ವಿನ್ಸೆಂಟ್ ಬಂದೇಬಿಟ್ಟ ಕೋಶಿಸ್ ಗೆ..

ರೇಣುಕಾ ರಮಾನಂದ 

*ಕವಿತೆಯೆಂದರೆ ಕಾವ್ಯದ ಲವಲೇಶವಾದರೂ ಇರಬೇಕಲ್ಲ…
*ಛಂದಸ್ಸು ಇಲ್ಲದಿದ್ದರೆ ಅದೆಂಥ ಕವಿತೆ…
*ಒಪ್ಪವಾದ ಭಾಷೆಯಲ್ಲಿ ಒಪ್ಪಿಸಿಕೊಂಡ ಅನುಭವ ಅಲ್ವ ಅದು..
*ಇದಂತೂ ಪಕ್ಕಾ ಬಂಡಾಯ ಕವಿತೆ..
*ಇದು ನೋಡಿ ಪಕ್ಕಾ ಪ್ರೇಮಗೀತೆ.ಅಥವಾ ವಿರಹದ್ದು…

ಒಂದು ಕಥೆ ಅಥವಾ ಕವಿತೆ ಹೀಗೇ ಇರಬೇಕು ಅಂತ ಬಯಸುವ ಎಲ್ಲ ತಿಳಿಗೇಡಿಗಳ ಅಭಿಪ್ರಾಯಗಳನ್ನು ಭಂಜಿಸುವಂತೆ, ಅವರೆಲ್ಲರನ್ನು ನಾನು ಒಪ್ಪಿಕೊಳ್ಳಬೇಕಾ. ಹೀಗೇ ಕವಿತೆಯನ್ನು ಬರೆಯಬೇಕಾ ಅಥವಾ ಇಂತಹುಗಳನ್ನೇ ಓದಬೇಕಾ . ಯಾಕೆ ನಮಗಿಷ್ಟವಾದ ಹಾಗೆ ಕೆಲವನ್ನು ಬೇರೆತರ ಬರೆಯಬಾರದು.. ಅಥವಾ ಬರೆದರೆ ತಪ್ಪಾದೀತಾ ಎಂಬ ಎಲ್ಲ ಪ್ರಶ್ನೆಗಳಿಗೆ ಉತ್ತರವಾಗಿ ಬಂದು ಒಂದು ಹೊಸ ಬಗೆಯನ್ನು ನಾವೂ ಟ್ರೈ ಮಾಡಬಹುದು ಎಂಬ ಧೈರ್ಯವನ್ನು ಹುಟ್ಟಿಸಿದ್ದು ಪ್ರತಿಭಾ ಮೇಡಂ ಅವರ ‘ಕಾಫಿಹೌಸ್’ ಕವಿತೆಗಳು.

ಕಾಫಿ ಡೇಯ ಕಾಫಿಯ ಹಾಗೆ ಮೊದಲು ನಾಲಿಗೆಗೆ ಒಗ್ಗದೇ ನಂತರ ರುಚಿ ಬಿಡಲಾಗದೇ ಅಲ್ಲಿಗೇ ಬಾರಿಬಾರಿ ಎಳೆದುಕೊಂಡು ಹೋಗುವಂತಹ ಬಂಧಗಳಿವು..

“ಇದೂ ಒಂದು ಕವಿತೆಯಾ” ಅಂತ ಈ ಪುಸ್ತಕವನ್ನು ಓದಲು ಕಡ ತೆಗೆದುಕೊಂಡ ಹೋದವರೆಲ್ಲರೂ ಒಮ್ಮೆ ಕಣ್ಣಾಡಿಸಿ ಹಿಂತಿರುಗಿಸುವಾಗ ಹೇಳಿಹೋದದ್ದಿದೆ. ಆಳಕ್ಕಿಯದ ಹೊರತು. ಹೊಸದಕ್ಕೆ ತೆರೆದುಕೊಳ್ಳದ ಹೊರತು ಕವಿತೆ ಹೀಗೇ ಇರಬೇಕು ಕಥೆ ಹಾಗೇ ಇರಬೇಕು ಎಂದು ಬೇಲಿ ಹಾಕಿಕೊಂಡು ಕುಳಿತ ಅವರಿಗೆ ನಾನೇನೂ ಹೇಳದೇ ಸುಮ್ಮನಾದದ್ದಿದೆ.

ನಿನ್ನೆ ನಾನೂ ಮತ್ತು ಮಾಲಿನಿ ಗುರುಪ್ರಸನ್ನ ಮಾತನಾಡುತ್ತಿರುವಾಗ ಅವರು ಯಾವಾಗಲೂ ಹೇಳುವ ಮಾತನ್ನು ಪುನರುಚ್ಚರಿಸಿದರು (ಇದು ನನ್ನ ಮಾತೂ ಅಹುದು) “ರೇಣುಕಾ ಎಲ್ಲರೂ ಬರೆಯುವಂತಹದ್ದನ್ನು ನಾನೂ ನೀನೂ ಯಾಕೆ ಬರೆಯಬೇಕು.. ಹೊಸದೇನನ್ನಾದರೂ ಯೋಚಿಸೋಣ. ಹೊರತಾದ ಏನನ್ನಾದರೂ ಗ್ರಹಿಸಲು ಸಾಧ್ಯವಾಗ್ತದಾ ನೋಡೋಣ. ಆಗದಿದ್ದರೆ ಓದಿಕೊಂಡು ಆರಾಮಿರೋಣ”

ಮಾಲಿನಿಯ ಮಾತು ಮುಗಿದದ್ದೇ ನನಗೆ ಮೊನ್ನೆ ತಲುಪಿ ಸದ್ಯ ಓದಿಗೆ ಸಿಕ್ಕಿದ ನಲ್ಲತಂಬಿ ಅವರ ಕೋಶಿ’ಸ್ ಕವಿತೆಗಳ ಜೊತೆಗಿದ್ದ ಈ ಕಾಫಿ ಹೌಸ್‌ನ್ನು ಮತ್ತೊಮ್ಮೆ ತೆರೆದು ಓದಬೇಕು ಅನ್ನಿಸಿತು. ವಿವೇಕ ಶಾನಭಾಗ್ ಅವರ ‘ಘಾಚರ್ ಘೋಚರ್’ ಕೂಡ ಕೈಗೆ ಬಂತು.

ಎಲ್ಲ ಗಿರಾಕಿಗಳ ಬಗ್ಗೆ  ಏನೋ ವಿಶೇಷವಾದದ್ದು ತಿಳಿದಿರುವ ವಿನ್ಸೆಂಟ್ ಈ ಮೂರು ಪುಸ್ತಕಗಳಲ್ಲೂ ಸುತ್ತುತ್ತಿರುತ್ತಾನೆ. ಕೇಳದೆಯೂ ಸ್ಟ್ರಾಂಗ್ ಕಾಫಿ ತಂದಿಡುತ್ತ.. ಕಟ್ಲೆಟ್ ಕತ್ತರಿಸುತ್ತ ಅಭಿನಯಿಸುವ ನಯನಾಜೂಕನ್ನು ನೋಡಿ ಮುಗುಳ್ನಗುತ್ತ..

ಸಮಸ್ಯೆ, ವಿವರ ಏನೊಂದು ತಿಳಿಯದಿದ್ದರೂ “ಏನು ಮಾಡಲಿ ವಿನ್ಸೆಂಟ್ ” ಎಂಬ ಪ್ರಶ್ನೆಗೆ “ಬಿಟ್ಬಿಡಿ ಸಾರ್” ಎಂಬ ಉತ್ತರ ಕೊಡುತ್ತ.. ಹೊಸ ಹೊಳಹು ಹೊಳೆಯಿಸುತ್ತ .. ಕಣ್ಣಲ್ಲೇ ಎಲ್ಲವನ್ನೂ ಹೇಳಬಲ್ಲ ಅವನನ್ನು ಒಮ್ಮೆಯಾದರೂ ನೋಡಬೇಕು ಅನ್ನಿಸಿದೆ.

ವಿವೇಕ ಸರ್ ಅವರ ಮೊದಲ ಕಥೆ ‘ಘಾಚರ್ ಘೋಚರ್‌’ನ ವಿನ್ಸೆಂಟನ್ನು ಕಂಡ ಮೇಲೆ ಮುಂದೆ ದಾಟಿದರೆ ಅದರಲ್ಲಿರುವ ಉಳಕಿ ಕತೆಗಳಲ್ಲಿ ನನ್ನ ಉತ್ತರ ಕನ್ನಡ ಜಿಲ್ಲೆಯ ಸೊಗಡಿನ ಬಾಷೆಯ ಸೊಲ್ಲುಗಳನ್ನು ಹೆಕ್ಕುವ ಕೆಲಸ ನನಗೆ.. ಕಣ್ಣಿಗೆ ಕಂಡ ಹಾಗೆ ಕಥೆ ಕಟ್ಟುವ ವಿವೇಕ್ ಸರ್ ಅವರು ಊರು ಕೇರಿಗಳನ್ನು ಧ್ಯಾನಿಸುವ ತರದಲ್ಲೇ ನಗರ ಜೀವನವನ್ನೂ ಸಂವೇದನಾಶೀಲರಾಗಿ ನಾಜೂಕಾಗಿ ತಾಕುವ ಹಾಗೆ ಕಟ್ಟಿಕೊಡಬಲ್ಲರು. ಮನುಷ್ಯನ ಸ್ವಭಾವ ಮತ್ತು ವರ್ತನೆಗಳ ನಿಗೂಢತೆಯನ್ನು ನಮ್ಮ ಗ್ರಹಿಕೆಗೆ ಹಿಡಿಯುತ್ತ ಸಾಣೆಹಿಡಿಸಬಲ್ಲರು.

ಕಾದಂಬರಿ ರೂಪದ ಇಲ್ಲಿರುವ ಎಲ್ಲ ಕಥೆಗಳು ಎಲ್ಲಾ ಕಾರಣಕ್ಕೆ ಇಷ್ಟವಾದವು.

ಅದಾಗಿ ಇದಾಗಿ ಇಲ್ಲಿಗೆ ಬಂದೆ ಎಂಬಂತೆ
ನಲ್ಲತಂಬಿಯವರ ಕೋಶಿ’ಸ್ ಇವೆಲ್ಲವನ್ನು ಹೇಳಿಸಿತು.

ವಿನ್ಸೆಂಟ್‌ನಂತೆಯೇ “ಇದಕ್ಕೆ ಸ್ಪೂರ್ತಿ ಏನು ಸಾರ್” ಎಂದು ಕೋಶಿ’ಸ್ ಓದಿದವರು ಕೇಳಿದಾಗ ನಲ್ಲತಂಬಿ ನಗುತ್ತಾರೆ.. ನಗು ಸರಳತೆ ಸೌಜನ್ಯ ಅವರ ಆಸ್ತಿ. ವಿವೇಕರ ‘ಘಾಚರ್ ಘೋಚರ್’ ಅನ್ನು ತಮಿಳಿಗೆ ಅನುವಾದಿಸುವಾಗ ನಲ್ಲತಂಬಿಯವರ ಸಂಪರ್ಕಕ್ಕೆ ಬಂದವನು ವಿನ್ಸೆಂಟ್. ಅವನು ತೋರಿದ ನಗು ಈ ಕೊಶಿ’ಸ್ ಕವಿತೆಗಳು.

ಇಲ್ಲಿನ ಕವಿತೆಯ ಕುರಿತಾಗಿ ಬಹಳ ಜನ ಬರೆದಿದ್ದಾರೆ ಮತ್ತು ಉದಾಹರಿಸಿದ್ದಾರೆ ಹಾಗಾಗಿ ಕೋಶಿ’ಸ್ ಕವಿತೆಗಳನ್ನು ನಾನು ಮತ್ತಿಲ್ಲಿ ಉದಾಹರಿಸುವುದಿಲ್ಲ
ಆದರೆ ಇಲ್ಲಿರುವ

“ಎಷ್ಟು ಸಲ ಫೋಟೋ, ಮೆಸೇಜುಗಳನ್ನು ನೋಡುತ್ತೀರ ಸಾರ್”
“ಕ್ಷಮೆ ಕೇಳಿಬಿಡಿ ಸಾರ್”
“ಎಷ್ಟು ದಿನ ಕಾಯುತ್ತೀರಿ ಸಾರ್”
“ಮುಷ್ಟಿ ತೆರೆದಾಗಲೂ ಚಿಟ್ಟೆ ಜೀವಂತ ಕುಳಿತಿರಬೇಕು ಅದು ಪ್ರೀತಿ ಸಾರ್”

ಎಂಬ ವಿನ್ಸೆಂಟ್ ‌ನ್ನು ನೀವೂ ಒಮ್ಮೆ ನನ್ನಂತೆ ಕಾಣುವ ಇರಾದೆ ಇರಿಸಿಕೊಳ್ಳಿರಿ ಎಂದು ಹೇಳಬಲ್ಲೆ.

ಇನ್ನು ಮುಂದೆ ನಾಲ್ಕನೆಯದಾಗಿ ವಿನ್ಸೆಂಟ್ ಯಾರ ಕಥೆ ಕವಿತೆ ಕಥೆಯೊಳಗೆ ಬರಲಿದ್ದಾನೆ ಎಂಬ ಕುತೂಹಲ ನನಗೆ

ನಾನೇ ಇನ್ನೊಂದು ಬರೆದ್ರೆ…!!

1 comment

  1. ವಾವ್… ರೇಣುಕಾ…. ಧನ್ಯವಾದಗಳು…. ಕಾಫಿ ಹೌಸ್,ಘಾಚರ್ ಘೋಚರ್ ಮತ್ತು ಕೋಶಿಸ್ ಕವಿತೆಗಳು.. ….

Leave a Reply