ಪುರುಷ ಸಾಹಿತಿಗಳು ನಮ್ಮನ್ನು ಪುರಸ್ಕರಿಸುವುದೇ ಇಲ್ಲ..

ಮಾಲಿನಿ ಗುರುಪ್ರಸನ್ನ 

ಪುರುಷ ಸಾಹಿತಿಗಳು ನಮ್ಮನ್ನು ಪುರಸ್ಕರಿಸುವುದೇ ಇಲ್ಲ. ಹೀಗೆ ಗೊಣಗುಟ್ಟುವವರ ನಡುವೆ ನಿಂತಾಗ ನನಗೆ ವಾಣಿ ನೆನಪಾಗುತ್ತಾರೆ.. ತ್ರಿವೇಣಿ ನೆನಪಾಗುತ್ತಾರೆ. ಎಂ. ಕೆ. ಇಂದಿರಾ ನಗುತ್ತಾರೆ. ಇಂತಹದ್ದೊಂದು ಕೊರಗು ಅವರನ್ನೂ ಕಾಡಿತ್ತಾ ಎಂಬ ಪ್ರಶ್ನೆಯೊಡನೆ ಕೂಡ ತಮ್ಮ ಪಾಡಿಗೆ ತಾವು ಬರೆದುಕೊಂಡುಹೋದ ಇಂತಹ ಹೆಣ್ಣು ಜೀವಗಳು ತಮ್ಮ ಕೃತಿಯಲ್ಲಿ ತೋರಿಸಿರುವ ದಿಟ್ಟತನ, ಬರೆಯುವಾಗ ಆರಿಸಿಕೊಂಡ ವಸ್ತುವೈವಿಧ್ಯ, ವಿವರಗಳನ್ನು ಮೊಗೆಮೊಗೆದು ಕೊಟ್ಟ ಸಾಮರ್ಥ್ಯ ಬೆರಗುಗಣ್ಣು ಹೊತ್ತು ನೋಡುವಂತಾಗುತ್ತದೆ. ನಾನು ನನ್ನ ಕಾರ್ಯಕ್ಷೇತ್ರದ ಅನುಭವಗಳನ್ನು ಕತೆಯಾಗಿ ದಾಖಲಿಸುವಾಗ ನನ್ನ ಕಾರ್ಯಕ್ಷೇತ್ರದ ಕುರಿತ ನಿನ್ನ ಅವಜ್ಞೆಯ ಕುರಿತು ನನ್ನದೂ ಅವಜ್ಞೆಯೇ ಎಂಬಂತೆ ಬರೆಯುತ್ತಾ ಹೋದವರಿವರು. ಸ್ತ್ರೀ ಸಾಹಿತ್ಯದ ಕುರಿತ ದೂರುಗಳಲ್ಲಿ ಬಹಳ ಪ್ರಮುಖವಾಗಿ ಅವು ಅಡುಗೆಮನೆ ಸಾಹಿತ್ಯ, ಹಿತ್ತಲ ಸಾಹಿತ್ಯ, ಕಟ್ಟೆಪುರಾಣದ ಸಾಹಿತ್ಯವೆಂದು ಕರೆಯುವುದೇ ಆದರೆ ಅಲ್ಲೂ ಬದುಕಿದೆ.. ಬದುಕ ಸಂಭ್ರಮಗಳಿವೆ.. ಕಥೆಗಳಿವೆ. ಅವುಗಳನ್ನು ಇವರಂತೆ ದಾಖಲಿಸಲು ಪುರುಷ ಸಾಹಿತ್ಯಕ್ಕೆ ಸಾಧ್ಯವೇ ಇಲ್ಲವೆಂಬಷ್ಟು ವಿಫುಲವಾಗಿ ಸಶಕ್ತವಾಗಿ ಬರೆದವರಿವರು.

ಚಿತ್ತಾಲರ ಕಚೇರಿಯ ಕುರಿತ ಸಣ್ಣಪುಟ್ಟ ಸೂಕ್ಷ್ಮವಿವರಗಳು ಅದರಿಂದ ಉದ್ಭವಿಸುವ ಮಾನಸಿಕ ಕ್ಷೋಭೆಗಳ ಚಿತ್ರಣದಷ್ಟೇ ಸಹಜವಾಗಿ ಪ್ರಖರವಾಗಿ ಒಳಜಗತ್ತಿನ ವಿವರಗಳನ್ನು ಅಲ್ಲಿ ಉದ್ಭವಿಸುವ ತಲ್ಲಣಗಳನ್ನು.. ಶೋಷಣೆಗಳನ್ಮು ತಲ್ಲಣಿಸುತ್ತಲೇ.. ಶೋಷಣೆಗೊಳಗಾಗುತ್ತಲೇ ಕಟ್ಟಿಕೊಟ್ಟವರು ಆಗಿನ ಸ್ತ್ರೀ ಸಾಹಿತಿಗಳು. ಅದರಲ್ಲೂ ಬಹಳ ಪ್ರಮುಖವಾಗಿ ಎಂ.ಕೆ. ಇಂದಿರಾ. ಈ ಎರಡೂ ಜಗತ್ತುಗಳನ್ನು ಅಕ್ಕಪಕ್ಕದಲ್ಲಿಟ್ಟು ನೋಡಿದಾಗಷ್ಟೇ ಆ ಕಾಲದ ಸಾಹಿತ್ಯದ ಒಂದು ಪರಿಪೂರ್ಣ ನೋಟ ದಕ್ಕುವುದು ಎಂಬಲ್ಲಿಗೆ ಅವೆರಡನ್ನೂ ನೋಡಬೇಕಾದ ರೀತಿ ಪರಸ್ಪರ ಪೂರಕವಾಗಿಯೇ ಹೊರತು ಪರಸ್ಪರರ ಲೇವಡಿಯಲ್ಲ. ಅಡಿಗೆಮನೆ ಹಿತ್ತಲುಗಳು ಬದುಕಿನ ಅವಿಭಾಜ್ಯ ಅಂಗವಾದಾಗ ಆ ಮೂಲದಿಂದ ಹೊಮ್ಮಿದ ಸಾಹಿತ್ಯ ಕೂಡಾ ಅವಿಭಾಜ್ಯವೇ ಆಗಬೇಕಿತ್ತು. ದುರಂತವೆಂದರೆ ಹಾಗಾಗಲೇ ಇಲ್ಲ. ಅವಳಿಗೆ ಹುಟ್ಟಿನಿಂದಲೇ ಸಹಜವಾಗಿಯೇ ದಕ್ಕಿದ ಎರಡನೆಯ ದರ್ಜೆಯ ಸ್ಥಾನಮಾನಗಳಿಂದ ಅವಳು ಇದ್ದ ಕ್ಷೇತ್ರ ಎರಡನೆಯ ದರ್ಜೆಯದಾಯಿತೋ.. ಅಥವಾ ಆ ಕ್ಷೇತ್ರದ ಕುರಿತ ಅವಜ್ಞೆಯಿಂದ ಅದು ಎರಡನೆಯ ದರ್ಜೆಯ ಸಾಹಿತ್ಯವೋ . ಲೇಖಕಿಯರ ಅಡುಗೆಮನೆ ಸಾಹಿತ್ಯ ಎಂಬ ಅವಗಣನೆಗೆ ಅನೇಕ ಲೇಖಕಿಯರು ಬರೆದ ಕಳಪೆ ದರ್ಜೆಯ ಸಾಹಿತ್ಯವೇ ಕಾರಣ ಎಂದು ಹೇಳುವುದಾದರೆ ಆ ಕಾಲದ ಪುರುಷ ಸಾಹಿತಿಗಳೆಲ್ಲರೂ ಶ್ರೇಷ್ಠವಾದದ್ದನ್ನೇನೂ ಬರೆದಿರಲಿಲ್ಲ. ಜೊಳ್ಳು ಅಲ್ಲಿಯೂ ಇತ್ತು, ಇಲ್ಲಿಯೂ ಇತ್ತು. ಎರಡೂ ಕಡೆಯ ಜೊಳ್ಳುಗಳನ್ನು ಜಾಲಿಸಿ ಗಟ್ಟಿಕಾಳುಗಳನ್ನು ಸಮಾನವಾಗಿ ನೋಡುವ ಗುಣ ಬೆಳೆಸಿಕೊಳ್ಳಲೇ ಇಲ್ಲ.

ಕಥೆ ಹುಟ್ಟುವುದು ಹೇಗೆ? ಕಥೆ ಸುಪುಷ್ಟವಾಗಲು ಅದರಲ್ಲಿನ ವಿವರಗಳಿಗೆ ಜೀವ ತುಂಬುವುದು ಹೇಗೆ ? ಹೀಗಿದ್ದ ಪ್ರಶ್ನೆಯೊಂದು ಕಾಡುವಾಗ ಕಥೆಯ ವಸ್ತುವನ್ನು ಎಲ್ಲಿಂದಲಾದರೂ ತಂದರೂ ಅದಕ್ಕೆ ಜೀವ ತುಂಬುವುದು ನಮ್ಮನಮ್ಮ ಅನುಭವಗಳ ಮೂಲಸೆಲೆಯಿಂದ. ಕಥೆಯ ವಸ್ತುವನ್ನು ನಾವು ಆರಿಸಿಕೊಳ್ಳುವುದೂ ನಮ್ಮನಮ್ಮ ಭಾವಕೋಶವನ್ನು ಉದ್ದೀಪಿಸುವ ಘಟನೆಗಳನ್ನೇ .

ಯಾವುದಾದರೂ ಒಂದು ಕೃತಿ ಹೇಳಬೇಕಾದ್ದಾದರೂ ಏನು? ಏನನ್ನಾದರೂ ಹೇಳಬೇಕೇಕೆ? ತನ್ನ ಅನುಭವವನ್ನು .. ಅನುಭವದ ಸಾರವನ್ನು ಕಥೆಯ ರೂಪದಲ್ಲಿ ಕಟ್ಟಿಕೊಡುವುದು ಮುಖ್ಯವಲ್ಲವಾ?

ಕಂಡು ಕೇಳಿದ ಕಥೆಯನ್ನು ತನ್ನ ಕಲ್ಪನೆಯಲ್ಲಿ ಸುಪುಷ್ಟಗೊಳಿಸಿ ಹೇಳುವಾಗ ಸಂದೇಶದ ಬಗ್ಗೆ ಯೋಚಿಸದೆ ಹಾಗಿದ್ದ ಕಥೆಯೊಂದು ಅಲ್ಲಿ ನಡೆದಿದೆ. ಅದನ್ನು ಕಟ್ಟಿಕೊಡುವುದಷ್ಟೇ ತನ್ನ ಕೆಲಸ ಎಂಬಂತೆ ಬರೆಯುವುದೇ ಒಳಿತಾ? ಓದುಗ ತನಗೆ ಬೇಕಾದ್ದನ್ನು ತಾನು ಗ್ರಹಿಸುತ್ತಾನೆ ಎಂಬುದೇ ಕೊನೆಗುಳಿಯುವ ಸತ್ಯವಾ? ಹಾಗಾದರೆ ಸದಾನಂದದಲ್ಲೊಂದು ಸಂದೇಶವಿದೆಯಲ್ಲ.

ಅವರ ಪ್ರಸಿದ್ಧ ಕೃತಿ ಗೆಜ್ಜೆಪೂಜೆಯಲ್ಲಿ ಬರುವ ಚಂದ್ರ, ಕುಲಸ್ಥರ ಮನೆಯ ಹುಡುಗಿಯಾಗಿಯೂ ಸಂಗವ್ವನ ಹುಲಿಯಂತಹಾ ಕೈಗೆ ಸಿಕ್ಕಿಬಿದ್ದು ವೇಶ್ಯೆಯಾಗುವ ಗರತಿಯಂತಹಾ ಅಪರ್ಣೆ.. ಬ್ರಾಹ್ಮಣರ ಕೇರಿಯಲ್ಲಿ ಪೀಡೆಯಂತೆ ಬಂದ ಈ ಸಂಸಾರ ಕಡೆಗೆ ಅವರೆಲ್ಲರ ಸಹಾನುಭೂತಿಗೂ ಪ್ರೀತಿಗೂ ಪಾತ್ರರಾಗುವ (ಸಂಗವ್ವನನ್ನು ಬಿಟ್ಟು) ರೀತಿಯನ್ನು ಅದ್ಭುತವೆಂಬಂತೆ ಕಟ್ಟಿಕೊಟ್ಟಿರುವ ಇಂದಿರಾ ಈ ಕಾದಂಬರಿಯ ಮೂಲಕ ಏನನ್ನು ಹೇಳಲು ಹೊರಟಿದ್ದಾರೆ?

ಮೊದಲು ಬಂದ ತುಂಗಭದ್ರ ಓದುವಾಗ ನೂರು ಭಾವಗಳು ಕಾಡುತ್ತವೆ . ಮೊಟ್ಟಮೊದಲನೆಯದಾಗಿ ಅವರೇನು ಹೇಳಹೊರಟಿದ್ದಾರೆ? ಕೃಷ್ಣೆ ಮಡಿದ ನಂತರ ಮುದ್ದುರಾಮನ ಪರಿಸ್ಥಿತಿ .. ಮಂದಾಳ ಒಲವು ..ಅವಳೊಡನೆ ತುಂಗ ಭದ್ರ ಇಬ್ಬರನ್ನೂ ವಿವಾಹವಾಗುವ ಮುದ್ದುರಾಮ.. ಮೊದಲ ಓದಿಗೆ ವಿಚಿತ್ರವೆನ್ನಿಸಿತ್ತು. ಹೀಗೂ ಇರಬಹುದೇ? ಮರು ಓದಲ್ಲಿ ಮತ್ತೆಮತ್ತೆ ಓದುವಲ್ಲಿ ಬೇರೆ ಬೇರೆಯದೇ ಹೊಳಹುಗಳು.

ನಾನಿಲ್ಲಿ ಅವರ ಎಲ್ಲ ಕೃತಿಗಳ ಬಗ್ಗೆ ಮಾತನಾಡಲಿಚ್ಚಿಸುವುದಿಲ್ಲ. ಅವರ ಪ್ರಮುಖ ಕಾದಂಬರಿಗಳಲ್ಲೊಂದಾದ ಸದಾನಂದದಲ್ಲಿ ಅವರು ಸೃಷ್ಟಿಸಿರುವ ಅದ್ಭುತ ಪಾತ್ರಗಳು ಇಂದಿಗೂ ಜೀವಂತ. ಮಲೆನಾಡಿನ ಸಂಪ್ರದಾಯಸ್ಥ ಕುಟುಂಬದ ಒಂದು ಪರಿಪೂರ್ಣ ಚಿತ್ರಣವನ್ನು ಕಟ್ಟಿಕೊಡುತ್ತಲೇ ಅದರೊಳಗೆ ಹಾಸು ಹೊಕ್ಕಾಗಿರುವ ಮೂಢನಂಬಿಕೆಗಳು, ವೈಚಾರಿಕತೆಗಳು, ದಿಟ್ಟತನ, ಹೇಡಿತನ… ಯಾವುದನ್ನೂ ವೈಭವೀಕರಿಸದೆ ಹಾಗೆಹಾಗೇ ಓದುಗನ ತಟ್ಟೆಗೆ ಬಡಿಸುವುದು ಅವರ ವೈಶಿಷ್ಟ್ಯ. ಕಾದಂಬರಿಯ ಶುರುವಿನಲ್ಲೇ ಬರುವ ಹಳೆಯ ಕಾಲವನ್ನು ಪ್ರತಿನಿಧಿಸುವ ನೂಕೋನರಸಿಂಹ ಬಸ್ಸು ಅಪ್ಯಾಯವೆನಿಸುವ ಹೊತ್ತಿಗೇ ಆಧುನಿಕತೆ ಪ್ರವೇಶಿಸುತ್ತಿರುವ ಕುರುಹಾದ ಮಾರುತಿ ಆಕರ್ಷಿಸುವುದಿಲ್ಲ. ಅದಕ್ಕೆ ಕಾರಣ ಕಾದಂಬರಿಯುದ್ದಕ್ಕೂ ಬರುವ ಇಂದಿರಾ ಅವರ ಆಧುನಿಕತೆಯ ವಿರುದ್ಧವಲ್ಲದ ವಿರುದ್ಧ ಮನಸ್ಥಿತಿ ಕಾರಣವಾ.. ಓದುತ್ತಾ ನಾಸ್ಟಾಲ್ಜಿಕ್ ಆಗಿಬಿಡುವ ನಮ್ಮ ಮನಸ್ಸಾ ಗೊತ್ತಿಲ್ಲ. ನೂಕುವಿಕೆಯ ದಣಿವಿಗಿಂತ ನರಸಿಂಹಯ್ಯನವರ ಒಳ್ಳೆಯತನದ ಬಗ್ಗೆ ಗೌರವವಿಟ್ಟು ನೂಕೋ ನರಸಿಂಹಕ್ಕೇ ಶರಣಾಗುವ ರಾಜುವಿನಲ್ಲಿ ನಾಯಕನನ್ನು ಥಟ್ಟನೆ ಗುರುತಿಸಿಬಿಡುತ್ತೇವೆ. ನಗರಜೀವನಕ್ಕೆ ಮಾರುಹೋಗಿ ಮಾರುತಿಯನ್ನು ಅಪ್ಪಿಕೊಳ್ಳುವ ಮೂರ್ತಿ ನಮ್ಮ ಕಣ್ಣಿನಲ್ಲಿ ಇಳಿದು ಹೋಗುತ್ತಾನೆ ಅಥವಾ ಇಳಿಯುವಂತೆ ಕಾದಂಬರಿಗಾರ್ತಿ ಚಿತ್ರಿಸಿದ್ದಾರೆ. ಅದು ಬಚ್ಚನನ್ನು ಮದುವೆಗೆ ಕರೆದೊಯ್ಯುವ ಪ್ರಸಂಗವಿರಲಿ, ರಾಮಣ್ಣನವರು ಕಂಗಾಲಾದ ಗಳಿಗೆಯಿರಲಿ, ಕಮಲೆಯ ಮನದ ಅಳಲಿರಲಿ, ತಂತ್ರಿಯವರ ಜೀವನ ಕ್ರಮವಿರಲಿ,ಅಂಬಕ್ಕ ಅಚ್ಚಮ್ಮ ಯಂಟಮ್ಮ ಪುಟ್ಟಮ್ಮಮುಂತಾದವರ ಕುರಿತು ವಿವರಣೆಗಳಿರಲಿ

ಭಾಷೆಯನ್ನು ಸರಾಗವಾಗಿ ನಿರ್ಭೀಡೆಯಿಂದ ಇಂದಿರಾ ಬಳಸುವ ರೀತಿ ಅನನ್ಯ. ಮಹಿಳಾ ಕಥೆಗಾರ್ತಿಯರು ಸಹಜವಾಗಿ ಅನುಭವಿಸುವ ಮುಜುಗರ ಇಂದಿರಾ ಅವರನ್ನು ಕಾಡುವುದೇ ಇಲ್ಲ.

” ‘ ಯೇನಾ, ಅತ್ತೆ ಮನೀಗೆ ಹೋಗ್ತೀರನ್ರಾ? ಏನ್ಸಮಾಚಾರ? ‘

ರಾಜು ಆತುರದಿಂದ ಬಾಯಿಬಿಟ್ಟ .

” ಮೂರ್ತಿಗೆ ಎಸ್.ಎಸ್.ಎಲ್.ಸಿ. ಫಸ್ಟ್ ಕ್ಲಾಸಿನಲ್ಲಿ ಪಾಸಾಯಿತು. ಪುಟ್ಟತ್ತೆಗೆ ಹೇಳಿಬಿಟ್ಟು ಬರ್ತೀನಿ”

ಅವರು ಥಟ್ಟನೆ ಮೂರ್ತಿಯ ಕಡೆ ತಿರುಗಿ ಆಶ್ಚರ್ಯದಿಂದ,

” ಯಲಾ ತಾಯಿಗ್ಗಂಡ ! ನಂಗ್ಯಾಕ ಹೇಳಲಿಲ್ಲ ಮತ್ತೆ ?” ಎಂದರು. ”

ಮತ್ತೊಂದು ಕಡೆ

” ” ಥತ್ ಇದರವ್ವನ ” ಎನ್ನುತ್ತಾ ಶಿಂಗ್ರಿ ಬಿರ್ರನೆ ಕೆಳಗಿಳಿದ. ಶಿಂಗರಿಯ ಸಾಹಿತ್ಯ ಭಂಡಾರ ಬಹಳ ಪವಿತ್ರವಾದದ್ದು ಅವನು ದಿನವೂ ಬಸ್ಸಿನ, ಅದರ ಮಾಲೀಕರ ಕುಲಕೋಟಿ ಉದ್ಧಾರ ಮಾಡುತ್ತಿದ್ದ.

ಸಾಕ್ಷಾತ್ ನರಸಿಂಹಯ್ಯನವರಿಗೇ ಆದರೂ ಅವರೆಂದೂ ಬೇಸರ ಪಟ್ಟುಕೊಂಡವರೇ ಅಲ್ಲ.

ದಿನವೂ ಅಭಿಷೇಕಕ್ಕೆ ಹಾಲು ಕೊಡುವ ಮನೆಯ ದನ ಗೋಪಿ, ಮಡದಿ ಲಕ್ಷ್ಮೀದೇವಮ್ಮನವರು, ಕಾಡಾನೆಯಂತಿದ್ದ ಬಸ್ಸು ಮತ್ತು ಡ್ರೈವರ್ ಶಿಂಗ್ರಿ ಇವರೆಲ್ಲರ ಮೇಲೂ ಒಂದೇ ವಿಧವಾದ ಪ್ರೇಮ- ವಿಶ್ವಾಸ ಇಟ್ಟುಕೊಂಡವರು ಲಕ್ಷ್ಮೀನರಸಿಂಹಯ್ಯನವರು.

ಅವರು ಸಮಾಧಾನದಿಂದಲೇ ಕೇಳಿದರು:

” ಮತ್ತೇನಾತಾ ಶಿಂಗ್ರಿ ?”

ಶಿಂಗ್ರಿಗೆ ಮೈಯ್ಯೆಲ್ಲಾ ಉರಿಯಿತು. ಅವನೂ ಉರಿದುಬಿದ್ದ .

” ಆತು ನನ್ನಮ್ಮನ ಪಿಂಡ “.

ನರಸಿಂಹಯ್ಯನವರು ತೆಪ್ಪನೆ ಕುಳಿತರು . ”

ಇದು ಇಂದಿರಾ ಅವರು ಭಾಷೆಯನ್ನು ನಿರ್ಭೀಡೆಯಿಂದ ಬಳಸುವ ರೀತಿ. ಯಾವ ಸಂಕೋಚವೂ ಇಲ್ಲದೆ ಜಗತ್ತು ಹೇಗಿದೆಯೋ ಹಾಗೆ ಆದರೆ ಮುಜುಗರಕ್ಕೆಡೆಯಿಲ್ಲದಂತೆ ಕಟ್ಟಿಕೊಡುತ್ತಾ ಹೋಗುತ್ತಾರೆ. ಕಾದಂಬರಿಯ ಉದ್ದಕ್ಕೂ ಇರುವುದು ಇಂತಹಾ ಲವಲವಿಕೆಯ ನಿರೂಪಣೆ. ಆ ಕಾದಂಬರಿಯ ನಾಯಕಿ ಕಮಲೆಯಾದರೂ ದಿಟ್ಟತನದಲ್ಲಿ ಸೆಳೆಯುವವಳು ಗೌರಿಯೇ.ಇಲ್ಲಿ ಅವರು ಪಾತ್ರವೊಂದರ ಪ್ರೀತಿಯನ್ನು ಕೊಂದು ಔದಾರ್ಯ ಮೆರೆಯುವಂತೆ ಮಾಡಿದ್ದಾರೆ. ಆದರ್ಶವೆಂಬುದು ಇರಬೇಕಾದಷ್ಟೆ ಇದ್ದಾರೆ ಚೆನ್ನು , ಔದಾರ್ಯದ ಅಡಿಪಾಯದ ಮೇಲೆ ಕಟ್ಟಲ್ಪಟ್ಟ ದಾಂಪತ್ಯ ಎಷ್ಟು ಕಾಲ ಬಾಳೀತು ಎಂದು ಮೊದಲ ಓದಿಗೆ ಅನ್ನಿಸಿದರೂ ಅಲ್ಲಿ ಜಾನಕಿಯನ್ನು ದೂರ ಮಾಡಿ ಅವಳ ನೆನಪಿನಲ್ಲಿ ನೋಯುತ್ತಾ ಗೌರಿಯನ್ನು ಉದ್ಧರಿಸಿದವನು ರಾಜು ಎಂಬಅಭಿಪ್ರಾಯ ಮೂಡಬಹುದಾದರೂ ಕಾದಂಬರಿಯನ್ನು ಗಮನವಿಟ್ಟು ಓದಿದರೆ ಅರಿವಾಗುವುದು ರಾಜು ಜಾನಕಿಯರ ಮಧ್ಯೆ ಇದ್ದ ಸೆಳೆತ ಪ್ರೇಮವಲ್ಲ. ಜಾನಕಿಯದು ಪ್ರೇಮವೇ ಆದರೂ ರಾಜುವಿನದ್ದು ಅವರಿಬ್ಬರ ಮದುವೆಯ ಮಾತುಕತೆಯ ಫಲವಾಗಿ ಹೊಮ್ಮಿದ್ದು. ಹೀಗಾಗಿ ರಾಜುವಿಗೆ ಜಾನಕಿಯನ್ನು ಬಿಡುವುದು ಕಷ್ಟವಾಗುವುದಿಲ್ಲ . ಅಂತರ್ಗತವಾಗಿ ಅಡಗಿದ್ದ ಪ್ರೀತಿ ಗೌರಿಯ ಬಗ್ಗೆಯೇ ಹೊರತು ಜಾನಕಿಯ ಬಗ್ಗೆಯಲ್ಲ. ಆಗಲೂ ಅವನು ವ್ಯಥೆ ಪಡುವುದು ಜಾನಕಿಯ ಮನಸ್ಥಿತಿಯ ಕುರಿತೇ ಹೊರತು ಜಾನಕಿಯನ್ನು ತನಗೆ ಬಿಡಲು ಸಾಧ್ಯವಿಲ್ಲ ಎಂದಲ್ಲ. ಇದೆಲ್ಲವನ್ನೂ ಹೇಳದೆಯೇ ಹೇಳುವುದು ಇಂದಿರಾ ವೈಶಿಷ್ಟ್ಯ.

” ತೀರ ಅವಳ ಸನಿಹದಲ್ಲಿ ಕುಳಿತು ಅವಳ ಮುಖವನ್ನೇ ರೆಪ್ಪೆ ಮಿಸುಕದೆ ನೋಡುತ್ತಿದ್ದಾನೆ. ಅಂದೇ ಜನನವಾದ ಕೂಸಿನ ಅಂಗಾಂಗವನ್ನು ತಾಯಿ ಪರೀಕ್ಷಿಸುವಂತೆ. ಇಷ್ಟು ದಿನ ಒಂದು ಛಾಯಾ ಮಾತ್ರವಾಗಿ ತನ್ನ ಎದೆಯೊಳಗೆ ಕುಳಿತು ಅಲ್ಲಿ ಜಾನಕಿಗೆ ಎಡೆ ಕೊಡದ ಗೌರಿ ಇಂದು ತನ್ನೆದುರು ಸಾಕಾರವಾಗಿ ಕುಳಿತಿದ್ದಾಳೆ. ”

” ಹಿಂದೆ ಕೆಲವು ವರ್ಷಗಳಿಂದ ತನ್ನ ಮನದ ಆಳದಲ್ಲಿ ಅಸ್ಪಷ್ಟವಾಗಿ ಅವಿತು ಕುಳಿತಿದ್ದ ಒಂದು ಪಾವನ ರೂಪ ಅವಳೆದುರು ಕುಳಿತಿತ್ತು. ಅವಳು ಮೌನವಾಗಿ ಅಲ್ಲೇ ಆಸರೆಯಾಗಿ ಸಿಕ್ಕಿದ ಅವನ ಭುಜಕ್ಕೆ ಒರಗಿದಳು.”

ಮೇಲ್ಕಂಡ ವಾಕ್ಯಗಳು ಅವರಿಬ್ಬರ ನಡುವೆ ಸುಪ್ತವಾಗಿ ಅವರಿಗೇ ಅರಿಯದಂತೆ ಮನೆಮಾಡಿದ್ದ ಪ್ರೀತಿಯ ಬಗ್ಗೆ ಹೇಳುತ್ತದೆ. ಹಾಗಾಗಿ ಅಲ್ಲಿ ರಾಜು ಮಾಡಿದ ತ್ಯಾಗ ಪ್ರೀತಿಯ ತ್ಯಾಗವಲ್ಲ. ಗೌರಿ ಅದನ್ನು ಮರುಮಾತಿಲ್ಲದೆ ಒಪ್ಪುವುದೂ, ಜಾನಕಿಯನ್ನು ಬಿಟ್ಟಿದ್ದಕ್ಕೆ ಆಕ್ಷೇಪಿಸದಿರುವುದೂ ಕೂಡಾ ಆ ಸುಪ್ತ ಪ್ರೀತಿಯ ಗುರುತಿಸುವಿಕೆಯಿಂದ. ಗೌರಿಯನ್ನು ತೊರೆದು ಮುಕ್ತಾಳನ್ನು ಮದುವೆಯಾಗುವ ಮೂರ್ತಿಯನ್ನು ಮುಕ್ತಾ ತರಾಟೆಗೆ ತೆಗೆದುಕೊಳ್ಳುವ ಹಾಗೆ ಜಾನಕಿಯನ್ನು ತೊರೆದು ತನ್ನನ್ನು ಮದುವೆಯಾಗಲು ನಾಟಕವಾಡಿದ ರಾಜುವನ್ನು ಗೌರಿ ತರಾಟೆಗೆ ತೆಗೆದುಕೊಳ್ಳದಿರಲು ಪ್ರಮುಖ ಕಾರಣ ಅವಳಿಗೆ ಪರ್ಯಾಯವಿಲ್ಲ ಎಂಬುದಾಗಿರದೆ ತಮ್ಮಿಬ್ಬರ ನಡುವಿನ ಸುಪ್ತ ಪ್ರೀತಿಯನ್ನು ಕಂಡುಕೊಂಡಿದ್ದಕ್ಕೆ ಎಂದು ನನಗನ್ನಿಸುತ್ತದೆ. ಇಂತಹದ್ದೊಂದು ನವಿರಾದ ಪ್ರೀತಿಯನ್ನು ಕಾದಂಬರಿಯುದ್ದಕ್ಕೂ ಗುಪ್ತಗಾಮಿನಿಯಾಗಿ ಹರಿಯುತ್ತಿರುವಂತೆ ಚಿತ್ರಿಸಿದವರು ಇಂದಿರಾ.

ಸದಾನಂದ ಕೃತಿಯ ಬಗ್ಗೆ ಇರುವ ಪ್ರಮುಖ ಆರೋಪವೆಂದರೆ ಸದಾನಂದರ ಪಾತ್ರದ ವೈಭವೀಕರಣ ಮಾಡಿದ್ದಾರೆ ಎನ್ನುವುದು. ಒಬ್ಬ ವ್ಯಕ್ತಿ ಹಾಗಿರಬಲ್ಲನೆ … ಹಾಗಿರಲು ಸಾಧ್ಯ ಎಂದು ಸಮರ್ಥಿಸಿಕೊಳ್ಳುವ ಮೊದಲು ಆ ಕೃತಿ ಬಂದ ಕಾಲಘಟ್ಟದ ಕಡೆ ಗಮನ ಹರಿಸಬೇಕಾಗುತ್ತದೆ. ಕಮಲಳಂತಹ ಸುಸಂಪನ್ನ ಹೆಣ್ಣು ಮಗಳನ್ನು ಸದಾನಂದನಂತಹ ಆದರ್ಶ ಪುರುಷನೊಬ್ಬ ಮಾತ್ರ ಸುಖವಾಗಿಡಬಲ್ಲ ಎಂಬುದು ಅವರ ಭಾವವಿದ್ದಿರಬಹುದು. ವಿಧವಾ ವಿವಾಹ ಅಪರೂಪವಾಗಿದ್ದ ಆ ಕಾಲದಲ್ಲಿ ಒಬ್ಬ ವಿಧವೆಯನ್ನು ಮದುವೆಯಾಗಲು ಮುಂದೆ ಬರಬಲ್ಲ ಗಂಡು ಇಂತಹವನೇ ಎಂದು ಕೊಂಡಿದ್ದರಾ ಅಥವಾ ಇಂತಹವನಿಗೆ ತಮ್ಮ ಮಗಳನ್ನು ನಿರಾತಂಕದಿಂದ ಕೊಟ್ಟುಬಿಡಬಹುದು ಎಂಬ ಭಾವನೆ ಹೆತ್ತವರಲ್ಲಿ ಮೂಡಿಸಲೋಸುಗವಾ ಎಂಬಂತೆ ಸದಾನಂದನ ಪಾತ್ರ ಚಿತ್ರಿಸಲ್ಪಟ್ಟಿದೆ. ಹಾಗೆ ನೋಡಿದರೆ ಆ ಕಾಲದ ಎಲ್ಲ ಕಥೆಗಾರರೂ ಪಾತ್ರಗಳನ್ನೂ ಉದಾತ್ತೀಕರಿಸಿದವರೇ. ಕುವೆಂಪುರವರ ಹೂವಯ್ಯನ ಪಾತ್ರ ಅದಕ್ಕೊಂದು ಸ್ಪಷ್ಟ ನಿದರ್ಶನ. ಹಾಗಿದ್ದರೆ ಮಾತ್ರ ಆತ ನಾಯಕನಾಗಬಲ್ಲ ಎಂಬ ಉದ್ದೇಶವೂ ಇದ್ದಿರಬಹುದು. ಆದರೆ ಹಾಗಿದ್ದ ಪಾತ್ರಗಳು ಇರುವುದೇ ಇಲ್ಲ ಎನ್ನಲೂ ಸಾಧ್ಯವಾಗದು. ಹಾಗೆಂದು ಸದಾನಂದ ಆದರ್ಶಗಳೇ ಮೈವೆತ್ತ ಪುರುಷನೆಂದಲ್ಲ. ಅವರ ವೀಳ್ಯ, ಸಿಗರೇಟು, ಕುಡಿತ, ಇಸ್ಪೀಟು ಎಲ್ಲವೂ ಇರುವ ಮನುಷ್ಯ. ಆತನೇ ಹೇಳುವಂತೆ ಅದರಲ್ಲೂ ಸಂಯಮ ಹೊಂದಿರುವವ. ಆದವನಿಗೆ ಚಟವೂ ಅಲ್ಲ, ಅಭ್ಯಾಸವೂ ಅಲ್ಲ. ಅಪರೂಪದ ಗೆಳೆಯರು ಸೇರಿದಾಗ ಆ ಗಳಿಗೆಯ ಮೋಜು. ಹೀಗಿದ್ದ ಯಾವುದೇ ಅಭ್ಯಾಸಗಳನ್ನರಿಯದ ಮತ್ತೊಬ್ಬ ಆದರ್ಶ ಪುರುಷ ರಾಜುವಿಗೆ ಗೌರಿಯನ್ನು ಮದುವೆಯಾಗಲು ಸೂಚಿಸುವ ಸದಾನಂದ ಅರೆಕ್ಷಣ ರಾಜುವಿಗಿಂತ ಎತ್ತರ ಎನ್ನಿಸಿಬಿಡುತ್ತಾರೆ. ಇಂತಹ ಪಾತ್ರಗಳನ್ನೂ ಸೃಷ್ಟಿಸಿದ ಇಂದಿರಾ ಆ ಕಾಲದಲ್ಲಿ ಇಂತಹ ಅಭ್ಯಾಸಗಳನ್ನೊಳಗೊಂಡೂ ಆದರ್ಶಪುರುಷನಾಗಿರಬಹುದು ಎಂದು ಹೇಳುತ್ತಾ ಅವರ ಕಾಲದ ಮಿಕ್ಕ ಸಾಹಿತಿಗಳಿಗಿಂತ ಬಹುತೇಕ ಮುಂದುವರಿದವರಂತೆ ಕಾಣಿಸುತ್ತಾರೆ.

ಕರುಳು ಕತ್ತರಿಸುವಂತೆ ಬರೆದಿರುವ ಗೆಜ್ಜೆಪೂಜೆ ಇಂದಿರಾ ಅವರ ಮತ್ತೊಂದು ಮಹತ್ವದ ಕಾದಂಬರಿ. ಬ್ರಾಹ್ಮಣರ ಕೇರಿಗೆ ಬರುವ ವೇಶ್ಯೆಯ ಕಥೆ ಆರಂಭದಲ್ಲಿಯೇ ಅವರು ಎದುರಿಸುವ ಸಮಸ್ಯೆಗಳನ್ನು ಮನಮುಟ್ಟುವಂತೆ ಹೇಳಿದೆ. ತಾರುಣ್ಯದ ಪ್ರೀತಿಗೆ ಮಗುವನ್ನು ಒಡಲಲ್ಲಿ ಧರಿಸಿ ಬೇರೆ ದಾರಿ ಕಾಣದೆ ಯಾರಿಂದಲೋ ವೇಶ್ಯೆಯಾಗಿ ಪರಿವರ್ತಿಸಲ್ಪಟ್ಟು ಅವರನ್ನೇ ಅಮ್ಮ ಎಂದು ಕರೆಯುವ ಅನಿವಾರ್ಯತೆಗೆ ಸಿಲುಕುವ ‘ಸೂಳೆಯೊಳಗಿನ ಗರತಿ’ ಅಪರ್ಣ, ಜಿಂಕೆಕಣ್ಣಿನ ಅಪರಿಮಿತ ಸುಂದರಿ ಮಗಳು ಚಂದ್ರ, ಇವರಿಬ್ಬರ ಸೌಂದರ್ಯವನ್ನು ಮೆಚ್ಚುತ್ತಾ ಅದನ್ನು ಹಣವನ್ನಾಗಿ ಪರಿವರ್ತಿಸುವ ಉದ್ದೇಶ ಹೊತ್ತ ಮುದುಕಿ ಸಂಗವ್ವ .. ಈ ಮೂವರ ಆಗಮನದಿಂದ ಆತಂಕಕ್ಕೊಳಗಾಗುವ ಆ ಬೀದಿಯ ಜನತೆ ಅದರಲ್ಲೂ ಎದುರಿನ ಶೇಷಾವಧಾನಿಗಳ ಮನೆಯ ತಂಗಮ್ಮ, ಅವರತ್ತೆ ಗುಂಡಮ್ಮ. ಆ ಕ್ಷಣದ ಅಮಲಿಗೆ ಮನಸೋತದ್ದಕ್ಕೆ ಜನಿಸಿದ ಮಗಳು ಅನುಭವಿಸುವ ವೇದನೆಯನ್ನು ಅನುದಿನ ನೋಡುತ್ತಾ ಆ ಸಂಕಟದಲ್ಲಿ ಅನುಕ್ಷಣ ಸತ್ತಂತೆ ಬದುಕುವ ಅಪರ್ಣಳ ಪಾತ್ರ ದುರಂತದಲ್ಲಿ ಆದಿ ತೆಗೆದಂತಿದೆ.

ಚಂದ್ರಾಳ ತೊಳಲಾಟ ಕಾದಂಬರಿಯುದ್ದಕ್ಕೂ ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತಾ ಹೋಗುತ್ತಾರೆ. ಚಿಟ್ಟೆಯಂತೆ ಹಾರಾಡಿಕೊಂಡಿದ್ದ ಚಂದ್ರಾ ಬರಬರುತ್ತಾ ಮುಟ್ಟಿದರೆ ಮುನಿಯಷ್ಟು ಸೂಕ್ಷ್ಮ ಸ್ವಭಾವದವಳಾಗಿ ಪರಿವರ್ತನೆಯಾಗುವ ಬಗೆಯ ಒಂದು ಚಿತ್ರಣ ಇಲ್ಲಿದೆ.

” “ಕಳ್ಳ ಸೂಳೆಮಗನೇ, ಎಷ್ಟು ಜನಕ್ಕೆ ಹುಟ್ಟಿದೋನೋ ನೀನು!?”

“ಕತ್ತೆ ಸೂಳೆಮಗನೇ, ನೀನೇ ನೂರ್ ಜನದ ಪಿಂಡ. ನಿಮ್ಮಮ್ಮ ದಿನಕ್ಕೆ ಇಪ್ಪತ್ತು ಜನಕ್ಕೆ….”

ಚಂದ್ರಾ ತುಟಿಕಚ್ಚಿ ಮಾಲತಿಯ ಭುಜ ಹಿಡಿದುಕೊಂಡಳು. ಬೀದಿಯ ಜಗಳ ನೋಡುತ್ತಾ ನಿಲ್ಲುವಷ್ಟು ವೇಳೆ ಇರಲಿಲ್ಲ ಇಬ್ಬರಿಗೂ.

“ಬಾರೆ ಹೋಗೋಣ, ಅದನ್ನೇನು ನೋಡೋದು ?”

ಅನ್ನುತ್ತಾ ಹೆಜ್ಜೆ ಹಾಕಿದಳು ಮಾಲತಿ, ಉತ್ತರ ಕೊಡದೆ ಮುಖ ಬಾಗಿ ಅವಳ ಬದಿಯಲ್ಲಿ ನಡೆದಳು ಚಂದ್ರಾ. ಅವಳ ಮೌನವನ್ನು ಕಂಡು ಮಾಲತಿ ಇತ್ತ ನೋಡಿದಳು. ಚಂದ್ರಾಳ ಕಣ್ಣುಗಳಲ್ಲಿ ನೀರಾಡುತ್ತಿದೆ. ಮುಖ ಸಿಟ್ಟಿನಿಂದ ಉರಿಯುತ್ತಿದೆ. ಮಾಲತಿ ಅಚ್ಚರಿಯಿಂದ ಕೇಳಿದಳು.

” ನಿಂಗೇನಾಯಿತೇ ಅಳೋಕೆ?”

“ಸೂಳೆ ಸೂಳೆ ಅನ್ನದೆ ಮಾತಾಡೋಕೆ ಬರಲ್ಲ ಈ ಜನಕ್ಕೆ.ಮಾತೆತ್ತಿದರೆ ಸೂಳೆಮಗನೇ ಅಂತಾರೆ. ಸೂಳೆ ಅಷ್ಟ್ ಕೆಟ್ಟೋರು ಇನ್ಯಾರು ಇಲ್ವೇ ಇಲ್ವೇನೋ ಪ್ರಪಂಚದಲ್ಲಿ.”

” ಸಾಕೆ! ಕುಂಡಿ ಮೇಲೆ ಹೊಡದ್ರೆ ದವಡೆ ಹಲ್ಲು ಬಿತ್ತೂಂತ ಯಾರೋ ಏನೋ ಜಗಳ ಮಾಡ್ಕೊಂಡ್ರೆ ನೀ ಯಾಕೆ ಹೀಗಾಡ್ತೀಯಾ”

“ಜಗಳ ಮಾಡ್ಕೊಳ್ಳಿ ಯಾರ್ಗೆನಂತೆ. ಮೂರ್ಹೊತ್ತೂ ಸೂಳೆ ಸೂಳೆ ಅಂತ ಯಾಕನ್ನಬೇಕೋ ?”

ಮಾಲತಿ ಮತ್ತಷ್ಟು ಜೋರಾಗಿ ನಕ್ಕಳು

” ಸುಮ್ನಿರೇ ಸಾಕು, ಕಳ್ಳನ ಮನಸ್ಸು ಹುಳ್ಳಗೇಂತ. ನಾ ಸೂಳೆ ಅಂತ ನೀನೇ ಮೂರ್ಹೊತ್ತೂ ಯೋಚ್ನೆ ಮಾಡ್ತಿರ್ತೀಯೇನೋ . ಅದಕ್ಕೆ ನಿಂಗೇ ಈ ಕೆಲಸಕ್ಕೆ ಬಾರದ ಚಿಂತೆ. ಬೈದಾಡೋರು ಏನೇನೊ ಅಂದ್ಕೊತಾರೆ. ನಮ್ಮ ಜನ ನೋಡು, ಗಂಡ ಸತ್ತ ಕೂಡ್ಲೇ ತಲೆ ಬೋಳಿಸೋದೂ ಅವರೇ. ಆಮೇಲೆ ರಂಡೆ ಮುಂಡೆ ಅಂತ ಬೈಯ್ಯೋರೂ ಅವರೇ.. ಅದಕ್ಕೇನು ಮಾಡೋಕಾಗುತ್ತೆ ಹೇಳು. ಸಧ್ಯ ನಿಂಜನಕ್ಕೆ ಈ ಮುಂಡೆತನ ಬಂದಿಲ್ಲ. ನಿತ್ಯ ಮುತ್ತೈದೆತನ ನಿಮ್ಮ ಜಾತಿಗೆ. ನಮ್ಮ ಜನದ ಕಷ್ಟ ನಿಂಗೇನ್ ಗೊತ್ತು.” ”

ಮಾಲತಿಯ ಪಾತ್ರ ಚಂದ್ರಾಳನ್ನು ಸಮಾಧಾನಿಸುತ್ತಲೇ ಇಂದಿರಾ ಅವರ ಚಿಂತನೆಗಳನ್ನು, ಅವರ ವೈಚಾರಿಕತೆಯನ್ನುಹೇಳುತ್ತಾ ಹೋಗುತ್ತದೆ.

ಇದು ಇಂದಿರಾ !!

ಹರೆಯದ ಆಕರ್ಷಣೆ ಸೋಮು ಚಂದ್ರಾ ಇಬ್ಬರನ್ನೂ ಬಿಡುವುದಿಲ್ಲ. ಅದು ಕೇವಲ ಆಕರ್ಷಣೆಯಾಗುಳಿಯದೆ ಪ್ರೀತಿಯಾಗಿ ಪರಿವರ್ತಿತವಾದಾಗಲೂ ಅಲ್ಲಿ ಅವರಿಬ್ಬರಿಗೂ ಅತ್ಯಂತ ಸ್ಪಷ್ಟವಾಗಿ ಗೊತ್ತಿರುತ್ತದೆ ತಾವಿಬ್ಬರೂ ಮದುವೆಯಾಗಲು ಸಾಧ್ಯವೇ ಇಲ್ಲವೆಂಬುದು . ತಮ್ಮ ಪ್ರೀತಿಗೆ ಸಮಾಜ ಮತ್ತು ತಮ್ಮ ಕುಟುಂಬಗಳು ಮನ್ನಣೆಯನ್ನು ಕೊಡುವುದಿಲ್ಲವೆಂದು ತಿಳಿದಿದ್ದರೂ ಒಂದು ನವಿರಾದ ಪ್ರೀತಿ ಅವರಿಬ್ಬರ ಮಧ್ಯೆ ಅರಳುತ್ತದೆ. ಆದ್ದರಿಂದಲೇ ಸೋಮುವಿನ ಮದುವೆ ನಿಶ್ಚಯವಾದಾಗ ಚಡಪಡಿಸುವ, ನೋಯುವ ಚಂದ್ರಾಳಿಗೆ ಅವನ ಬಗ್ಗೆ ಸಿಟ್ಟು ಮೂಡುವುದಿಲ್ಲ. ಬೇಸರ ಬೆಟ್ಟದಷ್ಟಿದ್ದರೂ ಅದು ಅವನ ಕುರಿತದ್ದಲ್ಲ. ಇದರ ಅಂತ್ಯ ಹೀಗೇ ಎಂಬ ಸ್ಪಷ್ಟ ಅರಿವಿದ್ದೂ ಆ ಪ್ರೀತಿ ಮೂಡುವುದನ್ನು ಅವರಿಬ್ಬರಿಂದಲೂ ತಪ್ಪಿಸಲಾಗುವುದಿಲ್ಲ. ಒಂದು ವೇಳೆ ಚಲನಚಿತ್ರದಲ್ಲಿರುವಂತೆ ಅದು ಕಮಿಟ್ ಆಗಿ ನಂತರ ಅನುಮಾನಕ್ಕೆ ಬಲಿಯಾಗುವ ಪ್ರೀತಿಯಾಗಿದ್ದರೆ ಅಂತಹಾ ಪ್ರೀತಿ ಓದುಗನ ಕಣ್ಣಲ್ಲಿ ಇಳಿದು ಹೋಗುತ್ತಿತ್ತು. ಕಮಿಟ್ ಆಗಲು ಸಾಧ್ಯವೇ ಇಲ್ಲದ ವಾತಾವರಣದಲ್ಲಿ ಅದು ಅಸಹಜ ನಡೆಯಂತೆ ಕಾಣುತ್ತಿತ್ತು. ಹಾಗಾಗದಿರುವಂತೆ ಕಾಯ್ದಿರುವುದು ಇಂದಿರಾ ಅವರ ಬರವಣಿಗೆಯ ವೈಶಿಷ್ಟ್ಯ .

ಇನ್ನು ಏಳು ಜನ್ಮಕ್ಕೂ ನಾನು ನಿನ್ನವಳು ಎಂದು ಬರೆದಿಟ್ಟ ಚಂದ್ರಾ ಇದ್ದೊಂದು ಜನ್ಮದಲ್ಲಿ ಕೂಡಾ ಅವನವಳಾಗಿಯೂ ಅವನವಳಾಗದೇ ಹೋಗುತ್ತಾಳೆ. ಈ ಕಾದಂಬರಿಯನ್ನು ಇಂತಹಾ ದಾರುಣ ಪ್ರಸಂಗದ ಮೂಲಕ ಅಂತ್ಯಗೊಳಿಸುವ ಇಂದಿರಾ ಹೇಳಹೊರಟಿದ್ದು ಏನಿರಬಹುದು? ಇಂತಹಾ ಪರಿಸರದಲ್ಲಿ ಬೆಳೆದಿರುವವರೆಲ್ಲರಿಗೂ ಇದೇ ಹಾದಿ ಎಂದಲ್ಲ . ನಿತ್ಯ ಹಳೆಯ ಸೀರೆ ಮಡಿಯುಟ್ಟು ಕರಿಮಣಿ ವಾಲೆಯೊಂದೇ ಪ್ರಧಾನವಾಗಿ (ಬಡತನವಿರಲಿ ಇಲ್ಲದಿರಲಿ) ತಮ್ಮದು ಕಾರ್ಪಣ್ಯದ ಜೀವನವೆಂದುಕೊಳ್ಳುತ್ತಾ ಪಾತಿವ್ರತ್ಯದ ಆಭರಣ ತೊಟ್ಟುಕೊಳ್ಳುತ್ತಿರುವವರೆದುರು ಕಾಂಜೀವರಂ ರೇಷ್ಮೆ ಸೀರೆಯುಟ್ಟು ಮೈ ತುಂಬಾ ಒಡವೆಗಳನ್ನು ತೊಟ್ಟು ಅವರೆಲ್ಲರೂ ತಮ್ಮನ್ನು ಹೀನಾಯವಾಗಿ ನೋಡುತ್ತಾರೆಂದು ಅರಿತರೂ ಎಲ್ಲವನ್ನೂ ಒಳಗೊಳಗೇ ನುಂಗಿ ಬಾಳುವೆ ನಡೆಸುವರರ ಕಥೆಯ ದಾರುಣತೆಯನ್ನು ಹೇಳುವುದು …… ಮಾಲತಿಯ ಬಾಯಲ್ಲಿ ಅವರು ಹೇಳಿಸುವಂತೆ ರಂಡೆ ಮುಂದೆ ಎಂದು ಕರೆಸಿಕೊಂಡವರದು ದಾರುಣ ಬಾಳಾದರೂ ಅಂತಹವರು ಕೂಡ ಅಸಹ್ಯದಿಂದ ನೋಡಿ ತಮ್ಮ ಜೀವನವೇ ಪುಣ್ಯವೆಂದು ತೃಪ್ತಿ ಪುಟ್ಟುಕೊಳ್ಳುವ ದಾರುಣಾತಿದಾರುಣ ಬಾಳು ವೇಶ್ಯೆಯರದು ಎಂಬುದನ್ನು ಹೇಳುವುದು… ಇಂತಹಾ ಸಮಾಜದಲ್ಲಿ ಮದುವೆಯಾಗಿ ಮನಮೆಚ್ಚಿದವನೊಡನೆ ತೃಪ್ತಿಯಿಂದ ಬಾಳಲು ಹಪಹಪಿಸುವ ಅಪರ್ಣಾ, ಚಂದ್ರಾಳಂತಹವರು ಚಂದ್ರಶೇಖರ, ಸೋಮುವಿನಂತಹ ಧೈರ್ಯವಿಲ್ಲದವರಿಂದ ಹೀಗೊಂದು ಅಂತ್ಯ ಕಾಣಬಲ್ಲರೆಂದು ಹೇಳುವುದು… ಇದು ಇಂದಿರಾ ಆ ಕಾದಂಬರಿಯ ದಾರುಣ ಅಂತ್ಯದ ಮೂಲಕ ಹೇಳುತ್ತಿರುವ ಸಂದೇಶವಲ್ಲದ ಸಂದೇಶ.

ಅವರ ಮೇರು ಕೃತಿಯೆಂದೇ ಹೆಸರಾದ ಫಣಿಯಮ್ಮ ಅವರ ಎಲ್ಲ ಕಾದಂಬರಿಗಳಿಗೂ ಕಳಶವಿಟ್ಟಂತಹಾ ಕೃತಿ. ೧೮೪೦ನೆಯ ಇಸವಿಯಿಂದ ಆರಂಭವಾಗುವ ಈ ಕಾದಂಬರಿ ನಮ್ಮ ಸಾಹಿತ್ಯದ ಪರಂಪರೆಯಲ್ಲಿ ಮೈಲಿಗಲ್ಲಾಗಬಲ್ಲ, ಅನೇಕ ಸಾಂಸ್ಕೃತಿಕ ವಿವರಗಳನ್ನು ದಾಖಲಿಸಿದ ಕಾದಂಬರಿ.

ಅದೊಂದು ಮನೆ.. ಸುಭಿಕ್ಷ ಮನೆ. ಮಲೆನಾಡಿನ ಹಳ್ಳಿಯ ಮನೆ.. ಸಮೃದ್ಧವಾಗಿ ಗದ್ದೆ, ತೋಟ, ಕಬ್ಬಿನಗದ್ದೆ, ಬಾಳೆ, ತೆಂಗು ತರಕಾರಿ, ಹಣ್ಣು, ಹೂವು ಸಕಲವೂ ಬೆಳೆಯುವ ಫಲವತ್ತಾದ ಭೂಮಿಯುಳ್ಳ, ಮನೆಯ ಜನರಿಗಿಂತಲೂ ದನಕರುಗಳೇ ಹೆಚ್ಚಾಗಿದ್ದ ಹದಿನಾರು ಕಂಬದ ತೊಟ್ಟಿಯ ನಾಡಹೆಂಚಿನ ಅತಿದೊಡ್ಡ ಸಮೃದ್ಧ ಮನೆ. ಅದರಲ್ಲೂ ಅಂಚೆಯ ಮನೆ. ಇಂತಹಾ ಮನೆಯಲ್ಲಿ ಫಣಿಯಮ್ಮನ ಜನನ. ಕೇವಲ ಈ ಸಮೃದ್ಧಿಯಷ್ಟೇ ಅಲ್ಲದೆ ಆ ಕಾಲದ ಜನರ ನಡುವಳಿಕೆಗಳ ಬಗ್ಗೆ ಮುಲಾಜಿಲ್ಲದೆ ಇಂದಿರಾ ಬರೆಯುತ್ತಾ ಹೋಗುತ್ತಾರೆ. ಆಗಿನ ಕಾಲದಲ್ಲಿ ಬೇರು ಬಿಟ್ಟಿದ್ದೆಂದರೆ ವಿಪರೀತ ಮಡಿವಂತಿಕೆ. ಅದರ ಜೊತೆಗೆ ಸಂಪ್ರದಾಯ, ಶಾಸ್ತ್ರ .ಮತ್ತೂ ಹೆಚ್ಚಿನದೆಂದರೆ ಕೂಪಮಂಡೂಕತ್ವ. ಇಂತಹದ್ದೊಂದು ನಿಷ್ಠುರ ಮಾತಿನೊಡನೆ ಕಾದಂಬರಿಯನ್ನು ಆರಂಭಿಸುವ ಇಂದಿರಾ ಅದಕ್ಕೆ ಸಾಕ್ಷಿಗಳನ್ನು ಒದಗಿಸುತ್ತಾ ಹೋಗುತ್ತಾರೆ.

“ಏನಾದರೂ ಚೂರು ಹೆಚ್ಚುಕಡಿಮೆ ಆಯಿತೆಂದರೆ ಬ್ರಾಹ್ಮಣರೆಲ್ಲಾ ಕಚ್ಚೆ ಕಟ್ಟಿಕೊಂಡು ಮೂವತ್ತು ಮೈಲಿ ದೂರದ ಶೃಂಗೇರಿಗೆ ಕಾಳು ನಡಿಗೆಯಲ್ಲಿ ನಡೆದರೆಂದೇ ತಿಳಿಯಬೇಕು. ಆಗ ಶ್ರೀಶ್ರೀಶ್ರೀ ನರಸಿಂಹಭಾರತಿ ಸ್ವಾಮಿಗಳು ಪಟ್ಟಕ್ಕೆ ಬಂದ ಕಾಲ. ಮಾತು ಎತ್ತಿದರೆ ಬಹಿಷ್ಕಾರ. ಇಂಥದು ದಿನವೂ ಇರುವುದೇ! ಯಾವಳಾದರೂ ಬಾಲ ವಿಧವೆ ಬಸಿರಾದಳೆಂದರೆ ಮುಗಿಯಿತು. ಅದಕ್ಕೆ ಕಾರಣರಾದವರೇ ಶೃಂಗೇರಿಗೆ ಹೋಗಿ ಆಕೆ ಬಗ್ಗೆ ಸ್ವಾಮಿಗಳಲ್ಲಿ ದೂರು ಹೇಳಿ ಆಕೆಯನ್ನು ಜಾತಿಯಿಂದ ಹೊರಹಾಕಿಸಿ ಬರುತ್ತಿದ್ದರು. ಸ್ವಾಮಿಗಳಾದರೂ ಹೇಳಿಕೇಳಿ ಸನ್ಯಾಸಿ . ಸದಾ ಈ ವ್ಯಭಿಚಾರದ ಪುರಾಣ ಕೇಳುವುದು ನಮ್ಮ ಬ್ರಹ್ಮಚರ್ಯಕ್ಕೆ ಕುಂದು ಎಂದು ತಿಳಿಯರು. ಅವರು ಕೇಳಿ ಕೈ ಸನ್ನೆಯಿಂದಲೇ ಅದನ್ನು ಮಠದ ಧರ್ಮಾಧಿಕಾರಿಗಳಿಗೆ ವಹಿಸುತ್ತಿದ್ದರು, ಕೇಳಬೇಕೆ? ತೋಳನಿಗೆ ಕುರಿ ಕಾಯಲು ಬಿಟ್ಟಂತೆ. ಅವರ ಸೊಂಟಕ್ಕೆ ಕೆಲವು ಅಪ್ಪಟ ಬೆಳ್ಳಿಯ ರೂಪಾಯಿಗಳು ಸೇರಿದ ಕೂಡಲೇ ಬಡಪಾಯಿ ಮಡಿ ಹೆಂಗಸಿಗೆ ಬಹಿಷ್ಕಾರ ಬಿದ್ದಂತೆಯೇ.”

ಇಂತಹದ್ದೊಂದು ಅಸಾಧಾರಣ ಧೈರ್ಯ, ಕಟು ವಿಮರ್ಶೆಯನ್ನು .. ಯಾವುದೋ ಕಲ್ಪಿತವಲ್ಲದ ಇಂದಿಗೂ ಯಾವುದೇ ಕಳಂಕವಂಟಿಸಿಕೊಳ್ಳದ ಮಠವೊಂದನ್ನು ಹೆಸರಿಸಿ ಬರೆಯುವ ಧೈರ್ಯವನ್ನು ಮಾಡಿದ ಲೇಖಕ ಅಥವಾ ಲೇಖಕಿ ನನ್ನ ಓದಿಗೆ ಸಿಕ್ಕಿಲ್ಲ. ಕಚ್ಚೆ ಕಟ್ಟಿಕೊಂಡು ಶೃಗೇರಿಗೆ ಹೊರಡುವ ಬ್ರಾಹ್ಮಣರು ಎಂಬಲ್ಲಿಯೇ ಅಲ್ಲಿಯವರೆಗೆ ಅವರು ಕಟ್ಟಿರಲಿಲ್ಲ ಎಂಬ ಹೊಳಹು. ತಾನು ಮಾಡಿದ್ದು ಯಾರಿಗೂ ತಿಳಿಯಬಾರದೆಂದು ತನ್ನಿಂದಾದ ಅಕೃತ್ಯಕ್ಕೆ ತಾನೇ ಹೋಗಿ ಬಹಿಷ್ಕಾರ ಹಾಕಿಸುವ ಸೋಗಲಾಡಿತನದ ಬಗ್ಗೆ ಯಾವುದೇ ಮುಲಾಜೂ ತೋರದೆ ಒದ್ದಂತೆ ಬರೆಯುತ್ತಾ ಹೋಗುವ ಇಂದಿರಾ ದಂಗು ಬಡಿಸುತ್ತಾರೆ.

ಹೋಗಲಿ ಮಡಿ ಹೆಂಗಸರ, ವಿಧವೆಯರ ಸ್ಥಿತಿ ಹೀಗಿದೆ ಎಂದರೆ ಮುತ್ತೈದೆಯರ ಪಾಡೇನೂ ನೆಮ್ಮದಿಯಾಗಿತ್ತೆಂದಲ್ಲ. ಅವರು ಅದನ್ನು ಬರೆಯುವ ರೀತಿ ನೋಡಿ “ಈಗಿನ ಕಾಲದಂತೆ ಆ ಕಾಲದಲ್ಲಿ ಹರಿಗೆ ಎಂದರೆ ಅದೊಂದು ಪುತ್ರಕಾಮೇಷ್ಟಿ ಯಾಗವಾಗಿರಲಿಲ್ಲ. ಹೆಂಗಸರು ಬಸುರಿಯರಾಗಲೀ, ಕಾಯಿಲೆಯಾಗಲೀ ಬೆಳಗಿನಿಂದ ಸಂಜೆಯ ತನಕ ಅವರಿಗೆ ಮೈ ತುಂಬಾ ಕೈ ತುಂಬಾ ಕೆಲಸವಿದ್ದೇ ಇರುತ್ತಿತ್ತು. ದುಡಿದು ದುಡಿದು ಮೈ ಹಣ್ಣಾಗಿರುತ್ತಿತ್ತು. ಹೆರಿಗೆ ನೋವು ಕಾಣಿಸಿಕೊಂಡ ಮೇಲೇ ಆಕೆ ಹೆರಿಗೆ ಕೋಣೆಗೆ ಹೋಗಬೇಕು.” ಇದು ಅಂದಿನ ಮಹಿಳೆಯರ ಸ್ಥಿತಿ. ಹೆರಿಗೆ ರಾತ್ರಿಯೇ ಆದರೂ ಅದು ಮನೆಯವರಿಗೆ ತಿಳಿಯುವುದು ಬೆಳಗ್ಗೆ ಎದ್ದಮೇಲೇ. ಅದು ವಿಶೇಷವೂ ಅಲ್ಲ. ವರ್ಷ ಪೂರ್ತಿ ಯಾರಾದರೊಬ್ಬರು ಆ ಬಾಣಂತಿಯ ಕೋಣೆಯಲ್ಲಿ ಇರುತ್ತಲೇ ಇದ್ದರು.

ಇದಿಷ್ಟೇ ಅಲ್ಲದೆ ಆ ಕಾಲದಲ್ಲಿನ ವಿದ್ಯಾಭ್ಯಾಸ ಪದ್ಧತಿ, ಹಿಂದಿನಿಂದ ನಮ್ಮ ಅಥವಾ ಪ್ರಪಂಚದ ಯಾವುದೇ ಪರಿಸರದಲ್ಲಿ ರೂಢಿಯಲ್ಲಿರುವ ವಿದ್ಯಾಭ್ಯಾಸದ ವಿಧಾನಗಳು.. ಒಂದೋ ಶಾಲೆ ಅಥವಾ ಗುರುಕುಲ ಅಥವಾ ಮಠಮಾನ್ಯಗಳು ಇಂತಹ ಪರಿಸರದಲ್ಲಿ ಶಿಕ್ಷಣ ಪಡೆಯುವ ಪದ್ಧತಿ ಮತ್ತು ಹಿರಿಯರಿಂದ ಅವರ ಅನುಭವಗಳ ಮುಖೇನ ಕಲಿಯಬಹುದಾದ ಜಾನಪದ ಶಿಕ್ಷಣದಂತಹಾ ಪದ್ಧತಿ. ಇವೆರಡರಲ್ಲಿ ಗಂಡುಮಕ್ಕಳು ಮೊದಲನೆಯ ರೀತಿಯೂ ಹೆಣ್ಣು ಮಕ್ಕಳು ಎರಡನೆಯ (ಅಂದರೆ ಮನೆಯಲ್ಲಿಯೇ ಹಿರಿಯರಿಂದ ಕಲಿಯಬಹುದಾದ ಕ್ರಮದಲ್ಲಿ )ರೀತಿಯಲ್ಲಿ ಕಲಿಯುವ ಕ್ರಮ . ಹೆಣ್ಣುಮಕ್ಕಳಿಗೆ ಅಕ್ಷರದ ದರ್ಶನವಿಲ್ಲದ ಸ್ಥಿತಿ. ತಮ್ಮ ಹಿರಿಯರಿಂದ ಅವರು ಕಲಿಯುತ್ತಿದ್ದುದಾದರೂ ಏನು? ಹಾಡು, ಹಸೆ, ಮನೆಗೆಲಸ, ದೇವರ ಉಪಕರಣೆ ತೊಳೆಯುವುದು, ಮನೆ ಸಾರಿಸಿ ರಂಗವಲ್ಲಿ ಇಡುವುದು, ಮಗುವಿಗೆ ಎರಡು ವರ್ಷವಾಗುತ್ತಿದ್ದಂತೆಯೇ ಮಡಿ ಹುಡಿ , ಎಂಜಲು ಮುಸುರೆಯ ಅವಾಂತರ, ದಿನ ಬೆಳಗಾದರೆ ನೂರೆಂಟು ಹಬ್ಬ ಹರಿದಿನ , ಮಾಡುವೆ ಮುಂಜಿಗಳು.

ಇಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಾದ್ದು ಪಠ್ಯಗಳು ಒಂದೇ ರೀತಿ ಇರುತ್ತಿತ್ತು. ಆದರೆ ಈ ಮೌಖಿಕ ಪರಂಪರೆ ಕಾಲಕಾಲಕ್ಕೆ ಬದಲಾಗುತ್ತಿತ್ತು. ಯಾವುದೋ ಒಂದು ಅರ್ಥಪೂರ್ಣ ಆಚರಣೆ ಅದನ್ನು ಕಳೆದುಕೊಂಡು ಮೂಢನಂಬಿಕೆಯಾಗಿ ಬದಲಾಗಿ ಕುರುಡಾಗಿ ಅದನ್ನು ಅನುಕರಿಸುವ ಸಾಧ್ಯತೆಗಳೇ ಹೆಚ್ಚಿತ್ತೆಂಬಂತೆ ತೋರುತ್ತದೆ.

ಹೋಗಲಿ ಈ ಪಠ್ಯವನ್ನು ಕಲಿತ ಮೇಲೆ ಹೊರಗಿನ ಸಮಾಜವಾದರೂ ಸರಿ ಇರಬೇಕಿತ್ತಲ್ಲ … ಅಲ್ಲಿಯೂ ಸಣ್ಣಪುಟ್ಟ ವಿಷಯಕ್ಕೂ ದ್ವೇಷ ಅಸೂಯೆ ಬೆಳೆಸಿಕೊಳ್ಳುವ, ಒಬ್ಬರ ಮೇಲೊಬ್ಬರು ಮಾಟ ಕೂಟ ಮಾಡಿಸುವ, ಮಾತೆತ್ತಿದರೆ ಗಾಜನೂರು ಅಮ್ಮನವರ ಆಣೆ, ಧರ್ಮಸ್ಥಳದ ದೇವರ ಮೇಲೆ ಆಣೆ, ಯಾರಾದರೂ ಬಲವಾದ ಕುಳ ಇದ್ದಾರೆ ಅವರ ಜಬರ್ದಸ್ತಿನಲ್ಲಿ ಕಟ್ಟೆಪಂಚಾಯಿತಿ, ತೀರ್ಮಾನ ರಾಜಿ .. ಹೀಗೆ ನೂರೆಂಟು ಕೆಸರಿನ ಮಧ್ಯೆ ನವಿರಾಗಿ ಅರಳಿದವಳು ಫಣಿಯಮ್ಮ. ಅಂಚೆ ಮನೆಯವರೆಂಬ ಪ್ರತಿಷ್ಠೆ ಬೆಳೆದ ಮೇಲೆ ಅವರ ಆರ್ಥಿಕ ಸಂಪತ್ತು, ಅಂತಸ್ತು, ದೌಲತ್ತು ಬೆಳೆಯಿತಾದರೂ ಸಂಪ್ರದಾಯ, ಮಡಿವಂತಿಕೆ, ಮೂಢನಂಬಿಕೆ ಮತ್ತೂ ಹೆಚ್ಚಾಗಿದ್ದು ಆ ಕಾಲದ ಜನರ ಮನೋಭಾವವನ್ನು ಎತ್ತಿತೋರಿಸುತ್ತದೆ.

ಅಂತಸ್ತು ಹೆಚ್ಚಾಗಬೇಕಾದರೆ ಕೇವಲ ಹಣ ಬಂದರೆ ಸಾಲದು ಆ ಮನೆತನದ ಸಂಪ್ರದಾಯಗಳನ್ನೂ ಕಟ್ಟುನಿಟ್ಟಾಗಿ ಪಾಲಿಸಿದರೆ ಮಾತ್ರ ಅವರ ಪ್ರತಿಷ್ಠೆ ಹೆಚ್ಚಾಗುವುದೆಂದು ನಂಬಿದವರ ನಡುವೆ ಫಣಿಯಮ್ಮಮೆಲು ಮಾತಿನೊಡನೆ, ಮೃದು ಸ್ವಭಾವದೊಡನೆ, ಸದ್ದಿಲ್ಲದ ನಡೆ, ಗದ್ದಲವಿಲ್ಲದ ಕೆಲಸದೊಡನೆ ಸಂಪ್ರದಾಯದ ಸಂಕೋಲೆಯಲ್ಲಿ ಬೆಳೆಯುತ್ತಾಳೆ. ಸಣ್ಣ ವಯಸ್ಸಿನಲ್ಲಿ ಮದುವೆ ಎಂದರೇನೆಂದೂ ಅರಿಯದಾಗ ಗೃಹಿಣಿಯಾಗುವ ಫಣಿಯಮ್ಮ ಗೃಹಿಣಿ ತಾನು ಎಂಬುದು ಅರಿವಾಗುವುದರಲ್ಲೇ ವಿಧವೆಯೂ ಆಗಿಬಿಡುತ್ತಾಳೆ. ಆಗಿನ ಕಾಲದ ವಿಶೇಷವೆಂದರೆ ಯಾವುದೂ ಯಾರಿಗೂ ಕಷ್ಟವೇ ಅಲ್ಲ . ಏಕೆಂದರೆ ಅದಕ್ಕಿಂತ ಮಿಗಿಲಾದುದೊಂದು ಸುಖವಿದೆ ಎಂಬುದನ್ನೇ ಅರಿಯದವರು ಅವರು. ಮನೆಯಲ್ಲಿ ವಿಧವೆಯರ ಸಾಲು ಸಾಲೇ ಇರುತ್ತಿತ್ತಲ್ಲ .. ಇವಳೂ ಆ ವಿಧವೆಯರ ಗುಂಪಿಗೆ ಮೈನೆರೆಯುವ ಮುನ್ನವೇ ಸೇರಿ ಬಿಡುತ್ತಾಳೆ. ಕಾದಂಬರಿಯ ಅಂತಃಸತ್ವವಿರುವುದು ಇಂತಹ ಕೂಪದಲ್ಲೇ ಬೆಳೆದು ಬಂಡ ಫಣಿಯಮ್ಮ ಸಂಪ್ರದಾಯದ ಬೇರು ಕಳಚಿಕೊಳ್ಳದೇ ಕ್ರಾಂತಿಕಾರಿಯಾಗುವುದರಲ್ಲಿ. ಅತಿ ಜಾತಕ ನೋಡಿಸಬಾರದು ಎಂದು ಬುದ್ದಿ ಹೇಳುವ, ಹಸಲರ ಬೈರನ ಮಗಳು ಸಿಂಕಿಗೆ ಹೆರಿಗೆ ಮಾಡಿಸುವ, ದಾಕ್ಷಾಯಣಿಯ ತಲೆಕೂದಲು ತೆಗೆಸಬಾರದೆಂದು ಬುದ್ದಿ ಹೇಳುವ ಫಣಿಯಮ್ಮನ ವೈಚಾರಿಕತೆ ಅಂತಹಾ ವಾತಾವರಣದಲ್ಲಿದ್ದೂ ಮಾಗಿದ್ದು ಹೇಗೆ? ಹೊರಜಗತ್ತನ್ನೇ ಕಂಡರಿಯದ ಫಣಿಯಮ್ಮ, ಮಕ್ಕಳು ಹೇಗಾಗುತ್ತವೆ ಎಂದೂ ಅರಿಯದ ಫಣಿಯಮ್ಮ, ಅಡುಗೆಮನೆಯನ್ನು ಬಿಟ್ಟು ಹೊರಹೋಗದ ಫಣಿಯಮ್ಮನ ಮನದಲ್ಲಿ ಈ ಕ್ರಾಂತಿಯ ಬೀಜ ಮೊಳಕೆಯೊಡೆದದ್ದು ಹೇಗೆ

ಮನೆಯ ಕೆಲಸಗಳೊಟ್ಟಿಗೆ ಕುರುಡು ಸಂಪ್ರದಾಯದ ಹಾದಿಯನ್ನೇ ಹೇಳಿಕೊಟ್ಟ ಮೌಖಿಕ ಪರಂಪರೆಯಲ್ಲೇ ಕಲಿತು ತನ್ನ ನಂತರದ ಪೀಳಿಗೆಗೆ ಮಾನವೀಯತೆಯ,ಉದಾತ್ತ ಮೌಖಿಕ ಪರಂಪರೆಯನ್ನು ಹೇಳಿಕೊಟ್ಟ ಫಣಿಯಮ್ಮ ವಿಶೇಷವೆನಿಸುತ್ತಾಳೆ. ಮಾಗುವುದೆಂದರೆ ಏನೆಂಬುದನ್ನು ತೋರಿಸಿಕೊಡುತ್ತಾಳೆ.

ಈ ಮೂರೇ ಕಾದಂಬರಿಗಳನ್ನು ಮಾತ್ರ ನಾನು ಆರಿಸಿಕೊಂಡಿದ್ದಕ್ಕೆ ಹಲವು ಕಾರಣಗಳಿವೆ. ಒಂದು ಇಂದಿರಾ ಚಿತ್ರಿಸಿದ ವಿಧವೆಯರ ಚಿತ್ರಣ.., ಎರಡನೆಯದು ಗೆಜ್ಜೆಪೂಜೆಯ ಅಸಹಾಯಕ ಚಂದ್ರಾಳ ಚಿತ್ರಣ.. ಸದಾನಂದದ ವಿಧವೆ ಕಮಲೆಗೂ, ಫಣಿಯಮ್ಮ ಕಾದಂಬರಿಯ ಫಣಿಯಮ್ಮನಿಗೂ ಅಜಗಜಾಂತರ ವ್ಯತ್ಯಾಸ. ಸದಾನಂದದ ಕಮಲಾ ಅರಳುವ.. ಅರಳುತ್ತಿರುವ ಹೊತ್ತಲ್ಲೇ ವಿಷಾದದಿಂದ ನರಳುವ .. ಮುಂದೆ ಉದ್ದಕ್ಕೂ ಮರಳುಗಾಡಿನ ಹಾದಿಯಂತೆ ಚಾಚಿರುವ ಶುಷ್ಕ ಬದುಕನ್ನು ಹೇಗೆ ಕಳೆಯುವುದೆಂದು ಪ್ರಶ್ನಾರ್ಥಕ ಚಿಹ್ನೆ ಹೊತ್ತು ಸಮಯ ನೂಕುತ್ತಿರುವವಳು. ಫಣಿಯಮ್ಮ ಅಂತಹ ಭಾವನೆಯೇ ಅರಳದ ಕರ್ಮಯೋಗಿನಿಯಾಗಿ ಬದುಕು ಸವೆಸುವವಳು. ಉಪ್ಪರಿಗೆಯ ಕಿಟಕಿಯಲ್ಲಿ ಕಂಡ ಶಾರದೆ ಶಂಕರಣರಾಯಣನ ಸರಸ ಕಮಲಳಲ್ಲಿ ಇಂತಹದ್ದೊಂದು ರಸಘಳಿಗೆ ತನ್ನ ಜೀವನದಲ್ಲಿ ಬಂದಿಲ್ಲವೆಂಬ ಬಳಲಿಕೆ ಹುಟ್ಟಿಸಿದರೆ, ಸುಬ್ಬಿ ಮತ್ತು ಪುಟ್ಟಾಜೋಯಿಸರ ಪ್ರಸಂಗ ಫಣಿಯಮ್ಮನಲ್ಲಿ ಹೇವರಿಕೆ ಮೂಡಿಸುತ್ತದೆ. ಇದು ಅನೈತಿಕವಾದ್ದರಿಂದ ಹೀಗಾಗಿರಬಹುದೇ ಎಂದು ಅನ್ನಿಸಿದರೂ ಮಕ್ಕಳ ಹೆರಿಗೆ ಮಾಡಿಸುವಾಗಲೂ ಫಣಿಯಮ್ಮನಿಗೆ ತನಗೆ ಇಂತಹ ಜನ್ಮ ಬರದಿದ್ದುದೇ ಒಳ್ಳೆಯದಾಯಿತೆಂದು ಅನ್ನಿಸುವುದು, ತಾರುಣ್ಯದ ಕ್ಷಣಗಳಲ್ಲಿ ಕೂಡಾ ಅಂತಹದ್ದೊಂದು ಕೋಮಲ ಭಾವಗಳು ವಯೋ ಸಹಜವಾಗಿಯೂ ಮೂಡದಿರುವುದನ್ನು ಗಮನಿಸಬೇಕಾಗುತ್ತದೆ.

ಮುತ್ತೈದೆ ಅಚ್ಚಮ್ಮನನ್ನು ನೋಡಿದರೆ ಮನೆಗೆಲಸಗಳಲ್ಲಿ, ಮಕ್ಕಳ ಪಾಲನೆಗಳಲ್ಲಿ ಸುಖವಾಗಿ ಕಾಲ ಕಳೆದು ಬಿಡುವ ವಿಧವೆ ಯಂಟಮ್ಮನಿಗಿಂತ ಹೆಚ್ಚು ವ್ಯತ್ಯಾಸ ಬಹಿರಂಗದಲ್ಲಿ ಕಾಣುವುದಿಲ್ಲ. ಮುತ್ತೈದೆಯರನ್ನೆಲ್ಲಾ ಒಂದೇ ರೀತಿ ಚಿತ್ರಿಸಿರುವ ಇಂದಿರಾ ವಿಧವೆಯರ ನಾನಾ ರೂಪುಗಳನ್ನು ಎತ್ತಿ ತೋರಿಸುತ್ತಾರೆ. ವಿಧವೆ ಎಂದರೆ ಒಂದೇ ರೀತಿ ಇರಬೇಕೆಂಬ ಮನೋಭಾವ ಅವರದಲ್ಲ. ಕಮಲಾ ಮರುಮದುವೆಯಾದರೆ, ಫಣಿಯಮ್ಮ ಮದುವೆ ಮುಂದಿನ ಜನ್ಮದಲ್ಲೂ ಬೇಡವೆಂದು ದೇವರಲ್ಲಿ ಬೇಡಿಕೊಳ್ಳುತ್ತಾಳೆ.

ನೂಕೊನರಸಿಂಹವನ್ನು ಮೆಚ್ಚಿಕೊಳ್ಳುತ್ತಾ ಆಧುನಿಕತೆಯ ಪ್ರತೀಕವಾಗಿ ಆಗಮಿಸಿದ ವೇಗಕ್ಕೆ ಹೆಸರಾದ ಮಾರುತಿಯನ್ನು ಬದಿಗೊತ್ತುವ ಇಂದಿರಾ ಸಂಪ್ರದಾಯವಾದಿಯಾಗಿಯೂ ಆಧುನಿಕತೆಯ ಅದ್ಭುತ ಪ್ರತಿಪಾದಕಿಯಾಗಿಬಿಡುತ್ತಾರೆ. ಅವರು ಮೆಚ್ಚುವ ಆಧುನಿಕತೆ ಅಂತರಂಗ ಬೆಳಗುವ ಆಧುನಿಕತೆ. ಅದು ಬಹಿರಂಗದ್ದಲ್ಲ. ಮಹಾದೇವ ಶಾಸ್ತ್ರಿಗಳ ಶಾಸ್ತ್ರವನ್ನು ನಂಬುವ, ಗೆಜ್ಜೆಪೂಜೆಯ ಸೋಮುವಿನ ಬಾಲ್ಯದ ತಾವರೆಯ ಪ್ರಕರಣವನ್ನು ಇಡೀ ಕಾದಂಬರಿಯ ದಿಕ್ಸೂಚಿಯಾಗಿ ಕಾದಂಬರಿಯ ಆರಂಭದಲ್ಲಿ ತೋರಿಸುವ, ಫಣಿಯಮ್ಮನ ಜಡೆ ಕತ್ತರಿಸುವ ಪ್ರಕರಣವನ್ನು ಶಕುನದಂತೆ ತೋರಿಸುವ ಇಂದಿರಾ ಅದನ್ನೆಲ್ಲಾ ನಂಬುತ್ತಾರೆಯೇ ಎಂಬ ಅನುಮಾನದೊಡನೆ ಕೂಡಾ ಆಧುನಿಕತೆಯ ಹೊಸ ವ್ಯಾಖ್ಯಾನ ಬರೆಯುತ್ತಾರೆ. ಬೆಳೆಸಿಕೊಳ್ಳಬೇಕಾದ ಅಂತರಂಗದ ಬೆಳವಣಿಗೆಯ ಬಗ್ಗೆ ಮಾತನಾಡುತ್ತಾರೆ. ಫಣಿಯಮ್ಮನ ಮೂಲಕ ಕ್ರಾಂತಿಕಾರಿ ಹೆಜ್ಜೆಯನ್ನಿಡಲು ಹೇಳುತ್ತಾರೆ. ಕಮಲೆಗೆ ಸದಾನಂದರಿಗೆ ಮರುವಿವಾಹ ಮಾಡಿಸುತ್ತಾರೆ. ಗೆಜ್ಜೆಪೂಜೆಯ ಚಂದ್ರಾಳ ಕರುಳು ಕತ್ತರಿಸುವ ಕಥಾನಕದ ಮೂಲಕ ನಿಮ್ಮ ಅವಜ್ಞೆಗೆ ಹೀಗೊಂದು ಜೀವ ಬಲಿಯಾಗುತ್ತದೆ ಎಂದು ಬುದ್ದಿ ಹೇಳುತ್ತಾರೆ. ಆ ಕಾಲದಲ್ಲಿ ಇಷ್ಟು ಕ್ರಾಂತಿಕಾರಿಯಾಗಿ ಬರೆದ ಇಂದಿರಾ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ವಿಶಿಷ್ಟ ಸ್ಥಾನದಲ್ಲಿ ನಿಲ್ಲುತ್ತಾರೆ. ಯಾವುದೇ ಪುರುಷ ಸಾಹಿತಿಗೂ ಕಡಿಮೆಯಿಲ್ಲದೆ ಒಂದು ಕೈ ಮಿಗಿಲೆನಿಸುವ ಹಾಗೆ ವಸ್ತುಗಳನ್ನು ಆರಿಸಿಕೊಂಡ ಆ ವಸ್ತುವಿಷಯಕ್ಕೆ ಹದವಾಗಿ ವಿವರಗಳನ್ನು ತುಂಬಿದ ರೀತಿ ಗಮನಾರ್ಹವೆನಿಸುತ್ತದೆ.

ಎಲ್ಲಕ್ಕಿಂತ ಅವರು ಕಥೆ ಹೇಳುವ ರೀತಿ ಅನನ್ಯ. ನಮ್ಮ ನಮ್ಮ ಮನೆಯಲ್ಲಿ ಇದ್ದಿರಬಹುದಾದ ಅಜ್ಜಿಯನ್ನೋ, ಹಿರಿಯಮ್ಮನನ್ನೋ ನೆನಪಿಸುವಂತೆ.. ನಮ್ಮನ್ನು ತನ್ನ ಪಾಂಡಿತ್ಯದಿಂದ ಮೆಚ್ಚಿಸುವ ಯಾವ ಹಪಾಹಪಿಯೂ ಇಲ್ಲದೆ, ಕಥಾ ತಂತ್ರಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ತನ್ನ ಸರಳ, ಆಡುಭಾಷೆಯಲ್ಲಿ ಅಷ್ಟೇ ಸಹಜವಾಗಿ ನಿರ್ಭೀಡೆಯಿಂದ ಕಥೆ ಹೇಳುತ್ತಾ ಹೋಗುವ ಇಂದಿರಾ ಪದೇ ಪದೇ ಕಾಡುತ್ತಾರೆ. ಇಂತಹಾ ಕೃತಿಗಳನ್ನು ಕೊಟ್ಟ ಇಂದಿರಾ ಜನ್ಮವೆತ್ತಿ ನೂರು ವರ್ಷವಾಯಿತಂತೆ. ಈಗಲೂ ಅವರ ಪುಸ್ತಕ ಹಿಡಿದಾಗೆಲ್ಲಾ ಭಾಸವಾಗುವುದು … ಒಂದು ಮಲೆನಾಡಿನ ಮನೆ. ಬಚ್ಚಲೊಲೆಯಲ್ಲಿ ಒಟ್ಟಿದ ಬೆಂಕಿ .. ಅದರ ಮುಂದೆ ಕುಳಿತು ಕಥೆ ಕೇಳುತ್ತಿರುವ ನಾನು .. ಒಲೆಯ ಬೆಂಕಿಯ ಬೆಳಕನ್ನು ಪ್ರತಿಫಲಿಸುತ್ತಿರುವ, ನಡುನಡುವೆ ಬೈಯುತ್ತಾ, ಮುದ್ದಿಸುತ್ತಾ ಕಥೆ ಹೇಳುತ್ತಿರುವ ನಿರ್ವಿಕಾರ ಮುದ್ರೆಯ ಎಂ.ಕೆ. ಇಂದಿರಾ…!!!!!!

। ಈ ಲೇಖನ ‘ಅಷ್ಟದಿಗ್ಗಜರು’ ಕೃತಿಯಲ್ಲಿ ಪ್ರಕಟವಾಗಿದೆ ।

4 comments

  1. ಎಂ.ಕೆ.ಇಂದಿರಾ ಅವರ ಎಲ್ಲ ಕಾದಂಬರಿಗಳನ್ನೂ ಒಂದಾದ ಮೇಲೊಂದರಂತೆ ಓದಿ ಮುಗಿಸಿದ್ದೆ ನಾನು. ಅಂಥ ಓದಿಗೆ ಅನುವು ಮಾಡಿಕೊಟ್ಟ ಆಗಿನ ಕಾಲದ ಯುವತಿಯರ ಅತ್ಯಂತ ಆಕರ್ಷಣೆಯ ಕೇಂದ್ರವಾಗಿದ್ದ ನಗರ ಕೇಂದ್ರ ಗ್ರಂಥಾಲಯಕ್ಕೆ ನನ್ನ ಹೃತ್ಪೂರ್ವಕ ನಮನಗಳು. ವಿವಿಧ ವಿಷಯಗಳನ್ನೆತ್ತಿಕೊಂಡು ಬರೆದ ಇಂದಿರಾ ಅವರ ಮೂರು ಪ್ರಮುಖ ಕಾದಂಬರಿಗಳ ಬಗ್ಗೆ ಬರೆದಿರುವ ಲೇಖನ ಅತ್ಯಂತ ಸಮಯೋಚಿತವಾಗಿದೆ. ನಮ್ಮ ನಾಡಿನ ಧೀಮಂತ ಮಹಿಳಾ ಸಾಹಿತಿಗಳ ಕಥೆ-ಕಾದಂಬರಿಗಳ ಮರುಅಧ್ಯಯನ ಮತ್ತು ವಿಮರ್ಶೆ ಅನಿವಾರ್ಯವಾದ ಈ ದಿನಗಳಲ್ಲಿ ಎಂ.ಕೆ.ಇಂದಿರಾರ ಕಾದಂಬರಿಗಳನ್ನು, ಅವುಗಳ ವೈಶಿಷ್ಟ್ಯ ವನ್ನು ಜ್ಞಾಪಿಸಿಕೊಟ್ಟಿದ್ದಕ್ಕಾಗಿ ಪ್ರೀತಿಯ ಅಭಿನಂದನೆಗಳು ಮಾಲಿನಿ. ಗುರುಪ್ರಸನ್ ಮೇಡಂ.

Leave a Reply