ಹೀಗಿದ್ದರೆ ಚೆನ್ನಾಗಿತ್ತು…..

ಡಾ.ಪ್ರೇಮಲತ ಬಿ.

ಹೀಗಿದ್ದರೆ ಚೆನ್ನಾಗಿತ್ತು…
ಬ್ಯಾಕು ಪ್ಯಾಕಿನಲಿ ಬದುಕ ತುಂಬಿ
ಎಲ್ಲಿಗೆ ಬೇಕಾದರೂ ಒಯ್ಯಬಹುದಿತ್ತು

ಬಟ್ಟ ಬಯಲಲ್ಲಿ, ದಟ್ಟ ಕಾನನದಲ್ಲಿ
ಗಿರಿಶಿಖರದ ಶೃಂಗದಲಿ,ಅಂಬರದಲಿ ಅನವರತದಲಿ
ನಿಂತು ಒಳಗಿನ ಗಟ್ಟಿಯನೆಲ್ಲ ತೆಗೆದು
ಸುತ್ತಲೂ ಹರಡಿ ಹೊಸ
ಜೀವನವ ಶುರುಮಾಡಬಹುದಿತ್ತು

ಕೆಪ್ಪನಾಗಿಸುವಷ್ಟು ಜೋರಾಗಿ ಚೀರುವ ಹೃದಯ
ಜೊಳ್ಳುಕಾಳಾಗಿ ಒಣಗುವ ಆತ್ಮ
ಗೊಂದಲಗಳ ಗೂಡಾಗಿ ಎಡತಾಕುವ ದೇಹ
ಎಲ್ಲವನು ಪ್ಯಾಕ್ ಮಾಡಿ
ಬೇರೆಡೆಗೆ ಸಾಗಿಸಿ ಒಗೆದು ಓಡಬಹುದಿತ್ತು

ಸಾಂಗತ್ಯವಿಲ್ಲದ ಮನೆ
ಭವಿಷ್ಯವಿಲ್ಲದ ಬದುಕು
ಧ್ವನಿಯಾಗದ ಹಾಡುಗಳ ಹಿಂದಿಟ್ಟು
ಹಾಸಿಗೆಯಾಗದ ಕನಸುಗಳನು
ಸುತ್ತಿ ಸಾಗಿಸಿ ಬಿಡಬಹುದಿತ್ತು

ತುಟಿಗಿಟ್ಟ ಸಿಹಿ ಮಿಠಾಯಿ
ಆಟದಲ್ಲಿದ್ದ ಕುಂಟಾಬಿಲ್ಲೆಯ ಕಲ್ಲು
ಅವ್ವ-ಅಪ್ಪರ ಆಟದ ಮರದ ಗೊಂಬೆ
ರಸ್ತೆ ಬದಿಯ ಗಾಣಿಕೆ ಹಣ್ಣುಗಳ ಅರಸಿ
ಮತ್ತೆ ಹಿಂತುರಿಗಿ ಬಂದುಬಿಡಬಹುದಿತ್ತು

ಒಮ್ಮೊಮ್ಮೆ ಹೋದೆಡೆಯೆಲ್ಲ ಬರುವ
ಹೆಗಲೇರಿ ಮೆರೆವ ಚಿಂತೆಗಳಂತೆ
ಸೀಮಾರೇಖೆಯ ದಾಟದಂತೆ ತಡೆದೆಳೆವ
ಲಗಾಮಿನಂತೆ ಹೆಣಭಾರವಾಗುವ ಈ ಚೀಲ
ಸುಡುಗಾಡಿನಾಚೆಯ ಲೋಕಕ್ಕೆ
ಎತ್ತೊಯ್ಯಬಲ್ಲ ಪ್ಯಾರಾಚೂಟನಾದರೂ
ಕೊಟ್ಟುಬಿಡಬಾರದೇ ಎಂದು ದಿಟ್ಟಿಸುತ್ತೇನೆ

ಬ್ಯಾಕು ಪ್ಯಾಕನ್ನೇನೋ ಪ್ರತಿದಿನ ಹೊತ್ತೊಯ್ಯುತ್ತೇನೆ
ಬರಿಯ ದಿನವೊಂದರ ಜಂಜಾಟಗಳ ತುಂಬಿ
ಸಂಗಾತಿಯಂತೆ ಮುದದಿ ನೇವರಿಸುತ್ತೇನೆ
ಒಳ ನೋಟ ನೆಟ್ಟರೆ ಎಲ್ಲ ಅಳ್ಳಕ
ತಳವಿಲ್ಲದ ಖಾಲಿ,ಖಾಲಿ ಜೀವನ ದುರುಗುಟ್ಟುತ್ತದೆ !

3 comments

  1. ದಿನಕ್ಕೆ ಒಂದು ಈ ರೀತಿ ಕವನ ಓದಲು ಸಿಕ್ಕರೆ ಎಷ್ಟು ಚೆನ್ನಾಗಿತ್ತು. ಸೊಗಸಾದ ಕವನ.

Leave a Reply