ಬಷೀರ್ ಬರೆದ ಪ್ರೇಮ ಪತ್ರ

ಪ್ರೇಮಲೇಖನಂ
Love Letter

“ನನ್ನ ಪ್ರೀತಿಯ ಸಾರಮ್ಮ,
ಬದುಕು ಯೌವನದ ಉತ್ತುಂಗದಲ್ಲಿರುವಾಗ, ಹೃದಯ ಪ್ರೇಮದ ಸುಂದರ ಸ್ಥಿತಿಗೆ ತಲುಪಿದಾಗ, ನನ್ನ ಪ್ರೀತಿಯ ಹುಡುಗಿಯಿಂದ ಹೇಗೆ ದೂರ ಇರಲಿ?
ನಾನಂತೂ ನನ್ನ ಪ್ರತಿ ಕಣವನ್ನೂ ನಿನ್ನ ಪ್ರೇಮದ ಸುತ್ತ ಗಿರಗಿಟ್ಲಿ ಹಾಕುತ್ತಾ ಬದುಕುತ್ತಿದ್ದೇನೆ. ನೀನು..?
ಆಳವಾಗಿ, ದಯಾಮಯವಾಗಿ ಯೋಚಿಸಿ ಉತ್ತರ ನೀಡುವಿಯಾಗಿ ನಂಬುತ್ತೇನೆ.

ನಿನ್ನವನೇ ಆದ
ಕೇಶವನ್ ನಾಯರ್ “

ಇದು ವೈಕ್ಕಂ ಮಹಮ್ಮದ ಬಷೀರ್ ರ ಪ್ರೇಮಲೇಖನಂ (ಪ್ರೇಮ ಪತ್ರ) ಕತೆಯ ನಾಯಕ ಕೇಶವನ್ ನಾಯರ್ ನಾಯಕಿ ಸಾರಮ್ಮಳಿಗೆ ಬರೆದ ಪ್ರೇಮಪತ್ರ.

ಈ ಕೇಶವನ್ ನಾಯರ್ ಬ್ಯಾಂಕ್ ಉದ್ಯೋಗಿ. ಸರಳ, ಸೀದಾ ಸಾದಾ ಮನುಷ್ಯ. ಸಾರಮ್ಮಳ ಮನೆಯ ಮಾಳಿಗೆಯ ಭಾಡಿಗೆಯವ. ಚುರುಕಿನ ಯುವಕ. ಭಾವಜೀವಿ.

ಸಾರಮ್ಮ ಚೆಲುವೆ. ಮಾತಿನಮಲ್ಲಿ. ಯಾವಾಗಲೂ ನಗು ನಗ್ತಾ ಖುಶಿಯಾಗಿರೋಳು. ಒಳ್ಳೇ ಕೆಲಸಕ್ಕಾಗಿ ಹುಡುಕ್ತಿರೋಳು. ನಿರಂತರ ಅರ್ಜಿ ಬರೀತಿರೋಳು. ಕೆಲಸ ಮಾತ್ರ ಸಿಕ್ತಿಲ್ಲ. ಈ ಕೇಶವನ್ ನಾಯರ್‍ಗೋ ಸಾರಮ್ಮಳ ಮೇಲೆ ಅತೀವ ಪ್ರೇಮ. ಈ ಪ್ರೇಮಪತ್ರದೊಂದಿಗೆ ಕೇಶವನ್ ನಾಯರ್ ಸಾರಮ್ಮಳಿಗೊಂದು ಉದ್ಯೋಗ ಕೊಡ್ತಾನೆ. ಆತನನ್ನು ಪ್ರೀತಿಸೋ ಕೆಲಸ. ತಿಂಳಿಗೊಮ್ಮೆ ಸಂಬಳ. ಸಂಬಳ ಮಾತಾಗಿ ಸಾರಮ್ಮ ಒಪ್ತಾಳೆ. ಸರಿ, ಪ್ರೀತಿ ಶುರುವಾಗ್ತದೆ.

ಹೀಗಿರೋ ಹೊತ್ತಿಗೆ ಮದುವೆ, ಮಕ್ಕಳ ಮಾತು ಬರ್ತದೆ. ಪ್ರಶ್ನೆಗಳು ಶುರುವಾಗ್ತವೆ. ಇಬ್ಬರದೂ ಬೇರೆ ಬೇರೆ ಧರ್ಮ. ಮಗುವಿನದು..?. ಸರಿ, ಮಗುವನ್ನು ಧರ್ಮಾತೀತವಾಗಿ ಬೆಳೆಸೋ ನಿರ್ಧಾರ ಮಾಡ್ತಾರೆ. ಮತ್ತೆ ಮಗುವಿಗೆ ಏನಂತ ಹೆಸರಿಡೋದು..? ಅದೂ ಧರ್ಮಾತೀತವಾಗಿರಬೇಕಲ್ವೇ?

ಕೇಶವನ್ ನಾಯರ್ ಅಂತಾನೆ.. ”ಯಾವ್ದಾದ್ರೂ ವಸ್ತುವಿನ ಹೆಸರಿಡೋಣ” ಆದ್ರೆ ಸಾರಮ್ಮನಿಗೆ ಯಾಕೋ ಅದು ಇಷ್ಟವಿಲ್ಲ. ರಷ್ಯನ್ ‘ವಿಸ್ಕಿ’, ಚೈನೀಸ್ ‘ ಚ್ಯಾಂಗ್’ ನಂಥ ಹೆಸರುಗಳೂ ಬಂದು ಹೋಗ್ತವೆ. ಸರಿ, ಈ ರಗಳೆಯೇ ಬೇಡ ಅಂತ ಇಬ್ರೂ ಚೀಟಿ ಎತ್ತೋ ನಿರ್ಧಾರ ಮಾಡ್ತಾರೆ. ಅವನ ಚೀಟೀಲಿ ‘ಸಿಹಿ’ ಅಂತಾನೂ ಆಕೆಯ ಚೀಟೀಲಿ ‘ಬಾನು’ ಎನ್ನೋ ಹೆಸರುಗಳು ಬರ್ತವೆ.

“ಸರಿ,
‘ಸಿಹಿಬಾನು’ ಎನ್ನೋ ಹೆಸರಿಡೋಣ” ಅಂತಾಳೆ ಸಾರಮ್ಮ.
ಕೇಶವನ್ ನಾಯರ್ ಗೆ ಈ ಹೆಸರೇ ಮಜ ಅನ್ನಿಸ್ತದೆ. “ ಸರ್, ‘ ಸಿಹಿಬಾನು’, ಮಿಸ್ಟರ್ ‘‘ ಸಿಹಿಬಾನು’ ಕಾಮ್ರೇಡ್ ‘‘ ಸಿಹಿಬಾನು’ ’ ಅಂತ ಕುಣಿಯೋಕೆ ಶುರುಮಾಡ್ತಾನೆ ನಾಯರ್.

“ ಅವನೇನು ಕಮ್ಯುನಿಸ್ಟ ಆಗ್ಬೇಕಾ..? “ ಅಂತಾಳೆ ಸಾರಮ್ಮ. “ ಅವನ ಬದುಕು ಅವನಿಗೆ.ಅವನು ಬೇಕಾದಂತೆ ಬದುಕಿಕೊಳ್ಳೋಕೆ ಬಿಡೋಣ” ಅಂತ ಇಬ್ರೂ ಕೈ ಜೋಡಿಸ್ತಾರೆ.

ವೈಕಂ ಮಹಮ್ಮದ್ ಬಷೀರ್ ಈ ಕಥೇನ ಬರೆದದ್ದು 1943 ರಲ್ಲಿ. ಜೈಲಿನಲ್ಲಿ. ಆಗ ಅವರು ರಾಜಕೀಯ ಕಾರಣಗಳಿಗಾಗಿ ಜೈಲಿನಲ್ಲಿದ್ರು. ಜೈಲ್ ಒಡನಾಡಿಗಳಿಗೆ ಕೇಳಿಸೋದಕ್ಕೆ ಅಂತ ಅವರು ಅನೇಕ ಕಥೆಗಳನ್ನು ಬರೆದರು.

ಆದರೆ ಜೈಲಿಂದ ಹೊರಗೆ ಬರೋವಾಗ ಅವರ ಕೈಲಿದ್ದದ್ದು. ಈ ಕಥೆಯೊಂದೇ. ಇದೇ ಅವರ ಮೊದಲ ಪುಸ್ತಕದ ಹೆಸರು ಕೂಡ ನನಗೆ ಪರಿಚಯವಾದ, ಇಷ್ಟವಾದ ಮೊದಲ ಮಲಯಾಳಂ ಲೇಖಕ ಬಷೀರ್. ಅವರ ‘ಪಾತುಮ್ಮನ ಆಡು’ ಮತ್ತು ‘ಬಾಲ್ಯಕಾಲ ಸಖಿ’ ಮೂಲಕ. ಆಗ ನ್ಯಾಶನಲ್ ಬುಕ್ ಟ್ರಸ್ಟ್ ಅವರ ಈ ಕೃತಿಗಳ ಅನುವಾದವನ್ನು ‘ಸುಲಭ ಬೆಲೆಯಲ್ಲಿ’ ಹೊರತಂದಿತ್ತು. ಅವರು ನಮ್ಮ ಮಾಸ್ತಿ, ಗೊರೂರು ರಂತೆ. ಆದರೆ ಹೆಚ್ಚು ಪ್ರಗತಿಪರರು. 1943 ರಲ್ಲೇ ಬರೆದ ಈ ಕಥೆಯ ಪ್ರಗತಿಪರತೆ ಎಷ್ಟಿದೆ ನೋಡಿ, ಜಾತ್ಯತೀತ ಮದುವೆಗಳನ್ನು ಒಪ್ಪದ ಆ ಕಾಲದಲ್ಲಿ, ಈ ಪುಸ್ತಕ ಬ್ಯಾನ್ ಆಗಿತ್ತು.

ಇಂಥ ಚೆಂದದ ಕಥೆಯನ್ನು ಅಷ್ಟೇ ಚೆಂದವಾಗಿ ರಂಗಕ್ಕೆ ತಂದವರು ಕೇರಳ ಸಂಗೀತ ನಾಟಕ ಅಕಾಡಮಿಯ ನಿರ್ದೇಶಕ ಸೂರ್ಯ ಕೃಷ್ಣಮೂರ್ತಿ. ನಾನು ನೋಡಿದ ಅವರ ಅನೇಕ ನಾಟಕಗಳಲ್ಲಿ ತುಂಬ ಇಷ್ಟವಾದ ನಾಟ್ಕ ಇದು. ಸ್ವಲ್ಪ ಹೆಚ್ಚೇ ‘ಇಂಟಿಮೇಟ್’ ಎನ್ನಬಹುದಾದ ಸರಳ ರಂಗ. ಚಾಪೆ, ಟ್ರಂಕು ಇತ್ಯಾದಿ. ಹೆವಿ ಡೋಸ್ ಆಗದ ಸಂಗೀತ, ಬಣ್ಣದ ಹಂಗಿಲ್ಲದ ಬೆಳಕು. ’ಲೇಖನ’ ವನ್ನು ಓದಲು ಅವರು ನೆಚ್ಚಿಕೊಂಡಿರೋದು ನಟರನ್ನೇ.

ಅಭಿನಯ, ಮಾತುಗಳ ನಾಟ್ಕ ಇದು. ಅದೂ ಖಾಸ್ ಇಂಟಿಮೇಟ್ ನಲ್ಲಿ. ಅಭಿನಯದ ಆಳ, ಮಾತುಗಳ ಮಾಡುಲೇಶನ್ ಕೂಡ ‘ ಬೇರೆಯೇ ಲೆವಲ್ ನಲ್ಲಿ ಇರಬೇಕಾದಷ್ಟು ಇಂಟಿಮೇಟ್ ಇದು. ಧ್ವನಿಯ ಎಕ್ಸಪರ್ಟ್ ಕೃಷ್ಣಮೂರ್ತಿ ಇಲ್ಲಿ ಚೆನ್ನಾಗಿಯೇ ನಿಭಾಯಿಸಿದ್ದಾರೆ. ಇಬ್ಬರೂ ನಟರು ನಾಟದಲ್ಲಿನ ವಿಟ್ ನ್ನೂ, ಗಾಂಭೀರ್ಯವನ್ನೂ ಜೊತೆ ಜೊತೇಲೇ ಪ್ರೇಕ್ಷಕರಿಗೆ ಸುಲಭವಾಗಿ ಮುಟ್ಟಿಸ್ತಾರೆ. ಆಂಗಿಕವಾಗಿಯೂ ವಾಚಿಕವಾಗಿಯೂ, ಅಲ್ಲಲ್ಲಿ ಕಸರತ್ತುಗಳ ಮೂಲಕವೂ ಚೆನ್ನಾಗಿಯೇ ಕಥೆಯನ್ನು ಕಟ್ತಾರೆ. ಸಭೆಯಲ್ಲಿನ ಚಿಕ್ಕ ಚಿಕ್ಕ ಮಕ್ಕಳನ್ನೂ ನಾಟ್ಕದೊಳಕ್ಕೆ ಎಳಕೊಳ್ತಾ ಕಚಗುಳಿಯಿಡ್ತಾರೆ.

4 comments

  1. ವೈಕಂ ಮಹಮ್ಮದ್ ಬಷಿರರ ಪ್ರೇಮಪತ್ರದ ಕಥನ ತುಂಬಾ ಸ್ವಾರಸ್ಯಕರವಾಗಿ ಮೂಡಿ ಬಂದಿದೆ . ಧನ್ಯವಾದಗಳು.

Leave a Reply