‘ಫಾರಿನ್’ ಬಯಲಾಟ

ನಾನು ಹಿಂದೆಯೇ Itfok ನ ಕುರಿತು ಹೇಳೋವಾಗ ಅಲ್ಲಿರೋ ಬೇರೆ ಬೇರೆ ರಂಗಸ್ಥಳಗಳ ಕುರಿತು ಚಿಕ್ಕದಾಗಿ ಹೇಳಿದ್ದೆ. ಒಮ್ಮೆ ನಾಟಕೋತ್ಸವದ ಕ್ಯಾಂಪಸ್ ಹೊಕ್ರೆ ಬೇರೆ ಬೇರೆ ರೀತಿಯ ಅರೆನಾಗಳನ್ನ ಕಾಣ್ಬಹುದು. ಅಕಾಡಮಿ ಕ್ಯಾಂಪಸ್ ಪಕ್ಕದಲ್ಲೇ ಇರೋ ಬಯಲಲ್ಲಿ ಉತ್ಸವದ ಹೊತ್ಗೆ ಬಯಲು ರಂಗಸ್ಥಳವೊಂದು ಸಿದ್ಧವಾಗಿರ್ತದೆ. ಪ್ರತಿ ವರ್ಷವೂ ಹೆಚ್ಚು ಹೆಚ್ಚು ಇಂಪ್ರೂವ್ ಆಗ್ತಾ ಹೊಸ ಹೆಸರು ಪಡೆದುಕೊಳ್ತಾ ಹೋಗ್ತಿರ್ತದೆ.

ಇದೊಂದು ವಿಶಿಷ್ಟ ಅರೆನಾ. ಒಂಥರಾ ಸರ್ಕಸ್ ನಂತೆ. ಆದ್ರೆ ಡೇರೆಯಿಲ್ಲ. ಸುಮಾರು ಮೂವತ್ತು ಐವತ್ತು ಮೀಟರ್ ನ ದೊಡ್ಡ ಅಭಿನಯದ ಸ್ಪೇಸ್. ಈ ಸ್ಪೇಸ್ ನಲ್ಲಿ ನಾಟ್ಕದವರಿಗಂತೂ ಫುಲ್ ಫ್ರೀಡಮ್. ಹೊಂಡ ತೊಡೋದಕ್ಕೂ, ಕಂಭ ನೆಡೋದಕ್ಕೂ, ಬೆಂಕಿ ಹಾಕೋದಕ್ಕೂ…

ಸುತ್ತಲೂ ಪ್ರೇಕ್ಷಕರು ಕೂರೋದಕ್ಕೆ ನೆಲದ ಹಾಸು, ಗ್ಯಾಲರಿ. ಮೇಲೆ ನಕ್ಷತ್ರದಾಕಾಶ. ತಂಗಾಳಿ. ಆಹಾ! ಇನ್ನೇನು ಬೇಕು ಖುಶಿಯಿಂದ ಕೂತು ನಾಟ್ಕ ನೋಡೋದಕ್ಕೆ.
ಈ ಹೊಸ ತೆರನ ಬಯಲಲ್ಲಿ ನಾನು ನೋಡಿದ ಮೊದಲ ನಾಟ್ಕ ‘Lost wheels of Time’

Lost Wheels of Time
Played by: Serious Clowns Germany
Created and performed by: Adamread and Fyodor Makrov

 

ಇದೊಂದು ಹೊರಾಂಗಣದ ಕ್ಲೌನ್ ಶೋ. ಮಕ್ಳಿಗೂ, ದೊಡೋರ್ಗೂ ತುಂಬ ಇಷ್ಟವಾಗೋ ಪುಟ್ಟ ಶೋ. ಇಬ್ಬರು ಕಾರ್ಟೂನ್ ಥರದ ವ್ಯಕ್ತಿಗಳ ನಡುವಿನ ಕಥೆ. ಇವರಿಬ್ರೂ ತುಂಬಾ ತುಂಬಾ ಗೆಳೆಯರು. ಒಬ್ರ ಬಿಟ್ಟು ಒಬ್ರು ಇರೋವ್ರಲ್ಲ. ಆದ್ರೆ ದಿನಾ ಕಚ್ಚಾಡೋರು. ಮತ್ತೆ ಒಂದಾಗೋರು. ಯಾವ ವಿಷ್ಯದಲ್ಲೂ ಏಕಾಭಿಪ್ರಾಯ ಇಲ್ದೋರು. ಆದ್ರೂ ಅಂಟಿಕೊಂಡೇ ಇರೋರು.ಇವರಿಬ್ರ ಮಧ್ಯೆ ನಡೆಯೋ ಮೋಜಿನ ಘಟನೆಗಳ ಮೂಲಕವೇ ನಾಟ್ಕ ನಾವು ಕಳೆದುಕೊಂಡ ಮಧುರ ಕ್ಷಣಗಳನ್ನ ನೆನಪಿಸ್ತದೆ. ಹಳೆಯ ಹೊಸ ತಲೆಮಾರುಗಳ ಸಂಘರ್ಷದ ಕಥೆ ಹೇಳ್ತದೆ. ಮನುಷ್ಯ, ನಿಸರ್ಗದ ಸಂಬಂಧಗಳ ಕುರಿತು ಮಾತಾಡ್ತದೆ. ನಮ್ಮೊಳಗೇ ಇರೋವಂಥ ವಿಭಿನ್ನ ವ್ಯಕ್ತಿತ್ವಗಳ ಬಗ್ಗೆ ಚುಚ್ತದೆ.

ಜಗತ್ತಿನ ಬೇರೆ ಬೇರೆ ಭಾಗದಿಂದ ಬಂದಿರೋ ಕಲಾವಿದರಿಬ್ರು ತಾವು ಜಗತ್ತನ್ನ ಕಂಡ ಅನುಭವದ ಮೇಲೆ ಕಟ್ಟಿರೋ ಶೋ ಇದು. ಇವರಿಬ್ರೂ ಕಾರ್ಟೂನ್ ನ ಅತಿ ಲವಲವಿಕೆಗಳನ್ನ ಇಟ್ಕೊಂಡೇ, ಅಂಥ ದೊಟ್ಟ ಸ್ಪೇಸ್ ನ್ನ ಉಪಯೋಗಿಸಿಕೊಳ್ಳೋದಿದೆಯಲ್ಲ ಆ ಪರಿ ನಿಜಕ್ಕೂ ಅಪರೂಪದ್ದು. ದೊಡ್ಡ ಬಯಲಲ್ಲಿ ಓಡಾಡ್ತಾನೇ, ಆಡ್ತಾನೇ. ಮಾಸ್ಕ್ ಗಳನ್ನ ಕಳಚ್ತಾ, ತೊಟ್ಕೊಳ್ತಾ, ಬದುಕಿನ ನಾನಾ ಭಾವಗಳನ್ನ ವ್ಯಕ್ತಪಡಿಸೋ ಪರಿ, ಜೊತೆಗೇನೆ ಕಾರ್ಟೂನ್ ಪಾತ್ರಗಳ ಮೂಲಕಾನೇ ಗಂಭೀರವಾದ ಸಂದೇಶವನ್ನ ಮುಟ್ಟಿಸೋದಿದೆಯಲ್ಲ, ಅದು ಅದ್ಭುತ. ನಿಜಕ್ಕೂ ನಾ ಕಂಡ ಮೊದಲ ಅಪರೂಪದ ಕ್ಲೌನ್ ಶೋ ಇದು.

ಇದು ಹೀಗಾದ್ರೆ, ಬಂಗಾಲೀ ನಾಟ್ಕ ‘ ಅಂಧಾ ಯುಗ್’ ಕೊಡೋ ಅನುಭವಾನೇ ಬೇರೆ.
‘ಅಂಧಾ ಯುಗ್’
ಮೂಲ: ಧರ್ಮವೀರ ಭಾರತಿ
ಪ್ರದರ್ಶನ ರೂಪ/ವಿನ್ಯಾಸ/ನಿರ್ದೇಶನ: ಕಲ್ಲೋಲ್ ಭಟ್ಟಾಚಾರ್ಯ

ಇಲ್ಲಿ ಇಡೀ ರಂಗವೂ ಯುದ್ಧಭೂಮಿಯೇ. ಹಾಗೆ ನೋಡಿದರೆ ‘ಅಂಧಾಯುಗ್’ ಕ್ಕೆ ಇದಕ್ಕಿಂತ ಬೆಸ್ಟ್ ಸ್ಪೇಸ್ ಸಿಗೋದಕ್ಕೇ ಸಾಧ್ಯವಿಲ್ಲ ಎನ್ನೋ ಥರ. ಇಂಥ ಸ್ಪೇಸ್ ಗಾಗೇ ನಾಟ್ಕ ವಿನ್ಯಾಸವಾದಹಾಗಿದೆ. ರಂಗದ ಸುತ್ತಲೂ ಹುಗಿದ ಕೆಂಪು, ಕೆಂಪು ಗೂಟಗಳು. ಒಂದು ಬದಿಯಲ್ಲಿ ದೊಡ್ಡ ಹೊಂಡ, ಇನ್ನೊಂದು ಬದಿಯಲ್ಲಿ ತುಂಬಿದ ಗೋಣಿ ಚೀಲಗಳ ಪ್ಲಾಟ್ಫಾರ್ಮ್.

‘ಅಂಧಾಯುಗ್’ ಬಹುಷಃ ಎಲ್ಲರಿಗೂ ಗೊತ್ತಿರೋ ಕಥೇನೇ. ಮಹಾಭಾರತ ಯುದ್ಧದ ಹದಿನೆಂಟನೆಯ ದಿನ. ದುರ್ಯೋಧನ ಹತನಾಗಿದ್ದಾನೆ. ದ್ರೋಣಾಚಾರ್ಯರ ಹತ್ಯೆಯ ಸೇಡಿಗಾಗಿ ಹೊರಟ ಅಶ್ವತ್ತಾಮ, ಉಪಪಾಂಡವರನ್ನ ಕೊಂದುಬಿಟ್ಟಿದ್ದಾನೆ. ಸರಿ, ಅವನನ್ನ ಕೊಂದು ಬನ್ನಿ ಅಂತ ದ್ರೌಪದಿ ಗಂಡಂದಿರನ್ನ ಕಳಿಸ್ತಾಳೆ. ಅಶ್ವತ್ಥಾಮ ಬ್ರಹ್ಮಾಸ್ತ್ರ ಬಿಡ್ತಾನೆ. ಅದು ಉತ್ತರೆಯ ಗರ್ಭದಲ್ಲಿರೋ ಪರೀಕ್ಷಿತನನ್ನ ಕೊಲ್ತದೆ. ಮತ್ತೆ ಕೃಷ್ಣ ಅವನನ್ನ ಬದುಕಿಸ್ತಾನೆ. ಕ್ರಷ್ಣ ಅಶ್ವತ್ಥಾಮನಿಗೆ ಶಾಪ ಕೊಡ್ತಾನೆ.

“ಜೀವನಪರ್ಯಂತ ಅಂಗವಿಕಲನಾಗಿ ಅಲೆದಾಡು” ಅಂತ. ಇತ್ತ, ದುರ್ಯೋಧನನ ಹೆಣದೆದುರು ಕೂತು ಗಾಂಧಾರಿ ಕೃಷ್ಣನ್ನ ಸಿಕ್ಕಾಪಟ್ಟೆ ಬೈತಾಳೆ. ಯದ್ಧಭೂಮಿಯನ್ನ ಕ್ಲೀನ್ ಮಾಡೋ ಕೆಲ್ಸ ಶುರುವಾಗ್ತದೆ. ಯುಯುತ್ಸುವಿನ ಬಂಡಾಯ, ಲ್ಯಾಂಡ್ ಮೈನ್ ಗಳು….. ಪ್ರಯೋಗದ ತುಂಬೆಲ್ಲ ಶಾಪಗಳು, ಬಾಣಗಳು, ಸಾವು. ಹೀಗೆ ಹೀಗೆ ಸಿಕ್ಕಾಪಟ್ಟೆ ಹೈ ವೋಲ್ಟೇಜ್. ಈ ವಿಶಾಲವಾದ ಜಾಗದ ತುಂಬ ಚಕ ಚಕನೆ ನಡೆಯೋ ಚಲನೆಗಳು. ಭರಫೂರ ಮಾರ್ಶಲ್ ಆರ್ಟ್, ಬೆಂಕಿ, ಭಲ್ಲೆ, ಹೆಣಗಳು, ಲೌಡ್ ಅನ್ನಬಹುದಾದ ಸಂಗೀತ.
ಮಹಾಭಾರತದ ಈ ಕಥೇನ ಸಾಕಷ್ಟು ಕಂಟೆಂಪರರಿಯಾಗಿಸಿದ್ದಾರೆ ನಿರ್ದೇಶಕರು. ಅದರಲ್ಲೂ ಯುಧಿಷ್ಠಿರನ ರಾಜ್ಯಾಭೀಷೇಕದ ನಂತರ ನಾಟ್ಕ ಫುಲ್ ಕಂಟೆಂಪ್ರರೀನೇ. ನೇರಾ ನೇರ ಈಗಿನ ರಾಜಕೀಯಕ್ಕೇ ಬಾರಿಸೋ ಹಾಗೆ. ತುಂಬ ಥಿಕ್ ಆದ ರಂಗರೂಪದ ಮೂಲಕ ಇಡಿಯ ನಾಟ್ಕದ ಒಳ ಹರಿವಾದ ಯುದ್ಧ ವಿರೋಧೀ ಆಶಯವನ್ನ ನಾಟ್ಕದುದ್ದಕ್ಕೂ ಜೀವಂತವಾಗಿಡ್ತಾರೆ.

ಈ ಬಾರಿ ತ್ರಿಶೂರ್ ನಾಟಕ ಶಾಲೆಯ ಹುಡುಗರು Transformation ಎನ್ನೋ ನಾಟಕ ಆಡಿದ್ರು. ಇದು ಇನ್ನೂ ಬೇರೆಯೇ ಅನುಭವ.
Transformation
School Of Drama Trissur
Directed by: Vinod.V.Narayanan

ಲಾಗಾಯ್ತಿನಿಂದ್ಲೂ ದಲಿತರು ಅನುಭವಿಸ್ತಿರೋ ಯಾತನೆ, ಸಂಕಟ, ಹೇಗೆ ಅವರ ಅಭಿವೃದ್ಧಿಗಾಗಿ ಕೈಗೊಂಡಿರೋ ಕಾರ್ಯಕ್ರಮಗಳು ಕೂಡ ಮೇಲ್ವರ್ಗದವರಿಂದ ಕ್ರೂರವಾಗಿ ವಿರೋಧಿಸಲ್ಪಡ್ತಿದೆ ಎನ್ನೋ ಹಿನ್ನೆಲೆಯ ನಾಟ್ಕ ಇದು. ಇತ್ತೀಚೆಗೆ ನಡೆದ ಕೆಲವು ಘಟನೆಗಳನ್ನ ಆಧಾರವಾಗಿಟ್ಕೊಂಡು, ಜನ ಸೇರುವ ಪ್ರದೇಶಗಳನ್ನೇ ಈ ವಸ್ತುವಿಗೆ ಹಿನ್ನೆಲೆಯಾಗಿ ಕಂಡ್ಕೊಳ್ತಾ ಈ ನಾಟಕ ನಡೀತದೆ.

ಇಲ್ಲಿರೋ ದೊಡ್ಡ ಕ್ಯಾನ್ವಾಸನ್ನ ಯಥೇಚ್ಷವಾಗಿ ಬಳಸಿಕೊಂಡ ನಾಟ್ಕ ಇದು. ನಾಟ್ಕದಲ್ಲಿ ಬುರಬುರನೆ ಕಾರ್ ಗಳು ಬಂದು ಹೋಗ್ತವೆ. ಮೆರವಣಿಗೆಗಳು ನಡೀತವೆ. ದೊಡ್ಡ ದೊಡ್ಡ ಏಣಿಗಳನ್ನ ರೂಪಕವಾಗಿಸಿಕೊಂಡ ಕದನಗಳು ನಡೀತವೆ. ಇವೆಲ್ಲವಕ್ಕೆ ಸಾಥ್ ನೀಡೋ ಹಾಗೆ ಗದ್ದರ್ ಮತ್ತು ಶೀತಲ್ ಸಾಠೆ ಯವರ ದಲಿತ ಹಾಡಿಗಳಲ್ಲಿ ಮಿಂದು ಹೋಗ್ತದೆ ನಾಟ್ಕ.

ಹೇಗೆ ದೊಡ್ಡ ಅಂಗಳದಲ್ಲಿ ವಿನ್ಯಾಸವಾಗಿರೋ ನಾಟ್ಕಗಳಿಗೆ ಫ್ರೀ ಸ್ಪೇಸ್ ಇರೋದರ ಹಾಗೇ ಸಾಕಷ್ಟು ಚಾಲೆಂಜ್ ಗಳೂ ಇವೆ. ಅವುಗಳನ್ನೂ ಎದುರಿಸಿ ನಾಟಕ ಕಟ್ಟಿ ಯಶಸ್ವಿಯಾಗಿಸಿದವ್ರಿಗೆ ಸಲಾಮ್.
 

2 comments

Leave a Reply