ಅಂಗಡಿ ಅಜ್ಜಿಯ ಶುಂಠಿ ಕಾಫಿ ವೃತ್ತಾಂತ…

‘ ಆ ಗಾದೆನಾ ಯಾರೋ ಹಳ್ಳಿಯಿಂದ ಪಟ್ಟಣಕ್ಕೆ ಬರಲು ಸಾಧ್ಯವಾಗದವನೇ ಮಾಡಿರ್ಬೇಕು ತಮ್ಮ’ ಎಂದು ಅಂಗಡಿಯ ಅಜ್ಜಿ ಖಡಕ್ ಆಗಿ ಹೇಳಿದ್ದು, ‘ಪೇಟೆ ನೋಡೋಕ್ ಚೆಂದ, ಹಳ್ಳಿ ಬದುಕೋಕ್ ಚೆಂದ’ ಅನ್ನೋ ಗಾದೆಯನ್ನು ನಾನು ಮಾತಿನ ಮಧ್ಯೆ ಉದ್ಧರಿಸಿದ್ದರಿಂದ. ಬ್ಯಾಚುಲರ್ ಬೆಂಗಳೂರು ಲೈಫ್ ನಲ್ಲಿ ಇಂತಹ ಅಂಗಡಿಗಳು ಕೇವಲ ವ್ಯಾಪಾರದ ಸ್ಥಳಗಳಷ್ಟೇ ಆಗಿರೋಲ್ಲ. ನಾವು ಪ್ರತಿನಿತ್ಯ ಹೋಗುವ ತರಕಾರಿ ಅಂಗಡಿ, ಕಿರಾಣಿ ಸಾಮಾನು ತರುವ ಅಂಗಡಿ, ಹಾಲಿನ ಬೂತು, ಸಂಜೆ ಹೊತ್ತು ಟೀ ಕುಡಿಯುವ ಬೇಕರಿ, ಆಗಾಗ ತಿಂಡಿ – ಊಟಕ್ಕೆಂದು ಹೋಗುವ ಕ್ಯಾಂಟೀನ್ -ಇವು ಕೇವಲ ಕೊಡು ಕೊಳ್ಳುವಿಕೆಯ ತಾಣಗಳಾಗಿರದೆ ಅವುಗಳ ಮಾಲೀಕರ ಜೊತೆ ಆತ್ಮೀಯ ಸಂಬಂಧವನ್ನೇ ಸೃಷ್ಟಿಸಿಬಿಟ್ಟಿರುತ್ತವೆ. ಹಾಗೆ ಏರ್ಪಡುವ ಲಾಭರಹಿತ ಸಂಬಂಧದಿಂದಾಗಿಯೇ ಏನೋ ಬೇಕಾದಷ್ಟು ಆಯ್ಕೆಗಳಿದ್ದರೂ ನಾವು ಮತ್ತೆ ಮತ್ತೆ ಆ ಜಾಗಗಳಿಗೇ ಹೋಗುತ್ತೇವೆ.

ನಾನೂ ಮತ್ತೆ ಮತ್ತೆ ಆ ಅಂಗಡಿಗೆ ಹೋಗುತ್ತಿದ್ದುದು ಅದು ನಮ್ಮ ಮನೆಗೇ ಅಂಟಿಕೊಂಡಂತಿದ್ದ ಕಾರಣಕ್ಕೆ. ಇಬ್ಬರು ವೃದ್ಧ ದಂಪತಿಗಳು ಆ ಅಂಗಡಿಯನ್ನು ನಡೆಸುತ್ತಿದ್ದರು. ಪೂರ್ತಿಯಾಗಿ ಕಿರಾಣಿ‌ ಸಾಮಾನುಗಳು ಇರದ ಟೀ ,ಕಾಫಿ, ಬಾದಾಮ್ ಹಾಲು, ಬ್ರೆಡ್ಡು, ಚಕ್ಕಲಿ ಮತ್ತು ನಿಪ್ಪಟ್ಟು ಮಾತ್ರ ಸಿಗುತ್ತಿದ್ದುದರಿಂದ ಅದು ಇತ್ತ ಬೇಕರಿಯೂ ಅಲ್ಲದ ಅತ್ತ ಕ್ಯಾಂಟೀನ್ ಕೂಡ ಅಲ್ಲದ ಅಂಗಡಿಯಾಗಿತ್ತು. ಲಿಮಿಟೆಡ್ ವಸ್ತುಗಳನ್ನಷ್ಟೇ ಇಟ್ಟು ಮಾರುತ್ತಿದ್ದ ಈ ವೃದ್ಧ ದಂಪತಿಗಳದು ಬಹಳ ಶಿಸ್ತಿನ ಜೀವನ. ಅಂಗಡಿ ಓಪನ್ ಇದೆ ಎಂದಾದರೆ ಅಜ್ಜ ಅಜ್ಜಿ ಇಬ್ಬರೂ ಒಳಗೆ ಇದ್ದೇ ಇರುತ್ತಾರೆ. ಇಲ್ಲಿಗೆ ಬರುವ ಗಿರಾಕಿಗಳ ಸಂಖ್ಯೆ ಅಷ್ಟಕ್ಕಷ್ಟೇ ಇದ್ದರೂ ಅವರಿಬ್ಬರ ಮಾತು ನಿಲ್ಲುವುದಿಲ್ಲ. ಶಾಪಿಂಗ್ ಮಾಲ್ ಗಳ ಭರಾಟೆ , ಬಿಗ್ ಬಜಾರ್ ,ಡಿ ಮಾರ್ಟ್ ಗಳ ಆಫರ್ ಗಳ ನಡುವೆ ಇಂತಹ ಸಣ್ಣ ಸಣ್ಣ ಅಂಗಡಿಗಳ ವ್ಯಾಪಾರ ಶೋಚನೀಯವಾಗಿ ಬಹಳ ವರ್ಷಗಳೇ ಆಯ್ತು. ಆದರೂ ಇಂತಹ ವ್ಯಾಪಾರಗಳು ನಿಲ್ಲುವುದಿಲ್ಲ. ಅಜ್ಜಿ ಮಾಡಿಕೊಡುತ್ತಿದ್ದ ಶುಂಠಿ ಕಾಫಿ ಕೂಡ ನನಗೆ ಅಚ್ಚುಮೆಚ್ಚು. ಸಂಜೆ ಹೊತ್ತು ಒಂದು ಕಾಫಿ ಕುಡಿದು ಅಜ್ಜಿಯೊಂದಿಗೆ ತರಹೇವಾರಿ ಮಾತಾಡಿ ಬರುವುದು ನನ್ನ ರೂಢಿ. ಇಂತಹದ್ದೇ ಒಂದು ಮಾತಿನ ಮಧ್ಯೆ ಅವರ ಹಿನ್ನೆಲೆ ತಿಳಿಯಲು ಹೋದಾಗ ಅವರು ಹಳ್ಳಿಯಿಂದ ಬಂದವರು ಎಂದು ತಿಳಿದು ಅವರಿಗೆ ಹಳ್ಳೀನೇ ಚೆಂದ ಅಲ್ವಾ ಅನ್ನುವ ಉಪದೇಶ ಮಾಡಲು ನಾನು ಪ್ರಯತ್ನಿಸಿದಾಗ ಅಜ್ಜಿ ಈ ಗಾದೆಯೇ ತಪ್ಪು ಎಂದಿದ್ದು. ಆರು ತಿಂಗಳ ಹಿಂದೆ ನಮ್ಮ ನಡುವೆ ನಡೆದ ಈ ಸಂಭಾಷಣೆ ಅವರ ಬಗ್ಗೆ ಮತ್ತು ಬದುಕಿನ ಬಗ್ಗೆ ಹೊಸತೊಂದು ಆಯಾಮ ತೋರಿಸಿತ್ತು.

‘ನೀವು ಬೆಂಗಳೂರಿನವರೆನಾ ಅಜ್ಜಿ? ನಿಮ್ಮ ಮಕ್ಕಳೆಲ್ಲಿದ್ದಾರೆ?’ ಎಂಬ ಪ್ರಶ್ನೆ ತೀರ ಸಾಮಾನ್ಯವೆಂಬಂತೆ ಕೇಳಿದ್ದ ನನಗೆ ಆ ಅಜ್ಜಿ ಹೇಳಿದ ವೃತ್ತಾಂತ ದಿಗಿಲು ಹುಟ್ಟಿಸಿತ್ತು.

‘ಇಲ್ಲ ಕಣಪ್ಪ. ನಾವು ಮೂಲತಃ ಕಾರವಾರ ಜಿಲ್ಲೆಯ ಕುಮುಟಾದ ಹತ್ತಿರ ಒಂದು ಹಳ್ಳಿಯವರು. ನಮ್ಮ ಒಬ್ಬನೇ ಮಗನನ್ನು ಇಂಜಿನಿಯರಿಂಗ್ ಓದಿಸಿದ್ವಿ. ಚೆನ್ನಾಗಿ ಓದಿ ಬೆಂಗಳೂರಿನಲ್ಲಿ ಒಳ್ಳೆಯ ಕಂಪನೀಲಿ ಕೆಲಸಾನು ತಗೊಂಡ. ಅವನೇ ಇಷ್ಟಪಟ್ಟ ಹುಡುಗಿ ಜೊತೆಗೆ ಮದ್ವೆನೂ ಮಾಡಿದ್ವಿ. ನನ್ನ ಸೊಸಿನೂ ಭಾಳ ಒಳ್ಳೆಯವಳೇ. ಅವನ ಮದ್ವೆ ಆಗಿ ಎರಡು ವರ್ಷಕ್ಕೆ ನಾವು ಈ ಹಳ್ಳಿ ಸಾಕು, ಹುಟ್ಟಿದಾಗನಿಂದ ಇಲ್ಲೇ ಇದಿವಿ. ಇರೋದು ಎರಡು ಎಕರೆ ತೋಟ ಮತ್ತು ಎರಡು ಎಕರೆ ಗದ್ದೆ. ಇವನ್ನು ಮಾರಿ ಮಗನಿಗೂ ಸ್ವಲ್ಪ ದುಡ್ಡು ಕೊಟ್ಟಂಗೆ ಆಗುತ್ತೆ . ಹೇಗೂ ಅವನು ಸ್ವಂತ ಮನೆ ತಗೊಂಡಿದಾನೆ. ನಾವು ಹೋಗಿ ಅವರ ಜೊತೆನೇ ಇರೋಣ ಅಂತ ತೀರ್ಮಾನ ಮಾಡಿ ಒಂದಿನ ಅವನಿಗೆ ಇದ್ನ ಹೇಳಿದ್ವಿ. ಆದರೆ ಅವನ ಯೋಚನೆ ಬೇರೇನೇ ಇತ್ತು. ಅದೇನೋ ರಿಸೆಷನ್ ಅಂತ. ಅವ್ನ ಕೆಲಸದಿಂದ ತಗದಿದ್ದರಂತೆ. ಮನೆ ,ಕಾರು‌, ಸೈಟು ಎಲ್ಲರದ್ದೂ ಕಂತು ಕಟ್ಟೋಕೆ ದುಡ್ಡು ಇಲ್ಲದಂಗಾಗಿ ಅವನೇ ತೋಟ ಮತ್ತೆ ಗದ್ದೆ ಮಾರಿ ಅಂತ ನಮಗೆ ಹೇಳ್ಬೇಕು ಅಂತಿದ್ನಂತೆ. ನಾವು ಬೇಸರದಲ್ಲೇ ಒಪ್ಕೊಂಡ್ವಿ. ಸ್ವಲ್ಪ ದುಡ್ಡು ನಮ್ ಹತ್ರ ಇಟ್ಕೊಂಡು ಉಳಿದದ್ದನ್ನೆಲ್ಲ ಅವನಿಗೆ ಸಹಾಯ ಆಗುತ್ತೆ ಅಂತ ಕೊಟ್ವಿ. ಮೂರು ತಿಂಗಳಾದ್ಮೇಲೆ ವಿದೇಶದಲ್ಲಿ ಅವನಿಗೆ ಕೆಲಸ ಸಿಕ್ತು. ಅಲ್ಲಿಗೆ ಹೋಗೋಕೆ, ಮತ್ತೆ ಹೋದ್ಮೇಲೆ ತಕ್ಷಣಕ್ಕೆ ಖರ್ಚು ಇರುತ್ತೆ ಅಂತ ಅವ್ನು ಆ ಮನೆ ,ಕಾರು ಎಲ್ಲವನ್ನೂ ಮಾರಿ ನಮಗೆ ಈ ಬಾಡಿಗೆ ಮನೆ ಮಾಡಿಕೊಟ್ಟು ವಿದೇಶಕ್ಕೆ ಹೋಗಿದಾನೆ. ಹತ್ತು ವರ್ಷ ಅಲ್ಲಿದ್ದು ಆಮೇಲೆ ಇಲ್ಲಿ ಬಂದು ಹೊಸ ಮನೆ ತಗೋತಾನಂತೆ. ನಾವು ಮತ್ತೆ ಊರಿಗೆ ಹೋದರೆ ನಾಚಿಗೆಗೇಡಿನ ವಿಷ್ಯ ಅಲ್ವ ಅದಕ್ಕೆ ಇಲ್ಲೇ ಇದೀವಿ. ಹೇಗೂ ಅಂಗಡಿ ವ್ಯಾಪಾರ ಅಲ್ಪ‌ ಸ್ವಲ್ಪ ಆಗುತ್ತೆ. ಸಾಕಾಗಲಿಲ್ಲ ಅಂದ್ರೆ ಮಗನಿಗೆ ಹೇಳಿದ್ರೆ ದುಡ್ಡು ಕಳಿಸಿಕೊಡ್ತಾನೆ. ನಾವು ಆರಾಮಾಗಿದಿವಪ್ಪ ‘

* * * * *

ಈ ಕಥೆ ಕೇಳುವಾಗಲೇ ನಾನವರಿಗೆ ಆ ಗಾದೆ ಹೇಳಲು ಹೋಗಿದ್ದು, ಅದಕ್ಕವರು ಸಿಟ್ಟಾದದ್ದು. ಹಳ್ಳಿಯಲ್ಲೇ ಹುಟ್ಟಿ ಅದಕ್ಕೆ ಅಂಟಿಕೊಂಡಂತೆ ಬದುಕಿದವರಿಗೆ ಅದು ಬೇಜಾರಾಗಿರಲ್ವೇನು? ಬೆಂಗಳೂರಲ್ಲಿ ಓದಿ ಬೆಳೆದವನೊಬ್ಬನಿಗೆ ಅಮೇರಿಕವೋ, ಆಸ್ಟ್ರೇಲಿಯಾವೋ ಪ್ರಿಯವಾಗುವಂತೆ ಯಾವುದೋ ಹಳ್ಳಿಯಲ್ಲಿ ಬೆಳೆದವನಿಗೆ ಮಹಾನಗರ ಫ್ಯಾನ್ಸಿ ಯಾಗಿ ಕಾಣಬಾರದೇನು ಎಂಬುದು ಅವರ ಈ ವಾದದ ತಾತ್ಪರ್ಯ. ನನಗೋ ಹಳ್ಳಿ ಬಿಟ್ಟು ನಗರ ಸೇರಿದ ಅಸಂಖ್ಯಾತ ಜನರ ಜೀವನದ ವೈವಿಧ್ಯ ನೆನೆದು ಅಂದಿನಿಂದಲೂ ಆಶ್ಚರ್ಯ ಮತ್ತು ಕೌತುಕ ಒಟ್ಟಿಗೇ ಆಗುತ್ತದೆ. ಈ ಕೊಳ್ಳುವ ಮತ್ತು ಮಾರುವ ಪ್ರಕ್ರಿಯೆ ಯಾರಿಗೆ ನಿಜವಾದ ಸಂತೋಷವನ್ನು ತಂದುಕೊಟ್ಟೀತು ಎಂಬ ಗೊಂದಲದಲ್ಲೇ ಇದ್ದೇನೆ. ಒಬ್ಬ ತನ್ನ ಸಂತೋಷವೆಲ್ಲ ಈ ನಗರದಲ್ಲೊಂದು ಮನೆ ಕಟ್ಟಿ ಕೊಳ್ಳುವುದರಲ್ಲಿದೆ ಎಂದು ಭಾವಿಸಿ‌ ಅದಕ್ಕೆ ಬೇಕಾದ ಎಲ್ಲಾ ಸರ್ಕಸ್ ಗಳನ್ನೂ ಮಾಡುತ್ತಾನೆ. ಇನ್ನೊಬ್ಬ ಅದೇ ಮನೆಯನ್ನು ಮಾರಿ ಮತ್ತೇನೋ ಕೊಳ್ಳುವುದರಲ್ಲಿ ತನ್ನ ಸಂತೋಷ ಹುಡುಕಲು ಪ್ರಯತ್ನಿಸುತ್ತಾನೆ ಹಾಗೂ ಈ ರೀತಿಯ ಪ್ರಯತ್ನಗಳಲ್ಲಿ ಇಂತಹ ‘ಅಂಗಡಿಯ ಅಜ್ಜ-ಅಜ್ಜಿ’ ಯಂಥವರು ಹುಟ್ಟಿಕೊಳ್ಳುತ್ತಾರೆ. ಈ ದಯಾಶೀಲ ನಗರ ಅವರನ್ನೂ ತನ್ನ ಶಕ್ತ್ಯಾನುಸಾರ ಸಾಕಿ ಸಲುಹುತ್ತದೆ.

ಅಂದಿನಿಂದ ಆ ಅಜ್ಜ ಅಜ್ಜಿಯರೊಂದಿಗೆ ಅದೇನೋ ಆಪ್ತತೆ ಬೆಳೆದಿತ್ತು. ಕಳೆದ ಕೆಲವು ದಿನಗಳ ಹಿಂದೆ ಬಿಡುವಿದ್ದಾಗ ಶುಂಠಿ ಕಾಫಿ ಕುಡಿಯೋಣವೆಂದು ಆ ಅಂಗಡಿಗೆ ಹೋದೆ. ಅಜ್ಜ ಶುಂಠಿ ಕಾಫಿ ಕೊಟ್ಟರು. ಅವರು ಮಹಾಮೌನಿ. ಅಂಗಡಿಯೊಳಗೆ ಅಜ್ಜಿ ಕಾಣಸಲಿಲ್ಲ. ಮನೆಯೊಳಗಿರಬೇಕು ಎಂದುಕೊಂಡೆ. ಯಾಕೋ ಅವರೊಡನೆ ಮಾತಾಡಿಯೇ ಹೋಗಬೇಕೆನ್ನಿಸಿತು. ಬಹಳ ಸಮಯ ಕಾದರೂ ಅಜ್ಜಿ ಬರಲಿಲ್ಲ. ಅಜ್ಜನನ್ನು ಕೇಳುವುದೂ ನನಗೆ ತರವೆನಿಸಲಿಲ್ಲ. ಕುಡಿಯಲು ಇಟ್ಟಿದ್ದ ಜಗ್ಗಿನಲ್ಲಿ ನೀರು ಖಾಲಿ ಆಗಿದ್ದರಿಂದ ನೀರು ತರಲು ಅಜ್ಜ ತನ್ನ ಖುರ್ಚಿ ಬಿಟ್ಟು ಎದ್ದು ಹೋದರು. ಸರಿಯಾಗಿ ಅವರ ಖುರ್ಚಿಯ ಹಿಂಭಾಗದಲ್ಲಿ ಅಜ್ಜಿಯ ಫೋಟೋಗೆ ಹಾರ ಹಾಕಲಾಗಿತ್ತು. ಅದನ್ನು ನೋಡಿದವನ ಮೈ ಜುಂ ಎಂದಿತು. ಅಷ್ಟರಲ್ಲಿ ಅಜ್ಜ, ಜಗ್ಗು ತೆಗೆದುಕೊಂಡು ವಾಪಸ್ ಬಂದು ತಮ್ಮ ಖುರ್ಚಿಯಲ್ಲಿ ಯಾವತ್ತಿನ ಭಂಗಿಯಲ್ಲಿ ಕೂತರು.

ಆ ಅಜ್ಜಿಯಾದರೂ ಯಾರ ಬಳಿಯಾದರೂ ಮಾತಾಡುತ್ತ ಕಾಲ ಕಳೆಯುತ್ತಿದ್ದರು ಆದರೆ ಈ ಅಜ್ಜನೆಂಬ ಮಹಾಮೌನಿಯಲ್ಲಿ ಮಡುಗಟ್ಟಿರಬಹುದಾದ ಮಾತುಗಳು ಹೊರಬರುವುದಾದರೂ ಹೇಗೆ ?

‘ಅಜ್ಜ , ಸುಮ್ನೆ ವಾಪಾಸ್ ಹಳ್ಳಿಗೆ ಹೋಗಿ. ನಿಮ್ಮವರು ಅಂತಾನಾದ್ರೂ ಕೆಲವರು ಇರ್ತಾರೆ ಅಥವಾ ಮಗನ ಜೊತೆ ವಿದೇಶಕ್ಕಾದರೂ ಹೋಗಿ’ ಎಂದು ಹೇಳಿ ಜೀವನಮಾರ್ಗಿಯಾಗೋಣ ಅಂದುಕೊಂಡೆ.
ಯಾಕೋ ಧೈರ್ಯ ಸಾಲಲಿಲ್ಲ. ಮಾತನ್ನು ಎದುರಿಸುವುದು ಸುಲಭ. ಮೌನವನ್ನು ಭೇದಿಸುವ ಮಾರ್ಗ ತೋಚದೆ ನಾನೂ ಮೌನಿಯಾದೆ.

* * * *

ಕಳೆದ ಹತ್ತು ವರ್ಷಗಳಿಂದ ಇದ್ದ ಮನೆಯನ್ನು ತೊರೆದು ಅದೇ ಮಹಾ ನಗರದ ಬೇರೊಂದು ಬಡಾವಣೆಗೆ ಶಿಫ್ಟ್ ಆಗುವ ಸಂದರ್ಭದಲ್ಲಿ ಒಬ್ಬ ಚಿತ್ರನಟ ಎದುರಿಸಿದ ಈ ಸಂದಿಗ್ಧವನ್ನು ಕಥಾ ರೂಪದಲ್ಲಿ ಕಟ್ಟಿದ್ದೇನೆ ಅಷ್ಟೇ.

Leave a Reply