ಈಗ ಅಣ್ಣ ಇರಬೇಕಾಗಿತ್ತು ಅನ್ನಿಸುತ್ತಿದೆ..


ಅಣ್ಣನೊಂದಿಗೆ ಅರ್ಥ ಹೇಳಿದ ಖುಷಿ

ಅಣ್ಣನ ಅರ್ಥಗಾರಿಕೆಯ ಸೊಬಗೇ ಬೇರೆ. ಕಂಚಿನ ಕಂಠ ಅನ್ನುತ್ತಾರಲ್ಲ ಹಾಗೆ. ಆಕರ್ಷಕ ಧ್ವನಿ. ಎಂಥವರನ್ನೂ ತನ್ನ ಕಡೆ ಸೆಳೆದುಕೊಳ್ಳುವಂಥದ್ದು. ಭಾವನೆಗೆ ತಕ್ಕ ಏರಿಳಿತ, ಭಾವ ತುಂಬಿದ ಮಾತು, ಅಷ್ಟೇ ಅರ್ಥಕ್ಕೂ ಪ್ರಾಮುಖ್ಯತೆ. ಹಾಡಲು ಬರುತ್ತಿರಲಿಲ್ಲ, ಹುಣಿತ ಬರುತ್ತಿರಲಿಲ್ಲ. ಆದರೆ ಅದ್ಭುತ ಶೃತಿ; ಎಲ್ಲೂ ತಪ್ಪುತ್ತಿರಲಿಲ್ಲ.

ಆತನ ಸರೀಕರಲ್ಲಿ ಆತನದೇ ಜನಪ್ರಿಯತೆ. ಆದರೆ ಯಾರನ್ನೂ ಅರ್ಥಗಾರಿಕೆಯಲ್ಲಿ ಸೋಲಿಸಬೇಕೆನ್ನುವಲ್ಲಿ (ಹಾಗೆ ಒಬ್ಬರನ್ನು ಒಬ್ಬರು ಸೋಲಿಸಲು ಪ್ರಯತ್ನಿಸುವುದು ಇತ್ತೀಚಿನ ಬೆಳವಣಿಗೆ) ಆಸಕ್ತನಲ್ಲ. ಇಡೀ ಕಥಾ ಹಂದರಕ್ಕೆ ಪೂರಕವಾದ ರೀತಿಯಲ್ಲಿ ಮಾತು ಬೆಳೆಸುತ್ತಿದ್ದ. ಎದುರು ಪಾತ್ರವನ್ನು ಪೋಷಿಸಿ ಬೆಳೆಸುವಲ್ಲಿ ಆತ ಸದಾ ಆಸಕ್ತನಾಗಿರುತ್ತಿದ್ದ. ತಾಳ ಮದ್ದಲೆ ಕೂಡ ಒಂದು ಸಮೂಹದ ಕಲೆ, ಒಬ್ಬನ ಪಾತ್ರ ಮಾತ್ರ ಮೇಲಿದ್ದರೆ ಸಾಲದು ಇಡೀ ತಾಳಮದ್ದಲೆ ಸುಂದರವಾಗಬೇಕಾದರೆ ಎಲ್ಲಾ ಪಾತ್ರಗಳೂ ಮೇಲೇಳಬೇಕು ಎನ್ನುವ ಪ್ರಜ್ಞೆ ಬೇಕು. ಆ ಕಾಲದಲ್ಲಿ ಇದಕ್ಕೆ ವ್ಯತಿರಿಕ್ತವಾಗಿ -ವಾದವನ್ನು ಮಂಡಿಸುವ ಎದುರು ಪಾತ್ರವನ್ನು ಇನ್ನಿಲ್ಲದಂತೆ ಇಕ್ಕಟ್ಟಿಗೆ ಸಿಲುಕಿಸುವ ತನ್ಮೂಲಕ ಪಾತ್ರಧಾರಿಯನ್ನೇ ಅವಮಾನಿಸುವ- ತಂತ್ರಗಾರಿಕೆ ಇತ್ತು. ಆದರೆ ಅಣ್ಣ ಹಾಗೆ ಎಂದೂ ಮಾಡಲಿಲ್ಲ.

ತಾಳಮದ್ದಲೆಯ ಬೆಳವಣಿಗೆ ಗಮನಿಸಿದರೆ 2 ಮುಖ್ಯ ಮಾದರಿಗಳಿವೆ.

1) ಪದ್ಯಕ್ಕೆ ಸರಳಾನುವಾದ ರೀತಿಯಲ್ಲಿ ಅರ್ಥ ಹೇಳುವ ಅಥವಾ ಕಥೆ ಹೇಳುವ ನಿರೂಪಣಾ ಮಾದರಿ.

2) ಕಥೆಯನ್ನು ಗೌಣಗೊಳಿಸಿ ವಾದಕ್ಕೆ ಕಟ್ಟುಬಿದ್ದ ಯುದ್ಧ ಮಾದರಿ.

ಇವೆರಡು ಕೂಡ ಹೊಸ ತಲೆಮಾರನ್ನು ತಾಳಮದ್ದಲೆಯಿಂದ ದೂರ ಸರಿಸಿದೆ. ಒಂದು ಅನಾಕರ್ಷಕವಾದರೆ ಇನ್ನೊಂದು ಅಸಹನೀಯವಾಗಿದೆ. ಇವೆರಡರ ಔಚಿತ್ಯಪೂರ್ಣ ಹದವರಿತ ಪರಿಪಾಕ ಇಲ್ಲವೆಂದೇನೂ ನಾನು ಹೇಳುತ್ತಿಲ್ಲ. ಆದರೆ ಹಲವು ಸಂದರ್ಭದಲ್ಲಿ ವಾದವು ಚೌಕಟ್ಟನ್ನು ಮೀರಿ ಸೋಲು ಗೆಲುವಿನ ಪ್ರತಿಷ್ಠೆಯೇ ಮುಖ್ಯವಾಗಿ ತಾಳಮದ್ದಲೆ ಅರ್ಧದಲ್ಲಿ ಮುಕ್ತಾಯವಾದದ್ದೂ ಇದೆ. ಮುಕ್ತಾಯ ಕಾಣದೆ ಹನುಮಂತನ ಬಾಲದಂತೆ ಬೆಳೆದದ್ದೂ ಇದೆ. ಹೀಗಾದಾಗ ಮಾತು ತನ್ನ ಸೂಕ್ಷ್ಮತೆ, ರೂಪಕ ಶಕ್ತಿ ಮತ್ತು ಸೌಂದರ್ಯವನ್ನು ಕಳೆದುಕೊಂಡು ಒರಟಾಗುತ್ತದೆ. ದಕ್ಷಿಣ ಕನ್ನಡದಲ್ಲಿಯೇ ಹುಟ್ಟಿ ಬೆಳೆದ ಅಡಿಗರು ತಾಳಮದ್ದಲೆಯು ‘ವಾಚಾಳಿ’ಯೆಂದು ತಿರಸ್ಕರಿಸಲು ಇದೂ ಒಂದು ಕಾರಣವಿರಬೇಕು. ಆದರೆ ಅಣ್ಣ ಈ ಎರಡೂ ಮಾದರಿ ಅಲ್ಲದ ವೈಚಾರಿಕತೆ ಮತ್ತು ಭಾವಗಳನ್ನು ಹದವರಿತು ಬೆರಸುವ ಮಾರ್ಗವನ್ನು ಆಯ್ಕೆ ಮಾಡಿಕೊಂಡ. ಇದು ಎಷ್ಟು ಪರಿಣಾಮಕಾರಿ ಆಯ್ತೆಂದರೆ ಆ ಕಾಲದ ಹಲವರು ಅದನ್ನು ಅನುಸರಿಸುವುದು ಅನಿವಾರ್ಯವಾಯಿತು. “ನಿಮ್ಮ ಕರ್ಣನ, ವಾಲಿಯ ಪಾತ್ರ ಕೇಳಿದ ಮೇಲೆ ನಾವೂ ಆಯಾ ಪಾತ್ರ ನಿರ್ವಹಣೆಯ ಪರಿಯನ್ನು ಮರು ನಿರೂಪಿಸುವುದು ಅನುವಾರ್ಯವಾಗಿದೆ.” ಎಂದು ಆಕಾಲದ ಪ್ರಸಿದ್ಧ ಯಕ್ಷಗಾನ ನಟ ಶಂಭು ಹೆಗಡೆಯವರು ಹೇಳಿದ್ದು ನೆನಪಿದೆ.

ಆತನ ಕರ್ಣ, ವಾಲಿ, ಭೀಷ್ಮ, ಕೌರವ, ಕೃಷ್ಣ ಹೀಗೆ ಹಲವು ಪಾತ್ರಗಳ ಅರ್ಥಗಳನ್ನು ನಾನು ಕೇಳಿದ್ದೇನೆ. ಪ್ರತಿಯೊಂದು ಪ್ರಸಂಗದ ಅರ್ಥಗಾರಿಕೆಯೂ ಹೊಸತೇ ಆಗಿರುತ್ತಿತ್ತು. ಒಂದು ವೇಳೆ ಆತ ಮೇಲ್ಜಾತಿಯವನಾಗಿದ್ದರೆ ಕನ್ನಡ ಜಿಲ್ಲೆಗಳ ಪ್ರಮುಖ ಅರ್ಥಧಾರಿ ಎಂಬ ಖ್ಯಾತಿ ಬರುತ್ತಿತ್ತು. ಆದರೆ ಆತ ಮೇಲ್ಜಾತಿಯವನಲ್ಲದಿರುವುದರಿಂದ ತಾಳಮದ್ದಲೆಯ ಇತಿಹಾಸದಲ್ಲಿ ಆತನ ಹೆಸರನ್ನೇ ನಮೂದು ಮಾಡುವುದಿಲ್ಲ.!

ಒಮ್ಮೆ ಹೊನ್ನಾವರದಲ್ಲಿ ‘ವಾಲಿವಧೆ’ ತಾಳಮದ್ದಲೆ ನಡೆದಿತ್ತು. ಗುರುಗಳಾದ ಅವಧಾನಿಯವರು, ಅಣ್ಣ, ಎಸ್. ಡಿ. ಹೆಗಡೆಯವರೆಲ್ಲ ಇದ್ದ ನೆನಪು. ಅಲ್ಲಿ ಇಡೀ ಪ್ರಸಂಗ ಕುವೆಂಪು ಅವರ ರಾಮಾಯಣ ದರ್ಶನವನ್ನು ಆಧರಿಸಿತ್ತು. ತಾಳಮದ್ದಲೆ ಮುಗಿದ ಮೇಲೆ ಅದು ಮೂಲ ರಾಮಾಯಣಕ್ಕಿಂತ ಭಿನ್ನವಾಗಿದೆ. ಅದು ಸರಿ ಅಲ್ಲ. ವಾಲ್ಮೀಕಿ ಹಾಗೆ ಬರೆದಿಲ್ಲ ….ಇತ್ಯಾದಿ ಚರ್ಚೆ ನಡೆದಿದ್ದವು. ಪತ್ರಿಕೆಯಲ್ಲೂ ಬಂದಿತ್ತು. “ಇದು ಆರ್. ವಿ ಭಂಡಾರಿ ರಾಮಾಯಣ.” ಇಷ್ಟು ವರ್ಷ ದೇಶದ ಹಲವರು ರಾಮಾಯಣವನ್ನು ಆಯಾಕಾಲಕ್ಕೆ ಅನುಗುಣವಾಗಿ ವ್ಯಾಖ್ಯಾನಿಸಿರುವಾಗ ಇದೂ ಒಂದು ವ್ಯಾಖ್ಯಾನವೆಂದು ಯಾಕೆ ಒಪ್ಪುತ್ತಿಲ್ಲ ಎಂದು ಕೇಳಲಾಯಿತು.

ಹೊಸಬರಿಗೆ ತರಬೇತಿ ಹೆಚ್ಚು ಸಿಗುವುದು ತಾಳಮದ್ದಲೆಯಲ್ಲಿ ಪಾಲ್ಗೊಳ್ಳುವ ಮೂಲಕವೆ. ಈಗ ತಾಳಮದ್ದಲೆಯ ಕೂಟಗಳು ಕಡಿಮೆ ಆಗಿವೆ. ಹಿಂದೆ ಅಣ್ಣ ಸಾಲ್ಕೋಡಿನಲ್ಲಿ ಅವರು ಮಾಸ್ತರರಿರುವಾಗ ಪ್ರತಿ ಶನಿವಾರ ಒಂದು ತಾಳಮದ್ದಲೆ ಮಾಡುತ್ತಿದ್ದರಂತೆ. ಚಿಮಣಿ ದೀಪದಲ್ಲಿ 6-8 ಜನ ಸೇರಿ ಬೆಳಗ್ಗೆವರೆಗೆ ಪ್ರಸಂಗ ಮಾಡುವುದು. ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಆಗ ಭಾಗವತಿಕೆ ಮಾಡುತ್ತಿದ್ದರಂತೆ. ತಂದೆಯವರು, ಗಪ್ಪು ಭಟ್ಟ, ಎಂ.ಎಸ್. ಹೆಗಡೆ, ಮಂಜುನಾಥ ನಾಯ್ಕ, ಜಿ.ವಿ. ಹೆಗಡೆ, ಬಿ.ವಿ. ಭಂಡಾರಿ ಹೀಗೆ ಹಲವು ಜನ ಅರ್ಥ ಹೇಳಲು ಕಲಿತದ್ದು ಇಲ್ಲಿಯೇ.

ನಂತರ ಆತ ಚಿಕ್ಕನಕೋಡು ಶಾಲೆಯಲ್ಲಿರುವಾಗ ಅಲ್ಲಿಯೂ ಶನಿವಾರ ರವಿವಾರ ತಾಳಮದ್ದಲೆ ನಡೆತಿತ್ತು. ಆಗ ಶ್ರೀಪಾದ ಭಟ್ ಅಲ್ಲಿಯೇ ಶಿಕ್ಷಕನಾಗಿರುವುದರಿಂದ ಆತ ಅಣ್ಣನೊಂದಿಗೆ ಹಲವು ತಾಳಮದ್ದಲೆಯಲ್ಲಿ ಅರ್ಥಧಾರಿಯಾಗಿ ಪಾಲ್ಗೊಂಡಿದ್ದ. ಗಜಾನನ ಭಂಡಾರಿ, ಮಾಬ್ಲ ನಾಯ್ಕ, ಗಣಪತಿ ನಾಯ್ಕ, ಪಿ ಎಂ ಶೇಟ್ ಕರ್ಕಿ ಹೀಗೆ ಹಲವರು ಅವನಿಂದ ತರಬೇತಿ ಪಡೆದರು. ಆಕಾಲದ ಪ್ರಸಿದ್ಧ ಅರ್ಥಧಾರಿಗಳಾದ ಶಂಭು ಹೆಗಡೆ, ಮಾಬ್ಲ ಹೆಗಡೆ ಕೆರೆಮನೆ, ಪ್ರಭಾಕರ ಜೋಶಿ, ಆನಂದ ಮಾಸ್ತರ್, ಗಪ್ಪು ಭಟ್, ಎಸ್. ಎಂ ಹೆಗಡೆ, ನಾರಾಯಣ ಭಟ್ ಮೇಲಿನಗಂಟಿಗೆ, ಉಮಾಕಂತ ಭಟ್, ಕಶ್ಯಪ ಪರ್ಣಕುಟಿ, ಡಾ. ಎಂ. ಜಿ ಹೆಗಡೆ….. ಹೀಗೆ ಹಲವರೊಂದಿಗೆ ಆತ ಅರ್ಥ ಹೇಳಿದ್ದ.

ಹಿಂದೆ ನಾನು ತಂದೆಯವರೊಂದಿಗೆ ತಾಳಮದ್ದಲೆಗೆ ಹೋಗುತ್ತಿದ್ದೆ. ಈಗಿನ ಕಾಲಕ್ಕಿಂತ ಇನ್ನೂ ಹೆಚ್ಚು ‘ರಿಜಿಡ್’ ಆದ ಕಾಲ ಅದು. ಒಮ್ಮೆ ಕಡತೋಕದಲ್ಲಿ (?) ತಾಳಮದ್ದಲೆಗೆ ತುಂಬಾ ಜನ ಸೇರಿದ್ದರು. ಆರ್.ವಿ. ಭಂಡಾರಿ ಅರ್ಥ ಹೇಳುತ್ತಾರೆಂದರೆ ಒಂದಿಷ್ಟು ಜನ ಬರುತ್ತಿದ್ದರು. ಎಲ್ಲರೂ ಕತೆಯ ನಿರೂಪಣಾ ಶೈಲಿಯಲ್ಲಿ ಅರ್ಥ ಹೇಳುತ್ತಿರುವ ಕಾಲದಲ್ಲಿ ಇವರು ಹೆಚ್ಚು ವೈಚಾರಿಕತೆಯನ್ನು ಭಾವನಾತ್ಮಕ ಪರಿಧಿಯೊಳಗೆ ಹೇಳುತ್ತಿರುವುದರಿಂದ ಜನ ಬರುತ್ತಿದ್ದರು. ತಾಳಮದ್ದಲೆ ಇನ್ನೇನು ಪ್ರಾರಂಭ ಆಗಬೇಕು, ಆಗ ಆ ಭಾಗದ ಸಂಸ್ಕೃತ ವಿದ್ವಾಂಸ, ವೈದಿಕ ಕಟ್ಟೆ ಭಟ್ಟರು ‘ಶೂದ್ರನೊಂದಿಗೆ ನಾನು ಅರ್ಥ ಹೇಳುವುದಿಲ್ಲ’ ಎಂದು ಬಿಟ್ಟರು. ಕೊನೆಗೆ ‘ನನ್ನೆದುರು ಒಂದು ಮಾಣಿ ಇಟ್ಟುಕೊಂಡು ಅರ್ಥ ಹೇಳುತ್ತೇನೆ’ ಎಂದು ಹೇಗೋ ತಾಳಮದ್ದಲೆ ಮುಗಿಸಿದರು.

ಅರೇಅಂಗಡಿಯಲ್ಲಿ ಪ್ರಸಂಗವನ್ನೇ ಅರ್ಧಕ್ಕೆ ನಿಲ್ಲಿಸಿದ್ದಿದೆ. ಕೆರೆಕೋಣಿನಲ್ಲಿ ಆತನಿಗೆ ಹೊಡೆಯಲು ಕರ್ಯತಂತ್ರ ರೂಪಿಸಿದರು…….. ಹೀಗೆ ಅವನ್ನು ತಡೆಯಲು ಮಾಡಿದ ಪ್ರಯತ್ನಗಳೆಲ್ಲವೂ ವ್ಯರ್ಥವಾಯಿತು. ಇಷ್ಟು ಅವಮಾನವಾದರೂ ಆತ ಅಲ್ಲಿಯ ಜನರಿಗಾಗಿ ಅರ್ಥ ಹೇಳುತ್ತಿದ್ದ. ವರ್ಷಕ್ಕೆ ಕನಿಷ್ಟ 40-50 ಪ್ರಸಂಗದಲ್ಲಾದರೂ ಆತ ಭಾಗವಹಿಸುತ್ತಿದ್ದ. ಇತ್ತೀಚೆಗೆ ಜೋಯ್ಡಾ, ಯಲ್ಲಾಪುರದ ಕಡೆ ಹೋದಾಗ ನನ್ನ ಹೆಸರಿನ ತುಡಿಗಿರುವ ಭಂಡಾರಿ ಎನ್ನುವುದನ್ನು ನೋಡಿ ಹಿಂದೊಬ್ಬರು ರೋಹಿದಾಸ ಭಂಡಾರಿ ಎನ್ನುವ ಘಟ್ಟದ ಕೆಳಗಿವರೊಬ್ಬರು ಇಲ್ಲಿಯ ಪ್ರಸಂಗಕ್ಕೆ ಬರುತ್ತಿದ್ದರು. ಅದ್ಭುತ ಅರ್ಥ ಹೇಳುತ್ತಿದ್ದರು ಎಂದು ನೆನಪಿಸಿಕೊಂಡಿದ್ದಿದೆ. ನಾನು ಅವರ ಮಗ ಎಂದು ಹೇಳಿದಾಗ ಅವರು ಖುಷಿ ಪಡುತ್ತಿದ್ದರು.

ತುಂಬಾ ಜನ ಬಂಡಾಯದ ಸ್ನೇಹಿತರು ಈತ ತಾಳಮದ್ದಲೆಯಲ್ಲಿ ಭಾಗವಹಿಸಿದ್ದನ್ನು ವಿರೋಧಿಸಿದ್ದಿದೆ. ಮತ್ತೆ ಪುರಾಣಕ್ಕೆ ಗಂಟುಬಿದ್ದರೆ ಹೇಗೆ ಎಂಬ ಆತಂಕ ಅವರದು. ಆದರೆ ಅಣ್ಣ ಇಡೀ ಪುರಾಣವನ್ನು ಸಮಕಾಲೀನಗೊಳಿಸುವ ಪರಿ ಅಧ್ಯಯನ ಯೋಗ್ಯವಾದದ್ದು. ಭೀಷ್ಮ ಪರ್ವದಲ್ಲಿ, ಕೃಷ್ಣ ಸಂಧಾನದಲ್ಲಿ ಇಡೀ ರಾಜ್ಯದ ಉಗಮದ ಬಗ್ಗೆ, ಯುದ್ದ ನೀತಿಯ ಬಗ್ಗೆ, ವಾಲಿವಧೆಯಲ್ಲಿ ದ್ರಾವಿಡ-ಆರ್ಯರ ಸಂಘರ್ಷದ ಕುರಿತು, ಭೀಷ್ಮ ವಿಜಯದಲ್ಲಿ ಅಧಿಕಾರ ಮತ್ತು ಹೆಣ್ಣಿನ ಕುರಿತು, ಕರ್ಣ ಪರ್ವದಲ್ಲಿ ಜಾತಿಯ ಸಂಘರ್ಷದ ಕುರಿತು……ಹೀಗೆ ಪ್ರತಿ ಪ್ರಸಂಗವೂ ಪುರಾಣದ ಕುರಿತ ಒಂದು ಮಾರ್ಕ್ಸ್ ವಾದಿ ವಿಶ್ಲೇಷಣೆಯೇ ಆಗಿರುತ್ತಿತ್ತು.

ನಮ್ಮೂರಲ್ಲಂತು ಹಿಂದುಳಿದವರಿಗೆ ಒಂದು ಅಸ್ಮಿತೆಯನ್ನು ಕಲ್ಪಿಸಿಕೊಡುವಲ್ಲಿ, ದಲಿತ ಹಿಂದುಳಿದ ವರ್ಗವನ್ನು ಪ್ರಜ್ನಾವಂತರನ್ನಾಗಿಸುವಲ್ಲಿ ಅಣ್ನನ ತಾಳಮದ್ದಲೆ ತುಂಬಾ ಪ್ರಯೋಜನ ಆಗಿದೆ. ಅಣ್ಣನ ಅರ್ಥ ಇದ್ದರೆ ಮಾತ್ರ ಒಂದಿಷ್ಟು ಜನ ತಾಳಮದ್ದಲೆಗೆ ಬರುವ ರೂಢಿ ಇತ್ತು.

ನಮಗೂ ಅಣ್ಣ ಹೋಗುವ ತಾಳಮದ್ದಲೆಗೆ (ನಮ್ಮೂರಲ್ಲಿ) ಕರೆದುಕೊಂಡು ಹೋಗುತ್ತಿದ್ದರು. ಸಣ್ಣ ಪಾತ್ರ ಕೊಡುತ್ತಿದ್ದರು. ಅಂದಿನ ನಮ್ಮ ಸರಿತಪ್ಪುಗಳ, ಬಗ್ಗೆ ಅಧ್ಯಯನದ ಕೊರತೆಯ ಬಗ್ಗೆ, ತರ್ಕದ ವಿಸ್ತರಣೆಯ ದೋಷದ ಬಗ್ಗೆ ಮಾತನಾಡುತ್ತಿದ್ದರು. ಹಲವು ಸಂದರ್ಭದಲ್ಲಿ ದೊಡ್ಡ ಪಾತ್ರ ಕೊಟ್ಟು ಛಂದ ನೋಡ್ತಿದ್ದುದು ಇದೆ. ಆದರೆ ಈಗ ಹೊಸಬರಿಗೆ ಪಾತ್ರ ಕೊಟ್ಟರೆ ಪ್ರಸಂಗ ಹಾಳಾಗಬಹುದೆಂದು ಪ್ರಸಿದ್ಧ ಅರ್ಥಧಾರಿಗಳನ್ನೇ ಕರೆದು ಬಿಡುವುದರಿಂದ ಹೊಸಬರು ತಿದ್ದಿಕೊಳ್ಳುವ ಅವಕಾಶದ ಕೊರತೆ ಎದುರಾಗುತ್ತಿದೆ
ನಾನು ಮೊದಲು ಅರ್ಥ ಹೇಳಲು ಪ್ರಾರಂಭಿಸಿದ್ದು ಆತನೊಂದಿಗೆ.

ಮೊದಮೊದಲು ಭಯವಿತ್ತು. ಯಾಕೆಂದರೆ ನಾನು ಆತನ ಎದುರು ಮಾತನಾಡಲು ಅಂಜುತ್ತಿದ್ದೆ. ಆತನೆದುರು ನಿಂತಾಗ ನನಗೆ ಬರುವುದೆಲ್ಲ ಮರೆತು ಗೊಂದಲಕ್ಕೆ ಎದುರಾಗುತ್ತಿದ್ದೆ. ಆದರೂ ಅವನೆದುರು ಅರ್ಥಹೇಳುವುದು ಅನಿವಾರ್ಯವಾಗಿತ್ತು. ಒಂದು ದಿನ ಮೊದಲು ಪ್ರಸಂಗ ಪಟ್ಟಿ ತಂದು ಪದ್ಯ ಓದಿ ಅರ್ಥಹೇಳುತ್ತಿದ್ದ. ಹೇಗೆ ಪಾತ್ರ ನಿರ್ವಹಿಸಬೇಕೆಂದು ಹೇಳುತ್ತಿದ್ದ. ಎದುರು ಕುಳಿತವರು ಏನು ಕೇಳುತ್ತಾರೆ ಅದಕ್ಕೆ ಏನು ಹೇಳಬೇಕು ಎನ್ನುತ್ತಿದ್ದ. ಪುರಾಣ ಭಾರತ ಕೋಶ ತೆಗೆದು ಓದಲು ಕೊಡುತ್ತಿದ್ದ. ರಾಮಾಯಣ ಮಹಾಭಾರತದ ಪುಸ್ತಕ ತೆಗೆದು ಎಲ್ಲಿ ಆ ಭಾಗ ಇದೆ ಎಂದು ಗುರುತಿಸಿ ಕೊಡುತ್ತಿದ್ದ.

ಕರ್ಣ ಪರ್ವದಲ್ಲಿ ಆತನ ಕರ್ಣ, ನಾನು ವೃಷಸೇನನ ಪಾತ್ರ ಮಾಡಿದ ನೆನಪು. ಸುಧನ್ವಾರ್ಜುನದಲ್ಲಿ ವೃಷಕೇತು ಮಾಡಿದ ನೆನಪು. ಆ ಸಂದರ್ಭದಲ್ಲಿ ಅವನು ಹೇಳಿದ್ದನ್ನು ಚಾಚೂ ತಪ್ಪದೇ ಹೇಳದಿರುವುದನ್ನು ನೋಡಿ ಆ ಮೇಲೆ ತೀರಾ ಸರಳವಾಗಿ ಹೇಳಿಕೊಡುವುದನ್ನು ಬಿಟ್ಟ. ಆದರೆ ತಪ್ಪುಗಳ ಬಗ್ಗೆ ವಿವರಿಸುತ್ತಿದ್ದ. ಅರ್ಥ ಹೇಳುವುದು ರೂಢಿಯಾದಂತೆ ಎಲ್ಲವೂ ಸರಿಯಾಗುತ್ತದೆ, ಆದರೆ ಶೃತಿ ತಪ್ಪದಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಸುತ್ತಿದ್ದ. ಒಮ್ಮೆ ಕೆರೆಕೋಣಿನ ಅಪ್ಪಚ್ಚಿ ಮನೆಯಲ್ಲಿ ಭೀಷ್ಮ ವಿಜಯ. ಅದರಲ್ಲಿ ಆತನ ಭೀಷ್ಮ ಮತ್ತು ನನ್ನ ಅಂಬೆ. ಅಂಬೆಯ ವೈಚಾರಿಕತೆ ಜಾಸ್ತಿಯಾಯಿತು, ಭಾವನೆಯೂ ಮಿಳಿತವಾಗಿರಬೇಕು ಎಂದಿದ್ದ. ಈ ಪ್ರಸಂಗದಲ್ಲಿ ಮಾಧವಿಯೂ ಒಂದು ಪಾತ್ರ ಮಾಡಿದ್ದಳು.

ಅಂಕೋಲೆಯ ವಿಷ್ಣು ನಾಯ್ಕ ಅವರ ಮನೆಯಲ್ಲಿ ನಡೆದ ಭೀಷ್ಮ ಪರ್ವದಲ್ಲಿ ಪ್ರೊ. ಜಿ.ಎಚ್. ನಾಯಕರು ಭೀಷ್ಮ, ಆರ್.ಜಿ.ಗುಂದಿಯವರು, ವಿಷ್ಣು ನಾಯ್ಕ ಅವರು ಮತ್ತು ಅಣ್ಣ ಅರ್ಥ ಹೇಳಿದ್ದರು. ನಾನೂ ಒಂದು ಸಣ್ಣ ಪಾತ್ರ ಮಾಡಿದ್ದೆ. ನನ್ನ ಪಾತ್ರದ ಕುರಿತು ಜಿ.ಎಚ್. ನಾಯಕರು ತುಂಬಾ ಮೆಚ್ಚುಗೆಯ ಮಾತನಾಡಿದಾಗ ಖುಷಿ ಪಟ್ಟಿದ್ದೆ. ಇತ್ತೀಚೆಗೆ ಅವರನ್ನು ಮೈಸೂರಲ್ಲಿ ಭೇಟಿ ಆದಾಗ ಕೂಡ ಅವರು ಅದನ್ನು ಎಂದು ಹೇಳಿದ್ದರು.

ಆದರೆ ಆತನ ಒಂದೆರಡು ಪಾತ್ರವನ್ನು ರೆಕಾರ್ಡ ಮಾಡಿಕೊಂಡಿದ್ದೆ. ಆದರೆ ಅವೆಲ್ಲ ಸಿಗುತ್ತಿಲ್ಲ. ಬಡಗುತಿಟ್ಟಿನ ಅರ್ಥಧಾರಿಯ ಒಂದೇಒಂದು ದಾಖಲೆ ಇಲ್ಲದಂತೆ ಹೋಗಿಬಿಟ್ಟಿತು. ಎಲ್ಲಾ ರೀತಿಯ ಆಧುನಿಕ ಸಲಕರಣೆ ಇದ್ದರೂ ಸ್ವತಃ ಅನೇಕರ ರೆಕಾರ್ಡನ್ನು ಆಡಿಯೋ ವಿಡಿಯೋ ಮಾಡಿದ ಅನುಭವವಿದ್ದರೂ ಇದು ಸಾಧ್ಯವಾಗದೇ ಇರುವುದು ನಮ್ಮ ನಿಷ್ಕಾಳಜಿಯೇ ಹೊರತೂ ಇನ್ನೇನೂ ಅಲ್ಲ. ಮತ್ತು ಆತ ಇಷ್ಟು ಬೇಗ ನಮ್ಮನ್ನು ಅಗಲುತ್ತಾನೆ ಎಂದು ಸೂಚನೆಯೂ ಇಲ್ಲದೇ ಹೀಗಾಯ್ತು.

ಹಿಂದೆ ಅಕ್ಷರಸ್ಥರು ಒಟ್ಟಾಗಿಯೇ ತಾಳಮದ್ದಲೆ, ಯಕ್ಷಗಾನಗಳಲ್ಲಿ ಇನ್ನು ವಿಸ್ತರಿಸುವುದಿದ್ದರೆ ಜಾನಪದ ಕಲೆಗಳಲ್ಲಿ ಭಾಗವಹಿಸುತ್ತಿದ್ದರು. ಈಗಲೂ ಹಳ್ಳಿಗಳಲ್ಲಿ ತಾಳಮದ್ದಲೆಯ ಅರ್ಥಧಾರಿಗಳಲ್ಲಿ ಅನೇಕ ಜನ ಪಂಡಿತರೋ, ವಿದ್ವಾಂಸರೋ ಅಲ್ಲ. ಎಲ್ಲ ಜಾತಿಯ, ಸಮುದಾಯದ ಜನ ಇದ್ದಾರೆ. ಆದರೆ ತಾಳಮದ್ದಲೆ ಹೆಚ್ಚೆಚ್ಚು ತರ್ಕ ಪ್ರಾಧಾನ್ಯತೆಗೆ ಹೋದಾಗ ಅದಕ್ಕಿಂತ ಮುಖ್ಯವಾಗಿ ಸಂಸ್ಕೃತ ವಿದ್ವಾಂಸರು, ವೈದಿಕರು ಪ್ರವೇಶಿಸಿದಾಗ ಸಾವಕಾಶ ಸಾಮಾನ್ಯ ಜನರಿಂದ ದೂರಾಯಿತು. ಅರ್ಥಧಾರಿಯ ಮಾತುಗಳಲ್ಲಿ ಪುಂಖಾನುಪುಂಖವಾಗಿ ಬರುವ ಸಂಸ್ಕೃತ ವಾಕ್ಯಗಳು, ವೇದ, ಉಪನಿಷತ್ತಿನಿಂದ ಆಯ್ದುಕೊಂಡ ಸಂಸ್ಕೃತ, ರಾಮಾಯಣ, ಮಹಾಭಾರತದಿಂದ ಆಯ್ದುಕೊಂಡ, ಭಗವದ್ಗೀತೆಯಿಂದ ಆಯ್ದುಕೊಂಡ ಸಂಸ್ಕೃತ ಶ್ಲೋಕಗಳು, ಸಂಸ್ಕೃತ ಬರಹ, ಎದುರು ಅರ್ಥಧಾರಿಯಲ್ಲಿ ಕೀಳರಿಮೆ ಹುಟ್ಟಿಸಿತು. ತನ್ನ ಬದುಕಿನ ಅನುಭವದ ಆಧಾರದಲ್ಲಿ ಪದ್ಯವನ್ನು ವ್ಯಾಖ್ಯಾನಿಸುವ ಬದಲು ಸಂಸ್ಕೃತಿ, ಕಾವ್ಯ, ಗ್ರಂಥಗಳ ಆಧಾರದಲ್ಲಿ ವ್ಯಾಖ್ಯಾನ ಶುರುವಾಯಿತು.

ಇಂದು ಬಹುತೇಕ ತಾಳಮದ್ದಲೆ ಹಿಂದುತ್ವದ ಅಡ್ಡೆ ಆಗುತ್ತಿದೆ. ಹೊಸ ವ್ಯಾಖ್ಯಾನಗಳೆಲ್ಲವೂ ಜಾತಿ, ಧರ್ಮ, ಲಿಂಗಭೇದವನ್ನು ಸಮರ್ಥಿಸುವ ಅಪಾಯಕಾರಿ ಸ್ಥಿತಿ ತಲುಪಿದೆ. ಅದರಲ್ಲೂ ಮೇಲ್ಜಾತಿಗಳು ಇಡೀ ಒಂದು ಕಲಾ ಪ್ರಕಾರವನ್ನೇ ವಶಪಡಿಸಿಕೊಳ್ಳುತ್ತಿರುವುದು ಒಂದು ವಿಷಾದದ ಸಂಗತಿ. ಇದರಿಂದಾಗಿ ಹಲವರು ಈ ಕಲಾ ಪ್ರಕಾರದಿಂದಲೇ ದೂರ ಸರಿದರು.

ಈಗ ಅಣ್ಣ ಇರಬೇಕಾಗಿತ್ತು ಅನ್ನಿಸುತ್ತಿದೆ. ಈ ಕಾಲದಲ್ಲಿ ಹೊಸರೀತಿಯಲ್ಲಿ ಅಥ ಹೇಳುತ್ತಿರುವ ಡಾ. ಪುರುಷೋತ್ತಮ ಬಿಳಿಮಲೆ ಮತ್ತು ಡಾ. ಕೇಶವ ಶರ್ಮರಂತವರು ಇನ್ನಷ್ಟು ಹೆಚ್ಚು ಕ್ರಿಯಾಶೀಲವಾಗಿ ಈ ಕಲಾ ಪ್ರಕಾರವನ್ನು ಬಳಸಿಕೊಂಡು ಆಗುತ್ತಿರುವ ಅಪಾಯವನ್ನು ತಡೆಯಬೇಕಾಗಿದೆ. ಆನರನ್ನು ತಲುಪಲು ಇದಕ್ಕಿಂತ ಉತ್ತಮ ಮಾಧ್ಯಮ ಬೇರೆ ಸಿಗಲಾರದು.

Leave a Reply