ಗಾಂಧಿಯ ನಗು ಮಾಸುವುದಿಲ್ಲ..

ಸತ್ಯಮಂಗಲ ಮಹಾದೇವ

ಗಾಂಧಿಯ ನಗು ಮಾಸುವುದಿಲ್ಲ

ಕೈಯಲ್ಲಿನ ಗೆರೆಗಳನ್ನು ಅಳಿಸಲು
ಮಾತಿನ ತೈಲ ಹಚ್ಚುವ ಪಡೆ ಸನ್ನದ್ಧವಾಗಿದೆ
ನಾಯಕ ಹಸಿವಿಗೆ ರಕ್ತದ ಸಮುದ್ರಗಳ ನಿರ್ಮಿಸುತ್ತಿದ್ದಾನೆ
ಚಲಾವಣೆಯಾಗುವ ಶಬ್ಧಗಳನ್ನು ಟಂಕಿಸಲಾಗುತ್ತಿದೆ
ಗದ್ದುಗೆಯ ಮೇಲಿನ ಕಿರೀಟಗಳನ್ನು ಗಿರವಿ ಇಡಲಾಗಿದೆ.

ತಲೆತಲಾಂತರದ ಮಾರಾಟದ ವಿಷಯ
ವಿಶ್ವವಿದ್ಯಾಲಯಗಳಲ್ಲಿ ಪಠ್ಯವಾಗುತ್ತಿದೆ
ಹಸಿವಿಗೆ ಅನ್ನವನಿಕ್ಕಿದೊಡೆ ಕಿರೀಟ ಭಂಗವಾಗುತ್ತದೆ
ಊರಿನ ಕೇರಿಗಳಲ್ಲಿ ಭೀಮನ ಕೊಲೆನಡೆದಿದೆ
ಮುಳ್ಳಿನ ಕಿರೀಟವಿರಿಸಿಕೊಂಡವರು ಮೊರೆಯಿಡುತಿದ್ದಾರೆ
ಒನಕೆ ಚಿಗುರುವ ಕನಸು ಬಿದ್ದಿದೆ ಕವಿಗೆ
ಉಪದೇಶ ನಿಲ್ಲಿಸದ ಗುರುವಿಗೆ
ನೊಬೆಲ್ ಪಾರಿತೋಷಕ ಕಾದು ಕೂತಿದೆ

ಗಾಂಧಿಯ ನೆರಳಲ್ಲಿ ಮುಖವಿಟ್ಟು
ಪರಾಕುಗಳ ಹೇಳಿಸಲಾಗುತ್ತಿದೆ
ಹೆದ್ದಾರಿಯ ಕ್ರಾಸು ರಸ್ತೆಗಳಲ್ಲಿ
ಹೆಮ್ಮನೆಯ ಪಡಸಾಲೆಯಲ್ಲಿ  ಗಾಂಧಿಯ ಕೂರಿಸಲಾಗಿದೆ
ಪ್ರತಿಭಟನೆಗಳ ನೋಡಿ ನೋಡಿ ಗಾಂಧಿ ಮೌನವಾಗಿದ್ದಾನೆ.

ಪೊರಕೆ ಹಿಡಿದು ಗುಡಿಸುವುದು ತಂತ್ರವಾಗಿದೆ
ಕಸವಿಲ್ಲದ ನೆಲದಲ್ಲಿ ಮಾತ್ರ ಇವರ ಕೆಲಸ
ನೆಲವಿಲ್ಲದ ಕಸ ತುಂಬಿದ ಬುದ್ದಿಯೊಳಗೆ
ಗಾಂಧಿ ಇರಲಿ ಅವನೇ ಇರುವುದಿಲ್ಲ
ಮೊಜು-ಮುಲಾಜು ಹಣದ ಇಲಾಜುಗಳ ಕೊಳೆ ತುಂಬಿದೆ

ದೇಹವನ್ನು ಛಿದ್ರಮಾಡಿರಬಹುದು
ಬುದ್ದನ ಅಳಿಸಲು ಸಾಧ್ಯವಹುದೆ
ಗಾಂಧಿಯ ನಗು ಮಾಸುವುದಿಲ್ಲ
ಭೂಮಿ ಮೊಳೆಯುವುದ ಮರೆತ ದಿವಸ
ಹೂ‌ ಅರಳುವುದ ನಿಲ್ಲಿಸಿದ ಕ್ಷಣಗಳಲ್ಲಿ
ಗಾಂಧಿ ವಿರಮಿಸುವುದು ಕಾಣುತ್ತದೆ ಎಲ್ಲರಿಗೆ.

 

Leave a Reply