ಜೋಗಿ ಸಲಾಂ

ಅಂಕಿತ ಪ್ರಕಾಶನ ಹೊರತರುತ್ತಿರುವ

ಜೋಗಿಯವರ

‘ಸಲಾಂ ಬೆಂಗಳೂರು’ ಕೃತಿಯ ಲೇಖಕರ ಮಾತು ಇಲ್ಲಿದೆ-      

 

ಇಲ್ಲಿ ಎಲ್ಲವೂ ದೊರೆಯುತ್ತದೆ, ನೀವು ಕೇಳಿದ್ದೊಂದು ಬಿಟ್ಟು…

ಜೋಗಿ 

ಪುನರುತ್ಥಾನದ ಯಾವ ಆಶೆಯೂ ಇಲ್ಲದ ನಿಸ್ತೇಜ ತಪಸ್ವಿಯಂತೆ ಕಾಣಿಸುವ ಮಹಾನಗರಗಳಿಗೆ ಇರುವ ಶಾಶ್ವತವಾದ ಗುಣವೆಂದರೆ ಹೇಡಿತನ. ಪರಮವೀರನಂತೆ ಕಾಣಿಸುವ ಮಹಾನಗರಗಳು ತಮ್ಮೊಳಗೆ ಎಂಥಾ ಕೀಳರಿಮೆಯನ್ನು ಹುದುಗಿಸಿ ಇಟ್ಟುಕೊಂಡಿರುತ್ತವೆ ಎಂದರೆ ಅವು ಯಾವುದನ್ನೂ ಕನಿಷ್ಠ ಪ್ರತಿಭಟಿಸಲಿಕ್ಕೂ ಹೋಗುವುದಿಲ್ಲ.

ಕಂಡೋರ ಸುದ್ದಿ ನಮಗ್ಯಾಕೆ ಅಂತ ಸುಮ್ಮನಿರುವ ಮಧ್ಯಮವರ್ಗದಂತೆ ಮಹಾನಗರಗಳು ಎಲ್ಲವನ್ನೂ ಕಂಡೂ ಕಾಣದಂತೆ ಇದ್ದುಬಿಡುತ್ತವೆ.

ಬೆಂಗಳೂರಿನಲ್ಲಿ ಏನಾದರೂ ಪ್ರತಿಭಟನೆ ನಡೆಯಬೇಕಿದ್ದರೆ ಹೊರಗಿನಿಂದ ರೈತರೋ ಅಂಗನವಾಡಿ ಕಾರ್ಯಕರ್ತರೋ ಬರಬೇಕು. ಮಹಾನಗರದ ಮಂದಿ ಮಾತ್ರ ಮಕ್ಕಳಿಗೆ ರಜಾ ಯಾವಾಗ, ಅಮೆಝಾನ್‌ನಲ್ಲಿ ಆಫರ್ ಯಾವುದಿದೆ, ಅತೀ ಹೆಚ್ಚು ಬಡ್ಡಿ ತರುವ ಉಳಿತಾಯ ಯೋಜನೆ ಯಾವುದು ಎಂಬ ಸದ್ಯದ ಚಿಂತೆಯಲ್ಲೇ ಇರುತ್ತಾರೆ.

ಇದರಿಂದ ಅನುಕೂಲವೂ ಉಂಟು. ಹೀಗೆ ಭಯಂಕರ ನಿರ್ಲಿಪ್ತತೆ ಮತ್ತು ಅಸಾಧ್ಯ ಉಡಾಫೆಯಲ್ಲೇ ಬದುಕಬಲ್ಲೆ ಎಂದು ನಂಬಿರುವ ಬೆಂಗಳೂರಿಗೆ ಅದರದ್ದೇ ಆದ ಶಾಣ್ಯಾತನವೂ ಇದೆ. ಇದು ಕೊಂಚ ಅರಚಾಡುತ್ತದೆಯೇ ಹೊರತು ಯುದ್ಧಕ್ಕೆ ಇಳಿಯುವುದಿಲ್ಲ. ಸಂಜೆ ಹೊತ್ತು ಟೀವಿಗಳಲ್ಲಿ ನಡೆಯುವ ಮಾತಿನ ಕಾಳಗದ ಹಾಗೆ ಇಲ್ಲಿ ನಡೆಯುವುದೆಲ್ಲ ಅಬ್ಬರ ಮತ್ತು ತೋರಿಕೆಯದ್ದೇ ಹೊರತು, ಆತ್ಮಗತವಾದದ್ದು ಸೊನ್ನೆ.

ಹಾಗಂತ ಇದು ಬೆಂಗಳೂರಿನ ಮೂಲಗುಣ ಅಂತ ಹೇಳಲಾರೆ. ಒಂದು ಕಾಲದಲ್ಲಿ ಹಳ್ಳಿಯೇ ಆಗಿದ್ದ ಈ ಬೆಂದಕಾಳೂರನ್ನು ಕಂಗೆಡಿಸಿದ್ದೇ ಹೊರಗಿನಿಂದ ವಲಸೆ ಬಂದವರು. ದಂಡೆತ್ತಿ ಬಂದವರು, ದಾಳಿ ಮಾಡಿದವರು ಮತ್ತು ನೆಲೆಸಲು ಬಂದವರ ನಡುವೆ ಅಂಥ ವ್ಯತ್ಯಾಸ ಏನಿಲ್ಲ. ದಾಳಿ ಮಾಡಿದವರು ಊರಿನ ಗುಡಿಗೋಪುರಗಳನ್ನೋ ಶಿಲ್ಪಕಲಾವೈಭವವನ್ನೋ ವಿರೂಪಗೊಳಿಸಿದರೆ, ನೆಲೆಸಲು ಬಂದವರು ಆ ಪ್ರದೇಶದ ಅನನ್ಯತೆಯನ್ನು ವಿರೂಪಗೊಳಿಸುತ್ತಾರೆ. ಹೀಗಾಗಿಯೇ ಬೆಂಗಳೂರಿಗೆ ಅದರ ಮೂಲ ರುಚಿಯಿಲ್ಲ. ಮೂಲ ಸೊಗಡೂ ಇಲ್ಲ.

ಒಮ್ಮೆ ಅಕ್ಬರ ನಮ್ಮ ರಾಜ್ಯದಲ್ಲಿ ಪ್ರಾಮಾಣಿಕರು ಎಷ್ಟು ಮಂದಿ ಇದ್ದಾರೆ ಅಂತ ಬೀರಬಲ್ಲನನ್ನು ಕೇಳಿದನಂತೆ. ಬೀರಬಲ್ಲ ಒಬ್ಬರೂ ಇಲ್ಲ ಅಂತ ಹೇಳಿದಾಗ ಸಿಟ್ಟಾಗುವ ಅಕ್ಬರ್, ಅದನ್ನು ಸಾಬೀತು ಮಾಡು ಅನ್ನುತ್ತಾನೆ. ಬೀರಬಲ್ಲ ನಗರದ ಮಧ್ಯಭಾಗದಲ್ಲಿ ಎತ್ತರವಾದ ಹಂಡೆಯೊಂದನ್ನು ಇಟ್ಟು, ಮುಂಜಾನೆ ಐದು ಗಂಟೆಗೆ ಪ್ರತಿಯೊಬ್ಬ ಪ್ರಜೆಯೂ ಈ ಹಂಡೆಗೆ ಒಂದು ಚೊಂಬು ಹಾಲು ತಂದು ಹಾಕಬೇಕು ಅಂತ ಮಹಾರಾಜರ ಆದೇಶವಾಗಿದೆ ಎಂದು ಸಾರುತ್ತಾನೆ.

ಪ್ರಜೆಗಳು ಒಬ್ಬರ ಹಿಂದೊಬ್ಬರಂತೆ ಬಂದು ಹಂಡೆಗೆ ಹಾಲು ಸುರಿದು ಹೋಗುತ್ತಾರೆ. ಸಂಜೆ ಹೊತ್ತಿಗೆ ಬೀರಬಲ್ಲ, ಅಕ್ಬರನನ್ನು ಕರೆದುಕೊಂಡು ಬಂದು ಹಂಡೆಯೊಳಗೇನಿದೆ ನೋಡಿ ಅನ್ನುತ್ತಾರೆ. ಅದರೊಳಗೆ ಬರೀ ನೀರು ತುಂಬಿರುತ್ತದೆ. ನಾನೊಬ್ಬ ನೀರು ಸುರಿದರೆ ಯಾರಿಗೂ ಗೊತ್ತಾಗುವುದಿಲ್ಲ ಅನ್ನುವ ನಂಬಿಕೆಯಲ್ಲಿ ಪ್ರತಿಯೊಬ್ಬನೂ ನೀರನ್ನೇ ತಂದು ಹಾಕಿರುತ್ತಾನೆ.

ಅಕ್ಬರ್ ಬೀರಬಲ್ಲರ ಕತೆಯಲ್ಲಿ ಬರುವ ಪ್ರಜೆಗಳಂತೆ ಮಹಾನಗರದ ಮಂದಿಯಾದ ನಾವು ಕೂಡ ಮಹಾಜಾಣರಾಗಿರುತ್ತೇವೆ. ಮಹಾನಗರಗಳಲ್ಲಿ ಜನ ಇರುವುದಿಲ್ಲ, ಜನಸಂಖ್ಯೆ ಇರುತ್ತದೆ, ಜನಜಂಗುಳಿ ಇರುತ್ತದೆ, ಜನಸಮೂಹ ಇರುತ್ತದೆ. ಇಂಥ ಸಂದಣಿಗಳಲ್ಲಿ ಯಾರ ಗುರುತೂ ಸಿಗುವುದಿಲ್ಲ ಅನ್ನುವುದು ಎಲ್ಲರಿಗೂ ಗೊತ್ತಿರುತ್ತದೆ. ಇಡೀ ರಾಜ್ಯವನ್ನೇ ತಾವು ಕಾಪಾಡುತ್ತಿದ್ದೇವೆ ಎಂಬ ಮೂಢನಂಬಿಕೆ ಮತ್ತು ತಮ್ಮ ಸುತ್ತಲೂ ಎಲ್ಲವೂ ನಡೆಯುತ್ತಿದೆ ಎಂಬ ಧಿಮಾಕು ಮಹಾನಗರವನ್ನು ಆಳುತ್ತಿರುತ್ತದೆ. ಅಧಿಕಾರದ ಕೇಂದ್ರಾಭಿಗಾಮಿ ಬಲವೂ ಪ್ರಭಾವದ ಕೇಂದ್ರಾಪಗಾಮಿ ಬಲವೂ ಉಳ್ಳ ಮಹಾನಗರದ ಕುರಿತು ಪ್ರವಾಸೀ ಗೈಡು ಬರೆಯಬಹುದು, ಕತೆ ಬರೆಯುವುದು ಹೇಗೆ?

ಮತ್ತು ಯಾಕಾದರೂ ಬರೆಯಬೇಕು? ಹೇಳುವುದಕ್ಕೆ ನಮ್ಮೂರಿನ ಕತೆಗಳೇ ಇನ್ನೊಂದು ಜನ್ಮಕ್ಕಾಗುವಷ್ಟಿದ್ದರೂ ನಾನೇಕೆ ಬೆಂಗಳೂರಿನ ಹಿಂದೆ ಬಿದ್ದಿದ್ದೇನೆ ಅನ್ನುವುದು ನನಗೂ ಗೊತ್ತಿಲ್ಲ. ಈ ಮಹಾನಗರದ ಬಗ್ಗೆ ನನಗೆ ಭಯ ಮತ್ತು ಅನುಮಾನ. ಇದು ಹೇಳಿಕೇಳಿ ಅಧಿಕಾರಸ್ಥರ ಕೊಂಪೆ. ಅನಾಮಿಕರ ಅಡಗುತಾಣ. ಅಜ್ಞಾತವಾಸಕ್ಕೆ ಹೇಳಿಮಾಡಿಸಿದಂಥ ಜಾಗ. ನಾನು ಮೂವತ್ತು ವರ್ಷಗಳ ಹಿಂದೆ, ಬೆಂಗಳೂರಿಗೆ ಕಾಲಿಟ್ಟಾಗ, ಈ ಊರು ಹೇಗಿತ್ತು ಅನ್ನುವುದನ್ನು ಈಗ ನೆನಪಿಸಿಕೊಳ್ಳಲು ಯತ್ನಿಸಿ ಸೋಲುತ್ತೇನೆ. ಇನ್ನು ಮೂವತ್ತು ವರ್ಷಗಳ ನಂತರ ಈ ಬೆಂಗಳೂರು ಹೇಗಿರುತ್ತದೆ ಎಂದು ಊಹಿಸಲಿಕ್ಕಾಗದೇ ಸುಮ್ಮನಾಗುತ್ತೇನೆ.

ಬೆಂಗಳೂರು ಮಾಲಿಕೆಯ ಸ್ವತಂತ್ರ ಕೃತಿಗಳಲ್ಲಿ ಇದು ನಾಲ್ಕನೆಯದು. ಎಲ್ಲೋ ಸಿಕ್ಕು ಓದಿದೆ ಅಂತ ಹೇಳಿ ಸಂತೋಷ ಕೊಡುವ, ಎಲ್ಲಿದ್ದಾನೆ ನಿನ್ನ ಓದುಗ ಅಂತ ಅಂತರಾತ್ಮ ಕೇಳುವಾಗೆಲ್ಲ ಎಲ್ಲೆಲ್ಲೂ ಇದ್ದಾನೆ ಅಂತ ಪ್ರಹ್ಲಾದನಂತೆ ಧೈರ್ಯವಾಗಿ ಉತ್ತರಿಸುವುದಕ್ಕೆ  ಬೇಕಾದ ಆತ್ಮವಿಶ್ವಾಸ ತುಂಬಿದ ಎಲ್ಲಾ ಓದುಗ ಬಂಧುಗಳಿಗೆ ವಂದನೆ.

ಸಲಾಂ!

Leave a Reply