ಎಷ್ಟು ಸರಳ ಅಲ್ವಾ!?

ನರಸಿಂಹ ರಾಜು ಬಿ.ಕೆ.

ಬೆಳಗ್ಗೆ ಆರು ಗಂಟೆಗೆ ನಮ್ಮಣ್ಣ ಗುರುಮೂರ್ತಿ ಪೋನ್ ಮಾಡಿ ” ಎಲ್ಲಿದಿಯಪ್ಪ! ಬಾ ಒಂದು ಮದುವೆ ಇದೆ ಅರ್ಜೆಂಟ್ ಹೊರಡು. ವಾದ್ಯಕ್ಕೆ ಹೋಗಬೇಕು” ಅಂದ
“ಅದೆಂತದಣ್ಣ, ಇವಾಗ ಇದ್ದಕ್ಕಿದ್ದಂತೆ ಮದುವೆನಾ? ಮದುವೆ ಅಂದರೆ ತಿಂಗಳುಗಳ ತಯಾರಿ ಇರ್ಬೇಕು”
ಮೊದಲೇ ನಿನಗೆ ಹೇಳಿ ಅಡ್ವಾನ್ಸ್ ಕೊಟ್ಟು ಹೇಳಿರಲಿಲ್ಲ” ಅಂತ ಅಂದೆ.

ಇದು ಅಂತ ಮದ್ವೆ ಅಲ್ಲಪ್ಪ. ಬಾ ಹೇಳ್ತೀನಿ ಲೇಟಾಗುತ್ತೆ ಮಾತಾಡಂಗಿಲ್ಲ ಇವಾಗ ಅದೆಲ್ಲಾ ಅಂದ.

ಸರಿ ಇವಾಗ ಕೆಲಸ ಮರ್ಯಾದೆ ಪ್ರಶ್ನೆ ಹೋಗಲೇಬೇಕು ಅದೂ ಅಲ್ಲದೇ ಇವತ್ತು ಭಾನುವಾರ ನಂಗೂ ಯಾವ ಕೆಲಸವೂ ಇರಲಿಲ್ಲ. ಹೊರಟೆವು.

ಚಂಗಾವರದ ಪಕ್ಕ ದೇವರಹಟ್ಟಿ ಗ್ರಾಮದಲ್ಲಿ ಮದ್ವೆ.

ಮದ್ವೆ ಹೇಗಿತ್ತು ಅಂದರೆ ಬಹಳ ಸಿಂಪಲ್. ಈ ಮದ್ವೆಗೆ ಆಹ್ವಾನ ಪತ್ರಿಕೆ ಹೊಡೆಸಿಲ್ಲ, ಶಾಸ್ತ್ರ ಕೇಳಿಲ್ಲ, ಟೈಂ ಫಿಕ್ಸ್ ಮಾಡಿಲ್ಲ. ಬರೋ ನೆಂಟರಿಗೆ ಒಂದಿಷ್ಟು ಊಟ ತಯಾರಿ ನಡೆದಿತ್ತು.
ಅದೇ ಊರಿನ ಕಾಡುಗೊಲ್ಲರ ಮಾರಮ್ಮನ ದೇವರ ಪೂಜಾರಿ ಕಲ್ಲುಮನೆ ಮಾರಣ್ಣ ಹತ್ತಿ ಗಿಡದ ಕೊನೆ ತಂದು ದೇವರ ಗುಡಿ ಮುಂದೆ ಇಟ್ಟು ಎರಡು ಹಾರ ತಂದು, ಇಬ್ಬರಿಗೂ ಹಾಕಿ, ಇಡೀ ಸಮುದಾಯದವರನ್ನು ಅಪ್ಪಣೆ ಕೇಳೋಕೆ ಮುಂದಾದರು

ಕರೇಕಂಬಳಿ ರತ್ನ ಸಿಂಹಾಸನ
ಅಂಚಿನ ದಟ್ಟಿ – ಕಂಚಿನ ಕಡಗ
ಕಳ್ಳೆಬೇಲಿ- ಬಿದಿರು ಕೋಲು
ನಾರುಗಳ್ಳಿ- ಚಿಪ್ಪುಗೊಡಲಿ
ರೊಪ್ಪದ ಕುರಿ – ಜನಿಗೆ ಹಾಲು
ಹಟ್ಟಿಗೊಲ್ಲರ ವಂಶಕ್ಕೆ ಸೇರಿದಂತ
ಮೂರುಕಟ್ಟೆ ಮುನ್ನೂರು ಸಾವಿರ ಬಳಗ
ಹಟ್ಟಿ ಕುಲಸ್ವಾಮಿಗಳು
ಕಟ್ಟೇಮನೆ ಕುಲಸ್ವಾಮಿಗಳು
ನಾಡ ಗೌಡ- ಯಜಮಾನ,
ಪೂಜಾರಪ್ಪಗಳು ಹನ್ನೆರಡು ಮಂದಿ ಕೈವಾಡದವರು ತಾಳಿ ಕಟ್ಟೋಕೆ ಅಪ್ಪಣೆ ಕೊಟ್ಟರಾ ಸ್ವಾಮಿ?! ಅಂತ ಕೇಳಿದರು ಅಲ್ಲಿ ಸೇರಿದ್ದವರೆಲ್ಲಾ ಸ್ವಾಮಿ ಅಪ್ಪಣೆ ! ಸ್ವಾಮಿ ಅಪ್ಪಣೆ! ಸ್ವಾಮಿ ಅಪ್ಪಣೆ ! ಅಂದರು.

ತಾಳೆ ಕಟ್ಟಿದರು!
ಮದುವೆ ಮುಗಿಯಿತು.

ಎಷ್ಟು ಸರಳ ಅಲ್ವಾ!?

ಹೊಸ ಜೋಡಿಗೆ ಶುಭವಾಗಲಿ

1 comment

  1. ಇಷ್ಟೊಂದು ಸರಳ ಮದುವೆ ಕೇಳಿರಲಿಲ್ಲ. ನೂತನ ವಧು-ವರರಿಗೆ ಹಾರ್ದಿಕ ಶುಭಾಶಯಗಳು.

Leave a Reply