ನಾಜೂಕವಾಲಾ ಗುತ್ತಿಗೆ ಕೇಳುತ್ತಿದ್ದಾನೆ..

ಲೆಕ್ಕಾಚಾರ

ನಂದಿನಿ ವಿಶ್ವನಾಥ ಹೆದ್ದುರ್ಗ

ಬಡ್ಡಿಗೆ ತಂದ ಕನಸುಗಳ
ಗುತ್ತಿಗೆ ಪಡೆದ ಎದೆಯೊಳಗೆ
ಬಿತ್ತಿ
ಹುಟ್ಟಬಹುದಾದ ಕವಿತೆಗೆ
ಹೆಸರು ಹುಡುಕುತ್ತಿದ್ದೆ.

ಅಕಾಲ ಮಳೆ,
ಸುಡುಸುಡು ಸೂರ್ಯ
ಮಾಗಿಗೂ ಮೊದಲೇ ಸುಳಿಗಾಳಿ.
ಮೊಳೆಯದ ಬೇಸರಕೆ
ಬಗೆದು ನೋಡಿದೆ.

ಕರಕಾಗಿದೆ.!!


ಹೊಳೆದಿದ್ದ ಸುಂದರ ಹೆಸರಿಗೀಗ
ಸಾಲು ಹೆಣೆಯುವ ಕೆಲಸ.
ಕಾಲ ಮೀರಿತೆಂದು
ನಾಜೂಕವಾಲಾ ಗುತ್ತಿಗೆ
ಕೇಳುತ್ತಿದ್ದಾನೆ.

ಪದ್ಯ ಮಾರಿ ಕನಸುಗಳ
ಕಡ ತೀರಿಸಿ
ಬಾಕಿ ಜಮಾ ಕೊಟ್ಟು ಕೈ ತೊಳೆಯಬೇಕಿದೆ.
ಉಳಿದದ್ದು ಒಂದಷ್ಟು ನೆನಪು ಮಾತ್ರ.

Leave a Reply