ಸಿಂಗಾಪುರ್ ನಲ್ಲಿ ‘ಚಿಂಗೆ’

ಚೀನಿಯರ ಹಬ್ಬ ನೋಡಿದ್ದಾಯಿತು. ಮಲಯ್ ಅವರ ಆಚರಣೆ ಬಗ್ಗೆಯೂ ಕೇಳಿದ್ದಾಯಿತು. ಭಾರತೀಯರ ಸಂಸ್ಕೃತಿ ಬಗ್ಗೆ ಗೊತ್ತೇ ಇರುವ ವಿಚಾರ. ಪ್ರಮುಖ ಪಂಗಡಗಳ ಪ್ರತ್ಯೇಕ ಆಚರಣೆ ಬಗ್ಗೆ ಪ್ರಾರಂಭದಲ್ಲೇ ತಿಳಿದಿದ್ದೆ. ಆದರೆ ಇವರೆಲ್ಲರನ್ನು ಒಟ್ಟುಗೂಡಿಸುವ ಒಂದು ಉತ್ಸವವೂ ಇಲ್ಲಿ ಆಚರಿಸಲಾಗುತ್ತಿದೆ. ಬಹು ಸಂಸ್ಕೃತಿ, ಬಹು ಜನಾಂಗೀಯ ಸಾಮರಸ್ಯದ ಬಗ್ಗೆ ಇಷ್ಟೊಂದು ಪ್ರಾಮುಖ್ಯತೆ ನೀಡು ತ್ತಿರುವ ಬಗ್ಗೆ ನಿಜಕ್ಕೂ ಅಚ್ಚರಿ ಎನಿಸಿತು.

ಇಡೀ ವರ್ಷದ ಹಬ್ಬಗಳ ಪೈಕಿ “ಚೈನೀಸ್ ನ್ಯೂ ಈಯರ್” ಚೀನೀಯರಿಗೆ ಮಹತ್ವದ್ದು. ಎಷ್ಟೇ ಸಮಸ್ಯೆಗಳು, ಕಷ್ಟ ನಷ್ಟಗಳ ನಡುವೆಯೂ ಈ ಹಬ್ಬವನ್ನು ಪ್ರತಿಯೊಬ್ಬರು ಆಚರಿಸುತ್ತಾರೆ. ಚೈನೀಸ್ ನ್ಯೂ ಈಯರ್ ಸಂದರ್ಭದಲ್ಲಿ ಪಟಾಕಿಗಳನ್ನು ಸಿಡಿಸುವ ಕಾರ್ಯಕ್ರಮವು ಕೂಡ ಒಂದು ಸಂಪ್ರದಾಯ. ಆದರೆ 1972 ರ ಆಸುಪಾಸಿನಲ್ಲಿ ಈ ಪಟಾಕಿಗಳಿಂದಾಗಿ ದುರಂತವೊಂದು ಸಂಭವಿಸಿ ಸಾವು ನೋವಿಗೂ ಕಾರಣವಾಗಿತ್ತಂತೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಅಂದಿನ ಸರ್ಕಾರ ಪಟಾಕಿ ಸಿಡಿಸುವ ಪದ್ಧತಿಯನ್ನೇ ನಿಷೇಧಿಸಿತು. ಇದರಿಂದಾಗಿ ವರ್ಷಕ್ಕೊಮ್ಮೆ ಆಚರಿಸುತ್ತಿದ್ದ ಬಹುದೊಡ್ಡ ಹಬ್ಬದ ಕಳೆಗೆ ಕಾರ್ಮೋಡ ಕವಿದಂತಾಯಿತು.

ಇದರ ಪರಿಣಾಮವಾಗಿಯೇ ಹುಟ್ಟಿಕೊಂಡಿದ್ದು “ಚಿಂಗೆ”. ಅಂದ ಹಾಗೆ ಸಿಂಗಾಪುರದ ರಾಷ್ಟ್ರೀಯ ದಿನದ ಪ್ರಯುಕ್ತ ನಡೆಯುವ ಕಾರ್ಯಕ್ರಮಗಳು ಅಷ್ಟಕಷ್ಟೆ. ಒಂದಷ್ಟು ಹಾಡುಗಳು, ಕುಣಿತಗಳು, ಎಲ್ಲ ವಿಭಾಗದ ಪೆರೇಡ್ ಗಳನ್ನು ಹೊರತು ಪಡಿಸಿದರೆ ಬೇರೆ ಏನು ಇರೋದಿಲ್ಲ. ಭಾರತೀಯರಿಗಂತೂ ಇದು ಏನು ಅಲ್ಲ. ನಮ್ಮಲ್ಲಿ ನಡೆಯುವ ಸ್ವಾತಂತ್ರ್ಯ ದಿನದ ವಿಶೇಷತೆನೇ ಬೇರೆ. ದೇಶಾಭಿಮಾನವನ್ನು ಬಿಂಬಿಸುವ ಅಂಶಗಳು ಉದ್ದಕ್ಕೂ ಸಾಗುತ್ತಿದ್ದಂತೆ ಅದೇನೋ ರೋಮಾಂಚನ. ಸೈನಿಕರ ಪಥ ಸಂಚಲನದ ಗತ್ತೇ ಬೇರೆ. ವಿದೇಶದಲ್ಲಿದ್ಡುಕೊಂಡು ಇವನ್ನೆಲ್ಲ ನೋಡುವಾಗ ಮೂಡುವ ಅಭಿಮಾನವೇ ವಿಶಿಷ್ಟ.


ಆದರೆ ದೇಶದಲ್ಲಿನ ರಾಜಕಾರಣಿಗಳ ವರ್ತನೆಗಳು, ಅವರ ಜನಸೇವೆ, ದೇಶ ಸೇವೆಗಳಲ್ಲಿನ ಕೊರತೆಗಳ ಬಗ್ಗೆ ಅಸಮಾಧಾನ ಇರುವುದೇ. ನೈಸರ್ಗಿಕ ಸಂಪನ್ಮೂಲಗಳು ಯಥೇಚ್ಚವಾಗಿದ್ದರೂ ಅವನ್ನು ಸಂಪೂರ್ಣ ಬಳಸಿಕೊಳ್ಳುವ ಬಗ್ಗೆ ಇಚ್ಛಾಶಕ್ತಿ ಎಂಬ ಕೊರತೆ ಅಡ್ಡಗಾಲು ಹಾಕುತ್ತಿರುವುದು ಮಾತ್ರ ಬೇಜಾರಿನ ಸಂಗತಿ.

ಹೋಲಿಕೆ ಮಾಡಿ ಬರೆದ ಕೂಡಲೇ ಅದು ನಮ್ಮ ದೇಶವನ್ನು ಕಡೆಗಣಿಸಿ, ವಿದೇಶವನ್ನು ಹೊಗಳಿದ ಅರ್ಥ ಅಲ್ಲ. ವಿದೇಶಿ ವ್ಯಾಮೋಹನೂ ಅಲ್ಲ. ಯಾವುದೇ ಸಂಪನ್ಮೂಲಗಳಿಲ್ಲದೆ ನೀರಿನಿಂದ ಆವೃತವಾಗಿರುವ ಈ ದ್ವೀಪ, ಅಭಿವೃಧ್ಧಿಯಲ್ಲಿ ಇಷ್ಟೊಂದು ಹೆಸರು ಮಾಡ್ತಾ ಇದೆ ಅಂದ್ರೆ ಅದನ್ನು ಅಷ್ಟು ಸುಲಭದಲ್ಲಿ ತಳ್ಳಿ ಹಾಕುವಾಗಿಲ್ಲ. ಇಲ್ಲಿನ ಒಂದು ಎಕ್ಸ್ಪ್ರೆಸ್ ಹೆದ್ದಾರಿಯ ೫ ಕಿಲೋ ಮೀಟರ್ ಭಾಗ ಸಮುದ್ರದ ಅಡಿಯಲ್ಲಿ ಹಾದುಹೋಗುತ್ತದೆ. ಅತಿ ಹೆಚ್ಚು ಗ್ರೀನರಿ ಹೊಂದಿದ ಖ್ಯಾತಿ ಯೂ ಇದಕ್ಕಿದೆ. ಇವಕ್ಕೆಲ್ಲಾ ಸಮರ್ಪಕ ಯೋಜನೆಗಳು, ಜನರ ಶ್ರಮವೇ ಕಾರಣ.

ವಿದೇಶದಲ್ಲಿದ್ದಾಗ ಮಾತ್ರ ಕಾನೂನಿಗೆ ಹೆದರುವ ನಮ್ಮ ಕೆಲ ಜನರು, ಇನ್ನೂ ಈ ಕಾನೂನುಗಳ ಜೊತೆ ಯಾವುದೇ ಸಂಬಂಧನೇ ಇಲ್ಲದ ರೀತಿಯಲ್ಲಿ ವರ್ತಿಸುವ ಸ್ವದೇಶದ ಒಂದಿಷ್ಟು ಮಂದಿ. ಯಾರು ಏನು ಮಾಡಿದ್ರು ನಡಿಯುತ್ತೆ, ದುಡ್ಡು ಒಂದು ಇದ್ದರೆ ಸಾಕು ಅನ್ನುವ ದುರಂಕಾರ. ಶೂನ್ಯದಿಂದ ಅಭಿವೃಧ್ಧಿ ಹೊಂದಿದ ಅದೆಷ್ಟೋ ಉದಾಹರಣೆಗಳು ನಮ್ಮ ಕಣ್ಣಮುಂದೆ ಇದ್ದಾವೆ. ಉತ್ತಮ ಕೇಳುಗರಾದ್ರೆ ಮುಗೀತಾ.. ಅದೇ ರೀತಿಯ ಯೋಜನೆಗಳನ್ನುಅನುಷ್ಟಾನಕ್ಕೆ ತರುವ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುವ ಅಗತ್ಯವಿಲ್ವ.

ಸಿಂಗಾಪುರದಲ್ಲಿ ನಾನು ಗಮನಿಸಿದ ಹಾಗೆ, ಜನ ಯಾವ ರೀತಿ ಸರ್ಕಾರದ ಬಗ್ಗೆ ವಿಶ್ವಾಸ ಹೊಂದಿರುತ್ತಾರೋ, ಅದೇ ರೀತಿ ಸರ್ಕಾರ ಕೂಡ. ಜನರ ಅವಶ್ಯಕತೆ, ಭಾವನೆಗಳ ಬಗ್ಗೆಯೂ ಪರಿಗಣಿಸುತ್ತದೆ. ಜನರ ಹಿತದೃಷ್ಟಿಯಿಂದ 1973 ರಲ್ಲಿ ಆರಂಭವಾದ ಈ ಚಿಂಗೆ ಪ್ರದರ್ಶನ ಈಗಲೂ ಮುಂದುವರಿಯುತ್ತಾ ಇದೆ.


ಚಿಂಗೆ ಪದವು ಹೊಕ್ಕಿನ್ ಚೀನಿ ಪದ ಝೆನ್ನಿ ಯಿಂದ ಪಡೆಯಲಾಗಿದೆ. ಈ ಕಾರ್ಯಕ್ರಮ ಆರಂಭವಾಗಿದ್ದು ಚೀನಿಯರ ದೇವತೆ ಗುನಿಯನ್ ನ ಮೆರವಣಿಗೆಯ ಸಂಕೇತವಾಗಿ. ಇದು ನಡೆಯೋದು ಚೈನೀಸ್ ನ್ಯೂ ಈಯರ್ ಸಂದರ್ಭದಲ್ಲಿ. ಸಿಂಗಾಪುರದಲ್ಲಂತೂ ಇದು ರಾಷ್ಟ್ರೀಯ ಸಮಾರಂಭವಾಗಿ ಮಾರ್ಪಾಡಾಗಿದೆ. ಪ್ರಾರಂಭದಲ್ಲಿ ಚೈನೀಸ್ ಪೆರೇಡ್ ಎಂದೇ ಖ್ಯಾತಿಗಳಿಸಿದ್ದ ಈ ಬೀದಿ ಪ್ರದರ್ಶನ, ಕ್ರಮೇಣ ಬಹು ಸಾಂಸ್ಕೃತಿಕ ಉತ್ಸವವಾಗಿ ಹೊರಹೊಮ್ಮಿತು.

ಚೈನೀಸ್ ಸಮುದಾಯಕ್ಕೆ ಮಾತ್ರ ಸೀಮಿತವಾಗಿದ್ದ ಈ ಮೆರವಣಿಗೆ ಉತ್ಸವವನ್ನು, ಇದೀಗ ಮಲಯ್, ಭಾರತೀಯರು, ವಿದೇಶಿಗರು ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಒಟ್ಟುಗೂಡುವ ಮೂಲಕ ಮತ್ತಷ್ಟು ವಿಜೃಂಬಣೆಯಿಂದ ಆಚರಿಸಲಾಗುತ್ತಿದೆ. ಪ್ರತಿ ವರ್ಷದ ಫೆಬ್ರವರಿಯಲ್ಲಿ ೨ ದಿನಗಳ ಕಾಲ ಈ ಮೆರವಣಿಗೆ ನಡೆಯುತ್ತದೆ. ಸಂಜೆಯ ಹೊತ್ತಿಗೆ ಆರಂಭವಾಗಿ ರಾತ್ರಿಯ ಬಣ್ಣ ಬಣ್ಣದ ಬೆಳಕಿನೊಂದಿಗೆ ಕಂಗೊಳಿಸಿ ನೆರೆದಿದ್ದವರ ಮನಸೂರೆಗೊಳ್ಳುವಲ್ಲಿ ಫೇಮಸ್ ಆಗಿದೆ. ಡ್ರ್ಯಾಗನ್ ನೃತ್ಯಗಳು, ಸಿಂಹ ಕುಣಿತ, ಕೋಲಿನಲ್ಲಿ ನಡಿಗೆ, ವೂಶೂ ಮಾಸ್ಟರ್ಸ್, ಮಕ್ಕಳ, ಹಿರಿಯರ ಡ್ಯಾನ್ಸ್ ಗಳು ತಮ್ಮ ಸಾಂಪ್ರದಾಯಿಕ ವೇಷಭೂಷಣಗಳಲ್ಲಿ ವಿವಿಧ ಜನಾಂಗದವರ ಪ್ರದರ್ಶನಕಾರರು ಪ್ರತಿವರ್ಷ ಭಾಗವಹಿಸಿ ಪ್ರದರ್ಶನಕ್ಕೆ ಮತ್ತಷ್ಟು ರಂಗು ನೀಡುತ್ತಾರೆ.

ಈ ಉತ್ಸವದ ಸಂದರ್ಭದಲ್ಲೇ ಅದೆಷ್ಟೋ ಪ್ರವಾಸಿಗರು ಸಿಂಗಾಪುರಕ್ಕೆ ಭೇಟಿ ನೀಡುವ ಯೋಜನೆಯನ್ನು ಹಾಕಿಕೊಂಡಿರುತ್ತಾರೆ. ಟಿಕೆಟ್ ಪಡೆದು ನೋಡುವ ಪ್ರದರ್ಶನ ಇದಾಗಿದೆ. ಪ್ರತಿ ವರ್ಷ ಲಕ್ಷಾಂತರ ಮಂದಿ ಪ್ರೇಕ್ಷಕರು ಈ ಸುಂದರ ಸಂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ಜೊತೆಗೆ ಸುಮಾರು 6,000 ಕ್ಕೂ ಅಧಿಕ ಮಂದಿ ಪೆರೇಡ್ ನಲ್ಲಿ ಭಾಗವಹಿಸುತ್ತಾರೆ. ಮುಂದಿನ ವರ್ಷದ ಚಿಂಗೆ ಉತ್ಸವದಲ್ಲಂತೂ 19 ತಂಡಗಳು ಭಾಗವಹಿಸಲಿವೆ. ಇದಕ್ಕಾಗಿ ಸಮಿತಿಯನ್ನು ತೆರಯಲಾಗಿದ್ದು, ಕೆಲಸ ಮಾಡಲಿಚ್ಛಿಸುವವರಿಗೆ ಸ್ವಯಂಸೇವಕರಾಗುವ ಅವಕಾಶಗಳನ್ನು ನೀಡಲಾಗುತ್ತದೆ.


ಪ್ರತಿ ವರ್ಷ ಬದಲಾಗುವ ಚೀನಿಯರ ರಾಶಿ ಚಕ್ರದ ಅನ್ವಯ ಈ ಮೆರವಣಿಗೆಯ ಥೀಮ್ ಅನ್ನು ನಿರ್ಧರಿಸಲಾಗುತ್ತದೆ. 1819 ರಲ್ಲಿ ಸರ್ ಸ್ಟ್ಯಾಮ್ಫೋರ್ಡ್ ರಫ್ಫೆಲ್ ಅವರು ಭೇಟಿ ನೀಡಿದ 200 ನೇ ವಾರ್ಷಿಕೋತ್ಸವದ ಸ್ಮರಣಾರ್ಥದ ಸಂದರ್ಭವಾಗಿ ಮುಂದಿನ ವರ್ಷ ಆಚರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಚಿಂಗೆ ಪೆರೇಡ್ “ಡ್ರೀಮ್ಸ್ ಫಂಟಾಶಿಯಾ” ಎಂಬ ಥೀಮ್ ಮೂಲಕ ನಡೆಯಲಿದೆ. ಇಲ್ಲಿನ ಫಾರ್ಮುಲ 1 ಪಿಟ್ ನಲ್ಲಿ ಉತ್ಸವ ನಡೆಸಲಾಗುತ್ತದೆ.
ಪ್ರಪಂಚದ ವಿಭಿನ್ನ ಸಂಸ್ಕೃತಿಗಳನ್ನು ಬಿಂಬಿಸುವ ಹಾಗೂ ವಯಸ್ಸು, ಜನಾಂಗ, ಭಾಷೆ, ಮತಗಳ ಯಾವುದೇ ಅಡೆತಡೆಗಳಿಲ್ಲದೆ ಆಚರಿಸಲಾಗುವ ವಿನೂತನ ಪ್ರದರ್ಶನ ಇದಾಗಿದೆ. ಇಂತಹ ಉತ್ಸವಗಳು ಸಿಂಗಾಪುರ ದೇಶಕ್ಕೆ ಜಾಗತಿಕ ಮಟ್ಟದಲ್ಲಿ ಒಂದು ವಿಶಿಷ್ಟ ಸ್ಥಾನ ದೊರೆಯುವಂತೆ ಮಾಡೋದ್ರಲ್ಲಿ ಸಂಶಯವಿಲ್ಲ.

ನಮ್ಮಲ್ಲೂ ಅದೆಷ್ಟೋ ಸಾಂಸ್ಕೃತಿಕ ಉತ್ಸವಗಳು, ಮೆರವಣಿಗೆಗಳು ವಿಶೇಷ ಸಂದರ್ಭಗಳಲ್ಲಿ ನೆರವೇರುತ್ತವೆ. ಪ್ರತಿಯೊಂದು ಸಮಯದಲ್ಲೂ ಹೊಸತನವನ್ನು ಸೃಷ್ಟಿಸುವ ಮೂಲಕ ವಿಭಿನ್ನತೆ, ವೈಶಿಷ್ಟತೆಯಿಂದ ನೋಡುಗರ ಗಮನ ಸೆಳೆಯುತ್ತವೆ. ಇನ್ನೂ ಹಬ್ಬಗಳ ಸಂದರ್ಭದಲ್ಲಿ ಇಂತಹ ಸಮಾರಂಭಗಳನ್ನು ನೋಡೋದೇ ಒಂದು ಸೊಗಸು. ವಿದೇಶದಲ್ಲಿರುವ ಅಥವಾ ವರ್ಷಕ್ಕೊಮ್ಮೆ ಊರಿಗೆ ಭೇಟಿ ನೀಡುವ ನಮಗೆ ಸಾಮಾಜಿಕ ಜಾಲತಾಣಗಳೊಂದೇ ಗತಿ ಇವುಗಳ ಸೌಂದರ್ಯ ವೀಕ್ಷಿಸಲು. ಇಂತಹ ವೇಳೆಯಲ್ಲಿ ಚಿಂಗೆ ಪೆರೇಡ್ ಉತ್ಸವ ಹಾಗೂ ವೀಕ್ಷಣೆ ಕೊಂಚ ಸಮಾಧಾನಕರ ಸಂಗತಿ.

Leave a Reply