‘ಸ್ಮೋಕಿಂಗ್ ಝೋನ್’ – ಚಟವಿದ್ದವರಿಗಷ್ಟೇ ಇದರ ಗೊಡವೆ!

ಡಿ.ಎಸ್.ರಾಮಸ್ವಾಮಿ

ಎಚ್.ಎನ್.ಆರತಿ ದೂರದರ್ಶನದ “ಥಟ್ ಅಂತ ಹೇಳಿ” ಕಾರ್ಯಕ್ರಮದ ನಿರ್ಮಾಪಕರಾಗಿ ಬಹು ಜನ ಪ್ರಿಯ ಹೆಸರು. ಆಗೀಗ ಅವರು ಕವಿತೆಗಳನ್ನು ಪ್ರಕಟಿಸುತ್ತ ದೇಶ ವಿದೇಶ ಸುತ್ತುತ್ತಾ  ಪ್ರವಾಸೀ ಕಥನಗಳ ಮೂಲಕವೂ ಚಿರಪರಿಚಿತರಾದವರು. “ಓಕುಳಿ” ಸಂಕಲನ ಬಂದ ಸರಿಸುಮಾರು ಇಪ್ಪತ್ತು ವರ್ಷಗಳ ಮೇಲೆ ಅವರು ಈ ಸಂಕಲನ “ಸ್ಮೋಕಿಂಗ್ ಝೋನ್” ಮೂಲಕ ಕನ್ನಡದ ಸದ್ಯದ ಕಾವ್ಯದ ದಾರಿಗೆ ಹೊಸ ರೀತಿಯನ್ನು, ಅಭಿವ್ಯಕ್ತಿಗಿರುವ ಹಲವು ಅವಕಾಶಗಳನ್ನು ಹಾಗೇ ವರ್ತಮಾನದ ಬದುಕಿನ ತಲ್ಲಣಗಳನ್ನೇ ಕಾವ್ಯದ ಪ್ರತಿಮೆಯಾಗಿ, ರೂಪಕವಾಗಿ ಬಳಸಬಹುದಾದ ಅಪರಿಮಿತ ಸಾಧ್ಯತೆಯನ್ನೂ ಒಟ್ಟೊಟ್ಟಿಗೆ ಪೇರಿಸಿಟ್ಟಿದ್ದಾರೆ.

ಕಳೆದ ವರ್ಷ ಪ್ರಕಟವಾಗಿದ್ದ ಕಾವ್ಯ ಕಡಮೆಯವರ “ ಜೀನ್ಸ್ ತೊಟ್ಟ ದೇವರು” ಸಂಕಲನದ ಶೀರ್ಷಿಕೆಯನ್ನು ಇಲ್ಲಿ ಬೇಕೆಂತಲೇ ನೆನಪಿಸುತ್ತಿದ್ದೇನೆ. ನವ್ಯೋತ್ತರ ಕನ್ನಡ ಕಾವ್ಯದ ಹಾದಿ ಅದರಲ್ಲೂ ಮಹಿಳಾ ಕಾವ್ಯ ಅಷ್ಟೇನೂ ಬದಲಾಗದೇ ಹಳೆಯ ಪ್ರತಿಮೆ ರೂಪಕಗಳನ್ನೇ ಬಳಸಿಕೊಳ್ಳುತ್ತ ಪರಿಚಿತ ದಾರಿಯಲ್ಲೇ ನಿರುಮ್ಮಳದ ಪಯಣ ‘ಸವೆಸುತ್ತಿದೆ’ ಎಂದೆಲ್ಲ ಷರಾ ಬರೆಯುತ್ತಿರುವವರಿಗೆ ಮತ್ತು ಹೊಸ ಕಾಲದ ತವಕ, ತಲ್ಲಣ ಮತ್ತು ನಗರೀಕರಣದ ಸಮಸ್ಯೆಯಲ್ಲಿ ಲಿಂಗ ತಾರತಮ್ಯವೇ “ಸೋಷಿಯಲ್ ನೆಟವರ್ಕ್”ನ ಪ್ರಮುಖ ನಿಲುವುದಾಣವಾಗಿರುವ ಈ ಸಂದರ್ಭದ ಬಹುಮುಖ್ಯ ಕಾವ್ಯ ಮೀಮಾಂಸೆ ಆರತಿ ಮತ್ತು ಕಾವ್ಯ ಅವರ ಸಂಕಲನಗಳ ಶೀರ್ಷಿಕೆಯ ಮೂಲಕವೇ ಹೊಸ ಸಾಧ್ಯತೆಗಳನ್ನು ಆಲೋಚಿಸಬೇಕಾದ ಬದುಕಿನ ಪಲುಕುಗಳನ್ನು ತೀರ ಮಂದ್ರವಲ್ಲದ ಆದರೆ ತಾರಕ್ಕೇರದೇ ಮಧ್ಯಮದಲ್ಲಿ ಶೃತಪಡಿಸಿವೆಯೆಂಬುದು ಮಾತ್ರ ಸ್ಪಷ್ಟ.

 

ಸಂಕಲನದಲ್ಲಿರುವ ಮೂವತ್ತಾರು ಕವಿತೆಗಳಲ್ಲಿ ಕೆಲವನ್ನು ಕೋಟ್ ಮಾಡಿ ವಾಹ್ ಎಂದು ಹೇಳುವ ಉದ್ದೇಶ ಈ ಟಿಪ್ಪಣಿಯದ್ದಲ್ಲ. ಬದಲಿಗೆ ಬದಲಾದ ಬದಲಾಗುತ್ತಿರುವ ಬದುಕಿನ ಓಘದಲ್ಲಿ ಕವಿಯೊಬ್ಬ ಅದೇ ಬದುಕಿನ ಬದಲಾದ ಸಂಗತಿಗಳನ್ನು ಅಭಿವ್ಯಕ್ತಿಯಾಗಿ ಕಾವ್ಯದ ಪ್ರತಿಮೆ ರೂಪಕವಾಗಿ ಬಳಸಿಕೊಳ್ಳುವ ಅಪ್ಪಟ ಪ್ರತಿಭೆಯನ್ನು ಸಮ್ಮಾನಿವುದೇ ಆಗಿದೆ. ಅದನ್ನು ಪ್ರತಿಭಾ ನಂದಕುಮಾರ್ “ಕವಿತೆ ಬರೆಯುವುದು ಹುಡುಗಿಯರ ಜನ್ಮ ಸಿದ್ಧ ಹಕ್ಕು” ಎಂಬ ಶೀರ್ಷಿಕೆಯ ಮುನ್ನುಡಿಯ ಮೂಲಕ ಅಣಿಗೊಳಿಸಿ ಸದ್ಯ ಮುನ್ನುಡಿಯೆನ್ನುವುದು ಬರಿಯ ಹಾರೈಕೆಯಷ್ಟೇ ಅಲ್ಲ ಎಂಬುದನ್ನೂ ಸೂಕ್ಷ್ಮವಾಗಿ ಕಟೆದಿದ್ದಾರೆ. ಜಿ.ಎನ್.ಮೋಹನ್ ಬಹುರೂಪಿ ಮೂಲಕ ಈ ಪುಸ್ತಕ ಪ್ರಕಟಿಸಿ ತಮ್ಮ ಕಾವ್ಯ ಪ್ರೀತಿಯನ್ನು ಇನ್ನಷ್ಟು ಪೊರೆದಿದ್ದಾರೆ.

ಸ್ಮೋಕಿಂಗ್ ಝೋನ್ ಧೂಮಪಾನದ ಚಟವಿದ್ದವರಿಗೆ ಮಾತ್ರ ಅತ್ಯಗತ್ಯ ಬೇಕಿರುವ ಜಾಗವಾದರೆ ಆ ಚಟವಿಲ್ಲದವರಿಗೆ ಅದೊಂದು ಅನಿಷ್ಟ. ಕನ್ನಡ ಕಾವ್ಯವೆಂಬುದೂ ಒಂದು ರೀತಿಯ ಸ್ಮೋಕಿಂಗ್ ಝೋನ್. ಅಲ್ಲಿ ಕವಿತೆಯ ಓದೆಂಬ ಕಿಕ್ಕು ಸಿಕ್ಕುತ್ತದೆ. ಕಿಕ್ಕೇ ಗೊತ್ತಿಲ್ಲದವರಿಗೆ ಅದು ಮಾಡಲು ಕೆಲಸವಿಲ್ಲದವರ ಅನಾಚಾರ. ಸದ್ಯದ ಕನ್ನಡ ಕಾವ್ಯದ ಸಾದೃಶ ಪ್ರತಿಮೆಗಳು ದಕ್ಕಬೇಕಿದ್ದರೆ ಈ ಸ್ಮೋಕಿಂಗ್ ಝೋನ್ ಪ್ರವೇಶಿಸಿ. ನಿಮ್ಮನ್ನು ಆಶ್ಚರ್ಯ ಆನಂದ ಮತ್ತು ಕಿಕ್ ಕಾಡದೇ ಇದ್ದರೆ ಆಮೇಲೆ ಜಗಳಕ್ಕಿಳಿಯಿರಿ.

Leave a Reply