ಥ್ಯಾಂಕ್ಸ್ ಸುಧಾ.. ನಿಮ್ಮ ಅಂಕಣ ನಮ್ಮನ್ನು ಕಾಡಿತು..

ಥ್ಯಾಂಕ್ಸ್ ಸುಧಾ..

ರಂಗಶಂಕರದಲ್ಲಿ ‘ಚಿತ್ರಾ’ ನಾಟಕ ನೋಡಿದ್ದೇ ನೋಡಿದ್ದು.. ಸುಧಾ ಆಡುಕಳ ಬರಹದ ಶಕ್ತಿ ಏನು ಎಂದು ಗೊತ್ತಾಗಿಹೋಯಿತು. ಶ್ರೀಪಾದ್ ಭಟ್ ನಾಟಕೋತ್ಸವದ ಅಂಗವಾಗಿ ‘ಅವಧಿ’ ಅವರ ಮೂರು ನಾಟಕಗಳನ್ನು ರಂಗಶಂಕರದಲ್ಲಿ ಹಮ್ಮಿಕೊಂಡಿತ್ತು. ಅದರ ಭಾಗವಾಗಿ ಉಡುಪಿಯ ‘ನೃತ್ಯ ನಿಕೇತನ’ದಿಂದ ಬಂದದ್ದು ‘ಚಿತ್ರಾ’.

ಸುಧಾ ಆಡುಕಳ ಬಗ್ಗೆ ಕೇಳಿ ಗೊತ್ತಿತ್ತು. ಶ್ರೀಪಾದ್ ಅವರ ಬಹುತೇಕ ನಾಟಕಗಳ ಸ್ಕ್ರಿಪ್ಟ್ ಇವರದ್ದು. ‘ಚಿತ್ರಾ’ ನಾಟಕ ನೋಡಿದಾಗ ಅದರ ಬಿಗಿ ಬಂಧ, ಸಾಹಿತ್ಯಕ ಶಕ್ತಿ ಖುಷಿ ನೀಡಿತು. ಶಬ್ದಕ್ಕಿರುವ ಲಜ್ಜೆ, ಒನಪು ಎಲ್ಲವನ್ನೂ ಸುಧಾ ಚೆನ್ನಾಗಿ ದುಡಿಸಿಕೊಂಡಿದ್ದರು.

ಹಾಗಾಗಿ ಅವರನ್ನು ಅವಧಿಗೆ ಒಂದು ಅಂಕಣ ಬರೆದುಕೊಡಿ ಎಂದು ಕೇಳಿದೆ. ಸುಧಾ ಒಪ್ಪಲಿಲ್ಲ, ಅವರು ಬೆರಳಿಗೆ ಪೆಟ್ಟು ಮಾಡಿಕೊಂಡು ಕುಳಿತ ಸಮಯ ಅದು. ಆದರೆ ಬಿಡದೆ ಬೆಂಬತ್ತಿದಾಗ ಮೂಡಿ ಬಂದದ್ದು ಈ ‘ಬಕುಲದ ಬಾಗಿಲಿನಿಂದ’.

25 ವಾರಗಳ ಕಾಲ ನಮ್ಮ ಓದುಗರ ಮನವನ್ನು ತಮ್ಮ ಬರಹಗಳ ಮೂಲಕ ಕಲಕಿಹಾಕಿಬಿಟ್ಟಿದ್ದಾರೆ. ಇವರ ಅಂಕಣಕ್ಕಾಗಿ ಕಾದು ಓದುತ್ತಿದ್ದವರು ಅಸಂಖ್ಯಾತ. ಒಂದು ಸ್ವಲ್ಪ ತಡವಾದರೆ ಈ ವಾರ ಸುಧಾ ಅಂಕಣ ಇಲ್ಲವಾ ಎಂದು ಕೇಳಿ ಸಾಕಷ್ಟು ಮೆಸೇಜ್ ಗಳು ಬರುತ್ತಿದ್ದವು.

25 ವಾರಗಳ ಕಾಲ 25 ನಾಯಕಿಯರ ಬದುಕನ್ನು ಅವರು ಕಟ್ಟಿಕೊಟ್ಟಿದ್ದಾರೆ. ಹೆಂಗಳೆಯರ ಲೋಕದ ತಲ್ಲಣಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ ಈ ಅಂಕಣ ಮಾಲೆ ಓದಲೇಬೇಕು.

ಇಷ್ಟೆಲ್ಲಾ ಬರೆದು ಪರಿಚಿತರಾಗಿದ್ದ ಸುಧಾ ಅವರನ್ನು ನಿಮ್ಮ ಪುಸ್ತಕಗಳನ್ನು ಕಳಿಸಿಕೊಡಿ ಎಂದು ಕೇಳಿದಾಗ ದೊಡ್ಡದಾಗಿ ನಕ್ಕು ಬಿಟ್ಟರು. ಯಾಕೆ ಎಂದು ಕೇಳಿದರೆ ಇದುವರೆಗೂ ನನ್ನದು ಒಂದು ಪುಸ್ತಕವೂ ಪ್ರಕಟವಾಗಿಲ್ಲ ಎಂದರು. ಕೇಳಿ ಶಾಕ್ ಆಯಿತು. ಇರಲಿ, ಈಗ

ಈ ಅಂಕಣ ಬರಹಗಳನ್ನು ಪುಸ್ತಕವಾಗಿ ಪ್ರಕಟಿಸಲು ‘ಬಹುರೂಪಿ’ ಮುಂದಾಗಿದೆ. ಅದೇ ಹೆಸರಿನಲ್ಲಿ. ಆ ಪುಸ್ತಕಕ್ಕಾಗಿ ಕಾಯುತ್ತಿರಿ ಎಂದು ಹೇಳುತ್ತಾ -ಥ್ಯಾಂಕ್ಸ್ ಸುಧಾ ನಿಮ್ಮ ಬರವಣಿಗೆ ನಮ್ಮನ್ನು ಕಾಡಿದೆ..

 

ಅವಳು ಬಿಡುಗಡೆಯ ಕನಸು..

ಅವಳು ಎಲ್ಲರೆದೆಯ ಬಿಡುಗಡೆಯ ಕನಸು. ಧೂಳು ಮುಸುಕಿದ ಯಕ್ಷನಗರಿಯಲ್ಲಿಯೂ ರೆಕ್ಕೆಯ ನವಿರನ್ನು ಉಳಿಸಿಕೊಂಡು ಹಾರಾಡುವ ಚಿಟ್ಟೆಯ ಸೊಗಸು. ಬರಡಾಗಿ ಬಾಯಾರಿದ ಮರಳುಗಾಡಿನಲ್ಲಿ ನೀರುಣಿಸುವ ಓಯಾಸಿಸ್ಸು. ಎಂಥದ್ದೇ ವಿಷಮ ಸನ್ನಿವೇಶದಲ್ಲಿಯೂ ಬಿಡುಗಡೆಯ ಬಯಕೆಯನ್ನು ಬಿಟ್ಟುಕೊಡದ ಹೆಂಗೂಸು. ನೋಡಲು ಹೂವಿನಂತೆ ಕೋಮಲವಾಗಿದ್ದರೂ, ಸಂಕೋಲೆಗಳ ತೊಡಿಸುವ ಕೈಗಳಿಗೆ ಎಂದಿಗೂ ಸೆರೆಯಾಗದು ಅವಳ ಕಸುವು. ಅಸಲಿಗೆ ಹೆಣ್ಣೆಂದರೆ ಒಂದು ಬಿಡುಗಡೆ. ಅಂಥದೊಂದು ಬಿಡುಗಡೆಯ ಸಂಕೇತವಾಗಿ ಹೆಣ್ಣನ್ನು ತಮ್ಮ ಎಲ್ಲ ಕೃತಿಗಳಲ್ಲಿ ಸಶಕ್ತವಾಗಿ ಕಟ್ಟಿಕೊಟ್ಟವರು ಗುರುದೇವ ರವೀಂದ್ರರು. ಅಂಥದೊಂದು ಉತ್ಕ್ರುಷ್ಟ ಹೆಣ್ಣಿನ ಚಿತ್ರಣವೇ ‘ಕೆಂಪು ಕಣಗಿಲೆ’

ಅವಳ ಹೆಸರು ನಂದಿನಿ. ಖಂಡಿತಕ್ಕೂ ಅದೊಂದು ಅನ್ವರ್ಥನಾಮವೆ. ಯಾರಿಗೆ ಯಾವ ರೂಪದಲ್ಲಿ ಬೇಕೋ ಆ ರೂಪದಲ್ಲಿ ದಕ್ಕುವವಳು ಅವಳು. ಹಾಗಾಗಿಯೇ ಅವಳು ಬಿಷುವಿನ ಗೆಳತಿ, ಫಗುವಿಗೆ ಒಂದು ನಮೂನಿ ಬೆಳಕು, ಚಂದ್ರಳ ದೃಷ್ಟಿಯಲ್ಲಿ ಎಲ್ಲರನ್ನೂ ಮರುಳುಮಾಡುವ ಮಾಟಗಾತಿ, ಕಿಶೋರನಿಗೆ ಅವನು ಮೆಚ್ಚಿ ಆರಾಧಿಸುವ ವ್ಯಕ್ತಿ, ಗೋಕುಲನಿಗೆ ಹೆದರಿಸುವ ದೆವ್ವ, ಆ ರಾಜ್ಯದ ಪ್ರೊಫೇಸರ್‍ಗೂ ಕೂಡ ಅವಳೊಂದು ಬಗೆಹರಿಸಲಾಗದ ಒಗಟು, ಇನ್ನು ಎಲ್ಲರನ್ನು ತಮ್ಮ ಹದ್ದುಬಸ್ತಿನಲ್ಲಿಟ್ಟುಕೊಳ್ಳಲು ಹೆಣಗಾಡುವ ಗೌರ್ನರ್ ಸಾಹೇಬರಿಗವಳು ಬಂಧಿಸಲಾಗದ ಖೈದಿ, ಧರ್ಮದ ವಿಷಬೀಜ ಬಿತ್ತುವ ಪುರಾಣಿಕನಿಗೆ ಶಾಂತಿ ಕಲಕುವ ಕ್ರಾಂತಿಕಾರಿ………. ಹೀಗೆ ಒಬ್ಬೊಬ್ಬರಿಗೆ ಒಂದೊಂದು ರೂಪದಲ್ಲಿ ದಕ್ಕುವ ಅವಳೊಂದು ವಿಶೇಷ. ಯಾಕೆಂದರೆ ಅವಳೊಂದು ಹೆಣ್ಣು. ಹೆಣ್ಣಿನ ವ್ಯಕ್ತಿತ್ವದ ವಿವಿಧ ಆಯಾಮಗಳನ್ನು ರವೀಂದ್ರರು ಅಚ್ಛರಿಯಿಂದ ತೆರೆದಿಡುವ ಬಗೆಯಿದು!

ಅದು ಯಕ್ಷನಗರಿ ಎಂಬ ರಾಜ್ಯ. ಅಲ್ಲಿಗೊಬ್ಬ ಭಯಂಕರ ರಾಜ. ಅವನ ಸುತ್ತಲೂ ಸದಾ ಬೇಧಿಸಲಾಗದ ಪರದೆ. ಅವನನ್ನು ಇಡಿಯಾಗಿ ಕಂಡವರಿಲ್ಲ. ಆಗೀಗ ಅವರಿವರಿಂದ ಕೇಳಿದ ಕಥೆಗಳೇ ಅವನ ರೂಪವನ್ನು ಚಿತ್ರಿಸಿವೆ. ಅಲ್ಲಿ ಯಾವುದೂ ನೈಸರ್ಗಿಕವಾಗಿಲ್ಲ. ಭೂಮಿಯೊಡಲನ್ನು ಬಗೆದು ಅಪಾರ ಚಿನ್ನದ ರಾಶಿಯನ್ನು ಸಂಗ್ರಹಿಸುವ ಹುಚ್ಚು ಆ ರಾಜನಿಗೆ. ಅವನಿಗೆ ಬೆಂಗಾವಲಾಗಿ ನಿಂತವರು ಜ್ಞಾನಿಯಾದ ಪ್ರೊಫೇಸರ್, ಧರ್ಮಬೀರುಗಳಾದ ಪುರಾಣಿಕರು, ಕೋತ್ವಾಲ ಮತ್ತು ಗೌರ್ನರ್ ಸಾಹೇಬರು. ಚಿನ್ನದಾಸೆಯಿಂದ ಆ ರಾಜ್ಯಕ್ಕೆ ಹೊದವರೆಲ್ಲರೂ ಅಲ್ಲಿ ಕೂಲಿಯಾಳುಗಳಾಗಿ ಬಂಧಿಯಾಗಿದ್ದಾರೆ. ನಿರಂತರವಾಗಿ ಸುರಂಗವನ್ನು ಅಗೆಯುತ್ತಲೇ ಒಂದು ದಿನ ಅಲ್ಲಿಯೇ ಸಮಾಧಿಯಾಗುತ್ತಾರೆ. ವಿರೋಧಿಸಿದವರೆಲ್ಲರೂ ಸೈನಿಕರಿಂದ ಬಂಧಿಸಲ್ಪಡುತ್ತಾರೆ ಮತ್ತು ಶಿಕ್ಷೆಯಿಂದ ನರಳುವ ಅವರ ಆರ್ತನಾದ ಉಳಿದವರಿಗೆ ಎಚ್ಚರಿಕೆಯ ಕರೆಗಂಟೆಯಾಗಿ ಕೆಲಸ ಮಾಡುತ್ತದೆ. ಅಲ್ಲಿ ಹಸಿರಿಲ್ಲ, ಜೀವಸೆಲೆಯಿಲ್ಲ, ಜೋಳದತೆನೆಗಳಿಲ್ಲ, ಜೀವಂತಿಕೆಯ ಯಾವ ಕಳೆಯೂ ಇಲ್ಲ. ಹೋಗಲಿ ಅಲ್ಲಿಯ ಕೆಲಸಗಾರರಿಗೆ ಒಂದು ಹೆಸರೂ ಇಲ್ಲ. ಎಲ್ಲರಿಗೂ ಒಂದೊಂದು ಸಂಖ್ಯೆಯನ್ನು ನೀಡಲಾಗಿದೆ. ಅವರನ್ನೆಲ್ಲ ಆ ಸಂಖ್ಯೆಯಿಂದಲೇ ಗುರುತಿಸಲಾಗುತ್ತದೆ. ಅಂತಹ ಊರಿಗೆ ರಾಜನ ಸೆರೆಯಾಳಾಗಿ ಬರುವ ನಂದಿನಿ ಎಲ್ಲರ ಬಿಡುಗಡೆಯ ಕನಸಾಗುತ್ತಾಳೆ. ಅವಳ ವ್ಯಕ್ತಿತ್ವವೇ ಅಂಥದ್ದು. ಯಾರೂ ಸೆರೆಹಿಡಿಯಲಾಗದಂಥದ್ದು. ಅವಳು ಅಂಥಹ ನರಕದಲ್ಲೂ ತನ್ನನ್ನು ತಾನು ಕಳಕೊಳ್ಳಲಾರಳು. ಅವಳೆದೆಯ ಭಾವಗಳು ಆ ಮರುಭೂಮಿಯಲ್ಲೂ ಹಾಡಾಗಿ ಹರಿಯುತ್ತಲೇ ಇರುತ್ತವೆ.

 

ಅವಳ ಹಾಡಿನ ಜೊತೆಗಾರ ಬಿಷು. ಅವನು ಬೇರೊಂದು ಹೆಣ್ಣಿನ ಮೋಹಜಾಲದಲ್ಲಿ ಸಿಲುಕಿಯೇ ಇಲ್ಲಿಗೆ ಬಂದವ. ಎದೆಯ ಹಾಡನ್ನು ಕಾಪಿಟ್ಟಕೊಂಡ ಅವನಿಗೆ ಈ ಮೋಸದ ಜಾಲವನ್ನು ಬೇಧಿಸುವ ಬಯಕೆ. ಅದೇ ಅವನ ಹಾದಿಗೆ ಮುಳ್ಳಾಯಿತು. ಉನ್ನತ ಹುದ್ದೆಯನ್ನು ಕಳಕೊಂಡು ಸಾಮಾನ್ಯ ನೌಕರನಂತೆ ದುಡಿಯುತ್ತಿದ್ದಾನೆ ಅವನು. ಎಷ್ಟೇ ಪ್ರಯತ್ನಿಸಿದರೂ ತಪ್ಪಿಸಿಕೊಳ್ಳಲಾಗದ ಕೋಟೆಯಲ್ಲಿ ಅವನೂ ಬಂಧಿ. ಎದೆಯ ಹಾಡನ್ನು ಕಳಕೊಳ್ಳುವ ಹಂತದಲ್ಲಿ ಅಲ್ಲಿಗೆ ಬಂದಿಳಿವ ನಂದಿನಿ ಅವನ ಕ್ಷೀಣ ದನಿಗೆ ತನ್ನ ಕಂಠವನ್ನು ಸೇರಿಸುತ್ತಾಳೆ. ಅವಳಿಗೆ ಆ ಕೋಟೆಯಾಚೆಗಿನ ಸುಗ್ಗಿಯ ಹಾಡು ಸದಾ ಕೇಳುತ್ತದೆ.

ಮಬ್ಬು ಕವಿದ ಹಾದಿಯಲ್ಲಿ
ಸುಗ್ಗಿ ಹಾಡು ತೇಲಿಬಂದು
ಹಿಗ್ಗು ಧರೆಗೆ ಸುರಿದ ಹಾಗೆ
ಸುಗ್ಗಿ ಬರುತಿದೆ | ಹಿಗ್ಗು ತರುತಿದೆ
ಹಸಿರನುಟ್ಟ ಹೆಂಗಳೆಯರ
ಕುಸುರಿಯಿಟ್ಟ ಬುಟ್ಟಿಯೊಳಗೆ
ಜೋಳತೆನೆಯ ರಾಶಿ ತುಳುಕಿಸಿ
ಸುಗ್ಗಿ ಬರುತಿದೆ | ಹಿಗ್ಗು ತರುತಿದೆ

ಹೀಗೆ ಸುಗ್ಗಿಯ ಹಾಡನ್ನು ಹಾಡುವುದರೊಂದಿಗೆ ಎಲ್ಲರೆದೆಯಲ್ಲೊಂದು ಜೀವಂತಿಕೆಯ ಕನಸನ್ನು ಬಿತ್ತುತ್ತಾಳೆ ಅವಳು. ದೂರದೂರಿನಿಂದ ಕೆಲಸಕ್ಕೆಂದು ಬಂದು ಬಂಧಿಯಾದ ಚಂದ್ರಾಳಿಗೀಗ ತನ್ನೂರಿನ ಸುಗ್ಗಿಯ ಕನಸು ಬೀಳುತ್ತಿದೆ. ಅವಳ ಗಂಡ ಬಿಷುವಿಗೂ ಬಿಡುಗಡೆಯ ಬಯಕೆ. ಕಿಶೋರನಿಗೆ ತನ್ನೂರನ್ನೊಮ್ಮೆ ನೋಡಬೇಕೆಂಬ ಆಶೆ. ರಾಜನ ನಿಷ್ಠರಿಗೆಂದೇ ತನ್ನ ಜ್ಞಾನವನ್ನೆಲ್ಲ ಮುಡಿಪಾಗಿಟ್ಟ ಪ್ರೊಫೇಸರ್ ಸಾಹೇಬರಿಗೂ ಈಗ ನಂದಿನಿಯೊಂದಿಗೆ ಮಾತನಾಡುತ್ತಿದ್ದರೆ ಅದೆಂಥದ್ದೋ ಜೀವಂತಿಕೆಯನ್ನು ಅನುಭವಿಸುತ್ತಿರುವ ಧನ್ಯತೆ. ಹೀಗೆ ಎಲ್ಲರೆದೆಯ ಬಿಡುಗಡೆಯ ಕನಸಾಗಿ ಒದಗುವವಳು ನಂದಿನಿ. ಸುಗ್ಗಿಯೆಂಬುದು ಇಲ್ಲಿ ಒಂದು ಜೀವಂತಿಕೆಯ ಕನಸು ಅಷ್ಟೆ.

ಹೀಗೆ ನಿರ್ಜೀವವಾಗಿ ಬಿದ್ದಿರುವ ರಾಜ್ಯವೊಂದರಲ್ಲಿ ಮೊಳೆಯುವ ಜೀವಂತಿಕೆಯ ಕನಸು ಸುಗ್ಗಿಯ ಹಾಡಿನ ಗುನುಗುವಿಕೆಯಾಗಿ ರಾಜನವರೆಗೂ ತಲುಪುತ್ತದೆ. ಕಲ್ಲುಬಂಡೆಯಂತಹ ಅವನ ಮನಸ್ಸಿನಲ್ಲಿಯೂ ಈಗ ಸಣ್ಣದೊಂದು ಬಿರುಕು. ಆ ಗುನುಗುವಿಕೆ ಅವನನ್ನು ಕೆರಳಿಸುತ್ತದೆ. ನಂದಿನಿ ಅವನನ್ನು ಪರದೆಯ ಈಚೆಯಿಂದಲೇ ನಿರ್ಭಯವಾಗಿ ನಿಂತು ಮಾತನಾಡಿಸುತ್ತಾಳೆ. ತನ್ನನ್ನು ಕಂಡರೆ ಭಯದಿಂದ ನಡುಗುವ ಎಲ್ಲರ ಜನರ ನಡುವೆ ಇವಳೊಂದು ಅಚ್ಛರಿಯ ಪರ್ವತದಂತೆ ಕಾಣುತ್ತದೆ ಅವನಿಗೆ. ಕುತೂಹಲಕ್ಕೆಂದು ಅವಳನ್ನು ತನ್ನ ಪರದೆಯ ಈಚೆಗೆ ಬಿಟ್ಟುಕೊಳ್ಳುತ್ತಾನೆ. ಅವಳೋ ಅಷ್ಟೇ ನಿರಾಳತೆಯಿಂದ ಅವನ ಕೋಣೆಯೊಳಗೆ ಹೋಗುತ್ತಾಳೆ. ಮನುಷ್ಯರೊಬ್ಬರನ್ನು ನೋಡದೇ ಯುಗಗಳೇ ಕಳೆದಿತ್ತೆಂಬಂತೆ ಅವಳ ಹೇರಳ ರಾಶಿಯಲ್ಲಿ ಬೆರಳನ್ನಿಟ್ಟು ತೀಡುತ್ತಾನೆ ರಾಜ. ಕಿಲಕಿಲನೆ ನಕ್ಕುಬಿಡುತ್ತಾಳೆ ನಂದಿನಿ. ಅವಳ ನಗುವಿನ ಮೋಡಿಗೆ ಅವನೆದೆಯಲ್ಲಿ ಹೆಪ್ಪುಗಟ್ಟಿದ್ದ ಭಾವನೆಗಳೆಂಬ ಹಕ್ಕಿಗಳು ಚಲನೆ ಬಂದಂತೆ ಚಿಲಿಪಿಲಿಗುಡತೊಡಗುತ್ತವೆ. ಅವನಿಗೋ ಎಲ್ಲವನ್ನೂ ‘ಅರ್ಥ’ ಮಾಡಿಕೊಳ್ಳುವ ದುರಾಸೆ. ಆದರೆ ಹಾಗೆ ಸುಲಭಕ್ಕೆ ‘ಅರ್ಥ’ವಾಗದವಳು ಈ ನಂದಿನಿ.

“ನನಗೆ ನಿನ್ನನ್ನು ಓದಬೇಕಿದೆ”
“ಓದಲು ನಾನೇನು ಪುಸ್ತಕವಲ್ಲ, ತಿಳಿದುಕೋ”
“ಪುಸ್ತಕವನ್ನು ನಾನು ಓದಬಲ್ಲೆ, ನಿನ್ನನ್ನು ‘ಅರ್ಥ’ ಮಾಡಿಕೊಳ್ಳಲು ಕಲಿಯಬೇಕಿದೆ”
“ಎಲ್ಲವನ್ನೂ ‘ಅರ್ಥ’ ಮಾಡಿಕೊಳ್ಳಲಾಗದು.ಕೆಲವನ್ನು ಸುಮ್ಮನೆ ಅನುಭವಿಸಬೇಕಷ್ಟೆ”
“ನನ್ನನ್ನು ಪ್ರೀತಿಸುತ್ತೀಯೇನು?”
“ಖಂಡಿತ. ಯಾಕಿಲ್ಲ? ನಾನು ಎಲ್ಲರನ್ನೂ ಪ್ರೀತಿಸಬಲ್ಲೆ”
“ಆ ನಿನ್ನ ರಾಜನನನ್ನು ಪ್ರೀತಿಸುವಷ್ಟು….?”
“ಅವನನ್ನು ನಾನು ತುಂಬಾ ಪ್ರೀತಿಸುತ್ತೇನೆ. ಎಲ್ಲರಿಗಿಂತಲೂ ಮಿಗಿಲು”
“ಎಷ್ಟು ಪ್ರೀತಿಸ್ತೀಯಾ ಅವನನ್ನು?”
“ವಿವರಿಸಲಾರದಷ್ಟು. ದೋಣಿಯ ಹರಿಗೋಲು ಹಾಯಿಯನ್ನು ಪ್ರೀತಿಸುವುದಲ್ಲ ಅಷ್ಟು. ನೀರಿನ ಅಲೆಯ ಲಾಸ್ಯ ಗಾಳಿಯನ್ನು ಪ್ರೀತಿಸುವುದಲ್ಲ ಹಾಗೆ”
“ಮತ್ತೆ ಅವನಿಗಾಗಿ ಪ್ರಾಣ ಬೇಕಾದರೂ ಕೊಡ್ತೀಯಾ?”
“ಈ ಕ್ಷಣದಲ್ಲಿಯೇ ಕೊಡಬಲ್ಲೆ”
ನಂದಿನಿಯ ಮಾತು ಅವನನ್ನು ತುಂಬಾ ತಲ್ಲಣಕ್ಕೀಡುಮಾಡುತ್ತದೆ. ಅವಳನ್ನು ತಟ್ಟನೆ ಅಲ್ಲಿಂದ ಹೊರದಬ್ಬುತ್ತಾನೆ. ಆದರೆ ಇದರಿಂದ ಅವಳಿಗೆ ಒಂದು ವಿಷಯ ಮನದಟ್ಟಾಗುತ್ತದೆ. ‘ಅವನೊಳಗೂ ಒಬ್ಬ ಮನುಷ್ಯನಿದ್ದಾನೆ!’

 

ಭಯಂಕರ ವೇಷ ಧರಿಸಿ ಎಲ್ಲರನ್ನೂ ಬೆದರಿಸುತ್ತಿದ್ದ ಅವನೀಗ ಅವಳಿಗೆ ಬಯಲಾಟದಲ್ಲಿ ಬರುವ ಬಣ್ಣದ ವೇಷದಂತೆ ಕಾಣುತ್ತಾನೆ. ತಾನೇ ಕಟ್ಟಿಕೊಂಡ ಕೋಟೆ ಮತ್ತು ವೇಷಗಳು ಅವನನ್ನೇ ಉಸಿರುಗಟ್ಟಿಸುತ್ತಿರುವ ವಿಷಯ ಅವಳಿಗೆ ತಿಳಿಯುತ್ತದೆ. ನೆಮ್ಮದಿಯಾಗಿ ನಿದ್ರಿಸದೇ ಅದೆಷ್ಟೋ ವರ್ಷಗಳನ್ನು ಕಳೆದ ರಾಜ ರಕ್ಕಸನಂತಾಗಿದ್ದಾನೆ ಎಂಬುದು ಅವಳಿಗೆ ಅರ್ಥವಾಗಿದೆ ಈಗ. ಹಾಗಾಗಿ ಅವಳೀಗ ಅವನಿಗಾಗಿಯೇ ಲಾಲಿಹಾಡನ್ನೂ ಹಾಡುತ್ತಾಳೆ.
ಜೋ………… ಜೋ……….ಜೋ……..
ಜೋ………… ಜೋ……….ಜೋ……..
ಭೂಮಿಯೊಡಲ ಆಳದಿಂದ
ತಾನೇ ಹರಿವ ಜೀವಸೆಲೆಯೆ
ಮೇಲೆ ಉಕ್ಕಿ ತೇಲಿ ಬಾ
ದೊರೆಯ ಬೇನೆ ಕಳೆಯ ಬಾ
ಜೋ………… ಜೋ……….ಜೋ……..
ಜೋ………… ಜೋ……….ಜೋ……..
ಬಾನಿನಲ್ಲಿ ಓಡುತಿರುವ
ಕಪ್ಪುಬಿಳಿಯ ಮೋಡಗಳೆ
ಸುರಿಸಿ ಪ್ರೀತಿ ಮಳೆಯನೆಲ್ಲ
ನೀಗಿ ದೊರೆಯ ದಣಿವನೆಲ್ಲ
ಜೋ………… ಜೋ……….ಜೋ……..
ಜೋ………… ಜೋ……….ಜೋ……..

ಅವಳು ಹೀಗೆ ಅಪ್ಪಟ ತಾಯಿಯಾಗಿ ಲಾಲಿಹಾಡುವಾಗ ದೊರೆಯ ಹೃದಯ ತಲ್ಲಣಿಸಿ ಹೋಗುತ್ತದೆ. ಅವನ ಸುತ್ತಲಿನ ಕೋಟೆಗಳು ನಿಧಾನಕ್ಕೆ ಪುಡಿಯಾಗತೊಡಗುತ್ತವೆ.
ಅವಳ ಸ್ವಭಾವವೇ ಅಂಥದ್ದು. ಅವಳಿಗೆಂದು ಕೆಂಪು ಕಣಗಿಲೆಯನ್ನು ಹುಡುಕಿ ತಂದುಕೊಡುವ ಕಿಶೋರನಿಂದ ಹಿಡಿದು ಅವಳನ್ನು ಕಂಡರೆ ಕೆಂಡಕಾರುವ ಗೋಕುಲನವರೆಗೂ ಎಲ್ಲರನ್ನೂ ಅವಳು ಪ್ರೀತಿಸಬಲ್ಲಳು. ಅವಳಿಗೆ ಆ ರಾಜ್ಯಕ್ಕೆ ಅವಳ ಕಡುಪ್ರೇಮಿ ರಂಜನನ್ನು ಕರೆತರುವ ಬಯಕೆ. ರಂಜನನೆಂದರೆ ಒಬ್ಬ ವ್ಯಕ್ತಿಯಲ್ಲ. ರಂಜನೆಯೆಂಬುದಕ್ಕೆ ಅದೊಂದು ಪ್ರತಿಮೆಯಷ್ಟೆ. ರಂಜನ ಬಂದರೆ ಅಲ್ಲೆಲ್ಲ ಜೀವಕಳೆ ಉಕ್ಕೇರುತ್ತದೆ, ಜೀವವಿರುವಲ್ಲಿ ಹಸಿರುಕ್ಕುತ್ತದೆ, ಹಸಿರಿನೊಂದಿಗೆ ಬರುವ ಸುಗ್ಗಿಯ ಹಿಗ್ಗು ಎಲ್ಲ ಅತಿಯಾಸೆಗಳನ್ನು ಕೊಂದು ಇಡಿಯ ರಾಜ್ಯವನ್ನು ಸಹಜವಾಗಿಸುತ್ತದೆ ಎಂಬುದು ಅವಳ ಸಹಜ ಲೆಕ್ಕಾಚಾರ. ಆದರೆ ಇವೆಲ್ಲವೂ ಅವಳೊಬ್ಬಳಿಂದಲೇ ಸಾಧ್ಯವಿಲ್ಲ. ಅದಕ್ಕವಳಿಗೆ ಬಿಷುವಿನ ಬೆಂಬಲ ಬೇಕು. ಅಲ್ಲಿ ದುಡಿಯುವ ವರ್ಗ ಅವಳೊಂದಿಗೆ ನಿಲ್ಲಬೇಕು. ಶೋಷಿಸುವ ಕೋತ್ವಾಲ ಮತ್ತು ಗೌರ್ನರ್‍ರನ್ನು ಎದುರಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಜ್ಞಾನವನ್ನೂ ಬಂಧಿಸಿಟ್ಟ ಆ ನಾಡಿನಲ್ಲಿ ಬಿಡುಗಡೆಯ ಬೆಳಕು ಬೆಳಗಬೇಕು. ಅವಳು ಬಿಷುವಿನ ಸಹಾಯವನ್ನು ಯಾಚಿಸುತ್ತಾಳೆ. ಅವಳಿಗಾಗಿ ಹಾಡುವಂತೆ ಕೋರುತ್ತಾಳೆ. ಅವನು ಹಾಡುತ್ತಾನೆ.

ನನ್ನೆಚ್ಚರ ನೀನು | ನನ್ನೆದೆಯ ಹಾಡು|
ನನ್ನ ನೋವಿನ ಆಳ| ನನ ಗಮ್ಯದ ಜಾಡು|
ಕವಿದ ಕತ್ತಲೆಯೊಳಗೆ| ಹಕ್ಕಿಗಳಾ ಹಾಡು|
ನನ್ನೆದೆಯ ತುಂಬೆಲ್ಲಾ| ನೋವಿನ ಜಾಡು|
ನನ್ನೆಚ್ಚರ ನೀನು | ನನ್ನೆದೆಯ ಹಾಡು|

ಎಲ್ಲರನ್ನೂ ತನ್ನ ಮಾರ್ಮಿಕವಾದ ಮಾತುಗಳ ಮೂಲಕ ಎಚ್ಚರಿಸುತ್ತಾ ಹೋಗುತ್ತಾನೆ ಬಿಷು.
‘ಇಡಿಯಾಗಿರೋದು ಕುರಿಯ ಅವಶ್ಯಕತೆ ಮಾತ್ರ. ಆದರೆ ಸುಮ್ಮನೆ ಅರಚುವ ಆ ಬಾಯಿಯಾದರೂ ಯಾಕಿರಬೇಕು ಅಂತಾನೆ ಕಟುಕ. ಹಾಗೆ ಸುಗ್ಗಿ ಮಾಡಬೇಕು ಅನ್ನೋದು ನಮ್ಮ ಆಸೆ ಮಾತ್ರ. ಊಟಕ್ಕೆ ಕೊಟ್ಟರೆ ಆಯ್ತಲ್ಲ ಅಂತಾರೆ ಆಳುವವರು.’

‘ಪಂಜರದ ಹಕ್ಕಿ ಕಂಬಿಯನ್ನು ಕುಟುಕಿದರೆ ಅದು ಪ್ರೀತಿಯ ಚುಂಬನವಂತೂ ಅಲ್ಲ. ನಾವೆಲ್ಲ ಇಲ್ಲಿ ಇದ್ದೇವೆ ಅಂದ್ರೆ ಈ ಬದುಕು ನಮಗೆ ಇಷ್ಟ ಅಂತಲ್ಲ. ಓಡಿ ಹೋಗೋಕೆ ನಮ್ಮ ಕಾಲುಗಳಿಗೆ ಶಕ್ತಿಯಿಲ್ಲ ಅಷ್ಟೆ’
‘ನಾವೆಲ್ಲ ಚಿನ್ನದ ಗಣಿ ಅಗೆಯೋಕೆ ಅಂತ ಬಂದ್ವಿ. ಆದರೆ ನಮ್ಮ ಊರಿನ ದಾರೀನ ಮುಚ್ಚಿಕೊಂಡ್ವಿ’
‘ಪಂಚಾಂಗದಲ್ಲಿ ಕೊನೆಯ ತಿಥಿ ಅಂತ ಇರೋದಿಲ್ಲ. ಹುಣ್ಣಿಮೆ ಅಥವಾ ಅಮವಾಸ್ಯೆ ಆದಮೇಲೆ ಮತ್ತೆ ಪಾಡ್ಯದಿಂದ ಶುರುವಾಗುತ್ತೆ’
‘ನಮಗೆ ಅವಶ್ಯವಾಗಿರೋ ವಸ್ತು ಅಂದರೆ ನಾವು ತಿನ್ನೋ ಆಹಾರ, ಅದಕ್ಕೆ ಸಾಕು ಅಂತ ಇರತ್ತೆ. ಆದರೆ ನಮಗೆ ಬೇಕೇಬೇಕು ಅನ್ನದಂತಹ ವಸ್ತು ಅಂದರ ಚಿನ್ನ ಅದಕ್ಕೆ ಸಾಕು ಅಂತ ಇರೋದೇ ಇಲ್ಲ. ಯಾಕೆಂದರೆ ಅದು ಬೇಕೇ ಬೇಕು ಅಂತಿಲ್ಲವಲ್ಲ’

ಇಂತಹ ಮಾತುಗಳು ಎಲ್ಲರ ಎದೆಯಾಳಕ್ಕೆ ಇಳಿಯತೊಡಗುತ್ತವೆ. ರಾಜ್ಯದ ತುಂಬೆಲ್ಲಾ ಅಲ್ಲಲ್ಲಿ ಅಸಮಾಧಾನದ ಹೊಗೆ ಹೊತ್ತಿಕೊಳ್ಳಲಾರಂಭಿಸುತ್ತದೆ. ಗೌರ್ನರ್ ಈಗ ಗರಂ ಆಗುತ್ತಾರೆ. ಅವರೆಲ್ಲರಿಗೆ ಶಾಂತಿ ಉಪದೇಶ ಮಾಡಿಸಲು ಪುರಾಣಿಕರನ್ನು ಕರೆಸಿ ಹರಿಕೀರ್ತನೆಗಳನ್ನೂ ಮಾಡಿಸುತ್ತಾರೆ. ಆದರೆ ಇವೆಲ್ಲವೂ ಯಾವ ಪರಿಣಾಮವನ್ನೂ ಉಂಟುಮಾಡುವುದಿಲ್ಲ. ಅವರ ಉಪದೇಶದ ಹಿಂದಿರುವ ದಾಸ್ಯದ ಪ್ರಸಾರವನ್ನು ಬಿಷು ಬಯಲಿಗೆಳೆಯುತ್ತಾನೆ. ಆಳುವವರ ಪಾಲಿಗೀಗ ನಂದಿನಿ ಮತ್ತು ಬಿಷು ಖಳನಾಯಕರಾಗುತ್ತಾರೆ. ನಂದಿನಿ ಮತ್ತೆ ಮತ್ತೆ ರಾಜನಿಗೆ ಮುಖಾಮುಖಿಯಾಗುತ್ತಲೇ ಹೋಗುತ್ತಾಳೆ. ರಂಜನನ ಬರವನ್ನು ಯಾರೂ ತಡೆಯಲಾರರು ಎಂಬ ಸತ್ಯವನ್ನು ಅವನಿಗೆ ಮನದಟ್ಟು ಮಾಡಿಕೊಡಲು ಪ್ರಯತ್ನಿಸುತ್ತಾಳೆ. ಸಾವಿರ ವರ್ಷಗಳಿಂದ ಜಡವಾಗಿ ಮಲಗಿದ್ದ ಕಲ್ಲಿನ ಪೊಟರೆಯೊಳಗಿನ ಕಪ್ಪೆಯನ್ನು ಆದರ್ಶವೆಂದು ತಿಳಿದಿದ್ದ ದೊರೆ ಅದರ ಜಡತೆಗೆ ಬೇಸರಗೊಂಡು ಹೊರಗೆಳೆದು ಕೊಲ್ಲುವ ಕ್ರಿಯೆ ಅವನೊಳಗಿನ ಬದಲಾವಣೆಯ ದ್ಯೋತಕವಾಗುತ್ತದೆ. ಇದನ್ನು ಕಂಡ ಆಳುವ ವರ್ಗದವರು ಬೆಚ್ಚುತ್ತಾರೆ. ದೊರೆಯನ್ನು ಅಚಲವಾಗಿಸಿಡಲು ಪ್ರೊಫೇಸರ್ ಗೆ ಹೇಳುತ್ತಾರೆ. ಆದರೆ ದೊರೆ ಅವನನ್ನು ಹೀಗೆ ಪ್ರಶ್ನಿಸುತ್ತಾನೆ,

“ಒಂದು ಗೋಡೆಯನ್ನು ಅಗೆದರೆ ಇನ್ನೊಂದು ಗೋಡೆಯನ್ನು ತೋರಿಸುತ್ತಾ ಹೋಗುವ ನಿಮ್ಮದೆಂತಹ ವಿಜ್ಞಾನ? ಎಷ್ಟೇ ಅಗೆದರೂ ತಿರುಳನ್ನೇ ಮುಟ್ಟದ ನಿಮ್ಮದು ಅವಿಜ್ಞಾನ. ಜೀವರಹಸ್ಯವನ್ನು ತಿಳಿಸಬಲ್ಲಿರೇನು?”

ಪ್ರೊಫೇಸರ್ ಮಾತಿಲ್ಲದಂತಾಗಿ ಹಿಂದಿರುಗುತ್ತಾನೆ. ಮತ್ತೆ ಅವನನ್ನು ಶಾಂತವಾಗಿಸಲು ಪುರಾಣಿಕರ ನೆರವನ್ನೂ ಕೋರಲಾಗತ್ತದೆ. ಆದರೆ ಅವನಿಗೂ ದೊರೆ ಪ್ರಶ್ನೆಗಳನ್ನು ಕೇಳಿ ಬೆಚ್ಚಿಬೀಳಿಸುತ್ತಾನೆ.

“ನಿಮ್ಮ ಪುರಾಣ, ಇತಿಹಾಸಗಳೆಲ್ಲವು ಪೊಳ್ಳು. ಅವು ವರ್ತಮಾನವನ್ನು ನಿಯಂತ್ರಿಸಲು ನೀವು ಬಳಸುವ ಗುರಾಣಿಗಳು. ವರ್ತಮಾನವೊಂದೇ ಸತ್ಯ. ಅದನ್ನು ವಿಸ್ತರಿಸಬಹುದಲ್ಲದೇ ಭೂತ, ಭವಿಷ್ಯಗಳೆಲ್ಲವೂ ಸುಳ್ಳು.”

ರಾಜನ ಈ ಜ್ಞಾನೋದಯ ಆಳುವ ವರ್ಗದವರ ತಲೆಯನ್ನು ಕೆಡಿಸುತ್ತದೆ. ರಾಜನನ್ನು ನಿಯಂತ್ರಿಸುವುದನ್ನು ಬಿಟ್ಟು ಸಾಮಾನ್ಯರ ಬಲವಡಗಿಸಲು ಅವರು ಮುಂದಾಗುತ್ತಾರೆ. ಸೇನೆ ಬಿಷುವನ್ನು ಬಂಧಿಸಿ ಸೆರೆಮನೆಯಲ್ಲಿಡುತ್ತದೆ.

 

ನಂದಿನಿ ಈಗ ಕೆರಳುತ್ತಾಳೆ. ಅವಳ ಹಾಡಿನ ಜೊತಗಾರನೀಗ ಬಂಧನದಲ್ಲಿದ್ದಾನೆ. ಅವಳ ಜೀವ ತಲ್ಲಣಿಸಿಹೋಗುತ್ತದೆ. ಅವಳು ದೊರೆಯೊಂದಿಗೆ ತನ್ನ ಕೊನೆಯ ಹೋರಾಟವನ್ನು ಸಾರುತ್ತಾಳೆ. ಅವಳ ಹೋರಾಟ ಸಾಸ್ಕೃತಿಕ ಸ್ವರೂಪದ್ದು. ಗೆಜ್ಜೆಯೇ ಅವಳ ಆಯುಧ. ಹಾಡೇ ಅವಳ ಸೈನ್ಯ. ಅವಳೆದೆಯ ಭಾವಗಳೆಲ್ಲ ಹಾಡಾಗಿ ಹರಿದು ಪ್ರವಾಹವಾಗಿ ದೊರೆಯೆದೆಗೆ ಹರಿಯುತ್ತಿದೆ ಈಗ. ಅದೆಂತಹ ಪ್ರವಾಹವೆಂದರೆ ಎಂತಹ ಕಲ್ಲು ಬಂಡೆಯನ್ನೂ ಕೊಚ್ಚಿಹೋಗುವಷ್ಟು ಶಕ್ತಿ ಅದಕ್ಕಿದೆ. ದೊರೆಯ ಅಹಂಕಾರವೆಲ್ಲವೂ ಅವಳ ಹಾಡಿನ ಪ್ರವಾಹದಲ್ಲಿ ಕರಗಿಹೋಗುತ್ತದೆ.

ಇಳಿದು ಬಾ| ದೊರೆಯೇ | ಇಳಿದು ಬಾ|
ಇಳಿದು ಬಾ| ದೊರೆಯೇ | ಇಳಿದು ಬಾ|
ಪ್ರಕೃತಿ ಪ್ರೀತಿಯ ಕಡೆಗೆ|
ಸುತ್ತ ಕಟ್ಟಿರುವ ನೂರು ಪರದೆಗಳ
ಸರಿಸಿ ಬಾ ದೊರೆಯೆ ಹೊರಗೆ|
ಇಳಿದು ಬಾ| ದೊರೆಯೇ | ಇಳಿದು ಬಾ|
ಭೂಮಿಯೊಡಲಿಂದ ಬಗೆದು ಹೊರತಂದ
ರಾಶಿ ಕನಕಗಳ ಮರೆತು ಬಾ|
ಹಸಿರ ನಡುವಿಂದ ಉದಿಸಿ ಹೊರಬಂದ
ಹಕ್ಕಿಗಳ ಹಾಡ ಕೇಳಿ ಬಾ|
ಕೃತಕ ತೆರೆಯನ್ನು ಸರಿಸಿ ಬಾ|
ಸಹಜ ಸುಖವನ್ನು ಅರಿಯ ಬಾ|
ಹುತ್ತಗಟ್ಟಿರುವ ಮನದ ಕೊಳೆಯನ್ನು
ಸತ್ಯದುಜ್ಜುಗದಿ ತೊಳೆಯ ಬಾ|
ಎದೆಯ ಹದಮಾಡಿ| ಮನವ ಮೃದು ಮಾಡಿ|
ರಂಜನೆಯ ಬೆಳೆಯ ಬೆಳೆಯ ಬಾ|
ನಿಜದಿ ಬಯಲಾಗು| ಜಗದ ಸೊಗವಾಗು|
ರಂಜನನ ಬರವಿಗೊದಗಿ ಬಾ|
ಬಾರೋ ಬಾ| ದೊರೆಯೆ| ಬಾರೋ ಬಾ|
ಜಗದ ಸಹಜತೆಯ ಹೊರಗೆ ಕಾಲಿರಿಸಿ ನೋಡಬಾ|
ನಿನ್ನೊಳಗಿರುವ ಸುಳ್ಳುಪೊಳ್ಳುಗಳ
ತೊಳೆದು ಹೊಸಬಾಳ ಪಡೆಯ ಬಾ|
ಇಳಿದು ಬಾ| ದೊರೆಯೇ | ಇಳಿದು ಬಾ|
ಇಳಿದು ಬಾ| ದೊರೆಯೇ | ಇಳಿದು ಬಾ|

ಅವಳ ಹಾಡು ಹೊಳೆಯಾಗಿ ಹರಿಯುವಾಗ ದೊರೆಯು ಆ ಪ್ರವಾಹದೊಂದಿಗೆ ತೇಲಿ ತನ್ನ ಕೋಟೆಯೊಳಗಿಂದ ಪರದೆಗಳೆಲ್ಲವನ್ನೂ ಪುಡಿಮಾಡಿ ಭೂಮಿಗಿಳಿದು ಬರುತ್ತಾನೆ. ಭೂಮಿಯ ಸ್ಪರ್ಶವೆಂದರೆ ಅದು ಸತ್ಯದ ಸ್ಪರ್ಶ. ಅವನ ಕಣ್ಣಿಗೀಗ ರಂಜನ ಕಾಣಿಸುತ್ತಾನೆ. ಅವನು ರಂಜನನನ್ನು ತನ್ನ ರಾಜ್ಯದೊಳಗೆ ಬಿಟ್ಟುಕೊಳ್ಳುತ್ತಾನೆ. ರಂಜನೆಯನ್ನು ಪೋಷಿಸುವ ರಾಜ್ಯ ಸಹಜವಾಗಿಯೇ ಇರುತ್ತದೆಯಲ್ಲವೆ?

ನಂದಿನಿ ಹೆಣ್ಣಿನ ಎಲ್ಲ ಗುಣಗಳಿಗೆ ರೂಪಕವಾಗಿ ನಿಲ್ಲುತ್ತಾಳೆ. ಬರಡಾದ ಬದುಕನ್ನು ಪ್ರಕೃತಿಯಂತೆ ಚಿಗುರಿಸಬಲ್ಲ ಶಕ್ತಿಯಿರುವುದು ಹೆಣ್ಣಿಗೆ ಮಾತ್ರ. ಜಗತ್ತಿನಲ್ಲಿ ಎಲ್ಲಿ ದಾಳಿಯಾದರೂ ಅದರ ಮೊದಲ ಪರಿಣಾಮವನ್ನು ಎದುರಿಸುವವಳು ಹೆಣ್ಣು. ಹಾಗೆಂದೇ ಅವಳು ಅದಕ್ಕೆ ಪರಿಹಾರವನ್ನೂ ಹುಡುಕಬಲ್ಲಳು ಎಂಬುದನ್ನು ಟ್ಯಾಗೋರರು ಈ ನಾಟಕದ ಮೂಲಕ ಸಾರಿ ಹೇಳುತ್ತಾರೆ. ಜಾಗತೀಕರಣ ಮತ್ತು ಉದಾರೀಕರಣ ಆಗತಾನೇ ಪ್ರಾರಂಭವಾಗಿದ್ದ ಕಾಲದಲ್ಲಿದ್ದ ಟ್ಯಾಗೋರರು ಅದನ್ನು ಸಾಂಸ್ಕೃತಿಕ ಪ್ರತಿರೋಧದ ಮೂಲಕ ಮಾತ್ರ ಪರಿಣಾಮಕಾರಿಯಾಗಿ ಎದುರಿಸಲು ಸಾಧ್ಯ ಎಂಬುದನ್ನು ಈ ನಾಟಕದಲ್ಲಿ ಸಾರಿ ಹೇಳುತ್ತಾರೆ. ನಾಟಕದ ಪಾತ್ರವಾಗಿ ಬರುವ ರಂಜನ ಇಲ್ಲಿ ಅಂಥದೊಂದು ಸಾಂಸ್ಕೃತಿಕ ಚಳುವಳಿಯನ್ನು ಪ್ರತಿನಿಧಿಸುತ್ತಾನೆ.

ಕೆಲವೊಮ್ಮೆ ಕೆಂಡದ ಮಳೆಯಂತೆ ಮಾತುಗಳನ್ನು ಸುರಿಸುವ, ಇನ್ನೊಮ್ಮೆ ತಾಯಿಯಂತೆ ಮುಚ್ಚಟೆಯಿಂದ ಲಾಲಿಹಾಡುವ, ಮಗದೊಮ್ಮೆ ಗೆಳತಿಯಾಗಿ ಗೆಳೆಯನನ್ನು ಸಂತೈಸುವ, ಒಮ್ಮೊಮ್ಮೆ ಬಿರಗಾಳಿಯಂತೆ ಮುನ್ನುಗ್ಗುವ ನಂದಿನಿ ಎಲ್ಲ ಹೆಂಗಳೆಯರ ಶಕ್ತಿರೂಪವಾಗಿ ಕಾಣಿಸುತ್ತಾಳೆ. ಹೆಣ್ಣೆಂಬ ಅಂತಹ ಜೀವಚೈತನ್ಯವೇ ಇಡಿಯ ಜಗವನ್ನು ಪೊರೆಯುತ್ತಿದೆ.

 

2 comments

  1. ಬರಹಗಳು ತುಂಬಾ ತುಂಬಾ ಇಂಟೆನ್ಸ್ ಆಗಿದ್ದವು. ಭಾಷೆ ಇಷ್ಟವಾಗುವಂತಿತ್ತು. ಪೌರಾಣಿಕ ಚಾರಿತ್ರಿಕ ಮತ್ತು ಐತಿಹಾಸಿಕ ಪಾತ್ರಗಳ ಮೂಲಕ ವರ್ತಮಾನದ ತಲ್ಲಣಗಳನ್ನು ಹಿಡಿಯುವ ಪ್ರಯತ್ನ ಅಲ್ಲಿತ್ತು. ಅಭಿನಂದನೆಗಳು.

Leave a Reply