ಮಣ್ಣಾಗಬೇಕಿತ್ತು..

ಸುರೇಶ ಎಲ್.ರಾಜಮಾನೆ

ಅಲ್ಲಿ ನೋಡಿದೆ ಅವನ
ಅವನು ವಿಶ್ವಮಾನವನಾಗಲು
ಕಷ್ಟಪಡುತ್ತಿದ್ದ
ಅಬ್ಬಾ..!
ಅದೆಷ್ಟು ಕಷ್ಟ.

ಅಂದರೆ,
ಅವನೊ ಮೊದಲು
ಹುಟ್ಟಿರಬೇಕು ಇಲ್ಲ
ಮಾನವನಾಗಿರಬೇಕು
ಎರಡೂ ಅಲ್ಲದೇ
ನಗುವ ಕಣ್ಣೀರ ಸುರಿಸುತ್ತ
ಅಳುವವರ ಮುಂದೆ
ಕೂತಿದ್ದ.

ಎಲ್ಲವೂ ಬಯಲು ಬಯಲು
ಕಾಣುತ್ತಿದ್ದಾಗ
ಮತ್ತೆ ಅವನೇ ಕಂಡನು
ಅದೇನೊ ಹೇಳುತ್ತಿದ್ದ
ಅನಂತದ ಕುರಿತು
ಅಷ್ಟರಲ್ಲಿ ಅಡುಗೆ ಮನೆಯಲಿ
ಒಡೆದ ಕೊಡ ಅಂತರಂಗವ
ಸೆಳೆದುಕೊಂಡಿತು.

ದಾರಿಯ ಬದಿಯಲಿ
ಕುಳಿತ ತಿರುಕನ
ವಿಳಾಸ ಹುಡುಕುವ ಬರದಲ್ಲಿ
ತಿರುತಿರುಗಿ ಸಾಕಾಗಿ
ದಾರಿಹಿಡಿದವನು
ಮತ್ತೆ ಕಂಡನು ಅಲ್ಲೇ! ಅದೇ ದಾರಿಯಲಿ
ಅದೇನು ವಿಚಿತ್ರವೋ
ಅವನ ಮೈ ಬಟ್ಟೆಯನ್ನೇ
ತಿರಸ್ಕರಿಸಿರಲಿಲ್ಲ.

ಬೆತ್ತಲಾಗುವುದು ಬಯಲಾಗುವದು
ಮಾನವನಾಗುವುದು
ಸುಲಭಸಾಧ್ಯ
ಎಂದ ಅವನನ್ನೇ ಕಾಯುತ್ತಿದ್ದೆ

ಅವನು ಕಳ್ಳ
ಕದ್ದಿದ್ದು, ಕೆಡವಿದ್ದು
ಕಟ್ಟಿಕೊಂಡದ್ದೆಲ್ಲ
ಕಲ್ಲಮೇಲೆ ಅಚ್ಚಾಗಿದ್ದುದ ಕಂಡು
ನಾ ಮತ್ತೆ ಮಣ್ಣಿನತ್ತ
ಚಿತ್ತನಿಟ್ಟೆ.

3 comments

  1. ತುಂಬ ಗಾಢವಾದ ಅನುಭವ ಕೊಡುವ ಕವಿತೆ

    • ಕವಿತೆ ನಾನಾ ಅರ್ಥಗಳ ಜೀವಂತ ಪ್ರಜ್ಞೆ

Leave a Reply