ಮೇಘನಾ ಸುಧೀಂದ್ರ ಕಂಡ ‘ಅಂಗೋಲಾ ಎಂಬ ವಿಸ್ಮಯ’

ಮೇಘನಾ ಸುಧೀಂದ್ರ

ನಾನು ಬಾರ್ಸಿಲೋನಾದಲ್ಲಿ ಓದುತ್ತಿದ್ದಾಗ ಹೊಸದಾಗಿ ಬಂದ ನಮ್ಮಂಥ ವಲಸಿಗರಿಗೆ ಯೂರೋಪಿನ ಇತಿಹಾಸ, ಸಂಸ್ಕೃತಿಯನ್ನ ಪರಿಚಯಿಸುವ ಕೆಲಸವನ್ನ ಯೂನಿವರ್ಸಿಟಿಯವರು ಮಾಡುತ್ತಿದ್ದರು. ವಿಶ್ವಯುದ್ಧದ ಕಥೆಗಳನ್ನ ತುಂಬಾ ಪ್ಯಾಷನೇಟ್ ಆಗಿ ಹೇಳುತ್ತಿದ್ದರು. ಇದ್ದವರಲ್ಲಿ ನನಗೆ ಮತ್ತು ಗುಂಪಿನ ಮತ್ತೊಂದು ಕಡೆ ನಿಂತಿದ್ದ ಗಲಿಮಾಳಿಗೆ ಮಹಾ ಬೋರು ಎಂದು ಅನ್ನಿಸುತ್ತಿತ್ತು.

ನಿಂತು ನಿಂತು ಸಾಕಾಗಿ ಅಲ್ಲಿದ್ದ ಫೌಂಟೇನ್ ಅಲ್ಲಿ ನೀರು ತುಂಬಿಸಿಕೊಳ್ಳಲು ಹೋದಾಗ ಗಲಿಮಾ “ಪಾಕಿ?” ಎಂದು ನನ್ನನ್ನು ಪ್ರಶ್ನೆ ಮಾಡಿದಳು, “ನೋ” ಎಂದು ಕೋಪ ಮಾಡಿಕೊಂಡು ಭರಭರ ನಡೆದೆ. ಅವಳು ಮಹಾಪರಾಧ ಮಾಡಿದಳೇನೋ ಎಂದು ಪಾಪ ಸಾರಿ ಕೇಳಲು ಬಂದಳು.

ಆದರೆ ಯುರೋಪಿಗೆ ಬಂದಾಗ ನಮಗೆಲ್ಲಾ ಒಂದಷ್ಟು ಎಚ್ಚರಿಕೆ ಕೊಟ್ಟಿದ್ದರು. ಆಫ್ರಿಕಾದ ಸುಮಾರು ಜನರು ಡ್ರಗ್ ದಂಧೆಯಲ್ಲಿ ಇದ್ದಾರೆಂದು, ಅವರು ವಿದ್ಯಾರ್ಥಿಗಳಾಗಿ ಸೇರಿಕೊಂಡಿರಬಹುದೆಂದು ಹೇಳಿದ ಮೇಲೆ ಅವಳು ನನಗೇನಾದರೂ ಮಾಡೋದಕ್ಕೆ ಬಂದಳಾ ಎಂದು ಭಯ ಪಟ್ಟು ಟಪಟಪ ಎಂದು ಓಡಿ ಬರುತ್ತಿದ್ದೆ. ಗಲಿಮಾ ನನ್ನನ್ನ ಪಾಕಿ ಎಂದು ಹೇಗೆ ತಪ್ಪು ತಿಳಿದುಕೊಂಡಳೋ ನಾನೂ ಆಫ್ರಿಕಾದವರೆಲ್ಲಾ ಡ್ರಗ್ ದಂಧೆಯಲ್ಲಿರುತ್ತಾರೆ ಎಂದು ತಪ್ಪು ತಿಳಿದುಕೊಂಡು ಹೋದೆ. ಹಂಗಾಗಿಯೂ ಅವಳು ಬಂದು “ನಿನ್ನ ಬಣ್ಣ ನೋಡಿ ಹಾಗೆಂದುಕೊಂಡೆ” ಎಂದು ಹೇಳಿ ಮಾತಿಗೆಳೆದಳು.

ಅವಳು ಕಾಂಗೋ ದೇಶದವಳು, ಅವಳ ದೇಶವನ್ನ ಗುಲಾಮರನ್ನಾಗಿಸಿ ಮಾಡಿದ ವಿಶ್ವಯುದ್ಧದ ಮೇಲೆ ಯಾವ ಆಸಕ್ತಿಯೂ ಇಲ್ಲ ಎಂದಾಗ ನನಗೂ ಹಾಗೆ ಆನಿಸುತ್ತು. ಇಡೀ ಭಾರತವನ್ನ ಗುಲಾಮರನ್ನಾಗಿಸಿ ಇನ್ನು ನಮ್ಮನ್ನೂ ಇಷ್ಟವಿದೆಯೋ ಇಲ್ಲವೋ ಯುದ್ಧದ ಭೀಕರತೆಗೆ ಒಡ್ಡಿ ಜಗತ್ತನ್ನೇ ಗೆದ್ದೆವು ಎಂಬ ಹಾಸ್ಯಾಸ್ಪದ “ಸೋಡೋ ಯುದ್ಧ” ವನ್ನ ನಾನೂ ಮತ್ತು ಗಲಿಮಾ ಸಂಭ್ರಮಿಸುತ್ತಿರಲ್ಲಿಲ್ಲ.

ಇಬ್ಬರೂ ಒಂದು ಕಲ್ಲು ಬೆಂಚಿನ ಮೇಲೆ ಕೂತು “ಯಾಕೆ ವಿಶ್ವ ಯುದ್ಧ ಸಹ್ಯವಾಗಿರಲ್ಲಿಲ್ಲ” ಎಂದು ಗಂಭೀರ ಚರ್ಚೆ ಮಾಡಿದ್ದೆವು.

ಅದೇ ಸಂದರ್ಭದಲ್ಲಿ ಅಲ್ಲೆಲ್ಲೋ ದೂರದಲ್ಲಿ ಕೂತಿದ್ದ ಅಂಗೋಲಾದ ಪ್ರಸಾದ್ ನಾಯಕ್ ಜೊತೆ ಫೇಸ್ಬುಕ್ಕಿನಲ್ಲಿ ಮಾತಾನಾಡುತ್ತಿದ್ದೆ. ಎಲ್ಲರ ಹಾಗೆ ನಾನೂ ಅಂಗೋಲಾವನ್ನ ಅಂಕೋಲಾ ಎಂದೇ ಅಂದುಕೊಂಡೆ. ತೀರ ನಮ್ಮಂತಹ ಐಟಿ ಮಂದಿಗೆ “ಆನ್ ಸೈಟ್” ಎಂದುಕೊಂಡರೆ ಅಮೇರಿಕಾ, ಯುರೋಪ್, ಆಸ್ಟ್ರೇಲಿಯಾ ಎಂಬುದಷ್ಟೆ. ನಮ್ಮ ದೇಶ ಅದೆಲ್ಲಕ್ಕಿಂತ ಅತ್ಯಂತ ಕಳಪೆಯಾಗಿದೆ ಎಂಬ ಲೇಖನ ಬರೆಯುವುದಷ್ಟಕ್ಕೆಬಹುತೇಕ ಬಾರಿ ನಮ್ಮ ಆನ್ ಸೈಟ್ ಪ್ರವಾಸಗಳು ಸೀಮಿತಗೊಳ್ಳುತ್ತದೆ. ನಮ್ಮಗ್ಯಾಕೆ ಹಾಗೆಲ್ಲಾ ಆಗೋದಕ್ಕೆ ಸಾಧ್ಯವಿಲ್ಲ ಎಂಬ ಗಂಭೀರ ಚರ್ಚೆ, ಅಂಕಣಗಳಿಗೆ ನಮ್ಮ ಸೀಮಿತಗೊಳಿಸುತ್ತೇವೆ. ನಮಗಿಂತ ಎತ್ತರದಲ್ಲಿರುವವರಿಗೆ ನಮ್ಮನ್ನ ಹೋಲಿಸಿಕೊಳ್ಳಬೇಕು ಎಂಬ ಹುಚ್ಚು ನಮ್ಮನ್ನ ಕೆರಳಿಸುತ್ತದೋ ನಾ ಕಾಣೆ.

ಇದೆಲ್ಲವನ್ನ ಮೀರಿ ಯಾವುದಾದರೂ ಅಂಕಣ, ಪುಸ್ತಕ ಇದೆ ಎಂದರೆ ಪ್ರಸಾದನ “ಹಾಯ್ ಅಂಗೋಲಾ” ವೇ. ಅವನು ಬರೆದ ಪೂರ್ತಿ ೫೦ ವಾರದ ಯಾತ್ರೆಯ ಸುಮಾರಷ್ಟು ಕಥೆಗಳು ನನಗೆ ಗೊತ್ತಿತ್ತು, ಆದರೂ ಮತ್ತೆ ಪುಸ್ತಕ ಕೈಗೆತ್ತುಕೊಳ್ಳುವ ಕ್ಯೂರಿಯಾಸಿಟಿ ಅವನು ಉಳಿಸಿಕೊಂಡಿದ್ದು ವಿಶೇಷವೇ ಸರಿ. “ಏನ್ ಮಾರಾಯ ಯಾವುದೋ ಹಳ್ಳಿಗೆ ಹೋಗಿ, ಆನ್ ಸೈಟ್ ಅಂತ್ಯಾ” ಎಂದು ಸುಮಾರು ಬಾರಿ ನಾನೂ ಕೆಣಕುತ್ತಿದ್ದೆ. ನಮ್ಮಿಬ್ಬರ ಕೊಲ್ಯಾಬ್ ಕಥೆಗಳ ಬಗ್ಗೆ ಮಾತಾಡಬೇಕೆಂದಾಗ ಈ ಮನುಷ್ಯ ಗಾಯಬ್. “ಅಂಕೋಲಾದಲ್ಲಿ ಒಂದು ಜಿಯೋ ಸಿಮ್ ಇಟ್ಟುಕೊಂಡಿದ್ದರೂ ನಾವು ಸಿಕ್ಕಾಪಟ್ಟೆ ಕಥೆ ಬರೆಯಬಹುದಿತ್ತು ಮಾರಾಯ, ಕರ್ಮ” ಎಂದು ಬೇಕಾದಷ್ಟು ಬಾರಿ ಬೈದಿದ್ದೆ. ಹಾಗೆಲ್ಲ ಅಂದಾಗ ಆ ವಾರದ ಅಂಕಣ ಓದಿ “ಭಾರಿ ಏನೋ ಮಾಡಿದ್ದಾನೆ ” ಎಂದು ಸಮಾಧಾನ ಪಟ್ಟುಕೊಳ್ಳುತ್ತಿದ್ದೆ.

ಈ ಪುಸ್ತಕ ಜಡ್ಜ್ಮೆಂಟಲ್ ಆಗಿಲ್ಲ. ಆಯ್ಯೋ ಪಾಪ, ಇವರ ಕರ್ಮ ನೋಡು ಎಂದೂ ಬರೆದಿಲ್ಲ. ತೀರ ಅವನ ಜೊತೆಗಿನ ಸಂಭಾಷಣೆಯಲ್ಲಿಯೂ ನಾನೆಂದಿಗೂ “ಅಲ್ಲಿ ನಾವು ನೀರನ್ನ ಸಮರ್ಪಕವಾಗಿ ಬಳಸುವ, ಅದನ್ನ ಅವರಿಗೆ ಉಪಯೋಗವಾಗುವ ಹಾಗೆ ಮಾಡುತ್ತೇವೆ” ಎಂದು ಹೇಳಿದನೇ ಹೊರತು “ಉಪಕಾರ” ಎಂಬ ಶಬ್ದ ಬರಲ್ಲಿಲ್ಲ.

ಎಲ್ಲಾ ಅಂಕಣಗಳು ಜೀವನೋತ್ಸಾಹದಿಂದ, ಹೇಗಿದೆಯೋ ಹಾಗೇ ಇದೆ. ಓದಿದ ಮೇಲೆ “ನಾವೇನಾದರೂ ಜಡ್ಜ್ಮೆಂಟ್” ಮಾಡಿಕೊಳ್ಳಬಹುದು. ನೀರೆಯರ ಬಗ್ಗೆ ಬರೆಯುವಾಗ ಅಲ್ಲಲ್ಲಿ ವಿಪರೀತ ಉತ್ಪ್ರೇಕ್ಷೆಯನ್ನೂ ಉಪಯೋಗಿಸಿದ್ದಾನೆ. ನನ್ನ ಬಾರ್ಸಿಲೋನಾದ ಪಾರ್ಟಿಗೂ, ಅವನ ಅಂಗೋಲಾದ ಪಾರ್ಟಿಗೂ ವಿಪರೀತ ವ್ಯತ್ಯಾಸಗಳಿದ್ದದ್ದು ಸುಳ್ಳಲ್ಲ. ಹಂಗಾಗಿಯೂ ಅವನ ಪಾರ್ಟೀಗಳೇ ಇನ್ನೂ ಮಜವಾಗಿತ್ತು ಎಂದು ನಾನು ಹೇಳಬಲ್ಲೆ. ಆಫ್ರಿಕಾ ಎಂದರೆ ಬರಿ ದಕ್ಷಿಣ ಆಫ್ರಿಕಾ, ಕ್ರಿಕೆಟ್ ಗೊತ್ತಿದ್ದವರು ಝಿಂಬಾಬ್ವೆ, ಪ್ರವಾಸ ಅನ್ನುವವರು ಈಜಿಪ್ಟ್ (ನನ್ನಂತಹ ಹೆಡ್ಡರಿಗೆ ಅದೂ ಗೊತ್ತಿರಲ್ಲಿಲ್ಲ) ಅಥವಾ ಈಗೀಗ ನೆಟ್ ಫ್ಲಿಕ್ಸ್ ನಲ್ಲಿ ಕಾಂಗೋವಿನ “ಮಕ್ಕಳ ದತ್ತು” ವ್ಯಾಪಾರ ನೋಡಿದವರಿಗೆ ಕಾಂಗೋ ಇವಷ್ಟೆ ಗೊತ್ತಿದ್ದವರಿಗೆ ಅಂಗೋಲಾ ಎಂಬ ದೇಶವಿದೆ ಎನ್ನುವದರಿಂದ ಕಲಿಕೆ ಈ ಪುಸ್ತಕದಿಂದ ಆಗುತ್ತದೆ.

ನಾನೂ ಅಂಗೋಲಾವನ್ನ ಮನೆಯಲ್ಲಿ ಬಿಸಾಕಿದ್ದ ಹಳೇ ಅಟ್ಲಾಸಿನಲ್ಲಿ ಹುಡುಕಿದ್ದೆ. ಅವರ ಸ್ವಾತಂತ್ರ್ಯ ಹೋರಾಟ, ಪರಕೀಯರಿಂದ ಬಿಡುಗಡೆ, ಅವರದ್ದೇ ಸಿವಿಲ್ ವಾರ್, ಈಗಲೂ ಆಗುತ್ತಿರುವ ಹೋರಾಟಗಳು, ಪ್ರತಿಯೊಂದಕ್ಕೂ ಅವರ “ಕ್ಯಾಪಿಟಲ್” ಗೆ ಹೋಗಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎನ್ನುವ ಮೂರ್ಖತನ ಎಲ್ಲವೂ ಕೆಲವೊಮ್ಮೆ ನಮ್ಮ ಸಮಸ್ಯೆಯೇನೋ ಎಂಬಷ್ಟೆ ಚೆನ್ನಾಗಿ ಬರೆದಿದ್ದಾನೆ ಪ್ರಸಾದ್. ಬರೀ ಅವನ ಕೆಲಸ ಮೇಲೆ ಅಥವಾ ಪ್ರವಾಸಿಗನಾಗಿ ಅವನು ೨.೫ ವರ್ಷ ಅಲ್ಲಿ ಉಳಿಯಲ್ಲಿಲ್ಲ, ಅವರ ಜೀವನದ ಒಳ ಹೊರಗುಗಳಲ್ಲಿ ಜೊತೆ ನಡೆದಿದ್ದಾನೆ. ಇಲ್ಲಿ ನಮಗಿಂತ ಅದು ಚೆಂದ, ಅವರಿಗಿಂತ ನಮ್ಮದು ಚಂದ ಎಂದು ಯಾವ ಮೌಲ್ಯಮಾಪನದ ತಕ್ಕಡಿ ಹಿಡಿದು ತೂಗಿಲ್ಲ ಅದು ಖುಷಿ ಕೊಡುವಂಥ ವಿಚಾರ.

 

ಯಾರೂ ನೋಡದ ದೇಶದ ಬಗ್ಗೆ ಕಥನ ಬರೆದಾಗ ಎಲ್ಲರೂ “ಓಹ್ ಇಲ್ಲದವರ, ಗೊತ್ತಿಲದವರ ದನಿಯಾಗಿದ್ದಾರೆ” ಎಂದು ಉತ್ಪ್ರೇಕ್ಷೆ ಮಾಡುತ್ತಾರೆ. ಆದರೆ ಆ ಗೊತ್ತಿಲ್ಲದವರಲ್ಲಿಯೂ ಸ್ವಾರಸ್ಯಕರವಾದ ಅಂಶವಿದ್ದರೆ ಮಾತ್ರ ಓದೋದಕ್ಕೆ ಸಹ್ಯವಾಗೋದು. ಸ್ವಾರಸ್ಯ ಎಂದರೆ ಇಲ್ಲಿ ಮನೋರಂಜನೆ, ವಿಶೇಷತೆಯೆಂದಲ್ಲ ಹೊಸ ಕಲಿಕೆಯೆಂದರ್ಥ. ಕೆಲವು ನಂಬೋದಕ್ಕೆ ಸಾಧ್ಯವಾಗದ ವಿಷಯಗಳಿವೆ, ಕೆಲವೊಂದು ಕಟು ಸತ್ಯವಿದೆ. ಬಂಗಾರ, ವಜ್ರದ ವ್ಯಾಮೋಹ ಇರುವವರಿಗೆ ಮುಖಕ್ಕೆ ಹೊಡೆದ ಹಾಗೆ ಕೆಲವು ಕಥನಗಳಿವೆ. ಮೈಮೇಲಿರುವ ಸಿಂಗಾರವನ್ನೆಲ್ಲಾ ಕೆಂಗೇರಿ ಮೋರಿಗೆ ಎಸೆಯುವಷ್ಟು ಕೋಪ ಬರುತ್ತದೆ ನಮ್ಮ ಆಸೆ ನೋಡಿ, ಯಾಕೆ ಆಸೆ ಪಡಬಾರದೆಂಬ ಕಥಾನಕವಿದೆ, ಅಲ್ಲಿನ ಭಾಷೆಯನ್ನ ಯೂರೋಪಿನ ಕಾಲೋನಿಗಳು ವ್ಯವಸ್ಥಿತವಾಗಿ ಕೊಂದಿದ್ದರ ಕಥಾನಕವಿದೆ, ಅಲ್ಲಿನ ಸಂತೋಷ, ದುಃಖ ಎಲ್ಲವೂ ಸಮಾನವಾಗಿದೆ. ಸುಮ್ಮನೆ ಈ ಜಿ ಡಿ ಪಿ ಅದು, ಇದು ಎಂಬ ಮೌಲ್ಯಮಾಪನವನ್ನ ನೋಡದೆ ಬೇರೆ ತಕ್ಕಡಿ ಹಿಡಿದರೆ ಅಂಗೋಲಾ ಸುಂದರವಾಗಿಯೇ ಇದೆ ನನ್ನ ಪ್ರಕಾರ. ನಮ್ಮ ಇಚ್ಚೆಗೆ ಬಿಟ್ಟಿದು. ಹಾಗೆಯೇ ಈ ಪುಸ್ತಕದ ಮೌಲ್ಯಮಾಪನಕ್ಕೆ ಬೇರೆ ತಕ್ಕಡಿಯನ್ನೇ ಹಿಡಿದು ತೂಗಬೇಕಾಗಿದೆ.

ಆನ್ ಸೈಟಿಗೆ ಹೋಗಿ ಬಂದ ಗೆಳೆಯರು ಅಲ್ಲಿ ಉಳಿಸಿದ ದುಡ್ಡಿನಲ್ಲಿ ಕಟ್ಟಿದ ಮನೆಯ ಗೃಹಪ್ರವೇಶಕ್ಕೆ ಹೋಗಿಬಂದಿದ್ದೇನೆ, ಹೊಸ ಕಾರಿನಲ್ಲಿ ಪ್ರಯಾಣ ಮಾಡಿದ್ದೇನೆ, ಫಾರ್ಮ್ ಹೌಸಿನಲ್ಲಿ ಪಾರ್ಟಿ ಮಾಡಿ ಬಂದಿದ್ದೇನೆ, ಹೊಸ ಕಂಪೆನಿಯ ಉದ್ಘಾಟನೆ ಮಾಡಿದ್ದೇನೆ ಅಥವಾ ಟ್ರೀಟ್ ಕೊಡಿಸಿದ್ದು ನೋಡಿದ್ದೇನೆ ಮೊದಲ ಬಾರಿ ಆನ್ ಸೈಟಿಗೆ ಹೋಗಿ ಬಂದ ಗೆಳೆಯ ಪುಸ್ತಕ ಬಿಡುಗಡೆಗೆ ಕರೆದು ೨೪೦ ಪುಟದ ಹೊಸ ಅರಿವನ್ನು ತುಂಬಿಸಿದ್ದನ್ನು ನೋಡಿದ್ದು. ಇಂತಹವರ ಸಂತತಿ ಸಾವಿರವಾಗಲಿ. ಇನ್ನು ನಾನೂ ಬಾರ್ಸಿಲೋನಾದ ಪಾರ್ಟಿ, ಗ್ರೇಟ್ನೆಸ್ ಬಗ್ಗೆ ಬರೆಯೋದು ಬಿಟ್ಟು ಕತಲಾನ್ ಜನಾಂಗದ ಉಗ್ರ ಹೋರಾಟದ ಬಗ್ಗೆ ಬರೆಯೋ ಮನಸಾಗಿದೆ.. ಆ ಸ್ವಾತಂತ್ರ್ಯದ ಕಿಚ್ಚನ್ನ ಕಣ್ಣಾರೆ ಕಂಡಿದ್ದೇನೆ, ನನ್ನ ಸಹಪಾಠಿಗಳು ದೊಡ್ಡ ಹೋರಾಟಗಾರರಾಗಿ ರೂಪುಗೊಂಡಿದ್ದಾರೆ….

1 comment

  1. ಪ್ರಸಾದ್ ಅಂಕಣದ ಬಗ್ಗೆ ಬರೆದ ಈ ಬರಹ ಕೂಡ ತುಂಬ ಚೆನ್ನಾಗಿದೆ. ಈ ಪುಸ್ತಕದ ಮೌಲ್ಯಮಾಪನಕ್ಕೆ ಬೇರೆ ತಕ್ಕಡಿಯನ್ನೇ ಹಿಡಿದು ತೂಗಬೇಕಾಗಿದೆ ಎಂಬ ಮಾತು ಎಷ್ಟೊಂದು ದಿಟ.

Leave a Reply