ತೀರಿಹೋದ ಬನವಾಸಿ ಹುಡುಗಿಯ ಕತೆ..

ಬನವಾಸಿಯ ಮಧುಕೇಶ್ವರ ದೇವಸ್ಥಾನದ ಅಂಗಳದಲ್ಲಿ ನಿಂತುಕೊಂಡಿದ್ದೆವು. ಮೂಲೆಯೊಂದರಲ್ಲಿ‌ ಬಚ್ಚಿಟ್ಟುಕೊಂಡಂತೆ ಗೋಚರಿಸುತ್ತಿದ್ದ ಬಾವಿಯಿಂದ, ಬ್ರಾಹ್ಮಣ ಅರ್ಚಕರೊಬ್ಬರು ಅಂಚು ಓರೆಯಾಗಿದ್ದ ಕಂಚಿನ ಕೊಡವನ್ನ ಮುಳುಗಿಸಿ ನೀರು ಎಳೆಯುತ್ತಿದ್ದರು.

ಬಾವಿಯೊಳಗೆ ಕೊಡ ಮುಳುಗಿದರೆ ಬಾವಿಯ ಹೊರಗೆ ನಾವಿಬ್ಬರು ಮಾತಿನಲ್ಲಿ ಮುಳುಗಿದ್ದೆವು. ತುರ್ತಿನಲ್ಲಿದ್ದವರಂತೆ ಅರ್ಚಕರು ಕೊಡವನ್ನು ಎತ್ತುವುದಕ್ಕೆ ಹಗ್ಗವನ್ನು ಎಳೆದರು. ಕೊಡ ಭರ್ತಿಯಾಗದೇ, ಅರ್ಧಕ್ಕೆ ನೀರು ತುಂಬಿ, ಉಳಿದದ್ದು ಖಾಲಿಯಾಗಿ ಮೇಲೆ ಬಂತು. “ಅಯ್ಯೋ ಅರ್ಧ ಮಾತ್ರ ತುಂಬಿದೆ” ಎಂದ ಅರ್ಚಕರು, ಅಪಶಕುನ ಎನ್ನುವಂತೆ ಮಗ್ಗಲುನಲ್ಲಿದ್ದ ತುಳಿಸಿ ಗಿಡಗಳ ರಾಶಿಗೆ ಅರ್ಧ ತುಂಬಿದ ಕೊಡದ ನೀರು ಸುರಿದು ಮತ್ತೆ ಕೊಡವನ್ನ ಬಾವಿಗೆ ಮುಳುಗಿಸಿದರು.

“ಅರ್ಧ ಕೊಡ ಇದ್ದರೆ ಸುಲಭ ಅಲ್ಲವಾ, ನೀವು ಆರಾಮ್ ಆಗಿ ಹೆಗಲ ಮೇಲೆ ಹೊರಬಹುದು” ಎಂದೆ.
ಅವರು ಜೋರಾಗಿ ನಕ್ಕರು.

“ನಾವು ನಿಮ್ಮ ಕಾಲದವರಲ್ಲ, ನಮಗೆ ಪೂರ್ತಿಯೇ ಬೇಕು” ಎಂದು ಹೇಳುತ್ತಲೇ ಕೊಡವನ್ನು ಬಾವಿಯೊಳಗೆ ಮುಳುಗಿಸಿದರು. ಎಷ್ಟೋ ಹೊತ್ತಿನ ನಂತರ ಮತ್ತೆ ಹಗ್ಗವನ್ನ ಮೇಲೆ ಎಳೆದು, ಈ ಬಾರಿ ಪೂರ್ತಿ ತುಂಬಿದ ಕೊಡವನ್ನ ಹೆಗಲಿಗೇರಿಸಿಕೊಂಡು ಗುಡಿಯ ಒಳಗೆ ಹೊರಟರು.

ಅವರು ನಡೆದು ಹೋಗುವುದನ್ನು ಹಿಂದೆ ನಿಂತು ನೋಡುತ್ತಿದ್ದ ನನಗೆ, ಮನುಷ್ಯನೊಬ್ಬ ಯಾವುದೋ ಅನೈಸರ್ಗಿಕ ಭಾರವೊಂದನ್ನು ಕಸುವಿಲ್ಲದ ಎಲುಬಿನಿಂದ ಬಲವಂತವಾಗಿ ಹೊತ್ತು ನಡೆಯುತ್ತಿದಂತೆ ಭಾಸವಾಯ್ತು.

ದೇವಸ್ಥಾನದಿಂದ ಹೊರಗೆ ಬಂದ ನನಗೆ, ಎಲ್ಲಿಯಾದರೂ ಹೊರಡಬೇಕು ಎನಿಸಿತು. ದೇವಸ್ಥಾನದ ರಥವಿದ್ದ ದೊಡ್ಡ ಕೋಣೆಯ ಎದುರು ಹೂ ಮಾರುತ್ತಿದ್ದ ಹೆಂಗಸನ್ನು, “ಇಲ್ಲಿ ಎಲ್ಲಿಯಾದರು ಕಾಡು ಇದೆಯಾ” ಎಂದು ಕೇಳಿದೆ. ಗಿರಾಕಿಯ ಎದುರು ಹೂವನ್ನು ಅಳೆಯುವಾಗ ತೋರುವಂತೆ, ಉದ್ದಕ್ಕೆ ಕೈ ಮಾಡಿ, ಬಲಗಡೆಗೆ ತಿರುಗಿ ತೋರಿದಳು. ಈ ಕಡೆ ಹೋಗಿ, ಅಲ್ಲಿ, ಹೊಲ, ಗದ್ದೆ, ಅಡಿಕೆತೋಟ, ಗೋಮಾಳದ ಬಯಲಿದೆ ಎಂದಳು. ನಾನು ನಡೆಯಬೇಕು ಎನ್ನುವಷ್ಟರಲ್ಲಿ, ಓ. . . ಎಂದು ಜೋರಾಗಿ ಕೂಗಿದಳು. ಒಂದಿಷ್ಟೇ ದೂರಕ್ಕೆ ನಿಧಾನವಾಗಿ ಹೆಜ್ಜೆಗಳನ್ನು ಊರುತ್ತ ನಡೆಯುತ್ತಿದ್ದ ಮುದಕನ್ನು ಗಟ್ಟಿಯಾಗಿ ಕರೆದು ನಿಲ್ಲಿಸಿದಳು.

“ಅವರೊಂದಿಗೆ ಹೋಗಿ, ಅವರು ಅಲ್ಲಿಗೇ ಹೋಗುತ್ತಿದ್ದಾರೆ” ಎಂದರು.

ಕಾಲು ಹಾದಿಯ ಕಾಡಿನ ಹಾದಿಯಲ್ಲಿ ನಡೆದಂತೆ ನೆನಪುಗಳು ಆವರಿಸಿಕೊಳ್ಳಲು ಶುರುವಿಟ್ಟುಕೊಂಡಿತ್ತು. ಮನುಷ್ಯ ತಾತ್ಕಾಲಿಕ ನೆಮ್ಮದಿಯ ನಿಲ್ದಾಣಗಳನ್ನು ಅವನಿಗೆ ಬೇಕಾದ ಕಡೆ ನಿರ್ಮಿಸಿಕೊಳ್ಳಲು ಹಂಬಲಿಸುವ ಹುಂಬ ಎನಿಸಿತು. ಅವನು ಅದೆಷ್ಟು ದೌರ್ಬಲ್ಯಗಳೊಂದಿಗೆ ಒಳಗೇ ಸೆಣಸಾಡುತ್ತಿದ್ದಾನೆ‌ ಎನಿಸಿತು. ಮುದುಕನ ಗೀರು ಬಿದ್ದ ಕಾಲುಗಳಲ್ಲಿದ್ದ ಚಪ್ಪಲಿಗಳು ಸವೆದಿರುವುದಷ್ಟೇ ಅಲ್ಲದೆ ಹರಿದೂ ಹೋಗಿದ್ದವು. ಕಾಲಿನ ಹೆಬ್ಬೆರಳುಗಳು ಬಲವಾಗಿ ಹೊತ್ತಿದ್ದರಿಂದ ಎರಡೂ ಚಪ್ಪಲಿಗೂ ಮೂಲೆಗಳಲ್ಲಿ ನೀಲಿ ಕಣ್ಣುಗಳು ಮೂಡಿದ್ದವು.

ನಡೆಯುತ್ತಿದ್ದ ಕಾಡಿನ ನಡುವಿನ ಅಂಕುಡೊಂಕಾದ ಕಾಲುದಾರಿ ಮನುಷ್ಯನ ಅವಶ್ಯಕತೆಗೆ ಒಳಗಾಗಿ ತನ್ನ ಸ್ವಂತಿಕೆಯನ್ನು ಕಳೆದುಕೊಂಡು ಮುಷ್ಕರ ಹೂಡಿದಂತೆ ಕಾಣುತ್ತಿತ್ತು. ನೆಟ್ಟಗೆ ಬದುಕಬೇಕು ಎಂದು ಭೋದಿಸುವ ಮನುಷ್ಯ, ನಿತ್ಯವೂ ನಡೆಯುವ ಹಾದಿಯನ್ನೂ ಸೊಟ್ಟಗೆ ನಿರ್ಮಿಸಿಕೊಂಡಿದ್ದಾನೆ ಎನಿಸಿತು. ದೂರದ ತೋಟದಲ್ಲಿ ಕಾಣುತ್ತಿದ್ದ ಅಡಿಕೆಯ ಮರಗಳು ಬಳುಕದೆ ನೆಟ್ಟಗೆ ನಿಂತಿದ್ದರೆ, ತೋಟ ಸೇರಲು ಅನಿವಾರ್ಯವಾಗಿರುವ ಕಾಲುಹಾದಿ ಮಾತ್ರ ಸೊಟ್ಟಗೆ ಕಾಣುತ್ತಿತ್ತು. ಇದೊಂದು ವೈರುಧ್ಯ.

ಕಾಡಿನ ಘಮಲು ಮೂಗಿಗೆ ಬಡಿದು, ನಿಶ್ವಾಸ ನಿರ್ಲಿಪ್ತವಾಗಿತ್ತು. ಶಿರಸಿಯ ದೇವಸ್ಥಾನದಲ್ಲಿ ಕಳೆದ ಒಂದು ತಾಸಿನ ಹಿಂದಷ್ಟೇ ದೇವರ ಎದುರು ಕೈ ಮುಗಿದು ನಿಂತಿದ್ದು ಸಾರ್ಥಕ ಎನಿಸಿತು. ಮನುಷ್ಯ ಲಿಖಿತ ಮತ್ತು ಅಲಿಖಿತ ಸಂವಿಧಾನವನ್ನು ಹೇಗೆ ಅರಿವಿಲ್ಲದೇ ಅನುಸರಿಸುತ್ತಾನೆ ಎಂದು ಭಯವಾಯಿತು.

ಜತೆ ನಡೆಯುತ್ತಿದ್ದ ಅಜ್ಜ ಒಂದೇ ಒಂದು ಮಾತನ್ನೂ ಬಿಟ್ಟುಕೊಡದೆ ನಡೆಯುತ್ತಿದ್ದರು. ಬಿಳಿಯ ಬನಿಯನ್ ಅವರ ಮೈ ತೊಗಲಿನಂತೆ ಬೆವರಿನೊಂದಿಗೆ ಮೆತ್ತಿಕೊಂಡಿತ್ತು.

ಮತ್ತೆ, ಇದು ನಿಮ್ಮ ಸ್ವಂತ ಊರು? ಎಂದೆ.

ಇಲ್ಲ, ನಮ್ಮದು ಹುಬ್ಬಳ್ಳಿ. ಇಲ್ಲಿ ಬಂದು ಆಯ್ತು, ಅವರತ್ತು ವರ್ಷ ಎಂದರು.

ಅರವತ್ತು ವರ್ಷ ಎಂದರೆ! ಇದು ನಿಮ್ಮ ಊರೇ ಆಯ್ತಲ್ಲಾ? ಎಂದು ಮಾತು ಮುಂದುವರೆಸಿದೆ.

ಇಲ್ಲ, ನಮ್ಮೂರು ಹುಬ್ಬಳಿಯೇ. ಇಲ್ಲಿಗೆ ಬಂದಿದ್ದು ಮಾತ್ರ ಹಾಗೆ, ಆಕಸ್ಮಿಕ ಎಂದರು.

ಅವರ ಮಾತುಗಳಲ್ಲಿ ಸ್ವಂತಿಕೆಯನ್ನು ಬಿಟ್ಟುಕೊಡದ ದಿವ್ಯ ಹಠವೊಂದು ನಿಚ್ಚಳವಾಗಿತ್ತು ಕಾಣುತ್ತಿತ್ತು. ಮತ್ತೆ ಇಲ್ಲಿ, ನಿಮ್ಮ ಜಮೀನಿದೆಯಾ? ಸ್ವಂತ ಮನೆ ಏನಾದರೂ ಉಂಟಾ?

ಮನೆ ಇದೆ. ಮಧುಕೇಶ್ವರ ದೇವಸ್ಥಾನದ ಆ ಕಡೆಗಿರುವ ಒಂದು ಕ್ಲಿನಿಕ್ ಇದೆಯಲ್ಲ! ಕಾಮತ್ ರದು. ಅದರ ಎದುರು ಮನೆ. ಅದು ನಮ್ಮದೇ. ಇಲ್ಲಿ ಐದು ಎಕರೆ ಅಡಿಕೆ ತೋಟವಿದೆ. ಎಂದರು.

ಹುಬ್ಬಳಿಯಲ್ಲಿ ನಿಮ್ಮ ಆಸ್ತಿ ಏನಿದೆ? ಎಂದು ಪ್ರಶ್ನೆಯನ್ನು ತಿರುಗಿಸಿದೆ.

ಅಲ್ಲಿ! ಹುಬ್ಬಳ್ಳಿಯಲ್ಲಿ ಏನಿಲ್ಲ. ಎಲ್ಲಾ ಆಸ್ತಿ ಇರೋದು ಇಲ್ಲೇ. ನಮ್ಮ ಮಕ್ಕಳು, ನೆಂಟರು ಎಲ್ಲಾ ಇಲ್ಲೇ ಇದ್ದಾರೆ. ಎಂದರು.

ವಿಚಿತ್ರ ಎನಿಸಿತು. ಮನೆ, ತೋಟ, ಸಂಬಂಧಗಳು, ನಂಟು ಬಾಂಧವ್ಯಗಳು ಎಲ್ಲವೂ ಇಲ್ಲಿಯೇ ಇರುವಾಗ, ಏನೆಂದರೆ ಏನೂ ಇರದ ಹುಬ್ಬಳ್ಳಿಯೊಂದಿಗೆ ಇವರಿಗೆ ಅದು ಯಾವ ಸಂಬಂಧ ಎಂದು ಗೊಂದಲವಾಯ್ತು.

ಮತ್ತೆ ಹುಬ್ಬಳಿಯೊಂದಿಗೆ ಏನು ಸಂಬಂಧ. ಅಲ್ಲಿ ಏನು ಇಲ್ಲಾ, ಯಾರು ಇಲ್ಲಾ ಎಂದಮೇಲೆ ಅದು ನಿಮ್ಮ ಊರು ಹೇಗಾಯ್ತು?

ನನ್ನ ಬಣ್ಣದ ಕೂದಲು, ಬೆವತ ಮುಖ, ಸೆಟೆದ ಎದೆ ಎಲ್ಲವನ್ನೂ ಸಂಕಲಿಸಿ, ಗುಣಿಸಿ ಕಡೆಗೆ ಭಾಗಿಸಿ ನಿನಗೆ ಪ್ರಾಯ ಚಿಕ್ಕದು. ಇಷ್ಟು ತೂಕದ ಬ್ಯಾಗು, ಚಪ್ಪಲಿ ನೋಡಿದರೆ ಈ ಎಲ್ಲ ಅನುಭವ ಇರುವ ಪೈಕಿ ಎನಿಸಿತ್ತದೆ. ನಿನಗೆ ಹೆಂಗಸರನ್ನು ಇಟ್ಟುಕೊಳ್ಳುವುದು ಎಂದರೆ ಗೊತ್ತಿದೆಯಾ ಎಂದರು.

ಅವರ ಮಾತು ಕೇಳುತ್ತಿದ್ದಂತೆ ನಾನು ಜೋರಾಗಿ ನಗೆಯಾಡಿದೆ. ನಾನು ಶೇವ್ ಮಾಡಿಸಿ ಪುಟ್ಟಹುಡುಗನ ಹಾಗೆ ಕಾಣುತ್ತಿದ್ದೀನಿ. ಗಡ್ಡ ಇದ್ದಿದ್ದರೆ ಬಹುಶಃ ಇದನ್ನ ಹೇಳುವುದಕ್ಕೆ ಹೀಗೆ ನೀವು ಹಿಂಜರಿಕೆ ಮಾಡುತ್ತಿರಲಿಲ್ಲ ಎಂದೆ.

ಹೊರಡಲಿರುವ ರೈಲಿಗೆ ಸ್ಟೇಷನ್ ಮಾಸ್ಟರ್ ಹಸಿರು ನಿಶಾನೆ ತೋರುವಂತೆ, ಒಂದು ಸಣ್ಣ ನಗು ಹೊರಜಾರಿಸಿದರು. ಮಾತನಾಡುವುದಕ್ಕೆ ಅಡ್ಡಿ ಇಲ್ಲ ಎನ್ನುವಂತ ಗೋಚರಿಸಿದ ಅವರ ನಗು ಕೇಳಬಹುದಾದ ಪ್ರಶ್ನೆಗಳನ್ನು ದೀರ್ಘವಾಗಿಸಿತು.

ಅದು ಸರಿ ಯಾರು ಯಾರನ್ನು ಇಟ್ಟುಕೊಂಡಿದ್ದರು?  ನಿಮ್ಮ ಹುಬ್ಬಳಿಯನ್ನು ಬನವಾಸಿ ಇಟ್ಟುಕೊಂಡಿತ್ತಾ, ಅಥವಾ ಬನವಾಸಿಯನ್ನು ನಿಮ್ಮ ಹುಬ್ಬಳಿ ಇಟ್ಟುಕೊಂಡಿತ್ತಾ, ಎಂದು ಕೇಳಿದೆ ನಗುತ್ತ.

ನನ್ನ ಅಪ್ಪ, ಅವನು ಈ ಬನವಾಸಿಯ ಹೆಂಗಸನ್ನ ಇಟ್ಟುಕೊಂಡಿದ್ದು. ಅದಕ್ಕೆ ನಾನು ಈಗ ಬನವಾಸಿಯವನು. ಆದರೂ ನಮ್ಮೂರು ಮಾತ್ರ ಹುಬ್ಬಳ್ಳಿ ಎಂದರು ಅಜ್ಜ.

***

ಮೈ ತುಂಬಾ ಗೀರುಬಿದ್ದಂತೆ ನೆರಿಗೆಗಳನ್ನು ಮೂಡಿಸಿಕೊಂಡಿದ್ದ, ನನ್ನೊಂದಿಗೆ ಕಾಡಿನ ಹಾದಿಯಲ್ಲಿ ಹೆಜ್ಜೆ ಹಾಕುತ್ತಿದ್ದ ಅಜ್ಜನ ಅಪ್ಪ ಮೂಲತಃ ಹುಬ್ಬಳಿಯವರು. ಹತ್ತನೇ ಕ್ಲಾಸ್ ಓದಿದ್ದ ಅವರಿಗೆ ಶಿರಸಿ ಹಾಗೂ ಹುಬ್ಬಳ್ಳಿ ಹೆದ್ದಾರಿಯ ರಸ್ತೆ ಕಾಮಗಾರಿ ನಡೆಯುವಾಗ ಲೆಕ್ಕ ಬರೆಯುವ ಕೆಲಸ ಸಿಕ್ಕಿತ್ತು.‌

ಲೆಕ್ಕ ಬರೆಯುವ ಕೆಲಸಕ್ಕೆ ಸೇರುವ ಮೊದಲೇ ಹುಬ್ಬಳಿಯಲ್ಲಿ ಹುಡುಗಿಯೊಬ್ಬಳನ್ನ ಮದುವೆಯಾಗಿದ್ದ ಅಜ್ಜನ ಅಪ್ಪನಿಗೆ ಇಬ್ಬರು ಮಕ್ಕಳು. ಅದರಲ್ಲಿ ನನ್ನೊಂದಿಗೆ ಹೆಜ್ಜೆ ಹಾಕುತ್ತಿದ್ದ ಇವರು ಒಬ್ಬರಾದರೆ,  ಇನ್ನೊಬ್ಬ ನೀರಿನಲ್ಲಿ ಮುಳುಗಿ ಸತ್ತು ಅದೆಷ್ಟೋ ವರ್ಷಗಳು ಕಳೆದುಹೋಗಿದ್ದವು.

ಅಜ್ಜನಿಗೆ ಈಗ ಸತ್ತ ತಮ್ಮನ ಮುಖ ನೆನಪು ಮಾಡಿಕೊಳ್ಳಿ ಎಂದರೆ, ಬಾಯಲ್ಲಿದ್ದ ಎಲೆ ಅಡಿಕೆಯನ್ನು ಇನ್ನೂ ಜೋರಾಗಿ ಜಗಿದು ನೆಲಕ್ಕೆ ಒಮ್ಮೆ ತುಪ್ಪಿ, ನೆನಪು ಇಲ್ಲ. ಅವನ ಮುಖವೇ ಮರೆತುಹೋಗಿದೆ ಕಣಪ್ಪಾ, ನಾನು ಆಗ ಚಿಕ್ಕ ಹುಡುಗ ಎನ್ನುತ್ತಾರೆ.

ಹೀಗೆ ಶಿರಸಿ ಹುಬ್ಬಳಿಯ ಹೆದ್ದಾರಿಯ ಕಾಮಗಾರಿ ಮುಗಿಯುವಷ್ಟರಲ್ಲಿ ಅಜ್ಜನ ಅಪ್ಪನಿಗೆ ಬನವಾಸಿಯ ಸಣ್ಣ ಪ್ರಾಯದ ಹುಡುಗಿಯೊಬ್ಬಳ ಜತೆ ಸಂಗ ಬೆಳೆದಿತ್ತು. ರಸ್ತೆ ತಿರುವು ತೆಗೆದುಕೊಂಡಂತೆ ಅಜ್ಜನ ಅಪ್ಪನೂ ತೆಗೆದುಕೊಂಡಿದ್ದರು. ಬನವಾಸಿಯಲ್ಲಿ ಸಾಕು ಎನ್ನುವಷ್ಟು ಆಸ್ತಿ ಹೊಂದಿದ್ದ ಪೈಕಿ ಮನೆಯೊಬ್ಬರ ಮಗಳು ಆ ಸಣ್ಣ ಪ್ರಾಯದ ಹುಡುಗಿ.

ಹೂವಿನ ಅಡರಿದ್ದ ಚಿತ್ತಾರಗಳ ಲಂಗ ತೊಡುತ್ತಿದ್ದ ಹುಡುಗಿಗೆ, ಅದಾಗಲೇ ಹೆಂಡತಿ, ಮಕ್ಕಳಿದ್ದ ಗಂಡಸಿನ ಮೇಲೆ ಪ್ರೀತಿಯಾಗಿ ಹೋಗಿತ್ತು. ನನಗೆ ಮದುವೆಯಾಗಿದೆ.‌ ಹೆಂಡತಿ ಇದ್ದಾಳೆ. ಒಬ್ಬ ಮಗನಿದ್ದಾನೆ. ತಿರುಗಿ ನಾನು ಹುಬ್ಬಳಿಗೆ ಹೋಗುತ್ತೇನೆ, ಶಿರಸಿಯಲ್ಲಿ ಯಾವ ಕೆಲಸವೂ ಇಲ್ಲ. ನಾನು ಹೊರಡುತ್ತೇನೆ. ನೀನು ಯಾರನ್ನಾದರೂ ಮದುವೆಯಾಗು ಎಂದು ಅಜ್ಜ ಅಪ್ಪ ಗೋಳು ತೋಡಿಕೊಳ್ಳುವಾಗಲೂ, ಆಕೆ ಮಾತ್ರ ಧೃತಿಗೆಡದೆ ನಿಂತುಬಿಟ್ಟಿದ್ದಳು.

ನಲವತ್ತು ವರ್ಷಗಳ ಹಿಂದೆಯೇ ಹುಬ್ಬಳ್ಳಿಗೆ ಹೋಗಿ ಆ
ಸಣ್ಣ ಪ್ರಾಯದ ಹುಡುಗಿ ಇಷ್ಟಪಟ್ಟಿದ ಅವನ
ಹೆಂಡತಿಯ ಎದುರು ನಿಂತಿದ್ದಳು. ನನಗೆ ಮಕ್ಕಳು ಬೇಡ. ನಿನ್ನ ಮಕ್ಕಳೇ ಸಾಕು, ನನ್ನ ಆಸ್ತಿಯನ್ನು ಅವರಿಗೆ ಬರೆದುಕೊಡುತ್ತೇನೆ. ನನಗೆ ಮತ್ತೊಂದು ಮದುವೆಯೂ ಬೇಡ. ನನಗೆ ನಿನ್ನ ಗಂಡನ ಜತೆ ನೆಮ್ಮದಿಯಾಗಿರಲು ಬಿಟ್ಟುಕೊಡು. ನೀನು ನಿನ್ನ ಗಂಡನ ಜತೆಯೇ ಇರು. ಇಬ್ಬರೂ ಇರಬಹುದು ಎಂದು ಹೇಳಿಬಿಟ್ಟಿದ್ದಳು.

ಲಂಗ ತೋಡುವ ಹುಡುಗಿಯ ಮಾತುಗಳಿಗೆ ಹೆಂಡತಿಯೂ ಕೂಡ ಮಾತನಾಡಿಲ್ಲ. ಕಡೆಗೆ ಆ ಮಾತುಗಳು ನಿಜವೇ ಆಗಿಹೋದವು. ಮಗಳು ಹೀಗೆ ಇಷ್ಟು ಸಣ್ಣ ವಯಸ್ಸಿಗೆ ಹೀಗೆ ಮಾಡಿದಳು ಎಂದು ಸಿಟ್ಟಾಗಿ ಬನವಾಸಿಯ ಹುಡುಗಿಗೆ ಆಕೆಯ ಅಪ್ಪ ಸಾಕು ಎನ್ನುವಷ್ಟು ಜಪ್ಪಿದ್ದರು. ಆದರೂ ಅವಳು ಮಾತು ಬದಲಿಸಲಿಲ್ಲ.

ನಾನು ಮತ್ತೊಂದು ಮದುವೆಯಾಗಿ ಮಾಡುವುದೇನು. ಈಗಾಗಲೇ ಮಾಡುವುದೆಲ್ಲ ಮಾಡಿ ಆಗಿದೆ. ಅವನು ಒಳ್ಳೆಯವನು. ಅವನ ಹೆಂಡತಿಯ ಜತೆ ಮಾತನಾಡಿದ್ದೇನೆ. ಅವನ ಜತೆ ಇದ್ದು ಸಾಯುವುದು ಅಷ್ಟೇ ಎಂದು ರಂಪಕ್ಕೆ ಕೂತುಬಿಟ್ಟಳು. ಒಬ್ಬಳೇ ಮಗಳ ಈ ರಂಪಾಟ ನೋಡಿದ ಮೇಲೆ ಸಾಕುಸಾಕಾದ ಅವಳ ಅಪ್ಪ‌ ನಿರ್ಧಾರಕ್ಕೆ ಬಂದು ನಿಂತಿದ್ದರು.

ಅವನು ಇಟ್ಟುಕೊಂಡವಳು ಎಂದು ಜನರು ನಿನ್ನನ್ನು ಗುರುತಿಸುವುದು ಬೇಡ ಅವನನ್ನೇ ಮದುವೆಯಾಗು ಎಂದಿದ್ದರು. ಕಡೆಗೆ ಒಬ್ಬಳು ಹೆಂಡತಿ, ಒಬ್ಬ ಮಗ ಇರುವ ಗಂಡಸಿನೊಂದಿಗೆ ಗುಟ್ಟಾಗಿ ಮದುವೆ ಮಾಡಿಸಿದ್ದರು. ಶಿರಸಿ ಹುಬ್ಬಳಿಗೆ ಹೆದ್ದಾರಿ ನಿರ್ಮಾಣಕ್ಕೆ ವ್ಯಯವಾದ ಲೆಕ್ಕವನ್ನು ಬರೆಯಲು ಬಂದನು ಒಳ್ಳೇ ಲೆಕ್ಕಾಚಾರ ಮಾಡಿ, ಭಾರೀ ಹುಡುಗಿಯನ್ನೇ ಆರಿಸಿಕೊಂಡು ಹೋದ ಎಂದು ಬನವಾಸಿಯ ಜನ ಹೇಳುವಾಗ ಅವನು ಮಾತ್ರ ಶಸ್ತ್ರವಿಲ್ಲದೇ ಯುದ್ದ ಗೆದ್ದವನಂತೆ ಮುಸಿಮುಸಿ ನಗೆಯಾಡುತ್ತಿದ್ದ.

ಇಬ್ಬರ ಹೆಂಡತಿಗೂ ಪ್ರಿಯನಾಗಿ ಮೂರು ದಿನ ಹುಬ್ಬಳ್ಳಿಯಲ್ಲಿ, ಮೂರು ದಿನ ಬನವಾಸಿಯಲ್ಲಿ ಕಳೆಯುತ್ತಿದ್ದವನು ಭೂಲೋಕದ ಇಂದ್ರನಾಗಿಹೋಗಿದ್ದ. ಇಬ್ಬರು ಹೆಂಡತಿಯರ ನಡುವೆಯೂ ಜಗಳವಿರಲಿಲ್ಲ. ತೋಟ, ಮನೆಗಳು ಕೈ ಸೇರಿದ್ದವು. ಕೆಲವು ವರ್ಷಗಳ ನಂತರ ಹೂವಿನ ಚಿತ್ತಾರದ ಲಂಗದ ಹುಡುಗಿ ಅಪ್ಪ ಸತ್ತುಹೋದ ಮೇಲೆ ಹುಬ್ಬಳಿಯ ಬಾಡಿಗೆ ಮನೆ ತೊರೆದು ಆ ಸಂಸಾರ ಬನವಾಸಿಗೆ ಬಂದು ಸೇರಿಕೊಂಡಿತು. ಇಲ್ಲೇ ಹೊಸ ಬದುಕಿನ ಹಾದಿ ಕವಲೊಡೆದಿತ್ತು.

ದಿನಗಳು ಕಳೆದು, ಋತುಗಳು ಉರುಳಿ, ಅವರೆಲ್ಲರ ಚೂಪು ಕೂದಲುಗಳು ಬೆಳ್ಳಕ್ಕಿ ಬಾಲದಂತೆ ಕಂದು ಬಣ್ಣಕ್ಕೆ ತಿರುಗಿ, ಕ್ರಮೇಣ ಬಿಳಿಯಾಗಿ, ಮುಖ ಬಿಳಚಿ, ಆಯಸ್ಸು ಕಳೆದು ಕಡೆಗೆ ಪೈಪೋಟಿಗೆ ಬಿದ್ದವರಂತೆ ಒಬ್ಬರ ಹಿಂದೆ ಮತ್ತೊಬ್ಬರು ಸತ್ತು ಹೋದರು.

ಎಲ್ಲರೂ ಸತ್ತುಹೋದ ಮೇಲೆ ಹುಡುಗನಾಗಿದ್ದ ಹುಡುಗನಾಗಿದ್ದ ಅಜ್ಜ ಮಾತ್ರ ಅಷ್ಟು ದೊಡ್ಡ ಮನೆಯಲ್ಲಿ ಉಳಿದರು. ಜಾತಿಯ ಗುರುತೇ ಇರದ ಹುಡುಗಿಯೊಬ್ಬಳನ್ನು ಎಲ್ಲಿಂದಲೋ ಕರೆದು ತಂದು ಮದೆಯಾದರು. ಬಾಲ್ಯದಿಂದಲೂ ಅಡಿಕೆ ತೋಟ ನೋಡಿದ ಇವರು, ಅಡಿಕೆ ಬೆಳೆದಂತೆ ಇವರೂ ಬೆಳೆದರು. ಮಕ್ಕಳಾದವು. ಮಗಳು ಮಾತ್ರ ಊರಿನಲ್ಲಿದ್ದಾಳೆ.‌ ಗಂಡು ಮಕ್ಕಳು ಬೇರೆ ಊರಿನಲ್ಲಿದ್ದಾರೆ.

ಅಷ್ಟು ತೋಟ, ಗದ್ದೆ ಇದ್ದರು ಅಜ್ಜ ಮಾತ್ರ ಇಂದಿಗೂ ಜುಗ್ಗಾತಿ ಜುಗ್ಗ. ತೋಟದ ಅಡಿಕೆಯ ಒಂದು ಎಸಳು ಹೂವನ್ನೂ ನೀಡದೆ ಉಳಿಸುತ್ತಿದ್ದಾರೆ. ಹರಿದ ಚಪ್ಪಲಿಯನ್ನೂ ಬದಲಾಯಿಸದ ಇವರು, ಅಜ್ಜ ನೀವು ಇಷ್ಟು ದುಡ್ಡು ಉಳಿಸುತ್ತಿರುವುದು ಯಾರಿಗೆ ಎಂದು ಕೇಳಿದರೆ ಮೌನವಾಗುತ್ತಾರೆ.

ನನ್ನ ಅಪ್ಪ ಹೀಗೆ, ಹುಬ್ಬಳಿಯವನಾಗಿದ್ದರೂ, ಬನವಾಸಿಯ ಹುಡುಗಿಯನ್ನು ಇಟ್ಟುಕೊಂಡು ಇಷ್ಟು ರಂಪಾಟ ಮಾಡಿದ ಎನ್ನುವ ಸಿಟ್ಟು ಅವರ ಮಾತಿನಲ್ಲಿ ಆಗಾಗ ಪ್ರಕಟವಾಗುತ್ತಲೇ ಇತ್ತು. ಇಲ್ಲಿ ಎಷ್ಟೇ ಆಸ್ತಿ ಇದ್ದರೂ ಯಾವುದು ನಮ್ಮದಲ್ಲ ಎನ್ನುವ ಎಚ್ಚರ ಕಾಣುತ್ತಿತ್ತು. ಕಡೆಗೆ ಮತ್ತೊಮ್ಮೆ ಇದಕ್ಕೆ ನಮ್ಮೂರು ಹುಬ್ಬಳ್ಳಿ ಎಂದರು.

ತಾಯಿಬೇರಿನ ಆಸರೆಯನ್ನು ಅವಲಂಭಿಸಿದ ಗಿಡದ ಹೂವಿನಂತೆ ಅಜ್ಜ ಕಾಣುತ್ತಿದ್ದರು. ಈ ಪ್ರಕರಣ ಭಾಗವಾಗಿರುವ ಅವರು ಸೋಜಿಗ ಎನಿಸಿತು.

ನಿಮಗೆ ಆಸ್ತಿಗಿಂತ, ನಿಮ್ಮ ಊರು ಮುಖ್ಯವಾಯ್ತು! ಎಂದು ಕೇಳಿದೆ.

ಹೌದು. . .ಎಷ್ಟೇ ವರ್ಷ ಆದರೂ, ನಮ್ಮೂರು ಈ ಬನವಾಸಿಯಲ್ಲ, ಹುಬ್ಬಳ್ಳಿ. ಇದು ನನ್ನ ಆಸ್ತಿಯಲ್ಲ ಎಂದರು. ಅವರದು‌ ಎಂದರು.

ಮನುಷ್ಯನೊಬ್ಬ ತನ್ನ ಮೂಲವನ್ನು ಇಷ್ಟು ಬಲವಾಗಿ ಹಿಡಿದುಕೊಳ್ಳಲು ಇರಬಹುದಾದ ಕಾರಣವನ್ನು ಯೋಚನೆ ಮಾಡುತ್ತಿದ್ದೆ. ಅಮ್ಮನಿಗೆ ಕುಂಡೆ ತೋರಿಸಿ ಓಡುವ‌ ಎಳೆಯ ಮಗುವಿನ ದಿನಗಳಿಂದ ಚಡ್ಡಿ ಹಾಕಿದ ದಿನಗಳು ಆರಂಭವಾಗಿದ್ದು ಇದೇ ಬನವಾಸಿಯಲ್ಲಿ.
ಹುಬ್ಬಳಿಯ ಯಾವ ನೆನಪೂ ಇವರ ಸ್ಮೃತಿಯಲ್ಲಿ ಇಲ್ಲ.‌
ಆದರೂ ಅವರಪ್ಪ ಹೇಳಿದ ಹುಬ್ಬಳಿಯ ದಿನದ ಕತೆಗಳು ಇಷ್ಟು ಗಟ್ಟಿಯಾಗಿ ನಿಲ್ಲುವುದು ಹೇಗೆ?

ಅದೊಂದು ವೇಳೆ ಅಜ್ಜನ ಅಪ್ಪ ಹುಬ್ಬಳ್ಳಿಯ ಮೂಲವನ್ನು ಇವರಿಗೆ ಹೇಳದೇ ಇದ್ದರೆ ಇವರಿಗೆ ಮೂಲ ಊರು ಯಾವುದಾಗಿರುತ್ತಿತ್ತು! ಆಗಲೂ ಅಜ್ಜ ಬಮವಾಸಿಯನ್ನು ನಮ್ಮದಲ್ಲ‌ ಎನ್ನುತ್ತಿದ್ದರೆ? ಈ
ಪ್ರಶ್ನೆಗಳು ಕಾಡಲು ಶುರುವಿಟ್ಟುಕೊಂಡವು. ಅವರ ಪ್ರತಿ ಚರ್ಯೆಯೂ ಸುತ್ತಲೂ ಆವರಿಸಿಕೊಂಡಿದ್ದ ಕಾಡಿನಷ್ಟೇ ನಿಗೂಢವಾಗಿ ಕಾಣುತ್ತಿತ್ತು.

ಅಜ್ಜ ಮಾತುಗಳ ನಡುವೆ ಅರವತ್ತು ವರ್ಷಗಳ ಹಿಂದೆಯೇ, ಹುಡುಗಿಯೊಬ್ಬಳು ಮದುವೆಯಾಗಿರುವ ಗಂಡಸನ್ನು ವರಿಸಿದ್ದು ಹರಸಹಾಸ ಎನಿಸಿತು. ಎಲ್ಲವನ್ನೂ ಸಾಧಿಸಿಕೊಳ್ಳುವ ಸಾಧ್ಯತೆಗಳಿರುವ ಈ ಶತಮಾನದಲ್ಲೂ ನೂರೆಂಟು ಕಾರಣಗಳನ್ನು ಎದುರಿಟ್ಟುಕೊಂಡು ತಲುಪುಬಹುದಾದ ಗಮ್ಯವನ್ನೇ ಮಸುಕಾಗಿಸಿಕೊಳ್ಳುವವರ ನಡುವೆ ಬೇಕು ಎನಿಸಿದ್ದನ್ನು ಪಡೆದ ಆಕೆ ದಿಟ್ಟೆ ಎನಿಸಿತು. ಪ್ರಮಾಣಿಕತೆ ಕುರುಹುವಿನಂತೆ ಕಂಡಳು. ಆ ಎಲ್ಲಕ್ಕಿಂತಲೂ ಸಹಜ ಮನುಷ್ಯಜೀವಿಯೊಂದು ಬಯಸಿದಂತೆ ಬದುಕಿದ ನಿರ್ಮಲ ಜೀವ ಎನಿಸಿತು.

ಕಾಡಿನ ದಾರಿಯಲ್ಲಿ ನಡೆಯುತ್ತಿದ್ದ ಇಬ್ಬರೂ ಸಾಕಷ್ಟು ದೂರ ನಡೆದು ಬಂದಿದ್ದವು. ಕಣ್ಣಿಗೆ ಎಟಕುವಷ್ಟು ದೂರದಲ್ಲಿ ಪರದೆಯಂತಹ ಹಸಿರು ಶಾಲು ಹೊದ್ದು ಮಲಗಿದ್ದ ಗದ್ದೆಯನ್ನು ತೋರಿಸಿದರು ಅಜ್ಜ. ಅಷ್ಟು ನಮ್ಮ ಗದ್ದೆ ಬಯಲು ನಮ್ಮದು. ಆ ಬದಿಯದು ಅಡಿಕೆ ತೋಟ ಎಂದು ಕೈ ಮಾಡಿದರು. ಅಡಿಕೆ ಮರಗಳು ಗಾಳಿಗೆ ತೂಗುತ್ತಿದ್ದವು. ನಾನು ಅಜ್ಜನ ಮುಖವನ್ನೇ ನೋಡಿದೆ. ಬಿಸಿಲಿಗೆ ಮುಖ ಬೆವತುಹೋಗಿದ್ದರಿಂದ ನನ್ನ ಕನ್ನಡಕ ಮೂಗಿನ ತುದಿಗೆ ಜಾರಿಕೊಂಡಿತ್ತು.

ನಾನು ತೋಟಕ್ಕೆ ಹೊರಡುತ್ತೇನೆ.‌ನೀವು ಈ ದಾರಿಯಲ್ಲಿ ಹೋದರೆ ಒಂದು ಸೇತುವೆ ಇದೆ. ಅಲ್ಲಿ, ನೀರು, ಕಾಡು ಇದೆ ಎಂದರು.

ನಿಮ್ಮಪ್ಪನ್ನನ್ನು ಮದುವೆಯಾದ ಹುಡುಗಿಯ ಫೋಟೋ ಇದೆಯಾ ಮನೆಯಲ್ಲಿ? ಎಂದು ಕೇಳಿದೆ.

ಅವರು ನಗುತ್ತಾ, ಉಂಟು! ಎಂದರು.

ಮನೆಗೆ ಬಂದರೆ ತೋರಿಸ್ತೀರಾ!

ಕಾಡು ಸುತ್ತಿಯಾದ ಮೇಲೆ ಮನೆಗೆ ಹೊರಡಿ. ನಾನು ನನ್ನ ಮಗಳಿಗೆ ಫೋನ್ ಮಾಡಿ ಹೇಳ್ತೇನೆ, ನೀವು ಬರ್ತೀರಾ ಅಂತ. ಅವಳು ತೋರುತ್ತಾಳೆ ಎಂದರು.

ಬನವಾಸಿಯ ತೋಟಗಳ ಸುತ್ತಲೂ ಹರಡಿಕೊಂಡಿದ್ದ ಕಾಡಿನ ಹಾದಿ ಕಣ್ಣು ಚಾಚಿದಷ್ಟು ದೂರಕ್ಕೂ ಚಾಚಿಕೊಂಡಿತ್ತು. ಮೊದಲು ಎಲ್ಲಿಗೆ ಹೊರಡಬೇಕು ಎಂದು ಪ್ರಶ್ನಿಸಿಕೊಂಡೆ. ಅಸಲಿಯಾಗಿ ಹೀಗೆ ರಾತ್ರೋ ರಾತ್ರಿ ಬಸ್ಸು ಹಿಡಿದು ನಾನು ಶಿರಸಿ ಹಾಗೂ ಬನವಾಸಿಯ ಕಾಡುಗಳನ್ನು ಏಕೆ ಅಲೆಯುತ್ತಿದ್ದೇನೆ ಎನ್ನುವ ಅನುಮಾನ ಸುಳಿಯಿತು.

ದೂರದಲ್ಲಿ ಕಾಣುತ್ತಿದ್ದ ಸೇತುವೆಯಿಂದ ನೀರು ಸೋರುತ್ತ ಸದ್ದು ಮಾಡುತ್ತಿತ್ತು. ಕೆಲವನ್ನು ಪ್ರಶ್ನಿಸಿಬಾರದು, ಮನಸ್ಸುನ್ನು ಖಾಲಿಯಾಗಿರಿಸಿಕೊಳ್ಳಬೇಕು. ತಲುಪುವ ಹಾದಿಗಿಂತ ನಡೆಯುವ ದಾರಿಯಷ್ಟೇ ಮುಖ್ಯ. ಕಾಡಿನ ಹಾದಿಯನ್ನು ಸವೆಸಿ, ತೀರಿಹೋದ ಬನವಾಸಿ ಹುಡುಗಿಯನ್ನು ನೋಡುವುದಕ್ಕೆ ಹೊರಡಬೇಕು ಎಂದುಕೊಂಡೆ. ಎಲ್ಲ ಪ್ರಶ್ನೆಗಳಿಗೂ ಉತ್ತರ ದೊರೆತು ಸ್ತಬ್ಧವಾದಂತೆ ತಲೆ ಮತ್ತು ಮನಸ್ಸು ಎರಡೂ ಖಾಲಿಯಾಗಿ ಉಳಿದವು.

3 comments

  1. ತುಂಬಾ ಚೆನ್ನಾಗಿದೆ. ಮುಂದಿನ ಭಾಗಕ್ಕೆ ಕಾಯುತ್ತಿದ್ದೇನೆ, ಹಾಗೆಯೇ ಫೋಟೋಗೂ

Leave a Reply