ಮಾಯಾಬಜಾರ್..

ಅಶ್ಫಾಕ್ ಪೀರಜಾದೆ

ಅವನು ಆಗಾಗ
ಅಲ್ಲಲ್ಲಿ ಗೋಚರಿಸುವನು
ಮನಸಿನ ಪ್ರತಿಬಿಂಬದಂತೆ
ನಗ್ನ ಶರೀರದ ವಿಕಾರಗಳಂತೆ
ಗತ ಇತಿಹಾಸದ ಪುಟಗಳಂತೆ

ಗತಕಾಲದ ಕೆನ್ನೆಯ ಮೇಲೆ
ಮೂಡಿದ ತುಟಿಯಂಚಿನ
ಗುರುತು ಮಾಯದ ಹಳೆ
ಗಾಯವಾಗಿ ವ್ಯಥೆ ಕಥೆ
ಹೃದಯವೇದನೆ
ಹೆಪ್ಪುಗಟ್ಟಿದ ಕಡಲಿನಂತೆ

ಹಾವಿನಾಲಿಂಗನದಲಿ ಕರಗಿ
ವಿಷವಾದ ಹುಡುಗಿ
ಈಗ ಪ್ರಬುದ್ಧ ಶಾಂತಚಿತ್ತ
ಹರಿಯುವ ಜೀವ ಶರಧಿ !

ಆಕಸ್ಮಿಕ ದೃಷ್ಟಿ ಮಿಲನದೀ
ಹಳೆ ಗಾಯಗಳು ಜೀವಪಡೆದು
ಹೃದಯ ಕಲಕುವ ಭಯವಾಗಿ
ಮೊದಲೇ ತಗೆದುಕೊಂಡ
ಧೃಡ ನಿರ್ಧಾರದಂತೆ  ಮಾನ
ಜೋಪಾನವಾಗಿಸಿಕೊಂಡು
ಬೇರೆ ಬೇರೆ ಹಾದಿ ಹಿಡಿದರೂ
ನೆನಪುಗಳ ಬಿಸಿಲುಧಗೆ
ಹರಿದು ಹಂಚಿ ಹೋಗುವುದು
ಅವನಿಗರ್ಧ…ಅವಳಿಗರ್ಧ..

ಸತ್ಯ ಅದ್ಯಾವತ್ತೋ ಬೆತ್ತಲಾಗಿತ್ತು
ಪ್ರೀತಿ ಸಮಾಧಿ ಮೇಲೆ
ಬಯಕೆಗಳು ಬಟಾಬಯಲು !
ಗಂಡು ಹೆಣ್ಣು ಸೇರಿದಾಗಲೇ
ಮಾನವನ ಮಾನ ಹರಣವಾಗಿತ್ತು
ಕಾಡು ಕುದರೆ ನಿಯಂತ್ರಿಸುವ
ಲಗಾಮವಿಲ್ಲದೆ
ಕಾಲವೇ ಕುದರೆ ಕಾಲು ಮುರಿದಾಗ
ತಬ್ಬಲಿಯಾಗಿ ಆಕ್ರಂದಿಸುವ ಆತ್ಮ,
ಕಾತರಿಸುವ ಕಣ್ಣುಗಳು ಕುರಡಾಗಿ
ಬಣ್ಣದ ಕನಸುಗಳು
ಸುಣ್ಣದ ಕಲ್ಲಾಗಿದ್ದವು

ಆಗಾಗ ಅಲ್ಲಲ್ಲಿ
ಮಾಯಾಬಜಾರಿನ
ಇಳಿಜಾರಿನಲಿ
ಜಾರಿಹೋಗುವ ಮನಸ್ಸು
ಮಾನವ ಸಹಜ
ಸ್ವಭಾವಕ್ಕೆ ಹಿಡಿದ ಕೈಗನ್ನಡಿ !!

 

Leave a Reply