ಈಗ ‘ಅಮ್ಮ ಪ್ರಶಸ್ತಿ’ ಪಡೆಯಲು ಹೋಗುವ ಸಂದರ್ಭದಲ್ಲಿ..

ಇಂದು ಸಂಜೆ ಕಲಬುರ್ಗಿಯ ಸೇಡಂನಲ್ಲಿ ‘ಅಮ್ಮ ಪ್ರಶಸ್ತಿ’ ಪ್ರದಾನವಾಗುತ್ತಿದೆ.

ಮುದ್ರಣ ಕ್ಷೇತ್ರದಲ್ಲಿ ತಮ್ಮದೇ ವೈಶಿಷ್ಟ್ಯತೆ ಮೆರೆದ ಸ್ವ್ಯಾನ್ ಕೃಷ್ಣಮೂರ್ತಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ನನ್ನ ಬದಲು ಅಮ್ಮ ಪ್ರಶಸ್ತಿಯನ್ನು ಅಮ್ಮನೇ ಸ್ವೀಕರಿಸಲಿ ಎಂಬ ಆಶಯ ವ್ಯಕ್ತಪಡಿಸಿದ್ದರು.

ಅದು ಇಲ್ಲಿದೆ 

ಈಗ ಅಂಕೋಲಾದಿಂದ ತಮ್ಮ ‘ಮೀನುಪೇಟೆಯ ತಿರುವು’ ಕವಿತಾ ಸಂಕಲನಕ್ಕೆ ಪ್ರಶಸ್ತಿ ಸ್ವೀಕರಿಸಲು ಸೇಡಂಗೆ ಹೊರಟಿರುವ ರೇಣುಕಾ ರಮಾನಂದ ಅವರು ಸ್ವ್ಯಾನ್ ಕೃಷ್ಣಮೂರ್ತಿ ಲೇಖನಕ್ಕೆ ಪ್ರತಿಕ್ರಿಯಿಸುತ್ತಾ ತನ್ನ ಅಮ್ಮನನ್ನು ನೆನಪಿಸಿಕೊಂಡಿದ್ದಾರೆ..

ರೇಣುಕಾ ರಮಾನಂದ

ಪುಸ್ತಕ ಚಟವುಳ್ಳವರು ,ಮುದ್ರಣ, ವಿನ್ಯಾಸ, ಅಕ್ಷರ ಜೋಡಣೆ ಇವೆಲ್ಲದರ ಕುರಿತಾಗಿ ಚೂರು ಮಾಹಿತಿ ಇದ್ದವರು ಒಂದು ಪುಸ್ತಕವನ್ನು ಮುಟ್ಟಿದಾಕ್ಷಣ ಅದನ್ನು ಮೆಲ್ಲಗೆ ಸವರಿ ಅದನ್ನು ಹಿಂದೆ ಮುಂದೆ ತಿರುಗಿಸಿ ಅದರ ಸೊಗಡನ್ನು ಅನುಭವಿಸುತ್ತಿದ್ದಾರೆಂದರೆ ಆ ಪುಸ್ತಕವನ್ನು ಸ್ವ್ಯಾನ್ ಕಿಟ್ಟಿಯವರು ಮುದ್ರಿಸಿದ್ದು ಅಂತ ನಾವು ತಕ್ಷಣ ಅರ್ಥ ಮಾಡಿಕೊಳ್ಳಬಹುದು….

ನನ್ನ ‘ಮೀನುಪೇಟೆಯ ತಿರುವು’ ಪುಸ್ತಕವನ್ನು ಓದುಗರಿಗೆ ಕೊಟ್ಟಾಗಲೆಲ್ಲ ನನಗೆ ಈ ಅನುಭವ ಬಹಳ ಸಾರಿ ಆಗಿದೆ… ಮೇಡಂ ಇದು ಸ್ವ್ಯಾನ್ ಮುದ್ರಣವಾ ಅಂತ ಕೇಳಿ ಅವರು ಮುಂದಿನ ಪುಟ ತೆರೆದು ಮುದ್ರಣದ ವಿಳಾಸವನ್ನು ಕನ್ಫರ್ಮ್ ಮಾಡಿಕೊಂಡು “ನೋಡಿ ನಾನು ಹೇಳಿರಲಿಲ್ಲವಾ” ಅಂತ ಅವರ ಊಹೆಗೆ ಅವರೇ ಖುಷಿ ಪಡುತ್ತಾರೆ.

ಇವೆಲ್ಲ ಹೇಳುತ್ತಿರುವುದಕ್ಕೆ ಕಾರಣವಿದೆ.

ಪ್ರಶಸ್ತಿ ಎಂಬುದಕ್ಕೆ ಒಂದು ಪೂರ್ಣ ಪ್ರೀತಿಯ ಅರ್ಥವಿರುವ, ಬೆಲೆಯಿರುವ ಸೇಡಂ ‘ಅಮ್ಮ ಪ್ರಶಸ್ತಿ’ಯನ್ನು ಸ್ವ್ಯಾನ್ ಕಿಟ್ಟಿಯವರು ಮುದ್ರಣ ಕ್ಷೇತ್ರಕ್ಕಾಗಿ ನವೆಂಬರ್ ಇಪ್ಪತ್ತಾರರಂದು ಪಡೆಯುತ್ತಿದ್ದಾರೆ ಹಾಗೂ ಅದನ್ನು ಜೀವನದಲ್ಲಿ ತುಂಬ ಕಷ್ಟಪಟ್ಟು ತನ್ನನ್ನು ಈ ಮಟ್ಟಿಗೆ ತಂದು ನಿಲ್ಲಿಸಿದ ತನ್ನ ಅಮ್ಮನೇ ತನ್ನ ಕಣ್ಮುಂದೆ ಸ್ವೀಕರಿಸಿದರೆ ಬಲು ಖುಷಿ ಅಂತ ಹೇಳಿ ಅಮ್ಮನನ್ನು ಕರೆದುಕೊಂಡು ಹೋಗಿ ತನ್ನ ಕಣ್ಮುಂದೆ ಅವಳು ಪ್ರಶಸ್ತಿ ಸ್ವಿಕರಿಸುವುದನ್ನು ನೋಡಲು ಆಸೆಪಟ್ಟಿದ್ದಾರೆ…

ಈ ಸುದ್ದಿಯನ್ನು ‘ಅವಧಿ’ಯಲ್ಲಿ ಓದಿದಾಗ ಹೌದಲ್ಲವಾ ಎಷ್ಟೊಳ್ಳೆ ಸಂಗತಿ  ಇದು “ಅಮ್ಮ ಪ್ರಶಸ್ತಿ” ಯನ್ನು ವಿಜೇತರ ಪರವಾಗಿ ಅವರವರ ಅಮ್ಮಂದಿರೇ ಸ್ವೀಕರಿಸುವುದು ನಿಜಕ್ಕೂ ಆಯೋಜಕರಿಗೂ, ವಿಜೇತರಿಗೂ, ಅತಿಥಿಗಳಿಗೂ, ಪ್ರೇಕ್ಷಕರಿಗೂ ಹೀಗೆ ಎಲ್ಲರಿಗೂ ಖುಷಿ ಹಾಗೂ ತೃಪ್ತಿಕರ ನೆಮ್ಮದಿಯ ವಿಚಾರ…

ಹೀಗೆ ಅಂದುಕೊಳ್ಳುತ್ತಿರುವಾಗ ಅಪ್ಪ ಕಾಲವಾದ ಮೇಲೆ ಕಳೆದ ಹತ್ತು ವರ್ಷದಿಂದ ನನ್ನೊಟ್ಟಿಗೆ ಬದುಕುತ್ತಿರುವ ನನ್ನಮ್ಮನೂ ನನ್ನೊಂದಿಗೆ ಸೇಡಂಗೆ ಬರುವಂತಿದ್ದರೆ ಅಂದುಕೊಂಡೆ… ಅವಳ 43ನೆಯ ವಯಸ್ಸಿಗೆ ಹುಟ್ಟಿದ್ದು ನಾನು.. ಎಂಟು ವರ್ಷಕ್ಕೊಂದು ಮಕ್ಕಳು ಅವಳಿಗೆ. ಅಕ್ಕನಿಗೆ ಎಂಟು ವರ್ಷವಾದ ಮೇಲೆ ಅಣ್ಣ. ಅವನಿಗೆ ಎಂಟು ವರ್ಷವಾದ ಮೇಲೆ ನಾನು.. ಈ ಮಧ್ಯೆ ಅಣ್ಣ ಅಪಘಾತದಲ್ಲಿ ತೀರಿಹೋದ ಮೇಲೆ ಖಿನ್ನತೆಗೊಳಗಾಗಿ ಮನೆ ಮತ್ತು ಅದರ ಸುತ್ತಲಿನ ಅಂಗಳ ಬಿಟ್ಟರೆ ಇನ್ನೆಲ್ಲೂ ಹೋಗದೇ ಹೊರ ಜಗತ್ತನ್ನೇ ನಿರಾಕರಿಸಿಬಿಟ್ಟಳು..

ದೇವರು ದಿಂಡರಿಗೆಲ್ಲ ಹಿಡಿಶಾಪ ಹಾಕಿದಳು.. ಹಬ್ಬ ಹರಿದಿನಗಳನ್ನೆಲ್ಲ ಗಾಳಿಗೆ ತೂರಿದಳು… ಆದರೂ ‘ನೀನು ಹುಟ್ಟುವಾಗ ಏಳನೇ ತಿಂಗಳ ಬಸುರಲ್ಲಿ ಗೊಬ್ಬರ ಗುಂಡಿಯ ಗೊಬ್ಬರ ಕಡಿದು ಗದ್ದೆಗೆ ಹಾಕಲು ಆಳುಗಳಿಗೆ ಬುಟ್ಟಿ ಹೊರಿಸುತ್ತಿದ್ದೆ… ಅಲ್ಲೇ ರಕ್ತಸ್ರಾವ ಆರಂಭವಾಗಿ ಹತ್ತಿರದ ಸೈಯದ್ ಡಾಕ್ಟರ್ ಮನೆಗೆ ಅದೇ ಸ್ಥಿತಿಯಲ್ಲೇ ಓಡಿಹೋದೆ.. ಹೋಗುವಾಗ ಬೇಲೇಕೇರಿ ದೇವತಿ ಅಮ್ಮನಿಗೆ ಮಗುವಿಗೆ ನಿನ್ನದೇ ಹೆಸರಿಡ್ತೆ.. ಹೇಗಾದರೂ ಬಚಾವ್ ಮಾಡು ಅಂತ ಹರಕೆ ಹೊತ್ತಿದ್ದೆ.. ಸೈಯದ್ ಡಾಕಟ್ರು ಮತ್ತು ದೇವತಿ ಅಮ್ಮ ಇವರಿಬ್ಬರ ಆಶೀರ್ವಾದದಿಂದ ಹುಟ್ಟಿದವಳು ನೀನು .. ಅವರಿಬ್ಬರನ್ನು ಸದಾ ಗುರುತಲ್ಲಿಡು’ ಅನ್ನುವ ಮಂತ್ರವನ್ನು ಬಿಡಲಿಲ್ಲ…

ಅವಳ ಬಯಕೆಗೆ ನನ್ನ ಇಷ್ಟವೂ ಸೇರಿ ಈಗಲೂ ವರ್ಷಕ್ಕೆರಡು ಬಾರಿ ಪ್ರಶಾಂತ ದೇವತಿ ಅಮ್ಮನ ಪ್ರಾಂಗಣದಲ್ಲಿ ಯಾರೂ ಇಲ್ಲದಾಗ ಹೋಗಿ ಕುಳಿತುಕೊಳ್ಳುತ್ತೇನೆ ನಾನು.. ದೊಡ್ಡ ಗೇರು ಹಕ್ಕಲದ ಜನರ ಓಡಾಟ ಇಲ್ಲದ ಶಾಂತ ಪರಿಸರದಲ್ಲಿರುವ ಹಳೆಯ ದೇವಾಲಯ.. ಅಮ್ಮನ ಮಡಿಲ ನೆಮ್ಮದಿ, ಕಾಳಜಿ ಅಲ್ಲಿ ಸಿಕ್ಕುವ ಕಾರಣಕ್ಕೆ ಕುಳಿತರೆ ಎದ್ದು ಬರಲಾಗದ ಸ್ಥಳ ಅದು… ಇನ್ನೊಂಚೂರು ಮತ್ತೊಂಚೂರು ಅನ್ನುತ್ತಲೇ ಕುಳಿತು ಪ್ರಾಂಗಣದ ಸುತ್ತಲಿನ ತೂಗುವ ಮರಗಳನ್ನು, ಅವುಗಳಿಂದ ಒಂದೊಂದೇ ಕಳಚಿ ಅಮ್ಮನ ಅಂಗಳಕ್ಕೆ ನಿಧಾನವಾಗಿ ತೇಲುತ್ತ ಬಂದು  ಬೀಳುವ ತರಗೆಲೆಗಳನ್ನು… ಅದಾಗಲೇ ಬಂದು ಬುಟ್ಟಿಗಟ್ಟಲೆ ಬಿದ್ದ ಅವುಗಳ ರಾಶಿಯನ್ನು ತಾಸುಗಟ್ಟಲೆ ನೋಡಿದರೂ ತೃಪ್ತಿಯಾಗುವುದಿಲ್ಲ…… ಗುಡಿಸಿ ಎಸೆಯಬಾರದು ಎಂದೆನ್ನಿಸುವ ಅವುಗಳಲ್ಲಿ ಅಮ್ಮ ಕಾಣಿಸುತ್ತಾಳೆ..ಹೌದಲ್ಲವಾ.. ಪ್ರೀತಿ ಪಾತ್ರವಾದ ಎಲ್ಲದರಲ್ಲೂ.. ಹುಲ್ಲುಕಡ್ಡಿಯಲ್ಲೂ ಅಮ್ಮ ಇದ್ದಾಳೆ..

ಈಗ ‘ಅಮ್ಮ ಪ್ರಶಸ್ತಿ’ಯನ್ನು ಪಡೆಯಲು ಹೋಗುವ ಸಂದರ್ಭದಲ್ಲಿ ಮತ್ತೆ ಪದೇ ಪದೇ ನನ್ನಮ್ಮನನ್ನು ಕರೆದುಕೊಂಡು ಹೋಗುವಂತಿದ್ದರೆ ಅಂದುಕೊಳ್ಳುತ್ತಿದ್ದೇನೆ..

ನನ್ನ ಕಥೆ, ಕವಿತೆ, ಸುದ್ದಿ ಎಲ್ಲಿ ಬಂದರೂ ಬರಿಗಣ್ಣಿನಲ್ಲೇ ಓದಿ ಖುಷಿಪಡುವ ಅಮ್ಮ ನನ್ನೊಟ್ಟಿಗೆ ಈಗ ಮಾನಸಿಕವಾಗಿ ನೆಮ್ಮದಿಯಿಂದಿದ್ದರೂ  ದೈಹಿಕವಾಗಿ ಸಾಕಷ್ಟು ಹಣ್ಣಾಗಿದ್ದಾಳೆ.. ನಾಲ್ಕು ಹೆಜ್ಜೆ ನಡೆದರೆ ಸುಸ್ತಾಗುತ್ತಾಳೆ.. ಹಾಗಾಗಿ ಅವಳನ್ನು ಕರಾವಳಿಯ ನನ್ನೂರಿಂದ ಹನ್ನೆರಡು ತಾಸು ಪ್ರಯಾಣದ ಗುಲ್ಬರ್ಗಾಕ್ಕೆ ಕರೆದುಕೊಂಡು ಹೋಗಲಾರದವಳಾಗಿದ್ದೇನೆ…

ಆದರೂ ಯಾರೂ ಇಲ್ಲದ ನನ್ನ ತವರಲ್ಲಿ ಬೀಗ ಹಾಕಿ ದುಃಖ ಉಕ್ಕಿಸುವ ಮನೆಯ ಬದಲಾಗಿ ಎಲ್ಲರೂ ತುಂಬಿರುವ ಮಹಿಪಾಲರೆಡ್ಡಿ ಅಣ್ಣನವರ ತುಂಬಿದ ಮನೆಯನ್ನು ತವರು ಅಂತ ಅಂದುಕೊಂಡು ಖುಷಿಯಿಂದ ಹೋಗುತ್ತಿರುವೆ… ಹೆಣ್ಣನ್ನು ಗೌರವಿಸುವ ಎಲ್ಲ ಮನೆಗಳೂ ತವರ ಸುಖವಿಲ್ಲದ ಎಲ್ಲ ಹೆಣ್ಣುಗಳಿಗೆ ಪರ್ಯಾಯ ತಾಣಗಳು. ಅವಳು ಅಲ್ಲೆಲ್ಲ ಅಮ್ಮ ಅಣ್ಣ ತಮ್ಮ ಅಕ್ಕ ಎಲ್ಲರನ್ನೂ ಹುಡುಕುತ್ತಾಳೆ.. ಎಂಬುದು ಹೆಣ್ಮನಸಿನ ಎಲ್ಲರಿಗೂ ಗೊತ್ತುಂಟು… ಹಾಗಾಗಿ ಸೇಡಂ ಅಮ್ಮನ ಮತ್ತು ಕಿಟ್ಟಿ ಅವರ ಅಮ್ಮನವರ ಖುಷಿ ನೋಡಲು ನನ್ನಮ್ಮನ ಹರಕೆ ಜೊತೆಗಿಟ್ಟುಕೊಂಡು ಉತ್ಸುಕಳಾಗಿದ್ದೇನೆ.

ನೀವೂ ಬನ್ನಿ ಸೇಡಂಗೆ.

1 comment

  1. ಬೇಲೇಕೇರಿಯ ದೇವತೆ ಅಮ್ಮನ ಆಶಿರ್ವಾದದ ಮಗಳು…
    Congratulations..

Leave a Reply