಾಗ ‘ಹೌದು, ಮನೆ ಖಾಲಿ ಇದೆ, ಸಿಂಗಲ್ ಬೆಡ್‌ರೂಂ ನ ಮನೆಯಿದು. ಹಂಡ್ರೆಡ್ ಪರ್ಸೆಂಟ್ ವಾಸ್ತು ಪ್ರಕಾರ ಕಟ್ಟಿಸಿದ್ದೇನೆ, ಬಾಡಿಗೆ ಎಂಟು ಸಾವಿರ, ಅಡ್ವಾನ್ಸ್ ಎಂಬತ್ತು ಸಾವಿರ ಎಂದು ಉರು ಹೊಡೆದಂತೆ ಗತ್ತಿನಿಂದ ಹೇಳಿ ಮುಗಿಸಿದರು.

ಮರುಮಾತಿಲ್ಲದೆ ರವಿಶಂಕರ ಒಪ್ಪಿಕೊಂಡ. ಅದಕ್ಕೆ ಕಾರಣವೇನೆಂದರೆ ಸಾಮಾನ್ಯವಾಗಿ ಬಾಡಿಗೆ ಮನೆ ಹುಡುಕುವವರಿಗೆ ಎದುರಾಗುವ ಸಿದ್ಧಪ್ರಶ್ನೆ  ಅವನಿಗೆ ಎದುರಾಗಲಿಲ್ಲ.  “ನೀವು ಬ್ಯಾಚುಲರ‍್ರಾ? ಫ್ಯಾಮಿಲಿನಾ’?’ ಎಂಬ ತಂಟೆ ತಕರಾರು ಇಲ್ಲದ ಕಾರಣ ರವಿಶಂಕರ ಒಂದೇ ಮಾತಿಗೆ  ಒಪ್ಪಿಕೊಂಡು  ಟೋಕನ್ ಅಡ್ವಾನ್ಸ್ ಎಂದು ಐದು ಸಾವಿರ ರೂಪಾಯಿಗಳನ್ನು ಕೊಟ್ಟು ಮುಂದಿನ ತಿಂಗಳು ಒಳ್ಳೆ ದಿನ ನೋಡಿ ಬರುತ್ತೇನೆಂದು ಹೇಳಿ ಹೋದ.

*********

ಆ ಒಳ್ಳೆ ದಿನ ಬಂತು. ಅವನು ಆ ಮನೆಗೆ ಬಂದ ಮಾರನೆಯ ದಿನ ತನ್ನ ಕೆಲಸ ಮುಗಿಸಿ ಮನೆಗೆ ಬಂದಾಗ ಒಂದು ಆಶ್ಚರ್ಯ ಕಾದಿತ್ತು.  ಮನೆಯ ಬಾಗಿಲು ತೆರೆದಿತ್ತು.  ಓನರ್ ಬಳಿ ಮತ್ತೊಂದು ‘ಕೀ’ ಇತ್ತಾದ್ದರಿಂದ ಏನಾದರೂ ಸಣ್ಣಪುಟ್ಟ ರಿಪೇರಿ ಕೆಲಸಕ್ಕೆ ಬಾಗಿಲು ತೆರೆದುಕೊಂಡಿರಬಹುದು ಎಂದುಕೊಡು ಮನೆಯ ಒಳಗೆ ಹೋದ.  ಆಶ್ಚರ್ಯ ! ಅವನದೇ ಎತ್ತರ, ಗಾತ್ರವಿರುವ ಸುಮಾರು ಮೂವತ್ತರ ಆಸು ಪಾಸಿನಲ್ಲಿರಬಹುದಾದ ಯುವಕನೊಬ್ಬ ಆಗಲೇ ಅಡುಗೆ ಮನೆಯಲ್ಲಿ ‘ಕಾಫಿ’ ಮಾಡುತ್ತಿದ್ದ. ರವಿಶಂಕರನಿಗೆ ದಿಕ್ಕು ತೋಚದಾಯಿತು.  ‘ಏಯ್ ಯಾರು ನೀನು?’ ದನ ನುಗ್ಗಿದ ಹಾಗೆ  ಮನೆಗೆ ನುಗ್ಗಿದ್ದಿಯಲ್ಲ ? ಕೀ ಎಲ್ಲಿತ್ತು? ಯಾರನ್ನ ಕೇಳಿ ಮನೆ ಒಳಗೆ ಬಂದೆ ? ‘I will call the police’ ಎಂದು ಏನೇನೋ ಅರಚಿಬಿಟ್ಟ .ಆದರೆ  ಆ ಹುಡುಗ ಸ್ಟೊವ್ ಮೇಲಿಂದ ‘ಕಾಫಿ’ ಪಾತ್ರೆ ತೆಗೆದು ಲೋಟಕ್ಕೆ ‘ಕಾಫಿ’ ಹಾಕಿ ಅದನ್ನು ಸಣ್ಣ ಸಾಸರ್ ಒಂದರಲ್ಲಿಟ್ಟು ಜೊತೆಗೆ ಬಿಸ್ಕೆಟ್ ಪ್ಯಾಕ್‌ನ್ನು ಓಪನ್ ಮಾಡಿ ಸ್ಟೂಲ್ ಮೇಲಿಟ್ಟು ಅದನ್ನು ರವಿಶಂಕರನ ಮುಂದೆ  ಇಟ್ಟ.  ರವಿಶಂಕರ ಎಷ್ಟೇ ಅರಚಿದರೂ ಆತ ಏನೆಂದೂ ಮತಾಡಲಿಲ್ಲ.  ಕಾಫಿ ಕುಡಿದಾದ ಮೇಲೆ ರವಿಶಂಕರ ಸಾವಧಾನವಾಗಿ ಕೇಳಿದ.

“ಹೇಳು ಯಾರು ನೀನು?”

ಆತ ಸುಮ್ಮನೆ ಇದ್ದ. ಎರಡನೇ ಮಹಡಿಯಲ್ಲಿದ್ದ ಓನರ್ ಬಳಿ ಹೋಗಿ ಕಂಪ್ಲೆಂಟ್  ಮಾಡೋಣ ಎಂದು ಯೋಚಿಸಿದ. ಆದರೆ ತಕ್ಷಣ ಬ್ಯಾಚುಲರ್ ಆದ ತನಗೆ ಮನೆ ಸಿಗುವುದು ಎಷ್ಟು ಕಷ್ಟವಾಗಿತ್ತು ಎಂದು ನೆನಪಿಸಿಕೊಂಡು ಅದರಿಂದಲೂ ಹಿಂಜರಿದ. ಸುಮ್ಮನೆ ಅವಾಂತರ ಸೃಷ್ಟಿಸಿಕೊಳ್ಳುವುದು ಬೇಡ ಇವನನ್ನು ಹೇಗಾದರೂ ಮಾಡಿ ಸಾಗ ಹಾಕಿದರಾಯ್ತು ಎಂಬುದು ಅವನ ಯೋಚನೆಯಾಗಿತ್ತು .

“ನಿನಗೆ ಇಲ್ಲಿ ಮಾತನಾಡಲು ಇಷ್ಟವಿಲ್ಲದಿದ್ದರೆ ಬಾ ಪಾರ್ಕ್ ಗೆ ಹೋಗೋಣ ಅಲ್ಲೆ ವಾಕ್ ಮಾಡುತ್ತ ಮಾತಾಡೋಣ  ಪ್ರೀತಿಯಿಂದ ಅವನನ್ನು ಆಹ್ವಾನಿಸಿದ ರವಿಶಂಕರ.  ಆತ ಜಪ್ಪಯ್ಯ ಅನ್ನಲಿಲ್ಲ.  ಹಾಲ್‌ನ ಮೂಲೆಯೊಂದರಲ್ಲೆ ನಿರ್ವಿಣ್ಣನಾಗಿ ಆತ ಕುಳಿತಿದ್ದನ್ನು ನೋಡಿ ರವಿಶಂಕರನಿಗೂ ಕನಿಕರ ಬಂತು. ಸಂಜೆ ವಾಕಿಂಗ್‌ಗೆಂದು ಹೊರ ಹೋಗಲು ತಯಾರಾಗಿ ಅವನನ್ನು ಒಳಗೇ ಕೂಡಿ ಲಾಕ್ ಮಾಡಿಕೊಂಡು ಹೋದ. ಒಳಗಿದ್ದವ ನಸುನಕ್ಕ. ‘ಟಿ.ವಿ ಹಾಕಬೇಡ. ಸೌಂಡ್ ಬಂದ್ರೆ ಓನರ್‌ಗೆ ಗೊತ್ತಾಗುತ್ತೆ’ ಎಂಬ ವಾರ್ನಿಂಗ್ ಕೊಟ್ಟು ಹೋಗಿದ್ದ ರವಿಶಂಕರ್.

**    **          **        **

ಎಂಟು ಗಂಟೆಯ ಹೊತ್ತಿಗೆ ವಾಪಸ್‌ ಬಂದು ನೋಡಿದರೆ ಆ ಇನ್ನೊಬ್ಬ ಊಟಕ್ಕೆ ಎಲ್ಲಾ ಸಿದ್ಧತೆ ಮಾಡಿಟ್ಟುಕೊಂಡು ಗಂಡನಿಗಾಗಿ ಊಟಕ್ಕೆ ಕಾಯುವ ಗೃಹಿಣಿಯಂತೆ ಕೂತಿದ್ದ.  ಬಿಸಿ ಬಿಸಿ ಊಟ ತಯಾರಿತ್ತಲ್ಲ ರವಿಶಂಕರ ಹೆಚ್ಚೇನು ಮಾತನಾಡದೆ  ಊಟ ಮಾಡಲು ಶುರುವಿಟ್ಟುಕೊಂಡ.  ಆತ ಏನೊಂದು ಮತಾಡದೇ ಊಟ ಬಡಿಸುತ್ತಲೇ ಇದ್ದ.  ಆತನಿಗೂ ಊಟ ಮಾಡುವಂತೆ ರವಿಶಂಕರ ಎಷ್ಟೇ ಒತ್ತಾಯಿಸಿದರೂ ಆತ ಆಮೇಲೆ ಮಾಡುತ್ತೇನೆಂಬಂತಹ ಪ್ರತಿಕ್ರಿಯೆಗಳನ್ನು ಮಾತ್ರ ನೀಡುತ್ತಿದ್ದ. ಊಟ ಮುಗಿಸಿದ ರವಿಶಂಕರ, ಈ ಆಗುಂತಕನ ಸಾಗ ಹಾಕುವ ಬಗ್ಗೆ, ಅವನು ಯಾರೆಂದು ತಿಳಿಯುವ ಬಗ್ಗೆ ಸೀರಿಯಸ್ಸಾಗಿ ಯೋಚಿಸಿ, ಬಾಗಿಲು ಭದ್ರವಾಗಿ ಹಾಕಿಕೊಂಡು, ಟಿ.ವಿಯಲ್ಲಿ ಬರುತ್ತಿದ್ದ ಕ್ರೈಮ್ ಸ್ಟೋರಿಗೆ ವಾಲ್ಯೂಮ್ ಜಾಸ್ತಿ ಮಾಡಿಕೊಂಡು ಅವನನ್ನು ವಿಚಾರಣೆಗೆ ಎಳೆಯುವ ಸಾಹಸಕ್ಕೆ ಮತ್ತೆ ಮುಂದಾದ.

“ಈಗ ಹೇಳು, ಯಾರು ನೀನು ? ನೋಡಲಿಕ್ಕೆ ತೀರ ಸಂಭಾವಿತನಂತೆ ಕಾಣ್ತೀಯ, ನಿನ್ನ ಮೇಲೆ ರೇಗಾಡಲಿಕ್ಕೂ ನನಗೆ ಮನಸ್ಸು ಬರುತ್ತಿಲ್ಲ. ದಯವಿಟ್ಟು ನಿನ್ನ ಉದ್ದೇಶವೇನು ? ಏಕೆ ಹೀಗೆ ತೊಂದರೆ ಕೊಡುತ್ತಿದ್ದೀಯ ಹೇಳಿಬಿಡು ” ಎಂದು ಮೃದುವಾದ ದನಿಯಿಂದಲೇ ರವಿಶಂಕರ ಕೇಳಿದ . ಆ ಅಸಾಮಿಯೋ ಎಷ್ಟೋ ವರ್ಷಗಳಿಂದ ಮಾತೇ ಆಡಿಲ್ಲವೇನೋ ಎಂಬಂತೆ ಮಾತು ಮರೆತ ಹಳಬನಂತೆ ನಿಷ್ಚೇಷ್ಟಿತನಾಗಿ ನಿಂತಿದ್ದ. ಅಂತಹ ವ್ಯತಿರಿಕ್ತ

ಪ್ರತಿಕ್ರಿಯೆಗಳಿಗೆ ಬೈಯ್ಯುವುದು, ಹೊಡೆಯುವುದೂ, ರೇಗುವುದು ಎಲ್ಲ ಅಪ್ರಯೋಜಕವಾಗಿಬಿಡುತ್ತದಲ್ಲವೇ? ಎಂದು ಯೋಚಿಸಿದ ರವಿಶಂಕರ ಯಾವ ನಾಟಕದ ವೇಷ ಹಾಕ್ಕೊಂಡು ಬಂದಿದ್ದಾನೋ ನೋಡೋಣ ನಾಳೆ ಗೊತ್ತಾಗುತ್ತೆ, ಏನೋ ಕೆಲಸದ ಮೇಲೆ ಬಂದು ಇವತ್ತು ಎಲ್ಲಿ ಉಳಿಯೋದು ಎಂದು ತಿಳಿಯದೇ ಲಾಡ್ಜ್ ಮಾಡಲು ದುಡ್ಡು ಇಲ್ಲದೆ ಬಂದಿರಬಹುದಲ್ಲ? ಎಂಬ ಸ್ವಯಂ ಸಮಜಾಯಿಷಿ ನೀಡಿಕೊಂಡು ಮಲಗಲು ಕೋಣೆಗೆ ಹೋದ. ಹಾಲ್‌ನಲ್ಲಿ ನಿಂತಿದ್ದ ಆ ಆಸಾಮಿಗೆ ಒಂದು ಚಾಪೆ  ದಿಂಬನ್ನು ಬಿಸಾಕಿ ತಾನು ಮಲಗಿದ.

******

 

ಮರು ದಿನ ಬೆಳಗ್ಗೆ ‘ಪೀಡೆ’ ತೊಲಗಿದ್ದರೆ ಸಾಕಪ್ಪಾ ಎಂದುಕೊಂಡೇ ಹಾಸಿಗೆಯಿಂದ ಮೇಲೆದ್ದ  ರವಿಶಂಕರನಿಗೆ ಅಂಥ ಸಿಹಿ ಸುದ್ದಿಯೇನೂ ಇರಲಿಲ್ಲ.  ಬದಲಾಗಿ  ಆ ಅಸಾಮಿ ಬಿಸಿಬಿಸಿ ಉಪ್ಪಿಟ್ಟು ಮಾಡಿಟ್ಟುಕೊಂಡು ಇವನಿಗಾಗಿ ಕಾಯುತ್ತಿದ್ದ. ಮತ್ತು ಆಫೀಸಿಗೆ ಲಂಚ್‌ಬಾಕ್ಸ್ ಕೂಡ ತಯಾರು ಮಾಡಿಟ್ಟಿದ್ದ. ‘Oh! It’s disgusting’ ಎಂದುಕೊಳ್ಳುತ್ತಾ ಬಾತ್‌ರೂಂಗೆ  ಹೋದ. ತಿಂಡಿ ತಿಂದು ತಯಾರಾಗಿ ಎಂದಿನಂತೆ ಆಫೀಸಿಗೆ ಹೊರಟವನು ಮತ್ತದೆ ವಾಕ್ಯ ಹೇಳಿದ ; ’ಸಂಜೆಯೊಳಗೆ ನೀನು ಇಲ್ಲಿಂದ ತೊಲಗಿರುತ್ತೀಯ ಎಂಬ ನಂಬಿಕೆಯಿಂದಲೇ ನಾನೀಗ ತೊಲಗುತ್ತಿದ್ದೇನೆ. ಹೋಗುವಾಗ ‘ಕೀ’ಯನ್ನು ಇಲ್ಲಿರುವ ‘ವೈಟ್‌ಶೂ ‘ ನಲ್ಲಿಟ್ಟು ಹೋಗು. ನನಗೆ ನಿನ್ನ ಪುರಾಣಗಳೇನೂ ಬೇಡ’ ಅಪ್ಪಿ ತಪ್ಪಿಯೂ ಓನರ್ ಮಗಳ ಕಣ್ಣಿಗೆ ಬೀಳಬೇಡ.  ಅವಳೊಬ್ಬ  ವಾಚಾಳಿ. ಎಲ್ಲವನ್ನು ಅವರಮ್ಮನಿಗೆ ಒದರಿ ಬಿಡುತ್ತಾಳೆ’ ಎಂದು ಹೇಳಿ ಓನರ್ ಮನೆಯವರೂ ಇಲ್ಲದಿರುವುದನ್ನು ಖಾತರಿಪಡಿಸಿಕೊಂಡೇ ಗೇಟ್ ದಾಟಿ ರಾಮಮಂದಿರದ ಬಳಿ ತನ್ನ ಆಫೀಸಿನ ಕ್ಯಾಬ್‌ಗಾಗಿ ಕಾಯುತ್ತ ನಿಂತ.

ಈ ಬಗ್ಗೆ ಆಫೀಸಿನಲ್ಲಿ ಯಾರ ಬಳಿಯಾದರೂ ಹೇಳಿಕೊಳ್ಳೋಣವೆನ್ನಿಸಿತು.  ಆದರೆ ಅದರಿಂದ ತಕ್ಷಣಕ್ಕೆ ಆಗುವ ಲಾಭಗಳೇನೂ ಇಲ್ಲ, ಬದಲಾಗಿ ತೊಂದರೆಗಳು ಉಂಟಾಗುವ ಸಾಧ್ಯತೆಗಳಿವೆ ಎಂದು ತಿಳಿದು ಸುಮ್ಮನಾದ.  ಆ ಇಡೀ ದಿನ  ಅವನಲ್ಲಿ ಗಾಢವಾಗಿ ಬೇರೂರಿದ್ದ ಪ್ರಶ್ನೆ ಒಂದೇ; ‘ ಆ ಆಸಾಮಿ ಇವತ್ತು ಮನೆಯಿಂದ ತೊಲಗಿರುತ್ತಾನಾ ?’ ತನ್ನ ಸಮಾಧಾನಕ್ಕಾಗಿ ‘ಹೌದು’ ಇವತ್ತು ನಾನು ಹೋಗುವಷ್ಟರಲ್ಲಿ ಆತ ಮನೆಯಿಂದ ಹೋಗಿರುತ್ತಾನೆ ‘ ಎಂದು  ಪದೇ ಪದೇ ಹೇಳಿಕೊಂಡ.

ಆ ಆಸಾಮಿ ಹೀಗೆ ಅನಿರೀಕ್ಷಿತವಾಗಿ ಬಂದಿರುವ ಬಗ್ಗೆ ತನ್ನಲ್ಲಿರುವ  ಗೊಂದಲಗಳನ್ನು ನಿವಾರಿಸಿಕೊಳ್ಳಲು ಮತ್ತಷ್ಟು ಪ್ರಶ್ನೆಗಳನ್ನು ಹಾಕಿಕೊಳ್ಳತೊಡಗಿದ.  ‘ಇವನು ಯಾರಿರಬಹುದು?’ ‘ನಮ್ಮ ದೂರದ ಸಂಬಂಧಿ ಯಾರಾದರೂ ಇರಬಹುದಾ ? ‘ ಮುಜ್‌ಸೇ ಶಾದಿ ಕರೋಗಿ ಸಿನಿಮೆ ಥರ ಯಾರಾದ್ರೂ ನನ್ನನ್ನು ಕಾಡಿಸಲಿಕ್ಕೆ ಅಂಥ ಕಳಿಸಿರಬೋದಾ? ‘ಅವನು ಒಂದೂ ಮಾತಾಡಲಿಲ್ಲವಲ್ಲ?  ನಿಜಕ್ಕೂ ಆತ ಮೂಗನೋ ಅಥವಾ ಮೂಗನಂತೆ ಬೇಕಂತಲೇ ನಟಿಸುತ್ತಿದ್ದಾನೆಯೋ? ‘ ‘ ಬೇರೆ ಯಾವುದಾದರೂ ರಾಜ್ಯದಲ್ಲಿ ಕೊಲೆ, ದರೋಡೆ, ಏನಾದರೂ ಮಾಡಿ ತಲೆ ಮರೆಸಿಕೊಂಡು ಇಲ್ಲಿ ಬಂದಿದ್ದಾನೋ ಹೇಗೆ ? ‘ ಕಳ್ಳನಿರಬಹುದೇ ? ‘ ‘ರೇಪಿಸ್ಟ್ ಆಗಿದ್ದರೆ ಏನು ಗತಿ ?

ದೇವರೇನಾದರೂ  ನನ್ನನ್ನು ಪರೀಕ್ಷಿಸಲು ಹೀಗೆ ಬಂದಿರಬಹುದೆ ? ‘ ಈ ಮನೆಯಲ್ಲಿ ಹಿಂದೆ ಯಾರಾದರೂ ಸತ್ತಿದ್ದರೋ ಏನೋ? ಅವರೇನಾದರೂ ಪ್ರೇತವಾಗಿ ಹೀಗೆ ಬಂದಿರಬಹುದೆ ?’ ಎಂದು ನಾನಾ ರೀತಿಯ ಸಾಧ್ಯತೆಗಳನ್ನು ಯೋಚಿಸತೊಡಗಿದ.  ಆ ದಿನ ಕ್ಯಾಬ್‌ನಲ್ಲಿ ಬರುವಾಗ ಇಂಥ ಹತ್ತಾರು ಪ್ರಶ್ನೆಗಳು ಅವನ ತಲೆ ಕೊರೆದು ಬಿಟ್ಟವು.  ಕ್ಯಾಬ್ ಇಳಿದವನು ಆತಂಕ ಮತ್ತು ಮಹಾದಾಸೆಯಿಂದಲೇ ಮನೆ ಕಡೆ ಭಾರವಾದ ಹೆಜ್ಜೆಗಳನ್ನಿಟ್ಟ.  ಇಲ್ಲ ಸುತಾರಾಂ ಅಲ್ಲಿ ಯಾವುದೇ ಬದಲಾವಣೆಗಳಾಗಿರಲಿಲ್ಲ.  ಹಿಂದಿನ ದಿನದಂತೆಯೇ ಆತ ಕಾಫಿ ಮಾಡಿಟ್ಟುಕೊಂಸು ಸ್ನ್ಯಾಕ್ಸ್ ಜೊತೆ ತಯಾರಾಗಿ ಕಾಯುತ್ತ ಕುಳಿತಿದ್ದ.  ರವಿಶಂಕರನಿಗೆ ‘ಇದು ತೊಲಗೋ ಆಸಾಮಿ ಅಲ್ಲ ಇರ್ಬೇಕು’ ಎಂಬುದು ಖಾತರಿಯಾದಂತಾಯ್ತು.  ಸಿಟ್ಟು ನೆತ್ತಿಗೇರಿತ್ತು. ಆದರೆ  ಕೂಗಾಡಿ, ರೇಗಾಡಿ ಏನು ಮಾಡುವಂತಿರಲಿಲ್ಲ.  ಇವತ್ತು ಸಂಜೆ ವಾಕಿಂಗ್ ಕೂಡ ಅವನಿಗೆ ಬೇಡವೆನ್ನಿಸಿತು. ಹಾಗಾಗಿ ಸಣ್ಣದೊಂದು ನಿದ್ದೆ ಮಾಡೋಣ ಎಂದು ಮಲಗಿದ.  ರಾತ್ರಿ ಎಂಟು ಗಂಟೆ ಸುಮಾರಿಗೆ ಎದ್ದ. ಹಿಂದಿನ ದಿನದಂತೆಯೇ ಊಟ ತಯಾರಾಗಿತ್ತು.

ಇದೊಂಥರ ಸಂಕಟದ ಸ್ಥಿತಿ ಅವನನ್ನು ಬೈದು ಆಚೆ ಹಾಕೋಣವೆಂದರೆ ಆತನ ವಿನಮ್ರತೆ ಅಡ್ಡಿಯಾಗಿತ್ತು.  ಆದರೆ ತಾನು ಯಾರೆಂದು ಹೇಳಲು ಆ ಆಗುಂತಕ ಸಿದ್ಧನಿರಲಿಲ್ಲ.  ಜೊತೆಯಲ್ಲಿ ಊಟಕ್ಕೆ ಕರೆದರೂ ಆತ ಬರಲು  ಒಪ್ಪುತ್ತಿಲ್ಲ ಸರಿ ಎಂದುಕೊಂಡು ತಾನು ಊಟ ಮಾಡಿ ಮಲಗುವ ಕೋಣೆಗೆ ಹೋಗುವ ಮುನ್ನ ಮತ್ತೊಮ್ಮೆ ಪ್ರೀತಿಯಿಂದ  ಕೇಳಿದ.  “ದಯವಿಟ್ಟು ನೀನ್ಯಾರೆಂದು ಹೇಳು? ಏನು ಸಂಬಂಧ ನನಗೂ ನಿನಗೂ ? ಯಾಕೆ ಹೀಗೆ ನನ್ನ ಸೇವೆ ಮಾಡುತ್ತಿರುವೆ? In fact ಇದು ನನಗೆ ಸಂಕಟವೆನಿಸುತ್ತಿದೆ.” ಆತ ಏನೊಂದು ಮಾತನಾಡದೆ ತನ್ನ ಚಾಪೆ ಮತ್ತು ದಿಂಬುಗಳನ್ನು ಹಾಲ್‌ಗೆ ತಂದಿಟ್ಟುಕೊಂಡು ರವಿಶಂಕರನ ನಿರ್ಗಮನಕ್ಕಾಗಿ ಕಾಯತೊಡಗಿದ.  ‘ಎಂಥ ಮೊಂಡನಿವನು ? ಎಷ್ಟು ಕಾಳಜಿಯಿಟ್ಟು ಕೇಳಿದರೂ ಮತಾಡಲ್ಲ  ಅಂತಾನಲ್ಲ?’ ಎಂದು ಗೊಣಗಿಕೊಂಡು ರವಿಶಂಕರ ಮಲಗಲು ಹೋದ.

ಅನಂತರ ಈ ಬೆಳಿಗ್ಗೆ ಮತ್ತು ಸಂಜೆಯ ಈ ನಾಟಕೀಯ ಘಟನೆಗಳು ಪ್ರತಿದಿನ ಯಥಾ ಪ್ರಕಾರ ನಡೆಯುತ್ತಲೇ ಇದ್ದವು.  ಸುಮಾರು ಮೂರು ತಿಂಗಳವರೆಗೆ ಇದು ಹೀಗೆ ಆಯಿತು.  ಮೊದ ಮೊದಲು ಗಲಿಬಿಲಿಗೊಂಡು,ಸಿಟ್ಟಾಗುತ್ತಿದ್ದ ರವಿಶಂಕರ ಈಗೀಗ ಅವನ ಬಗ್ಗೆ ತಲೆ ಕೆಡಿಸಿಕೊಳ್ಳುವುದನ್ನೇ ಬಿಟ್ಟಿದ್ದ. ಹೇಗೋ ತನಗೊಬ್ಬ ಪುಕ್ಕಟೆ ‘ಹೌಸ್ ಸರ್ವೆಂಟ್’ ಸಿಕ್ಕಂತಾಯಿತು ಎಂದುಕೊಂಡು ನಡೆದಷ್ಟು ದಿನ ಹೀಗೆ ನಡೆಯಲಿ ಬಿಡಿ, ಅವನಾಗೇ ಹೋದಾಗ ಹೋಗಲಿ ಎಂಬ ನಿರ್ಧಾರಕ್ಕೆ ಬಂದು ಬಿಟ್ಟ.

ಆ ಆಸಾಮಿಯ ವರ್ತನೆಯಲ್ಲಿ ಮಾತ್ರ ಕೊಂಚವೂ ಬದಲಾವಣೆ ಬರಲೇ ಇಲ್ಲ. ಪ್ರತಿ ವೀಕೆಂಡ್‌ಗಳಲ್ಲಿ ರವಿಶಂಕರ ಊರಿಗೆ ಹೋಗಿಬಿಡುತ್ತಿದ್ದನಾದ್ದರಿಂದ ಆ ಆಸಾಮಿ ಹಗಲಿಡೀ ಅದೇನು ಮಾಡುತ್ತಾನೆ ? ಎಲ್ಲಿರುತ್ತಾನೆ ಓದುತ್ತಿದ್ದಾನಾ ? ಕೆಲಸಕ್ಕೇನಾದರೂ ಹೋಗುತ್ತಾನಾ ಎಂಬ ಸುಳಿವನ್ನು ಪತ್ತೆ ಹಚ್ಚಲು ಸಾಧ್ಯವಾಗಲೇ ಇಲ್ಲ.  ಈಗೀಗ ರವಿಶಂಕರನಿಗೂ ಅದರ ಅವಶ್ಯಕತೆ ಇಲ್ಲ ಅನ್ನಿಸತೊಡಗಿತು.

ಹೀಗೆ ಒಂದಾರು ತಿಂಗಳು ನಡೆಯಿತು.  ಗ್ರೌಂಡ್ ಪ್ಲೊರ್‌ನ ಮನೆಯಾದ್ದರಿಂದ ಒಬ್ಬ ಆಗುಂತಕ ಅಸಾಮಿ ಆರು ತಿಂಗಳಿನವರೆಗೆ ಕಣ್ಣಾಮುಚ್ಚಾಲೆ ಆಟ ಆಡುತ್ತ  ಓನರ್ ಮನೆಯವರಿಗೆ ಯಾವುದೇ ಸಣ್ಣ  ಸುಳಿವು ಸಿಗದಂತೆ ಅಡಗಿಕೊಂಡಿರುವುದು ಕಷ್ಟವೇನಾಗಿರಲಿಲ್ಲ.  ಆದರೆ ರವಿಶಂಕರನಿಗೆ ಮಾತ್ರ ಆತನನ್ನು ಮನೆಯಿಂದ ಹೊರಹಾಕುವ ಉದ್ದೇಶ ಇನ್ನೂ ಇತ್ತು.  ಹಾಗಾಗಿ ಆರನೆಯ ತಿಂಗಳ ಒಂದನೇ ತಾರೀಖಿನ ಬೆಳಿಗ್ಗೆ ಆ ಆಗುಂತಕ ಮಾಡಿಕೊಟ್ಟ ತಿಂಡಿ ತಿನ್ನುತ್ತಲೇ ಕೊಂಚ ಒರಟಾಗಿಯೇ ಕೇಳಿದ’ “ ಇಲ್ಲಿ ಬಿಟ್ಟಿ ಇರರ‍್ಗೆಲ್ಲ ನಾನೊಬ್ಬನೇ ಮನೆ ಬಾಡಿಗೆ ಕೊಡೋಕಾಗಲ್ಲ.  ಎಂಟು ಸಾವಿರ ಬಾಡಿಗೇಲಿ, ನೀನು ಇರೋದಾದ್ರೆ ನಾಲ್ಕು ಸಾವಿರ ಕೊಡಬೇಕು. ಇಲ್ಲಾ ಅಂದ್ರೆ ರ‍್ಯಾದೆಯಿಂದ  ಇವತ್ತು ಸಂಜೆ ನಾನು ಬರೋ ಹತ್ತಿಗೆ ಮುಖ ತೋರಿಸ್ದಂತೆ ತೊಲಗು. ಬಿಟ್ಟಿ ತಿನ್ಕಂಡು ಇರೋಕೆ  ನೀನೇನು ಅಂಗವಿಕಲನಾ ? ದಡಿಯಾ ಥರ ಬೆಳೆದಿದ್ದೀಯ’ ಎಂದು ಸಿಟ್ಟಿನಿಂದಲೇ ಹೇಳಿ ಆಫೀಸಿಗೆ ಹೋದ.

ಆ ದಿನ ಸಂಜೆ ರವಿಶಂಕರ ಮನೆಗೆ ಬಂದಾಗ ಟಿ.ವಿ. ಸ್ಟ್ಯಾಂಡ್ ಮೇಲೆ ಆ ಅಸಾಮಿ ಮೂವತ್ತಮೂರು ಸಾವಿರ ರೂಪಾಯಿಗಳನ್ನು ಇಟ್ಟು  ಸಣ್ಣದೊಂದು ಚೀಟಿ ಇಟ್ಟು, ಅದರಲ್ಲಿ ಹೀಗೆ ಬರೆದಿಟ್ಟು,  ಹೋಂ ವರ್ಕ್ ಮಾಡಿಟ್ಟ ವಿದ್ಯಾರ್ಥಿ ಟೀಚರ್ ಮುಂದೆ ನಿಲ್ಲುವಂತೆ ನಿಂತಿದ್ದ .

ಆರು ತಿಂಗಳ ಬಾಡಿಗೆ- 24 ಸಾವಿರ

ಕಿರಾಣಿ ಸಾಮಾನಿನ ಬಾಬ್ತು-  9 ಸಾವಿರ ( ತಿಂಗಳಿಗೆ ಒಂದೂವರೆ ಸಾವಿರದಂತೆ )

ಒಟ್ಟು – 33 ಸಾವಿರ

ರವಿಶಂಕರನಿಗೆ ಮಾತೇ ಬರಲಿಲ್ಲ.  ಅಲ್ಲದೆ ಆ ದುಡ್ಡನ್ನು ಆತ ತೆಗೆದುಕೊಳ್ಳಲೂ ಇಲ್ಲ.

******

ಆರು ತಿಂಗಳ ಬಳಿಕ ಮತ್ತೆ ರವಿಶಂಕರನಿಗೆ ಈ ಆಗುಂತಕನ ವಿಚಾರ ತಲೆಬಿಸಿಯಾಗಲು ಕಾರಣವಾಯಿತು. ಅಷ್ಟೊಂದು ದುಡ್ಡನ್ನು ಒಂದೇ ದಿನದಲ್ಲಿ ಆತ ಹೇಗೆ ತಂದ ? ಅವನ ಬಳಿ ಒಂದು ಸಣ್ಣ ಬಟ್ಟೆ ಬ್ಯಾಗ್ ಬಿಟ್ಟರೆ ಇನ್ನೇನು ಇಲ್ಲ. ಹಾಗಾದರೆ  ಇದೆಲ್ಲ ಹೇಗೆ ಸಾಧ್ಯ ? ಎಂದು ಚಿಂತಿತನಾದ ರವಿಶಂಕರ.

**********

ಈ ಕತೆಯನ್ನು ಮುಂದುವರಿಸುವ ಮುನ್ನ  ನೀವು ನನಗೊಂದು ನಿಮಿಷ ನಿಮ್ಮ ಸಮಯ ಕೊಡಿ.ಇಲ್ಲಿಂದ ಈ ಕತೆ ಏನಾಗಿರುಬಹುದು ? ಎಂಬುದಕ್ಕೆ ನನಗೆ ತತ್‌ಕ್ಷಣಕ್ಕೆ ಮೂರು ರೀತಿಯ ಅಂತ್ಯಗಳು ಕಾಣಹತ್ತಿವೆ. ಅವು ಮೂರನ್ನು ನಿಮ್ಮ ಮುಂದಿಡುತ್ತೇನೆ. ಯಾವುದು ನಿಮಗೆ ಸೂಕ್ತವೆನ್ನಿಸುತ್ತದೆಯೋ ಅದನ್ನು ನೀವು ರಿಲೇಟ್ ಮಾಡಿಕೊಳ್ಳಬಹುದು.  ಅಲ್ಲದೇ ನಿಮ್ಮದೇ ಬೇರೆ ‘ಅಂತ್ಯ’ವಿದ್ದರೆ ಅದು ಇನ್ನೂ ಒಳ್ಳೆಯದು.

*****

ಅದು ಹೀಗಾಗಿರಬಹುದು :

ಈ ಆರು ತಿಂಗಳಲ್ಲಿ ಒಂದು ದಿನವೂ ಅವನಿಂದ ನನಗೆ ತೊಂದರೆಯಾಗಿಲ್ಲ. ಎಷ್ಟು ಸಭ್ಯನಂತೆ ವರ್ತಿಸಿದ್ದಾನೆ.  ತಾಯಿಯಂತೆ ನನ್ನ ಮನೆಗೆಲಸ ಮಾಡಿಟ್ಟಿದ್ದಾನೆ.  ನನ್ನನ್ನು ನೋಡಿಕೊಂಡಿದ್ದಾನೆ. ಇನ್ನೂ  ಅವನನ್ನು ಮನೆಯಿಂದ ಹೊರ ಹಾಕುವ ಆಲೋಚನೆ ಬೇಡವೇ ಬೇಡ.  ಓನರ್ ಅಂಕಲ್

ಬಳಿ ಮಾತಾಡಿ ಇವನು ನನ್ನ ಸ್ನೇಹಿತ ಅಂತ ಹೇಳಿ ಹೊಸದಾಗಿ ಮನೆಗೆ ಸೇರಿಸಿಕೊಂಡರಾಯ್ತು’ ಎಂದು ಯೋಚಿಸಿದ.  ರವಿಶಂಕರ ಆಫೀಸಿನಿಂದ ಬರುವಾಗ ಮೆಜೆಸ್ಟಿಕ್‌ನಲ್ಲಿ ಮೇಗಾಮಾರ್ಟ್ ಗೆ ಹೋಗಿ ಆ ಆಸಾಮಿಗೆಂದು ಒಂದು ಜೊತೆ ಬಟ್ಟೆ ಕೊಂಡ. ಈ ಆರು ತಿಂಗಳಲ್ಲಿ ಅವನು ಹಾಕಿದ್ದು ಕೇವಲ ಎರಡೇ  ಶರ್ಟುಗಳಾಗಿದ್ದವು.  ಹಾಗಾಗಿ ಅವನಿಗಾಗಿ ಒಂದು ಜೊತೆ ಬಟ್ಟೆ ಖರೀದಿಸಿ ರಾಮ ಮಂದಿರದ ಬಳಿಯಿರುವ ‘ದೋಸೆ ಕೆಂಪ್’ನಲ್ಲಿ ಎರಡು ‘ಮಸಾಲೆ ದೊಸೆ ಪಾರ್ಸಲ್ ಮಾಡಿಸಿಕೊಂಡು ಖುಷಿ ಖುಷಿಯಿಂದ ಮನೆಗೆ ಬಂದ.  ನಿಧಾನಕ್ಕೆ ಬಾಗಿಲು ಕಡೆ ಕಣ್ಣಾಡಿಸಿದ.  ಇತ್ತೀಚಿನ ದಿನಗಳಲ್ಲಿ ಅವನು ಮತ್ತೊಂದು ಕೀಯನ್ನು  ತನ್ನ ಬಳಿ ಇಟ್ಟುಕೊಳ್ಳುತ್ತಲೇ ಇರಲಿಲ್ಲ.  ಅದಕ್ಕೆ ಕಾರಣ ನಿಮಗೆ ಗೊತ್ತೇ ಇದೆ.  ‘ವೈಟ್ ಶೂ’ ನಲ್ಲಿ ‘ಕೀ’ ಇತ್ತು.  ಕೀ  ತೆಗೆದುಕೊಂಡು ಬಾಗಿಲು ತೆರೆದ. ಕಾಫಿ ಮಾಡುವ ಪಾತ್ರೆ ಸ್ಟ್ಯಾಂಡಿನಲ್ಲೆ ಇತ್ತು.  ಟಿ.ವಿ. ಸ್ಟ್ಯಾಂಡಿನ ಮೇಲೆ ಹಣ ಮತ್ತು ಚೀಟಿ ಇತ್ತು.  ಆದರೆ ಹಾಲ್‌ನಲ್ಲಿ ಅ ಆಸಾಮಿ ಇರಲಿಲ್ಲ.  ರವಿಶಂಕರ ಮೆಗಾ ಮಾರ್ಟ್ ಕವರನಲ್ಲಿದ್ದ ಹೊಸ ಬಟ್ಟೆಯನ್ನೊಮ್ಮೆ ನೋಡಿದ. ಎರಡರಲ್ಲಿ ಒಂದು ಮಸಾಲೆ ದೋಸೆಯನ್ನು ಮಾತ್ರ ತಿಂದ.

ಆರು ತಿಂಗಳು ಕಾಲ ‘ಯಾಕೆ ಇಲ್ಲಿಗೆ ಬಂದಿದ್ದೀಯಾ?’ ಎಂಬ ಪ್ರಶ್ನೆಗೆ ಉತ್ತರಿಸದಿದ್ದವನು ಈಗ “ಯಾಕೆ ಇಲ್ಲಿಂದ ಹೇಳದೇ ಕೇಳದೇ ಹೋದೆ?’ ಎಂಬ ಪ್ರಶ್ನೆ ಉಳಿಸಿ ಹೋದನಲ್ಲ ಎಂದುಕೊಂಡು ರವಿಶಂಕರ ಭಾವುಕನಾದ. ಮತ್ತೇನಾದರೂ ಆ ಆಸಾಮಿ ಬರುತ್ತಾನಾ ಎಂದು ಈಗಲೂ ‘ವೈಟ್ ಶೂ’ ನಲ್ಲಿಯೆ ಮನೆಯ ‘ಕೀ’ ಯನ್ನು ಇಟ್ಟು ಹೋಗುತ್ತಾನೆ.

****

ಅಥವಾ ಹೀಗೂ ಆಗಿರಬಹುದು

ಈಗಿನ ಕಾಲದಲ್ಲಿ ಇಂಥದ್ದನ್ನೆಲ್ಲ ಎಂಟರ್‌ಟೇನ್ ಮಾಡಿದರೆ ಸುಖಾ ಸುಮ್ಮನೆ ನಾವು ಸಿಕ್ಕಿಕೊಳ್ಳಬೇಕಾಗುತ್ತದೆ ಎಂದು ಆಲೋಚಿಸಿ ಇವತ್ತು ಏನಾದರೂ ಆಗಲಿ ಪೊಲೀಸ್‌ಗೆ ವಿಷಯ ತಿಳಿಸಿಬಿಡೋಣ ಎಂದು ರಾಜಾಜಿನಗರ ಸ್ಟೇಷನ್ನಿಗೆ  ಹೋದ.  ನಡೆದ ವೃತ್ತಾಂತವನ್ನೆಲ್ಲ ವಿವರಿಸಿದ.  ಎಲ್ಲವನ್ನು ಕೇಳಿಸಿಕೊಂಡ ಮೇಲೆ ಕಂಪ್ಲೆಂಟ್ ಕೊಡುವಂತೆ ಹೇಳಿದ ಸಬ್ ಇನ್ಸ್ಪೆಕ್ಟರ್ ಎಂ.ಕೆ ಬಷೀರ್. ‘ನಡೀರಿ ಅವನ್ಯಾರು ನೋಡೋಣ.  ಈ ಬೈಕ್ ಕಳ್ಳತನ ಕೇಸಲ್ಲಿ ತಲೆ ಮರೆಸಿಕೊಂಡಿರರ‍್ನ ಚೆನ್ನೈ, ಮಧುರೈ, ತಿರುಚಿ ತನಕ ಹೋಗಿ ಹಿಡ್ಕೊಂಡ್ ಬಂದಿದೀವಿ ಎಷ್ಟೋ ಸರಿ. ಇವನು ಅಂತವನೇ ಯಾರೋ ಇರಬಹುದು ಎಂದು ಅವರದೇ ಜೀಪ್‌ನಲ್ಲಿ ಹತ್ತಿಸಿಕೊಂಡು ಹೊರಟರು.  ‘ಇವತ್ತಾದರೂ ಈ ಸಮಸ್ಯೆಗೆ ಮುಕ್ತಿ ಸಿಗುತ್ತದಲ್ಲ’ ಎಂದು ಕೊಳ್ಳುತ್ತ ರವಿಶಂಕರ ಯೋಚಿಸುತ್ತಿರುವಾಗಲೇ 54ನೇ ಕ್ರಾಸ್‌ನ ಡೋರ್. ನಂ.188/7ರ ಮುಂದೆ ಜೀಪ್ ನಿಂತಿತ್ತು.  ಅವಸರದಲ್ಲಿ ಇಳಿದು ಹೋಗಿ ಮನೆಯ ಬಾಗಿಲು ತಳ್ಳಿದ.  ಕಾಫಿ ಪಾತ್ರ ಸ್ಟಾಂಡಿನಲ್ಲೆ ಇತ್ತು. ಟಿ.ವಿ. ಸ್ಟ್ಯಾಂಡಿನ ಮೇಲೆ ದುಡ್ಡು, ಚೀಟಿ ಹಾಗೇ ಇತ್ತು.  ಚಾಪೆಯ ಮೇಲೆ  ಮಲಗಿದ ಆ ಆಸಾಮಿಯ ದೇಹ ತಣ್ಣಗಾಗಿತ್ತು.  ಉಸಿರು ನಿಂತಿತ್ತು.  ರವಿಶಂಕರನ ಮೈ ಬೆವರುತ್ತಿತ್ತು.  ತಡಬಡಾಯಿಸತೊಡಗಿದ. ‘ಇವ್ನೆ ಸರ್, ಆರು ತಿಂಗಳಿಂದ ಇದ್ದ, ಒಂದೂ ಮಾತಾಡ್ತಿರಲಿಲ್ಲ.  ಏನೂ ಹೇಳ್ಕೊಂಡಿರಲಿಲ್ಲ ಸರ್.  ಈಗ ನೋಡಿದ್ರೆ ಸತ್ ಬಿದ್ದಿದ್ದಾನೆ ನೋಡಿ ಸರ್. ಎಂದು ಮುಗಿಸುವಷ್ಟರಲ್ಲಿ ಸಬ್‌ಇನ್ಸ್ಪೆಕ್ಟರ್ ಬಷೀರ್ ಟಿ.ವಿ. ಸ್ಟ್ಯಾಂಡಿನಲ್ಲಿದ್ದ ಚೀಟಿಯತ್ತ ಕಣ್ಣಾಡಿಸಿದರು.  ಒಟ್ಟು ಮೂವತ್ತಮೂರು ಸಾವಿರ ಎಂದು ಬರೆದಿದ್ದ ಚೀಟಿಯೇ ಅದು ಅದರಲ್ಲಿ  ಮತ್ತೊಂದು ಸಾಲು ಬರೆದಿತ್ತು.

ಅದನ್ನು ಬಷೀರ್ ಓದಿದರು: “ ನನ್ನ ಸಾವಿಗೆ ರವಿಶಂಕರನೇ ಕಾರಣ” ‘ ಹೇ ಕಾನ್‌ಸ್ಟೆಬಲ್ ಇವ್ರನ್ನು ಕಸ್ಟಡಿಗೆ ತಗೊಳ್ರಿ ಹಾಗೆ ಸ್ಟೇಷನ್ನಿಗೆ ಪಂಚನಾಮೆ ಮಾಡ್ಲಿಕ್ಕೆ ಬರೋಕ್ ಕಾಲ್  ಮಾಡಿ ಹೇಳಿ” ಎಂದು  ಗಡಸು ಧ್ವನಿಯಲ್ಲಿ ಆರ್ಡರ್ ಮಾಡಿದರು.

‘ಸಾರ್ ನನ್ನ ಮಾತು ಕೇಳಿ ಸಾರ್, ಇದು ಅನ್ಯಾಯ’ ಎಂದ ರವಿಶಂಕರ. ಅದಕ್ಕೆ “ ನೀವು ಏನೇ ಹೇಳೋದಿದ್ರೂ ಅದನ್ನು  ಕೋರ್ಟ್ನಲ್ಲಿ ಹೇಳ್ರಿ. ಈಗ ಸ್ಟೇಷನ್ನಿಗೆ ನಡೀರಿ’ ಎಂದು ದಬಾಯಿಸಿದರು ಬಷೀರ್.

ತನಗೆ ಸಂಬಂಧವೇ ಇಲ್ಲದ, ಒಂದೂ ಮಾತನಾಡದ, ದ್ವೇಷ, ಅಸೂಯೆ, ಪ್ರೀತಿಯಂತಹ ಯಾವ ಭಾವನೆಗಳನ್ನು ಹಂಚಿಕೊಳ್ಳದ ಆ ಆಗುಂತಕನೊಬ್ಬನ ಕೊಲೆ ಕೇಸಿನಲ್ಲಿ ರವಿಶಂಕರ ವೃತಾ ಈಗಲೂ ಕೋರ್ಟಿಗೆ ಅಲೆಯುತ್ತಿದ್ದಾನೆ.

******

 

3. ಆದರದು ಹೀಗೇ ಆಗಿರುತ್ತದೆ :

ಈ ಮನುಷ್ಯನ ಹಕೀಕತ್ತು ಏನಿರಬಹುದು? ಕೇಳಿದಾಕ್ಷಣ  ಅಷ್ಟು ದುಡ್ಡು ಕೊಟ್ಟುಬಿಟ್ಟನಲ್ಲ ಹೇಗೆ? ಇವನಿಗೆ ಯಾರದ್ದಾದರೂ ಲಿಂಕ್ ಇರಬಹುದೇ? ಎಂದೆಲ್ಲಾ ಯೋಚಿಸುತ್ತಿದ್ದ. ರವಿಶಂಕರನಿಗೆ ಯಾಕೋ ಆ ದಿನ ಆಫೀಸಿನಲ್ಲಿ ಕೆಲಸ ಮಾಡಲಾಗಲಿಲ್ಲ.  ಮ್ಯಾನೇಜರ್‌ಗೆ ಹೇಳಿ ಹಾಫ್ ಡೇ ಲೀವ್ ಪಡೆದು ಮಧ್ಯಾಹ್ನಕ್ಕೆ ಮನೆಗೆ ಬಂದ.

‘ವೈಟ್ ಶೂ’ ನಲ್ಲಿ ಕೀ ಇರಲಿಲ್ಲ. ಆದರೆ ಮನೆಯ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು.   ಒಳಗೆ ಇಬ್ಬರು ವ್ಯಕ್ತಿಗಳು ‘ಸಣ್ಣ ದನಿಯಲ್ಲಿ ಮಾತಾಡುತ್ತಿದ್ದಂತೆ ಬಾಸವಾಯಿತು.  ಅಡುಗೆಮನೆಯಲ್ಲಿದ್ದ ವೆಂಟಿಲೇಷನ್ ಮೂಲಕ ಇಣುಕಿದ ರವಿಶಂಕರನಿಗೆ ಕಾಣಿಸಿದ್ದೇನು ಗೊತ್ತೆ ?

ಆ ಆಗುಂತಕ ಆಸಾಮಿಯ ಬಾಹುಗಳಲ್ಲಿ ಮನೆ ಓನರ್ ಮಗಳು ಮಾನಸಿ ಬಂಧಿಯಾಗಿದ್ದಳು.  ಆತ ಆಕೆಯ ತಲೆ ನೇವರಿಸುತ್ತಾ ಹೇಳುತ್ತಿದ್ದ ,’ಇನ್ನೂ ಎಷ್ಟು ದಿನ ಅಂತ ಹೀಗೆ ಕಳ್ಳಾಟವಾಡಲು ಸಾಧ್ಯ? ನಿಮ್ಮ ಮನೆಯವರಿಗೆ ಗೊತ್ತಾದರೆ ?”. ಅದಕ್ಕೆ ಮಾನಸಿ ಹೇಳಿದಳು: “ ಸಧ್ಯಕ್ಕೇನೂ ತೊಂದರೆ ಇಲ್ಲ ತಾನೆ ? ಹೇಗೋ ಆ ರವಿಶಂಕರ ಪಾಪದೋನು. ನಿನ್ನನ್ನು ನಂಬೇ ಬಿಟ್ಟಿದ್ದಾನೆ. ಹೀಗೆ ಮಜಾ ಮಾಡ್ಕೊಂಡು ಇರೋಣ.  ಅಪ್ಪ ಅಮ್ಮನಿಗೆ ಇನ್ನೂ ಒಂದು ಸಣ್ಣ ಕ್ಲೂ ನು ಸಿಕ್ಕಿಲ್ಲ.  ಹಾಗಾಗಿ ನಾವು ಹಾಯಾಗಿರಬಹುದು”.

“ಆಯ್ತು ಹನಿ. ಬಾಯ್.ಈಗ ಹೋಗು ಇಲ್ಲಿಂದ. ನಿಮ್ಮ ಅಮ್ಮ ಬರೋ ಟೈಮಾಯ್ತಲ್ಲ ಹೋಗು ಮತ್ತೆ ಸಮಯ ನೋಡ್ಕೋಂಡ್ ಸಿಗೋಣ ” ಎಂದು ಅವಳ ತುಟಿಗೆ ಚುಂಬಿಸಿದ.  ರವಿಶಂಕರ ಇನ್ನೇನು ಅವಳು ಹೊರಹೋಗಬೇಕೆನ್ನುವಷ್ಟರಲ್ಲಿ ಈತ ಗೇಟಿನಿಂದ ಹೊರಬಿದ್ದು ಪಾರ್ಕ್ ಗೆ ಹೋಗಿ ಕೂತ. ಸುದೀರ್ಘವಾಗಿ ಆಲೋಚಿಸಿದ.  ಸಂಜೆ ಮಾಮೂಲಿನ ಸಮಯಕ್ಕೆ ಮನೆಗೆ ಬಂದ. ಆಗ ಎಲ್ಲವೂ ಈ ಆರು ತಿಂಗಳು ಸಂಜೆ ಹೇಗೆ ನಡೆಯುತ್ತಿತ್ತೋ ಹಾಗೆಯೇ ನಡೆಯಿತು.

ಆ ದಿನ ಸಂಜೆ ಮನೆ ಓನರ್‌ನ ಭೇಟಿಯಾಗಿ, “ನನಗೆ ಹೈದ್ರಾಬಾದ್‌ಗೆ ಟ್ರಾನ್ಸಫರ್ ಆಗಿದೆ ಅಂಕಲ್ ಹಾಗಾಗಿ ಮನೆ ಖಾಲಿ ಮಾಡಬೇಕಿದೆ.  ನಿಮಗೆ ಅಭ್ಯಂತರವಿಲ್ಲದಿದ್ದರೆ ನನ್ನ ಗೆಳೆಯನೊಬ್ಬ

ಇದ್ದಾನೆ.   ಅವನಿಗೆ ಇಲ್ಲಿಗೆ ರಿಲೊಕೇಟ್ ಆಗಲಿಕ್ಕೆ ಹೇಳ್ತೀನಿ” ಅಂದ ರವಿಶಂಕರ. ಅದಕ್ಕೆ ಓನರ್, ‘ಬೇಡಪ್ಪ ನನ್ನ ಮಗಳ ಪ್ರೆಂಡ್ ಪರಿಚಯದವರಿಗ್ಯಾರಿಗೋ ಮನೆ ಬೇಕಂತೆ , ಆರು ತಿಂಗಳ ಹಿಂದೇನೇ ಹೇಳಿದ್ರು ಅಷ್ಟರಲ್ಲಿ ನೀನು ಬಂದುಬಿಟ್ಟಿದ್ದೆ.  ಹಾಗಗಿ ಕೊಡಲಿಕ್ಕೆ ಆಗಿರಲಿಲ್ಲ .ಈಗ ಅವಳಿಗೇ ಹೇಳ್ತಿನಿ ಬಿಡು” ಅಂದ್ರು.

ರವಿಶಂಕರನಿಗೆ ಎಲ್ಲವೂ ಅರ್ಥವಾಯಿತು.  ಆರು ತಿಂಗಳ ಆ ಆಗುಂತಕನ ರಹಸ್ಯ ಅರೆಕ್ಷಣದಲ್ಲಿ ಮನದಟ್ಟಾಯಿತು.  ಆ ತಿಂಗಳ ಮೂವತ್ತೊಂದರಂದು ರವಿಶಂಕರ ಮನೆ ಖಾಲಿ ಮಾಡಿದ. ಸೆಕೆಂಡ್ ಪ್ಲೊರ್‌ನಲ್ಲಿದ್ದ ‘ಮಾನಸಿ’ ತುದಿಗಾಲಲ್ಲಿ ನಿಂತಿದ್ದರೆ, ರವಿಶಂಕರನ ಲಗೇಜ್ ಗಾಡಿ ಅಲ್ಲಿಂದ ಹೋದದ್ದನ್ನು ಖಾತರಿಪಡಿಸಿಕೊಂಡ ಆ ಆಗುಂತಕ ಬಾಡಿಗೆ ಮನೆ  ಕೇಳುವ ನೆಪದಲ್ಲಿ ಬಂದು “ಅಂಕಲ್ ಮಾನಸಿ ಹೇಳ್ತಿದ್ದಳು ಮನೆ ಖಾಲಿ ಆಗುತ್ತೆ ಅಂತ?” ಎನ್ನುತ್ತಿದ್ದಂತೆಯೇ ಓನರ್ ಅವನನ್ನು ಗೇಟಿನ ಒಳಗೆ ಕರೆದುಕೊಂಡು “ಹೂನಪ್ಪ, actually  ನಾವು ಬ್ಯಾಚುಲರ್‌ಗಳಿಗೆ ಮನೆ ಕೊಡಬಾರದು ಅನ್ಕೊಂಡಿದ್ವಿ. ಆದರೆ ಮಾನಸಿ ಪ್ರೆಂಡ್ ಅಂತ ಹೇಳಿ ಕೊಡ್ತಿವಷ್ಟೆ” ಅಂದರು.

ಅತ್ತ ಮಾನಸಿ ತನ್ನ ರೂಂಗೆ ಹೋಗಿ ಬಾಗಿಲು ಹಾಕಿಕೊಂಡು ಖುಷಿಯಿಂದ ಕುಣಿದು ಕುಪ್ಪಳಿಸಿದಳು…

 

**           **             **              **

ಇತ್ತ ರವಿಶಂಕರ ವಿಜಯನಗರದ ಮನುವನದ ಬಳಿಯಿರುವ ‘ಜೆಂಟ್ಸ್ ಪಿ.ಜಿ.’ ಗೆ ಹೋಗಿ ಸೇರಿಕೊಂಡ. ಆ ಪಿ.ಜಿ. ಯ ಊಟದ ಹಾಲ್ ನಲ್ಲಿ ಹೀಗೆ ಬರೆದಿತ್ತು :

“ಒಂದು ಮನೆ ಬಿಟ್ಟು ಹೋದವನು ಮತ್ತೊಂದು ಮನೆಗೇ ಹೋಗುತ್ತಾನೆ. ಏಕೆಂದರೆ ಮನುಷ್ಯ ಊರುಗಳಲ್ಲಿ ಬದುಕುವುದಿಲ್ಲ. ಮನೆಗಳಲ್ಲಿ ಬದುಕುತ್ತಾನೆ.”

 

 

1 comment

Leave a Reply