ಅಪ್ಪ ಎನ್ನುವ ಅವನೊಬ್ಬ ಇರದಿದ್ದರೆ…

ಅಪ್ಪ ಎನ್ನುವ ಅವನೊಬ್ಬ ಇರದಿದ್ದರೆ: ಆತ್ಮಕತೆ ಅಂಚಿನ ಮಾತುಗಳು.

ಅವನು ತೀರಾ ನವೆದುಹೋಗಿದ್ದ. ಅದೆಷ್ಟು ದಪ್ಪಗಿದ್ದ ಹುಡುಗ ಇದೀಗ ಎಷ್ಟು ಸಪೂರಕ್ಕೆ ತಿರುಗಿದ್ದಾನೆ. ಮುಖದಲ್ಲಿ ಕಳೆ ಎನ್ನುವುದೇ ಇಲ್ಲ, ಕಣ್ಣಿನಲ್ಲಿ ಕಾಂತಿ ಶೂನ್ಯವಾಗಿದೆ. ಅವನು ಕೇವಲ ಹದಿನೆಂಟನೇ ವಯಸ್ಸಿಗೆ ಮೂವತ್ತರ ಮುದುಕನಂತಾಗಿದ್ದಾನೆ. ಹಳೆಯ ನೀಲಿ ಬಣ್ಣದ ಶರ್ಟು, ಕಂದು ಬಣ್ಣದ ಪ್ಯಾಂಟು ತೊಟ್ಟಿದ್ದ ಅವನು, ಏನನ್ನೋ ಪಡೆದುಕೊಳ್ಳುವವನಂತೆ ಮೈಸೂರಿನ ಹಿನಕಲ್‍ನಲ್ಲಿರುವ ದೇವರಕೊಳದ ಎದುರು ರಸ್ತೆ ದಾಟುತ್ತಿದ್ದಾಗ ಕಣ್ಣಿಗೆ ಬಿದ್ದಿದ್ದು.

ಕೂಗಿದೆ. ದನಿ ಕೇಳಿ ತಕ್ಷಣ ತಿರುಗಿ ನೋಡಿದ. ಎಷ್ಟೋ ವರ್ಷಗಳ ನಂತರ ಮುಖ ಕಂಡಿದ್ದರಿಂದ ಪುನಃ ರಸ್ತೆಯನ್ನು ದಾಟಿ ಈ ಬದಿಗೆ ಬಂದು ನಿಂತ. ಮುಖದಲ್ಲಿ ಮೇಲೆ ಕಲೆಗಳು ಹರಡಿಕೊಂಡಿದ್ದವು. ಬಟ್ಟೆಯಲ್ಲಿ ಪೆಟ್ರೋಲ್ ಆಯಿಲ್‍ನ ಕಲೆಗಳು ಮೆತ್ತಿಕೊಂಡಿದ್ದವು. ಅವನ ಬಲಗಾಲಿನ ಚಪ್ಪಲಿ ಒಂದೇ ತುದಿಗೆ ಸವೆದು ಹೋಗಿತ್ತು. ಕಣ್ಣುಗಳು ತೇಜಸ್ಸನ್ನು ತುಂಬಿಕೊಳ್ಳಲು ಹೆಣಗಾಡುತ್ತಿದ್ದಂತೆ ತೋರುತ್ತಿದ್ದರೂ ಮಾತುಗಳು ಮಾತ್ರ ಸ್ಪಷ್ಟವಾಗಿದ್ದವು.

ಮುಖವನ್ನು ದೃಢವಾಗಿ ನೋಡುತ್ತಲೇ ನಿಂತುಬಿಟ್ಟಿದ್ದ ಅವನು ಕೇವಲ ಹದಿನೆಂಟನೇ ವಯಸ್ಸಿನ ಹುಡುಗ. ಈಗ, ಒಂಬತ್ತು ವರ್ಷಗಳ ನಂತರ ಹಿನಕಲ್‍ನ ದೇವರಕೊಳ ಹತ್ತಿರದ ರಸ್ತೆ ದಾಟುವಾಗ ಕಣ್ಣಿಗೆ ಅಚಾನಕ್ ಆಗಿ ಬಿದ್ದಿದ್ದ. ಕಲರಿಂಗ್ ಮಾಡಿಸಿರುವ ಕೂದಲು, ಒಂದೇ ಉಗುಷ್ಠದ ಚಪ್ಪಲಿ, ಕಡುನೀಲಿ ಬಣ್ಣದ ಕನ್ನಡಕ ಎಲ್ಲವೂ ನನ್ನ ಹೊಸ ಅವತಾರದಂತೆ ತೋರಿರಬಹುದು. ಅವನು ಪರೀಕ್ಷಿಸುವವನಂತೆ ನೋಡುತ್ತಲೇ ಇದ್ದ. ನಾನೇ ಕಣೋ ಸಂದೀಪ್ ಎಂದು ಖಾತ್ರಿಗೊಳಿಸಿ ಅವನ ಕುತೂಹಲಕ್ಕೆ ಅಂತ್ಯಬಿಂದುವನ್ನು ದಯಪಾಲಿಸಿದೆ. ಕಣ್ಣನ್ನು ಪಿಳಿಪಿಳಿ ಮಾಡುತ್ತ, ನಗೆಯಾಡಿದ.

“ಏನ್ ಮಾಡ್ತಾ ಇದ್ದೀಯಾ ಈಗ? ಕೆಲಸ ಮಾಡುತ್ತಾ ಇದ್ದೀಯಾ!”

“ಹ್ಮ್ ಅಣ್ಣ”

ಈಗ ನಿರ್ಭಯವಾಗಿ ಅವಕಾಶ ದೊರೆತಾಗ ರಸ್ತೆ ದಾಟುತ್ತಿರುವ ಈ ಹುಡುಗ ಕೆಲವೇ ವರ್ಷಗಳ ಹಿಂದೆ ಮನೆಯ ಹೊಸ್ತಿಲ್ಲನ್ನು ದಾಟುವುದಕ್ಕೂ ಪರೆದಾಡುತ್ತಿದ್ದ ಭಯದಿಂದ. ಅವನ ತಂಗಿ ನುಣುಪು ಪುಕ್ಕಗಳ ಗುಬ್ಬಿಮರಿಯ ಹೋಲಿಕೆಯವಳು. ಅಪ್ಪ, ಕುಡಿದು ರಂಪ ಮಾಡುತ್ತಿದ್ದಾಗ ಮನೆಯ ಯಾವುದೋ ಮೂಲೆಯನ್ನು ಸೇರಿಬಿಡುತ್ತಿದ್ದಳು. ಅದು ಅವಳೇ ಕಂಡುಕೊಂಡಿದ್ದ ದಾರಿ. ಅವನ ಅಮ್ಮ ಗಂಡನ ಗಡುಸು ಹೊಡೆತಗಳಿಗೆ ಬೆನ್ನುಮಾಡಿ ನಲುಗಿ ಹೋಗುತ್ತಿದ್ದಳು.

ಎಂಟು ವರ್ಷದ ಅವನು, ಐದೇ ವರ್ಷದ ತಂಗಿ ಅಮ್ಮ ಮಾತನಾಡುವಾಗ ನಗುತ್ತ, ಒಬ್ಬಳೇ ಕೂತು ಅಳುವಾಗ ಮೌನವಾಗುತ್ತ ಏನನ್ನೂ ಅರ್ಥೈಸಿಕೊಳ್ಳಲಾರದೆ ಖಾಲಿಯಾಗೇ ಉಳಿದುಹೋಗಿದ್ದರು.

ಅವನ ಅಪ್ಪ ಅದೊಂದು ಬಗೆಯ ವಿಚಿತ್ರ ಗುಣದವನು. ವೃತ್ತಿಯಿಂದ ಆಟೋ ಡ್ರೈವರ್. ಅಶಿಸ್ತಿನ ಮನುಷ್ಯ ಬೆಳಗ್ಗೆ ಹತ್ತು ಗಂಟೆಗೆ ಹಾಸಿಗೆಯನ್ನು ಬಿಟ್ಟು ಏಳುವುದು. ಎದ್ದ ತಕ್ಷಣ ಒಂದು ಲೋಟ ಹಾಲು. ಹೊರಗೆ ನಿಧಾನವಾಗಿ ಬಂದು ಬೆಂಗಳೂರು – ಊಟಿ ಹೆದ್ದಾರಿಯಲ್ಲಿ ಹಾಗೊಮ್ಮೆ ಈಗೊಮ್ಮೆ ಸಾಗುವ ಬಸ್ಸು, ಕಾರುಗಳನ್ನು ನೋಡುತ್ತ ನಿಲ್ಲುವುದು. ರಸ್ತೆಯಲ್ಲಿ ಯಾರಾದರೂ ಹೋಗುತ್ತಿದ್ದರೆ ಮಹಾಜವಾಬ್ದಾರಿ ಮನುಷ್ಯನಂತೆ ಮಾತನಾಡಿಸಿ, “ಬನ್ನಿ ತಿಂಡಿ ಮಾಡಿ” ಎನ್ನುವುದು ನಿತ್ಯವೂ ನಡೆದಿತ್ತು.

ಹತ್ತು ಗಂಟೆಗೆ ಸ್ನಾನ ಮುಗಿಸಿ, ಹನ್ನೊಂದು ಗಂಟೆಗೆ ತನ್ನ ಖಾಕಿ ಅಂಗಿಯನ್ನು ಮೈಗೇರಿಸಿ ಹೊರಟರೆ ಸಂಜೆ ಏಳಕ್ಕೆ ಸಾಕು ಎನ್ನುವಷ್ಟು ಕುಡಿದು ಮನೆಗೆ ವಾಪಸ್. ಅವನ ಮನೆಯಲ್ಲಿ ಸಂಜೆಯ ನೆಮ್ಮದಿ ಎನ್ನುವುದು ಅವನ ಅಪ್ಪ ಆಟೋ ನಿಲ್ಲಿಸುವ ಪರಿಯ ಆಧಾರದಲ್ಲಿ ನಿಶ್ಚಯವಾಗುತ್ತಿತ್ತು. ಸಮಾಧಾನವಾಗಿ ಆಟೋ ಬಂದು ನಿಲ್ಲುವುದು ಸಾಧ್ಯವಾದರೆ ನೆಮ್ಮದಿಯ ನಿದ್ರೆಯನ್ನು ಎದುರು ನೋಡಬಹುದಿತ್ತು. ಅದೇ ಆಟೋ ಸಿಕ್ಕಲ್ಲಿ ನಿಂತಿರುವುದು ಕಾಣಿಸಿದರೆ ಎಲ್ಲರೂ ಜಾಗೃತವಾಗುತ್ತಿದ್ದರು. ಅವನ ಅಮ್ಮ ಮಕ್ಕಳನ್ನ ಒಳಗೆ ಕಳುಹಿಸಿಬಿಡುತ್ತಿದ್ದಳು. ಅವನ ಅಮ್ಮ ನಾನು ನೋಡಿದಂತೆ ಮಹಾಮೌನಿ.

ಅವನು ಕುಡಿದು ಜಪ್ಪುವಾಗಲೂ ಪ್ರತಿರೋಧ ತೋರುತ್ತಿರಲಿಲ್ಲ. ಅವನ ಬಲವಾದ ಹೊಡೆತಗಳನ್ನು ತಡೆಯುವ ಶಕ್ತಿ ಕ್ರಮಿಸಿ ದೇಹವನ್ನ ಛಿದ್ರಗೊಳಿಸಿದಾಗಷ್ಟೇ ಜೋರಾಗಿ ಕಿರುಚುತ್ತಿದ್ದಳು. ಆಗೆಲ್ಲಾ ಒಂಬತ್ತು ವರ್ಷದ ಅವನು, ಐದೇ ವರ್ಷದ ಅವನ ತಂಗಿ ಆ ಏರಿಯಾದಲ್ಲಿ ಇದ್ದ ನಾಲ್ಕೇ ಮನೆಗಳ ಬಾಗಿಲು ಬಡಿಯುತ್ತಿದ್ದರು. ಮನೆಯವರ ಎದುರು ನಿಂತು ಬಿಕ್ಕಳಿಸಿ ಅಳುತ್ತಾ, ಅಮ್ಮ, ಅಮ್ಮ ಎಂದಷ್ಟೇ ಬಿಕ್ಕಳಿಸುತ್ತಿದ್ದರು.

ಆರಂಭದಲ್ಲಿ ಅವನ ರಾಕ್ಷಸ ಹೊಡೆತಗಳಿಂದ ಪಾರು ಮಾಡಲು ಪ್ರಯತ್ನಿಸಿದವರೂ ಕೂಡ ಕ್ರಮೇಣ ಮೌನವಾಗಿದ್ದರು. ಅವನ ಈ ನಿತ್ಯದ ರೋಧನೆಗೆ ಏಕತಾನತೆ ಬಂದು ನಿಂತಿತ್ತು. ಬೋಳಿಮಗ, ಹೆಂಡತಿಗೆ ಹೊಡ್ಕೊಂಡ್ ಬದುಕಿದ್ದಾನೆ, ಮಕ್ಕಳ ಪ್ರಾಣ ತಿಂತಾನೇ” ಎಂದು ಹಲುಬುದಕ್ಕಷ್ಟೇ ಸುತ್ತಲ ಮನೆಯವರ ಸಿಟ್ಟು ಸೀಮಿತವಾಗಿತ್ತು. ಮೊದಲು ಎರಡು ಕಿಲೋ ಮೀಟರ್ ದೂರದಲ್ಲಿದ್ದ ಅವನ ಅಜ್ಜಿ ಮನೆಯ ಬಾಗಿಲು ಬಡಿದು ತಡರಾತ್ರಿಯಾದರೂ ಅವರನ್ನು ಕರೆದುಕೊಂಡು ಬರುವ ಪದ್ದತಿಯಿಂದ ನಾನು ದೂರವಾಗಿದ್ದೆ. ಬೀದಿಯಲ್ಲಿ ಯಾರಾದರು ಒಬ್ಬರು ಮಕ್ಕಳನ್ನು ಮನೆಗೆ ಕರೆದು ಸಮಾಧಾನ ಮಾಡಿ ಊಟ ಮಾಡಿಸಿ ಮಲಗಿಸಿಕೊಳ್ಳುತ್ತಿದ್ದರು. ಅವನು ಕೈ ಸೋತಾಗ ಹೊಡೆಯುವುದನ್ನು ನಿಲ್ಲಿಸಿ ಮಲಗಿಬಿಡುತ್ತಿದ್ದ.

ನಾಳೆಯ ಸೂರ್ಯ ಉದಯಿಸುವಷ್ಟರಲ್ಲಿ ಅದೇ ವರ್ಚಸ್ಸು. ಕಳೆದ ರಾತ್ರಿ ಏನೆಂದರೆ ಏನೂ ನಡೆದಿಲ್ಲ ಎನ್ನುವಂತೆ ನೀಟಾಗಿ ಎದ್ದು ಮನೆಯ ಎದುರು ನಡೆದುಹೋಗುತ್ತಿದ್ದವರನ್ನು ಗೌರವದಿಂದ ಮಾತನಾಡಿಸುತ್ತಿದ್ದ. ಅವನ ಅಮ್ಮ, ಸೆರಗಿನಿಂದ ಗಾಯಗಳನ್ನು ಮುಚ್ಚಿಕೊಳ್ಳುತ್ತ ಮನೆಯ ಎದುರು ಕಸ ಗುಡಿಸುತ್ತಿದ್ದರು. ರಂಗೋಲಿಯನ್ನು ಇನ್ನಷ್ಟು ದೊಡ್ಡದಾಗಿ ಬರೆದು ನಾನು ಸುಖವಾಗಿಯೇ ಇದ್ದೇನೆ ಎನ್ನುವುದನ್ನು ಬಲವಂತವಾಗಿ ದಾಟಿಸುಲು ಪ್ರಯತ್ನಿಸುತ್ತಿದ್ದರು.

ನಾವು ನಾರಾಯಣನಂದ ಆಶ್ರಮದ ಹತ್ತಿರದ ಮನೆಯನ್ನು ಖಾಲಿ ಮಾಡಿದ ನಂತರ ಅವನನ್ನು ನೋಡಿರಲಿಲ್ಲ. ಈಗ ಇದ್ದಕ್ಕಿದ್ದಂತೆ ದೇವರ ಕೊಳದ ಎದುರು ರಸ್ತೆ ದಾಟುತ್ತಿದ್ದಾಗ ಅವನನ್ನು ನೋಡಿ ಆಶ್ಚರ್ಯ ವಾಗಿತ್ತು. ಅವನ ದಡೂತಿ ದೇಹ ಬೆಂಕಿಯ ಕಾವಿಗೆ ಕರಗುವ ಕರ್ಪೂರದಂತೆ ಕರಗಿಹೋಗಿದ್ದು ಹೇಗೆ ಎನ್ನುವ ಪ್ರಶ್ನೆಗಳು ಕುತ್ತಿಯನ್ನು ಹಿಂಡಿದವು.

“ಅಮ್ಮ!”

“ಅಣ್ಣ, ಅವರು ಈಗ ಕೆಲಸ ಮಾಡುತ್ತಾ ಇದ್ದಾರೆ. ನಾನು ಬಜಾಜ್ ಶೋ ರೂಮ್‍ನಲ್ಲಿ ಮೆನಾನಿಕ್ ಆಗಿದೀನಿ.”

“ಕಾಲೇಜು? ಓದಬಹುದಿತ್ತು. ಪಾರ್ಟ್ ಟೈಮ್ ಜಾಬ್ ಮಾಡಿ. ಮಹಾರಾಜ ಕಾಲೇಜಿನಲ್ಲಿ ಈವನಿಂಗ್ ಕಾಲೇಜ್ ಇದೆ ಅಲ್ವಾ. ಬೇಕು ಅಂದ್ರೆ ನಾನು ಹೇಳ್ತೀನಿ, ಫೀಸ್ ಐದು ಸಾವಿರ ಇರಬಹುದು. ಕೊಟ್ಟರೆ ಆಯ್ತು.”

“ಬೇಡ, ನನಗೆ ಈಗ ಓದೋಕೆ ಇಷ್ಟ ಇಲ್ಲ. ಎಸ್.ಎಸ್.ಎಲ್.ಸಿ ಆದ್ಮೇಲೆ, ಸ್ಕೂಲ್ ಬಿಟ್ಟು ಗ್ಯಾರೇಜ್ ಕುಮಾರಣ್ಣನ ಹತ್ತಿರ ಕೆಲಸ ಕಲಿಯುತ್ತ ಇದೀನಿ. ಈಗ ಏನು ಸಮಸ್ಯೆ ಇಲ್ಲ.”

“ಓದಬೇಕಿತ್ತು ಕಣೋ. ಓದು ಅನ್ನೋದು ತುಂಬಾ ಮುಖ್ಯ. ನಿನಗೆ ಅದು ಗೊತ್ತಿಲ್ಲ. ಓದು ಇಲ್ಲದಕ್ಕೆ ಅಲ್ವಾ ಅಪ್ಪ ಆ ಗತಿಯಾಗಿದ್ದು. ಮತ್ತೆ ನಿನ್ನ ತಂಗಿ! ಅವಳು ಸ್ಕೂಲಿಗೆ ಹೋಗ್ತಾ ಇದಾಳಾ?”

“ಅವಳು ಸತ್ತು ಆಯ್ತು ನಾಲ್ಕು ವರ್ಷ, ಎಂದ ನಿರ್ಲಿಪ್ತವಾಗಿ. ಕಣ್ಣುಗಳು ನಿರ್ಜನವಾಗಿದ್ದವು. ಸಾವನ್ನೂ ಜೀರ್ಣಿಸಿಕೊಂಡವನಂತೆ ಎದುರು ನಿಂತಿದ್ದ ಆ ಹದಿನೆಂಟು ವರ್ಷ ಆ ಪುಟ್ಟ ಹುಡುಗ.”

“ಯಾವಾಗ! ಎಂಥಾ ಆಯ್ತು ಮಾರಾಯ ಪುಟ್ಟಿಗೆ!”

“ಜ್ವರ ಬಂದಿತ್ತು. ಜಾಂಡೀಸ್. . .ನಿಮಗೆ ಗೊತ್ತಲ್ಲಾ ಅಣ್ಣ ನಮ್ಮಪ್ಪ. ಅದು ಏನು ಮಹಾಜ್ವರ ಅಲ್ಲ, ನನಗೆ ಗೊತ್ತು ಅಂತ ಮನೆಯಲ್ಲೇ ಅದು ಇದು ಕೊಟ್ಟರು. ಕಡೆಗೆ ಜ್ವರ ಜಾಸ್ತಿಯಾಗಿತ್ತು. ಆಮೇಲೆ ಅಶ್ವಿನಿ ಡಾಕ್ಟರ್ ಹತ್ತಿರ ತೋರಿಸಿದರೆ ಈಗ ಬಂದು ಏನಾದ್ರು ಮಾಡಿ ಅಂದ್ರೆ ಏನು ಮಾಡೋಕ್ ಆಗಲ್ಲ ಅಂತ ಬೈದರು. ಆದಾದ್ ಮೇಲೆ ಒಂದು ತಿಂಗಳು ಮನೆಯಲ್ಲೇ ಇದ್ದಳು. ಬೆಳವಾಡಿ ಅಜ್ಜಿ ಹತ್ತಿರ ನಾಟಿ ಔಷಧಿ ಕೊಡಿಸಿದೆವು. ಆದ್ರೂ ಸತ್ತೋದ್ಲು. ಸುಮ್ಮನಾಗಿಹೋದ. ಬಹುಶಃ ಒಳಗೇ ಕುಸಿದುಹೋಗಿರಬಹುದು ಎಂದುಕೊಂಡೆ. ಮೌನವಾದೆ.”

“ನಿಮ್ಮಪ್ಪ ಮನುಷ್ಯ ಅಲ್ಲ ಮಾರಾಯ ನಿಜ”.

“ಬಿಡಿ ಅಣ್ಣ. ಈಗ ಅಪ್ಪ ಎಲ್ಲಿದ್ದಾರೆ ಗೊತ್ತಿಲ್ಲ. ನಾವು ನಾರಾಯಣನಂದ ಆಶ್ರಮದ ಹತ್ತಿರದ ಮನೆಯನ್ನು ಮಾರಿಬಿಟ್ಟಿದ್ದೀವಿ. ಆ ಕಡೆಗೆ ಹೋಗಲ್ಲ ನಾನು. ಇಲ್ಲೇ ಗಣಪತಿ ದೇವಸ್ಥಾನದ ಹತ್ತಿರ ಬಾಡಿಗೆ ಮನೆ ಮಾಡಿದೀನಿ. ಅಮ್ಮ ಎರಡು ಮನೆ ಕೆಲಸ ಮಾಡ್ತಾರೆ. ನಾನು ಗ್ಯಾರೇಜ್‍ನಲ್ಲಿ ಕೆಲಸ ಮಾಡ್ತೀನಿ. ಇರೋದು ಇಬ್ಬರು, ಸಾಕು ಬರುವ ಸಂಬಳ”. ಅವನಿಗೆ ಯಾವ ನಿರ್ಧಿಷ್ಠ ಗುರಿಯೂ ಇದ್ದಂತೆ ಕಾಣಲಿಲ್ಲ. ಇವತ್ತಿನ ಬದುಕು ನೋವಿಲ್ಲದೆ ಸರಿದುಹೋದರೆ ಸಾಕು ಎನ್ನುವ ಇರಾದೆ ತೋರುತ್ತಿತ್ತು ಅಷ್ಟೇ.

“ದುಡ್ದು ಉಳಿಸು ಮಾರಾಯ. ಮತ್ತೊಬ್ಬರ ಹತ್ತಿರ ಕೆಲಸ ಮಾಡುವುದರಲ್ಲೇ ಬದುಕನ್ನ ಕಳೆಯಬೇಡ. ಮೊದಲು ಚೆನ್ನಾಗಿ ಕೆಲಸ ಕಲಿ, ಆ ಮೇಲೆ ಕುಮಾರಣ್ಣನಿಗೆ ಕೇಳು, ನಾನು ಒಂದು ಸ್ವಂತ ಗ್ಯಾರೇಜ್ ಮಾಡ್ತೀನಿ ಅಂತ ಹೇಳು. ಮನುಷ್ಯ ಒಳ್ಳೆಯವನಿದ್ದಾನೆ. ಕುಮಾರಣ್ಣನಿಗೆ ಹೇಳದೆ ಮಾಡಬೇಡ. ಬರೀ ಹುಟ್ಟಿಸಿದರೆ ಅಪ್ಪ ಆಗೋದಿಲ್ಲ. ಜವಾಬ್ದಾರಿಯಿಂದ ಮಕ್ಕಳನ್ನ ಪೋಷಣೆ ಮಾಡ್ತಾನೆ, ಆ ಪ್ರೋಸಸ್‍ನಲ್ಲಿ ಅಪ್ಪನಾಗೋದು”

“ನಿಮ್ಮಮ್ಮನ್ನ ನಾನು ಕೇಳಿ ಅಂತ ಹೇಳು, ಬಹುಶಃ ಅವರು ನನ್ನ ಮರೆತಿರಬಹುದು!

“ಇಲ್ಲಾ. ನೀವು ನಮ್ಮಮ್ಮನಿಗೆ ಅಪ್ಪ ಹೊಡೆದಾಗ, ರಾತ್ರಿ ಓಡಿಹೋಗಿ ನಮ್ಮಜ್ಜಿ ಮನೆಗೆ ಹೋಗಿ ಅವರನ್ನ ಕರೆದುಕೊಂಡು ಬರ್ತಾ ಇದ್ರಿ ಅಲ್ವಾ” ಎಂದು ಉಳ್ಳಗೆ ನಗೆಯಾಡಿದ.

“ಆಗ ಎಂಟನೇ ಕ್ಲಾಸು ಕಣೋ. ಅಷ್ಟು ಗೊತ್ತಾಗ್ತಾ ಇರಲಿಲ್ಲ. ನಿಮ್ಮ ಅಜ್ಜಿ ಮನೆ, ನಮ್ಮ ಅಜ್ಜಿ ಮನೆಯ ಹತ್ತಿರ ಇತ್ತು ಅಲ್ವಾ. ಅದನ್ನ ನೋಡಿದ್ದೆ. ಅದಕ್ಕೆ ಹೋಗಿ ಕರೆದುಕೊಂಡು ಬರ್ತಾ ಇದ್ದೆ ಅಷ್ಟೇ”, ಎಂದೆ.

ಮೈಸೂರು ಮಡಿಕೇರಿ ಹೆದ್ದಾರಿಯಲ್ಲಿ ನಿಂತು ಹಳೆಯದನ್ನು ಕೆದಕುತ್ತಲೇ ನಿಂತಿದ್ದೆವು. ಕಾಲು ಸೋತವು. ನಿಧಾನವಾಗಿ ವಿಜಯನಗರದ ಕಡಗೆ ಹೆಜ್ಜೆ ಹಾಕಿದೆವು. ಸ್ಕೂಲು, ಕೆಲಸ, ಗೆಳೆಯರು, ಅಜ್ಜಿ, ಮನೆ, ಬದಲಾವಣೆ ಎಲ್ಲವನ್ನೂ ಮೇವನ್ನು ಮೆಲುಕು ಹಾಕುವ ಕುರಿಮರಿಯಂತೆ ಮೆಲಕು ಹಾಕುತ್ತಲೇ ನಡೆದವು.

“ನಿಮ್ಮ ಅಪ್ಪ ಎಲ್ಲಿದ್ದಾರೆ ಈಗ”?

“ಗೊತ್ತಿಲ್ಲಾ ಅಣ್ಣ, ನಾವು ಹುಡುಕೋದಕ್ಕೆ ಹೋಗಿಲ್ಲ”

“ಬಿಡು, ಅವನನ್ನು ಹುಡುಕಿ ನೆಮ್ಮದಿಯನ್ನು ಕಳೆದುಕೊಳ್ಳುವ ಕೆಲಸ ಮಾಡಬೇಡ” ಇಬ್ಬರೂ ಜೋರಾಗಿ ತುಟಿ ಅರಳಿಸಿ ನಗೆಯಾಡಿದೆವು.

“ಅಪ್ಪ, ಒಬ್ಬ ಇರದ ಹೋಗಿದ್ದರೆ, ನಾನು ಇನ್ನೂ ಚೆನ್ನಾಗಿ ಇರ್ತಾ ಇದ್ದೆ ಅನ್ಸತ್ತೆ ಅಣ್ಣ” ಎಂದು ಮುಖ ನೋಡಿದ. ಅವನ ಮಾತುಗಳನ್ನು ಹೇಗೆ ಗ್ರಹಿಸಬೇಕು ಎನ್ನುವುದೇ ಅರ್ಥವಾಗಲಿಲ್ಲ. ತೆಲುಗು ಲೇಖಕ ಗುಡಿಪಾಟು ವೆಂಕಟಚಲಂ ತನ್ನ ಆತ್ಮಕತೆಯ ಮೊದಲ ಪುಟದಲ್ಲಿ, ಅಪ್ಪ ಎನ್ನುವ ಅವನೊಬ್ಬ ಇರದೇ ಇದ್ದಿದ್ದರೆ “It is not such a bad world at all” ಎಂದಿದ್ದಾರೆ. ಹದಿನೆಂಟರ ಈ ಹುಡುಗನ ಮಾತುಗಳು ಐವತ್ತರ ಅಂಚಿನಲ್ಲಿ ಆತ್ಮಕತೆ ಬರೆಯುವ ಚಲಂನ ಎದುರಿದ್ದ ಅನುಭವಗಳಿಂತ ಭಿನ್ನವಾಗಿಲಿಲ್ಲ.

ಚಲಂನ ಕತೆಯನ್ನು ಅವನ ಎದುರು ಹೇಳಿದೆ. ಅವನು ಬಿಡುಗಣ್ಣಿನಲ್ಲಿ ಎಲ್ಲವನ್ನೂ ಕೇಳುತ್ತಾ ನಿಂತಿದ್ದ. ಸಂಜೆ ಇಳಿಮುಖವಾಗಿತ್ತು. ಮಾತುಗಳು ಬೇರೆ ಕಡೆಗೆ ಹೊರಳಿಕೊಂಡವು. ಎಲ್ಲ ಮುಗಿದು ಖಾಲಿ ಎನಿಸಿದ ಮೇಲೆ ಹೊರಡಲು ಅಣಿಯಾದೆವು. ಅವನು ಕೈ ಕುಲುಕಿ  ಜವಾಬ್ದಾರಿಯುತ ಗಂಡಸಿನಂತೆ ಹೊರಟುಹೋದ.

Leave a Reply