ಕಣ್ಣರಿಯದಿದ್ದರೇನು, ಕರುಳು ಅರಿವುದು ಎಲ್ಲವನ್ನೂ…

ಕುಮುದಿನಿ ಒತ್ತಾಯಿಸುತ್ತಿದ್ದಾಳೆ, “ದೇವಿ ಒಮ್ಮೆ ನಿನ್ನ ಕಣ್ಣ ಪಟ್ಟಿಯನ್ನು ತೆರೆದುಬಿಡು. ಸಾಲಾಗಿ ಮಲಗಿರುವ ನಿನ್ನ ಮಕ್ಕಳನ್ನೊಮ್ಮೆ ನೋಡಿಬಿಡು. ಇನ್ನು ನಿನಗೆ ಎಂದಿಗೂ ಆ ಭಾಗ್ಯ ಸಿಗದು. ಒಡಲೊಳಗೆ ಒಡಮೂಡಿ ಬಂದ ಕುಡಿಗಳು ಮಣ್ಣ ಸೇರುವ ಗಳಿಗೆ ಸನಿಹವಾಗುತ್ತಿದೆ. ಒಮ್ಮೆ ಕಣ್ತೆರೆದು ನೋಡಬಾರದೆ?” ಗಾಂಧಾರಿ ಯಾವೊಂದು ಬಗೆಯ ಉನ್ಮಾದವನ್ನೂ ತೋರದೇ ತಣ್ಣಗೆ ನುಡಿಯುತ್ತಾಳೆ, “ಕಣ್ಣರಿಯದಿದ್ದರೇನು ಕುಮುದಿನಿ. ಎಲ್ಲವನ್ನೂ ಕರುಳು ಅರಿಯುತ್ತದೆ. ಕಣ್ಣ ಪಟ್ಟಿಯ ಸರಿಸುವ ಅಗತ್ಯವಿಲ್ಲ ಬಿಡು.” ಕುಮುದಿನಿಯೀಗ ಹನಿಗಣ್ಣಾಗಿ ಹೇಳುತ್ತಾಳೆ, “ನಿನ್ನ ಈ ಹಠವೇ ಇಷ್ಟೆಲ್ಲಕ್ಕೂ ಕಾರಣವಾಯಿತಲ್ಲವೆ ದೇವಿ? ಕೊನೆಗೂ ನೀನು ಸೋತೆ, ನಿನ್ನ ಹಠವೇ ಗೆದ್ದಿತು ಬಿಡು.” ಗಾಂಧಾರಿ ಈಗಲೂ ಅದೇ ತಣ್ಣಗಿನ ದನಿಯಲ್ಲಿ ಹೇಳುತ್ತಾಳೆ, “ನನ್ನ ಸೋಲು ಕಣ್ಣಿಗೆ ಬಟ್ಟೆ ಕಟ್ಟಿದ ಆ ದಿನವೇ ನಿಗದಿಯಾಗಿದೆ ಬಿಡು.” ಅವಳ ಮೆಲುದನಿಯೊಳಗೆ ಅಡಗಿದ ನೋವಿನ ಭಾರಕ್ಕೆ ಕುಮುದಿನಿ ನಲುಗಿದಳು.

ಗಾಂಧಾರಿಯನ್ನು ಏಕಾಂತದ ಗಳಿಗೆಗಳಿಗೆ ಬಿಟ್ಟುಕೊಟ್ಟು ಅಲ್ಲಿಂದ ಒಳನಡೆದಳು. ಸಾಲಾಗಿ ಹುಟ್ಟಿದ ನೂರು ಮಕ್ಕಳು ಶವವಾಗಿ ಕಣ್ಣೆದುರು ಮಲಗಿದ ದೃಶ್ಯವನ್ನು ಗಾಂಧಾರಿ ನೋಡದಿರುವುದೂ ಒಂದು ಲೆಕ್ಕದಲ್ಲಿ ಸರಿಯೇ. ಆದರೂ ಕೊನೆಯ ಬಾರಿಯಾದರೂ ತನ್ನ ಮಕ್ಕಳನ್ನು ನೋಡಲೆಂದು ಒಳಮನಸ್ಸು ಬಯಸುತ್ತಿತ್ತು. ಯೋಚನೆಗಳ ಸಂದಿಗ್ಧತೆಯಲ್ಲಿ ಕಳೆದುಹೋದಳು ಕುಮುದಿನಿ.

ಹೌದು, ಕುಮುದಿನಿ ಗಾಂಧಾರಿಯ ಜೀವದ ಗೆಳತಿ. ಬಾಲ್ಯದಿಂದಲೂ ಅವಳೊಂದಿಗೇ ಬೆಳೆದವಳು. ಜೀವಕ್ಕೆ ಜೀವವಾಗಿ ಜೊತೆಗೆ ನಿಂತವಳು. ಅವಳ ಜೀವನದ ದುರಂತದ ಮಜಲುಗಳಿಗೆಲ್ಲ ಸಾಕ್ಷಿಯಾದವಳು. ಗಾಂಧಾರಿ ಯಾವಾಗಲಾದರೊಮ್ಮೆ ಹೇಳುವುದಿತ್ತು, “ದೇವರು ಎಲ್ಲ ಬಾಗಿಲುಗಳನ್ನು ಒಟ್ಟಿಗೆ ಮುಚ್ಚುವುದಿಲ್ಲ. ನೀನೆಂಬ ಹೊರಹರಿವೊಂದನ್ನು ನನಗಾಗಿ ಸದಾ ತೆರೆದಿಟ್ಟಿದ್ದಾನೆ ನೋಡು.” ಕುಮುದಿನಿ ನೆನಪುಗಳ ಅಲೆಯಲ್ಲಿ ತೇಲಿಹೋದಳು. ಗಾಂಧಾರದ ನೆಲದ ನೆನಪುಗಳು ಅವಳೊಳಗೆ ಲಗ್ಗೆಯಿಟ್ಟವು.

ಬಾಲ್ಯದ ಸುಖದ ತೊರೆಯೊಂದು ಅದೆಷ್ಟು ಬೇಗ ಮರುಭೂಮಿಯೊಳಗೆ ಜಾರಿದ ನೀರ ಸೆಲೆಯಂತೆ ಇಂಗಿಹೋಯಿತು? ಎಷ್ಟು ಚೆಂದದ ಹುಡುಗಿ ನಮ್ಮ ಗಾಂಧಾರಿ! ಸುಬಲ ಮಹಾರಾಜ ಅವಳನ್ನು ತನ್ನ ‘ಭಾಗ್ಯದ ಬಾಗಿಲು’ ಎಂದೇ ಪರಿಗಣಿಸಿದ್ದ. ಕಣ್ಣೊಳಗಿನ ಪಾಪೆಯಂತೆ ಪ್ರೀತಿಯಿಂದ ಜೋಪಾನ ಮಾಡಿದ್ದ. ಯಾವ ಕೆಲಸಕ್ಕೂ ಬಾರದೇ, ಊರಿನ ಪುಂಡ ಹುಡುಗರ ಗುಂಪು ಕಟ್ಟಿಕೊಂಡು ಊರೂರು ತಿರುಗುವ ಮಗ ಶಕುನಿಗಿಂತ ಮಗಳ ಮೇಲೆಯೇ ಅವನಿಗೆ ಆಸ್ಥೆ ಹೆಚ್ಚು. ಮುಟ್ಟಿದರೆ ಮಾಸುವಂತಿದ್ದ ಅವಳ ನಾಜೂಕಿಗೆ ಸರಿಹೊಂದುವ ವರನೊಬ್ಬ ಸಿಕ್ಕಿದರೆ ಸಾಕೆಂದು ಅವಳಮ್ಮ ಪ್ರತಿದಿನವೂ ದೇವರನ್ನು ಪ್ರಾರ್ಥಿಸುತ್ತಿದ್ದಳು. ಅವರೆಲ್ಲರ ಹರಕೆ ಫಲಿಸಿತೇನೋ ಎಂಬಂತೆ ದೂರದ ಹಸ್ತಿನಾಪುರದಿಂದ ಒಸಗೆಯೊಂದು ಗಾಂಧಾರದ ಅರಮನೆಯಂಗಳಕ್ಕೆ ಬಂದುಬಿಟ್ಟಿತ್ತು.

ಅಂದು ಗಾಂಧಾರದ ಗಿರಿಶಿಖರಗಳಿಗೆಲ್ಲ ಮಾತು ಬಂದಂತಿತ್ತು. ವನರಾಶಿಗಳೆಲ್ಲ ರೆಕ್ಕೆಮೂಡಿ ಹಾರುತ್ತಿವೆಯೇನೋ ಎಂಬಂತೆ ಭಾಸವಾಗುತ್ತಿತ್ತು. ಇಡಿಯ ನಾಡಿನ ಪ್ರಜೆಗಳೆಲ್ಲರ ಬಾಯಲ್ಲೂ ಒಂದೇ ಮಾತು. ನಮ್ಮ ರಾಜಕುಮಾರಿ ಹಸ್ತಿನಾವತಿಯ ಹಿರಿಯ ರಾಜಕುಮಾರನನ್ನು ವರಿಸುತ್ತಿದ್ದಾಳೆ, ಅಂದರೆ ಮಹಾನ್ ಸಾಮ್ರಾಜ್ಯವೊಂದರ ಮಹಾರಾಣಿಯಾಗುತ್ತಿದ್ದಾಳೆ. ಪುಟ್ಟ ಸಾಮಂತ ರಾಜ್ಯದ ರಾಜಕುವರಿಯೊಬ್ಬಳು ಇಡಿಯ ಭೂಮಂಡಲವನ್ನೇ ನಡುಗಿಸಬಲ್ಲ ಕುರುವಂಶದ ಸಾಮ್ರಾಜ್ಞಿಯಾಗುವುದೇನು ಸಣ್ಣ ವಿಷಯವೆ? ಹಿಗ್ಗಿನ ಸೂರೆ ಇಡಿಯ ರಾಜ್ಯದಲ್ಲಿ ಹರಡಿತ್ತು. ಗಾಂಧಾರಿ ಸಣ್ಣ ಆತಂಕದಿಂದಲೇ ನನ್ನನ್ನು ಕೇಳಿದ್ದಳು, “ಕುಮುದಾ, ಅಷ್ಟು ದೂರದಿಂದ ಹೆಣ್ಣನ್ನು ಹುಡುಕಿಕೊಂಡು ಇಲ್ಲಿಯವರೆಗೆ ಬರುವರೆಂಬುದನ್ನು ಹೇಗೆ ನಂಬುವುದು?” ನಾನು ಅವಳ ತಲೆನೇವರಿಸುತ್ತಾಹೇಳಿದ್ದೆ, “ನಿನ್ನ ಚೆಲುವಿನ ಪರಿಮಳ ಅಲ್ಲಿಯವರೆಗೂ ಪಸರಿಸಿದೆ ಗೊತ್ತೇನು? ಮತ್ತೆ ನಮ್ಮ ರಾಜಕುಮಾರಿಯೆಂದರೆ ಸಾಮಾನ್ಯಳೆ?” ಏನು ಯೋಚಿಸುವುದಕ್ಕೂ ಸಮಯವಿರಲಿಲ್ಲ. ನೂರಾರು ಗಾವುದ ದೂರದ ದಾರಿಯನ್ನು ಮುಹೂರ್ತ ಬರುವುದರೊಳಗಾಗಿ ಕ್ರಮಿಸಬೇಕಿತ್ತು. ಗಾಂಧಾರಿಯ ತಾಯಿ ತನ್ನ ವಯೋಸಹಜವಾದ ಆಯಾಸದಿಂದಾಗಿ ಹೊರಡಲಾರೆನೆಂದುಬಿಟ್ಟಳು. ಜೊತೆಗೆ ನಾನಿರುವೆನೆಂಬ ಧೈರ್ಯ ಅವಳಿಗೆ. ನಾನು, ಇನ್ನೂ ಅನೇಕ ಸಖಿಯರೊಂದಿಗೆ ಗಾಂಧಾರಿಯನ್ನು ಹಿಂಬಾಲಿಸಿ ಇಲ್ಲಿಯವವರೆಗೂ ಬಂದೆ.

ನಡುನಡುವೆ ರಾಜಕುಮಾರ ಶಕುನಿ ಹಸ್ತಿನಾಪುರದ ಸೇನಾನಿಗಳೊಂದಿಗೆ ಏನೋ ಗುಟ್ಟಾಗಿ ಮಾತನಾಡುತ್ತಲೇ ಸಾಗಿದ್ದ. ನನಗೇಕೋ ಎಲ್ಲವೂ ಸರಿಯಿಲ್ಲ ಎನಿಸತೊಡಗಿತು. ಹಸ್ತಿನಾವತಿಯ ವೈಭವ ಇಂದ್ರಲೋಕದ ಚೆಲುವನ್ನೂ ನಾಚಿಸುವಂತಿತ್ತು. ಬಂಗಾರದ ಗೋಡೆಗಳಿಂದ ಆವೃತವಾದ ಅರಮನೆಯೊಳಗೆ ನಮಗೆ ಎಲ್ಲವನ್ನೂ ಅಣಿಗೊಳಿಸಲಾಗಿತ್ತು. ಪ್ರಯಾಣದ ಬಳಲಿಕೆಯಿಂದ ಆಯಾಸಗೊಂಡಿದ್ದ ಗಾಂಧಾರಿ ಬೇಗನೆ ನಿದ್ದೆಗೆ ಜಾರಿದ್ದಳು. ಅದೇನೋ ಚೆಂದದ ಕನಸು ಬಿದ್ದಿರಬೇಕು. ನಿದ್ದೆಯಲ್ಲಿಯೇ ನಗುತ್ತಿದ್ದಳು. ನಿಮೀಲಿತವಾದ ಅವಳ ನಯನಗಳು ವಿಶ್ರಾಂತಿಯಲ್ಲಿದ್ದ ಭ್ರಮರದಂತೆ ಕಂಗೊಳಿಸುತ್ತಿದ್ದವು. ಕೆಂಪೇರಿದ ಅವಳ ಕೆನ್ನೆ ಅವಳ ಕನಸಿನ ಕಥೆ ಹೇಳುತ್ತಿತ್ತು. ನನಗೇಕೋ ನಿದ್ದೆ ಹತ್ತಿರವೂ ಸುಳಿಯಲಿಲ್ಲ. ಪಕ್ಕದಲ್ಲೇ ಹಸ್ತಿನಾವತಿಯ ರಾಣಿವಾಸದ ಸಖಿಯರು ಏನೇನೋ ಕೆಲಸದ ತುರ್ತಿನಲ್ಲಿ ಓಡಾಡುತ್ತಿರುವುದು ಕಣ್ಣಿಗೆ ಬಿತ್ತು. ನಾನೂ ಅವರೊಂದಿಗೆ ಸೇರಿ ಅವರನ್ನು ಪರಿಚಯಿಸಿಕೊಂಡೆ. ರಾತ್ರಿ ವರಪೂಜೆಗೆಂದು ಭರದ ತಯಾರಿ ನಡೆದಿತ್ತು. ಬೆಳಗಾದರೆ ಮದುವೆಯ ಸಂಭ್ರಮ. ಮದುವೆಗೆ ಮೊದಲೇ ವರನನ್ನೊಮ್ಮೆ ನೋಡಿಬಿಡೋಣವೆಂದು ಅವರ ಗುಂಪಿನಲ್ಲಿ ಸೇರಿಕೊಂಡೆ.

ಅಬ್ಬಾ! ಅದೆಂತಹ ವೈಭವ ಅರಮನೆಯದ್ದು! ಕಣ್ಣು ಹಾಯಿಸಿದಷ್ಟೂ ದೂರ ಮುತ್ತು ಮಾಣಿಕ್ಯಗಳಿಂದ ಅಲಂಕರಿಸಿದ ಚಪ್ಪರವೇ ಹಬ್ಬಿತ್ತು. ಕಣ್ಣು ಕೋರೈಸುವ ಬೆಳಕಿನ ಅಲಂಕಾರ ರಾತ್ರಿಯನ್ನು ಹಗಲಾಗಿಸಿತ್ತು. ಹೀಗೆ ಸಖಿಯರ ನಡುವೆ ತೂರಿಕೊಂಡು ವರನ ಕೋಣೆಯವರೆಗೂ ಸಾಗಿದೆ. ಒಂದರೆಗಳಿಗೆ ದಂಗಾಗಿ ನಿಂತೆ. ಗಾಂಧಾರಿಯನ್ನು ವರಿಸುವ ವರನಿಗೆ ಕಣ್ಣುಗಳೇ ಇರಲಿಲ್ಲ. ಕಣ್ಣುಗಳಿರುವ ಜಾಗದಲ್ಲಿ ಬಿಳಿಯ ಗೊಂಬೆಗಳೆರಡನ್ನು ಅಂಟಿಸಿದಂತಿತ್ತು. ಒಂದರೆಕ್ಷಣವೂ ಅಲ್ಲಿ ನಿಲ್ಲಲಾಗಲಿಲ್ಲ. ಸತ್ಯ ನನ್ನೆದೆಯನ್ನು ಸುಡುತ್ತಿತ್ತು. ಮೈಮೇಲಿನ ಪರಿವೆಯಿಲ್ಲದೇ ಓಡೋಡುತ್ತಾ ನಮ್ಮ ನಿವಾಸಕ್ಕೆ ಬಂದೆ. ಪಾಪ ಗಾಂಧಾರಿ! ಏನೊಂದನ್ನೂ ಅರಿಯದೇ ನಿರಾಳವಾಗಿ ಮಲಗಿದ್ದಳು. ಅವಳನ್ನು ಎಬ್ಬಿಸಲೇಬೇಕಿತ್ತು. ಬೆಳಗಾದರೆ ಎಲ್ಲವೂ ಮುಗಿದುಹೋಗುತ್ತಿತ್ತು. ಸುಬಲ ಮಹಾರಾಜ ಮಗನಾದ ಶಕುನಿಯನ್ನು ವರಪೂಜೆಗೆ ನಿಯೋಜಿಸಿ ಪ್ರಯಾಣದಾಯಾಸದ ನಿವಾರಣೆಗೆಂದು ತನ್ನ ಬಿಡಾರದಲ್ಲಿಯೇ ಮಲಗಿದ್ದ. ಅವನಿಗೂ ವಿಷಯ ತಿಳಿದಿದೆಯೋ ಇಲ್ಲವೋ ತಿಳಿಯದು. ಇದು ವೇಳೆಗಳೆಯುವ ಹೊತ್ತಲ್ಲವೆಂದು ಗಾಂಧಾರಿಯನ್ನು ಲಗುಬಗೆಯಿಂದ ಎಬ್ಬಿಸದೆ. “ಇಷ್ಟು ಬೇಗ ಬೆಳಗಾಯಿತೆ?” ಎಂದು ಅಲವತ್ತುಗೊಳ್ಳುತ್ತಲೇ ಎದ್ದಳು ರಾಜಕುಮಾರಿ. “ಇನ್ನು ಬರಿಯ ಕತ್ತಲೇ ಕವಿಯುವಂತೆ ಕಾಣುತ್ತಿದೆ. ಬೆಳಗಾಗುವ ಯಾವ ಲಕ್ಷಣವೂ ಕಾಣುತ್ತಿಲ್ಲ.” ಮಾತು ನನ್ನ ತುಟಿಜಾರಿ ಬಂದಿತ್ತು.

ಗಾಂಧಾರಿಗೆ ನಾನು ಕಂಡುದೆಲ್ಲವನ್ನೂ ಹೇಳಿದೆ. ನಿದ್ದೆಯ ಮಂಪರು ಇಳಿದಿತ್ತು. ಸರಸರನೆ ತಂದೆಯ ಬಿಡಾರಕ್ಕೆ ಬಂದೆವು. ಸುಬಲ ಮಹಾರಾಜನಿಗೂ ದಿಗ್ಬ್ರಮೆ! ಕೂಡಲೇ ಮಗನನ್ನು ಕರೆಸಿದ. ಶಕುನಿ ತಡವರೆಸುತ್ತಾ ನುಡಿದ, “ಕುರುಡನಾದರೆ ಏನೀಗ? ಮನೆಯ ಹಿರಿಯ ಮಗ. ರಾಜ್ಯ ಎಂದಿದ್ದರೂ ಅವನದೆ.” ಸುಬಲ ಮಹಾರಾಜ ಕೋಪಗೊಂಡಿದ್ದ, “ಮುಚ್ಚುಬಾಯಿ ನೀತಿಗೆಟ್ಟವನೆ. ನಿನಗೇನು ಗೊತ್ತು ರಾಜಧರ್ಮ? ಅಂಗವಿಹೀನನಾದವನು ಎಂದಿಗೂ ಪಟ್ಟವೇರಲಾಗದು ಎನ್ನುತ್ತವೆ ಶಾಸ್ತ್ರಗಳು. ಇಷ್ಟೂ ತಿಳಿಯದೇನು ನಿನಗೆ? ತಂಗಿಯ ಬದುಕನ್ನು ಬಲಿಗೊಡಲು ಬಗೆದಿರುವೆಯೇನು?” ಶಕುನಿ ತಂದೆಗೂ ಹೆದರುವವನಲ್ಲ. ಮರುನುಡಿದ, “ನನಗೂ ತಂಗಿಯ ಬಗ್ಗೆ ಅತೀವ ಕಾಳಜಿಯಿದೆ. ಮಗಳನ್ನು ಕೇಳಿಕೊಂಡು ರಾಜದೂತರು ಬಂದುದು ನಿಮ್ಮಲ್ಲಿಗೆ. ವಿಚಾರಿಸಬೇಕಾದವರು ಹಿರಿಯರಾದ ನೀವು. ಅದೆಲ್ಲ ಬಿಟ್ಟು ಇಂದೀಗ ಇಲ್ಲಿಗೆ ಬಂದಮೇಲೆ ನಿರಾಕರಿಸಿದರೆ ಪರಿಣಾಮ ತಿಳಿದಿದೆಯೇನು ನಿಮಗೆ? ಇಡಿಯ ನಾಡು ಮದುವೆಯ ಸಡಗರದಲ್ಲಿದೆ. ಈಗ ನಾವು ನಿರಾಕರಣೆಯನ್ನು ಸೂಚಿಸಿದರೆ, ನಾವು ಉಳಿಯೆವು, ನಮ್ಮ ರಾಜ್ಯವೂ ಉಳಿಯದು. ಸ್ವಲ್ಪ ಯೋಚಿಸಿ ವ್ಯವಹರಿಸಿ ತಂದೆ. ನನಗೂ ರಾಜಧರ್ಮ ತಿಳಿದಿದೆ. ಹಿರಿಯನಾದವನು ಅಂಗಹೀನನಾದಲ್ಲಿ ಕಿರಿಯನಿಗೆ ಪಟ್ಟವೆಂಬುದೇನೋ ನಿಜ. ಆದರೆ ಅವನ ನಂತರ ಹಿರಿಯವನ ಮಗನಿಗೆ ಪಟ್ಟವೆಂದೂ ಶಾಸ್ತ್ರದಲ್ಲಿ ಹೇಳಿದೆಯಲ್ಲವೆ?” ಸಬಲ ಮಹಾರಾಜನೀಗ ಸಂದಿಗ್ಧದಲ್ಲಿ ಸಿಲುಕಿದ್ದ ಅಸಹಾಯಕತೆಯಿಂದ ನುಡಿದ, “ಅವೆಲ್ಲವೂ ದೂರದ ಮಾತುಗಳು. ಅಲ್ಲಿಯವರೆಗೆ ಏನಾಗುವುದೋ ಬಲ್ಲವರಾರು?” ಶಕುನಿಗೀಗ ಒಂದಷ್ಟು ನಿರಾಳವಾಗಿತ್ತು, “ಅದರ ಜವಾಬ್ದಾರಿ ನನಗಿರಲಿ. ನಾನಿನ್ನು ಇಲ್ಲಿಯೇ ಇದ್ದು ತಂಗಿಯ ಪರಿವಾರದ ಯೋಗಕ್ಷೇಮವನ್ನು ನೊಡಿಕೊಳ್ಳುತ್ತೇನೆ.” ಎನ್ನತ್ತಲೇ ತಂಗಿಯ ಮುಖವನ್ನು ನೋಡಿದ. ಗಾಂಧಾರಿ ಕೋಪದಿಂದ ಉರಿಯುತ್ತಿದ್ದಳು, “ಅಪ್ಪಾ, ನನಗೆ ಈ ಮದುವೆ ಬೇಡ.” ತೀರ್ಮಾನವೆಂಬಂತೆ ನುಡಿದಳು. ಸುಬಲ ಮಹಾರಾಜ ಅವಳೆದುರು ಕುಸಿದು ಕುಳಿತ, “ಮಗಳೇ, ಹಿಂದಿರುಗಲಾಗದಷ್ಟು ದೂರ ಬಂದಿದ್ದೇವೆ. ಇನ್ನು ತಿರುಗಿ ಹೋಗಲಾಗದು. ಪಾಲಿಗೆ ಬಂದದ್ದು ಪಂಚಾಮೃತ. ನಾಳೆಯ ವಿವಾಹಕ್ಕೆ ಸಿದ್ಧಳಾಗು.

ಎಲ್ಲವೂ ಮಂಗಳವಾಗುವುದು.” ಗಾಂಧಾರಿ ಹೋದ ವೇಗದಲ್ಲಿಯೇ ತಿರುಗಿ ಬಂದಳು.
ಕುಮುದೆ ಎಲ್ಲವನ್ನೂ ನೆನಪಿಸಿಕೊಂಡು ಹನಿಗಣ್ಣಾಗುತ್ತಾಳೆ. ಮುಂದಿನ ದೃಶ್ಯಗಳನ್ನವಳು ನೆನಪಿಸಿಕೊಳ್ಳಲಾರಳು. ನೆನಪುಗಳ ತೆರೆಗೆ ಬೀಗ ಜಡಿದು ಕಣ್ಣು ಮುಚ್ಚುತ್ತಾಳೆ.

ಮಂತ್ರಘೋಷಗಳ ನಂತರ ನೀರವ ಮೌನ. ಬಹುಶಃ ಎಲ್ಲರ ಶವವನ್ನೂ ಒಟ್ಟಿಗೆ ಕೊಂಡೊಯ್ದಿರಬೇಕು. ಆದರೆ ಗಾಂಧಾರಿಯ ಮನವೆಂಬ ಕೊಳ ಮಾತ್ರ ಎಂದಿಗೂ ಶಾಂತವಾಗದು. ಅಂದು ಬಿದ್ದ ಬಂಡೆಗಲ್ಲಿನ ಹೊಡೆತಕ್ಕೆ ಇಂದಿಗೂ ಅಲ್ಲಿ ಅಲೆಗಳೇಳುತ್ತಲೇ ಇವೆ. ಮುಚ್ಚಿದ ಕಣ್ಣುಗಳೊಳಗೆ ಗತದ ಚಿತ್ರಗಳು ಬೇಡವೆಂದರೂ ತೇಲಿಬರುತ್ತಿವೆ.

ಬದುಕು ಬಿರುಗಾಳಿಗೆ ಸಿಕ್ಕ ಹಡಗಿನಂತಾಗಿತ್ತು. ನೀರಿಗೆ ಜಿಗಿದರೆ ಅಲ್ಲಿಗೇ ಕಥೆ ಮುಗಿಯುತ್ತಿತ್ತು. ಯಾಕೋ ಹಾಗೆ ಮಾಡಬೇಕೆನಿಸಲಿಲ್ಲ. ಆದರೆ ಮುಂದಿನ ದಾರಿ ಮಸುಕಾಗಿತು, ಕಣ್ಣಿದ್ದರೂ ನೋಡಲಾಗದಷ್ಟು. ತಕ್ಷಣ ಅದೇನೋ ಹೊಳೆಯಿತು, ಕಪ್ಪು ಬಟ್ಟೆಯೊಂದನ್ನು ಹರಿದು ಕಣ್ಣಿಗೆ ಕಟ್ಟಿಬಿಟ್ಟೆ. ಇನ್ನು ನನಗೆನೂ ಕಾಣಿಸದು. ನನ್ನ ಪಾಲಿಗಿನ್ನು ದೃಷ್ಟಿಯಿದ್ದವರೂ, ಇಲ್ಲದವರೂ ಎಲ್ಲರೂ ಒಂದೆ. ಈ ರಾತ್ರಿಯೇ ಇನ್ನು ಬದುಕಿರುವಷ್ಟು ಕಾಲವೂ ಮುಂದುವರೆಯುವುದು. ಕುಮುದಾ ಅದೆಷ್ಟು ಪರಿಯಲ್ಲಿ ನನಗೆ ತಿಳುವಳಿಕೆ ಹೇಳಿದಳು. ಬೆಳಗಿನವರೆಗೂ ನನ್ನ ನಿರ್ಧಾರವನ್ನು ಬದಲಿಸುವಂತೆ ಗೋಗರೆದಳು. ಕೊನೆಗೊಮ್ಮೆ ನಾನವಳ ತೊಡೆಯ ಮೇಲೆ ಮಲಗಿ ಅತ್ತುಬಿಟ್ಟೆ, “ನೀನೇ ನನ್ನ ಕಣ್ಣು ಕುಮುದಾ. ನಿನ್ನಂತಹ ಗೆಳತಿಯಿರುವವರೆಗೆ ನನಗ್ಯಾವ ಕಣ್ಣೂ ಬೇಡ.” ಕರಗಿಹೋದಳು ಕುಮುದಾ. ಎಂಥಹ ಪ್ರೀತಿ ಅವಳದ್ದು. ಮದುವೆಯ ಮಂಟಪಕ್ಕೆ ನನ್ನನ್ನು ಕೈಹಿಡಿದು ಕರೆತಂದಳು. ನಾನು ಮಂಟಪವೇರಿದ್ದೇ ತಡ, ಅಣ್ಣ ಶಕುನಿ ಸಭೇಯನ್ನುದ್ಧೇಶಿಸಿ ನುಡಿದ, “ಇವಳು ನನ್ನ ತಂಗಿ ಗಾಂಧಾರಿ. ಮಹಾನ್ ಸಾದ್ವಿ. ತನ್ನ ಗಂಡನಿಗಿಲ್ಲದ ದೃಷ್ಟಿ ತನಗೂ ಬೇಡವೆಂದು ಜೀವನಪೂರ್ತಿ ಕತ್ತಲೆಯಲ್ಲಿಯೇ ಕಳೆಯುವ ನಿರ್ಧಾರ ಮಾಡಿದ್ದಾಳೆ. ತನ್ನ ಕಣ್ಣಿಗೂ ಪಟ್ಟಿಯನ್ನು ಕಟ್ಟಿಕೊಂಡು  ಗಂಡನೊಂದಿಗೆ ಸಹಭಾಗಿಯಾಗಿದ್ದಾಳೆ.” ಇಡಿಯ ಸಭೆ ನನ್ನ ಹೆಸರು ಹೇಳಿ ಜೈಕಾರ ಹಾಕಿತು. ನಾನೊಂದರೆಗಳಿಗೆ ಸ್ತಂಭೀಭೂತಳಾದೆ. ಅಲ್ಲಿಗೆ ನಾನು ಶಾಶ್ವತವಾಗಿ ಕತ್ತಲೆಗೆ ಜಾರಿದೆ. ಇಲ್ಲವಾದಲ್ಲಿ ನೆನಪುಗಳು ಮಾಸಿದಂತೆ ನನ್ನ ನಿರ್ಧಾರ ಸಡಿಲವಾಗುತ್ತಿತ್ತೆ? ಗೊತ್ತಿಲ್ಲ.

ಧೃತರಾಷ್ಟ್ರ ಹೇಗಿದ್ದ? ಯಾರಿಗೆ ಗೊತ್ತು? ರಾಣಿವಾಸದಲ್ಲಂತೂ ಸಾಮಾನ್ಯ ರಾಜನಂತೇ ಇದ್ದ. ಮೊದಲಿನಿಂದಲೂ ಮಾತು ಕಡಿಮೆ. ಆಗೀಗೊಮ್ಮೆ ಕೇಳುತ್ತಿದ್ದ, “ದೇವೀ, ನಿನಗೆ ನನ್ನ ಕುರುಡತನದ ಬಗ್ಗೆ ಬೇಸರವಿದೆಯೇನು?” ನಾನು ಉತ್ತರಿಸುವ ಗೋಜಿಗೆ ಹೋಗುತ್ತಿರಲಿಲ್ಲ. ಕುರುಡನಿರಬಹುದು, ದುಷ್ಟನಂತೂ ಆಗಿರಲಿಲ್ಲ. ನನ್ನನ್ನೆಷ್ಟು ಗೌರವದಿಂದ ನೋಡುತ್ತಿದ್ದ. ಮನೆಯ ಎಲ್ಲರ ಮೇಲೂ ತುಂಬ ಪ್ರೀತಿ ಅವನಿಗೆ. ತಮ್ಮ ಪಾಂಡುವೆಂದರಂತೂ ಪ್ರಾಣ. ಅವನಿಗೂ ಅಷ್ಟೆ. ತಾನು ರಾಜನಾದರೂ ಎಲ್ಲದಕ್ಕೂ ಅಣ್ಣನ ಅಭಿಪ್ರಾಯವನ್ನು ಕೇಳಿಯೇ ಮುಂದುವರೆಯುತ್ತಿದ್ದ. ನನ್ನನ್ನು ಕಂಡರೂ ಅಷ್ಟೇ ಗೌರವ. ತಾಯ ಮೇಲಿನ ಅಕ್ಕರೆಯನ್ನು ನನಗೆ ತೋರುತ್ತಿದ್ದ. ಪ್ರತಿಷ್ಠಿತ ಮನೆತನದ ಕುಂತಿಭೋಜನ ಮಗಳೊಂದಿಗೆ ಅವನ ವಿವಾಹವೂ ಅಷ್ಟೇ ಅದ್ದೂರಿಯಾಗಿ ನಡೆಯಿತು. ನಾನೇ ನಿಂತು ಅವಳನ್ನು ಮನೆತುಂಬಿಸಿಕೊಂಡದ್ದೂ ಆಯಿತು. ಅದೇಕೋ ಕುಂತಿಗೆ ಯಾವುದರಲ್ಲೂ ಸಮಾಧಾನವಿರಲಿಲ್ಲ. ಅವರಿಬ್ಬರ ದಾಂಪತ್ಯವೂ ಅನ್ಯೋನ್ಯವಾಗಿರಲಿಲ್ಲ. ಕೆಲವೊಮ್ಮೆ ಅತ್ತೆಯಂದಿರು ಅವಳೊಂದಿಗೆ ಮಾತನಾಡುವಂತೆ ನನಗೆ ಹೇಳಿದ್ದೂ ಇದೆ. ಆದರೆ ಅವಳು ಬಿಗುಮಾನ ಬಿಟ್ಟು ನನ್ನೊಂದಿಗೂ ಮಾತನಾಡುತ್ತಿರಲಿಲ್ಲ. ದಿನಗಳು ಹೀಗೆ ಕಳೆಯುತ್ತಿದ್ದವು. ಪಾಂಡು ಇನ್ನೋರ್ವಳನ್ನು ಮದುವೆಯಾಗಿ ಬಂದ ಮೇಲೆಯೇ ತಿಳಿದದ್ದು ಅವನು ತನ್ನ ಗಂಡಸುತನವನ್ನು ಕಳಕೊಂಡಿರುವನೆಂದು. ಮೊದಲಬಾರಿಗೆ ನನಗನಿಸಿತ್ತು ಎಲ್ಲವೂ ವಿಧಿಯ ಲೀಲೆ ಎಂದು.

ಕುಂತಿ, ಮಾದ್ರಿಯರ ನಿಟ್ಟುಸಿರು ಪಾಂಡುವನ್ನು ಸುಡುತ್ತಿತ್ತು. ರಾಜ್ಯಾಡಳಿತದಿಂದ ವಿಮುಖನಾದ ಅವನು ಹಿಮಾಲಯದತ್ತ ಹೊರಟ. ಪತ್ನಿಯರೂ ಅವನನ್ನು ಹಿಂಬಾಲಿಸಿದರು. ದೃತರಾಷ್ಟ್ರನೀಗ ಅನಿವಾರ್ಯವಾಗಿ ಸಿಂಹಾಸನದ ವಾರಸುದಾರನಾದ. ಅಷ್ಟರಲ್ಲಿಯೇ ನಾನು ತಾಯಿಯಾಗುವ ಸೂಚನೆಗಳು ಕಂಡುಬರತೊಡಗಿದವು. ಕುಮುದಿನಿಯ ಸಂತೋಷಕ್ಕೆ ಪಾರವೇ ಇರಲಿಲ್ಲ. ನಡೆದರೆಲ್ಲಿ ಕಾಲುಗಳು ಸವೆಯುವವೇನೋ ಎಂಬಷ್ಟು ಪ್ರೀತಿಯಿಂದ ನನ್ನನ್ನು ಆರೈಕೆ ಮಾಡತೊಡಗಿದಳು. ಎಲ್ಲವೂ ಸರಿಯಾಗಿತ್ತು, ಆ ರಾತ್ರಿಯವರೆಗೆ. ಅಂದು ಅದೆಷ್ಟೋ ಹೊತ್ತಿನವರೆಗೆ ಶಕುನಿ ಮತ್ತು ಇವರು ಮಾತನಾಡುತ್ತಿದ್ದರು. ಏನೋ ಗಹನವಾದ ಚರ್ಚೆಯಲ್ಲಿ ಮುಳುಗಿದ್ದರು. ಮಾತುಕತೆಯ ನಂತರ ನನ್ನಲ್ಲಿಗೆ ಬಂದ ಇವರು ಹೇಳಿದರು, “ಗಾಂಧಾರಿ, ನಾಳೆಯೇ ನಿನ್ನ ಹೆರಿಗೆಯಾಗಬೇಕು. ನಾನೆಲ್ಲವನ್ನೂ ವ್ಯವಸ್ಥೆ ಮಾಡುತ್ತೇನೆ.” ಆಗಿನ್ನೂ ಏಳು ತಿಂಗಳು ನಡೆಯುತ್ತಿತ್ತಷ್ಟೆ.

ನನಗೋ ಸಖೇದಾಶ್ಚರ್ಯ! ದೊರೆಯನ್ನು ಪ್ರಶ್ನಿಸಿದೆ. ಅದಕ್ಕೆ ಅವನು ನೀಡಿದ ಉತ್ತರ ನನ್ನನ್ನು ದಿಗ್ಭ್ರಮೆಗೊಳಿಸಿತು. ಕುಂತಿ ಕಾಡಿನಲ್ಲಿ ನಿಯೋಗದ ಮೂಲಕ ಮಗುವನ್ನು ಹೆತ್ತಳೆಂಬ ಸುದ್ದಿಯನ್ನು ಗೂಢಚರರು ಹೊತ್ತು ತಂದಿದ್ದರು. ಅಧಿಕೃತ ಸುದ್ಧಿಯಿನ್ನೂ ಅರಮನೆಯನ್ನು ತಲುಪಿರಲಿಲ್ಲ. ಸುದ್ಧಿ ತಲುಪುವ ಮೊದಲೇ ನಾನು ಮಗುವನ್ನು ಹೆತ್ತರೆ, ನನ್ನ ಮಗುವೇ ದೊಡ್ಡದೆಂದಾಗುವುದೆಂಬುದು ಇವರ ಯೋಚನೆ. ಮಾತು ಹೊರಡಲಿಲ್ಲ ನನ್ನ ಬಾಯಲ್ಲಿ. ತುಟಿಕಚ್ಚಿ ಅಳುವನ್ನು ನುಂಗಿದೆ. “ಹೇಳಿದಾಗಲೆಲ್ಲ ಹಡೆಯಲು ಯಂತ್ರವಲ್ಲ ನಾನು!” ಅಬ್ಬರಿಸಿದೆ. ದೊರೆ ಈಗ ತಣ್ಣಗಾದ. ನನ್ನ ಮಡಿಲಿನಲ್ಲಿ ತಲೆಯಿಟ್ಟು ಅಳತೊಡಗಿದ, “ದೇವಿ, ಇದನ್ನು ದುರಾಸೆಯೆಂದುಕೊಳ್ಳಬೇಡ. ಹಿರಿಯನಾಗಿಯೂ ಪಟ್ಟವೇರಲಾರದ ಅಸಹಾಯಕತೆ ನನ್ನದು. ನನ್ನ ಮಕ್ಕಳನ್ನಾದರೂ ದೊರೆಯಾಗಿ ನೋಡಬೇಕೆಂಬ ಆಸೆ ತಪ್ಪೆ? ಹೋಗಲಿ, ನನ್ನ ತಮ್ಮ ಪಾಂಡುವಿನ ಮಕ್ಕಳೇ ಆದರೆ ಅವರಿಗೆ ರಾಜ್ಯ ಕೊಡಲು ನನ್ನದೇನೂ ಅಭ್ಯಂತರವಿರಲಿಲ್ಲ. ಹೋಗಿ, ಹೋಗಿ ಅದ್ಯಾರೋ ಅಪರಿಚಿತರಿಗೆ ಹುಟ್ಟಿದವರಿಗೆ ರಾಜ್ಯವಾಳಲು ಬಿಡುವುದು ನ್ಯಾಯವೆ? ತಾತ, ಗುರುಗಳೆಲ್ಲ ಎಂದಿದ್ದರೂ ಪಾಂಡುವಿನ ಪಕ್ಷವೆ. ನನ್ನ ಮಕ್ಕಳೂ ನನ್ನಂತೆಯೇ ರಾಜ್ಯಹೀನರಾಗುವುದನ್ನು ನಾನು ಸಹಿಸಲಾರೆ.” ತಾನೂ ನಿಯೋಗದಿಂದಲೇ ಹುಟ್ಟಿದವನೆಂಬ ಸತ್ಯ ಮರೆತುಹೋಗಿತ್ತು ದೊರೆಗೆ. ನಾನು ಕರಗಿದೆ. ಬೆಳಗಾಗುವ ಮುನ್ನವೇ ನನ್ನ ಗರ್ಭ ನೂರೊಂದು ಚೂರಾಗಿ ಹೊರಬಂದಿತ್ತು. ಅದರ ಸಂರಕ್ಷಣೆಯೂ ನಡೆಯಿತು. ನಾನು ನೂರು ಮಕ್ಕಳ ತಾಯಿಯಾಗಿದ್ದೆ.

ಪಾಂಡು, ಮಾದರಿಯೊಂದಿಗೆ ಕಾಡಿಗೆ ಹೋದ ಕುಂತಿ ಐವರು ಮಕ್ಕಳೊಂದಿಗೆ ಮರಳಿ ಬಂದಳು. ಅವಳೊಂದಿಗೆ ಇಡಿಯ ಪರಿವಾರವೇ ಇತ್ತು. ನನ್ನ ಮಕ್ಕಳೊಂದಿಗೆ ಯಾರೊಬ್ಬರೂ ಇರಲಿಲ್ಲ. ಕಾರಣ ನನಗೂ ತಿಳಿದಿತ್ತು. ಅವರೊಂದಿಗೆ ಸದಾ ಅಣ್ಣ ಶಕುನಿಯಿದ್ದ. ಆದರೆ ಅವನೀಗ ದೊರೆಯನ್ನೂ ಬದಲಾಯಿಸಿಬಿಟ್ಟಿದ್ದ. ಮಕ್ಕಳಿಗೀಗ ಅಮ್ಮನ ಮಾತಿಗಿಂತಲೂ ಅಪ್ಪ ಮತ್ತು ಮಾವನ ಮಾತಿನಲ್ಲಿಯೇ ಹೆಚ್ಚು ಆಸಕ್ತಿಯಿತ್ತು. ದಾರಿ ತಪ್ಪಿದ ಮಕ್ಕಳ ತಾಯಿ ನಾನಾಗಿದ್ದೆ. ಸರಿದಾರಿಯಲ್ಲಿ ತರುವ ಎಲ್ಲ ಮಾರ್ಗಗಳೂ ಮುಚ್ಚಿಹೋಗಿದ್ದವು. ಸಾರಿ ಹೇಳಿದೆ ದುರ್ಯೋಧನನಿಗೆ, ಮಾನಿನಿಯನ್ನು ಕೆಣಕಬೇಡವೆಂದು. ಅವನೆಲ್ಲಿ ಕೇಳುತ್ತಾನೆ, ಗೆಳೆಯ ಕರ್ಣನ ಮಾತಿಗೆ ಕಿವಿಯಾದ. ತುಂಬಿದ ಸಭೆಯಲ್ಲಿ ದ್ರೌಪದಿಯ ಸೀರೆಯನ್ನು ಸೆಳೆಸಿದ. ಅಂದು ಮೊಳಗಿದ ಭೀಮನ ಘರ್ಜನೆ ಇಂದೂ ನನ್ನ ಕಿವಿಯಲ್ಲಿ ಗುಂಯ್‍ಗುಡುತ್ತಿದೆ.

ಒಂದು ಪರಿಹಾರವಿತ್ತು ಎಲ್ಲ ಸಮಸ್ಯೆಗಳಿಗೆ. ಮಗನಾದ ದುರ್ಯೋದನನನ್ನು ಅದಕ್ಕೆ ಹರಸಾಹಸಪಟ್ಟು ಒಪ್ಪಿಸಿದ್ದೆ. ಕರಿಯ ಮೈಯ್ಯಿಯವನ ಅಭಯಹಸ್ತವನ್ನು ಪಡೆದುಕೋ ಎಂದು. ಅದಕ್ಕೆಂದೇ ಮಧುರೆಗೆ ಹೊರಟಿದ್ದೂ ಆಗಿತ್ತು. ಆದರೆ ವಿಧಿಬರಹ ಬೇರೆಯೇ ಇತ್ತು. ಮತ್ತೆ ಶಕುನಿ ಅವನ ದಾರಿಯ ದಿಕ್ಕನ್ನೇ ಬದಲಿಸಿದ್ದ. ಕೃಷ್ಣನ ಮನೆಯ ದಾರಿಯನ್ನು ಬಿಟ್ಟು ಗುರುವಾದ ಬಲಭದ್ರನ ಮನೆಯ ಬಾಗಿಲನ್ನು ತಟ್ಟಿದ್ದ ದುರ್ಯೋಧನ. ಕೇಳಿದ್ದಕ್ಕೆ ಯುದ್ಧಕ್ಕೆ ಬೇಕಾದದ್ದು ಸೈನ್ಯವಲ್ಲದೇ ಕೊಳಲಲ್ಲ ಅಮ್ಮ ಎಂದು ನಕ್ಕಿದ್ದ. ಅದೇ ನಗುವೇ ಕೊನೆ. ಮತ್ತೆಂದೂ ಅವನು ನಕ್ಕಿದ್ದನ್ನು ಕೇಳಿಲ್ಲ. ಇಡಿಯ ದಿನ ದೊರೆ ಸಂಜಯನೊಂದಿಗೆ ಕುಳಿತು ಯುದ್ಧದ ಮಾಹಿತಿಯನ್ನು ಕೇಳುತ್ತಿದ್ದ. ನನಗೋ ಒಬ್ಬೊಬ್ಬ ಮಗನನ್ನು ಕಳಕೊಂಡಾಗಲೂ ಕರುಳು ಕತ್ತರಿಸಿದ ನೋವು. ಬಲವಂತವಾಗಿ ಗರ್ಭವನ್ನು ಎಳೆದು ತೆಗೆಯುವಾಗಲೂ ಅದೇ ನೋವನ್ನು ಅನುಭವಿಸಿದ್ದೆ. ಭೀಮನ ಪ್ರತಿಜ್ಞೆಯ ಈಡೇರಿಕೆಯೊಂದಿಗೆ ಎಲ್ಲವೂ ಮುಗಿದುಹೋಗಿತ್ತು. ಆದರೆ ದುರ್ಯೋಧನ ಕೊನೆಯುಸಿರೆಳೆವ ಮುನ್ನ ಸಂಜಯ ಅವನನ್ನು ಮಾತನಾಡಿಸಲು ಹೋದ ಕ್ಷಣದಲ್ಲಿ ನನ್ನ ಮಗ ಸತ್ಯವನ್ನು ಹೇಳಿದ್ದ, “ಸಂಜಯಾ, ನಾನು ನನ್ನ ಅಮ್ಮನ ಮಾತನ್ನು ಕೇಳಬೇಕಿತ್ತು. ಮಾವನ ಮಾತಿಗೆ ಕಿವಿಗೊಟ್ಟು ಯದ್ಧಕ್ಕೆ ಬೇಕಾದ್ದು ಸೈನ್ಯ ಮಾತ್ರವೇ ಎಂಬ ಭ್ರಮೆಯಲ್ಲಿದ್ದೆ. ಈಗ ತಿಳಿಯುತ್ತಿದೆ ಯುದ್ಧ ಗೆಲ್ಲಲು ಸತ್ಯವೂ ಬೇಕು. ಅದು ಪಾಂಡವರಲ್ಲಿತ್ತು. ಅಮ್ಮನಿಗೆ ಹೇಳು, ಈಗ ಎಲ್ಲವೂ ಅರ್ಥವಾಯಿತು.” ಆದರೆ ಅರ್ಥವಾಗುವಾಗ ತುಂಬಾ ತಡವಾಗಿತ್ತು!

ಗಾಂಧಾರಿ ಕಣ್ಣಿನ ಪಟ್ಟಿಯನ್ನು ಬಿಡಿಸಲೇ ಇಲ್ಲ. ಅದು ಅವಳ ದೃಷ್ಟಿಗೆ ಮಾತ್ರ ಕಟ್ಟಿಕೊಂಡ ಪಟ್ಟಿಯೂ ಆಗಿರಲಿಲ್ಲ. ಹೊರನೋಟವನ್ನು ಕಸಿದಿಟ್ಟ ಯಾವ ತಾಯಿಯೂ ಅನಾಹುತವನ್ನು ತಡೆಯಲಾರಳು, ತನ್ನ ಮಕ್ಕಳನ್ನು ಪೊರೆಯಲಾರಳು. ಹೆಣ್ಣನೋಟಕ್ಕೆ ಪಟ್ಟಿ ಕಟ್ಟದಿರೋಣ, ಮಕ್ಕಳ ಬದುಕನ್ನು ಹಸನುಗೊಳಿಸೋಣ.

6 comments

  1. “ಹೆಣ್ಣನೋಟಕ್ಕೆ ಪಟ್ಟಿ ಕಟ್ಟದಿರೋಣ, ಮಕ್ಕಳ ಬದುಕನ್ನು ಹಸನುಗೊಳಿಸೋಣ.” e salugalu tumba ishtavaythu. Endinante hosa nota needuvanta baraha Sudha.

  2. ಎಂದಿನಂತೇ ಇಂದೂ ಸಹಾ ನಿಮ್ಮ ಬರಹ ಸೆಳೆಯುತ್ತದೆ. ಪ್ರತೀ ಸಾರಿ ಹೆಣ್ಣಿನ ಶೋಷಣೆ ಕಣ್ಣೆದುರು ನಿಲ್ಲುತ್ತದೆ. ಕಾಲಕಾಲದಿಂದಲೂ ಹೀಗೆಯೇ….ಅಡವುಗಚ್ಚಿ ನೋವ ನುಂಗುವುದೇ ಅಥವಾ ನುಂಗಿಸುವುದೇ…ಪುರುಷ ಸಮಾಜ. ಚಂದದ ಲೇಖನ ಸುಧಾ ಅವರೆ.

Leave a Reply