ಆತ ತನ್ನನ್ನೇ ತಾನು ಶಿಕ್ಷಿಸಿಕೊಂಡ..

ನಮ್ಮ ಮನೆ ಸಂಘಟಕರ, ಕಾರ್ಯಕರ್ತರ ತರಬೇತಿ ಕೇಂದ್ರದಂತಿತ್ತು.

ಅಣ್ಣನ ಸಂಘಟನಾ ಸಾಮರ್ಥ್ಯಕ್ಕೆ ಅನುಗುಣವಾಗಿ ಸ್ಥಾನಮಾನಗಳೇನೂ ಅವನಿಗೆ ಸಿಕ್ಕಿಲ್ಲ. ಆತ ಕನ್ನಡ ಶಾಲೆಯ ಮಾಸ್ತರನಾಗಿರುವುದು ಒಂದು ಮುಖ್ಯ ಕಾರಣವಾದರೆ, ಇನ್ನೊಂದು ಆತನ ಮುಜುಗರ. ಅವಕಾಶ ಬಂದಾಗ ಇನ್ನೊಬ್ಬರನ್ನು ತೋರಿಸಿ ಸಂತೋಷಪಡುವ ಆತನ ಸ್ವಭಾವ.

ಬಂಡಾಯ ಸಾಹಿತ್ಯ ಸಂಘಟನೆ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯನಾಗಿ ಇಡೀ ಜಿಲ್ಲೆಯಲ್ಲಿ ಒಂದು ವೈಚಾರಿಕ ಸಂಘರ್ಷವನ್ನು ಹುಟ್ಟುಹಾಕುವಲ್ಲಿ ಆತ ಯಶಸ್ವಿಯಾಗಿದ್ದ. ಜಿಲ್ಲಾ ಮಟ್ಟದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ, ಕನ್ನಡ ಕ್ರಿಯಾ ಸಮಿತಿ, ಚಿಂತನ ಉತ್ತರ ಕನ್ನಡ, ಸಾಕ್ಷರತಾ ಆಂದೋಲನ… ಹೀಗೆ ಕೆಲವು ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ, ಮಾರ್ಗದರ್ಶನ ಮಾಡುತ್ತಿದ್ದ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಾರಂಭದಿಂದಲೂ ಆತ ಸಂಘಟನೆಯ ಕಾರ್ಯದಲ್ಲಿ ಎತ್ತಿದ ಕೈ. ಕಿಸೆಯಿಂದ ಆತ ಹಣ ಕಳೆದುಕೊಂಡಿದ್ದು (ಅದು ಕಳೆದದ್ದಲ್ಲ, ಬೆಳೆಸಿದ್ದು) ಸಂಘಟನೆಯ ಕಾರಣದಿಂದ, ಅರೆಅಂಗಡಿಯಲ್ಲಿ ಆತ ಜಿ.ಆರ್.ಭಟ್ಟ, ಲೋಕೇಶ್ವರ ಮಾಸ್ತರರು, ಜಿ.ವಿ.ಹೆಗಡೆ, ಕೆ.ಎಸ್.ಹೆಗಡೆ ಮುಂತಾದವರೊಂದಿಗೆ ಕಟ್ಟಿದ ಕರ್ನಾಟಕ ಸಂಘ ಹಲವು ಕಾರ್ಯಕ್ರಮ ಸಂಘಟಿಸಿತ್ತು. ಅ.ನ.ಕೃ. ಬೇಂದ್ರೆಯಂತವರನ್ನು ಅವರು ಕರೆಸಿ ಇಂಥ ಸಣ್ಣ ಊರಿನಲ್ಲಿಯೂ ಸಾಹಿತ್ಯದ ವಾತಾವರಣ ರೂಪಿಸಿದ್ದರು.

ಹೊನ್ನಾವರದ ಕರ್ನಾಟಕ ಸಂಘವಂತೂ ಪ್ರಸಿದ್ಧವಾದದ್ದು. ಅಂಕೋಲೆ ಕರ್ನಾಟಕ ಸಂಘ ಮತ್ತು ಹೊನ್ನಾವರ ಕರ್ನಾಟಕ ಸಂಘ ಒಂದು ರೀತಿಯಲ್ಲಿ ಸ್ಪರ್ಧೆಯಲ್ಲಿತ್ತು. ಅಂಕೋಲೆಯ ಕರ್ನಾಟಕ ಸಂಘ ಈಗಲೂ ಕಾರ್ಯಕ್ರಮ ಮಾಡುತ್ತಿದೆ ಎನ್ನುವುದು ಸಂತೋಷದ ಸಂಗತಿ. ಹೊನ್ನಾವರದಲ್ಲಿ ಎನ್.ಆರ್. ನಾಯಕ, ಎ.ಕೆ. ಶೇಟ್, ಅವಧಾನಿಯವರು, ಹುಣಸಿಕಟ್ಟಿ.. ಹೀಗೆ ಹಲವರಿಗೆ ಈತ ಸಾಥ್ ನೀಡಿದ್ದ.

 

ಹಲವು ಸಂಘಟನೆಗಳಿಗೆ ಬೈಲಾ ಬರೆದು ಕೊಡುವುದು, ಉದ್ಘಾಟಕನಾಗಿ ಹೋಗುವುದು, ಮಾರ್ಗದರ್ಶನ ಮಾಡುವುದು ಪ್ರತೀ ದಿನದ ಮುಖ್ಯ ಕೆಲಸ. ದಿನ ಸಂಜೆಯಾದರೆ ಮನೆಯಲ್ಲಿ ಇವರದೇ ಹಬ್ಬ. ಸನ್ಮಾನಕ್ಕೆ ಸನ್ಮಾನ ಪತ್ರ ಬರೆದು ಕೊಡುವುದು, ಸನ್ಮಾನಕ್ಕೆ ಅತಿಥಿಗಳ ನಿಗದಿ, ಅಭಿನಂದನಾ ಭಾಷಣ, ಪತ್ರಿಕೆಗೆ ವರದಿ ಬರೆದು ಕೊಡುವುದು, ಕರೆಯೋಲೆ ಬರೆದು ಕೊಡುವುದು.. ಹೀಗೆ ಎಲ್ಲಾ ಕೆಲಸವನ್ನೂ ಶಿಸ್ತುಬದ್ಧವಾಗಿ ಮಾಡಿಕೊಡುತ್ತಿದ್ದ. ಪ್ರೂಫ್ ತಿದ್ದುವುದೂ ಈತನೆ. ಸಾವಕಾಶ ಸಂಘಟಕರು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಹಾಗೆ ತರಬೇತಿ ನೀಡುತ್ತಿದ್ದ. ಒಂದು ರೀತಿಯಲ್ಲಿ ನಮ್ಮ ಮನೆ ಸಂಘಟಕರ, ಕಾರ್ಯಕರ್ತರ ತರಬೇತಿ ಕೇಂದ್ರದಂತಿತ್ತು.

ಬಂಡಾಯ ಸಂಘಟನೆಯಂತೂ ಅವನಿಂದಲೇ ಉತ್ತರ ಕನ್ನಡದಲ್ಲಿ ಪ್ರಾರಂಭ ಆಗಿದ್ದು, ಬೆಳೆದಿದ್ದು, ಅವನಿರುವವರೆಗೂ ಅದು ಕ್ರಿಯಾಶೀಲವಾಗೇ ಇತ್ತು. ಆಶ್ಚರ್ಯವೆಂದರೆ ಅವನಿರುವವರೆಗೆ ಜಿಲ್ಲೆಯ ಹಲವು ಜನ ಲೇಖಕರು, ಚಿಂತಕರು -ಜಾತಿ, ಧರ್ಮ, ಪಂಗಡಗಳ ಕಟ್ಟನ್ನು ಮೀರಿ-ಅಣ್ಣನೊಂದಿಗೆ ಇದ್ದರು. ಆಮೇಲೆ ಸ್ವಲ್ಪ ಬೇರೆ ಕಡೆ ಗುರುತಿಸಿಕೊಳ್ಳಲು ಪ್ರಾರಂಭಿಸಿದರು ಅನ್ನುವುದು ಬೇರೆ ಮಾತು.

ಅಣ್ಣನೊಂದಿಗೆ ಬಂಡಾಯದ ರಥಕ್ಕೆ ಹೆಗಲು ಕೊಟ್ಟವರು ಜಿ.ಎಸ್. ಅವಧಾನಿ. ಇಬ್ಬರೂ ಲವಕುಶರಂತೆ ಇದ್ದರು. ಅಂತಹ ಸ್ನೇಹ ಅವರದು. (ಅವರ ಸ್ನೇಹ ಮತ್ತು ಜಗಳದ ಬಗ್ಗೆ ಮುಂದೆ ಬರೆಯುತ್ತೇನೆ.) ಜಿ. ಎಸ್. ಅವಧಾನಿಯವರು ಮತ್ತು ಅಣ್ಣ ಬಂಡಾಯದ ಜಿಲ್ಲಾ ಸಂಚಾಲಕರಾಗಿದ್ದರು. ಅದು ಉ.ಕ. ಜಿಲ್ಲೆಯಲ್ಲಿ ಸಾಂಸ್ಕೃತಿಕ ಬದಲಾವಣೆ ಮತ್ತು ವೈಚಾರಿಕತೆಯ ವಿಸ್ತರಣೆಯ ಸುಗ್ಗಿಕಾಲ. ಜಿಲ್ಲೆಯಾದ್ಯಂತ ಹತ್ತು-ಹಲವು ಕಾರ್ಯಕ್ರಮ. ಗಿರಿ ಪಿಕಳೆ, ಧಾರೇಶ್ವರ, ಮಶಾಲ್ದಿ ಮುಂತಾದವರ ಕಾಲದಲ್ಲಿ ರೈತ-ಕಾರ್ಮಿಕರ ನಡುವೆ ಮಾತ್ರ ಇದ್ದ ಮಾರ್ಕ್ಸ್ ವಾದ -ಅಂಬೇಡ್ಕರ್ ವಾದದ ತಿಳುವಳಿಕೆಯನ್ನು ಸಾಹಿತ್ಯ-ಸಾಂಸ್ಕೃತಿಕ  ವಲಯಕ್ಕೂ ವಿಸ್ತರಿಸಿದ ಬಹು ಮುಖ್ಯ ಕಾಲ ಇದು.

ಜಿಲ್ಲೆ, ತಾಲೂಕು, ಮಟ್ಟದಲ್ಲಿಯೂ ಬಂಡಾಯ ಸಾಹಿತ್ಯದ ಹಲವು ಕಾರ್ಯಕ್ರಮ ನಡೆದಿದೆ. ಪ್ರತಿಭಟನೆಗಳು ನಡೆದಿವೆ. ಉತ್ತರ ಕನ್ನಡ ಜಿಲ್ಲೆಯ ಹಲವು ಲೇಖಕರು ಹೋರಾಟಕ್ಕೆ ಮೊದಲ ಬಾರಿ ಇಳಿದ ಕಾಲ ಇದು. ಶಿರಸಿಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆದಾಗ ಬಂಡಾಯ ಸಾಹಿತ್ಯ ಸಂಘಟನೆ ಸಮ್ಮೇಳನ ದ್ವಾರದಲ್ಲಿಯೇ ದೊಡ್ಡ ಪ್ರತಿಭಟನೆ ನಡೆಸಿತ್ತು. ಈಗಲೂ ಹಲವು ಜನ ಇದನ್ನು ನೆನಪಿಸಿಕೊಳ್ಳುತ್ತಾರೆ.

ಮೊನ್ನೆ ಮೊನ್ನೆ ಮೈಸೂರಿಗೆ ಹೋದಾಗ ಜಿ.ಎಚ್. ನಾಯಕ ಅವರು ಮಾತನಾಡುತ್ತಾ “ಆ ಕಾಲದಲ್ಲಿ ಆರ್.ವಿ. ಯವರು ಉತ್ತರ ಕನ್ನಡದಲ್ಲಿ ಒಂದು ವೈಚಾರಿಕ ಪ್ರಜ್ಞೆಯಾಗಿ ಕೆಲಸ ಮಾಡಿದರು. ನಿಷ್ಠುರವಾದ ಮಾತು, ಅಷ್ಟೇ ವಿನಯಶೀಲತೆ ಅವರ ಗುಣ. ಕಾರವಾರದ ಸಾಹಿತ್ಯ ಸಮ್ಮೇಳನದಲ್ಲಿ ಅವರು ನನ್ನನ್ನು ನೇರವಾಗಿ ಪ್ರಶ್ನಿಸಿದ್ದರು. ಆಗ ನಾವೆಲ್ಲ ನವ್ಯದ ಗಡಿಬಿಡಿಯಲ್ಲಿದ್ದೆವು. ಅವರಿಗೆ ಉತ್ತರಿಸಲು ಹೋಗಿ ನನ್ನ ಇಡೀ ಭಾಷಣವೇ ದಿಕ್ಕು ತಪ್ಪಿ ಹೋಗಿತ್ತು. ಹಾಗೆ ನೋಡಿದರೆ ಅವರನ್ನೆಲ್ಲಾ ನಾವು ಎಷ್ಟು ಗಮನಿಸಬೇಕಾಗಿತ್ತೋ ಅಷ್ಟು ಗಮನ ನೀಡಿಲ್ಲ ಎನ್ನುವ ವಿಷಾದ ಇದೆ” ಎಂದು ಹೇಳಿದ್ದು ನೆನಪಾಗುತ್ತದೆ.

            

ಸಿದ್ದಾಪುರದಲ್ಲಿ 1982 ಇರಬೇಕು. ಆಗ ದೊಡ್ಡ ಪ್ರಮಾಣದಲ್ಲಿ ರಾಜ್ಯ ಮಟ್ಟದ ಬಂಡಾಯ ಸಾಹಿತ್ಯ ಸಮಾವೇಶ ಸಂಘಟಿಸಿದ್ದರು. ಅದಕ್ಕೆ ರಾಜ್ಯದ ಪ್ರಮುಖ ಬಂಡಾಯ ಲೇಖಕರು ಬಂದಿದ್ದರು. ದೇವನೂರು ಮಹಾದೇವ, ಬರಗೂರು ರಾಮಚಂದ್ರಪ್ಪ, ದೇವಯ್ಯ ಹರವೆ, ಎಲ್. ಹನುಮಂತಯ್ಯ, ರಂಜಾನ್ ದರ್ಗಾ, ಚಂಪಾ….. ಹೀಗೆ ಬಂಡಾಯ ಅತಿರಥ, ಮಹಾರಥರು ಬಂದಿದ್ದರು.

ನಾನಾಗ ಹೈಸ್ಕೂಲು ವಿದ್ಯಾರ್ಥಿ ಇರಬೇಕು. ನಾನೂ ಹೋಗಿದ್ದೆ. ಆದರೆ ವಿವರ ಸರಿಯಾಗಿ ನೆನಪಿಲ್ಲ. ಜೋರಾಗಿ ಮಳೆ ಬಂದು ಮುಗಿದ ಮೇಲೆ ಹನಿ ಬಿದ್ದ ಹಾಗೆ (ಜಯಂತವರ ಸಿನೆಮಾ ಹಾಡಿನ ಸಾಲಿನಂತೆ) ತುಂಬಾ ವರ್ಷಗಳವರೆಗೆ ಇವರ ಸುದ್ದಿ ಜಿಲ್ಲೆಯಲ್ಲಿ ಹನಿಯಾಗಿ ಹರಿದಾಡುತ್ತಿತ್ತು. ಕಾರ್ಯಕ್ರಮ ಯಾವುದೋ ಒಂದು ಶಾಲೆಯಲ್ಲಿ ನಡೆದಿತ್ತು. ಆಗ ಅಲ್ಲಿ ಐಬಿ/ಲಾಡ್ಜ್ ಇರಲಿಲ್ಲ. ಅತಿಥಿಗಳೆಲ್ಲಾ ರಾತ್ರಿ ಶಾಲೆಯ ಬೆಂಚಿನ ಮೇಲೆ ಮಲಗಿದ್ದರಂತೆ. ದೇವನೂರು ಅವರು ತಲೆದಿಂಬಿಲ್ಲದೇ ಅಂಗಿಯನ್ನೇ ಮಡಚಿ ತಲೆಗೆ ಹಾಕಿ ಮಲಗಿ, ಬೆಳಗೆದ್ದು ಅದನ್ನೇ ಹಾಕಿಕೊಂಡಿದ್ದರಂತೆ…. ರಾತ್ರಿಯ ಊಟಕ್ಕೆ ಒಳ್ಳೆಯ ಕಳ್ಳು ತರಿಸಿದ್ದರಂತೆ.. ಹೀಗೆ ಹಲವು ಕತೆಗಳು.

ಅಣ್ಣ ಹೊನ್ನಾವರದಿಂದ ಸಿದ್ದಾಪುರಕ್ಕೆ ತಯಾರಿಗಾಗಿ ಹೋಗುತ್ತಿದ್ದ. ಅಲ್ಲಿ ಕಾಶ್ಯಪ ಪರ್ಣಕುಟಿ, ಈಗ ಸುದ್ದಿ ವಾಹಿನಿಯ ಸಂಪಾದಕರಾದ ಶಶಿಧರ ಭಟ್ಟ, BDO ಆಗಿ ಸಸ್ಪೆಂಡ್ ಆಗಿದ್ದ ವಿ. ಮುನಿವೆಂಕಟಪ್ಪ… ಮುಂತಾದವರ ನೇತೃತ್ವದಲ್ಲಿ ನಡೆಯಿತು. ದೊಡ್ಡ ದೊಡ್ಡ ಕಂಟ್ರಾಕ್ಟರ್‍ರಿಂದ, ಅಧಿಕಾರಿಗಳಿಂದ ಹಣ ತೆಗೆದುಕೊಳ್ಳಬಾರದು. ಜನರಿಂದ ಹಣ ಸೇರಿಸಿ ಸಮ್ಮೇಳನ ಮಾಡಬೇಕೆಂದು ತೀರ್ಮಾನಿಸಿ ಜನರಿಂದಲೇ ವಂತಿಕೆ ಸಂಗ್ರಹಿಸಿ ಸಮ್ಮೇಳನ ನಡೆಸಿರುವುದಾಗಿ ಕಾಶ್ಯಪ ಪರ್ಣಕುಟಿ ನೆನಪಿಸಿಕೊಳ್ಳುತ್ತಿದ್ದರು. ಹಲವು ನವ್ಯದ ಲೇಖಕರೂ, ಸೊರಬ, ಸಾಗರದಿಂದ ಜನರೂ ಬಂದ ಬಗ್ಗೆ ಸಂಘಟಕರು ಈಗಲೂ ನೆನಪಿಸಿಕೊಳ್ಳುತ್ತಾರೆ.

ಸಿದ್ದಾಪುರದಲ್ಲಿ ಆಗ ವಿ. ಮುನಿವೆಂಕಟಪ್ಪ ಅಂತ BDO ಇದ್ದರು. ದಲಿತರು ಅವರು. ಕವಿಗಳೂ, ವಿಚಾರವಾದಿಗಳೂ ಆಗಿದ್ದರು. ದಲಿತ ಲೇಖಕರಾದ ಅವರು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅದನ್ನು ವಿರೋಧಿಸಿ ಒಂದು ಕವಿತೆ ಬರೆದಿದ್ದರು. ಒಬ್ಬ ದಲಿತ BDO ಆಗಿದ್ದನ್ನು ಸಹಿಸದ ಮೇಲ್ಜಾತಿಯ ಕೆಲವರ ಕುಮ್ಮಕ್ಕಿನಿಂದ ಆ ಕವಿತೆ ಇಂದಿರಾಗಾಂಧಿಯ ವಿರುದ್ಧ ಬರೆದದ್ದು ಎಂದು ಹುಯಿಲೆಬ್ಬಿಸಿ, ಆಗ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರಕ್ಕೆ ದೂರು ನೀಡಿ ಸಸ್ಪೆಂಡ್ ಮಾಡಿಸಿದ್ದರು. ಆಗ ಅವರು ಜೋರು, ಸಿಟ್ಟು, ಕೆಚ್ಚು ಇರುವ ಜನ. ಅವರೇ ಈ ಸಮ್ಮೇಳನದ ಮುಖಂಡತ್ವ ವಹಿಸಿದ್ದರು.

ಇಂತಹ ಹತ್ತಾರು ಕಾರ್ಯಕ್ರಮಗಳು ಉತ್ತರ ಕನ್ನಡದಲ್ಲಿ ಆ ಕಾಲದಲ್ಲಿ ನಡೆದಿದ್ದವು. ಎಲ್ಲಾ ಬಂಡಾಯ ಸಂಘಟನೆಗೆ ಇಲ್ಲಿಂದ ಸಾಹಿತಿಗಳು ಹೋಗುತ್ತಿದ್ದರು. ಮೋಹನ ಕುರಡಗಿ, ಸುಬ್ರಾಯ ಮತ್ತಿಹಳ್ಳಿ, ನಜೀರ, ಶಶಿಧರ ಭಟ್, ಮಾಸ್ತಿ ಗೌಡ, ಕೃಷ್ಣ ನಾಯಕ ಹಿಚ್ಕಡ, ಅಂದಾನಯ್ಯ, ಪ್ರಕಾಶ ಕಡಮೆ, ವಿಠ್ಠಲ ಪೆರುಮನೆ, ಶ್ರೀಧರ ಹೆಗಡೆ, ಶ್ರೀಪಾದ ಶೆಟ್ಟಿ, ಮಾಧವಿ ಭಂಡಾರಿ ಉಡುಪಿ…. ಹೀಗೆ ಎಲ್ಲಾ ತಾಲೂಕಿನಿಂದಲೂ ಸಾಹಿತಿಗಳು ಬಂಡಾಯದೊಂದಿಗಿದ್ದರು.

ಮೂರು ವರ್ಷದ ಅವಧಿಗೆ ಆತ ಬಂಡಾಯ ಸಾಹಿತ್ಯ ಸಂಘಟನೆಯ ರಾಜ್ಯ ಸಂಚಾಲಕನಾಗಿದ್ದ. ಅವನೊಂದಿಗೆ ರಾಜ್ಯ ಸಂಚಾಲಕರಾಗಿದ್ದವರು ಒಬ್ಬರು ಮಹೇಶ, ಇನ್ನೊಬ್ಬರು ಮಲ್ಲಿಕಾ ಘಂಟಿಯವರಿರಬೇಕು. ಅದು ಬಂಡಾಯ ಸಾಹಿತ್ಯ ಸಂಘಟನೆಯ ಬಿಕ್ಕಟ್ಟಿನ ಕಾಲ ಬಂಡಾಯದ ಗೆಳೆಯರ ಬದ್ಧತೆಯ ಬಗ್ಗೆ ಹೊಸ ತಲೆಮಾರು ಮತ್ತು ಸಂಸ್ಥಾಪಕರ ನಡುವೆ ಮುಖಾಮುಖಿ ಚರ್ಚೆ ನಡೆಯುತ್ತಿತ್ತು.

ಬಂಡಾಯಕ್ಕೆ ಹತ್ತು ವರ್ಷ ಆದಾಗ ಬಂಡಾಯ ಸಾಹಿತ್ಯ ಸಂಘಟನೆಯ ದಶವಾರ್ಷಿಕ ಕಾರ್ಯಕ್ರಮವನ್ನು ಸಾಹಿತ್ಯ ಪರಿಷತ್ತು ಬೆಂಗಳೂರಿನಲ್ಲಿ ಸಂಘಟಿಸಿತ್ತು. ಅದರಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ಭಾಗವಹಿಸ ಬೇಕೆ ಬೇಡವೇ ಎಂಬ ಚರ್ಚೆ ಇತ್ತು. ‘ಪೋರ್ಡ್ ಫೌಂಡೇಶನ್ ಹಣ ಪಡೆಯಬೇಕೆ ಬೇಡವೇ ಎಂಬ ಚರ್ಚೆ ಇತ್ತು…. ಬಂಡಾಯ ಸಾಹಿತ್ಯ ಸಂಘಟನೆ ಮಾರ್ಕ್ಸ್ ವಾದದಿಂದ ದೂರ ಸರಿಯುತ್ತಿದೆ ಎಂದು ದಕ್ಷಿಣ ಕನ್ನಡದ ಬಂಡಾಯ ಸಂಗಾತಿಗಳ ವಾದವಿತ್ತು.

ಹೀಗೆ….. ಚರ್ಚೆ. ಬಂಡಾಯ ಸಂಘಟನೆ ಒಡೆದು ಹೋಗಬಹುದೆಂಬಷ್ಟು ಬಿಸಿಬಿಸಿಯಾಗಿ ನಡೆಯುತ್ತಿತ್ತು. ಆಗ ಅಣ್ಣ ಈ ಎರಡೂ ರೀತಿಯ ಜನರನ್ನು ಒಟ್ಟಾಗಿಸುವ, ಸಂಘಟನೆ ಒಡೆಯದಂತೆ ನೋಡಿಕೊಳ್ಳುವ ಒಬ್ಬ ಸಂಧಾನಕಾರನಾಗಿಯೂ ಕೆಲಸ ಮಾಡಿದ್ದ. ಆ ಸಂದರ್ಭದಲ್ಲಿ ನಡೆದ ಚರ್ಚೆ ಒಂದು ಪಿಹೆಚ್.ಡಿ. ಅಧ್ಯಯನಕ್ಕೆ ಯೋಗ್ಯವಾದದ್ದು. ಅಂತಹ ನೂರಾರು ಪತ್ರಗಳು ಅಣ್ಣನ ಫೈಲಿನಲ್ಲಿ ಇತಿಹಾಸದ ಸಾಕ್ಷಿಯಾಗಿ ಕುಳಿತಿದೆ.

ಬಂಡಾಯದ ಜಗಳದ ಬಗ್ಗೆ ಮುಂದೊಮ್ಮೆ ಬರೆಯುತ್ತೇನೆ. ಯಾಕೋ ಈ ಅಂಕಣ ಬರೆಯುವಾಗ ಆ ಪತ್ರಗಳನ್ನೆಲ್ಲ ಮಗುಚಿ ಹಾಕಿದೆ. ಆರ್ಕೆ ಮಣಿಪಾಲ, ಕೇಶವ ಶರ್ಮ, ಸಿದ್ದನಗೌಡ ಪಾಟೀಲ, ವಾಸುದೇವ ಉಚ್ಚಿಲ್, ಅಲ್ಲಮಪ್ರಭು, ಬೆಟ್ಟದೂರು, ಚಂಪಾ, ಫಕೀರ ಮಹಮದ್, ಕಟ್ಪಾಡಿ, ಶಂಕರ ಕಟಗಿ…… ಹೀಗೆ ಹಲವು ಹಿರಿಯರ, ಬಸು, ಪೀರಾಭಾಷಾ, ನಜೀರ ಮುಂತಾದ ಕಿರಿಯ ಸಂಗಾತಿಗಳ ಪತ್ರಗಳು ಆ ಕಾಲದ ಚರ್ಚೆಯ ಮುಖ್ಯ ಭೂಮಿಕೆಯನ್ನು ತೆರೆದಿಡುತ್ತವೆ.

ಆತ ವಲಯ ಸಂಚಾಲಕ ಕೂಡ ಆಗಿದ್ದ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು ಸೇರಿ ಒಂದು ವಲಯ ಮಾಡಿದ್ದರು. ರಾಜ್ಯ ಸಂಚಾಲಕರು, ವಲಯ ಸಂಚಾಲಕರು, ಜಿಲ್ಲಾ ಸಂಚಾಲಕರು, ತಾಲೂಕು ಸಂಚಾಲಕರು….. ಹೀಗೆ ಸಂಘಟನೆ ಸರಿಯಾಗಿಯೇ ಇತ್ತು. ಕೊನೆಕೊನೆಗೆ ಸಂಘಟನಾತ್ಮಕ ಕೆಲಸ ಕಡಿಮೆ ಆಗಿ ಭಾಷಣ, ಬರವಣಿಗೆ ಇತ್ಯಾದಿಗಳೇ ಪ್ರಮುಖ ಆಗಿ ಸಂಘಟನೆ ಸ್ವಲ್ಪ ದುರ್ಬಲ ಆಯಿತು. ಹಾಗಂತ ಅದು ಹುಟ್ಟು ಹಾಕಿದ ವೈಚಾರಿಕತೆ ಮಾತ್ರ ವಿಸ್ತರಣೆಗೊಂಡವು.

ಆಗ ಪೋರ್ಡ್ ಫೌಂಡೇಶನ್ ಇಂತಹ ಸಾಂಸ್ಕೃತಿಕ ಪ್ರತಿರೋಧದ ಸಂಘಟನೆಯನ್ನು ಒಡೆಯುವ ಕೆಲಸ ಮಾಡುತ್ತಿದ್ದವು. ವಿವಿಧ ರೀತಿಯಲ್ಲಿ ಅದು ಪ್ರವೇಶಿಸುತ್ತಿತ್ತು.

1986 ರಲ್ಲಿ ಅಣ್ಣ ಕೂಡ ಸಂಕಷ್ಟಕ್ಕೆ ಒಳಗಾಗಿದ್ದ. ಓದುವ ಆಸಕ್ತಿಯ ಕಾರಣಕ್ಕಾಗಿ ಆತನ ಧ್ವನ್ಯಾಲೋಕ (ಮೈಸೂರು) ಒಂದು ಫೆಲೋಶಿಪ್ ಪಡೆದು ಒಂದು ತಿಂಗಳು ಉಳಿದು ಅಲ್ಲಿಯೇ ‘ಯಾನ’ ಎನ್ನುವ ನಾಟಕ ಬರೆದುಕೊಟ್ಟು ಬಂದ. ಆದರೆ ನಂತರ ತಿಳಿದದ್ದು ಇದು ವಿದೇಶಿ ಹಣದಿಂದ ನಡೆಯುವ ಸಂಸ್ಥೆ ಎಂದು. ಬಂಡಾಯ ಸಾಹಿತ್ಯ ಸಂಘಟನೆ ಇದನ್ನು ವಿರೋಧಿಸಿತ್ತು. ಹಾಗಾಗಿ ಆತ ತನಗೆ ತಾನೇ ಶಿಕ್ಷೆ ವಿಧಿಸಿಕೊಳ್ಳುವ ನೈತಿಕತೆಯನ್ನು ಪ್ರಕಟಿಸಿದ.

 

ಆತ ಆಗ ಸಂಘಟನೆಗೆ ಬರೆದ ಪತ್ರದಲ್ಲಿ

ವಿಷಯ : ಸ್ವಂತ ಶಿಕ್ಷೆ ಅನುಭೋಗಿಸುವ ನಿರ್ಧಾರದ ವಿಷಯವಾಗಿ.

ಮಾನ್ಯರೇ,

ನಾನು ಮೇ ತಿಂಗಳು ಪೂರ್ತಿ ಮೈಸೂರಿನ ಧ್ವನ್ಯಾಲೋಕ ಆಶ್ರಯದಲ್ಲಿ (ಕೃತಿ ರಚನೆಗಾಗಿ) ಕಳೆದೆ. ಆದರೆ ಈ ಸಂಸ್ಥೆ ಫೋರ್ಡ್ ಪೌಂಡೇಶನ್ ಕೊಡುಗೆಯಿಂದ ನಡೆಯುತ್ತದೆಂದು ಕೆಲದಿನಗಳ ನಂತರ ತಿಳಿಯಿತು. ನಾನು ಒಬ್ಬ ಬಂಡಾಯ ಸಾಹಿತ್ಯ ಧೋರಣೆಗೆ ಬದ್ಧ ಎಂದುಕೊಳ್ಳುತ್ತಾ, ಒಬ್ಬ ಸಂಚಾಲಕ ಕೂಡ ಆಗಿ ಹೀಗೆ ಸಾಮ್ರಾಜ್ಯಶಾಹಿ ನೆರವಿನ ಸಂಸ್ಥೆಗಳಲ್ಲಿ ಆಶ್ರಯ ಪಡೆಯುವುದು ಬೂಟಾಟಿಕೆಯಾಗುತ್ತದೆಂದು ನನ್ನ ಅಂತರಂಗ ಸದಾ ಹೇಳುತ್ತಲೇ ಇರುತ್ತದೆ.

ನನ್ನನ್ನು ನಾನು ಸಮರ್ಥಿಸಿಕೊಳ್ಳಬಹುದು. ಆದರೆ ಅದು ಸಿದ್ಧಾಂತವಾಗುವುದಿಲ್ಲ. ಸಮಯಸಾಧಕತೆ ಆಗುತ್ತದೆ. ಕ್ಷಮೆ ಕೇಳಬಹುದಿತ್ತು. ಆದರೆ ನಮ್ಮ ಬಂಡಾಯದವರಿಗೆ ಅದೊಂದು ಚಟವಾಗ ಹತ್ತಿದೆ. ಆದ್ದರಿಂದ ನನ್ನ ಬದ್ಧತೆ ಮೀರಿದ ವರ್ತನೆಗಾಗಿ ನನಗೆ ನಾನೇ ಶಿಕ್ಷೆ ವಿಧಿಸಿಕೊಳ್ಳಲು ನಿರ್ಧರಿಸಿದ್ದೇನೆ.

ಅದು ಹೀಗೆ

1) 1-6-96 ರಿಂದ ಒಂದು ವರ್ಷ ಅಂದರೆ 1-6-97 ರ ತನಕ ನಾನು ಯಾವುದೇ ವೇದಿಕೆಯನ್ನು ಉಪಯೋಗಿಸುವುದಿಲ್ಲ. ಬಂಡಾಯದ್ದಾಗಲಿ ಇತರರದ್ದಿರಲಿ. ಯಾವುದನ್ನೂ ಉಪಯೋಗಿಸುವುದಿಲ್ಲ. ಆದರೆ ಶಿಕ್ಷಣ ಖಾತೆಯಲ್ಲಿ ಅನಿವಾರ್ಯವಾದಾಗ ಮಾತ್ರ ಸೆಮಿನಾರ್ ಇತ್ಯಾದಿಗಳಲ್ಲಿ ಭಾಗವಹಿಸಬಹುದು.

2) ಈ ನಿರ್ಬಂಧ ನನ್ನ ಬರಹಕ್ಕೆ ಪ್ರಕಟಣೆಗೆ ಸಂಬಂಧವಿಲ್ಲ.

3) ನಾನು ಈ ಅವಧಿಯಲ್ಲಿ ಬಂಡಾಯ ಸಂಘಟನೆಯ ಅಧಿಕಾರ ಸಮಿತಿಯಲಿ ಇರುವುದಿಲ್ಲ. ಆದರೆ ಸಂಘಟನೆಯ ಸಾಮಾನ್ಯ ಸದಸ್ಯನಾಗಿದ್ದು ಬಂಡಾಯ ಚಳುವಳಿಗೆ ಹಾರ್ದಿಕವಾಗಿ ಸಹಕರಿಸುತ್ತೇನೆ.

4) ಈ ಮೂಲಕ ನನ್ನ ಸಂಚಾಲಕ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿದ್ದೇನೆ.

5) ಈ ವಿಷಯದಲ್ಲಿ ನನ್ನ ನಿರ್ಧಾರ ಕೈಬಿಡುವಂತೆ ಒತ್ತಾಯಿಸುವ ಯಾವುದೇ ಒತ್ತಡ ಬಂದರೂ ಗಮನಿಸಲಾಗುವುದಿಲ್ಲ.”

ಎಂದು ವಲಯ ಸಂಚಾಲಕ ಸ್ಥಾನಕ್ಕೆ ರಾಜಿನಾಮೆ ನೀಡಿದ ಮತ್ತು ಒಂದು ವರ್ಷ ಬಂಡಾಯದ ಕಾರ್ಯಕ್ರಮ ಮತ್ತು ಯಾವುದೇ ವೈಚಾರಿಕ, ಸಭೆ, ಸಮ್ಮೇಳನದಲ್ಲಿ ಭಾಗವಹಿಸುವುದಿಲ್ಲ ಎಂದು ನಿರ್ಧಾರ ಪ್ರಕಟಿಸಿದ ಮತ್ತು ಹಾಗೆ ಮಾಡಿದ ಕೂಡ.
ಇದು ಆತ ಸಂಘಟನೆಯಲ್ಲಿಯೂ ರೂಢಿಸಿಕೊಂಡ ನೈತಿಕತೆ.

1 comment

Leave a Reply