”ಪ್ರೇಮದ ಪರಿಭಾಷೆಗಳು”

ಪ್ರಸಾದ್ ನಾಯ್ಕ್ 

ಹಿಂದಿ ಮೂಲ: ಮೀನಾಕ್ಷಿ ಜಿಜೀವಿಷಾ
ಅನುವಾದ: ಪ್ರಸಾದ್ ನಾಯ್ಕ್

ಪ್ರೇಮನಿವೇದನೆಗಳಾಗುತ್ತಿದ್ದವು ಮೊದಲು, ಕಣ್ಣುಗಳಲ್ಲೇ ಮೌನವಾಗಿ,
ಈಗೆಲ್ಲಾ ಅವುಗಳನ್ನು ‘ನಕ್ಷತ್ರ’, ‘ಆಸ್ಮಿ’ಯ ಒಡವೆಗಳು ಮಾಡುತ್ತವೆ…

ಮೊದಲೆಲ್ಲಾ ಉತ್ಕಟ ಪ್ರೇಮವಿರುತ್ತಿತ್ತು,
ಅವನಿಗಾಗಿ ವಿಶ್ವಾಸವನ್ನು, ಬದುಕನ್ನು ಧಾರೆಯೆರೆದು ಕೊಡುತ್ತಿದ್ದೆವು…
ಎಲ್ಲದಕ್ಕಿಂತಲೂ ಮಿಗಿಲಾಗಿ ಹೃದಯವನ್ನೇ ಕೊಡುತ್ತಿದ್ದೆವು…
ಈಗೆಲ್ಲಾ ಡಿಸೈನರ್ ಒಡವೆ, ಡಿಸೈನರ್ ಬಟ್ಟೆಗಳನ್ನು ನೀಡುತ್ತಿದ್ದೇವೆ,
ಒಂದು ಮೊಬೈಲ್ ಸಂಖ್ಯೆ,
ಎಲ್ಲದಕ್ಕಿಂತಲೂ ಮಿಗಿಲಾಗಿ ಸಂದಾಯ ಮಾಡುತ್ತೇವೆ,
ಪಂಚತಾರಾ ಹೋಟೇಲಿನ ಬಿಲ್ಲುಗಳನ್ನು…

ನಿನ್ನಿಂದ ನನಗೆ ಪ್ರೀತಿಯಷ್ಟೇ ಬೇಕಿತ್ತು ಇನಿಯಾ,
ದೇಹತೃಷೆಗಲ್ಲ, ಆತ್ಮತೃಷೆಗೆ…
ಇನಿಯಾ, ನಿನ್ನಿಂದ ಬಯಸಿದ್ದು ಬೊಗಸೆಯಷ್ಟು ವಿಶ್ವಾಸ
ಆತ್ಮರಕ್ಷಣೆಗೆಂದಲ್ಲ, ನಿನ್ನದೇ ಜಪಕ್ಕೆ…

ನಮ್ಮಿಬ್ಬರ ನಡುವೆ ಪ್ರೀತಿಯಿಲ್ಲ,
ಹೀಗೇನೂ ಅಲ್ಲವಲ್ಲಾ…

ಹಾಗೇನಿಲ್ಲ ಬಿಡು,
ನಮ್ಮಿಬ್ಬರ ಪರಿಭಾಷೆಗಳಷ್ಟೇ ಭಿನ್ನ…

ಪ್ರೀತಿಯ ಪರಿಭಾಷೆಯನ್ನು ಅರ್ಥೈಸಿಕೊಳ್ಳಲು ಕೂತೆವು ಒಂದು ದಿನ,
”ಪ್ರೇಮವೇ ಜೀವನ”, ನಾನಂದೆ…
”ಬೇರ್ಯಾವ ಜೀವನದಲ್ಲಾದರೂ ನೋಡೋಣ”, ನೀನಂದೆ.
”ಬದುಕಲು ಆಹಾರ ಹೇಗೆ ಬೇಕೋ, ಪ್ರೀತಿಯೂ ಹಾಗೆಯೇ”, ಅಂದೆ ನಾನು.
”ಪ್ರೀತಿಯೆಂದರೆ ಊಟದೊಂದಿಗೆ ಸಿಗುವ ಚಟ್ನಿಯಂತೆ,
ಆಗೊಮ್ಮೆ ಈಗೊಮ್ಮೆ ಸ್ವಾದ ಬದಲಿಸಲು ಮಾತ್ರ”, ಅಂದುಬಿಟ್ಟೆ ನೀನು.

ಪ್ರೇಮದ ಪರಿಭಾಷೆಯನ್ನು ಅರ್ಥೈಸಿಕೊಳ್ಳಲು ಕೂತೆವು ಒಂದು ದಿನ,
”ಬದುಕಿನಲ್ಲಿ ರೊಮಾನ್ಸ್ ಹೇಗೆಂದರೆ,
ಬಿಲ್ಕುಲ್ ಚಹಾದ ಚಟದಂತೆಯೇ…
ಒಮ್ಮೆ ಆಫೀಸಿನ ಕ್ಯಾಂಟೀನಿನಲ್ಲಾದರೆ,
ಮತ್ತೊಮ್ಮೆ ರೆಸ್ಟೊರೆಂಟಿನಲ್ಲಿ,
ಇನ್ನು ಪಂಚತಾರಾ ಹೋಟೇಲಿನಲ್ಲಿ ಸಿಗುವ ಭಾಗ್ಯ ಸಿಕ್ಕರೆ ನಿಜಕ್ಕೂ ವಾಹ್, ವಾಹ್…
ಬದುಕಿನಲ್ಲಿ ರೊಮಾನ್ಸ್ ಹೇಗೆಂದರೆ ಸಿಗರೇಟಿನ ದಮ್ಮಿನಂತೆ,
ಒಮ್ಮೆ ‘ಚಾರ್ಮಿನಾರ್’, ಮತ್ತೊಮ್ಮೆ ‘ವಿಲ್ಸ್’,
ಅಪರೂಪಕ್ಕೆ ‘ಚಾನ್ಸಲರ್’ ಸಿಕ್ಕರೆ ಮಜಾ ಬಂದುಬಿಡೋದು…”, ಅಂದೆ ನೀನು.

”ನಿನಗೇನನ್ನಿಸುತ್ತೆ?”, ನನ್ನ ಕೇಳಿದೆ ನೀನು…
ಕೊಂಚ ಯೋಚಿಸಿ ಶುರುಹಚ್ಚಿಕೊಂಡೆ ನಾನು,
”ನನ್ನ ಮಟ್ಟಿಗೆ ರೊಮಾನ್ಸ್ ಹೇಗೆಂದರೆ,
ಸಂದೂಕದಿಂದ ತೆಗೆದು ಬಲು ಆಸೆಯಿಂದ ಧರಿಸಿದ,
ಮಟ್ಟಸವಾದ ನನ್ನ ಮೆಚ್ಚಿನ ಹಳೆಯ ಸೀರೆ,
ಹಳೆಯ ಒಡವೆಯ ಡಬ್ಬದಿಂದ ತೆಗೆದ ಒಂದು ಆಭರಣ,
ಹೊಳಪಿಟ್ಟು ಜತನದಿಂದ ಧರಿಸುವುದು, ಧರಿಸಿ ಮೆರೆಯುವುದು…”

ಈಗನ್ನಿಸುತ್ತಿದೆ,
ಎಲ್ಲವನ್ನೂ ಕಾಸಿನಂತೆ ಇಷ್ಟಿಷ್ಟೇ ರಕ್ಷಿಸಿಟ್ಟಿದ್ದರೆ ಅದೆಷ್ಟು ಚೆನ್ನಾಗಿರುತ್ತಿತ್ತು!
ನನ್ನ ಪ್ರೀತಿಯನ್ನು ನನಗಾಗಿ ಒಂದಿಷ್ಟು ಎತ್ತಿಟ್ಟುಕೊಂಡಿದ್ದರೆ,
ಇಂಥಾ ಏಕಾಂಗಿ, ಕರಾಳ, ಹತಾಶೆಯ ದಿನಗಳಲ್ಲಿ ಕೆಲಸಕ್ಕೆ ಬರುತ್ತಿತ್ತು…

 

1 comment

Leave a Reply