ಮುರಳಿ ಹತ್ವಾರ್
ಮತ್ತೆ ಸುಮ್ಮನಿರಬೇಕೆನಿಸಿದೆ…..!
ಐದಕೈದೂ ಮುಚ್ಚಿಕೊಂಡು
ನಾಕುನಾಕರ ವಾಸನೆಯಲ್ಲಿ
ಮೂರುಮೂರು ಹೊತ್ತದಂತೆ
ಎರಡುಎರಡರ ಎಣಿಕೆಯೆಲ್ಲ
ಒಂದುಮಾಡಿ ಮನಸಿನೊಳಗೆ
ಮತ್ತೆ ಸುಮ್ಮನಿರಬೇಕೆನಿಸಿದೆ…..!
ನನ್ನ ಕಾಲು, ನನ್ನ ಹಾಸಿಗೆ
ನನ್ನ ನಡೆಯ ವೇಗ ನನಗೆ
ನನ್ನ ಉಸಿರು, ನನ್ನ ಕೊರಳು
ಹಂಗಿನೆಳೆಯು ಕತ್ತಿನುರುಳು!
ನಿಮ್ಮ ಅಳತೆ, ನಿಮ್ಮ ಕೋಲು
ಇಟ್ಟುಕೊಳ್ಳಿ , ಸುಟ್ಟುಕೊಳ್ಳಿ !
ಗುರಿಯ ಬೆಳೆವ ಒಲವ ದನಿ
ಬರಡು ನೆಲವ ತೋಯ್ದ ಹನಿ
ಬೆನ್ನು ತಟ್ಟಿ ಹರಸೊ ಕೈಗಳು
ಇರುಳ ದಾರಿ ಕಾಯ್ವ ಕಣ್ಗಳು
ಮನದ ಮಾತು ಹೊತ್ತ ನೆರಳು
ತಪ್ಪಿ ನಡೆಯೆ ಮೌನ ಬೆರಳು!
ಭಾವನೆಗಳ ಬೆಳೆಯು ಕುದಿಯೆ
ಎಲೆಯ ತುಂಬಾ ತಿನಿಸು, ಊಟ
ನಿಮ್ಮ ನಾಲಿಗೆ, ಮನವು ಕುಣಿಯೆ
ತಣಿವುದು ಬಡಿಸಿದವರ ನೋಟ
ಎಂಜಲೆಲೆಗಳ ನೆಲವ ಸಾರಿಸಿ
ಮತ್ತೆ ಸುಮ್ಮನಿರಬೇಕೆನಿಸಿದೆ……!
ಸುಮ್ಮನಿರಬೇಕೆನಿಸಿದೆ