ಕಾತ್ಯಾಯಿನಿ ಕುಂಜಿಬೆಟ್ಟು ಅವರ ‘ಅಕ್ಕ ಕೇಳವ್ವ’

ಮುದ್ಗಲ್ ವಿಜಯ್

ನಮ್ಮ ಅಳಿವಿನ ನಂತರ ನಮ್ಮದೇ ಛಾಯಾಚಿತ್ರ ಬಹಳಷ್ಟು ಕಾಲ ಉಳಿಯುವಂತೆ ಒಬ್ಬ ನೈಜ ಸಾಹಿತಿಯ ಬರವಣಿಗೆ ಬಹಳಷ್ಟು ಕಾಲ ಉಳಿಯುವಂತದ್ದು ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ನಾಲಿಗೆ ನಿಂತಾಗ ಬರವಣಿಗೆಗಳು ಮಾತಾಡುತ್ತವೆ ಎನ್ನುವ ಕವಿ ವಾಣಿಯಂತೆ ಉತ್ತಮ ಬರವಣಿಗೆಯಲ್ಲಿ ತೊಡಗಿಸಿಕೊಂಡ ಯಾವುದೇ ಸಾಹಿತಿಯ ಬದುಕು ಎಂದೆಂದೂ ಅಮರವೆನ್ನುವುದನ್ನು ತಳ್ಳಿಹಾಕುವಂತಿಲ್ಲ. ಒಬ್ಬ ಸಾಹಿತಿಯ ಉತ್ಕೃಷ್ಟ ಬರಹಗಳು ಒಂದು ರೀತಿಯಲ್ಲಿ ಜಂಗಮ ಸ್ವರೂಪಿ. ಅವು ಒಂದು ಕಡೆ ನಿಲ್ಲುವುದಿಲ್ಲ. ಅಂತಹ ಸಾಹಿತ್ಯದ ಭಾಷೆ ಅದೆಷ್ಟು ಸಮರ್ಥಶಾಲಿ ಎಂಬುದನ್ನು ಊಹಿಸಲೂ ಅಸಾಧ್ಯವೆ. ಬರವಣಿಗೆಯಲ್ಲಿ ತೊಡಗಿಸಿಕೊಂಡ ಸಾಹಿತಿಯ ಶಾಯ್ಮೊಳೆ ವಾಸ್ತವಿಕ ನೆಲೆಗಟ್ಟುಗಳ ಭಿನ್ನ ಸ್ವರೂಪಗಳನ್ನು ಚಿತ್ರಿಸಿ ಕೊಡಲು ತುಡಿಯುವುದಾದರೆ ಅದರ ಸೊಗಡು ಪರಿಧಿಗಳನ್ನು ಮೀರಿ ಎಲ್ಲೆಲ್ಲೂ ಅಭಿವ್ಯಕ್ತಿಗೊಳ್ಳುತ್ತಾ ಸಾಗುತ್ತದೆ. ಈ ನಿಟ್ಟಿನಲ್ಲಿ ಪ್ರಸಿದ್ಧ ಬರಹಗಾರ್ತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ತಮ್ಮ ಬರವಣಿಗೆಯ ಬದುಕನ್ನು ತಮ್ಮದೇ ಆದ ವಿಶಿಷ್ಟ ಸಾಹಿತ್ಯದೊಂದಿಗೆ ಸಮರ್ಥಿಸಿಕೊಳ್ಳುತ್ತಾರೆ.

ಉಡುಪಿಯ ಕಾಪು ಬಳಿಯ ಕರಂದಾಡಿ ಗ್ರಾಮದಲ್ಲಿ ಹುಟ್ಟಿದ ಕಾತ್ಯಾಯಿನಿಯವರು ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದವರು. ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತ ವಿಶಾರದ ಪದವಿಯನ್ನೂ ಪಡೆದವರು. ಅದಲ್ಲದೆ ಸಾಹಿತ್ಯದಲ್ಲಿ ಅಪಾರ ಆಸಕ್ತಿಯನ್ನು ಹೊಂದಿರುವ ಕಾತ್ಯಾಯಿನಿಯವರು ಕವಿತೆ, ಕತೆ, ಕಾದಂಬರಿ, ವಿಮರ್ಶೆ ಮತ್ತು ನಾಟಕಗಳನ್ನು ಬರೆದಿದ್ದಾರೆ. ಸುಮಾರು ಹನ್ನೆರಡು ಕೃತಿಗಳನ್ನು ಪ್ರಕಟಿಸಿರುವ ಇವರ ಮಕ್ಕಳ ಐದು ನಾಟಕಗಳು ಅನೇಕ ಪ್ರದರ್ಶನಗಳನ್ನು ಕಂಡಿವೆ. ಇವರು ತುಳುವಿಗೆ ಅನುವಾದಿಸಿರುವ ಗಿರೀಶ್ ಕಾರ್ನಾಡರ ನಾಗಮಂಡಲ, ಚಂದ್ರಶೇಖರ ಕಂಬಾರರ ಮಹಾಮಾಯಿ ನಾಟಕಗಳೂ ರಂಗದಲ್ಲಿ ಪ್ರದರ್ಶನಗೊಂಡು ಜನಮನ್ನಣೆಯನ್ನು ಗಳಿಸಿವೆ. ಹೀಗಾಗಿ ಕಾತ್ಯಾಯಿನಿ ಕುಂಜಿಬೆಟ್ಟು ಅವರದು ಬಹುಮುಖ ಪ್ರತಿಭೆ. ಇವರ ಪಿ ಎಚ್ ಡಿ ಮಹಾಪ್ರಬಂಧ ಮೊಗ್ಗಿನ ಮನಸ್ಸು ಕೃತಿಯು ಮಣಿಪಾಲ ವಿಶ್ವವಿದ್ಯಾಲಯದಿಂದ ಪ್ರಕಟವಾಗಿದ್ದು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆ. ಇವರ ಕೃತಿಗಳೆಲ್ಲವೂ ಒಂದಲ್ಲ ಒಂದು ಪ್ರಶಸ್ತಿಯನ್ನು ಗಳಿಸಿಕೊಂಡು ಸಾಹಿತ್ಯಾಸಕ್ತರ ಗಮನವನ್ನು ಸೆಳೆದುಕೊಂಡಿರುವುದು ಅಭಿನಂದಿಸತಕ್ಕದ್ದು.

ಕಾತ್ಯಾಯಿನಿ ಅವರ ‘ಅಕ್ಕ ಕೇಳವ್ವ’ ಕೃತಿಯು ಉದಯವಾಣಿ ದಿನಪತ್ರಿಕೆಯಲ್ಲಿ ಅವರು ಪ್ರತಿವಾರವೂ ಬರೆಯುತ್ತಿದ್ದ ಅಂಕಣ ಬರಹಗಳ ಸಂಕಲನ. ಇದು ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ಪ್ರಕಟವಾಗಿದ್ದು 23 ಲೇಖನಗಳನ್ನೊಳಗೊಂಡಿದೆ. ಇಲ್ಲಿರುವ ಬರಹಗಳೆಲ್ಲವೂ ಸ್ತ್ರೀಪರ ಚಿಂತನೆಗಳಾಗಿವೆ. ಈಗ ಸ್ತ್ರೀವಾದಿ ಅಧ್ಯಯನ ಪ್ರಪಂಚದಾದ್ಯಂತ ಪ್ರಚಲಿತವಾಗಿದೆ. ಇಲ್ಲಿರುವ ಲೇಖನಗಳು ಸ್ತ್ರೀವಾದಿ ಅಧ್ಯಯನದ ನೆಲೆಗಳನ್ನೊಳಗೊಂಡಿರುವುದರಿಂದ ಈ ಕೃತಿಯ ಮಹತ್ವ ಹೆಚ್ಚಿದೆ.

ಹೆಣ್ಣಿನ ಶೋಷಣೆಯ ವಿವಿಧ ಮುಖಗಳನ್ನು ಅನಾವರಣಗೊಳಿಸುವುದರ ಜೊತೆಗೆ ಸ್ತ್ರೀ ಮತ್ತು ಸಮಾಜದ ಏಳಿಗೆಗೆ ಬೇಕಾದ ವಿಚಾರಗಳನ್ನು ಇಲ್ಲಿನ ಲೇಖನಗಳು ಆಪ್ತವಾಗಿ ಕಟ್ಟಿಕೊಡುತ್ತವೆ. ಒಂದು ಕುಟುಂಬ, ಒಂದು ಗ್ರಾಮ, ಒಂದು ದೇಶ ಅಭಿವೃದ್ಧಿಯಾಗಬೇಕಾದರೆ ಹೆಣ್ಣಿನ ಪಾತ್ರ ಮಹತ್ವವಾದದ್ದು ಎಂಬ ವಿಚಾರವನ್ನು ಉದಾಹರಣೆಗಳ ಸಮೇತ ವಿಶ್ಲೇಷಣೆ ಮಾಡಿರುವ ಇಲ್ಲಿನ ಬರಹಗಳು ಓದುಗರನ್ನು ಚಿಂತಿಸುವಂತೆ ಪ್ರೇರೇಪಿಸುತ್ತವೆ. ಸಾಹಿತ್ಯ ವಿಮರ್ಶೆಯ ಕೆಲಸ ಇದೇ ತಾನೇ?. ಜಾಗತೀಕರಣ, ಉದಾರೀಕರಣ, ಆರ್ಥಿಕ ಪ್ರಧಾನವಾದ ಇಂದಿನ ಸಂದರ್ಭಕ್ಕೆ ಈ ಕೃತಿಯಲ್ಲಿರುವ ವಿಚಾರಗಳು ಅತ್ಯಗತ್ಯವಾಗಿರುವಂತವುಗಳು.

ಹೆಣ್ಣುಹಕ್ಕಿಯ ಹಾಡು, ಕಾಯ ಮೀರಿದ ಕಾವ್ಯ, ಹೊತ್ತು ಹೆತ್ತಳಾ ತಾಯಿ, ಅಜ್ಜಿಯ ಜೋಗುಳ, ಹೆಣ್ಣು ಭೂತಗಳು, ಜನಪದ ಹೆಣ್ಣ ಪಾಡು-ಹಾಡು, ಹೂವಿನ ಮಾತು, ನೀರಂತೆ ನೀರೆ ಮುಂತಾದ ಲೇಖನಗಳು ನಮ್ಮ ಸಮಾಜದಲ್ಲಿನ ಅಸಮಾನತೆ, ಅನ್ಯಾಯ, ದಬ್ಬಾಳಿಕೆ, ಹೆಣ್ಣು ಪಡುತ್ತಿರುವ ದಿನನಿತ್ಯದ ಬವಣೆಗಳನ್ನು ಕಣ್ಮುಂದೆ ತಂದು ನಿಲ್ಲಿಸುತ್ತವೆ. ಕಾತ್ಯಾಯಿನಿ ಕುಂಜಿಬೆಟ್ಟು ಅವರ ಬರವಣಿಗೆ ಸರಳ ಸುಂದರ. ತಾವು ಹೇಳಬೇಕೆಂದಿರುವ ವಿಚಾರವನ್ನು ದೈನಂದಿನ ಬದುಕಿನ ಉದಾಹರಣೆಗಳೊಂದಿಗೆ ವಿಶ್ಲೇಷಿಸಿರುವ ಕ್ರಮ ಓದುಗರನ್ನು ಸೆರೆಹಿಡಿಯುತ್ತದೆ ಮತ್ತು ಚಿಂತನೆಗೆ ಹಚ್ಚಿ ಹೆಣ್ಣನ್ನು ಪುರುಷಪ್ರಧಾನ ಸಮಾಜ ನಡೆಸಿಕೊಳ್ಳುತ್ತಿರುವ ಬಗ್ಗೆ ಪುರುಷನು ಆತ್ಮವಲೋಕನ ಮಾಡಿಕೊಳ್ಳುವಂತೆ ಪ್ರೇರೇಪಿಸುತ್ತದೆ. ಇದರ ಜೊತೆಗೆ ಇಲ್ಲಿನ ಲೇಖನಗಳು ಅಧ್ಯಾಪಕರಿಗೆ, ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಮುಂದಿನ ಅಧ್ಯಯನದ ದೃಷ್ಟಿಯಿಂದ ಉಪಯುಕ್ತವಾಗುವುದರಿಂದ ‘ ಅಕ್ಕ ಕೇಳವ್ವ’ ಕೃತಿಯು ತುಂಬಾ ಮೌಲಿಕವಾದದ್ದು. ಇದನ್ನು ಪ್ರಕಟಿಸಿದ ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಸಾರಾಂಗವು ಸ್ತ್ರೀವಾದಿ ಅಧ್ಯಯನಕ್ಕೆ ಹಾಗೂ ಕನ್ನಡ ಸಂಸ್ಕೃತಿಗೆ ಉತ್ತಮ ಕೊಡುಗೆ ನೀಡಿದೆ.

ಪ್ರತಿಯೊಬ್ಬರೂ ಓದಲೇ ಬೇಕಾದ ಉತ್ತಮ ಮಾಹಿತಿಗಳುಳ್ಳ ಕೃತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಅವರ ‘ಅಕ್ಕ ಕೇಳವ್ವ’.

Leave a Reply