ಹೂವೊಂದು ಹಾಡಿದೆ…

ಸುರೇಶ ಎಲ್.ರಾಜಮಾನೆ

ಮಸನದಂತಿರೋ ನನ್ನಯ ಮನದಲಿ
ಹೂವೊಂದೀಗ ಅರಳಿದೆ
ನೀರಿಲ್ಲ, ಬೆಳಕಿಲ್ಲ, ಬರಿ
ಭಾವವನುಂಡು ಬೆಳೆದಿದೆ.

ಯಾರೋ ಬೀಸಿದ ಕಲ್ಲಿಗು ಮೆಲ್ಲಗೆ
ಮಾತಿಗೆ ಎಳೆದು ಕರೆದಿದೆ
ಸಾವನು ನೋವನು ಎದೆಯಲಿ ನುಂಗಿ
ನಗುತಲಿ ಎಲ್ಲರ ಸೆಳೆದಿದೆ

ಸುಡುವ ಬೆಂಕಿಯ ಬೆಚ್ಚನೆ ಸ್ಪರ್ಶಕೆ
ಬೆಚ್ಚುತ ಬೆರಗಲಿ ನಿಂತಿದೆ
ನೆನಪಿಗೆ ಹಚ್ಚಿದ ಚುಚ್ಚುವ ಮುಳ್ಳಿನ
ಮರದಡಿ ಬದುಕು ಸಾಗಿದೆ

ಅತ್ತರು ಸತ್ತರು ಹರಿದರು ನೆತ್ತರು
ಚಂದದ ಚಿತ್ತಾರ ಬಿಡಿಸಿದೆ
ಉತ್ತರವಿಲ್ಲದ ಪ್ರಶ್ನೆಯೇ ಸಾವಿರ
ಎಚ್ಚರ ತಪ್ಪದೇ ನಡೆದಿದೆ

ಬಾಯಿಗೆ ಹಾಕುವ ಅಕ್ಕಿಯ ಕಾಳಿಗು
ಅನ್ನದ ಋಣವ ಹೇಳಿದೆ
ತನ್ನವರೆಂಬುವ ತಂತಿಯೇ ಹರಿದರು
ಭಾವದ ಗೀತೆಯ ಹಾಡಿದೆ

5 comments

  1. ಸೂಪರ್ ಕವಿತೆ ರಾಜಮಾನೆ ಸರ್

Leave a Reply