ಸಾಕ್ಷಿ ನಾಶ ಮಾಡುವ ಸಮುದ್ರ

ಏನೇನೋ ಕೆಲಸಗಳ ಮಧ್ಯೆ, ಯಾವುದಾದರೂ ಬೀಚ್ ಗೆ ಹೋಗಬೇಕೆಂಬ ಬಹುದಿನಗಳ ಬಯಕೆ ಹಾಗೇ ಉಳಿದಿತ್ತು. ಆದರೆ ತಡವಾಗಿ ಬಂದ ಈ ಪ್ರವಾಸ ತಂದುಕೊಟ್ಟ ತನ್ಮಯತೆ ಇದೆಯಲ್ಲ, ಅದನ್ನು ನೆನೆದರೆ ಇಷ್ಟುದಿನ ವಿಳಂಬವಾದುದ್ದರ ಬಗ್ಗೆ ಬೇಸರ ಮೂಡುವುದೇ ಇಲ್ಲ .

ಉಡುಪಿಯಲ್ಲಿ ಸೇರಿಕೊಳ್ಳುತ್ತೇನೆ ಎಂದಿದ್ದ ಗೆಳೆಯ ಗಂಭೀರ ನೆಪವೊಡ್ಡಿ ತಪ್ಪಿಸಿಕೊಂಡದ್ದರಿಂದ ಕಾಪು ಬೀಚಿಗೆ ಒಬ್ಬನೇ ಹೋಗಿದ್ದೆ.
ಸಮುದ್ರದ ಅಲೆಗಳೊಂದಿಗೆ ಚಿನ್ನಾಟ ಆಡುವ ಮೋಜು ಅನುಭವಿಸಿಯೇ ತೀರಬೇಕು. ಅಂಥ ಅನುಭವಕ್ಕಾಗಿಯೇ ಇರಬೇಕು ಮನಸ್ಸು ಬೀಚಿನೂರಿಗೆ ಹಪಹಪಿಸುತ್ತಿದ್ದುದು. ಹೀಗೆ ಅಲೆಗಳೊಂದಿಗೆ ಆಡುವ ಸಮಯದಲ್ಲಿ ಎರಡು ದೂರದ ಬಂಡೆಗಳಡಿಯಲ್ಲಿ ಪ್ರತ್ಯೇಕವಾದ ಎರಡು ಡೈರಿಗಳು ಸಿಕ್ಕವು. ಅವುಗಳ ವಾರಸುದಾರರು ಯಾರೂ ಬರಲಿಲ್ಲವಾದ್ದರಿಂದ ಅನಾಥವಾಗಿ ಬಿದ್ದಿದ್ದ ಆ ಶಿಥಿಲಾವಸ್ಥೆಯ ಡೈರಿಗಳನ್ನು ನಾನು ಬ್ಯಾಗಿನೊಳಗೆ ಇಟ್ಟುಕೊಂಡೆ.

ಎಲ್ಲಿಗಾದರೂ ಹೋಗಿ ಬಂದ ತಕ್ಷಣ ಬ್ಯಾಗಿನಲ್ಲಿನ ಸರಂಜಾಮುಗಳನ್ನು ವಿಲೇವಾರಿ ಮಾಡುವ ಜಾಯಮಾನ ನನ್ನದಲ್ಲ. ಹಾಗಾಗಿ ಬೆಂಗಳೂರಿಗೆ ಬಂದು ಒಂದು ವಾರದ ನಂತರ ಆ ಬ್ಯಾಗ್ ನಲ್ಲಿರುವ ಎರಡು ಡೈರಿಗಳನ್ನು ತೆಗೆದು ನೋಡಿದೆ . ಎರಡೂ ಡೈರಿಗಳೂ ಬೇರೆಬೇರೆಯವರಿಗೆ ಸೇರಿದ್ದವು ಎಂಬುದು ಮತ್ತಷ್ಟು ಮನದಟ್ಟಾಯಿತು. ಆದರೆ ಎರಡೂ ಡೈರಿಗಳಲ್ಲಿ ಕೇವಲ ಒಂದು ಪುಟದ ಬರಹಗಳಿದ್ದವೇ ಹೊರತು ಮತ್ತೇನೂ ಇರಲಿಲ್ಲ. ಎರಡೂ ಬರಹಗಳನ್ನು ಓದಿದ ಮೇಲೆ ಅವುಗಳಲ್ಲಿನ ರೊಮ್ಯಾಂಟಿಕ್ ನರೇಷನ್ ನೋಡಿ ನಾನೇ ಅವುಗಳಿಗೆ ಒಂದೊಂದು ಶೀರ್ಷಿಕೆ ಕೊಟ್ಟೆ.

* * * *

ಡೈರಿ ೧-

ಕಾಪು ಬೀಚಿನಲ್ಲಿ ಸಿಕ್ಕ ಖಾಲಿ ಕಾಗದ

ಹೋದ ಜಾಗದಲ್ಲಿ ಏನಾದರೂ ಒಂದು ನೆನಪು ಬಿಟ್ಟು ಬರಬೇಕು ‘ ಎಂದು ಫಿಲಾಸಫಿ ಹೇಳಿದ ಗೆಳೆಯ ಕೀರ್ತಿಯನ್ನು ಯಾರೂ ಸೀರಿಯಸ್ಸಾಗಿ ತೆಗೆದುಕೊಂಡಂತೆ ಕಾಣಿಸಿರಲಿಲ್ಲ .

ಆಗ ತಾನೆ ಪ್ರೇಮಿಸಲು ಆರಂಭಿಸಿದ ದಿನಗಳಾದ್ದರಿಂದ ಇಂತಹ ಫಿಲಾಸಫಿಗಳು ನನ್ನನ್ನು ಒಂದೇ ಕ್ಷಣಕ್ಕೆ ನಾಟಿಬಿಡುತ್ತಿದ್ದವು. ಎಲ್ಲರೂ ಅತ್ತಿತ್ತ ಸರಿದ ಸಮಯ ನೋಡಿ, ಹಾಳೆಯೊಂದರಲ್ಲಿ “ಸಮುದ್ರವೆಂದರೆ ತನ್ನನ್ನು ಪ್ರೇಮಿಸುತ್ತ ಓಡೋಡಿ ಬರುವ ಅದೆಷ್ಟೋ ನದಿಗಳ ಏಕೈಕ ‘ಸಖ’ನಂತೆ. ಮುಂದಿನ ಬಾರಿ ಬಂದಾಗ ನನ್ನದೊಂದು ನದಿಯನ್ನೂ ನಿನ್ನ ಬಳಿ ಕರೆತರುತ್ತೇನೆ” ಎಂದು ಬರೆದು ಒಂದು ಖಾಲಿ ಸೀಸೆಯೊಳಗೆ ಹಾಕಿ, ಸಮುದ್ರಕ್ಕೆ ಎಸೆದಿದ್ದೆ.

ಇಂತಹ ಕ್ಷುದ್ರ ಕೆಲಸಗಳನ್ನು ದಿನಕ್ಕೊಂದರಂತೆ ಮಾಡುವುದರಿಂದ, ಆಮೇಲೆ ಅದನ್ನು ಯಾವಾಗ ಮರೆತದ್ದು ಎಂಬದೂ ಮರೆತುಹೋಯಿತು.
* * * * * * * *

ಈಗ,
ಸುಮಾರು ಹತ್ತು ವರ್ಷಗಳ ನಂತರ ಮತ್ತಿಲ್ಲಿಗೆ, ಕಾಪು ಬೀಚಿಗೆ ಬಂದಿದ್ದೆ . ಸಮುದ್ರ ತನ್ನೊಳಗೆ ಯಾವ ರಹಸ್ಯಗಳನ್ನೂ ಬಂಧಿಸಿಟ್ಟುಕೊಳ್ಳುವುದಿಲ್ಲ ಎಂಬುದು ನಿಮಗೂ ಗೊತ್ತಲ್ಲವೆ? ಅದು ಹಾಗೇ ಆಯಿತು. ತುಸು ಜೋರಾಗಿ ಅಪ್ಪಳಿಸಿದ ಅಲೆ ನಾಟಕೀಯವಾಗಿ ಸೀಸೆಯೊಂದನ್ನು ನನ್ನತ್ತ ತಂದೆರೆಚಿತು. ಅದರೊಳಗೊಂದು ಮಡಚಿಟ್ಟಿದ್ದ ಕಾಗದ ಇತ್ತು .ಮರೆವನ್ನು ಮರೆಸುವ ಯಾವುದೋ ನೆನಪು ಮನದಲ್ಲಿ ಸುಳಿದಂತಾಯಿತು. ಸೀಸೆಯಿಂದ ಕಾಗದ ಹೊರಗೆ ತೆಗೆದೆ. ಪಾಪಿ ಸಮುದ್ರ ಅಕ್ಷರಗಳನ್ನೆಲ್ಲ ಅಳಿಸಿ ಹಾಕಿತ್ತು. ಖಾಲಿ ಹಾಳೆಯೊಂದು ಹತ್ತು ವರ್ಷಗಳ ನೆನಪನ್ನು ಕೆಣಕಿತ್ತು
ಒಬ್ಬ ಬಡಪಾಯಿ ಹುಡುಗನ ‘ಪ್ರೇಮವಾಕ್ಯ’ವನ್ನು ಈ ದೈತ್ಯ ಸಮುದ್ರ ನಶಿಸಿಬಿಟ್ಟಿತೆ? ಅಥವಾ ಅದು ಅಕ್ಷರಗಳನ್ನು ಅಳಿಸಿದ್ದರಿಂದಲೇ ನನಗಿನ್ನೂ ಅದರಲ್ಲಿ ಬರೆದಿದ್ದು ಏನೆಂದು ನೆನಪಿರುವುದೆ?

ಅಂದು ನಾನು ಹೇಳಿದ್ದ ‘ನದಿ’ ಯನ್ನೇ ಇಂದು ನನ್ನ ಜೊತೆ ಕರೆತಂದಿದ್ದೇನೆಂದು ಈ ಸಮುದ್ರಕ್ಕೆ ಹೇಗೆ ಅರ್ಥಮಾಡಿಸುವುದು ?

ಅಥವಾ ಈಗೀಗ ಪ್ರೀತಿಯ ಭಾಷೆಯೇ ಖಾಲಿ ಹಾಳೆಯಾಗಿ ಬದಲಾಗಿದ್ದು ನನ್ನ ಅರಿವಿಗೆ ಬಾರಲೇ ಇಲ್ಲವೆ ?

ಅಕ್ಷರಗಳು ಇಲ್ಲದಿರುವುದೇ ಒಳ್ಳೆಯದಾಯಿತು ಎಂದುಕೊಳ್ಳುತ್ತ ನಿರಾಳನಾದೆ. ಖಾಲಿ ಹಾಳೆಯಲ್ಲಿದ್ದ ‘ಆ ನದಿ ‘ ಯಾರೆಂದು ನಾನೀಗ ಹೇಳಬೇಕಾಗಿಲ್ಲ. ಇಲ್ಲವಾದಲ್ಲಿ ನನ್ನವಳಿಗೆ, ಹಾಳೆಯಲ್ಲಿದ್ದ ‘ಆ ನದಿ’ ‘ ನೀನೇ ‘ ಎಂದು ನಂಬಿಸಲಾಗುತ್ತಿತ್ತೆ?

ಈಗೀಗ ಪ್ರೀತಿ ಎಂದರೆ ನಂಬಿಸುವುದು ಮತ್ತು ನಂಬಿಸುತ್ತಲೇ ಇರುವುದು. ನಂಬಿದ್ದನ್ನೇ ! ನಂಬದ್ದನ್ನೇ! ಅಂದ ಹಾಗಾಯಿತು.

ಇದು ಕಾಪು ಬೀಚಿನ ಕೆತೆಯಾಯ್ತು .ಮತ್ತೆ ಅಲ್ಲಿ ಮಲ್ಪೆ ಬೀಚಿನ ಸೀಸೆಯೊಳಗೆ ಇನ್ನೆಂಥ ಆಶ್ಚರ್ಯ ಕಾದಿದೆಯೋ?

ಇಲ್ಲಿಂದಲ್ಲಿಗೆ ಇಪ್ಪತ್ತು ನಿಮಿಷ ಪ್ರಯಾಣ ಅಷ್ಟೇ.

*************

ಡೈರಿ ೨ .

ಕರುಣೆಯಿಲ್ಲದ ಕಾಪು ಬೀಚು …

 

ವರ್ಷಗಳ ಹಿಂದಿನ ನೆನಪು ಈ ದಿನ ಮತ್ತೆ ಕಾಪು ಬೀಚಿನ ಅದೇ ಜಾಗಕ್ಕೆ ಬಂದಾಗ ಮರುಕಳಿಸಿತು. ಈ ದಿನ ಅವನು ಬಂದಿದ್ದರ ಬಗ್ಗೆ ಸಮುದ್ರವನ್ನು ಕೇಳಬೇಕೆಂದುಕೊಂಡೆ. ಆದರೆ ಅಲೆಗಳ ಹೊಡೆತಕ್ಕೆ ಸಿಗಲಾರವು ಎಂಬಂತಿದ್ದ ಎಲ್ಲ ಬಂಡೆಗಳ ಪಕ್ಕದಲ್ಲೂ ಮರಳಿನ ಮೇಲೆ ಆಗ ತಾನೆ ಬರೆದಿದ್ದ ತರಹೇವಾರಿ ಹೆಸರುಗಳು , ಹೂತಿಟ್ಟಿದ್ದ ಪತ್ರಗಳೂ ಅಸ್ತವ್ಯಸ್ತವಾಗಿ ಹರಡಿಕೊಂಡಿರುವುದನ್ನು ಗಮನಿಸಿದಾಗ ಅದೆಂಥ ಅಪ್ರಸ್ತುತ ಪ್ರಶ್ನೆಯಾಗಬಲ್ಲದು ಎಂಬುದು ತಿಳಿಯಿತು.

ಎಂದೋ ಬರೆದಿಟ್ಟ ಅವನ ಹೆಸರನ್ನು ಅಳಿಸಿಹಾಕಿದ್ದ ಅದರ ಅಲೆಗಳಿಗೆ ನೆನಪಿನ ಹಂಗಿರುವುದಿಲ್ಲ . ಅವುಗಳನ್ನು ನಿಂದಿಸಿ ಪ್ರಯೋಜನವೂ ಇಲ್ಲ ಎಂಬುದನ್ನು ಅರಿತು ವಾಪಸ್ಸಾದೆ. ಸಮುದ್ರದ ದಡದಲ್ಲಿ ಕೇವಲ ಕಸ ಮಾತ್ರ ಇರುವುದಿಲ್ಲ ಇಂತಹ ಅದೆಷ್ಟೋ ಸಾಕ್ಷಿಗಳಿರುತ್ತವೆ . ಆದರೆ ಒಬ್ಬರ ಸಾಕ್ಷಿ ಇನ್ಯಾರಿಗೋ ಕಸವಾಗಿ ಕಾಣುತ್ತದೆ.

ಕಾಪು ಬೀಚಿನಲ್ಲಿ ಆದದ್ದೇ ಮಲ್ಪೆಯಲ್ಲೂ ಆಗುತ್ತದೆಂಬ ಖಾತರಿ ಇರುವುದರಿಂದ ಮತ್ತೆ ಅಲ್ಲಿಗೆ ಹೋಗಲಾರೆ.‌ ನಿರಾಕರಣೆಯನ್ನು ಪದೇ ಪದೇ ಆಹ್ವಾನಿಸುವುದೂ ಅಪರಾಧವೇ.

** ** **

ಎರಡೂ ಡೈರಿಗಳನ್ನು ಓದಿದ ಮೇಲೆ ನನ್ನಲ್ಲಿ ಉಂಟಾದ ತಲ್ಲಣ ಏನೆಂದು ಹೇಳಲಿ ? ಇವೆರೆಡೂ ಪ್ರತ್ಯೇಕ ಡೈರಿಗಳೇನೋ ಹೌದು ಆದರೆ ಎರಡರ ಬರಹಗಳೂ ಪರಸ್ಪರರ ನೆರಳಿನಂತಿವೆ.

ಎಷ್ಟು ದಿನಗಳಾಗಿರಬಹುದು ಆ ಡೈರಿಗಳಿಗೆ ? ತಿಂಗಳುಗಳಾಗಿರಬಹುದೆ ? ಹಲವು ವರ್ಷಗಳು ? ದಶಕಗಳು ? ಊಹಿಸುವುದು ಕಷ್ಟವೇ. ಸಮುದ್ರದ ದಡದಲ್ಲಿ ಅಡಗಿರಬಹುದಾದ ಕಥಾನಕಗಳಿಗೆ ಕೊನೆಯಿದೆಯೆ ? ಅಷ್ಟಕ್ಕೂ ಆ ಸಮುದ್ರವೇಕೆ ಹೀಗೆ ಸಾಕ್ಷಿನಾಶ ಮಾಡುತ್ತದೆ? ಎಲ್ಲ ನದಿಗಳೂ ನನ್ನನ್ನೇ ಸೇರಬೇಕೆಂಬ ಸ್ವಾರ್ಥವಿದೆಯೇ ಸಮುದ್ರಕ್ಕೆ ?

ಮುಂದಿನ ಬಾರಿ ಕಾಪು ಬೀಚಿಗೆ ಹೋದಾಗ ಆ ಡೈರಿಗಳನ್ನು ಅಲ್ಲೇ ಇಟ್ಟು ,ಸಮುದ್ರಕ್ಕೆ ಈ ಎಲ್ಲಾ ಪ್ರಶ್ನೆಗಳನ್ನು ಎಸೆಯುತ್ತೇನೆ . ಅದಲ್ಲದೆ ಸಾಕ್ಷಿ ನಾಶದ ಕೇಸಿನಲ್ಲಿ ಸಮುದ್ರನ್ನು ಬಂಧಿಸಲಾದೀತೆ ?

2 comments

  1. ತುಂಬ ಚೆಂದದ ಬರಹ.ಸಮುದ್ರದ ಆಳ ಅಂತ ಅರಿಯಲಾಗದ ಒಗಟದು.ಎಲ್ಲ ಸಾಕ್ಷಿಗಳನ್ನು ನಾಶ ಮಾಡಿ ಆ ಕಡಲು ಮಾಡಿದ್ದೇನು, ತನ್ನೊಡಲಲ್ಲಿ ಕಾಪಿಟ್ಟು ಕೊಂಡಿಲ್ಲವೇ ಹೇಳಿ.ಅದೇ ಆ ಸಾಗರದ ನಿಗೂಢತೆ ಈ ಅಂತರಾಳದಂತೆ.ನೀಲಿಯಲೆಯ ಕಡಲ ಒಡಲು ವಿಚಿತ್ರ ಗೂಢಗಳ ಮಡಿಲು ಅಂಬೋದು ಸುಳ್ಳಲ್ಲ.ಅದಕೇ ಏನೋ ಈ ಕಡಲು ಏನೋ ಒಂದು ರೀತಿಯ ವಿಚಿತ್ರ ಆಕರ್ಷಣೆ ತನ್ನಲಿರಿಸಿಕೊಂಡಿದೆ.ನೂರು ಕತೆ, ಕವನಗಳ ತವರು.

    • ಧನ್ಯವಾದಗಳು … ನಿಜ ನಿಮ್ಮ ಮಾತುಗಳು…

Leave a Reply