ರವಿವಾರದ ನಾಟ್ಕಗಳೂ, ಕಾಫೀ ಹೌಸ್ ದೋಸೆಯೂ..

ಟ್ರಾನ್ಸ್ಫರ್ ಸಿಕ್ಕ ಖುಷಿಯಲ್ಲಿ, ಹೊಸ ಅನುಭವ ಗಳಿಸೋ ಉಮೇದಿಯಲ್ಲಿ ಕಣ್ಣೂರಿಗೇನೋ ಹೊರಟುಬಿಟ್ಟಿದ್ದೆ.
ಆದರೆ ನನ್ನ ಪ್ರತಿ ಬುಧವಾರದ ನಾಟ್ಕ ತಪ್ಪಿಹೋಗ್ತದಲ್ಲಾ ಎನ್ನೋ ಬೇಸರ. ಸುಲಭ ವಾಗಿ ಮನೆ ಪಕ್ದಲ್ಲೇ ಸಿಗ್ತಿದ್ದ ನಾಟ್ಕಗಳು ತಪ್ಪಿ ಹೋಗೋ ಆತಂಕ. ಆದ್ರೆ ಕಣ್ಣೂರು ಸಮೀಪ ಕ್ಯಾಲಿಕಟ್ ನಲ್ಲಿ ತುಂಬ ನಾಟ್ಕಗಳಾಗ್ತಾವೆ ಅಂತ ಕೇಳಿದ್ದೆ. ಆ ಸಮಾಧಾನದ ಜೊತೆಗೆ ಕಣ್ಣೂರಿಗೆ ಹೊರಟಿದ್ದೆ.

ಕಣ್ಣೂರಿನಲ್ಲಿ ನನಗೊಂದು ಪ್ಲೆಸೆಂಟ್ ಸರ್ಪ್ರೈಸ್ ಕಾದಿತ್ತು. ನನ್ನ ಆಫೀಸಿನಲ್ಲೇ ರಶ್ಮಿ ಎನ್ನೋರು ಕೆಲಸ ಮಾಡ್ತಿದ್ರು. ಆಕೆ ಕೂಡ ರಂಗ ಕಲಾವಿದೆ., ಕವಿ, ನೃತ್ಯಗಾತಿ. ಆವರ ಪತಿ ರಾಜೇಶ್ ಶರ್ಮಾ ಮಲಯಾಳಂ ನ ಪ್ರಸಿದ್ಧ ಹವ್ಯಾಸಿ ರಂಗ ನಟ. ನಾನು ಕಂಡ ಅಪರೂಪದ ನಟರಲ್ಲೊಬ್ಬರು ಅವರು. ಅವರ ನಾಟಕದ ಬಗ್ಗೆ ಮುಂದೊಮ್ಮೆ ಬರೀತೀನಿ. ನನ್ನ ಪೂರ್ವಾಶ್ರಮದಿಂದ ನನ್ನ ನಾಟಕದ ಹುಚ್ಚಿನ ಬಗ್ಗೆ ತಿಳ್ಕೊಂಡಿದ್ದ ರಶ್ಮಿ ಕೂಡ ಉತ್ಸಾಹದಲ್ಲೇ ಇದ್ರು. ಮೊದಲ ಭೇಟಿಯಲ್ಲೇ ನಾವು ಮಾತಾಡಿದ್ದು ನಾಟ್ಕದ ಬಗ್ಗೆನೇ.

ನನ್ನ ಮೊದಲ ಪ್ರಶ್ನೆಯೇ, ‘ಇಲ್ಲಿ ದಿನಕ್ಕೊಂದು ನಾಟ್ಕ ಕಾರ್ಯಕ್ರಮ ಇರತ್ತಾ?’ ಅಂತ.
ಇಲ್ಲ, ಕಣ್ಣೂರಲ್ಲಿ ಇರಲಿಲ್ಲ. ಯಾವುದೋ ‘ಲಾಬಿ’ ಯಿಂದ ಅದು ‘ಕಾಜಂಗಾಡ್’’ ಗೆ ಹೋಗಿತ್ತು. ನನ್ನ ಬಲೂನು ‘ಠುಸ್” ಆಗಿತ್ತು.

ಆದ್ರೆ ರಶ್ಮಿ, ತನ್ನ ಮಾತಿಗೊಂದು ಬಾಲಂಗೋಚಿ ಸೇರ್ಸಿದ್ರು. “ಸರ್, ಅಲ್ಲಿ ನಾಟ್ಕ ಇರೋದು
ರವಿವಾರ “ ಅಂತ. ‘ ರವಿವಾರ ಅಂದ ಕೂಡ್ಲೇ ಮತ್ತೆ ಆಸೆ ಕುದುರಿತು. ಏನೇ ಆಗ್ಲಿ ನೋಡೋದೇ ಅಂತ ತೀರ್ಮಾನವಾಯ್ತು.

ಕಣ್ಣೂರಿಂದ ಕಾಜಂಗಾಡ್ ಗೆ ರೈಲಿನಲ್ಲಿ ಒಂದೂವರೆ ಗಂಟೆ ಪ್ರಯಾಣ. ರವಿವಾರ ಸಂಜೆ ನಾಲ್ಕೂವರೆಗೆ ಬೆಂಗಳೂರು ರೈಲು ಹತ್ತಿದ್ರೆ ಅದು ಕಾಂಜಂಗಾಡ್ ಗೆ ಆರು ಗಂಟೆಗೆ ತಲುಪೋದು. ಏಳು ಗಂಟೆಗೆ ನಾಟ್ಕ ಶುರುವಾಗೋದು. ನಾಟ್ಕಕ್ಕೆ ಹೋಗೋಕೆ ಮುಂಚೆ ಸ್ಟೇಷನ್ ಹತ್ತಿರವಿದ್ದ ‘ ಇಂಡಿಯಾ ಕಾಫಿ ಹೌಸ್’ ನಲ್ಲಿ ತಿಂಡಿ, ಕಾಫಿ. ಅಲ್ಲಿ ಮಸಾಲೆ ದೋಸೆ ತುಂಬ ಚೆನ್ನಾಗಿ ಮಾಡೋರು. ತಿಂಡಿ ತಿಂದು ಮತ್ತೆ ನಾಟ್ಕ. ತಿರುಗಿ ರಾತ್ರಿ ಹತ್ತು ಗಂಟೆಗೆ ಟ್ರೇನ್ ಹತ್ತಿದ್ರೆ ಹನ್ನೊಂದೂವರೆಗೆ ಕಣ್ಣೂರು.

ಪ್ರತಿ ವಾರ ಅಷ್ಟು ದೂರದ ಕಣ್ಣೂರಿನಿಂದ ನಾಟ್ಕ ನೋಡೋಕೆ ಬರ್ತಿದ್ದ ನನ್ನ ‘ನಾಟ್ಕದ ಹುಚ್ಚಿ’ನ ಬಗ್ಗೆ ಮೊದಮೊದಲು ಅಲ್ಲಿಯ ಜನ ಆಶ್ಚರ್ಯಪಡೋರು. ಮತ್ತೆ ಮತ್ತೆ ಮಾಮೂಲಾಯ್ತು. ಹಲವಾರು ಜನ ಗೆಳೆಯರಾದ್ರು. ನಮ್ಮ ರಂಗಭೂಮಿಯ ಬಗ್ಗೆ ಕುತೂಹಲದಿಂದ ಕೇಳ್ತಿದ್ರು. ಅವರೂ ಹೇಳ್ತಿದ್ರು. ಪ್ರತಿ ನಾಟ್ಕದ ನಂತರ ಉಪಯುಕ್ತವಾದ ಚರ್ಚೆ ಇರ್ತಿತ್ತು. ಅಬ್ಬ, ಆ ಚಿಕ್ಕ ಊರಿನ ಜನ ಎಷ್ಟೆಲ್ಲ ಓದ್ಕೊಂಡೋರು, ಎಷ್ಟೆಲ್ಲ ಥಿಯೇಟರ್ ಗೊತ್ತಿರೋರು, ಎಷ್ಟೆಲ್ಲ ನಾಟ್ಕ ನೋಡಿದೋರು!

ಈ ರವಿವಾರ ನಾಟ್ಕದ ಉದ್ದಕ್ಕೂ ನನ್ನ ಜೊತೆಯಾಗಿದ್ದ ‘ಇಂಡಿಯಾ ಕಾಫಿ ಹೌಸ್’ ಬಗ್ಗೆ ಹೇಳಲೇ ಬೇಕು. ಸಹಕಾರೀ ತತ್ವದಲ್ಲಿ ನಡೀತಿರೋ ಈ ಹೊಟೆಲ್ ಕೇರಳದ ತುಂಬಾ ಇದೆ. ವೆಜ್, ನಾನ್ ವೆಜ್ ಫುಡ್ ಸಿಗ್ತದೆ. ತುಂಬ ಕಡಿಮೆ ದರ ಆದ್ರೆ ಬೆಸ್ಟ್ ಕ್ವಾಲಿಟಿ. ಈ ‘ ಇಂಡಿಯಾ ಕಾಫಿ ಹೌಸ್’ ದೇ ಒಂದು ಕಥೆ. ಬ್ರಿಟಿಷ್ ಕಾಲದಲ್ಲಿ ಕಲಕತ್ತಾ ಮತ್ತು ಮದರಾಸಿನಲ್ಲಿ ಕಾಫಿ ಮನೆಗಳು ಶುರುವಾದ್ವು. ಆದ್ರೆ ಅಲ್ಲಿ ಎಲ್ಲ ಸ್ಥಾನೀಯ ಮತ್ತು ಎಲ್ಲ ಜನಾಂಗದವರಿಗೆ ಪ್ರವೇಶ ಇರ್ಲಿಲ್ಲ. ಅದಕ್ಕೆ ಅಂತ್ಲೇ ಹೊರಗಡೆ ಅಂಗಡಿಗಳನ್ನ ಕಟ್ಟಿ ‘ ಕಾಫಿ ಹೌಸ್’ ಗಳನ್ನ ಶುರು ಮಾಡಲಾಯ್ತು.

ಮುಂಬಯಿಯನ್ನೊಳಗೊಂಡಂತೆ ಹಲವಾರು ಭಾಗಗಳಲ್ಲಿ ಸುಮಾರು ಐವತ್ತಕ್ಕೂ ಹೆಚ್ಚಿನ ‘ಕಾಫೀ ಹೌಸ್’ ಗಳಿದ್ವು. ಸುಮಾರು ಮೂರು ದಶಕಗಳ ಕಾಲ ಇದು ನಡೀತು. ಆದ್ರೆ ಸ್ವಾತಂತ್ರ್ಯಾನಂತರ ಭಾರತದಲ್ಲಿ ‘ ಕಾಫೀ ಬೋರ್ಡ್’ ಸ್ಥಾಪನೆಯಾದ್ಮೇಲೆ ಈ ‘ಕಾಫೀ ಹೌಸ್’ ಗಳನ್ನ ಮುಚ್ಚೋ ನಿರ್ಧಾರ ಮಾಡಲಾಯ್ತು. ಅಲ್ಲಿ ಕೆಲಸ ಮಾಡ್ತಿದ್ದ ಕೆಲಸಗಾರರೆಲ್ಲ ಬೀದಿಗೆ ಬರೋ ಸ್ಥಿತಿ ಎದುರಾಯ್ತು. ಆಗ ಕಮ್ಯುನಿಸ್ಟ್ ನಾಯಕ ಎ.ಕೆ. ಗೋಪಾಲನ್ ಕಾರ್ಮಿಕರನ್ನೆಲ್ಲ್ಲ ಒಟ್ಟುಗೂಡಿಸಿ ಸಹಕಾರಿ ಸಂಘ ಕಟ್ಟಿದ್ರು. ‘ ತಾವೇ ನಡೆಸ್ತೀವಿ’ ಅಂತ ಮುಂದಾದ ಸಹಕಾರೀ ರಂಗಕ್ಕೆ ಈ ಕಾಫೀ ಹೌಸ್ ಗಳನ್ನ ವಹಿಸಿಕೊಡಲಾಯ್ತು. ಅಂದಿನಿಂದ್ಲೂ ಸಹಕಾರೀ ತತ್ವದ ಅಡಿಯಲ್ಲೇ ಈ ‘ಕಾಫೀ ಹೌಸ್’ ನಢೀತಿದೆ. ಕಾಜಂಗಾಡ್ ಶಾಖೆಯಂತೂ ತುಂಬಾ ಚೆನ್ನಾಗಿದೆ.

ಕಾಜಂಗಾಡ್ ನಲ್ಲಿ ಸ್ಟೇಷನ್ ನಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿರೋ ‘ಐಶ್ವರ್ಯಾ’ ಹಾಲ್ ನಲ್ಲಿ ನಾಟ್ಕ. ಸ್ಟೇಷನ್ ನಲ್ಲಿಳಿದು ಆಟೋ ಹತ್ತಿ ಹೋಗ್ಬೇಕಿತ್ತು. ನಾಟ್ಕ ಮುಗಿದ ಮೇಲೆ ಯಾರಾದ್ರೂ ಒಭ್ರು ಸ್ಟೇಷನ್ ಗೆ ಬಿಡ್ತಿದ್ರು.

ಇಲ್ಲಿ ನಾನು ನೋಡಿದ ಮೊದಲ ನಾಟ್ಕ ‘ ದುವಿಧಾ’. ಕಾಸರಗೋಡಿನ ಹಳ್ಳಿಯ ಹುಡುಗರ ನಾಟ್ಕ ಇದು.ತುಂಬ ಚಿಕ್ಕ ನಾಟ್ಕ. ಇದೊಂಥರಾ ನಮ್ಮ ‘ ನಾಗಮಂಡಲ’ ಮತ್ತು ‘ ಕಕೇಸಿಯನ್ ಚಾಕ್ ಸರ್ಕಲ್’ ನಾಟ್ಕಗಳ ಫ್ಯೂಷನ್.

ರತ್ನಪಡಿ ವ್ಯಾಪಾರಿಯೊಬ್ಬನಿಗೆ ಒಬ್ಬನೇ ಮಗ. ಆ ಮಗನೋ ಹಣ ಅಂದ್ರೆ ಬಾಯ್ಬಿಡೋ ಜಾತಿ. ಅಂಥ ಮಗನನ್ನ ವ್ಯಾಪಾರ ಮಾಡ್ಕೊಂಡು ಬಾ ಅಂತ ವ್ಯಾಪಾರಕ್ಕೆ ಕಳಿಸ್ತಾನೆ ಅಪ್ಪ. “ಬರೋವಾಗ ಮೂಟೆಗಟ್ಲೇ ದುಡ್ಡು ತಗೊಂಬಾ” ಅಂತಾನೆ. ಸರಿ, ಮಗ ಹೊರಡ್ತಾನೆ. ಅಪ್ಪ ಇನ್ನೊಂದೂರಿಗೆ ಹೊರಡ್ತಾನೆ.ಹುಡುಗನ ಪತ್ನಿ ಒಂಟಿಯಾಗ್ತಾಳೆ. ಪ್ರೀತಿಗಾಗಿ ಹಾತೊರೀತಾಳೆ. ಇದನ್ನೆಲ್ಲ ಮರದ ಪೊಟರೆಯೊಳಗಿಂದ ನೋಡ್ತಿದ್ದ ಭೂತವೊಂದು ಅಲ್ಲಿಂದ ಹೊರಬರ್ತದೆ. ಮಗನ ವೇಷ ಹೊತ್ತು ಮನೆಯೊಳಕ್ಕೂ, ಹುಡುಗಿಯ ಮನದೊಳಕ್ಕೂ ಪ್ರವೇಶ ದೊರಕಿಸಿಕೊಳ್ತದೆ. ಒರಟು ಗಂಡ ಹೀಗೆ ಬದಲಾದ್ದನ್ನ ನೋಡಿದ ಹುಡುಗಿ ಆಶ್ಚರ್ಯಪಡ್ತಾಳೆ. ಪ್ರೇಮದಲ್ಲಿ ಮುಳುಗ್ತಾಳೆ.

ಈಗ ಮೂರು ವರ್ಷಗಳು ಕಳೆದಿವೆ. ಹುಡುಗಿ ಗರ್ಭಿಣಿಯಾಗಿದ್ದಾಳೆ. ಈ ಸುದ್ದಿ ಊರು ಸುತ್ತೋ ವ್ಯಾಪಾರಿಗಳ ಮೂಲಕ ವಾರಣಾಸೀಲಿರೋ ಮಗನಿಗೆ ಗೊತ್ತಾಗ್ತದೆ. ಗಾಬರಿ ಬೀಳ್ತಾನೆ ಆತ. ಓಡಿ ಬರ್ತಾನೆ. ಊರಿಗೆ ಬಂದು ಗೋಳಾಡ್ತಾನೆ. ‘ಇದು ನಿನ್ನದೇ ಸಂತಾನ” ಅಂತಾಳೆ ಹುಡ್ಗಿ.ಭೂತವೂ ಬಿಡಲೊಲ್ಲದು. ನಾನೇ ಆಕೆಯ ಗಂಡ ಅಂತ ವಾದ ಮಾಡ್ತದೆ. ಎಲ್ಲಾ ಗಲಿಬಿಲಿ. ಗಲಾಟೆ. ಈ ವ್ಯಾಜ್ಯ ಗೊಲ್ಲನೊಬ್ಬನ ಕಡೆ ಹೋಗ್ತದೆ. ‘ ಚಾಕ್ ಸರ್ಕಲ್’ ನ ಜಜ್ ನಂತೆ ತೀರ ವಿಕ್ಷಿಪ್ತ, ಆದ್ರೆ ಹುಷಾರ್ರಿ ನ್ಯಾಯಾಧೀಶನಿವ. ಆತ ಪಂದ್ಯಗಳನ್ನ ಏರ್ಪಡಿಸ್ತಾನೆ. “ಪಂದ್ಯದಲ್ಲಿ ಗೆದ್ದೋನೇ ಈ ಹುಡ್ಗಿ ಗಂಡ ಅಂತಾನೆ. ತನ್ನಲ್ಲಿದ್ದ ಹೋರಿಯನ್ನ ಓಡಿಸಿ ‘ ಹಿಡ್ಕೊಂಡು ಬನ್ನಿ” ಅಂತಾನೆ. ನಾಲ್ಕು ಹೆಜ್ಜೆ ಓಡೋದ್ರಲ್ಲಿ ಕುಸಿದು ಹೋಗ್ತಾನೆ ವ್ಯಾಪಾರಿ. ಭೂತ ಓಡಿಹೋಗಿ ಹೋರಿಯನ್ನ ಸುಲಭದಲ್ಲಿ ಎಳ್ಕೊಂಡು ಬರ್ತದೆ. ಈಗ ಇನ್ನೊಂದು ಪಂದ್ಯ. “ನನ್ನ ಈ ಬಗಲ ಚೀಲದಲ್ಲಿ ಯಾರು ಹೊಕ್ತಾರೋ ನೋಡೋಣ” ಅಂತಾನೆ. ಗಡಬಡಿಸಿದ ಭೂತ ಸರಾಗವಾಗಿ ಚೀಲದೊಳಕ್ಕೆ ಹೊಕ್ಕಿಬಿಡ್ತದೆ. ಥಟ್ಟನೆ ಚೀಲದ ಬಾಯಿ ಕಟ್ಟಿದ ಗೊಲ್ಲ ಚೀಲವನ್ನ ಪ್ರಪಾತಕ್ಕೆ ಎಸೆದುಬಿಡ್ತಾನೆ. ಪಂದ್ಯದಲ್ಲಿ ಮಗ ಗೆಲ್ತಾನೆ. ಆದ್ರೆ ಹುಡುಗಿ ಮತ್ತೆ ಒಂಟಿಯಾಗ್ತಾಳೆ.

ಈ ನಾಟ್ಕದ ನಿರ್ದೇಶಕ ಕಣ್ಣೂರಿನ ‘ಗುರುದಾಸ್’ ಎನ್ನೋ ಯುವಕ. ನಾಟ್ಕ ‘ ನಾಗಮಂಡಲ’ ದಿಂದ ಪ್ರೇರಿತವಾದ್ದು ಅಂತ ಹೇಳ್ಕೊಂಡ. ಚಿಕ್ಕ ನಾಟ್ಕವಾದ್ರೂ ನಿರ್ಮಾಣ ತುಂಬ ಚೆನ್ನಾಗಿತ್ತು. ನಾಯಕಿ ಪೀಯೂಸಿ ಓದೋ ಚಿಕ್ಕ ಹುಡುಗಿ. ಭಾವ ಸೂಕ್ಷ್ಮಗಳನ್ನ ಚೆನ್ನಾಗಿ ನಿಭಾಯಿಸ್ತಿದ್ಲು. ಎಲ್ಲಕ್ಕಿಂತ ಹೆಚ್ಚಾಗಿ ಉತ್ತರ ಭಾರತದ ಶೈಲಿಯ ಕಾಸ್ಟ್ಯೂಮುಗಳು, ಸಂಗೀತ ಅಲ್ಲಿದ್ದವರಿಗೆಲ್ಲ ತುಂಬ ಇಷ್ಟವಾದಂತಿತ್ತು. ಪ್ರಯೋಗದ ನಂvರ ಅದರ ಬಗ್ಗೇನೇ ಎಲ್ಲ ಮಾತಾಡ್ತಿದ್ರು.

ಇದಾದ ಕೆಲವೇ ತಿಂಗಳುಗಳಲ್ಲಿ ಅದೇ ಜಾಗದಲ್ಲಿ ‘ ನಾಗಮಂಡಲ’ ನಾಟ್ಕಾನೂ ನೋಡೋ ಅವಕಾಶ.ಜೊತೆಗೆ ಪ್ರಾರಂಭದಲ್ಲಿ ಆ ನಾಟ್ಕದ ಬಗ್ಗೆ ಮಾತಾಡೋ ಅವಕಾಶ ಸಿಕ್ತು ನನಗೆ. ಕನ್ನಡದಲ್ಲಿ ನಾನು ನೋಡಿದ ಕೆಲವು ನಾಗಮಂಡಲ ನಾಟ್ಕದ ಪ್ರಯೋಗಗಳು, ಮತ್ತು ನಾಗಾಭರಣರ ಸಿನಿಮಾ ಗಳನ್ನ ಆಧಾರವಾಗಿ ಇಟ್ಕೊಂಡು ಮಾತಾಡಿದೆ.

ಅಮೇರಿಕೆಯ ‘Dr. Terry Converse’ ಈ ನಾಟ್ಕದ ನಿರ್ದೇಶಕರು ಅವರು Washington State University ಯಲ್ಲಿ ಪ್ರೊಫೆಸರ್ . ಮುಖವಾಡಗಳ ಎಕ್ಸಪರ್ಟ್. ಆ ಕುರಿತು ಅಪಾರ ಅಧ್ಯಯನ, ಪ್ರಯೋಗಗಳನ್ನ ಮಾಡಿರೋ ಅವರು ಅಂಥ ಒಂದು ಪ್ರಯೋಗಕ್ಕಾಗಿ ಕೊಚ್ಚಿಗೆ ಬಂದಿದ್ರು. ಅಲ್ಲಿಯ ಪ್ರತಿಷ್ಥಿತ ‘ ಲೋಕಧರ್ಮಿ ಥಿಯೇಟರ್’ ಜೊತೆ ಕೆಲಸ ಮಾಡ್ತಿದ್ರು. ಅವರನ್ನ ತಮ್ಮ ತಂಡಕ್ಕಾಗಿ ನಾಟ್ಕವೊಂದನ್ನ ಮಾಡಿಸಿ ಆತ ಕೊಚ್ಚಿಯ ‘ ಫೀನಿಕ್ ವರ್ಲ್ಡ್ ಥಿಯೇಟರ್’ ಆಹ್ವಾನಿಸಿ ‘ ನಾಗಮಂಡಲ’ ನಾಟ್ಕ ರೆಡಿ ಮಾಡ್ಕೊಂಡಿತ್ತು.

ಎಪ್ಪತ್ತರ ಪ್ರಾಯದ ಅಪಾರ ಚಟುವಟಿಕೆಯ ಮನುಷ್ಯ ‘ Terry Converse’ ಕಾರ್ನಾಡರನ್ನ ತುಂಬಾ ಓದಿಕೊಂಡೋರು. ‘ ನಾಗಮಂಡಲ’ ಅವರ ಶ್ರೇಷ್ಥ ನಾಟಕ ಅಂತಿದ್ರು. ಪ್ರಸ್ತುತ ಪ್ರಯೋಗ ಡಿಸೈನ್ ನಲ್ಲಿ ತುಂಬ ವಿಶಿಷ್ಟವಾಗಿತ್ತು. ಒಂಥರಾ ಹಾವಿನ ರೂಪದ ಸ್ಠೇಜ್. ಒಂದಿಷ್ಟು ಮಾಸ್ಕ್ ಗಳು. (ಇದೊಂಥರಾ ಈ ನಾಟಕಕ್ಕೆ ಒಳ್ಳೇ ರೂಪಕ) ತೀರ ವಿಭಿನ್ನ ಚಲನೆಗಳು. ತಾವು ನಾಟಕವನ್ನ ಅರ್ಥೈಸಿಕೊಂಡ ರೀತೀಲಿ ಬೇರೆಯೇ ತೆರನಾದ ನಾಟಕವನ್ನ ಕಟ್ಟಿದ್ರು ‘ ‘ ಅಭಿನಯದಲ್ಲಂತೂ ಹುಡುಗ್ರನ್ನ ಕೇಳೋದೇ ಬೇಡ.
ನಾನು ನೋಡಿದ ತೀರ ವಿಭಿನ್ನ ಮತ್ತು innovative ಪ್ರಯೋಗ ಇದು.

6 comments

Leave a Reply