‘ನುಡಿಗಳ ಅಳಿವು’ ಚಿಂತನೆಗೆ ಪ್ರಚೋದನೆ

ಎನ್.ರವಿಕುಮಾರ್

ಜಾಗತಿಕ ಸಾಮ್ರಾಜ್ಯಶಾಹಿ ಬಲೆಯೊಳಗೆ ಬಿದ್ದಿರುವ ನಾವುಗಳು ಕೇವಲ ನಮ್ಮ ಸಂಸ್ಕೃತಿ, ಲೋಕದೃಷ್ಟಿ, ವೈವಿಧ್ಯತೆಗಳನ್ನು ಕಳೆದುಕೊಳ್ಳುತ್ತಿರುವುದರ ಜೊತೆ ಜೊತೆಗೆ ನಮ್ಮ ‘ನುಡಿಗಳನ್ನು’ ಕಳೆದುಕೊಳ್ಳುತ್ತಿರುವುದರ ಎಚ್ಚರವಿಲ್ಲದೆ ಇರುವುಂತಹ ಸೂಕ್ಷ್ಮ ವಿಚಾರವನ್ನು ಭಾಷಾ ವಿದ್ವಾಂಸರಾದ ಪ್ರೊ.ಕೆ.ವಿ. ನಾರಾಯಣ ಅವರಿಗೆ ಮಾತ್ರವೇ ಗ್ರಹಿಸಲು ಸಾಧ್ಯವೇನೋ!.

ಕರ್ನಾಟಕದಲ್ಲಿ ಇಂಗ್ಲಿಷ್ ನಂತಹ ವ್ಯವಹಾರಿಕ ಭಾಷೆಯ ಹಿಂದೆ ಬಿದ್ದು ನಾವುಗಳು ನಮ್ಮ ಸಮುದಾಯ ನುಡಿ ಕನ್ನಡದ ಅಳಿವಿನ ಅಪಾಯವನ್ನು ಗ್ರಹಿಸದೆ ಇದ್ದೇವೆ. ಬೇರೆ ಬೇರೆ ಭಾಷೆಗಳ ಪ್ರಭಾವದಿಂದ ಕನ್ನಡ ಮಾತನಾಡುವವರ ಪ್ರಮಾಣವೇ ಕಡಿಮೆಯಾಗುತ್ತಾ ಹೇಗೆ ಹೋಗುತ್ತಿದೆ ಎಂಬುದನ್ನು ಕೆವಿಎನ್ ಆತಂಕದಿಂದ ನಮ್ಮನ್ನು ಎಚ್ಚರಿಸುವ ಮುನ್ಸೂಚನೆಯ ಕೃತಿಯೊಂದನ್ನು ಬರೆದಿದ್ದಾರೆ.

ನುಡಿಯೂ ಒಂದು ಕಸುವು. ಅದು ಲೋಕದೃಷ್ಟಿಯನ್ನುಕಟ್ಟಿಕೊಡುವ ಅಭಿವ್ಯಕ್ತಿ ಮಾಧ್ಯಮ , ಸಾಂಸ್ಕೃತಿಕ ನೆನಪುಗಳನ್ನು ಕಾಪಿಟ್ಟುಕೊಳ್ಳುವುದೂ ಕೂಡ. ಪ್ರಭುತ್ವವು ನಡೆಸುವ ಸಮುದಾಯಗಳ ಬಲವಂತದ ಪಲ್ಲಟಗಳಿಂದ ನುಡಿಗಳು ಅಳಿಯುತ್ತವೆ. ಶೇಕ್ಸ್ ಪಿಯರ್ ನಿಂದ ಹೊಸ ನುಡಿ ಕಲಿತ ಆದಿವಾಸಿ ಕ್ಯಾಲಿಬನ್ ತನ್ನ ಮೂಲ ನುಡಿಯನ್ನು ಮೆರತದ್ದನ್ನು ದೃಷ್ಟಾಂತವಾಗಿ ವಿವರಿಸುತ್ತಾ , ಹೇಗೆ ತಾವು ಅಧಿಕಾರ ಭಾಷೆ, ಸಾಮ್ರಾಜ್ಯಶಾಹಿ ಭಾಷೆಗಳಿಗೆ ಮರುಳಾಗಿ ತನ್ನ ನುಡಿ ಮರೆಯುತ್ತೇವೆ ಎಂಬುದಕ್ಕೆ , ಪ್ರಾದೇಶಿಕ ಅಥವಾ ಸಮುದಾಯ ಭಾಷೆಯೊಂದು ಸಾಮ್ರಾಜ್ಯಶಾಹಿ ಭಾಷೆಗಳ ಪ್ರಭಾವಕ್ಕೆ ತುತ್ತಾಗಿ ಹೇಗೆ ಅಳಿವಿನಂಚಿಗೆ ತಳ್ಳಲ್ಪಡುತ್ತದೆ ಎಂಬುದಕ್ಕೆ ‘ನುಡಿಗಳ ಅಳಿವು’ ಕೃತಿ ಸೂಕ್ಷ್ಮವಾಗಿ ಕನ್ನಡಿ ಹಿಡಿಯುತ್ತದೆ.


ಕೆವಿಎನ್ ಎಂದೆ ಕರೆಯಲ್ಪಡುವ ಪ್ರೊ ಕೆ.ವಿ ನಾರಾಯಣ ಅವರು ಕನ್ನಡದ ವಿದ್ವತ್ ಪೂರ್ಣ ಚಿಂತಕರು. ಅರಿವಿನ ಪಲ್ಲಟಕ್ಕೆ ಅವರು ಕೊಟ್ಟ ಕೊಡುಗೆ ಅನನ್ಯ. ನಮ್ಮ ನುಡಿಗಳು ಅಳಿವಿನ ಅಂಚಿಗೆ ಜಾರುತ್ತಿರುವ ಕಳವಳವನ್ನು ಕೆವಿಎನ್ ವ್ಯಕ್ತಪಡಿಸುವ ಮೂಲಕ ನುಡಿಗಳ ಕುರಿತಾದ ಅಳಿವು-ಉಳಿವಿನ ಹೊಸತೊಂದು ವ್ಯಾಖ್ಯಾನದ ಪರಿಧಿಗೆ ತಮ್ಮ ಕೃತಿಯನ್ನು ತಂದು ನಿಲ್ಲಿಸಿದ್ದಾರೆ. ‘ನುಡಿಗಳ ಅಳಿವು’ (ಅಹರ್ನಿಶಿ ಪ್ರಕಾಶನ) ಕೃತಿ ವಾಗ್ವಾದಕ್ಕೆ ತೆರೆದಿಟ್ಟ ಮಾರ್ಗ, ಅದೊಂದು ಅಪೂರ್ಣ ಎಂದು ಸ್ವತಃ ಹೇಳುತ್ತಲೆ ಇಂದಿನ ತಲೆಮಾರು ಭಾಷಾತಜ್ಞರ ಹೊಸ ಚಿಂತನೆಗೆ ಪ್ರಚೋದಿಸಿದ್ದಾರೆ. ಆ ಮೂಲಕ ನುಡಿಗಳ ಉಳಿವಿಗಾಗಿ ಪರಿಹಾರವನ್ನು ಕಂಡುಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.

Leave a Reply