ಪುಟ್ ಗೌರಿ ಇನ್ನೂ ಬಸುರಿ..

ಜಯರಾಮ ಚಾರಿ 

ಊರು ಮೊದಲಿನ ಹಾಗಿಲ್ಲ
ನಾ ಹುಟ್ಟಿದ ಗುಡಿಸಲು ಅಲ್ಲಿಲ್ಲ
ಹಿತ್ತಲಿಲ್ಲ ಎತ್ತುಗಳಿಲ್ಲ
ಪಲ್ಸರು ಸ್ಪ್ಲೆಂಡರುಗಳಿಗೆ ಜಾಗಬಿಟ್ಟಿವೆ ಎಲ್ಲ

ಹೆಂಚು ಮನೆಗಳಿಲ್ಲ
ಸೇದೋ ಬಾವಿಗಳಿಲ್ಲ
ಟೆರೇಸು ಟ್ಯಾಂಕುಗಳು ಇಳಿದಿವೆ
ಮನೆಮನೆಗೂ ನಲ್ಲಿಯಲ್ಲಿ ನೀರಿವೆ

ಕಾಲುವೆಗಳಿಲ್ಲ ಮಂಕರಿಗಳಿಲ್ಲ
ಬಟ್ಟೆ ತೊಳೆಯಲು ಮಶೀನಿದೆ
ದಿನಕ್ಕೆ ಐದಿದ್ದ ಬಸ್ಸು
ಐದು ನಿಮಿಶಕ್ಕೆ ಒಂದಾಗಿದೆ
ಬಸ್ ಸ್ಟಾಪಿನ ಹುಣಸೆಮರದ
ದೆಯ್ಯಕೂಡ ಹೆದರಿಕೊಂಡಿದೆ

ಮೈ ಮೇಲೆ ದೇವರು ಬರಿಸುಕೊಂಡವನು
ಟೈಲ್ಸ್ ಹಾಕಿದ ದೇವಸ್ಥಾನದಲ್ಲಿ ಅರೆಬಟ್ಟೆ
ಊಟದ ಬುತ್ತಿ ಬಿಚ್ಚಿಡುವ ಸ್ಕೂಲುಹೈಕಳ
ಕೈ ಮಧ್ಯಾಹ್ನ  ಊಟದ ಸಿಲ್ವರು ತಟ್ಟೆ

ಮಣ್ಣು ರೋಡು ಟಾರಾಗಿದೆ
ಅವಲಕ್ಕಿ ಪವಲಕ್ಕಿ ಐಸುಪೈಸು
ಈಗ ಕ್ಯಾಂಡಿಕ್ರಸ್ಸಾಗಿದೆ
ನೈಟು ಪ್ಯಾಂಟು ಚೆಡ್ಡಿಗಳಲ್ಲಿ
ಲಂಗ ದಾವಣಿಯ ಸೊಬಗುಗಳಿಲ್ಲ
ಊರಾಚೆ ತೋಪಿನಲ್ಲಿ ಕಾಯಬೇಕಿಲ್ಲ ಅವಳ
ಯಾರೂ ಇಲ್ಲದಾಗ ಸ್ಕೈಪಿನಲ್ಲಿ ಸಿಗುವವಳ

ಶುಕ್ರವಾರದ ಚಿತ್ರಮಂಜರಿ
ಈಗ ಅಗ್ನಿಸಾಕ್ಷಿ ಎರಡು ವರ್ಷವಾದರೂ ಪುಟ್ಟಗೌರಿ ಇನ್ನು ಬಸುರಿ
ಮಯೂರ ರಾಜಕುಮಾರ ಫೋಟೋವಾಗಿದ್ದಾನೆ
ಸುದೀಪ ಬಿಗ್ ಬಾಸ್ ಮನೆಯಲ್ಲಿದ್ದಾನೆ

ಮನೆಯ ಮುಂದೆ ತೋರಣವಿಲ್ಲ
ಹುಡುಗನನ್ನು ಕಾಯುತ್ತಿದೆ ಟಾಟಾ ಇಂಡಿಕಾ ಕಾರು
ಊರಲ್ಲಿ ರಾಗಿಮಿಶಿನ್ನುಗಳೆಲ್ಲಿ
ಪಿಜನ್ನು ಮಿಕ್ಸಿಗೆ ಕೈತಾನು ಫ್ಯಾನು ಫ್ರೀ

ಊರು ಮೊದಲಿನ ಹಾಗಿಲ್ಲ
ಎಲ್ಲ ಬದಲಾಗಿದೆಯಲ್ಲ
ಅಗೋ ಊರಾಚೆ ಊಟಹಾಕಿದ್ದಾರೆ
ಆದರಿನ್ನೂ ಊರಾಚೆಗಿನ
ಮುಟ್ಟಿಸಿಕೊಳ್ಳದ ಜನರಿನ್ನು
ತಟ್ಟೆ ಮುಲ್ಲಿ ಲೋಟ ಪಾತ್ರೆ ಹಿಡಿದು ನಿಂತಿದ್ದಾರೆ!

1 comment

Leave a Reply