2.0: ಲೋಪಗಳನ್ನು ಮರೆಮಾಡುವ ರಜನಿಕಾಂತ್ ಎಂಬ ಅಸ್ತ್ರ!

ಅಂತಃಕರಣ

2.0 ಸಿನಿಮಾ
ಲೋಪಗಳನ್ನು ಮರೆಮಾಡುವ ರಜನಿಕಾಂತ್ ಎಂಬ ಅಸ್ತ್ರ !

ರಜನಿಕಾಂತ್ ಹಾಗೂ ಅಕ್ಷಯ್ ಕುಮಾರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸಿನೆಮಾ ‘2.0’. ಸುಮಾರು 2 ವರ್ಷಗಳಿಂದ ಈ ಸಿನೆಮಾ ಅತ್ಯಂತ ನಿರೀಕ್ಷೆ ಹುಟ್ಟಿಸುವ ಸಿನೆಮಾಗಳ ಸಾಲಿನಲ್ಲಿತ್ತು. ಅಂತೂ ಮೊನ್ನೆ ಗುರುವಾರ ಬಿಡುಗಡೆಯಾಯಿತು. ಭಾನುವಾರವಾದ ಕಾರಣ ಅಂದು ನಾನು ಈ ಸಿನೆಮಾವನ್ನು ನೋಡಿಕೊಂಡು ಬಂದೆ.

2.0 ಸಿನಿಮಾ ಭಾರತೀಯ ಸಿನಿರಂಗದ ಅತ್ಯುತ್ತಮ 3ಡಿ ಅನುಭವವನ್ನು ಹಿಂದೆಂದೂ ಆಗಿರದ ಮಟ್ಟಿಗೆ ಪ್ರೇಕ್ಷಕರಿಗೆ ನೀಡುವಲ್ಲಿ ಸಫಲವಾಗಿದೆ. ಗ್ರಾಫಿಕ್ಸ್ ಹಾಗೂ ವಿಎಫ್‍ಎಕ್ಸ್ ಕೂಡ ಬಹಳ ಚೆನ್ನಾಗಿಯೇ ಇದೆ. ಕೆಲವೊಂದು ಸನ್ನಿವೇಶಗಳಲ್ಲಿ ಅವು ತೀರಾ ಕೃತಕ ಎನ್ನಿಸುವಾಗ ಅದು ಗಮನಕ್ಕೆ ಬರದ ಹಾಗೆ ನೋಡಿಕೊಳ್ಳಲು ಸಿನೆಮಾ ತಂಡದ ಬಳಿ ಒಂದು ಅಸ್ತ್ರವಿದೆ, ಅದೇ ರಜನಿಕಾಂತ್ !

ಯಾವಾಗ ಚಿತ್ರದ ಕೆಲವು ಲೋಪಗಳು ನಮ್ಮ ಕಣ್ಣಿಗೆ ಕಾಣುತ್ತವೆಯೋ, ಆವಾಗ ರಜನಿಕಾಂತ್ ತೆರೆ ಮೇಲೆ ಕಾಣಿಸಿಕೊಂಡು ನಮ್ಮೆಲ್ಲರ ಗಮನವನ್ನು ಸೆಳೆದುಕೊಂಡು ಆ ಲೋಪಗಳನ್ನು ಮರೆ ಮಾಚುತ್ತಾರೆ. ನಿಜವಾಗಿಯೂ ರಜನಿಕಾಂತರ ಅಭಿನಯ ನಮ್ಮೆಲ್ಲರ ಹುಬ್ಬೇರಿಸುತ್ತದೆ. 67 ವರ್ಷದ ರಜನಿಕಾಂತ್ ತಮ್ಮ ವಯಸ್ಸಿನ ಸುಮಾರು ಅರ್ಧದಷ್ಟಿರುವ ಪಾತ್ರಗಳನ್ನು ಮಾಡುತ್ತಾರೆ! ಡಾ. ವಸೀಗರನ್ (ನನಗೆ ಅತ್ಯಂತ ಇಷ್ಟವಾದ ಪಾತ್ರ), ಚಿಟ್ಟಿ, ಚಿಟ್ಟಿ 2.0 ಎನ್ನುವ ಮೂರು ಬೇರೆ ಬೇರೆ ಮ್ಯಾನರಿಸಂನ ಪಾತ್ರಗಳನ್ನು ರಜನಿಕಾಂತ್ ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ.

ಅಕ್ಷಯ್ ಕುಮಾರ್ ಕೂಡ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ, ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ. ತಮ್ಮ ವಯಸ್ಸಿಗೆ ಮೀರಿದ ಪಾತ್ರವಾಗಿದ್ದರೂ ಸಹ ಅಕ್ಷಯ್ ಕುಮಾರ್ “ಪಕ್ಷಿರಾಜನ್” ಅಭಿನಯವನ್ನು ಬಹಳ ಚೆನ್ನಾಗಿ ಮಾಡಿದ್ದಾರೆ. ಅವರ ನೆಗೆಟಿವ್ ಶೇಡ್‍ನ ಪಾತ್ರಕ್ಕೆ ಬಂದರೆ ಅವರ ಗೆಟಪ್‍ನ್ನು ಇನ್ನೂ ಸಹ ಚೆನ್ನಾಗಿ ಡಿಸೈನ್ ಮಾಡಬಹುದಿತ್ತು.

ಆ್ಯಮಿ ಜಾಕ್ಸನ್ ಅವರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಅವರು ನಿರ್ವಹಿಸಿರುವ ನೀಲಾ ಪಾತ್ರವನ್ನು ಬೇರೆ ಯಾವುದೇ ಪ್ರಮುಖ ಭಾರತೀಯ ನಟಿಯು ಸಹ ಆ ಮಟ್ಟಿಗೆ ನಿರ್ವಹಿಸಲಾಗುತ್ತಿರಲಿಲ್ಲ! ‘ದಿ ವಿಲನ್’ ಸಿನೆಮಾದಲ್ಲಿ ಅವರ ಅಷ್ಟು ಚೆನ್ನಾಗಿಲ್ಲದ ಅಭಿನಯವನ್ನು ನೋಡಿದ ನಂತರದಲ್ಲಿ ಈ ಸಿನಿಮಾದಲ್ಲಿ ಅವರ ಅಭಿನಯವನ್ನು ನೋಡಿ ನಾನು ಅಚ್ಚರಿಗೊಂಡೆ.

ಸಿನೆಮಾದ ನಿಜವಾದ ಶಕ್ತಿ ನಿರ್ದೇಶಕ ಶಂಕರ್! ಅವರು ಒಂದು ಸಾಮಾನ್ಯ ಸಾಮಾಜಿಕ ಕಳಕಳಿಯ ಸಂದೇಶವನ್ನು ಎಲ್ಲಾ ರೀತಿಯ ಅದ್ದೂರಿ ವಿಷಯಗಳೊಂದಿಗೆ ಯಾರೂ ಸಹ ಊಹಿಸದ ರೀತಿಯಲ್ಲಿ ವಿಶಿಷ್ಟವಾಗಿ ನೀಡುತ್ತಾರೆ. ಮತ್ತು ಎಲ್ಲಾ ಲೋಕೇಶನ್, ಜಾಗಗಳು ಹಾಗೂ ಎಲ್ಲಾ ಪಾತ್ರಗಳಿಗೆ ನಟರನ್ನು ಬಹಳ ಬುದ್ಧಿವಂತಿಕೆಯಿಂದ ಆಯ್ಕೆ ಮಾಡಿದ್ದಾರೆ.

ನನಗೆ ಸಿನೆಮಾದಲ್ಲಿ ಹಿಡಿಸದ ಎರಡು ವಿಷಯಗಳೆಂದರೆ ಒಂದು ಸಿನೆಮಾದ ಬ್ಯಾಕ್‍ಗ್ರೌಂಡ್ ಸಂಗೀತ! ಮುಖ್ಯ ಥೀಮ್ ಸಂಗೀತವನ್ನು ‘ಥಗ್ಸ್ ಆಫ್ ಹಿಂದೊಸ್ತಾನ್’ ಸಿನೆಮಾದಲ್ಲಿ ಬಳಸಿದ ಹಾಗೆ ಇನ್ನಷ್ಟು ಸನ್ನಿವೇಶಗಳಲ್ಲಿ ಬಳಸಿದ್ದರೆ ಸಿನೆಮಾ ಮತ್ತೊಂದಿಷ್ಟು ರೋಮಾಂಚನಕಾರಿಯಾಗಿರುತ್ತಿತ್ತು.

ಇನ್ನೊಂದು ಸಿನೆಮಾದ ಕ್ಲೈಮಾಕ್ಸ್. ಕ್ಲೈಮಾಕ್ಸ್ ಎರಡನೇ ಅರ್ಧದಲ್ಲಿ ಅಕ್ಷಯ್‍ರ ಪೂರ್ವಕಥೆ ಮುಗಿದಾಕ್ಷಣ ಒಮ್ಮೆಲೆ ಬಂದ ಹಾಗಾಗುತ್ತದೆ. ಇವೆರಡು ವಿಷಯಗಳ ಹೊರತು ಪಡಿಸಿ ಇದು ನಿಜಕ್ಕೂ ಒಂದು ಉತ್ತಮ ಸಿನೆಮಾ !

Leave a Reply