ಅಲ್ಲಿ ‘ಮಲಾಲಾ’ಇದ್ದಳು..

ಕಣ್ಣೂರಿಗೆ ಹೋಗಿ ಕೆಲವೇ ದಿನಗಳಲ್ಲಿ ಗೆಳೆಯ ಢಾ. ಸ್ಯಾಂಕುಟ್ಟಿ ಪಟ್ಟಂಕರಿ ‘ ಮಾಹಿ’ ಗೆ ಬಂದ್ರು.’ ಕೇರಳ ಕಲಾಗ್ರಾಮ’ಕ್ಕೆ ನಾಟ್ಕ ಆಡ್ಸೋದಕ್ಕೆ.

‘ಮಾಹಿ’ (ಮಲಯಾಳಂ ನಲ್ಲಿ ‘ಮಯ್ಯಳಿ ’ Mayyazi ) ಕಣ್ಣೂರಿನಿಂದ ಸ್ವಲ್ಪವೇ ದೂರದಲ್ಲಿರೋ ಚಿಕ್ಕ ಪಟ್ಟಣ. ಕೇರಳದ ಮಧ್ಯದಲ್ಲಿದ್ರೂ ಅದು ‘ಪಾಂಡಿಚೇರಿ’ಗೆ ಸೇರಿದ್ದು. ಮಾಹಿ ಪಟ್ಟಣ ದ ಜೊತೆ ಪಾಂಡಿಚೇರಿಯ ಆಡಳಿತದ ನಾಲ್ಕಾರು ಹಳ್ಳಿಗಳು. ಮುಂಚೆ ಫ್ರೆಂಚ್ ಕಾಲನಿಯಾಗಿದ್ದ ‘ಮಾಹಿ’ಗೆ ಸ್ವಾತಂತ್ರ್ಯ ಸಿಕ್ಕಿದ್ದು, ಜುಲೈ 1954ರಲ್ಲಿ. 1947ರ ನಂತರ ಗಾಧೀವಾದಿ ಐ. ಕೆ. ಕುಮಾರನ್ ಮುಂದಾಳ್ತನದಲ್ಲಿ ಶುರುವಾದ ಹೋರಾಟ ಬೇರೆ ಬೇರೆ ತಿರುವುಗಳನ್ನ ಪಡೆದುಕೊಳ್ತಾ 1954 ರಲ್ಲಿ ಮಾಹಿಯ ಬಿಡುಗಡೆಯಾಯ್ತು. ಆ ನಂತರದಲ್ಲಿ ಅದು ಪಾಂಡಿಚೇರಿಯ ಭಾಗವಾಗೇ ಇದೆ.

‘ಮಾಹಿ’ ನಿಂತಿರೋದು ‘ಮಯ್ಯಳಿ’ ನದಿಯ ತೀರದಲ್ಲಿ. ಮಹಾನ್ ಹೋರಾಟವೊಂದಕ್ಕೆ ಸಾಕ್ಷಿಯಾದ ನದಿಯಿದು. ಈ ಹೋರಾಟದ ಹಿನ್ನೆಲೆಯಲ್ಲ್ಲೇ ಮಲಯಾಳಮ್ ನ ಪ್ರಸಿದ್ಧ ಸಾಹಿತಿ ಎಮ್ ಮುಕುಂದನ್ ‘ಮಯ್ಯಳಿಪ್ಪುಳಯುಡೆ ತೀರಂಗಳಿಲ್’( ಮಯ್ಯಳಿ ನದಿಯ ತೀರಗಳಲ್ಲಿ) ಎನ್ನೋ ಕಾದಂಬರಿ ಬರ್ದಿದಾರೆ. ‘ದೈವತ್ತಿಂಟೆ ವಿಕೃತಿಕಳ್’ ಅನ್ನೋ ಸಿನಿಮಾನೂ ಬಂದಿದೆ.

ಇದೇ ಮಾಹಿ ನದಿಯ ದಡದಲ್ಲಿ ‘ಕೇರಳ ಕಲಾಗ್ರಾಮಮ್’ ಇರೋದು. ಅಲ್ಲಿಯೇ ನಾಟಕದ ರಿಹರ್ಸಲ್.


ಯಾವುದೋ ಕೆಲಸಕ್ಕಾಗಿ ಅವರನ್ನ ಹುಡುಕ್ಕೊಂಡು ಶ್ರೀಪಾದ ಭಟ್ ಕಣ್ನೂರಿಗೆ ಬಂದ್ರು. ಸರಿ, ನಮ್ಮಾಫೀಸಿನ ‘ಸಾಂಸ್ಕೃತಿಕ ಜೀವಿ’ ಬಾಲಕೃಷ್ಣನ್ ರ ಜೊತೆ ಸೇರ್ಕೊಂಡು ಕಲಾಗ್ರಾಮಕ್ಕೆ ಹೋದ್ವಿ. ಮಯ್ಯಳಿ ನದಿಯ ದಡದಲ್ಲಿರೋ ಈ ಕಲಾಗ್ರಾಮ ಕಲೆಯ ಶಾಲೆಯೂ ಹೌದು, ಕಲೆಯ ಪ್ರದರ್ಶನದ ಅಂಗಳವೂ ಹೌದು. ನದೀ ತೀರದಲ್ಲೊಂದು ಚೆಂದದ ಕಟ್ಟಡ. ಸುತ್ತಲೂ ಹಸಿರಿನ ಮಧ್ಯೆ ಮಧ್ಯೆ ಕಲ್ಲಿನಲ್ಲಿ ಕೆತ್ತಿದ ಸಾಂಪ್ರದಾಯಿಕ ಮತ್ತು ಸಮಕಾಲೀನ ಕಲಾಕೃತಿಗಳು. ಕಟ್ಟಡದೊಳಗೆ ಸ್ಟುಡಿಯೋ, ರಂಗಮಂದಿರ, ಆರ್ಟ್ ಗ್ಯಾಲರಿ.. ಇವುಗಳ ಮಧ್ಯೆಯೇ ಕಲಾ ತರಗತಿಗಳು. ಮಕ್ಕಳ ಕಲಾ ಕಲಿಕೆಯನ್ನೇ ಕನಸಾಗಿಟ್ಟುಕೊಂಡು, ತುಂಬಾ ಮುತುವರ್ಜಿಯಿಂದ ಕಲಾವಿದ ಎಮ್.ವಿ. ದೇವನ್ ಕಟ್ಟಿದ ಕಲಾಶಾಲೆ ಇದು. ಕಲೆ, ಶಿಲ್ಪ, ಸಂಗೀತ, ನೃತ್ಯ, ಕಲಾತ್ಮಕ ಕುಂಬಾರಿಕೆಯಂಥವಕ್ಕೆ ಇದು ಪ್ರಯೋಗಾಲಯವೂ ಹೌದು.

ಇಲ್ಲೇ ರಿಹರ್ಸಲ್ ಶೆಡ್ ನಲ್ಲಿ ಸ್ಯಾಂಕುಟ್ಟಿಯವರ ‘ ಮಲಾಲಾ’ ನಾಟಕ ರಿಹರ್ಸಲ್. ಮೂಲತಃ ಕಲಾವಿದ ಸ್ಯಾಂಕುಟ್ಟಿ ಜೆ.ಎನ್.ಯು ನ ವಿದ್ಯಾರ್ಥಿ. ಕನ್ನಡ ರಂಗಭೂಮಿಯ ಜೊತೆ ಹಿಂದಿನಿಂದ ನಂಟು ಹೊಂದಿದವ್ರು ಅವರು. ಕೆ.ಜಿ.ಕೃಷ್ಣಮೂರ್ತಿಯವರ ‘ಕಿನ್ನರ ಮೇಳ’ಕ್ಕೆ ಅವರು ಅನೇಕ ನಾಟ್ಕಗಳನ್ನ ಆಡಿಸಿದ್ರು. ನಿಧಿ ದ್ವೀಪ, ಮೀಡಿಯ, ಕೋರಿಯೋಲೇನಸ್. ಪುತ್ತೂರಿನ ‘ನಿರತ ನಿರಂತ’ ಕ್ಕೆ ‘ನಟ್ಟಿರುಳಾಟ’ (ಮ್ಯಾಕ್ಬೆತ್) ಅವರು ಆಡ್ಸಿದ ನಾಟ್ಕ. ಸಮುದಾಯಕ್ಕಾಗಿ ‘ತುಘಲಕ್’ ಅವರು ನಿರ್ದೇಶಿಸಿದ ಕನ್ನಡದ ಪ್ರಮುಖ ನಾಟಕಗಳಲ್ಲೊಂದು. ಅವರೇ ಮಲಯಾಳಮ್ ನಲ್ಲಿ ರೂಪಾಂತರಿಸಿದ, ಪಾರ್ವತಿ ಐತಾಳ್ ರವರು ಕನ್ನಡಕ್ಕೆ ಭಾಷಾಂತರಿಸಿದ ‘ಭೀಮಾಯಣ’ವನ್ನ ಶ್ರೀಪಾದ ಭಟ್ ರಂಗಾಯಣಕ್ಕಾಗಿ ಆಡಿಸಿದ್ರು. ಈಗ ನಾಟ್ಕ ಆಡಿಸ್ತಾ ಜಗತ್ತೆಲ್ಲ ಸುತ್ತೋ ಸ್ಯಾಂಕುಟ್ಟಿ ‘ಮಲಾಲಾ’ ಎನ್ನೋ ಚಿಕ್ಕ ಸೋಲೋ ಪರ್ಫಾರ್ಮೆನ್ಸ್ ಹಿಂದೆ ಬಿದ್ದಿದ್ರು. ಹೆಸರೇ ಹೇಳೋ ಹಾಗೆ ಈ ಸೋಲೋ ಪಾಕಿಸ್ತಾನದ ದಿಟ್ಟ ಹುಡುಗಿ, ಹೆಣ್ಮಕ್ಕಳ ಶಿಕ್ಷಣಕ್ಕಾಗಿ ಹೋರಾಡಿ ಗುಂಡು ತಿಂದರೂ ಅಧೇ ಹೋರಾಟದ ಕಿಚ್ಚನ್ನುಳಿಸಿಕೊಂಡಿರೋ ಮಲಾಲಾಳ ಬದುಕು, ಹೋರಾಟಗಳ ಕುರಿತಾದ್ದು.


ನಿಹಾರಿಕಾ ಮೋಹನ್ ಎನ್ನೋ ಪ್ರತಿಭಾವಂತ ಹುಡುಗಿಯನ್ನ ಕೇಂದ್ರವಾಗಿಟ್ಟುಕೊಂಡ ನಾಟ್ಕ ಇದು. ಆಕೇನೋ ಮಲಾಲಾ ಥರಾ ಒಂಭತ್ತನೇ ಕ್ಲಾಸ್ ಹುಡ್ಗೀನೇ. ಈ ನಾಟ್ಕದಲ್ಲಿ ಸ್ಯಾಂಕುಟ್ಟಿ ಮಲಾಲಾಲ ಬದುಕಿನ ಘಟನೆಗಳನ್ನ ಹೆಣೀತಾ, ಹೆಣೀತ ವರ್ತಮಾನದ ಹೆಣ್ಣು ಮಗುವಿನ ಶಿಕ್ಷಣ ಮತ್ತು ಸಾಮಾಜಿಕ ಬದುಕಿನ ಕುರಿತೂ ಮಾತಾಡ್ತಾ ಹೋಗ್ತಾರೆ.

ನಾಟ್ಕ ಶುರುವಾಗೋದೇ ಮಲಾಲಾ ಗುಲಾಬಿ ಗಿಡವೊಂದಕ್ಕೆ ನೀರುಣಿಸೋ ದೃಶ್ಯದಿಂದ. ಹೀಗೆ ‘ಪೊರೆಯುವ’ ಆಕೆಯ ಮನೋಭಾವವೇ ಮುಂದಿನ ಅವಳ ಬದುಕಿನ ತಿರುವುಗಳಿಗೆ, ನಾಟ್ಕದ ದೃಶ್ಯಗಳಿಗೆ ಮೂಲ ಭೂಮಿಕೆ ಒದಗಿಸ್ತದೆ. ಮಲಾಲಾಳ ಬದುಕಿನ ಘಟನೆಗಳನ್ನ ಸರಳವಾಗಿ, ನೇರವಾಗಿ ಪೋಣಿಸ್ತಾ ಹೋಗೋ ಸ್ಯಾಂಕುಟ್ಟಿ ಹೆಣ್ಣು ಮಗುವಿನ ಅಸ್ಮಿತೆಯ ಕುರಿತು, ಆಕೆಯ ನಿರಂತರ ಬದುಕಿನ ಹೋರಾಟಗಳ ಕುರಿತು ಹೇಳೋದಕ್ಕೆ ಮರೆಯೋದಿಲ್ಲ. ಆದರೆ ಅದೆಂದೂ ವಾಚ್ಯವಾಗೋದಿಲ್ಲ. ಮಲಾಲಾಳ ಬದುಕೇ ಇದಕ್ಕೆ ರೂಪಕವಾಗ್ತದೆ.

ಗುಲಾಬಿ ಗಿಡಾನ ಬೆಳಿಸ್ತಾ ಬೆಳಿಸ್ತಾ ಈ ಪುಟ್ಟ ಹುಡುಗಿ ನಾಟ್ಕದೊಳಗೆ ಬೆಳೆಯೋದೇ ಒಂದು ಅದ್ಭುತ. ಬೇರೆ ಬೇರೆ ಮನೋಭೂಮಿಕೆಯ ತೀರಾ ವೈವಿಧ್ಯದ ಪಾತ್ರಗಳೊಳಕ್ಕೆ ಸರಾಗವಾಗಿ ಹೊಕ್ತಾ ಹೊಕ್ತಾ, ಚಕ್ ಚಕ್ ಅಂತ ವೇಷ ಬದಲಿಸ್ತಾ, ಚೂರೂ ಬ್ರೇಕ್ ಇಲ್ಲದ ಹಾಗೆ ಮಲಾಲಾಳನ್ನ ನಮ್ಮೊಳಗೆ ಇಳಿಸ್ತಾಳೆ ಈ ಹುಡ್ಗಿ. ಒಂದು ಪುಸ್ತಕದ ಥರಾ ಸರಳವಾದ ರಂಗಸಜ್ಜಿಕೇನ ಇಟ್ಕೊಂಡು ಸ್ಯಾಂಕುಟ್ಟಿ ಹೋರಾಟಗಾರ್ತಿಯೊಬ್ಳನ್ನ ನಮ್ಮ ನಡುವೆ ಕಡೆದು ಬಿಟ್ಬಿಡ್ತಾರೆ. ನಿಜಕ್ಕೂ ಸರಳವಾಗೋದು ತುಂಬ ಕಷ್ಟ. ಸ್ಯಾಂಕುಟ್ಟಿ ಮತ್ತು ನಿಹಾರಿಕಾ ಇಲ್ಲಿ ಗೆಲ್ತಾರೆ.

ಇಲ್ಲಿಗೆ ತಿರುಗಿ ಬಂದ ಮೇಲೆ ಸಾಗರದಲ್ಲಿ ಬೊಳುವಾರು ಮಹಮ್ಮದ ಕುಂಞಯವರ ‘ನಾ ಮಲಾಲಾ ಅಲ್ಲ’ ನಾಟ್ಕ ನೋಡಿದೆ. ಚಿದಂಬರರಾವ್ ಜಂಬೆ ನಾಟ್ಕದ ನಿರ್ದೇಶಕರು. ಶೀತಲ್ ಭಟ್, ಅಕ್ಷತಾ ಪಾಂಡವಪುರ ಮುಖ್ಯ ಪಾತ್ರಗಳಲ್ಲಿದ್ರು. ಮಲಾಲಾಳನ್ನ, ಅವಳ ಇಮೇಜನ್ನ ಒಂದು ‘ಕಮೊಡಿಟಿ’ ಯಾಗಿಸಿಕೊಳ್ಳುವದರ ಅಪಾಯಗಳನ್ನ ತೀಕ್ಷ್ಣವಾಗಿ ನೋಡೋ ನಾಟ್ಕ ಇದು. ಪ್ರಯೋಗದಲ್ಲಿ ಜಂಬೆ ಬೊಳುವಾರ್ ರ ತುಂಬ ಪ್ರಸಿದ್ಧ ಕತೆ, ‘ಆಕಾಶಕ್ಕೆ ನೀಲಿ ಪರದೆ’ ಕತೆಯನ್ನ ಪರಿಣಮಕಾರಿಯಾಗಿ ಆಳವಡಿಸಿಕೊಂಡಿದ್ರು.

7 comments

  1. ಮಲಾಲಾಳ ಬದುಕಿನ ಆಯಾಮಗಳನ್ನು ವಿವರಿಸುವ ನಾಟಕದ ವಸ್ತುನಷ್ಠ ಕಲೆ ಶ್ಲಾಘನೀಯ .ವಿವರಿಸಿದ ಪರಿ ಉತ್ತಮವಾಗಿತ್ತು .ಧನ್ಯವಾದಗಳು .

  2. ಧನ್ಯವಾದಗಳು ನಿಮ್ಮ ನಿರಂತರ ಓದು ಮತ್ತು ಪ್ರೋತ್ಸಾಹಕ್ಕೆ.

Leave a Reply