ನಾನು ಅವಳೆಂದೆಣಿಸಿ ತಲ್ಲಣಿಸದಿರು..

ಇತ್ತೀಚಿಗೆ ‘ಅವಧಿ’ಯಲ್ಲಿ ಶಿವಕುಮಾರ ಮಾವಲಿ ಅವರು ಅನುವಾದಿಸಿದ

ಕಿಶ್ವರ್ ನಹೀದ್ ಅವರ ‘ಅಲ್ಲ, ನಾನು ಅವಳಲ್ಲ’ ಕವಿತೆಯನ್ನು ಮೂಲ ಪಠ್ಯದೊಂದಿಗೆ ಪ್ರಕಟಿಸಿದ್ದೆವು. ಅದು ಇಲ್ಲಿದೆ 

ತೀವ್ರವಾಗಿ ಕಾಡುವ ಕವಿತೆ ಇದು 

ನಮ್ಮ ‘ಅವಧಿ’ಯ ಬರಹಗಾರರಾದ ನಾ ದಿವಾಕರ್ ಅವರು ಅದೇ ಕವಿತೆಯನ್ನು ಅನುವಾದಿಸಿದ್ದಾರೆ 

ಅನುವಾದದ ಬಗ್ಗೆ ಒಂದು ಹೊಸ ನೋಟ ಕೊಡಬಹುದಾದ ಪ್ರಯೋಗ ಮಾವಳಿ ಹಾಗೂ ದಿವಾಕರ್ ಅವರದು 

ನಿಮ್ಮ ಓದಿಗಾಗಿ ನಾ ದಿವಾಕರ್ ಅನುವಾದ ಇಲ್ಲಿದೆ- 

ನಾನು ಅವಳೆಂದೆಣಿಸಿ ತಲ್ಲಣಿಸದಿರು

ಮೂಲ : ಕೀಶ್ವರ್ ನಹೀದ್
ಅನುವಾದ : ನಾ ದಿವಾಕರ

ಏಕೆ ತಲ್ಲಣಿಸುವೆಯೋ
ನಾ ಅವಳಲ್ಲ ನೀ ಎಣಿಸಿದ ಎಕ್ಕಡ ಮಾರುವವಳಲ್ಲ
ನೆನಪಿದೆಯಾ ; ಭದ್ರಕೋಟೆಯಲೆನ್ನ
ಅವಿಸಿಟ್ಟು ಅಲೆಗ್ಡಾಂಡರನಂತೆ
ನೀ ದಿಗ್ವಿಜಯದ ಗರಿಮೆಯಲಿ
ಸಂಚರಿಸುತಿದ್ದಾಗ ನಾಲ್ಕು ಗೋಡೆಗಳೇ
ನನ್ನೊಡನಾಡಿಗಳು ; ನೀ
ಕಟ್ಟಿದ ಸಮಾಧಿಯ ಕಲ್ಲುಗಳೆನ್ನ
ದನಿಯಡಗಿಸಲಾರವು !

ಪರಂಪರೆ ಸಂಪ್ರದಾಯದ ಜಗನ್ನಾಥ
ರಥ ಚಕ್ರದಡಿ ಎನ್ನ ಹೊಸಕಿಹಾಕಿದ
ನಿನಗೆ ಅರಿವಿಲ್ಲವೇ ? ತಿಮಿರದಲಿ
ಪ್ರಣತಿ ಅವಿತಿರುವುದಿಲ್ಲ ; ನೆನಪಿಲ್ಲವೆ
ನನ್ನೊಡಲ ತಡಿಯಲಿ ಕಳೆದ
ಮಧುರ ಕ್ಷಣಗಳು ಸುಂದರ
ಹೂದೋಟದಲಿ ವಿಹರಿಸಿ
ಕಲ್ಲು ಮುಳ್ಳುಗಳ ನೆಟ್ಟೆಯಲ್ಲಾ !
ಎಲಾ ಕಪಟಿ
ಎನ್ನೊಡಲ ಅಂತರಾಳದ
ಚಿಲುಮೆ ಬತ್ತುವುದಿಲ್ಲವೋ
ನಿನ್ನ ಕುಣಿಕೆಗಳು ಸುವಾಸನೆಯ
ಬಂಧಿಸುವುದಿಲ್ಲವೋ !

ನನ್ನ ಚಾರಿತ್ರ್ಯ ನನ್ನ ಶೀಲ
ನನ್ನ ಸ್ವತ್ತು
ರಕ್ಷಿಸಲು ನೀನಾರು ? ಆದರೂ
ಬಿಕರಿಗಿಟ್ಟುಬಿಟ್ಟೆಯಲ್ಲಾ
ಬೀದಿ ಬೀದಿಗಳಲ್ಲಿ ಗುಡಿ
ಗುಂಡಾರಗಳಲ್ಲಿ ; ದೇಹವೆಂಬ
ಸ್ಥಾವರ ಬಿಕರಿಯಾದೀತು
ಆತ್ಮವಲ್ಲ ; ಮುಳುಗುವಾಗಲೂ
ನೀರ ಮೇಲೆ ನಡೆಯಬಲ್ಲೆ
ಅರಿತಿರುವೆಯಾ !

ನಿನ್ನ ಹೊರೆ ಕಳಚಲು
ನನ್ನ ಕುತ್ತಿಗೆಗೇಕೆ ಕುಣಿಕೆ ;
ಬಿಗಿದುಬಿಟ್ಟೆಯಲ್ಲಾ ಸಪ್ತಪದಿಯ
ಲಾಂಛನದಲಿ ಮುಗ್ಗಂಟುಗಳನ್ನು ;
ಇತಿಹಾಸದ ಪಾಠ ಮರೆತುಬಿಟ್ಟೆಯಾ
ಸೆರೆಯಾದ ಮನಸುಗಳ ದೇಶ
ಎಂದಿಗೂ ಸ್ವತಂತ್ರವಾಗಲಾರದು !

ನಿನ್ನ ಮಾರು-ಕಟ್ಟೆಯ ಶಿಲಾನ್ಯಾಸದಲಿ
ನಾ ಬಿಕರಿಯಾದೆ ಮಾರಿಬಿಟ್ಟೆಯಲ್ಲಾ
ಹಾರಿ ಹೌಹಾರಿ ; ನನ್ನ ಚಾರಿತ್ರ್ಯ
ಮಾತೃ ಹೃದಯ ನನ್ನ ನಿಷ್ಠೆ
ಎಲ್ಲವೂ ಬಿಕರಿಯಾಯಿತು
ಒಂದನೆ ಬಾರಿ ಎರಡನೆ ಬಾರಿ
ಕೊನೆಯ ಬಾರಿ – ಹರಾಜಿನಲಿ ;
ಇನ್ನೇಕೆ ನಿನ್ನ ಗೊಡವೆ ಇನ್ನೇಕೆ
ನಿನ್ನ ಅಂಕೆ –ಶಂಕೆ ಇಲ್ಲದೆ
ಹಾರಾಡುವೆ ಪಂಜರ ತೊರೆದ
ಮುಕ್ತಛಂದ ಬಾನಾಡಿಯಂತೆ ;

ಅದೋ ನೋಡಲ್ಲಿ
ಗೋಡೆಯ ಮೇಲೊಂದು ಅರೆಬೆತ್ತಲೆಯ
ಚಿತ್ರ ಮಾರುತ್ತಿದ್ದಾಳೆ ನಿನ್ನ
ಪಾದದಡಿಗೊಂದು ಮೆಟ್ಟುಮೆಟ್ಟಿ ನಿಲ್ಲುವ ಪಾದಗಳಿಗೊಂದು ಕವಚ –
ಭ್ರಮೆ ಬೇಕಿಲ್ಲ ಅದು ನಾನಲ್ಲ
ನಾನೆಂದೆಣಿಸಿ ಧಾವಿಸಬೇಡ !

5 comments

 1. ದಿವಾಕರ್ ಸರ್….ನಿಮ್ಮ ಅನುವಾದ ಸೊಗಸಾಗಿದೆ ಮತ್ತು ಹೆಚ್ಚು ಕವ್ಯಾತ್ಮಕವಾಗಿದೆ … ಅಭಿನಂದನೆಗಳು ಮತ್ತು ಧನ್ಯವಾದಗಳು

  • ಒಂದು ಕವನದ ಮೂಲ ಟೋನ್ ಗುರುತಿಸಿ, ಒಳಗೆ ಮಾಡಿಕೊಂಡು ಅದನ್ನು ಇನ್ನೊಂದು ಭಾಷೆಗೆ ತರುವುದು ಭಾಷಾಂತರದಲ್ಲಿ ಮಹತ್ವದ ಅಂಶ. ಜೊತೆಗೆ ಮೂಲ ಕವನದಲ್ಲಿ ಕವಿ ಹೇಳಿದ ಯಾವ ಅಂಶವನ್ನೂ ಬಿಡಬಾರದು ಹಾಗು ಕವಿ ಹೇಳದಿರುವ ಯಾವ ಹೊಸ ಅಂಶವನ್ನೂ ಸೇರಿಸಬಾರದು. ಈ ಕೆಳಗಿನ ಎರಡು ಅನುವಾದಗಳನ್ನು ನೋಡಿ. ಯಾವುದು ಮೂಲಕ್ಕೆ ನಿಷ್ಠೆಯಾಗಿದೆ ಯಾವುದು ಭಿನ್ನವಾಗಿದೆ ಅನ್ನುವುದು ಗೊತ್ತಾಗುತ್ತದೆ.

   I am the commodity you traded in,
   My chastity, my motherhood, my loyalty.
   Now it is time for me to flower free.
   The woman on that poster, half-naked, selling socks and shoes-
   No, no, I am not that woman!

   ಅದೋ ನೋಡಲ್ಲಿ
   ಗೋಡೆಯ ಮೇಲೊಂದು ಅರೆಬೆತ್ತಲೆಯ
   ಚಿತ್ರ ಮಾರುತ್ತಿದ್ದಾಳೆ ನಿನ್ನ
   ಪಾದದಡಿಗೊಂದು ಮೆಟ್ಟುಮೆಟ್ಟಿ ನಿಲ್ಲುವ ಪಾದಗಳಿಗೊಂದು ಕವಚ –
   ಭ್ರಮೆ ಬೇಕಿಲ್ಲ ಅದು ನಾನಲ್ಲ

   AND

   ನಾನು ಅವಳೇ,ನಿಮ್ಮ ವ್ಯವಹಾರದ ಸರಕಾಗಿದ್ದವಳು.
   ನನ್ನ ಪಾವಿತ್ರ್ಯತೆ, ನನ್ನ ತಾಯ್ತನ, ನನ್ನ ನಿಷ್ಠೆ ಎಲ್ಲವೂ ನಿಮ್ಮ ಮಾರುಕಟ್ಟೆಯ ಸರಕೇ ಆಗಿತ್ತಲ್ಲವೇ?
   ಈಗ ಕೇಳಿ ನನಗೂ ಸ್ವಚ್ಛಂದ ಹೂವಾಗುವ ಕಾಲ ಬಂದಿದೆ.
   ಆ ಪೋಸ್ಟರ್ ನಲ್ಲಿ ಕಾಣುವ,ಆ ಅರೆಬೆತ್ತಲೆ -ಅವಳು
   ಬೂಟು, ಕಾಲುಚೀಲಗಳನ್ನು ಮಾರುವ ಅವಳು
   ಅಲ್ಲ , ನಾನವಳಲ್ಲವೇ ಅಲ್ಲ. !
   ನಾನೆಂದೆಣಿಸಿ ಧಾವಿಸಬೇಡ !

 2. ನನಗೂ ಹಾಗೇ ಅನಿಸುತ್ತದೆ . ನಾನು ಕವಿ ಅಲ್ಲ ಕವಿತೆ ಬರೆಯುವ ಇರಾದೆ ಇದೆಯಷ್ಟೆ. ಮಾವಲಿಯವರ ವಿಶಾಲ ಹೃದಯ ಅವರಿಂದ ಈ ಮಾತನ್ನಾಡಿಸಿದೆ ಎಂದು ಭಾವಿಸುತ್ತೇನೆ.

Leave a Reply