ಕವಿತೆ ಕಥೆಯಾಗಿ ಅರಳುತಿದೆ..

ಅಶ್ಫಾಕ್ ಪೀರಜಾದೆ


ಕವಿತೆ ಕಥೆಯಾಗಿ ಅರಳುತಿದೆ …

ಇದೀಗ ವಸಂತ ಪ್ರವೇಶಿಸಿದ ಮನೆ
ಅಂಗಳ ಬಳ್ಳಿ ಮುಗಿಲಿನತ್ತ ಕೈಚಾಚುತಿದೆ
ಮಲ್ಲಿಗೆ ಮೊಗ್ಗು ಹೂವಾಗಿ ಅರಳುತಿದೆ

ಕಾಲೇಜು-ಕ್ಯಾಂಪಸ್ಸು, ಕ್ಯಾಂಟೀನು-ಲೈಬ್ರರಿ
ಬೀದಿ-ಬೀದಿ, ಕಟ್ಟೆ-ಕಟ್ಟೆಗಳ ಮೇಲೆ ಚರ್ಚೆ
ಹೊಸಹೊಸ ಕನಸುಗಳು ಚಿಗುರೊಡೆಯುತಿವೆ
ಈ ನಡುವೆ ಸದ್ದಿಲ್ಲದೇ ಬಾಡಿಯೂ ಹೋಗುತಿವೆ

ಚಿನ್ನದ ಗಿಳಿಯೀಗ ಸ್ವಪ್ನದ ಸರಕಾಗುತಿದೆ
ಮಿತ್ರ ಮೊಬೈಲಗಳಲ್ಲಿ ಸಂದೇಶ ವಿನಮಯವಾಗುತಿದೆ
ಚೆಂದದ  ಚೆಲುವೀಗ ಕವಿಗಳನ್ನು ಸೃಷ್ಠಿಸುತಿದೆ

ಬೊಗಸೆಗಂಗಳು ಸದ್ದಿಲ್ಲದೆ ರಮ್ಯ ಕವಿತೆಯಾಗುತಿವೆ
ಕೆಲವರು ಓದಿ ಅರ್ಥೈಸಿಕೊಳ್ಳಲು ಹೆಣಗುತ್ತಿದ್ದಾರೆ
ಮನೆಯ ತೊಲೆತೆಲೆಗಳಲಿ ತಳಮಳ ಶುರುವಾಗಿದೆ
ಡಿವೈಸ್ಹಾಕಿದ ಕಿವಿಗೆ ಗೊಡ್ಡು ಉಪದೇಶಗಳು ಬೀಳುವದಿಲ್ಲ

ಚಿಂತೆಯ ಕೀಟಗಳು ಬುದ್ದಿಯ ಕಾಂಡ ಕೊರೆಯುತಿವೆ
ಬುದ್ದಿ ಹೇಳುವರು ಪ್ರೇಮ ಕತೆಯ ಖಳ-
ನಾಯಕರೆಂಬ ಭಾವನೆ ಮೂಡುತಿದೆ
ಹುಟ್ಟಿದ ಮನೆಯೇ ಬಂಧಿಖಾನೆಯಾಗಿ ಕಾಣುತಿದೆ
ಪ್ರೇಮಕಾವ್ಯವೀಗ ಕಥೆಯಾಗಿ ಅರಳುತಿದೆ.

Leave a Reply