ಪ್ರಕಾಶ ರೈ, ವಿಕ್ರಂ ವಿಸಾಜಿ, ರೇಣುಕಾ ರಮಾನಂದ ಸೇರಿದಂತೆ ಐವರಿಗೆ ಪ್ರತಿಷ್ಠಿತ ‘ಅಮ್ಮ ಪ್ರಶಸ್ತಿ’

೨೦೧೮ ನೇ ಸಾಲಿನ ಪ್ರತಿಷ್ಠಿತ ಅಮ್ಮ ಪ್ರಶಸ್ತಿಗೆ ನಟ ಪ್ರಕಾಶ ರೈ, ಡಾ.ವಿಕ್ರಮ ವಿಸಾಜಿ, ಕವಯತ್ರಿ ರೇಣುಕಾ ರಮಾನಂದ, ಕಾದಂಬರಿಕಾರ ಯ.ರು.ಪಾಟೀಲ ಮತ್ತು ಕತೆಗಾರ ಶಶಿಕಾಂತ ದೇಸಾಯಿ ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರಕಾಶ ರೈ ಅವರ ಅಂಕಣ ಬರಹಗಳ ಸಂಕಲನ ‘ಇರುವುದೆಲ್ಲವ ಬಿಟ್ಟು’  ಡಾ. ವಿಕ್ರಮ ವಿಸಾಜಿ ಅವರ ನಾಟಕ ಕೃತಿ ‘ರಸಗಂಗಾಧರ’ ಉತ್ತರ ಕನ್ನಡದ ಅಂಕೋಲೆಯ ರೇಣುಕಾ ರಮಾನಂದ ಅವರ ಕವನ ಸಂಕಲನ ‘ಮೀನುಪೇಟೆಯ ತಿರುವು’ ಬೆಳಗಾವಿಯ ಯ.ರು.ಪಾಟೀಲ ಅವರ ಕಾದಂಬರಿ ‘ಬೆಳ್ಳಿಚುಕ್ಕಿಯ ಬಂಗಾರದ ಕನಸು’ ಮತ್ತು ಕಲಬುರಗಿಯ ಶಶಿಕಾಂತ ದೇಸಾಯಿ ಅವರ ಕಥಾ ಸಂಕಲನ `ಕಂಬಳಿಯ ಕೆಂಡ’ ಕೃತಿಗಳಿಗೆ ಈ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಪ್ರಶಸ್ತಿಯು ತಲಾ 5000 ರೂ. ನಗದು ಪುರಸ್ಕಾರ, ನೆನಪಿನ ಕಾಣಿಕೆ, ಪ್ರಮಾಣ ಪತ್ರವನ್ನು ಒಳಗೊಂಡಿರುತ್ತದೆ.

ಇದೇ ನವೆಂಬರ್ 26 ರಂದು ಸಂಜೆ 5.30ಕ್ಕೆ ಸೇಡಮ್‍ನ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಜರುಗುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಶಸ್ತಿ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಮ್ಮ ಪ್ರಶಸ್ತಿಗೆ ಹದಿನೆಂಟನೆ ವರ್ಷದ ಸಂಭ್ರಮ :

ಪತ್ರಕರ್ತ-ಲೇಖಕ ಮಹಿಪಾಲರೆಡ್ಡಿ ಮುನ್ನೂರು ಅವರು ತಮ್ಮ ಅಮ್ಮನ ನೆನಪಿನಲ್ಲಿ ಸ್ಥಾಪಿಸಿದ ಅಮ್ಮ ಪ್ರಶಸ್ತಿಗೆ ಈಗ ಹದಿನೆಂಟನೆ ವರ್ಷದ ಸಂಭ್ರಮ. ಕನ್ನಡದ ಪ್ರತಿಭಾವಂತ ಬರಹಗಾರರು ಅಮ್ಮ ಪ್ರಶಸ್ತಿಗಾಗಿ ತಮ್ಮ ಕೃತಿಗಳನ್ನು ಕಳುಹಿಸುವ ಮೂಲಕ ಪ್ರಶಸ್ತಿಯನ್ನು ಗುರುತಿಸಿದ್ದಾರೆ ಹಾಗೂ ಗೌರವಿಸಿದ್ದಾರೆ. ಈ ಬಾರಿ 402 ಕೃತಿಗಳು ಬಂದಿದ್ದವು.

ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ಅಮ್ಮ ಪ್ರಶಸ್ತಿ ರಾಜ್ಯದ ಗಣನೀಯ ಪ್ರಶಸ್ತಿಗಳಲ್ಲಿ ಒಂದಾಗಬೇಕು ಎಂಬ ಪ್ರತಿಷ್ಠಾನದ ಆಶಯಕ್ಕೆ ಅನುಗುಣವಾಗಿ ನಾಡಿನ ಖ್ಯಾತ ಲೇಖಕರು, ಕವಿಗಳು, ಪ್ರಕಾಶಕರು ಮತ್ತು ಲೇಖಕರ ಅಭಿಮಾನಿ ಓದುಗರು ಸ್ಪಂದಿಸಿದ್ದೇ ಇದೊಂದು ಗೌರವಾನ್ವಿತ ಪ್ರಶಸ್ತಿಯಾಗಿ ರೂಪುಗೊಂಡಿದೆ ಎಂಬುದಕ್ಕೆ ಸಾಕ್ಷಿ.

ದಶಮಾನೋತ್ಸವ ವರ್ಷದಿಂದ ಆರಂಭಗೊಂಡ ಅಮ್ಮ ಗೌರವ ಪುರಸ್ಕಾರವನ್ನು ಸಹ ಮುಂದುವರಿಸಲಾಗಿದೆ. ಐವರಿಗೆ ಅಮ್ಮ ಪ್ರಶಸ್ತಿ ಹಾಗೂ ಅಮ್ಮ ಗೌರವ ಪುರಸ್ಕಾರ ನೀಡಲಾಗುತ್ತಿದೆ ಎಂದು ಪ್ರಶಸ್ತಿ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ

7 comments

 1. “ಅಮ್ಮ” ಪ್ರಶಸ್ತಿ ಸ್ಥಾಪನೆ ಪರಿಕಲ್ಪನೆಯೇ ಅಂದಿನ ಅಮೆಚೂರ್ ರೈಟರ್ಸಗೆ ರೋಮಾಂಚನವುಂಟು ಮಾಡಿತ್ತು .ಈ ದೊಡ್ಡ ಜವಾಬ್ದಾರಿ ಹೊರುವ ಹೆಗಲು
  ಸಣ್ಣದೇನೋ ಎಂಬ ಮಾತುಗಳನ್ನೂ “ದೊಡ್ಡವರು” ಆಡಿರಬಹುದು,
  ಈಗ “ಅಮ್ಮ” ಕನ್ನಡ ಅಕ್ಷರಲೋಕದ ಪ್ರತಿಷ್ಠಿತ ಪ್ರಶಸ್ತಿ ಗಳಲ್ಲಿ ಒಂದು.
  ನಡೆದು ಬಂದ ದಾರಿಯ ಶ್ರಮದ ಬೆವರು ಓರೆಸಿಕೊಂಡು ಮುನ್ನಡೆಯುವ ಛಾತಿ ಮುನ್ನೂರು ಸಹೋದರಿ/ಸಹೋದರರಿಗಿದೆ.
  ಅವರಿಗೆ ಕೃತಜ್ಞತೆಗಳು
  ಡಿ.ಎಮ್.ನದಾಫ್ ಅಫಜಲಪುರ.

Leave a Reply