ಶಾಸಕರೊಬ್ಬರ ಶೌಚಾಲಯ ಉದ್ಘಾಟನಾ ಸಾಹಸ


“ರಾಜಕಾರಣಿಯ ಬಿಡುವಿಲ್ಲದ
ದಿನಚರಿಯಲ್ಲಿ
ಸೂಜಿಮಲ್ಲಿಗೆಯೊಂದು
ಅವನನ್ನು ಆಕರ್ಷಿಸಬಲ್ಲುದಾದರೆ
ರಾಜಕಾರಣ ಕ್ಷೇಮ “

-ನೀಲು ( ಪಿ.ಲಂಕೇಶ್)

*                *                    *                      *
ಭರತಖಂಡವೆಂಬ ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲೊಂದಾದ ದೇಶದ ಯಾವುದೋ ಹೋಬಳಿಯೊಂದರಲ್ಲಿ ನಡೆದ ಈ ಘಟನೆಯು ಯಾವುದೇ ನ್ಯೂಸ್ ಪೇಪರಿನಲ್ಲಿ ಪ್ರಕಟವಾಗಲಿಲ್ಲ ಎಂಬುದು ಸಮಾಧಾನದ ಸಂಗತಿ.

ಜನಾನುರಾಗಿಯಾದ ಶಾಸಕ ಮಹೋದಯರೊಬ್ಬರು ಆ ಹೋಬಳಿಯ ಸರ್ಕಾರಿ ಶಾಲೆಯ ಕ್ರೀಡಾಕೂಟಕ್ಕೆ ಉದ್ಘಾಟನಾ ಕಾರ್ಯಕ್ರಮಕ್ಕೆ ಬಂದಾಗ ವೇದಿಕೆಯ ಮೇಲಿನ ಭಾಷಣದಲ್ಲಿ ಶಾಲಾ ಮುಖ್ಯ ಶಿಕ್ಷಕರು ತಮ್ಮ ಶಾಲೆಯಲ್ಲಿ ಇರುವ ಅನೇಕ ಮೂಲಭೂತ ಸೌಕರ್ಯಗಳ ಕೊರತೆಯ ಬಗ್ಗೆ ಗಮನಸೆಳೆಯಲಾಗಿ, ಇದರಿಂದ ಕ್ರುದ್ಧರಾದ ಶಾಸಕರು ತಮ್ಮ ಭಾಷಣದಲ್ಲಿ ಆವೇಶಭರಿತರಾಗಿ ಆಶ್ವಾಸನೆಗಳ ಸುರಿಮಳೆಗೆಯ್ದರು. ‘ಇನ್ನು ಒಂದು ವಾರದೊಳಗೆ ಈ ಶಾಲೆಗೆ ಶೌಚಾಲಯ ಕಟ್ಟಿಸಿ ಕೊಡುವುದು ನನ್ನ ಜವಾಬ್ದಾರಿ. ಈ ಸಂಬಂಧ ನಾಳೆಯೇ ನನ್ನ ನೀವು ಭೇಟಿಯಾಗಬೇಕು ಹೆಡ್ ಮಾಸ್ಟರೇ’ ಎಂದದ್ದನ್ನು ಕೇಳಿಸಿಕೊಂಡ ವಿದ್ಯಾರ್ಥಿಗಳು ತಮ್ಮ ಬಹಿರ್ದೆಸೆ ಕಾರ್ಯಕ್ರಮ ಮತ್ತು ಪರದಾಟಗಳಿಗೆ ಸದ್ಯದಲ್ಲೇ ತೆರೆಬೀಳಲಿದೆ ಎಂದು ಒಳಗೊಳಗೇ ಖುಷಿಗೊಂಡರು.

ಶಾಸಕರ ಮಾತಿನಂತೆಯೇ ಹೆಡ್ ಮಾಸ್ಟರ್ ಮತ್ತು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು ಶಾಸಕರನ್ನು ಮರುದಿನವೇ ಭೇಟಿ ಮಾಡಲು ಹೋದರೂ, ಶಾಸಕರು ಮತ್ಯಾವುದೋ ಮಹತ್ಕಾರ್ಯದ ಮೇಲೆ ಊರಿನಲ್ಲಿರದ ಕಾರಣ ಅದು ಸಾಧ್ಯವಾಗಲಿಲ್ಲ. ಹೀಗೇ ಮೂರ್ನಾಲ್ಕು ದಿನ ಮುಖ್ಯ ಶಿಕ್ಷಕರು ಈ ಮುಖ್ಯ ಕಾರ್ಯಕ್ಕಾಗಿ ಅಲೆದಾಡಿದಮೇಲೆ ಕೊನೆಗೂ ಶಾಸಕರ ಭೇಟಿ ಭಾಗ್ಯ ಅವರಿಗೆ ದೊರಕಿತು. ಈ ಹಿಂದೆ ಮಾತು ಕೊಟ್ಟಂತೆ ಸದ್ಯಕ್ಕೆ ಹುಡುಗರಿಗೊಂದು, ಹುಡುಗಿಯರಿಗೊಂದು ಪ್ರತ್ಯೇಕ ಶೌಚಾಲಯ ನಿರ್ಮಿಸಿಕೊಡಲು ಒಪ್ಪಿದ ಅವರು ಶಾಸಕರ ಅನುದಾನದಿಂದ ಈ ಕೆಲಸಕ್ಕೆ ಹಣ ಮಂಜೂರು ಮಾಡುವುದಾಗಿಯೂ ಭರವಸೆ ಕೊಟ್ಟು ಕಳುಹಿಸಿದರು.

ಅಗತ್ಯ ದಾಖಲೆಗಳನ್ನೆಲ್ಲ ಒದಗಿಸಿದ ತರುವಾಯ ಶೌಚಾಲಯ ನಿರ್ಮಾಣ ಕಾರ್ಯವೂ ಪ್ರಾರಂಭವಾಯಿತು. ಶಾಸಕರು ಮಾತು ಕೊಟ್ಟಂತೆ ಕೇವಲ ಒಂದು ವಾರದಲ್ಲಾಗದಿದ್ದರೂ ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭವಾಗುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕಟ್ಟಡ ನಿರ್ಮಾಣ ಕಾರ್ಯ ಪ್ರಾರಂಭವಾದ ದಿನದಿಂದ ಶಾಲೆಯ ಮಕ್ಕಳು ಪ್ರತಿ ಬಾರಿ ಮೂತ್ರವಿಸರ್ಜನೆಗೆ ಬಯಲಿಗೆ ಹೋಗುವಾಗಲೂ ಆ ಕಟ್ಟಡವನ್ನು ಆಸೆಯ ಕಂಗಳಿಂದ ನೋಡುತ್ತ, ಈ ಸದ್ಯದಲ್ಲೇ  ಕಟ್ಟಡದೊಳಗೆ ಮೂತ್ರ ಮಾಡುವ ತಮ್ಮ ಅವಕಾಶವನ್ನು ನೆನೆದು ಪುಳಕಿತರಾಗುತ್ತಿದ್ದರು‌.

ಸ್ವತಃ ಶಾಸಕರ ಉಸ್ತುವಾರಿಯಿದ್ದ ಕಾರಣ ಕಟ್ಟಡ ನಿರ್ಮಾಣ ಶೀಘ್ರದಲ್ಲೇ ಮುಗಿಯಿತು. ಎರಡೂ ಕಟ್ಟಡಗಳು ಬಳಕೆಗೆ ಸಿದ್ಧವಾಗಿ ನಿಂತವು. ಎರಡೂ ಕಟ್ಟಡಗಳ ಮೇಲೆ ದೊಡ್ಡದಾಗಿ “ಶಾಸಕರ (ಅವರ ಹೆಸರಿನೊಂದಿಗೆ) ಅನುದಾನ ಯೋಜನೆಯಡಿಯಲ್ಲಿ ನಿರ್ಮಿಸಿದ ನೂತನ ಶೌಚಾಲಯ ಕಟ್ಟಡ” ಎಂಬ ಬೋರ್ಡ್ ನೇತು ಹಾಕಲಾಗಿತ್ತು. ಇದನ್ನು ನೋಡಿದ ಊರಿನ ಕಿಡಿಗೇಡಿಯೊಬ್ಬ (ಆತ ವಿರೋಧಪಕ್ಷದವನೇ ಇರಬೇಕು) ‘ಏನ್ರೋ ನೀವು ಉಚ್ಚೆ ಹುಯ್ಯೋ ಬಿಲ್ಡಿಂಗ್ ಮೇಲೂ ಎಂಎಲ್ಎ ಹೆಸರು ಬೇಕಾ?’ ಎಂದು ಹುಡುಗರನ್ನು ಕಿಚಾಯಿಸಿದ್ದೂ ಆಯಿತು. ವಿದ್ಯಾರ್ಥಿಗಳಿಗೆಲ್ಲ ಖುಷಿಯೋ ಖುಷಿ. ಮುಖ್ಯ ಶಿಕ್ಷಕರು ಮತ್ತು ಎಸ್ ಡಿ ಎಂ ಸಿ ಅಧ್ಯಕ್ಷರು ಸೇರಿ ನೂತನ  ಶೌಚಾಲಯದ ಉದ್ಘಾಟನೆಗಾಗಿ ಶಾಸಕರ ಬಿಡುವಿನ ದಿನಾಂಕವನ್ನು ಗೊತ್ತು ಮಾಡಿಕೊಂಡು ಬರಲು ಹೋದರು.

ಆದರೆ ಮುಂದಿನ ಎರಡು ತಿಂಗಳುಗಳ ತನಕ ಶಾಸಕರ ದಿನಾಂಕಗಳೇ ಖಾಲಿ ಇರಲಿಲ್ಲ. ಹಾಗಾಗಿ ಬಳಕೆಗೆ ಸಿದ್ಧವಾಗಿ ನಿಂತಿದ್ದ ಶೌಚಾಲಯ ಶಾಸಕರ ಅಮೃತ ಹಸ್ತಕ್ಕಾಗಿ ಕಾಯುವ ಪರಿಸ್ಥಿತಿ ಬಂತು. ಈ ನಡುವೆ ಶಾಲೆಯ ಹುಡುಗರಿಗೆ ಈ ವಿಳಂಬದ ಕಾರಣವನ್ನು ವಿವರಿಸುವಷ್ಟರಲ್ಲಿ ಶಿಕ್ಷಕರುಗಳು ಸುಸ್ತಾದರು.

ಪದೇ ಪದೇ ಶಾಸಕರ ದಿನಾಂಕ ಕೇಳಲು ಹೋದ ಮುಖ್ಯ ಶಿಕ್ಷಕರು ಮತ್ತು ಎಸ್ ಡಿ ಎಂ ಸಿ ಅಧ್ಯಕ್ಷರ ಪಡಿಪಾಟಲು ನೋಡಿದ ಶಾಸಕರ ಪಿ.ಎ‌. ‘ಇದರ ಉದ್ಘಾಟನೆಗೆ ಸಾಹೇಬರೇ ಬರಬೇಕೆಂದೇನೂ ಇಲ್ಲ . ಇಂತಹ ಸಣ್ಣಪುಟ್ಟ ಕಾರ್ಯಕ್ರಮಗಳಿಗೆ ಅವರನ್ನು ಆಹ್ವಾನಿಸದಿದ್ದರೂ ಅವರೇನು ಬೇಸರಿಸಿಕೊಳ್ಳುವುದಿಲ್ಲ. ಊರಿನ ಮುಖ್ಯಸ್ಥರನ್ನೇ ಕರೆದು ಉದ್ಘಾಟನೆ ಮುಗಿಸಿಬಿಡಿ’ ಎಂಬ ಸಲಹೆಯನ್ನೂ ನೀಡಿದ‌‌. ಆದರೆ ಮುಖ್ಯ ಶಿಕ್ಷಕರಿಗಿದು ಸುತಾರಾಂ ಒಪ್ಪಿಗೆಯಾಗಲಿಲ್ಲ. ಇನ್ನೂ ಏನೇನೋ ಕೆಲಸಗಳಿಗೆ ಎಂಎಲ್ಎ ಸಾಹೇಬರ ಬಳಿ ಹೋಗಲೇಬೇಕಾಗುತ್ತದೆ. ಖುದ್ದು ಅವರ ಅನುದಾನದಲ್ಲಿ ನಿರ್ಮಿಸಿದ ಈ ಶೌಚಾಲಯವನ್ನು ಉದ್ಘಾಟಿಸುವ  ನೈತಿಕ ಹಕ್ಕು ಮತ್ತು ಅಧಿಕಾರ ಅವರಿಗಲ್ಲದೆ ಮತ್ಯಾರಿಗೂ ಇಲ್ಲ ಎಂಬುದು ಅವರ ವಾದ. ಹಾಗಾಗಿ ಶಾಸಕರ ಬಿಡುವಿನ ದಿನಾಂಕಕ್ಕಾಗಿ ಕಾಯೋಣ ಎಂಬ ತೀರ್ಮಾನಕ್ಕೆ ಬರಲಾಯಿತು. ಇತ್ತ ವಿದ್ಯಾರ್ಥಿಗಳು ಮಾತ್ರ ಕ್ಲೋಸ್ಡ್ ಕೊಠಡಿಯೊಳಗೆ ಮೂತ್ರ ಮತ್ತು ಮಲವಿಸರ್ಜನೆ ಮಾಡುವ ದಿನಕ್ಕಾಗಿ ಕಾಯುತ್ತಲೇ ಇದ್ದರು.

ಎರಡು ತಿಂಗಳ ನಂತರ ಶಾಸಕರನ್ನು ಆಹ್ವಾನಿಸಲು ಹೋದ ಮುಖ್ಯ ಶಿಕ್ಷಕರಿಗೆ ಮತ್ತೊಂದು ಶಾಕ್ ಕಾದಿತ್ತು. ತಮ್ಮ ಜಿಲ್ಲೆಯ ಸಂಸದರ ಅಕಾಲಿಕ ಮರಣದಿಂದಾಗಿ ತೆರವಾಗಿದ್ದ ಆ ಸ್ಥಾನಕ್ಕಾಗಿ ಉಪಚುನಾವಣೆ ಘೋಷಣೆಯಾಗಿದ್ದು, ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದುಬಿಟ್ಟಿತ್ತು. ಹಾಗಾಗಿ ಯಾವುದೇ ರಿಬ್ಬನ್ ಕಟ್ ಮಾಡುವಂಥ ಕಾರ್ಯಕ್ರಮದಲ್ಲಿ ಶಾಸಕರು ಭಾಗಿಯಾಗುವಂತಿರಲಿಲ್ಲ. ಚುನಾವಣೆ ಹಿಂದು ಮುಂದೆ ಎಂದು ಮತ್ತೊಂದು ತಿಂಗಳು ಕಳೆದೇ ಹೋಯಿತು.

ಈ ಬಾರಿ ಮುಖ್ಯ ಶಿಕ್ಷಕರಿಗೆ ತಿಳಿಯುವ ಮೊದಲೇ ಶಾಸಕರು ಮುಖ್ಯಮಂತ್ರಿಗಳ ಜೊತೆಯಲ್ಲಿ ಕೃಷಿ ಪದ್ದತಿ ಮತ್ತು ಗ್ರಾಮೀಣ ಅಭಿವೃದ್ಧಿಯ ಬಗೆಗಿನ ಹೆಚ್ಚಿನ ಅಧ್ಯಯನಕ್ಕಾಗಿ ೨೦ ದಿನಗಳ ವಿದೇಶ ಪ್ರವಾಸ ಹೊರಟಿದ್ದರು. ಅವರ ಆಫೀಸು ತನಕ ಹೋದ ಶಿಕ್ಷಕರು ಸಮುದ್ರದಾಟಿ ಹೊರಟವರನ್ನು ಶೌಚಾಲಯ ಉದ್ಘಾಟನೆಗೆ ಕರೆಯುವುದೆಂಥ ಸಂಯಮ ಅಂದುಕೊಂಡು ವಾಪಸ್ಸಾದರು.

ಹೇಗೋ ಮಾಡಿ ಅಲ್ಲಿಂದ ಅವರು ವಾಪಸ್ಸಾದ ತಕ್ಷಣ ಒಂದು ದಿನಾಂಕ ನಿಗದಿಯಾಯಿತು. ಶಾಲೆಯಲ್ಲಿ ಶೌಚಾಲಯ ಉದ್ಘಾಟನಾ ಕಾರ್ಯಕ್ರಮಕ್ಕಾಗಿ ಇಡೀ ಊರೇ ಸಿದ್ಧಗೊಂಡಿತ್ತು. ಬೆಳಿಗ್ಗೆ  ಒಂಭತ್ತು ಘಂಟೆಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ರಾಜಧಾನಿಗೆ ತೆರಳುವುದು ಶಾಸಕರ ಕಾರ್ಯಕ್ರಮ ಪಟ್ಟಿಯಲ್ಲಿ ನಿಗದಿಯಾಗಿತ್ತು.

ಆದರೆ ಅದೇನು ದೌರ್ಭಾಗ್ಯವೋ ? ಹಿಂದಿನ ದಿನ ರಾತ್ರಿ ಅವರ ಪಕ್ಷದ ಹಿರಿಯ, ನಿವೃತ್ತ, ಪ್ರಭಾವಿ ರಾಜಕಾರಣಿಯೊಬ್ಬರು ಹೃದಯಾಘಾತದಿಂದ ನಿಧನ ಹೊಂದಿದ ಕಾರಣ ರಾಜ್ಯಾದ್ಯಂತ ಎಲ್ಲ ಕಾರ್ಯಕ್ರಮಗಳು ರದ್ದಾಗಿ ಮೂರು ದಿನ ಶೋಕಾಚರಣೆ ಘೋಷಿಸಲಾಯಿತು. ಮುಖ್ಯ ಶಿಕ್ಷಕರಿಗೆ ಇನ್ನಿಲ್ಲದ ಕೋಪ ಬಂದು ತಾವೇ ಉದ್ಘಾಟಿಸಿ ಬಿಡಬೇಕೆಂದುಕೊಂಡರಾದರೂ ಧೈರ್ಯ ಸಾಲಲಿಲ್ಲ. ಕಾರ್ಯಕ್ರಮಕ್ಕೆ ತಂದಿದ್ದ ಬಿಸ್ಕತ್ತು, ಹಾಲಿನ ಪ್ಯಾಕು, ಹೂವು, ಫ್ರೂಟ್ ಬೌಲ್, ರೇಷಿಮೆ ಶಾಲು ಮುಂತಾದವುಗಳನ್ನು ತಮ್ಮ ಮನೆಗೆ ತೆಗೆದುಕೊಂಡು ಹೋದರು.

ಆಶಾಭಾವನೆಯಿಂದ ಕಾಯುತ್ತಿದ್ದ ವಿದ್ಯಾರ್ಥಿಗಳಿಗೆ ಮಾತ್ರ ಇದರಿಂದ ನಿರಾಸೆಯುಂಟಾಗಿತ್ತು. ಯಾವಾಗಲೂ ಬೀಗ ಹಾಕಿರುತ್ತಿದ್ದ ಈ ಹೊಸ ಶೌಚಾಲಯಗಳ ಬಗ್ಗೆ ಅವರಲ್ಲಿ ಅಸಹನೆ ಮತ್ತು ಸಿಟ್ಟು ಉಂಟಾಗತೊಡಗಿತ್ತು. ಹೀಗಾಗಿ ಕೆಲವರು ಅದೇ ಕಟ್ಟಡಗಳ ಹಿಂಭಾಗಕ್ಕೆ ಕದ್ದು ಹೋಗಿ ಕಟ್ಟಡದ ಗೋಡೆಗೆ ಮೂತ್ರ ವಿಸರ್ಜನೆ ಮಾಡತೊಡಗಿದರು. ಈ ಬಗ್ಗೆ ಶಾಲೆಯ ಶಿಕ್ಷಕರು ಎಚ್ಚರಿಕೆ ನೀಡಿದರೂ ಅಷ್ಟೇನು ಉಪಯೋಗವಾಗಲಿಲ್ಲ. ಇದ್ದೂ ಉಪಯೋಗಕ್ಕೆ ಬಾರದ ಈ ಶೌಚಾಲಯದ ಬಗ್ಗೆ ಎಲ್ಲ ಶಿಕ್ಷಕರಿಗೂ ಒಳಗೊಳಗೇ ಕೋಪ ಇತ್ತು.

ಇದೆಲ್ಲ ಗೊಂದಲ ಮುಗಿಯುವುದರೊಳಗೆ ನಾಲ್ಕು ತಿಂಗಳು ಕಳೆದೇ ಹೋಯ್ತು. ಮಕ್ಕಳು, ಶಿಕ್ಷಕರು ತಮ್ಮ ಶಾಲೆಯಲ್ಲೊಂದು ಶೌಚಾಲಯ ನಿರ್ಮಿಸಲಾಗಿದೆ ಅದು ನಮ್ಮ ಉಪಯೋಗಕ್ಕೆ ಬರುತ್ತದೆ ಎಂಬುದನ್ನೇ ಮರೆತರು. ಹೀಗಿರುವಾಗ ಜನಾನುರಾಗಿಯಾದ ಶಾಸಕರೇ ತಮ್ಮ ಪಿಎ ಕಡೆಯಿಂದ ಕಾಲ್ ಮಾಡಿಸಿ ಮುಂಬರುವ ವಾರದಲ್ಲೊಂದು ದಿನಾಂಕವನ್ನು ತಾವೇ ನಿಗದಿ ಮಾಡಿರುವುದಾಗಿ ತಿಳಿಸಿದರು. ಮುಖ್ಯ ಶಿಕ್ಷಕರು ನಿಟ್ಟುಸಿರು ಬಿಟ್ಟು ಪುನಃ ಉದ್ಘಾಟನಾ ಕಾರ್ಯಕ್ರಮಕ್ಕೆ ಎಲ್ಲ ತಯಾರಿ ನಡೆಸಿಕೊಂಡರು.

ಕಾರ್ಯಕ್ರಮದ ದಿನ ಬಂದೇಬಿಟ್ಟಿತು. ಬೆಳಗ್ಗೆ ಹತ್ತು ಘಂಟೆಗೆ ಕಾರ್ಯಕ್ರಮದ ಸಮಯ ನಿಗದಿಯಾಗಿತ್ತು. ಶಾಸಕರು ಬಂದರು. ಮುಖ್ಯ ಶಿಕ್ಷಕರು ತನ್ನೆಲ್ಲ ಉಳಿದ ಶಿಕ್ಷಕರನ್ನು ಶಾಸಕರಿಗೆ ಪರಿಚಯಿಸಿ, ಶೌಚಾಲಯದ ಬಳಿ ಕರೆತಂದರು. ಹೂವು, ಹಾರ, ಬಂಟಿಂಗ್ಸ್ ಗಳಿಂದ ಶೌಚಾಲಯ ಕಟ್ಟಡಗಳು ಕಂಗೊಳಿಸುತ್ತಿದ್ದವು. “ಶಾಸಕರ ಅನುದಾನದಡಿಯಲ್ಲಿ ನಿರ್ಮಿಸಿದ ಕಟ್ಟಡ” ಎಂಬ ಬೋರ್ಡಿಗೆ ವಿಶೇಷವಾದ ಅಲಂಕಾರ ಮಾಡಲಾಗಿತ್ತು. ಅದನ್ನು ನೋಡಿ ಶಾಸಕರು ಮುಖ್ಯ ಶಿಕ್ಷಕರನ್ನೊಮ್ಮೆ , ಅಧ್ಯಕ್ಷರನ್ನೊಮ್ಮೆ ನೋಡಿ ಮೆಚ್ಚುಗೆಯ ನಗೆ ಬೀರಿದರು. ಅವರಿಬ್ಬರೂ ಪ್ರಫುಲ್ಲರಾಗಿ ಶಾಸಕರನ್ನು ಟೇಪ್ ಕಟ್ ಮಾಡುವಂತೆ ಸಂಜ್ಞೆ ಮಾಡಿದರು. ನೆರೆದಿದ್ದ ಎಲ್ಲರೂ ಚಪ್ಪಾಳೆ ತಟ್ಟುವುದರೊಂದಿಗೆ ಅಂತು ಇಂತು ಶೌಚಾಲಯಗಳ ಉದ್ಘಾಟನೆಯಾಯಿತು.

ಅಷ್ಟಕ್ಕೇ ಸುಮ್ಮನಾಗದ ಶಾಸಕರು ಕಟ್ಟಡದ ಒಳಭಾಗವನ್ನು ನೋಡಬೇಕೆಂದು ಬಯಸಿದ್ದರಿಂದ ಅದರ ಬೀಗ ತೆಗೆಸಿ ಶಾಸಕರೇ ಬಾಗಿಲು ತೆಗೆದರು. ಆಶ್ಚರ್ಯ ಮತ್ತು ಅಸಹ್ಯ ಒಟ್ಟೊಟ್ಟಿಗೆ ಕಾದಿತ್ತು. ಪಾಯಿಖಾನೆಯಲ್ಲಿ ಯಾರೋ ಆಗಲೇ ಕಕ್ಕಸು ಮಾಡಿ ಹೋಗಿಬಿಟ್ಟಿದ್ದರು. ಒಳಗೆ ಕಾಲಿಡುತ್ತಿದ್ದಂತೆಯೇ ಹೇಸಿಕೊಂಡ ಶಾಸಕರು ಮೂಗು ಹಿಡಿದುಕೊಂಡು ಹೊರಬಂದು ಮುಖ್ಯ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು. ಸೀದಾ ತಮ್ಮ ಕಾರಿನಲ್ಲಿ ಬಂದು ಕೂತು  ಕಾರ್ ಫ್ರೆಶನರ್ ಹಾಕುವಂತೆ ಡ್ರೈವರ್ ಗೆ ಹೇಳಿದರು. ಅವರ ಪಿಎ ಕೂಡ ಓಡಿ ಬಂದು ಕಾರ್ ಹತ್ತುತ್ತಿದಂತಯೇ ಕಾರ್ ಹೊರಟೇ ಹೋಯಿತು. ಮುಖ್ಯ ಶಿಕ್ಷಕರಿಗೆ ಏನೊಂದೂ ತೋಚದೆ ದಂಗು ಬಡಿದಿದ್ದರು.

*                     *                    *                      *

ಊರಿನಲ್ಲೆಲ್ಲಾ ದೊಡ್ಡ ಸುದ್ದಿಯಾದ ಈ ಪ್ರಮಾದದ ಬಗ್ಗೆ ಮುಖ್ಯ ಶಿಕ್ಷಕರು ಖುದ್ದಾಗಿ ಎಲ್ಲ ಮಕ್ಕಳನ್ನು ಸಾಲಾಗಿ ನಿಲ್ಲಿಸಿ ಬೆತ್ತದ ರುಚಿ ತೋರಿಸಿ ತನಿಖೆ ನಡೆಸಿದಾಗ ಇದರ ಹಿಂದಿನ ತಪ್ಪಿತಸ್ಥ ಹೊರಬಿದ್ದ. ಅದೇ ಶಾಲೆಯ ವಿದ್ಯಾರ್ಥಿಯಾಗಿದ್ದ ಬಂಗಾರು ಸ್ವಾಮಿಯು ತಿಂಗಳುಗಟ್ಟಲೆ ಉದ್ಘಾಟನೆಯಾಗದ ಈ ಶೌಚಾಲಯದಲ್ಲಿ ನಾನೇ ಮೊದಲು ಶೌಚ ಮಾಡಿ ಉದ್ಘಾಟಿಸುತ್ತೇನೆ ಎಂದು ತನ್ನ ಗೆಳೆಯರೊಂದಿಗೆ ಪಣ ಕಟ್ಟಿಕೊಂಡು ಉದ್ಘಾಟನಾ ಸಮಾರಂಭದ ಹಿಂದಿನ ಸಂಜೆ ಹೊತ್ತಲ್ಲಿ ಬಂದು ಕಟ್ಟಡಗಳಿಗೆ ಮೇಲ್ಛಾವಣಿಯಾಗಿ ಬಳಸಿದ್ದ ದಪ್ಪನೆಯ ತಗಡುಗಳನ್ನು (ಮೇಲ್ಛಾವಣಿಯನ್ನು ಸಿಮೆಂಟಿನಲ್ಲಿ ಯಾಕೆ ಕಟ್ಟಿಲ್ಲ ಎಂಬುದನ್ನು ಸ್ವತಃ ಕಂಟ್ರಾಕ್ಟರ್ ಆಗಿದ್ದ ಎಸ್ ಡಿ ಎಂ ಸಿ ಅಧ್ಯಕ್ಷರೇ ಹೇಳಬೇಕು ) ಸರಿಸಿಕೊಂಡು ಒಳ ಜಿಗಿದು ಮಲವಿಸರ್ಜನೆ ಮಾಡಿ ವಾಪಾಸ್ ಹೋಗಿದ್ದ.

ಈ ವಿಷಯ ತಿಳಿಸಲೆಂದು ಕೆಲದಿನಗಳ ನಂತರ ಶಾಸಕರ ಕಛೇರಿಗೆ ಬಂದ ಮುಖ್ಯ ಶಿಕ್ಷಕರು ಆ ದಿನ ತಂದ ಸನ್ಮಾನದ ಸರಂಜಾಮುಗಳನ್ನೆಲ್ಲ ಶಾಸಕರ ಟೇಬಲ್ ಮೇಲಿಟ್ಟು ಒಪ್ಪಿಸಿಕೊಳ್ಳುವಂತೆ ವಿನಯವಂತಿಕೆಯಿಂದ ನಿಂತರು.  ಆ ಶಾಸಕರಿಗೆ ಅದ್ಯಾವುದೂ ನೆನಪಿನಲ್ಲಿರುವಂತೆ ಕಾಣಲಿಲ್ಲ. ‘ಈಗ ಯಾವುದು ಹೊಸ ಅನುದಾನ ಗ್ರಾಂಟ್ ಮಾಡೋಕೆ ಆಗೊಲ್ಲ ಮೇಷ್ಟ್ರೇ ಮುಂದೆ ಯಾವಾಗಲಾದರೂ ನೋಡೋಣ’ ಎಂದ ಶಾಸಕರ ಮಾತಿಗೆ ‘ ಆಗಲಿ ಸರ್’ ಎಂದು ತಲೆಯಲ್ಲಾಡಿಸಿ ಮುಖ್ಯ ಶಿಕ್ಷಕರು ಹಿಂತಿರುಗಿದರು.

ಹಾಗೆ ಹಿಂತಿರುಗಿದವರು ಶಾಲೆಗೆ ಬಂದು ಬಂಗಾರು ಸ್ವಾಮಿಗೆ ಮಾತ್ರ  ನೀಡಿದ್ದ ‘ಶೌಚಾಲಯ ಬಳಕೆಯ ನಿಷೇಧ’ ದಂಥ ಕಠಿಣ ಶಿಕ್ಷೆಯನ್ನು ಹಿಂಪಡದರು. ಅಲ್ಲಿಗೆ ಈ ಪ್ರಕರಣ ಸುಖಾಂತ್ಯ ಕಂಡಿತು.

1 comment

  1. ಅದ್ಭುತವಾದ ಪ್ರಸಂಗ ಸಹಿತ ಸೌಚಾಲಯ ಉದ್ಘಾಟನೆ ಕಾರ್ಯಕ್ರಮ ಚೆನ್ನಾಗಿತ್ತು.

Leave a Reply