ಕತ್ತಲಲ್ಲಿ ಮಲಗಿದ್ದವರ ಮುಖಕ್ಕೆ  ಹೀಗೆ‌ ಲೈಟು ಬಿಟ್ಟರೆ..

ಬೆಳಕೆಂದರೆ ನಮಗಿಷ್ಟ

ಡಾ. ಅನಿಲ್ ಎಮ್ ಚಟ್ನಳ್ಳಿ

ಬೆಳಕೆಂದರೆ
ನಮಗೊಂಥರ ಅಲರ್ಜಿ
ಕಿರಿಕಿರಿ ಸಿಟ್ಟು ಸಿಡಿಮಿಡಿ

ಅದಕ್ಕೇ ಅಲ್ಲವೆ,
ಗೆಲಿಲಿಯೋನನ್ನು ಜೈಲಿಗೆ ತಳ್ಳಿದ್ದು
ಸುಕ್ರುತನಿಗೆ ವಿಷ ಉಣಿಸಿದ್ದು
ಗಾಂಧಿಗೆ ಗುಂಡು ಹೊಡೆದದ್ದು..
ಪಟ್ಟಿ ಹೀಗೇ ಬೆಳೆಯುತ್ತದೆ

ತಪ್ಪು ಅವರದೇ ಅಲ್ಲವೆ,
ಶತಮಾನಗಳ ಕಾಲ
ಕತ್ತಲಲ್ಲಿ ಸೊಂಪಾಗಿ
ಮಲಗಿದ್ದವರ ಮುಖಕ್ಕೆ
ಒಮ್ಮೆಲೆ ಹೀಗೆ‌ ಲೈಟು ಬಿಟ್ಟರೆ
ಕಣ್ಣಿಗೆ ಹಿಂಸೆ,
ತಲೆಕೆಡದೆ ಮತ್ತೇನು!


ನಮ್ಮ ಬಗ್ಗೆ ಗೊತ್ತಿದ್ದೂ
ಬೆಳಕಿನ ಬಗ್ಗೆ ಮಾತನಾಡುತ್ತಾರೆ
ಅದರ ಬೆನ್ನ ಬಿದ್ದು
ಬಲಿಯಾಗುತ್ತಾರೆ
ಕಲಬುರ್ಗಿ ಅಂಥವರು ,
ಪಟಾಕಿಯಂತೆ ಸಿಡಿದು
ನಮ್ಮ ನಿದ್ರೆಗೆ ಭಂಗ ತರುತ್ತಾರೆ
ನಾವು ಒಳಗೇ ಬೈದುಕೊಂಡು
ಮಲಗಿದ್ದಲ್ಲೆ ಮಗ್ಗಲು ಬದಲಿಸಿದರೆ
ಮತ್ತದೆ ಸುಖ‌ ನಿದ್ರೆ

ಬೆಳಕೆಂದರೆ ನಮಗಿಷ್ಟ
ದೀಪಾವಳಿಯ ದಿನ
ಹೆಚ್ಚೆಂದರೆ ಅದರಾಚೆ
ಎರಡು ದಿನ
ಮತ್ತ್ಯಾರೋ ದೀಪ
ಹಿಡಿದು ಕೊಂಡು ಬಂದರೋ
ಮತ್ತದೆ ಕಿರಿಕಿರಿ ಸಿಟ್ಟು ಸಿಡಿಮಿಡಿ.

4 comments

  1. ಬಹಳ ಚೆನ್ನಾಗಿದೆ. ತಮಸೋಮಾ ಜ್ಯೋತಿರ್ಗಮಯ ಎಂದು ಹೇಳುತ್ತೇವೆ.ಆದರೆ, ಜ್ಯೋತಿ ಎಂದರೆ ಕಿರಿಕಿರಿ.
    ಅಭಿನಂದನೆಗಳು.

  2. ಕವನ ಅರ್ಥಪೂರ್ಣವಾಗಿದೆ…ಹಾಗೂ ಪ್ರಸ್ತುತ…ಅಭಿನಂದನೆಗಳು….

  3. ನಿಮ್ಮೆಲ್ಲರ ಪ್ರೋತ್ಸಾಹದ ನುಡಿಗಳಿಗೆ ನಾನು ಆಭಾರಿ.

Leave a Reply