ಮೂರನೇ ಊರಿನಲ್ಲಿ!

ಕು.ಸ.ಮಧುಸೂದನ

ಅಸಲಿಗೆ ಪ್ರೇಮ ಅಮೂರ್ತವೆನುವುದು ನಿಜವಾದರು
ಮೂರ್ತವಾಗಿಸಿಬಿಡುವ ಬಯಕೆ ಹುಟ್ಟುವುದು ಮನುಷ್ಯಸಹಜ ಗುಣವೇ!
ಅಷ್ಟು ವರ್ಷದ ಕಾರ್ಡು ಕವರುಗಳ ಪತ್ರ ವಿನಿಮಯಗಳ
ಫೇಸ್ ಬುಕ್ಕು ವಾಟ್ಸಾಪುಗಳ
ಮೆಸೇಜು ಮಾತುಕತೆಗಳ ನಂತರ
ಬೇಟಿಯಾಗಲೇಬೇಕೆನಿಸಿದರೆ ಇಬ್ಬರಿಗೂ
ಪರಿಚಿತರಿರದ
ಮೂರನೆ ಊರಿನಲ್ಲಿ ಬೇಟಿಯಾಗಬಹುದು.

ವಿಶೇಷವೇನಿರುತ್ತದೆ
ಅಂತಹ ಬೇಟಿಯಲ್ಲಿ!
ಮೊದಲ ಬಾರಿಗೆ ಮುಖಾಮುಖಿಯಾದಾಗಿನ ಒಂದು ಮುಗುಳ್ನಗು
ಕಲ್ಪನೆಯಷ್ಟೇನು ಚಂದವಿಲ್ಲವೆನಿಸಿದರೂ
ಹೊಸ ವಾಸನೆಯ ಆಕರ್ಷಣೆ ತಪ್ಪುವುದು ಕಷ್ಟ.

ಆ ದೊಡ್ಡ ಹೋಟೆಲಿನ ಬಂಗಾರ ಬಣ್ಣದ ಮಗ್ಗಿನಲ್ಲಿ
ಬಿಸಿಬಿಸಿ ಕಾಪಿ ಹೀರುತ್ತ ಪರಸ್ಪರ ಹೊಗಳುತ್ತ
ಬೇಟಿಯಾದ ಈ ಸುದಿನ ಸದಾ ನೆನಪಲ್ಲುಳಿಯುತ್ತದೆಯೆಂದು
ಬೊಗಳೆ ಬಿಟ್ಟು ಮದ್ಯಾಹ್ನದೂಟದ ಹೊತ್ತಿಗೆ
ಅದೇ ಹೋಟೆಲಿನ ಖಾಸಗಿ ಕೋಣೆಯಲ್ಲಿ ಜೊತೆಕೂತು ಉಂಡು
ಮದ್ಯಾಹ್ನದ ಹುಸಿನಿದ್ದೆಯ ನೆಪದೊಳಗೆ ಒಂದೇ ಹಾಸಿಗೆಯಲ್ಲಿ ಉರುಳಿ
ಇವನಿಷ್ಟು ಅವಳಿಷ್ಟು ಹತ್ತಿರವಾಗುತ್ತ

ಕೊನೆಗವನ ಬಾಹುಗಳಲಿ ಅವಳು ಬಂದಿಯಾಗಿ
ಅವಳೆದೆಗಳಲ್ಲಿ ಇವನು ಮುಖ ಹುದುಗಿಸಿ
ಹೊಸ ಸ್ಪರ್ಶದೊಳಗೆ ಹೊಸ ಸುಖವನರಸಿ
ಕಣಕಣವನೂ ಹುಡುಕಿ ಪ್ರತಿ ಮೂಲೆಗಳನೂ ತಡಕಿ
ಸುಖವ ಸೂರೆಗೈದು
(ಅಂತಿಮವಾಗಿ ಅದೇನು ಸುಖವಲ್ಲ ಅಂತ ತದನಂತರದಲ್ಲಿ ಅನಿಸುವುದು ಬೇರೆ ಮಾತು)
ದಣಿದು ತಣಿದ ಮೈಗಳಿಗೊಂದು ತಣ್ಣೀರ ಸ್ನಾನ!

ಅಷ್ಟರಲ್ಲಿ ಇಳಿಸಂಜೆ
ಕತ್ತಲಾಗುವುದರೊಳಗೆ ಮನೆ ಸೇರಬೇಕು
ಇಲ್ಲ ನೂರೆಂಟು ಪ್ರಶ್ನೆಗಳು
ಅವಳ ಅವಸರಕ್ಕೆ ಇವನು ಸೋತವನಂತೆ ನಟಿಸಿ
ಬಸ್ಸು ಹತ್ತಿಸಿ ತನ್ನ ದಾರಿ ಹಿಡಿದವನಿಗೀಗ

ಯಾಕೊ ಇದೆಲ್ಲ ಬೇಡವಾಗಿತ್ತೆನಿಸಿ
ಮತ್ತಿನ್ನು ಅವಳಿಗೆ ಕರೆ ಮಾಡುವುದಾದರೂ ಹೇಗೆ ಎನ್ನುವ ಪಾಪಪ್ರಜ್ಞೆ ಕಾಡಿ
ಬಸ್ಸೊಳಗೆ ಕೂತ ಅವಳಿಗೂ ಯಾಕೊ
ತಾನು ಮಿತಿ ಮೀರಬಾರದಿತ್ತೆನಿಸಿ
ಮೈಯೆಲ್ಲ ಮುಳ್ಳು ಚುಚ್ಚಿದಂತಾಗಿ ಮನೆ ತಲುಪುವಾಗ
ಕರೆಂಟು ಹೋಗಿರಲಿ ದೇವರೆ!

ಮಕ್ಕಳಿಗೆ, ಮತ್ತವನಿಗೆ ತನ್ನೀಮುಖ ಕಾಣದಿರಲೆಂದು ಪ್ರಾರ್ಥಿಸಿದಳು
ನಂತರದಲ್ಲಿ ಅವಳೆಂದೂ ಅವನ ನೆನಪಿಸಿಕೊಳ್ಳಲಿಲ್ಲ
ಅವನೂ ಮತ್ತವಳಿಗೆ ಕರೆ ಮಾಡುವ ಧೈರ್ಯ ಮಾಡಲಿಲ್ಲ.
ಇದೀಗ ಮತ್ತವರು ಮೊದಲಿನ ಹಾಗೆ ಅಪರಿಚಿತರಾಗಿದ್ದಾರೆ
ಇಬ್ಬರಿಗೂ ಬೇಕಿತ್ತೆ ಇಂತಹದೊಂದು ಬೇಟಿಯೆನ್ನುವ ಪ್ರಶ್ನೆಗಿನ್ನೂ ಉತ್ತರ ಸಿಕ್ಕಿಲ್ಲ!

Leave a Reply